ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಪರೋಕ್ಷ ಭಾರ ಹೇರಿದ ಬನ್ಸಲ್

Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸರಕು ಸಾಗಣೆ ದರ, ಪೂರಕ ಶುಲ್ಕ ಹೆಚ್ಚಳ-ಸಮರ್ಥನೆ
ದುರ್ಬಳಕೆ ತಡೆಗೆ ಏರಿಕೆ ಅನಿವಾರ್ಯ
ನವದೆಹಲಿ (ಪಿಟಿಐ): ತೈಲ ಬೆಲೆ ಹೆಚ್ಚಳದ (ಎಫ್‌ಎಸಿ) ಹೊರೆಯನ್ನು ತಗ್ಗಿಸಿಕೊಳ್ಳುವ ಸಲುವಾಗಿ ಸರಕು ಸಾಗಣೆ ದರ ಹಾಗೂ ಸೂಪರ್ ಫಾಸ್ಟ್ ರೈಲುಗಳ ಪೂರಕ ಶುಲ್ಕಗಳನ್ನು ಹೆಚ್ಚು ಮಾಡಿರುವುದನ್ನು ರೈಲ್ವೆ ಸಚಿವ ಪಿ.ಕೆ.ಬನ್ಸಲ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಶೇ 5ಕ್ಕಿಂತಲೂ ಹೆಚ್ಚಿಸಲಾಗಿರುವ ಸರಕು ಸಾಗಣೆ ದರ ಮತ್ತು ಪೂರಕ ಶುಲ್ಕ ಏರಿಕೆಯಿಂದ 4683 ಕೋಟಿ ಆದಾಯದ ನಿರೀಕ್ಷೆ  ಹಾಕಿಕೊಳ್ಳಲಾಗಿದೆ.

ಟ್ರಾವೆಲ್ ಏಜೆಂಟರು, ದಲ್ಲಾಳಿಗಳು ಭಾರಿ ಸಂಖ್ಯೆಯಲ್ಲಿ ಟಿಕೆಟ್ ಕಾಯ್ದಿರಿಸುತ್ತಿದ್ದುದನ್ನು ತಡೆಯಲು ಇವುಗಳ ದರ ಹೆಚ್ಚಳ ಅಗತ್ಯ. ಪೂರಕ ಶುಲ್ಕಗಳನ್ನು ಶೇ 3ರಷ್ಟು ಮಾತ್ರ ಹೆಚ್ಚಿಸಲಾಗಿದೆ. ಹೀಗಾಗಿ ಪ್ರಯಾಣ ದರ ದುಬಾರಿ ಆಗುವುದಿಲ್ಲ ಎಂದು ಬಜೆಟ್ ಮಂಡನೆ ನಂತರ ಸಚಿವರು ಸುದ್ದಿಗಾರರ ಬಳಿ ಸಮರ್ಥಿಸಿಕೊಂಡರು.

`ರೈಲ್ವೆಯ ಆರ್ಥಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನಾನು ಕ್ರಮ ಕೈಗೊಂಡಿದ್ದೇನೆ. ರೈಲ್ವೆಯ ಆರ್ಥಿಕ ಬೆಳವಣಿಗೆಯು ರಾಷ್ಟ್ರದ ಒಟ್ಟಾರೆ ಆರ್ಥಿಕ ಉತ್ಪಾದನೆಗೆ ಜತೆಜತೆಗೆ ಸಾಗಬೇಕು' ಎಂದು ಸಚಿವರು ಹೇಳಿದರು.

ಟಿಕೆಟ್ ಕಾಯ್ದಿರಿಸುವಿಕೆ ಶುಲ್ಕ ಎಸಿ-3ನೇ ದರ್ಜೆಯದ್ದು ರೂ 25ರಿಂದ  ರೂ 40ಕ್ಕೆ, ಎಸಿ-1 ಮತ್ತು ಎಸಿ-2ನೇ ದರ್ಜೆಯದ್ದು  ರೂ 25ರಿಂದ  ರೂ  50ಕ್ಕೆ ಏರಲಿದೆ ಎಂದು ತಿಳಿಸಿದರು.

ಇದೇ ವೇಳೆ, ಪ್ರಯಾಣಿಕ ಸ್ನೇಹಿ ಕ್ರಮವಾಗಿ ಈಗ ಹೆಚ್ಚಿಸಲಾಗಿರುವ ಟಿಕೆಟ್ ಮುಂಗಡ ಬುಕಿಂಗ್ ಶುಲ್ಕವನ್ನು ನಿಷೇಧಿಸುವ ಪ್ರಸ್ತಾವವೂ ಇಲಾಖೆಯ ಮುಂದಿದೆ; ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸಂಸತ್ತಿನ ವಿವೇಚನೆಗೆ ಬಿಟ್ಟ ವಿಷಯ ಎಂದು ಅವರು ತಿಳಿಸಿದರು.

ರೂ 4683 ಕೋಟಿ ಆದಾಯ ನಿರೀಕ್ಷೆಯ ಪೈಕಿ 4200 ಕೋಟಿ ಆದಾಯ ಸರಕು ಸಾಗಣೆ ಹೆಚ್ಚಳದಿಂದಲೇ ಬರಲಿದೆ. ಉಳಿದಂತೆ ಸೂಪರ್ ಫಾಸ್ಟ್ ರೈಲುಗಳ ಪೂರಕ ಶುಲ್ಕಗಳಾದ ಟಿಕೆಟ್ ಮುಂಗಡ ಬುಕಿಂಗ್, ಟಿಕೆಟ್ ರದ್ದತಿ ಶುಲ್ಕ, ತತ್ಕಾಲ್ ಶುಲ್ಕ, ಸಿಬ್ಬಂದಿ ಶುಲ್ಕ ಇತ್ಯಾದಿಗಳ ಏರಿಕೆ ಮೂಲಕ  ರೂ 483 ಕೋಟಿ ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದೆ.

ರೈಲ್ವೆ ದರ ನಿಯಂತ್ರಣ ಪ್ರಾಧಿಕಾರ
ಪ್ರಯಾಣಿಕರ ದರ ಹಾಗೂ ಸರಕು ಸಾಗಣೆ ದರ ಪರಿಷ್ಕರಣೆಗೆ ಕಾಲಕಾಲಕ್ಕೆ ಸಲಹೆ ನೀಡುವ ಸಲುವಾಗಿ ಪ್ರತ್ಯೇಕ `ರೈಲ್ವೆ ದರ ನಿಯಂತ್ರಣ ಪ್ರಾಧಿಕಾರ' ಸ್ಥಾಪಿಸುವ ಸಂಬಂಧ ರೈಲ್ವೆ ಸಚಿವಾಲಯವು ಈಗಾಗಲೇ ಸಂಪುಟ ಟಿಪ್ಪಣಿಯನ್ನು (ಕ್ಯಾಬಿನೆಟ್ ನೋಟ್) ಸಿದ್ಧಪಡಿಸಲಾಗಿದೆ. ವಿವಿಧ ಸಚಿವಾಲಯಗಳ ನಡುವೆ ಈ ಕುರಿತು ಚರ್ಚೆಯಾದ ನಂತರ ಸಚಿವ ಸಂಪುಟವು ಇದನ್ನು ಕೈಗೆತ್ತಿಕೊಳ್ಳಲಿದೆ ಎಂದು ಬನ್ಸಲ್ ತಿಳಿಸಿದರು.



2013-14ನೇ ಸಾಲಿನಲ್ಲಿ ಇಲಾಖೆ ನಿಧಿಯ ಮಿಗತೆ ಮೊತ್ತ  ರೂ  12,000 ಕೋಟಿ ಆಗುವ ಅಂದಾಜಿದೆ. ನಿರ್ವಹಣಾ ವೆಚ್ಚವನ್ನು  ಶೇ 87.8ರ ಮಟ್ಟದ್ಲ್ಲಲಿ ಇರಿಸಲಾಗುವುದು ಎಂದು ಅವರು ಹೇಳಿದರು.

40 ಲಕ್ಷ ಟನ್ ಹೆಚ್ಚು ಸರಕು ಸಾಗಣೆ ಗುರಿ
ಮುಂಬರುವ ಸಾಲಿಗೆ ಸರಕು ಸಾಗಣೆ ಗುರಿಯಲ್ಲಿ 40 ದಶಲಕ್ಷ ಟನ್ ಹೆಚ್ಚಳವಾಗಿದೆ. ಪ್ರಸಕ್ತ ಸಾಲಿನಲ್ಲಿ ಇದ್ದ 1007 ದಶಲಕ್ಷ ಟನ್ ಗುರಿಯನ್ನು 1047 ಟನ್‌ಗೆ ಹೆಚ್ಚಿಸಲಾಗಿದೆ.

ಇದೇ ವೇಳೆ ಪ್ರಯಾಣಿಕರ ಸಂಖ್ಯೆ ಬರುವ ಸಾಲಿನಲ್ಲಿ ಶೇ 5.2ರಷ್ಟು ಹೆಚ್ಚಾಗುವ ಅಂದಾಜಿದೆ. ಇದರಿಂದ  ರೂ 1,43,742 ಕೋಟಿ ಸಂಗ್ರಹವಾಗುವ ಲೆಕ್ಕಾಚಾರವಿದ್ದು, ಇದು ಪ್ರಸಕ್ತ ಸಾಲಿಗೆ ಹೋಲಿಸಿದರೆ  ರೂ 18,000 ಕೋಟಿ ಹೆಚ್ಚಳವಾಗಿದೆ.

ಈ ಬಾರಿ ಸಾಮಾನ್ಯ ಬಜೆಟ್‌ನಿಂದ ರೈಲ್ವೆಗೆ  ರೂ 26,000 ಕೋಟಿ ನೀಡಲಾಗುವುದು. ಇದು 2012-13ನೇ ಸಾಲಿಗೆ ನೀಡಿದ್ದ ಮೊತ್ತಕ್ಕಿಂತ  ರೂ  2000 ಕೋಟಿ ಹೆಚ್ಚಳವಾಗಿದೆ ಎಂದು ಬನ್ಸಲ್ ತಿಳಿಸಿದರು.

ಬನ್ಸಲ್ ಭಾಷಣದ ಝಲಕ್
ಮರದ ಮೇಲೆ ಕುಳಿತ ಹಕ್ಕಿಗೆ ಕೆಳಗೆ ಬೀಳುವ ಭಯ ಇಲ್ಲ. ಕಾರಣ ಇಷ್ಟೆ. ಅದು ಟೊಂಗೆ ಗಟ್ಟಿ ಇದೆ ಎಂದು ನಂಬಿಕೊಂಡಿಲ್ಲ. ತನ್ನ ಬಲವಾದ ರೆಕ್ಕೆಯ ಮೇಲೆ ಆತ್ಮವಿಶ್ವಾಸ ಇಟ್ಟುಕೊಂಡಿದೆ'

ಪ್ರಜಾಪ್ರಭುತ್ವವು ಸ್ವಾತಂತ್ರ್ಯ ನೀಡುತ್ತದೆ. ಎತ್ತರಕ್ಕೆ ಏರಿದರೂ  ನೆಲದ ಸಂಪರ್ಕ ಕಡಿದುಕೊಳ್ಳಬಾರದು

ಇಲ್ಲಿ ಮಾತನಾಡುವ ಅವಕಾಶ ಸಿಕ್ಕಿರುವುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಭಾರಿಯಾಗಿದ್ದೇನೆ. ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದ  ದಿ.ರಾಜೀವ್ ಗಾಂಧಿ ಅವರನ್ನು ನೆನೆಯುತ್ತೇನೆ.

ಕುಂಭ ಮೇಳದ ಸಂದರ್ಭದಲ್ಲಿ ಅಲಹಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ಯಾತ್ರಾರ್ಥಿಗಳ ಸುರಕ್ಷೆಗೆ ರೈಲ್ವೆಯು ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಈ ರೀತಿ ಆಗಿರುವುದು ನೋವಿನ ಸಂಗತಿ.

ರೈಲ್ವೆ ಸಾಗಣೆ ದರ ಹೆಚ್ಚಳ
ಇಂಧನ ಇನ್ನಷ್ಟು ತುಟ್ಟಿ?
ನವದೆಹಲಿ (ಪಿಟಿಐ): ಡೀಸೆಲ್ ಮತ್ತು ಅಡುಗೆ ಇಂಧನ ಸಾಗಣೆ ದರವನ್ನು ರೈಲ್ವೆ ಬಜೆಟ್‌ನಲ್ಲಿ ಸುಮಾರು ಶೇ 5.79ರಷ್ಟು ಏರಿಸಿರುವುದರಿಂದ ಅವುಗಳ ಬೆಲೆ ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ.

ಡೀಸೆಲ್ ಸಾಗಣೆ ದರವನ್ನು ಶೇ 5.79ರಷ್ಟು ಹೆಚ್ಚಿಸಲಾಗಿದೆ. ಈ ಮುಂಚೆ, ಒಂದು ಟನ್ ಡೀಸೆಲ್ ಸಾಗಣೆಗೆ ರೈಲ್ವೆ ಇಲಾಖೆ ರೂ984.80 ವಿಧಿಸುತ್ತಿತ್ತು. ಈಗ ಅದು  ರೂ1041.80ಗೆ ಏರಲಿದೆ.



ಅದೇ ರೀತಿ, ಸೀಮೆಎಣ್ಣೆ ಸಾಗಣೆ ದರ ಕೂಡ ಶೇ 5.79ರಷ್ಟು ಏರಲಿದೆ. ಈ ಮುಂಚೆ ಒಂದು ಟನ್ ಸೀಮೆಎಣ್ಣೆ ಸಾಗಣೆಗೆ  ರೂ886.30 ಶುಲ್ಕ ವಿಧಿಸಲಾಗುತ್ತಿತ್ತು. ಈಗ ಅದು  ರೂ937.60ಗೆ ಹೆಚ್ಚಲಿದೆ.

ಎಲ್‌ಪಿಜಿ ಸಿಲಿಂಡರ್ ಸಾಗಣೆ ದರವನ್ನೂ ಶೇ 5.79ರಷ್ಟು ಜಾಸ್ತಿ ಮಾಡಲಾಗಿದೆ. ಇದರಿಂದಾಗಿ ಅದರ ಸಾಗಣೆ ದರ ಟನ್ ಒಂದಕ್ಕೆ  ರೂ937.60ಕ್ಕೆ ಏರಲಿದೆ.

ಈ ಹೆಚ್ಚಳವು ಅಭಿವೃದ್ಧಿ ಶುಲ್ಕ ಮತ್ತು ಸರಕು ಸಾಗಣೆ ದಟ್ಟಣೆ ಅವಧಿಯ ಶುಲ್ಕವನ್ನು ಹೊರತುಪಡಿಸಿದ್ದಾಗಿದೆ. ಹೀಗಾಗಿ ವಾಸ್ತವ ಹೆಚ್ಚಳವು ಇನ್ನಷ್ಟು ಅಧಿಕವಾಗಿರಲಿದೆ ಎಂದು ಬಜೆಟ್ ಮಂಡಿಸಿದ ಸಚಿವ ಪಿ.ಕೆ.ಬನ್ಸಲ್ ಅವರೇ ಸ್ಪಷ್ಟಪಡಿಸಿದ್ದಾರೆ.

ತೈಲ ಸಾಗಣೆ ಕಂಪೆನಿಗಳು ಸದ್ಯ ಶೇ 32-33ರಷ್ಟು ಡೀಸೆಲ್, ಎಲ್‌ಪಿಜಿ ಮತ್ತು ಸೀಮೆಎಣ್ಣೆಯನ್ನು ರೈಲ್ವೆ ಮೂಲಕ ಸಾಗಿಸುತ್ತಿವೆ. ಈಗ ಸಾಗಣೆ ದರವನ್ನು ಹೆಚ್ಚಿಸಿರುವುದರಿಂದ. ಒಂದೋ ಹೆಚ್ಚಿನ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ; ಇಲ್ಲವೇ, ಸರ್ಕಾರ ಅದನ್ನು ಸಾಮಾನ್ಯ ಬಜೆಟ್ ಮೂಲಕ ಭರಿಸಿ ಸರಿ ಹೊಂದಿಸಬೇಕಾಗುತ್ತದೆ.

ಆದರೆ ಈಗ ಹಣಕಾಸು ಮುಗ್ಗಟ್ಟಿನಲ್ಲಿ ಸರ್ಕಾರ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂಬುದು ಮೂಲಗಳ ಅಭಿಪ್ರಾಯ.

ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ರೈಲ್ವೆಯ ಇಂಧನ ಪಾವತಿ ಮೊತ್ತ  ರೂ3,330 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಬನ್ಸಲ್ ಕಳೆದ ತಿಂಗಳು ಹೇಳಿದ್ದರು. ಇದರ ಜತೆಗೆ, ವಿದ್ಯುತ್ ದರ ಕೂಡ ಆಗಾಗ ಹೆಚ್ಚುತ್ತಿರುವುದರಿಂದ ರೈಲ್ವೆ ಇಲಾಖೆಯು ಹೆಚ್ಚಿನ ಹೊರೆ ಭರಿಸಬೇಕಾಗಿದೆ.

ಧಾನ್ಯ ಸಾಗಣೆಯೂ ತುಟ್ಟಿ: ರೈಲ್ವೆ ಇಲಾಖೆಯು ಧಾನ್ಯಗಳು, ಬೇಳೆಕಾಳುಹಾಗೂ ಶೇಂಗಾ ಎಣ್ಣೆ ಸಾಗಣೆ ಮೂಲ ದರವನ್ನು ಶೇ 6ರಷ್ಟು ಹೆಚ್ಚಿಸಿದೆ.

ರೈಲ್ವೆಯ ಇಲಾಖೆಯ ಈ ನಿರ್ಧಾರದಿಂದಾಗಿ ಆಹಾರ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.

ಸರಾಸರಿ 1,307 ಕಿ.ಮೀ ದೂರದವರೆಗೆ ಪ್ರತಿಟನ್ ಧಾನ್ಯ, ಬೇಳೆಕಾಳುಗಳ ಸಾಗಣೆ ದರವನ್ನು ರೂ 1,326.8ರಿಂದ ರೂ 1,403.6ಗೆ ಏರಿಸಲಾಗಿದೆ.

ಅದೇ ರೀತಿ, ಸರಾಸರಿ 1650 ಕಿ.ಮೀ ದೂರದವರೆಗೆ ಪ್ರತಿಟನ್ ಶೇಂಗಾ ಎಣ್ಣೆ ಸಾಗಣೆ ದರವನ್ನು ರೂ 1,746.60ರಿಂದ ರೂ1,848ಕ್ಕೆ ಹೆಚ್ಚಿಸಲಾಗಿದೆ.

ಯೂರಿಯಾ ಸಾಗಣೆ ದರವನ್ನೂ ಶೇ 5.8ರಷ್ಟು ಹೆಚ್ಚಿಸಲಾಗಿದ್ದು, ಇದು ಸರ್ಕಾರದ ರಸಗೊಬ್ಬರ ಸಬ್ಸಿಡಿ ಮಸೂದೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸರಾಸರಿ 886 ಕಿ.ಮೀ ದೂರದವರೆಗೆ ಪ್ರತಿಟನ್ ಯೂರಿಯಾ ಸಾಗಣೆ ದರವನ್ನು ರೂ 920ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಈ ದರ ರೂ 869.60 ಇತ್ತು.

ಸಚಿವ ಬನ್ಸಲ್ ಅವರು ಮಂಡಿಸಿರುವ ಬಜೆಟ್ ಪ್ರಕಾರ, ಈ ದರಗಳು ಅಭಿವೃದ್ಧಿ ಶುಲ್ಕ ಮತ್ತು  ಸರಕು ಸಾಗಣೆ ದಟ್ಟಣೆ  ಶುಲ್ಕಗಳನ್ನು ಹೊರತಾಗಿವೆ. ಆದ್ದರಿಂದ ವಾಸ್ತವವಾಗಿ ದರ ಏರಿಕೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

ರೈಲ್ವೆ ಇಲಾಖೆಯು ಸಗಟು ಮಾರುಕಟ್ಟೆಯಲ್ಲಿ ಹೆಚ್ಚಿನ ದರದಲ್ಲಿ ಡೀಸೆಲ್ ಖರೀದಿಸಬೇಕಾಗಿರುವುದರಿಂದ ಸರಕು ಸಾಗಣೆ ದರದಲ್ಲಿ ಏರಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT