ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ ವರ್ತಕರ ಪ್ರತಿಭಟನೆ

Last Updated 25 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನದ ಆಭರಣಗಳ ಮೇಲೆ ತೆರಿಗೆ  ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರ  ವಿರೋಧಿಸಿ ರಾಜ್ಯ ಆಭರಣ ವ್ಯಾಪಾರಿಗಳು ಮತ್ತು ಕೆಲಸಗಾರರ ಸಂಘಗಳ ಒಕ್ಕೂಟದ ಸದಸ್ಯರು ನಗರದ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ ಒಕ್ಕೂಟದ ಸದಸ್ಯರು ಹಾಗೂ ವಿವಿಧ ಚಿನ್ನಾಭರಣ ಮಳಿಗೆಗಳ ಮಾಲೀಕರು, ‘ಶೇ 1ರಷ್ಟಿದ್ದ ಆಭರಣಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ರಾಜ್ಯ ಸರ್ಕಾರವು ಶೇ 2ಕ್ಕೆ ಹೆಚ್ಚಿಸಿದೆ. ಇದರಿಂದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ’ ಎಂದು ದೂರಿದರು.

‘ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆಭರಣಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ವಹಿವಾಟು ಕುಸಿಯುತ್ತಿದ್ದು, ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ವಹಿವಾಟು ಇಲ್ಲದ ಕಾರಣ ಚಿನ್ನಾಭರಣ ತಯಾರಿಸುವ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ರಾಮಾಚಾರಿ ಹೇಳಿದರು. ತೆರಿಗೆ ಹೆಚ್ಚಿಸಿರುವುದರಿಂದ, ರಾಜ್ಯದ ಚಿನ್ನದ ಆಭರಣ ಉದ್ಯಮದಲ್ಲಿ ಬಂಡವಾಳ ಹೂಡುವ ಬಂಡವಾಳಗಾರರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಆಭರಣಗಳು ಮತ್ತಷ್ಟು ದುಬಾರಿಯಾಗಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಚಿನ್ನ ಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಒಕ್ಕೂಟದ ಸದಸ್ಯರು, ತೆರಿಗೆ ಹೆಚ್ಚಳದ ಕ್ರಮ  ವಾಪಸ್ ಪಡೆಯುವಂತೆ ಮನವಿ ಮಾಡಿದರು. ತೆರಿಗೆ ಹೆಚ್ಚಿಸಿರುವ ಕ್ರಮವನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯದೆಲ್ಲೆಡೆ ಚಿನ್ನಾಭರಣ ಮಳಿಗೆಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.

ಸರ್ಕಾರದ ಪ್ರತಿಕ್ರಿಯೆಗೆ ಮೂರ್ನಾಲ್ಕು ದಿನಗಳ ಕಾಲ ಎದುರು ನೋಡುತ್ತೇವೆ. ಒಂದು ವೇಳೆ ಸರ್ಕಾರ ‘ವ್ಯಾಟ್’ ಹೆಚ್ಚಳದ ನಿರ್ಧಾರ ವಾಪಸ್ ತೆಗೆದುಕೊಳ್ಳದಿದ್ದರೆ ಅನಿರ್ದಿಷ್ಟ ಕಾಲದವರೆಗೆ ನಾವು ವಹಿವಾಟು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಕಾರ್ಯದರ್ಶಿ ಎಸ್.  ವೆಂಕಟೇಶ್ ಬಾಬು  ತಿಳಿಸಿದ್ದಾರೆ.

ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಅಧ್ಯಕ್ಷ ರಾಜೇಶ್ ಮೆಹ್ತಾ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಆರ್.ಎಸ್.ಬಾಬು, ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಶ್ರೀಧರ್, ಬೆಂಗಳೂರು ಸೌತ್ ಜ್ಯುವೆಲರ್ಸ್‌ ಅಸೋಸಿಯೇಷನ್‌ನ ಟಿ.ಎ ಶರವಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT