ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ ವಾಸ್ತು

Last Updated 30 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸ್ವಾತಿಶ್ರಿ ಎಸ್.ಆರ್, ಹೇಸರಗಟ್ಟ: ಜನನ 6-6-2992, ಸಮಯ 6-20 ಬೆಳಿಗ್ಗೆ.
ಪ್ರಶ್ನೆ: ಪಿಯುಸಿ ಫೇಲ್ ಆಗಿದೆ. ವೈದ್ಯೆ ಆಗುವ ಬಯಕೆ. ಮುಂದಿನ ಜೀವನದ ಬಗ್ಗೆ ತಿಳಿಸಿ.

ಉತ್ತರ: ಇವರದು ವೃಷಭ ಲಗ್ನ, ಆಶ್ಲೇಷ ನಕ್ಷತ್ರ, ಕರ್ಕರಾಶಿ. ಇವರ ಲಗ್ನದಲ್ಲಿ ಲಗ್ನಾಧಿಪತಿ ಶುಕ್ರರು ಚಂದ್ರ ನಕ್ಷತ್ರದಲ್ಲಿ ವೈರಿ ರವಿಯೊಡನೆ ಯುತಿ ಹೊಂದಿದ್ದು, ಯೋಗಿಯಾಗಿ, ಅಸ್ತರಾಗಿ, ಬುಧರೊಡನೆ ಸ್ಥಿತರಿದ್ದಾರೆ. ಭಾವದಲ್ಲಿ ಕೇತು ಕೂಡ ಇಲ್ಲಿ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ವಿದ್ಯಾಸ್ಥಾನ ಚಥುರ್ತವು ಸಿಂಹವಾಗಿದ್ದು ದಗ್ಧರಾಶಿಯಾಗಿದೆ. ಇಲ್ಲಿ ಅವಯೋಗಿ ಜ್ಞಾನಕಾರಕ ಗುರು ಕೇತು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ರಾಹು ಸಪ್ತಮದಿಂದ ವೀಕ್ಷಿಸುತ್ತಾರೆ. ಚಥುರ್ತಾಧಿಪತಿ ರವಿ ಚಂದ್ರ ನಕ್ಷತ್ರದಲ್ಲಿ ಲಗ್ನ ಸ್ಥಿತರಿದ್ದಾರೆ. ಧನ ಪಂಚಮಾಧಿಪತಿ ಬುಧ ಮತ್ತು ವೈರಿ ಶುಕ್ರರೊಡನೆ ಸ್ಥಿತರಿದ್ದಾರೆ. ಇವು ನಿಮ್ಮಲ್ಲಿ ಉತ್ತಮ ಬುದ್ಧಿಮತ್ತೆಯ ಸೂಚಕವಾಗಿದೆ. ಆದರೆ ನಿಮ್ಮ ವಿದ್ಯಾಸ್ಥಾನ ದ್ವಿತೀಯದಲ್ಲಿ ಗುಳಿಕ ಸ್ಥಿತರಿದ್ದಾರೆ.

ವಿದ್ಯಾಬುದ್ಧಿಸ್ಥಾನ ಪಂಚಮದಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ವ್ಯಯಾಧಿಪತಿ ಕುಜರು ವೀಕ್ಷಿಸುತ್ತಾರೆ. ಪಂಚಮಾಧಿಪತಿ ಬುಧರು ವೈರಿ ಕುಜ ನಕ್ಷತ್ರದಲ್ಲಿ ಲಗ್ನ ಸ್ಥಿತರಿದ್ದಾರೆ. ಇವು ನಿಮ್ಮಲ್ಲಿ ಧಾರಣ ಶಕ್ತಿಯ ಕೊರತೆ ಸೂಚಿಸುತ್ತವೆ. ಆದ್ದರಿಂದ ನೆನಪಿಗಾಗಿ ಹಲವಾರು ಬಾರಿ ಓದುವುದು ಅನಿವಾರ್ಯ.

ಇವರ ವೃತ್ತಿ ಶಿಕ್ಷಣ ಸ್ಥಾನ ಷಷ್ಟವು ತುಲಾ ಆಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಷಷ್ಟಾಧಿಪತಿ ಶುಕ್ರರು ಚಂದ್ರ ನಕ್ಷತ್ರದಲ್ಲಿ ಲಗ್ನ ಸ್ಥಿತರಿದ್ದು ಅಸ್ತರಾಗಿದ್ದಾರೆ. ಇದರಿಂದ ಇವರಿಗೆ ಎಂಜನಿಯರಿಂಗ್ ವಿದ್ಯೆಯೇ ಸೂಕ್ತ. ವಿದ್ಯಾಕಾರಕ ಅಂಶಕುಂಡಲಿಯ ಲಗ್ನವು ಮೇಷವಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ.

ಲಗ್ನಾಧಿಪತಿ ಕುಜರು ತೃತೀಯದಲ್ಲಿ ಜ್ಞಾನಕಾರಕ, ಅವಯೋಗಿ ಗುರು ಒಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಇದರಿಂದ ಇವರು ಹೆಚ್ಚಿನ ಪ್ರಯತ್ನ ಮತ್ತು ಶ್ರದ್ದೆಯಿಂದ ಎಂಜನಿಯರಿಂಗ್ ಡಿಗ್ರಿ ಗಳಿಸಬಲ್ಲರು  ಅಥವಾ ನರ್ಸಿಂಗ್, ಡಿಪ್ಲೊಮಾ ಕೋರ್ಸ ಮಾಡಬಲ್ಲರು.

ಇವರಿಗೆ ಈಗ ಶುಕ್ರದೆಶೆ ರಾಹು ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ತೃತೀಯಶನಿ ದಶಮ ಗುರು ಇದ್ದಾರೆ.  ಇವು ಶುಭಾಶುಭಕರ. ಅದ್ದರಿಂದ ಹೆಚ್ಚಿನ ಪ್ರಯತ್ನದಿಂದ ವಿದ್ಯೆ ಗಳಿಸಿ.

ಪರಿಹಾರ: ಪಚ್ಛೆ ಹರಳು ಧರಿಸಿ. ಕಾಳಿಕಾ ಅಷ್ಟೋತ್ತರ ಪಠಿಸಿ. ರುದ್ರಾಭಿಷೇಕ ಮಾಡಿಸಿ. ನರಸಿಂಹರನ್ನು ಪೂಜಿಸಿ.

ರಾಜು ಎಚ್.ಪಿ. ನಂಜನಗೂಡು: ಜನನ 12-10-1977, ಸಮಯ 1-10 ರಾತ್ರಿ.
ಪ್ರಶ್ನೆ: ಮದುವೆ ಯಾವಾಗ, ಹಲವಾರು ವಿಘ್ನಗಳು. ಪರಿಹಾರ ತಿಳಿಸಿ.
ಉತ್ತರ:
ಇವರದು ಕರ್ಕಾಟಕ ಲಗ್ನ, ಹಸ್ತಾ ನಕ್ಷತ್ರ ಕನ್ಯಾರಾಶಿ. ಇವರ ಲಗ್ನ ಭಾವದಲ್ಲಿ ಕುಜರು ಗುರು ನಕ್ಷತ್ರ ಸ್ಥಿತರಿದ್ದು, ಇವರನ್ನು ಮತ್ತು ಲಗ್ನವನ್ನು ಪಾಪಿ ಕೇತು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಲಗ್ನವು ಪಾಪ ಕರ್ತರಿಗೆ ಒಳಗಾಗಿದೆ. ಲಗ್ನಾಧಿಪತಿ ಚಂದ್ರರು ಕಂಕಣ ಸ್ಥಾನದಲ್ಲಿ ರಾಹು, ರವಿ ಮತ್ತು ಬುಧರೊಡನೆ ಸ್ಥಿತರಿದ್ದಾರೆ. ಇವರನ್ನು ಕೇತು ವೀಕ್ಷಿಸುತ್ತಾರೆ. ಇದರಿಂದ ಲಗ್ನ  ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ಕಳತ್ರ ಸ್ಥಾನ ಸಪ್ತಮವು ಮಕರ ರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ದಗ್ಧರಾಶಿ ಸ್ಥಿತ ಕುಜ ಮತ್ತು ರಾಹು ವೀಕ್ಷಿಸುತ್ತಾರೆ. ಸಪ್ತಮಾಧಿಪತಿ ಶನಿ ಕುಟುಂಬಸ್ಥಾನದಲ್ಲಿ ಕೇತು ನಕ್ಷತ್ರ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧಗಳೂ ಇಲ್ಲ.  ಕಾರಕ ಶುಕ್ರರು ಅವಯೋಗಿಯಾಗಿ ಪುಷ್ಕರ ನವಾಂಶದಲ್ಲಿ ವೈರಿ ರವಿ ನಕ್ಷತ್ರದಲ್ಲಿ, ವೈರಿ ಕ್ಷೇತ್ರದಲ್ಲಿ ತೃತೀಯ ಸ್ಥಿತರಿದ್ದಾರೆ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ತುಲಾ ಆಗಿದ್ದು ಸುಖಾಂಶದಲ್ಲಿದೆ. ಲಗ್ನದಲ್ಲಿ ಗುಳಿಕ ಸ್ಥಿತರಿದ್ದು, ಲಗ್ನಾಧಿಪತಿ ಮತ್ತು ಕಾರಕ ಶುಕ್ರರು ತೃತೀಯ ಸ್ಥಿತರಿದ್ದಾರೆ. ಜನ್ಮ ಸಪ್ತಮಾಧಿಪತಿ ಶನಿ ದುಃಸ್ಥಾನ ಸ್ಥಿತರಿದ್ದಾರೆ. ಇವು ದಾಂಪತ್ಯ ಜೀವನದಲ್ಲಿ ಹಲವಾರು ಸಂಕಷ್ಟಗಳ ಸೂಚಕವಾಗಿವೆ.
ವೃಥಾಪವಾದಗಳಿಗೂ ಕಾರಣ ವಾಗಿದೆ.

ಇವರಿಗೆ ಈಗ ರಾಹು ದಶಾ ಕುಜ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಸಾಡೆಸಾತಿ, ಅಷ್ಟಮಗುರು ಇದ್ದಾರೆ. ಗುರುಬಲವಿಲ್ಲ, ಇವು ಅಶುಭಕರ. ಮುಂದಿನ ಗುರುದಶಾ ಗುರುಭುಕ್ತಿಯಲ್ಲಿ ಗುರುಬಲವಿರುವಾಗ, ಅಂದರೆ 2012ರ ಕೊನೆಗೆ ಹೆಚ್ಚಿನ ಪ್ರಯತ್ನದಿಂದ ಇವರ ಮದುವೆ ನೆರವೇರುವುದು.

ಪರಿಹಾರ: ಕನಕ ಪುಷ್ಯರಾಗ ಧರಿಸಿ. ಸುದರ್ಶನ ಮಂತ್ರ ಪಠಿಸಿ. ವಿನಾಯಕ ಶಾಂತಿ ಮಾಡಿಸಿ. ಆಂಜನೇಯರನ್ನು ಪೂಜಿಸಿ.  

ಜೆ.ಜೆ.ಸ್ವಾಮಿ, ಗುಲ್ಬರ್ಗಾ; ಜನನ 4-1-1960, ಸಮಯ 5-30 ಬೆಳಿಗ್ಗೆ.
ಪ್ರಶ್ನೆ: ವಕೀಲಿ ವೃತ್ತಿ. ಸಾಲದಲ್ಲಿ ಸಿಲುಕಿದ್ದೇನೆ. ಪರಿಹಾರ ತಿಳಿಸಿ.
ಉತ್ತರ:
ಇವರದು ವೃಶ್ಚಿಕ ಲಗ್ನ, ಪೂರ್ವಾಭಾದ್ರಪದ ನಕ್ಷತ್ರ ಕುಂಭರಾಶಿ. ಇವರ ಲಗ್ನಾಧಿಪತಿ ಕುಜರು ವೈರಿ ಬುಧ ನಕ್ಷತ್ರದಲ್ಲಿ, ಲಗ್ನದಲ್ಲಿ ಸ್ವಕ್ಷೇತ್ರ ಸ್ಥಿತರಿದ್ದಾರೆ. ಇವರೊಡನೆ ಯೋಗಿ ಗುರು ಮತ್ತು ಭಾವದಲ್ಲಿ ಅಷ್ಟಮಾಧಿಪತಿ ಬುಧರು ಸ್ಥಿತರಿದ್ದಾರೆ. ಇವರನ್ನು ಪಾಪಿ ಕೇತು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ಧನಸ್ಥಾನವು ಧನು ಆಗಿದ್ದು ಇಲ್ಲಿ ಅವಯೋಗಿ ಕರ್ಮಾಧಿಪತಿ ರವಿ ಮತ್ತು ಶನಿ, ವ್ಯಯಾಧಿಪತಿ  ಶುಕ್ರ ನಕ್ಷತ್ರ ಸ್ಥಿತರಿದ್ದಾರೆ. ಧನಾಧಿಪತಿ ಗುರು ಯೋಗಿ ಯಾಗಿ ಲಗ್ನ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ.

ಇವರ ರೋಗ ರಿಪು ಋಣ ಸ್ಥಾನ ಮೇಷವಾಗಿದ್ದು ದಗ್ಧರಾಶಿಯಾಗಿದೆ. ಇಲ್ಲಿ ಯಾವ ಗ್ರಹರೂ ಇಲ್ಲ. ಷಷ್ಟಾಧಿಪತಿ ಕುಜರು ಲಗ್ನದಲ್ಲಿ ವೈರಿ ಅಷ್ಟಮಾಧಿಪತಿ ಬುಧ ನಕ್ಷತ್ರ ಸ್ಥಿತರಿದ್ದಾರೆ.

ಈ ಸ್ಥಾನಕ್ಕೆ ಯಾವ ಶುಭ ಸಂಬಂಧವೂ ಇಲ್ಲ. ಇವು ನಿಮ್ಮ ಋಣಬಾಧೆಗೆ ಕಾರಣ ವಾಗಿದೆ. ಇವರ ಭಾಗ್ಯಸ್ಥಾನ ಕರ್ಕವಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ.

ಭಾಗ್ಯಾಧಿಪತಿ ಚಂದ್ರರು ಸುಖಸ್ಥಾನದಲ್ಲಿ ವೈರಿ ಕ್ಷೇತ್ರದಲ್ಲಿ ಪಾಪಿ ಕೇತು ಒಡನೆ ಸ್ಥಿತರಿದ್ದಾರೆ. ಇವರನ್ನು ಕುಜ ಮತ್ತು ಶನಿ ವೀಕ್ಷಿಸುತ್ತಾರೆ. ಇವು ನಿಮ್ಮ ಭಾಗ್ಯಸ್ಥಾನಕ್ಕೆ ಪೀಡೆಯನ್ನು ಸೂಚಿಸುತ್ತವೆ.ಈ ಸ್ಥಾನವನ್ನು ಶನಿ ವೀಕ್ಷಿಸುತ್ತಾರೆ. ಲಾಭಾಧಿಪತಿ ಬುಧರು ವೈರಿ ಕ್ಷೇತ್ರದಲ್ಲಿ , ಕೇತು ನಕ್ಷತ್ರದಲ್ಲಿ ಲಗ್ನಸ್ಥಿತರಿದ್ದಾರೆ. ಇವು ಶುಭಾಶುಭಕರ.

ಇವರಿಗೆ ಈಗ ಶುಕ್ರದೆಶೆ ಶುಕ್ರ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಅಷ್ಟಮ ಶನಿ, ತೃತೀಯ ಗುರು ಇದ್ದಾರೆ. ಇವು ಅಶುಭಕರ. ಆದ್ದರಿಂದ ಇವರು ಚಂಚಲ ಮನಸ್ಸನ್ನು ಮತ್ತು ಮಾತಿನ ಮೇಲೆ ನಿಗ್ರಹ ಸಾಧಿಸಿ, ಕುಟುಂಬದವರ ಎಲ್ಲ ಮಾತಿಗೂ ಗೋಣು ಆಡಿಸುವ ಬದಲು, ವಿವೇಚನೆಯಿಂದ ಖರ್ಚು ವೆಚ್ಚ ನಿರ್ವಹಿಸಿದರೆ 2016 ರ ಹೊತ್ತಿಗೆ ಋಣ ಮುಕ್ತರಾಗುವರು.

ಪರಿಹಾರ: ಕನಕ ಪುಷ್ಯರಾಗ ಧರಿಸಿ. ಗಣಪತಿಯನ್ನು ಪೂಜಿಸಿ. ಗ್ರಾಮದೇವತೆಗೆ ಹರಕೆ ಸಲ್ಲಿಸಿ. ಕನಕಧಾರಾಸ್ತೋತ್ರ ಪಠಿಸಿ. ಶನಿ ಪೀಡಾಪರಿಹಾರ ಸ್ತೋತ್ರ ಪಠಿಸಿ.

ಅಪೂರ್ವ, ಮೈಸೂರು: ಮನೆಯ ನಕ್ಷೆ ಕಳಿಸಿದ್ದೇನೆ. ಆರ್ಥಿಕ ತೊಂದರೆ, ವಾಸ್ತು ದೋಷವಿದ್ದರೆ ತಿಳಿಸಿ.
ಉತ್ತರ:
ಮನೆಯ ಸುತ್ತ ಕಂಪೌಂಡ ಇದೆಯೋ ತಿಳಿಸಿಲ್ಲ. ಇದ್ದರೆ ಪಿಶಾಚವೀಧಿ ಉತ್ತರ ಮತ್ತು ಪೂರ್ವಕ್ಕೆ ಜಾಸ್ತಿ ಇರಬೇಕು. ಆದರೆ ದಕ್ಷಿಣಕ್ಕೆ  ಹೆಚ್ಚು ಖಾಲಿ ಸ್ಥಳವಿರುವಂತೆ ಕಾಣುತ್ತದೆ. ಇದು ಯಮನ ಸ್ಥಾನವಾಗಿದ್ದು ಅಶುಭಕರ. ಅದ್ದರಿಂದ ವಾಸ್ತು ಯಂತ್ರ, ಅಷ್ಟದಿಗ್ಬಂಧನ ಯಂತ್ರಗಳನ್ನು ಪೂಜಿಸಿ ಉತ್ತರ ಗೋಡೆಯಲ್ಲಿ ಸ್ಥಾಪಿಸಿ.

ಮನೆಯ ಪಾಯ ಆಯತಾಕಾರವಾಗಿಲ್ಲ. ಪೂರ್ವ ಮತ್ತು ಈಶಾನ್ಯದಲ್ಲಿ ಕಡಿತಗೊಂಡಿದೆ. ಇದು ಯಜಮಾನರಿಗೆ ಆರ್ಥಿಕ ಸಂಕಷ್ಟ ತರುತ್ತದೆ. ಆದ್ದರಿಂದ ಪಾಯವನ್ನು ಹೇಗೆ ಆಯತಾಕಾರ ಗೊಳಿಸಬಹುದು ಎಂದು ಚಿಂತಿಸಿ ಅದನ್ನು ಮನೆಗೆ ಗ್ರಿಲ್ ಮುಂತಾದವುಗಳಿಂದ ಮನೆಗೆ ಸೇರಿಸಿ. ನಿಮ್ಮ ಕೈಬರಹದ ನಕ್ಷೆಯಲ್ಲಿ ಇವು ವಿವರವಾಗಿ ಲಭ್ಯವಿಲ್ಲ. ಆದ್ದರಿಂದ ಸೂಕ್ತ ವಾಸ್ತು ತಜ್ಞರಿಗೆ ಮನೆಯನ್ನು  ತೋರಿಸಿ ಪರಿಹಾರ ಕಂಡುಕೊಳ್ಳಿ.

ನಿರ್ಮಲ, ಮೂಡಿಗೆರೆ: ಮನೆಯ ನಕ್ಷೆ ಕಳಿದಿದ್ದೇನೆ. ಆರೋಗ್ಯ ಸಮಸ್ಯೆ. ಪರಿಹಾರ ತಿಳಿಸಿ.
ಉತ್ತರ:
ನೀವು ಕಳಿಸಿದ ನಕ್ಷೆಯಂತೆ ಮನೆಯ ಪಾಯ ಆಯತಾಕಾರವಾಗಿದೆಯೋ ತಿಳಿಯುತ್ತಿಲ್ಲ. ನೀವು ಮಧ್ಯದ, ವಾಸದ ಸ್ಥಳದ ನಕ್ಷೆಯನ್ನು ಕಳಿಸಿದ್ದೀರಿ. ಪೂರ್ತಿ ಕಟ್ಟಡದ ನಕ್ಷೆ ಅವಶ್ಯಕ. ಕಾರ್ ಗ್ಯಾರೇಜ್‌ನಿಂದ ಉತ್ತರ ಈಶಾನ್ಯ ಕಡಿತ ಗೊಂಡಂತೆ ಕಾಣುತ್ತದೆ. ಇದು ಯಜಮಾನರಿಗೆ ಆರ್ಥಿಕ ಸಂಕಷ್ಟ ತರುತ್ತದೆ. 

  ಮನೆಗೆ 13 ಬಾಗಿಲು ಇದ್ದು ಇದು ಅಶುಭಕರ. ಅಲ್ಲದೇ ಮನೆಯ ಒಳಗೆ ಒಂದೇ ನೇರದಲ್ಲಿ ಮೂರು ಬಾಗಿಲು ಇದ್ದು ಇದೂ ಕೂಡ ಸಂಕಷ್ಟಕಾರಕ. ಆದ್ದರಿಂದ 10 ಬಿಟ್ಟು ಸಮಸಂಖ್ಯೆಯಲ್ಲಿ ಬಾಗಿಲು ಕಿಡಿಕಿ ಇರುವಂತೆ ನೋಡಿಕೊಳ್ಳಿ. 

    ನೈರುತ್ಯದಲ್ಲಿ ಬಾಯ್ಲರ್ ತೋರಿಸಿದ್ದೀರಿ. ಇದು ಯಜಮಾನರಿಗೆ ಆರೋಗ್ಯ ಸಮಸ್ಯೆ ತರುತ್ತದೆ. ವಾಸ್ತು ತಜ್ಞರಿಗೆ ಪೂರ್ತಿ ಕಟ್ಟಡ ತೋರಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT