ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ...

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ರವಿ ಶಂಕರ ಶರ್ಮಾ, ಅಂಕೋಲಾ ಉ.ಕ.
ಪ್ರಶ್ನೆ: ನಮಗೆ ಅಂಕೋಲಾದಲ್ಲಿ ಟೆಲಿಫೋನ್ ಬೂತ್, ಜೆರಾಕ್ಸ್, ಫ್ಯಾಕ್ಸ್, ಹಾಗೂ ಬಸ್ಸುಗಳಿಗೆ ಮುಂಗಡ ಟಿಕೆಟ್ ಕೊಡುವುದು, ಹೀಗೆ ಕೆಲವು ವ್ಯಾಪಾರ -ವ್ಯವಹಾರಗಳಿವೆ. ಎರಡು ಮನೆ ಬಾಡಿಗೆಗೆ ಕೊಟ್ಟಿದ್ದೇವೆ, ಹಾಗೂ ಇವುಗಳಿಂದ ತಿಂಗಳಿಗೆ  ರೂ  4 ಸಾವಿರ ಬಾಡಿಗೆ ಬರುತ್ತದೆ. ವಹಿವಾಟಿನಿಂದ ತಿಂಗಳಿಗೆ ಸುಮಾರ‌್ಙು 25,000  ಆದಾಯವಿದೆ.

ನನಗೆ 5 ವರ್ಷದ ಮಗಳು ಹಾಗೂ 7 ವರ್ಷದ ಮಗ ಇದ್ದಾರೆ. ಮಕ್ಕಳ ಮುಂದಿನ ವಿದ್ಯಾಭ್ಯಾಸ, ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುವುದು, ಹಾಗೂ ನಮ್ಮ ಆದಾಯಕ್ಕೆ ಅನುಗುಣವಾಗಿ ಉಳಿತಾಯದ ಯೋಜನೆಗಳು ಇವುಗಳ ವಿಚಾರಗಳಲ್ಲಿ ಸಲಹೆ ನೀಡಿರಿ.

ಉತ್ತರ: ನಿಮ್ಮ ಪ್ರಶ್ನೆ ಪ್ರಕಾರ ನಿಮಗೆ ಸುಮಾರು ರೂ  30000 ತನಕ ಮಾಸಿಕ ಆದಾಯವಿರುವುದು ಕಂಡುಬರುತ್ತದೆ. ಮನೆ ಬಾಡಿಗೆಯಿಂದ ವಾರ್ಷಿಕವಾಗಿ ರೂ  48,000 ಬರುವುದು, ಹಾಗೂ ನಿಮ್ಮ ವ್ಯವಹಾರದ ಆದಾಯ ಇವೆರಡನ್ನೂ ಸೇರಿಸಿ ಆದಾಯ ತೆರಿಗೆ ಕೊಡಬೇಕಾಗುತ್ತದೆ.
 
ಆದರೆ, ಮನೆ ಬಾಡಿಗೆಯಲ್ಲಿ ಬರುವ ಸಂಪೂರ್ಣ ಆದಾಯದಲ್ಲಿ, ಮನೆ ಕಂದಾಯ ಕಳೆದು, ಉಳಿದ ಮೊತ್ತದ ಮೇಲೆ ಶೇ 30 ಆದಾಯ ತೆರಿಗೆ ಸೆಕ್ಷನ್ 24ರ ಅನ್ವಯ ತಿರುಗಿ ಕಳೆದು, ಉಳಿದುದನ್ನು ಮಾತ್ರ ನಿಮ್ಮ ಆದಾಯಕ್ಕೆ ಸೇರಿಸಿ, ಆದಾಯ ತೆರಿಗೆ ಸಲ್ಲಿಸಬಹುದು. ನಿಮ್ಮ ವಿಚಾರದಲ್ಲಿ ಮನೆಬಾಡಿಗೆ ಆದಾಯ ಹೀಗಿರುತ್ತದೆ.

ನಿಮಗೆ ವಾರ್ಷಿಕವಾಗಿ ರೂ  48,000 ಬಾಡಿಗೆ ಬಂದರೂ, ನೀವು ರೂ  30,100ಕ್ಕೆ ಮಾತ್ರ ತೆರಿಗೆ ಸಲ್ಲಿಸಿದರೆ ಸರಿಹೋಗುತ್ತದೆ. ನಿಮ್ಮ ವ್ಯವಹಾರದಿಂದ ಬರುವ ವಾರ್ಷಿಕ ಆದಾಯ ರೂ  3 ಲಕ್ಷ ಹಾಗೂ ಮನೆ ಬಾಡಿಗೆಯಿಂದ ಬರುವ ರೂ  30,100 ಒಟ್ಟಿಗೆ ಸೇರಿಸಿ ರೂ  3,30,100ಕ್ಕೆ ನೀವು ಆದಾಯ ತೆರಿಗೆ ಸಲ್ಲಿಸಬೇಕು.

ಆದಾಯ ತೆರಿಗೆ ಪುರುಷರಿಗೆ (ಹಿರಿಯ ನಾಗರಿಕರನ್ನು ಹೊರತುಪಡಿಸಿ) ರೂ 1.80 ಲಕ್ಷ ತನಕ ವಿನಾಯ್ತಿ ಇದೆ. ನಿಮ್ಮ ಒಟ್ಟು ಆದಾಯ ರೂ 3,30,100 ಇದ್ದು, ಇದರಲ್ಲಿ ನಿಮಗಿರುವ ವಿನಾಯತಿ ರೂ  1.80 ಲಕ್ಷ ಕಳೆದಾಗ, ರೂ 1,50,100ಕ್ಕೆ ಮಾತ್ರ ನೀವು ಆದಾಯ ತೆರಿಗೆ ಕೊಡಬೇಕಾಗುತ್ತದೆ. ಇದೇ ವೇಳೆ ಆದಾಯ ತೆರಿಗೆ ಇಲಾಖೆಯವರು, ಆದಾಯ ತೆರಿಗೆ ಸೆಕ್ಷನ್ 80ಸಿ ಆಧಾರದ ಮೇಲೆ ನೀವು ಷೆಡ್ಯೂಲ್ ಬ್ಯಾಂಕುಗಳಲ್ಲಿ ರೂ 1 ಲಕ್ಷದ ತನಕ ಠೇವಣಿ ಇರಿಸಿದ್ದರೆ, ಈ ಮೊತ್ತವನ್ನು ನಿಮ್ಮ ಒಟ್ಟು ಆದಾಯದಿಂದ ಕಳೆದು ಉಳಿದ ಹಣಕ್ಕೆ ಮಾತ್ರ ಆದಾಯ ತೆರಿಗೆ ಸಲ್ಲಿಸಬಹುದು.

ಈ ವಿಚಾರದಲ್ಲಿ ನಿಮಗೊಂದು ಸಲಹೆ.
ನೀವು ಆದಾಯ ತೆರಿಗೆ ಕಡಿಮೆ ಮಾಡಿಕೊಳ್ಳಲು ಪ್ರತಿ ವರ್ಷ ರೂ  1 ಲಕ್ಷದವರೆಗಿನ ಮೊತ್ತವನ್ನು  ನಿಮ್ಮ ಸಮೀಪದ ಬ್ಯಾಂಕ್ ಒಂದರಲ್ಲಿ 5 ವರ್ಷಗಳ ಠೇವಣಿ ಇರಿಸಿರಿ.

ಹೀಗೆ ಠೇವಣಿ ಇರಿಸುವಾಗ ಆದಾಯ ತೆರಿಗೆಗೆಂದೇ ಈ ಠೇವಣಿ ಇರಿಸುವುದನ್ನು ಬ್ಯಾಂಕಿಗೆ ತಿಳಿಸಬೇಕು. ಹೀಗೆ ರೂ 1 ಲಕ್ಷ ಠೇವಣಿ ಇರಿಸಲು, ವರ್ಷದ ಪ್ರಾರಂಭದಿಂದಲೇ ಒಂದು ಆರ್.ಡಿ. ಖಾತೆ ತೆಗೆಯಿರಿ.

ಪ್ರತಿ ತಿಂಗಳೂ ರೂ 8,335 ರಂತೆ  12 ತಿಂಗಳು ತುಂಬಿದಲ್ಲಿ ವರ್ಷಾಂತ್ಯದಲ್ಲಿ ರೂ  1 ಲಕ್ಷ ಠೇವಣಿ ಮಾಡಲು ಅನುಕೂಲವಾಗುತ್ತದೆ. ಹೀಗೆ ನೀವು ವಾರ್ಷಿಕವಾಗಿ, ಆದಾಯ ತೆರಿಗೆ ಉಳಿಸಲು, ಮಾಡುವ ರೂ  1 ಲಕ್ಷ ಠೇವಣಿ, 5 ವರ್ಷಗಳಲ್ಲಿ ಶೇ 9.50 ಬಡ್ಡಿ ದರದಲ್ಲಿ ರೂ  1,59,910 ಆಗುತ್ತದೆ. ಹೀಗೆ ನೀವು ಪ್ರತಿ ವರ್ಷ ಮಾಡುತ್ತಾ ಬಂದಲ್ಲಿ, 5 ವರ್ಷಗಳ ನಂತರ ಪ್ರತಿ ವರ್ಷ ರೂ  1,59,910 ನಿಮ್ಮ ಕೈಸೇರುತ್ತಾ ಇರುತ್ತದೆ. ಹೀಗೆ ಕೈ ಸೇರುವ ಹಣವನ್ನು ಮತ್ತೆ ಮತ್ತೆ ಠೇವಣಿ ಮಾಡುತ್ತಾ ಬನ್ನಿ.   ನೀವು ಪ್ರತಿವರ್ಷ ಉಳಿಸಿದ ರೂ  1 ಲಕ್ಷ ಹಾಗೂ ಅದರಿಂದ ಬರುವ ಬಡ್ಡಿ, ನಿಮ್ಮ ಮಕ್ಕಳು ಕಾಲೇಜು ಓದುವ ಸಂದರ್ಭದಲ್ಲಿ ಸಹಾಯವಾಗುತ್ತದೆ. ಈ ವರ್ಷ ರೂ  1 ಲಕ್ಷ ಠೇವಣಿ ಇರಿಸಿದರೆ, ನೀವು ರೂ  50,100ಕ್ಕೆ ಮಾತ್ರ ಆದಾಯ ತೆರಿಗೆ ಸಲ್ಲಿಸಿದರೆ ಸಾಕಾಗುತ್ತದೆ. ಇಲ್ಲಿ ತಿಳಿಸಿದಂತೆ ಉಳಿತಾಯ ಮಾಡಿ ನಿಶ್ಚಿಂತರಾಗಿರಿ.


ರಾಮಕೃಷ್ಣ ದೇವಾಡಿಗ, ಕುಂದಾಪುರ
ಪ್ರಶ್ನೆ: ನಾನು ಸರಕಾರಿ ನೌಕರಿಯಲ್ಲಿ ಕುಂದಾಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವರ್ಷದ ಮೇ ತಿಂಗಳಿನಲ್ಲಿ ನಿವೃತ್ತನಾಗುತ್ತಿದ್ದೇನೆ.
ರೂ  10,000 ಪಿಂಚಣಿ ಬರಬಹುದು. ಕುಂದಾಪುರದಲ್ಲಿ ನಮಗೆ ಸ್ವಂತ ಮನೆ ಇದೆ. ನಿವೃತ್ತಿಯಿಂದ ಸುಮಾರು ರೂ  20 ಲಕ್ಷ ಬರಬಹುದು. ನನಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಹೀಗೆ ಮೂರು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಮಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾನೆ. ನಿವೃತ್ತಿಯ ಹಣದಿಂದ ಈಗಿರುವ ಮನೆಯ ಮೇಲೊಂದು ಮನೆ ಕಟ್ಟಿಸಬೇಕೆಂದಿದ್ದೇನೆ. ನನಗೆ ಸೂಕ್ತ ಸಲಹೆ ಬೇಕಾಗಿದೆ.

ಉತ್ತರ:
ನಿಮಗೆ ಪಿಂಚಣಿ ಬರುವುದರಿಂದಲೂ, ಸ್ವಂತ ಮನೆ ಇರುವುದರಿಂದಲೂ, ನಿವೃತ್ತಿಯಿಂದ ಬರುವ ಹಣ ವೆಚ್ಚ ಮಾಡುವ  ಅವಶ್ಯಕತೆ ಇರಲಿಕ್ಕಿಲ್ಲ. ಆದರೆ, ಹಣ ಹೂಡಿಕೆಯ ದೃಷ್ಟಿಯಲ್ಲಿ, ಕುಂದಾಪುರದಲ್ಲಿ  ಇರುವ ಮನೆಯ ಮೇಲೆ ಇನ್ನೊಂದು ಮನೆ ಕಟ್ಟುವುದರಿಂದ ಬಳಿಯಲ್ಲಿ ನಗದುತನ (liquidity) ಹಾಗೂ ಹೆಚ್ಚಿನ ವರಮಾನವು ಬರಲಾರದು. ನಿಮಗೆ ಮೂರು ಆಯ್ಕೆಗಳನ್ನು ತಿಳಿಸಬಯಸುತ್ತೇನೆ.

* ಕುಂದಾಪುರದಲ್ಲಿ ಉತ್ತಮ ವಹಿವಾಟು ಇರುವಲ್ಲಿ ಒಂದು ನಿವೇಶನ ಕೊಂಡುಕೊಳ್ಳುವುದು.

* ನಿವೃತ್ತಿಯಿಂದ ಬಂದ ಹಣ ಬ್ಯಾಂಕ್ ನಲ್ಲಿ ಠೇವಣಿ ಇರಿಸುವುದು.

* ಬ್ಯಾಂಕ್‌ನಿಂದ ಸಾಲ ಪಡೆದು ಮನೆ ಮೇಲೆ ಮನೆ ಕಟ್ಟುವುದು.

ನಿವೃತ್ತಿಯಿಂದ ಬಂದ ಹಣದಿಂದ ಮನೆ ಮೇಲೊಂದು ಮನೆ ಕಟ್ಟುವುದು ತಪ್ಪೇನಲ್ಲ. ಆದರೆ, ಕುಂದಾಪುರ ಒಂದು ತಾಲ್ಲೂಕು ಕೇಂದ್ರವಷ್ಟೇ ಆದ್ದರಿಂದ, ತಿಂಗಳಿಗೆ ಗರಿಷ್ಠ ರೂ  5,000 ಬಾಡಿಗೆ ಬರಬಹುದು ಎಂಬುದು ನನ್ನ ಅಭಿಪ್ರಾಯ. ನಿಮ್ಮ ರೂ 20 ಲಕ್ಷ ಹೂಡಿಕೆಗೆ ರೂ 5,000 ತಿಂಗಳ ವರಮಾನ ಬಹಳ ಕಡಿಮೆ. ಮನೆ ಮೇಲೆ ಮನೆ ಕಟ್ಟಿರುವುದರಿಂದ, ಹಣದುಬ್ಬರದಿಂದ ನಿಮ್ಮ ಆಸ್ತಿ ಬೆಳೆಯಬಹುದು ಎಂದೂ ಹೇಳುವ ಹಾಗಿಲ್ಲ. ಜೊತೆಗೆ ಮನೆ ಕಟ್ಟಿ ಕೆಲವು ವರ್ಷಗಳಾದ ನಂತರ, ಅಂತಹ ಮನೆಗಳಿಗೆ ಬೇಡಿಕೆ ಕೂಡಾ ಇರಲಾರದು.

ನಿಮಗೆ ಸ್ಥಿರ ಆಸ್ತಿ ಮಾಡಲೇಬೇಕು ಎಂಬ ಇರಾದೆ ಇದ್ದರೆ, ಕುಂದಾಪುರದಲ್ಲಿ ಮುಖ್ಯವಾಗಿರುವ ಜಾಗ ನೋಡಿ ಅಲ್ಲಿ ನಿವೇಶನವೊಂದನ್ನು ಕೊಂಡುಕೊಳ್ಳುವುದು ಸೂಕ್ತ. ಇದರಿಂದ ನೀವು ಸ್ಥಿರ ಆಸ್ತಿ ಹೊಂದಿದಂತೆ  ಆಗುತ್ತದೆ. ಜೊತೆಗೆ ಇಂದಿನ ಹಣದುಬ್ಬರದ ಹಿನ್ನೆಲೆಯಲ್ಲಿ ಮುಂದೆ ನಿಮ್ಮ ನಿವೇಶನಕ್ಕೆ ಉತ್ತಮ ಬೆಲೆಯೂ ದೊರೆಯುತ್ತದೆ.

ನಿವೃತ್ತಿಯಿಂದ ಬಂದ ಹಣ ಭದ್ರವಾದ ಬ್ಯಾಂಕ್ ಒಂದರಲ್ಲಿ ಠೇವಣಿ ಇರಿಸುವುದು ಕೂಡಾ ಸೂಕ್ತವಾದ ವಿಚಾರ. ಈ ಆಯ್ಕೆ ನಿಮಗೆ ಸರಿಕಂಡಲ್ಲಿ, ತಿಂಗಳ ಖರ್ಚಿಗೆ ನಿಮಗೆ ಎಷ್ಟು ಹಣ ಬೇಕಾಗಬಹುದು  ಎಂಬುದನ್ನು ಗಮನಿಸಿ. ಅಷ್ಟು ಹಣ ಬಡ್ಡಿ ಬರುವಂತೆ ಎಫ್.ಡಿ. ಮಾಡಿ ಬ್ಯಾಂಕಿನಿಂದ ಬಡ್ಡಿ ಪಡೆಯುತ್ತಾ ಬನ್ನಿ. ಉಳಿದ ಹಣ, ಬ್ಯಾಂಕಿನಲ್ಲಿ ಮರುಹೂಡಿಕೆಯ ನಗದು ಸರ್ಟಿಫಿಕೇಟುಗಳಲ್ಲಿ 5 ವರ್ಷಗಳ ಅವಧಿಗೆ ಠೇವಣಿ ಇರಿಸಿರಿ. ನಿಮ್ಮ ಜೀವನದ ಸಂಜೆಯಲ್ಲಿ ನಿಮಗೆ ಆರ್ಥಿಕ ಭದ್ರತೆಯ ಅವಶ್ಯವಿದೆ.

ನೀವು ಸಾಲ ಪಡೆದು ಮನೆ ಮೇಲೆ ಮತ್ತೊಂದು ಮನೆ ಕಟ್ಟಿಸಬಹುದು. ನೀವು ನಿವೃತ್ತರಾದುದರಿಂದ ನಿಮಗೆ ನೇರವಾಗಿ ನಿಮ್ಮ ಹೆಸರಿಗೆ ಬ್ಯಾಂಕ್‌ನಿಂದ ಸಾಲ ದೊರೆಯುವುದಿಲ್ಲ, ಆದರೆ, ನಿಮ್ಮ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇರುವ ಮಗ ನಿಮ್ಮಡನೆ ಸಹಸಾಲಗಾರನಾಗಿ (co-borrower) ನೀವು ಬ್ಯಾಂಕಿನಿಂದ ಸಾಲ ಪಡೆಯಬಹುದು. ಸಾಲದ ಕಂತು ಮತ್ತು ಬಡ್ಡಿಗಳನ್ನು ನಿಮ್ಮ ಪುತ್ರನು ಕಾಲಕಾಲಕ್ಕೆ ತೆರಬೇಕಾಗುತ್ತದೆ.

ಮೇಲಿನ ಮೂರು ಆಯ್ಕೆಗಳನ್ನು ಪರಿಶೀಲಿಸಿ, ನಿಮಗೊಪ್ಪುವ ಆಯ್ಕೆಯನ್ನು ಆರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT