ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 709 ಅಂಶ ಕುಸಿತ

ಜಾಗತಿಕ ಮಾರುಕಟ್ಟೆಯಲ್ಲಿನ ಮಾರಾಟ ಒತ್ತಡದ ಫಲ
Last Updated 11 ಜೂನ್ 2020, 11:08 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 709 ಅಂಶಗಳ ಕುಸಿತ ದಾಖಲಿಸಿತು.

ಜಾಗತಿಕ ಷೇರುಪೇಟೆಗಳಲ್ಲಿನ ಮಾರಾಟ ಒತ್ತಡವು ದೇಶಿ ಹೂಡಿಕೆದಾರರ ಉತ್ಸಾಹ ಕುಗ್ಗಿಸಿತ್ತು. ಶಾಂಘೈ, ಹಾಂಗ್‌ಕಾಂಗ್‌, ಟೋಕಿಯೊ ಮತ್ತು ಸೋಲ್‌ ಷೇರುಪೇಟೆಗಳೂ ಶೇ 3ರವರೆಗೆ ಕುಸಿತ ಕಂಡಿವೆ.

ಆರ್ಥಿಕ ಚೇತರಿಕೆ ವಿಳಂಬವಾಗುವ ಮತ್ತು ಕೊರೊನಾ–2 ವೈರಾಣುವಿನ ಎರಡನೇ ಅಲೆ ಕಂಡು ಬರಲಿರುವ ಬಗ್ಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌ ಆತಂಕ ವ್ಯಕ್ತಪಡಿಸಿರುವುದರಿಂದ ಷೇರುಪೇಟೆಗಳಲ್ಲಿ ನಿರುತ್ಸಾಹ ಮೂಡಿದೆ.

ಫೆಡರಲ್‌ ರಿಸರ್ವ್‌ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೂನ್ಯ ಮಟ್ಟದಲ್ಲಿ ಇರಿಸಿರುವುದು ಮತ್ತು ಇನ್ನೂ ಎರಡು ವರ್ಷ ಬಡ್ಡಿ ದರಗಳು ಏರಿಕೆ ಆಗದಿರುವ ಬಗ್ಗೆ ಸುಳಿವು ನೀಡಿರುವುದೂ ವ್ಯತಿರಿಕ್ತ ಪರಿಣಾಮ ಬೀರಿದೆ.

ದಿನದ ವಹಿವಾಟಿನ ಒಂದು ಹಂತದಲ್ಲಿ 33,480 ಅಂಶಗಳಿಗೆ ಕುಸಿದಿದ್ದ ಸೂಚ್ಯಂಕವು ದಿನದ ಅಂತ್ಯಕ್ಕೆ 708.68 ಅಂಶ ಕುಸಿತ ಕಂಡು 33,538 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 214 ಅಂಶ ನಷ್ಟಕ್ಕೆ ಒಳಗಾಗಿ 9,902 ಅಂಶಗಳಿಗೆ ಇಳಿಯಿತು.

ಎಸ್‌ಬಿಐ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಷೇರುಗಳು ನಷ್ಟದ ಮುಂಚೂಣಿಯಲ್ಲಿ ಇದ್ದವು. ಎಸ್‌ಬಿಐ ಶೇ 5ರಷ್ಟು ನಷ್ಟ ಕಂಡಿತು. ನಂತರದ ಸ್ಥಾನದಲ್ಲಿ ಸನ್‌ ಫಾರ್ಮಾ, ಮಾರುತಿ, ಬಜಾಜ್‌ ಫೈನಾನ್ಸ್‌, ಟಾಟಾ ಸ್ಟೀಲ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳಿದ್ದವು.

ಇಂಡಸ್‌ಇಂಡ್‌ ಬ್ಯಾಂಕ್‌, ಹೀರೊ ಮೋಟೊ ಕಾರ್ಪ್‌ ಮತ್ತು ಪವರ್‌ ಗ್ರಿಡ್‌ ಷೇರುಗಳು ಲಾಭ ಗಳಿಸಿದವು.

ರೂಪಾಯಿ ಬೆಲೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು 20 ಪೈಸೆ ಕುಸಿತ ಕಂಡು ₹ 75.79ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT