ಷೇರುಪೇಟೆಯಲ್ಲಿ ದಿನವೂ ದಾಖಲೆ

7
ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

ಷೇರುಪೇಟೆಯಲ್ಲಿ ದಿನವೂ ದಾಖಲೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಗೂಳಿ ಓಟ ಮುಂದುವರಿದಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಎಂಜಿನಿಯರಿಂಗ್‌, ಬೃಹತ್‌ ಯಂತ್ರೋಪಕರಣಗಳು, ಲೋಹ ಮತ್ತು ರಿಯಲ್‌ ಎಸ್ಟೇಟ್‌ ವಲಯದ ಷೇರುಗಳಲ್ಲಿ ಉತ್ತಮ ಖರೀದಿ ವಹಿವಾಟು ನಡೆಯಿತು. ಇದರ ಜತೆಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷಿತ ಮಟ್ಟದಲ್ಲಿದೆ. ಈ ಅಂಶಗಳು ಸೂಚ್ಯಂಕದ ಏರಿಕೆಯನ್ನು ಬೆಂಬಲಿಸಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮಂಗಳವಾರ 107 ಅಂಶ  ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 36,825 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸೋಮವಾರ 36,749 ಅಂಶಗಳ ಹೊಸ ಎತ್ತರಕ್ಕೆ ತಲುಪಿತ್ತು. ಮಂಗಳವಾರ ಅದನ್ನೂ ಮೀರಿ ವಹಿವಾಟು ನಡೆಯಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್‌ಇ) ನಿಫ್ಟಿ 50 ಅಂಶ ಹೆಚ್ಚಾಗಿ, ದಾಖಲೆ ಮಟ್ಟವಾದ 11,134 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಗಿದೆ.ಜನವರಿ 29 ರಂದು ಸೂಚ್ಯಂಕ 11,130 ಅಂಶಗಳ ಗರಿಷ್ಠ ಮಟ್ಟದಲ್ಲಿತ್ತು.

‘ತ್ರೈಮಾಸಿಕ ಫಲಿತಾಂಶದ ಪ್ರಭಾವ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಅಂಶಗಳಿಂದ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕದ ಓಟ ಮುಂದುವರಿದಿದೆ. ವಿದೇಶಿ ಹೂಡಿಕೆ ಚೇತರಿಸಿಕೊಳ್ಳುತ್ತಿದ್ದು, ಕಚ್ಚಾ ತೈಲ ದರ ತುಸು ಇಳಿಕೆ ಕಂಡಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ವಿದೇಶಿ ಹೂಡಿಕೆ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿದ ಷೇರುಗಳ ಖರೀದಿ ಪ್ರಕ್ರಿಯೆಯು ದಾಖಲೆ ವಹಿವಾಟಿಗೆ ಕಾರಣವಾಗಿವೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !