ಗುರುವಾರ , ಮಾರ್ಚ್ 4, 2021
18 °C
ಏಷ್ಯನ್‌ ಪೇಂಟ್ಸ್‌, ಬರ್ಜರ್‌ ಪೇಂಟ್ಸ್‌ ಷೇರಿನ ಮೌಲ್ಯ ಶೇ 28 ಹೆಚ್ಚಳ

PV Web Exclusive | ಪೇಂಟ್‌ ಕಂಪನಿಗಳ ರಂಗೇರಿಸಿದ ಆದಾಯ ಗಳಿಕೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದೇಶದ ಪೇಂಟ್‌ ಹಾಗೂ ವಾರ್ನಿಶ್‌ ವಲಯದಲ್ಲಿನ ಮೂರು ದೈತ್ಯ ಕಂಪನಿಗಳಾದ ಏಷ್ಯನ್‌ ಪೇಂಟ್ಸ್‌, ಬರ್ಜರ್‌ ಪೇಂಟ್ಸ್‌ ಹಾಗೂ ಕನ್ಸಾಯಿ ನೆರೋಲ್ಯಾಕ್‌ ಕಂಪನಿಗಳು ಇತ್ತೀಚೆಗೆ ಪ್ರಕಟಿಸಿದ 2020–21ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯು ಷೇರುಪೇಟೆಯಲ್ಲಿ ಪೇಂಟ್‌ ಕಂಪನಿಗಳತ್ತ ಗಮನ ಸೆಳೆಯುವಂತೆ ಮಾಡಿದೆ. ಕೋವಿಡ್‌ನಿಂದಾಗಿ ದೇಶದಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟದ ನಡುವೆಯೂ ಈ ಕಂಪನಿಗಳು ನಿರೀಕ್ಷೆ ಮೀರಿ ಆದಾಯ ಗಳಿಸಿರುವುದೇ ಇದಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಮೂರನೇ ತ್ರೈಮಾಸಿಕ ವರದಿಯೊಂದಿಗೆ ಈ ಸಾಲಿನ ಮೂರನೇ ತ್ರೈಮಾಸಿಕ ವರದಿಯನ್ನು ಹೋಲಿಸಿ ನೋಡಿದಾಗ, ಈ ಮೂರೂ ಕಂಪನಿಗಳ ಲಾಭ ಗಳಿಕೆ ಪ್ರಮಾಣ ಶೇ 50ಕ್ಕೂ ಹೆಚ್ಚಾಗಿರುವುದು ಗಮನಾರ್ಹ. ಏಷ್ಯನ್‌ ಪೇಂಟ್ಸ್‌ ಹಾಗೂ ಬರ್ಜರ್‌ ಪೇಂಟ್ಸ್‌ ಕಂಪನಿಗಳು ಷೇರುಪೇಟೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 28ರಷ್ಟು ಲಾಭ ತಂದುಕೊಟ್ಟಿದ್ದರೆ, ಕನ್ಸಾಯಿ ನೆರೋಲ್ಯಾಕ್‌ ಕಂಪನಿಯು ಶೇ 12.92ರಷ್ಟು ಲಾಭವನ್ನು ಕೊಟ್ಟಿದೆ.

ಆದಾಯ–ಲಾಭ ಗಳಿಕೆ ವೃದ್ಧಿ: ಮಾರುಕಟ್ಟೆಯಲ್ಲಿನ ಬಂಡವಾಳದ ಆಧಾರದಲ್ಲಿ ಮೊದಲ ಸ್ಥಾನದಲ್ಲಿರುವ ಏಷ್ಯನ್‌ ಪೇಂಟ್ಸ್‌ ಕಂಪನಿಯು 2019ರ ಡಿಸೆಂಬರ್‌ಗೆ ಅಂತ್ಯಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ₹ 5,420 ಕೋಟಿ ಆದಾಯ ಗಳಿಸಿತ್ತು. 2020ರ ಡಿಸೆಂಬರ್‌ ಅಂತ್ಯಕ್ಕೆ ಆದಾಯ ಪ್ರಮಾಣವು ₹ 6,788 ಕೋಟಿಗೆ (ಶೇ 25.20) ಏರಿಕೆಯಾಗಿದೆ. ಕಂಪನಿಯ EBITDA (ಅರ್ನಿಂಗ್ಸ್‌ ಬಿಫೋರ್‌ ಇಂಟರೆಸ್ಟ್‌, ಟ್ಯಾಕ್ಸ್‌, ಡಿಪ್ರಿಸಿಯೇಷನ್‌ ಆ್ಯಂಡ್‌ ಅಮೊರ್ಟೈಜೇಷನ್‌) ₹ 1,278 ಕೋಟಿಯಿಂದ ₹ 1,911 ಕೋಟಿಗೆ ಹೆಚ್ಚಾಗಿದೆ. ಈ ಬಾರಿ ಇಬಿಐಟಿಡಿಎ ವ್ಯತ್ಯಾಸದ ಪ್ರಮಾಣವು ಶೇ 28.20 ದಾಖಲಾಗಿದೆ.

ಕಳೆದ ಬಾರಿ ಇದೇ ಅವಧಿಯಲ್ಲಿ ಕಂಪನಿಯು ಗಳಿಸಿದ್ದ ₹ 764 ಕೋಟಿ ನಿವ್ವಳ ಲಾಭದ ಪ್ರಮಾಣವು ಈ ಬಾರಿ ₹ 1,238 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕ ಅವಧಿಯ ಲಾಭ ಗಳಿಕೆ ಪ್ರಮಾಣವು ಶೇ 62ರಷ್ಟು ಹೆಚ್ಚಾಗಿದೆ.

ಬರ್ಜರ್‌ ಪೇಂಟ್ಸ್‌ ಕಂಪನಿಯು 2019ರ ಡಿಸೆಂಬರ್‌ ಅಂತ್ಯಕ್ಕೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ₹ 1,698 ಕೋಟಿ ಆದಾಯ ಗಳಿಸಿತ್ತು. ಈ ಬಾರಿ ಕಂಪನಿಯ ಆದಾಯ ಪ್ರಮಾಣವು ₹ 2,118 ಕೋಟಿಗೆ (ಶೇ 24.9) ಏರಿಕೆಯಾಗಿದೆ. ಇಬಿಐಟಿಡಿಎ ₹ 306 ಕೋಟಿಯಿಂದ ₹ 432 ಕೋಟಿಗೆ ಹೆಚ್ಚಾಗಿದೆ. ಈ ಬಾರಿ ಶೇ 20.40ರಷ್ಟು ಇಬಿಐಟಿಡಿಎ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ.

ಹಿಂದಿನ ಬಾರಿ ₹ 182 ಕೋಟಿ ನಿವ್ವಳ ಲಾಭ ಗಳಿಸಿದ್ದ ಕಂಪನಿಯು, ಈ ಬಾರಿ ₹ 275 ಕೋಟಿ ಲಾಭವನ್ನು ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯ ಪ್ರಮಾಣ ಶೇ 50.70 ಹೆಚ್ಚಾಗಿದೆ.

ಕನ್ಸಾಯಿ ನೆರೋಲ್ಯಾಕ್‌ ಕಂಪನಿಯ ಮೂರನೇ ತ್ರೈಮಾಸಿಕ ಅವಧಿಯ ಆದಾಯ ಗಳಿಕೆ ಪ್ರಮಾಣವು ₹ 1,332 ಕೋಟಿಯಿಂದ ₹ 1,593 ಕೋಟಿಗೆ (ಶೇ 19.59) ಏರಿಕೆಯಾಗಿದೆ. ಇಬಿಐಟಿಡಿಎ ₹ 209 ಕೋಟಿಯಿಂದ ₹ 319 ಕೋಟಿಗೆ ಹೆಚ್ಚಾಗಿದೆ. ಈ ಬಾರಿ ಶೇ 20ರಷ್ಟು ಇಬಿಐಟಿಡಿಎ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ.

ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ಗಳಿಕೆ ಪ್ರಮಾಣವು ₹ 117 ಕೋಟಿಯಿಂದ ₹ 204 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕ ಅವಧಿಯ ಲಾಭ ಗಳಿಕೆಯ ಪ್ರಮಾಣವು ಶೇ 74.35ರಷ್ಟು ಹೆಚ್ಚಾಗಿದೆ.

ಷೇರಿನ ಮೌಲ್ಯವರ್ಧನೆ: ರಾಷ್ಟ್ರೀಯ ಷೇರುಪೇಟೆಯಲ್ಲಿ ಏಷ್ಯನ್‌ ಪೇಂಟ್ಸ್‌ ಕಂಪನಿಯ ಷೇರಿನ ಬೆಲೆಯು (₹ 2,416.40) ಇದೇ ಫೆಬ್ರುವರಿ 19ಕ್ಕೆ ಅಂತ್ಯಗೊಂಡಂತೆ ಒಂದು ವರ್ಷದ ಅವಧಿಯಲ್ಲಿ ಶೇ 28.19ರಷ್ಟು ಹೆಚ್ಚಾಗಿದೆ. ಆರು ತಿಂಗಳಲ್ಲಿ ಶೇ 28.14 ಹಾಗೂ ಮೂರು ತಿಂಗಳಲ್ಲಿ ಶೇ 11.78ರಷ್ಟು ಏರಿಕೆ ಕಂಡಿದೆ. 

ಬರ್ಜರ್‌ ಪೇಂಟ್ಸ್‌ ಷೇರಿನ ಮೌಲ್ಯವು (₹ 741.25) ಒಂದು ವರ್ಷದ ಅವಧಿಯಲ್ಲಿ ಶೇ 27.98ರಷ್ಟು, ಆರು ತಿಂಗಳಲ್ಲಿ ಶೇ 33.27 ಹಾಗೂ ಮೂರು ತಿಂಗಳಲ್ಲಿ ಶೇ 16.40ರಷ್ಟು ವೃದ್ಧಿಯಾಗಿದೆ.

ಕನ್ಸಾಯಿ ನೆರೋಲ್ಯಾಕ್‌ ಕಂಪನಿಯ ಷೇರಿನ ಬೆಲೆಯು (₹562.35) ಒಂದು ವರ್ಷದ ಅವಧಿಯಲ್ಲಿ ಶೇ 12.30ರಷ್ಟು, ಆರು ತಿಂಗಳಲ್ಲಿ ಶೇ 13.29 ಮತ್ತು ಮೂರು ತಿಂಗಳಲ್ಲಿ ಶೇ 4.19ರಷ್ಟು ಏರಿಕೆಯಾಗಿದೆ.

ಸದ್ದು ಮಾಡಿದ್ದ ಇಂಡಿಗೊ ಪೇಂಟ್ಸ್‌

ದೇಶದಲ್ಲಿ ಪೇಂಟಿಂಗ್‌ ಮಾರಾಟದಲ್ಲಿ ಐದನೇ ಸ್ಥಾನದಲ್ಲಿದ್ದ ಇಂಡಿಗೊ ಪೇಂಟ್ಸ್‌ ಕಂಪನಿಯು ‘ಆರಂಭಿಕ ಸಾರ್ವಜನಿಕ ಕೊಡುಗೆ’ (ಐಪಿಒ) ಬಿಡುಗಡೆ ಮಾಡಿದ್ದು, ಫೆಬ್ರುವರಿ 2ರಂದು ಷೇರುಪೇಟೆಗೆ ಸೇರ್ಪಡೆಗೊಂಡ ದಿನ ಭಾರಿ ಸದ್ದು ಮಾಡಿತ್ತು.

₹ 10 ಮುಖಬೆಲೆಯ ಷೇರನ್ನು ಕಂಪನಿಯು ₹ 1,490 ಬೆಲೆಗೆ ಐಪಿಒ ಹಂಚಿಕೆ ಮಾಡಿತ್ತು. ಫೆ.2ರಂದು ಸೇರ್ಪಡೆಗೊಂಡ ಈ ಕಂಪನಿಯ ಷೇರು, ರಾಷ್ಟ್ರೀಯ ಷೇರುಪೇಟೆಯಲ್ಲಿ ₹ 2,607.50ರಲ್ಲಿ ವಹಿವಾಟು ಆರಂಭಿಸಿತ್ತು. ಆರಂಭಿಕ ಬೆಲೆಗಿಂತಲೂ ₹ 1,117.50 (ಶೇ 75) ಹೆಚ್ಚಿನ ಬೆಲೆಯೊಂದಿಗೆ ವಹಿವಾಟು ಆರಂಭಿಸಿದ್ದ ಕಂಪನಿಯ ಷೇರು ಒಂದು ಹಂತದಲ್ಲಿ ₹ 3,129ಕ್ಕೆ (ಶೇ 110 ಏರಿಕೆ) ಏರಿಕೆಯಾಗಿ ವಹಿವಾಟು ನಿರ್ಬಂಧ ಸ್ಥಿತಿಗೆ ತಲುಪಿತ್ತು. ಬಳಿಕ ದಿನದ ಅಂತ್ಯಕ್ಕೆ ₹ 3,117.15ಕ್ಕೆ ವಹಿವಾಟು ಅಂತ್ಯಗೊಳಿಸಿತ್ತು.

ಮರುದಿನ ಕಂಪನಿಯ ಷೇರಿನ ಬೆಲೆಯು ₹ 3,329.95ರವರೆಗೂ ತಲುಪಿತ್ತು. ಆದರೆ, ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದರಿಂದ ಮಾರಾಟ ಒತ್ತಡಕ್ಕೆ ಸಿಲುಕಿ ಷೇರಿನ ಬೆಲೆಯು ದಿನೇ ದಿನೇ ಕುಸಿಯತೊಡಗಿತು. ಕಳೆದ 14 ದಿನಗಳ ವಹಿವಾಟಿನಲ್ಲಿ ಷೇರುಪೇಟೆಗೆ ಸೇರ್ಪಡೆಗೊಂಡ ದಿನವೂ ಸೇರಿ ಕೇವಲ ನಾಲ್ಕು ಗ್ರೀನ್‌ ಕ್ಯಾಂಡಲ್‌ಗಳು ನಿರ್ಮಾಣಗೊಂಡಿವೆ. ಫೆ.19ಕ್ಕೆ ₹ 2,572.60ಕ್ಕೆ ವಹಿವಾಟು ಅಂತ್ಯಗೊಳಿಸಿರುವ ಈ ಕಂಪನಿಯ ಷೇರಿನ ಮೌಲ್ಯವು, ಗರಿಷ್ಠ ಮಟ್ಟ (₹ 3,329.95)ದಿಂದ ₹ 757.35 (– ಶೇ 22.74) ಕುಸಿತ ಕಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು