ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 927 ಅಂಶ ಇಳಿಕೆ

ಜಾಗತಿಕ ರಾಜಕೀಯ ಬಿಕ್ಕಟ್ಟು, ಬಡ್ಡಿದರ ಹೆಚ್ಚಳ ಆತಂಕ
Last Updated 22 ಫೆಬ್ರುವರಿ 2023, 13:24 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಹಣದುಬ್ಬರದ ಆತಂಕದಿಂದಾಗಿ ದೇಶದ ಷೇರುಪೇಟೆಗಳು ಬುಧವಾರದ ವಹಿವಟಿನಲ್ಲಿ ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 927 ಅಂಶ ಇಳಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ನಾಲ್ಕು ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತು.

ಜಾಗತಿಕ ಷೇರುಪೇಟೆಗಳಿಗೆ ಬುಧವಾರ ಆಗಿರುವ ನಷ್ಟದ ಜೊತೆಗೆ ದೇಶದಲ್ಲಿ ಫೆಬ್ರುವರಿ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯ ಆಗಲಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಸತತ ನಾಲ್ಕನೇ ದಿನವೂ ವಹಿವಾಟು ಇಳಿಕೆ ಕಾಣುವಂತಾಯಿತು.

ದಿನದ ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.16ರಷ್ಟು ಮತ್ತು ಸ್ಮಾಲ್‌ಕ್ಯಾಪ್‌ ಶೇ 1.09ರಷ್ಟು ಇಳಿಕೆ ಕಂಡಿತು. ಬಿಎಸ್‌ಇನಲ್ಲಿ 266 ಷೇರುಗಳು 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು.

ಅಮೆರಿಕ ಮತ್ತು ರಷ್ಯಾ ನಡುವೆ ಮತ್ತೆ ಶೀತಲ ಸಮರ ಆರಂಭ ಆಗಿರುವುದು ಷೇರುಪೇಟೆಗಳಲ್ಲಿ ನಕಾರಾತ್ಮಕ ಚಲನೆಗೆ ಕಾರಣವಾಯಿತು. ಇದು ಅಲ್ಪಾವಧಿಯ ಪರಿಣಾಮ ಆಗಿದ್ದರೂ ರಷ್ಯಾದ ಮೇಲೆ ಅಮೆರಿಕವು ವಿಧಿಸಲಿರುವ ನಿರ್ಬಂಧಗಳು ಮತ್ತು ಅದರಿಂದಾಗಿ ಆರ್ಥಿಕತೆಯ ಮೇಲೆ ಆಗಲಿರುವ ಪರಿಣಾಮಗಳು ಅದರಲ್ಲಿಯೂ ಮುಖ್ಯವಾಗಿ ಆಹಾರ ಮತ್ತು ತೈಲ ರಫ್ತು ಮೇಲೆ ಬೀರಲಿರುವ ಪ್ರತಿಕೂಲ ಪರಿಣಾಮವು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ಏಷ್ಯಾದಲ್ಲಿ, ದಕ್ಷಿಣ ಕೊರಿಯಾ, ಜಪಾನ್‌, ಚೀನಾ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಗಳ ವಹಿವಾಟು ಇಳಿಕೆ ಕಂಡಿತು. ಯುರೋಪ್‌ನಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ 1.11ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 82.11 ಡಾಲರ್‌ಗೆ ತಲುಪಿತು.

₹6.97 ಲಕ್ಷ ಕೋಟಿ ನಷ್ಟ: ಮುಂಬೈ ಷೇರುಪೇಟೆಯಲ್ಲಿ ನಾಲ್ಕು ದಿನಗಳು ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ₹6.97 ಲಕ್ಷ ಕೋಟಿಯಷ್ಟು ಕರಗಿತು. ಇದರಿಂದ ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯವು ₹261 ಲಕ್ಷ ಕೋಟಿಗೆ ಇಳಿಕೆ ಕಾಣುವಂತಾಯಿತು.

ಅದಾನಿ ಸಮೂಹ ಕಂಪನಿಗಳಿಗೆ ನಷ್ಟ: ಅದಾನಿ ಸಮೂಹದ ಕಂಪನಿಗಳ ಷೇರುಗಳು ಬುಧವಾರದ ವಹಿವಾಟಿನಲ್ಲಿ ಇಳಿಕೆ ಕಂಡವು. 10 ಕಂಪನಿಗಳ ಬಂಡವಾಳ ಮೌಲ್ಯ ಒಟ್ಟು ₹51,294 ಕೋಟಿಯಷ್ಟು ಕಡಿಮೆ ಆಯಿತು. ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ಬಿಡುಗಡೆ ಆದಾಗಿನಿಂದ ಈವರೆಗೆ ಅದಾನಿ ಸಮೂಹದ ಕಂಪನಿಗಳಿಗೆ ಒಟ್ಟು ₹11.62 ಲಕ್ಷ ಕೋಟಿ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT