ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣದ ವಂಶವಾಹಿ ಪರೀಕ್ಷೆ ತಂತ್ರಜ್ಞಾನ!

Last Updated 10 ಮೇ 2016, 19:30 IST
ಅಕ್ಷರ ಗಾತ್ರ

ಬೇರೆ ಬೇರೆ ಸಂದರ್ಭಗಳಲ್ಲಿ ಮಾನವನ ಡಿಎನ್‍ಎ ಪರೀಕ್ಷೆ ಮಾಡಲಾಗುತ್ತಿದೆ.  ಭ್ರೂಣಕ್ಕೂ ವಂಶವಾಹಿ ಪರೀಕ್ಷೆ ನಡೆಸುವ ತಂತ್ರಜ್ಞಾನ ಈಗ ಜನಪ್ರಿಯವಾಗುತ್ತಿದೆ. ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್- ಸಾಮಾನ್ಯವಾಗಿ ಇದನ್ನೇ ಪ್ರನಾಳ ಶಿಶು ತಂತ್ರಜ್ಞಾನ ಎಂದು ಕರೆಯುತ್ತಾರೆ) ಚಿಕಿತ್ಸೆಗೂ ಮುನ್ನ ಭ್ರೂಣದ ವಂಶವಾಹಿ ಪರೀಕ್ಷೆ ನಡೆಸಿ, ಎಲ್ಲವೂ ಸರಿಯಿದೆ ಎಂದು ಖಾತ್ರಿಪಡಿಸಿಕೊಂಡ ನಂತರವೇ ಭ್ರೂಣವನ್ನು ಮಹಿಳೆಯ ಗರ್ಭಕೋಶದ ಒಳಗೆ ವರ್ಗಾವಣೆ ಮಾಡಲು ಸಹಕರಿಸುವ ನೂತನ ತಂತ್ರಜ್ಞಾನವಿದು.

ಭ್ರೂಣದ ವಂಶವಾಹಿ ಪರೀಕ್ಷೆ ತಂತ್ರಜ್ಞಾನ (Pre-Implantation Genetic Screening- PGS) ಎಂದೂ ಇದನ್ನು ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ಪಿಜಿಎಸ್ ಅಥವಾ ಭ್ರೂಣದ ವಂಶವಾಹಿ ಪರೀಕ್ಷೆಯೆಂದರೆ, ಐವಿಎಫ್ ಚಿಕಿತ್ಸೆಗೂ ಮುನ್ನ ಭ್ರೂಣದಲ್ಲಿ ವಂಶವಾಹಿ ಸಮಸ್ಯೆಗಳೇನಾದರೂ ಇವೆಯೇ ಎಂದು ಪರೀಕ್ಷಿಸುವುದು. ಈ ತಂತ್ರಜ್ಞಾನದಡಿ 3 ಅಥವಾ 5ನೇ ದಿನ ಭ್ರೂಣದ ಬಯಾಪ್ಸಿ (ದೇಹದ ಸಣ್ಣ ಕೋಶ) ತೆಗೆದುಕೊಂಡು ಅದರ ಎಲ್ಲಾ 24 ವರ್ಣತಂತುಗಳನ್ನೂ ಪರೀಕ್ಷಿಸಲಾಗುತ್ತದೆ.

ಅರ್ಥಾತ್, 22 ಲಿಂಗಸಂಬಂಧಿಯಲ್ಲದ ವರ್ಣತಂತುಗಳು ಹಾಗೂ 2 ಲಿಂಗಸಂಬಂಧಿ ವರ್ಣತಂತು  (X&Y) ಗಳನ್ನು ಸಮಗ್ರವಾಗಿ ಪರಿಶೀಲಿಸಿ, ಎಲ್ಲವೂ ಸರಿಯಿದೆ ಎಂದಾದರೆ ಆ ಭ್ರೂಣವನ್ನು ಮಹಿಳೆಯ ಗರ್ಭಕೋಶದೊಳಗೆ ಇರಿಸಲಾಗುತ್ತದೆ. ವಂಶವಾಹಿಗಳಲ್ಲಿ ಸಮಸ್ಯೆಯಿದ್ದರೆ ಉದಾಹರಣೆಗೆ, ಭ್ರೂಣದಲ್ಲಿನ ವರ್ಣತಂತುಗಳ ಸಂಖ್ಯೆಯಲ್ಲಿ ವ್ಯತ್ಯಾಸ, ನಕಲು ವರ್ಣತಂತು, ವರ್ಣತಂತುಗಳು ಸರಿಯಾದ ಕ್ರಮದಲ್ಲಿ ಜೋಡಣೆಯಾಗಿಲ್ಲದಿದ್ದರೆ ವರ್ಣತಂತುಗಳಲ್ಲಿ ವ್ಯತ್ಯಾಸವಿದ್ದರೆ ಆಗಲೂ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ.

ಪಿಜಿಎಸ್ ತಂತ್ರಜ್ಞಾನದಲ್ಲಿ ಭ್ರೂಣದ ವಂಶವಾಹಿಗಳನ್ನು ಸಮಗ್ರವಾಗಿ ಪರೀಕ್ಷಿಸಿ, ಎಲ್ಲವೂ ಕ್ರಮಬದ್ಧವಾಗಿದ್ದರೆ ಮಾತ್ರ ಐವಿಎಫ್ ಚಿಕಿತ್ಸೆ ನಡೆಸುವುದರಿಂದ ಈ ಸಮಸ್ಯೆಗಳಿಗೆ ಆಸ್ಪದ ಇರುವುದಿಲ್ಲ. ಈ ತಂತ್ರಜ್ಞಾನವು ಐವಿಎಫ್‌ನಲ್ಲಿ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವ ಹಾಗೂ  ಜನನ ಪ್ರಮಾಣ ಹೆಚ್ಚಿಸುವ ಮುಖ್ಯ ಉದ್ದೇಶ ಹೊಂದಿದೆ. ತಡವಾಗಿ ಮಗು ಪಡೆಯಲು ನಿರ್ಧರಿಸುವ ದಂಪತಿಗಳಿಗೆ ಆರೋಗ್ಯವಂತ ಮಗು ಜನಿಸುವ ಪ್ರಮಾಣ ಕಡಿಮೆಯಾಗುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ.ಇದಕ್ಕೂ, ವಯಸ್ಸಾದ ದಂಪತಿಗಳ ಭ್ರೂಣದಲ್ಲಿ ವಂಶವಾಹಿ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಕ್ಕೂ ಸಂಬಂಧವಿದೆ.

ಪಿಜಿಎಸ್ ತಂತ್ರಜ್ಞಾನ ಬಳಸದೆ ನೀಡುವ ಐವಿಎಫ್ ಚಿಕಿತ್ಸೆಯಲ್ಲಿ ಭ್ರೂಣಗಳನ್ನು ಕೇವಲ ಅವುಗಳ ಮೇಲ್ನೋಟದ ಗುಣಮಟ್ಟ ಹಾಗೂ ಮಾರ್ಫಾಲಜಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ಮಾಡಿದಾಗ ವಂಶವಾಹಿ ಸಮಸ್ಯೆಗಳಿರುವ ಭ್ರೂಣ ಹಾಗೂ ವಂಶವಾಹಿ ಸಮಸ್ಯೆಗಳಿಲ್ಲದ ಭ್ರೂಣವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅಂದರೆ ಸಹಜ ಭ್ರೂಣ ಯಾವುದು ಮತ್ತು ಅಸಹಜ ಭ್ರೂಣ ಯಾವುದು ಎಂಬುದು ಗೊತ್ತಾಗುವುದಿಲ್ಲ. ಆದರೆ, ಪಿಜಿಎಸ್ ಆಧಾರಿತ ಐವಿಎಫ್ ಚಿಕಿತ್ಸೆಯಲ್ಲಿ ಭ್ರೂಣಗಳನ್ನು ಅವುಗಳಲ್ಲಿರುವ ವಂಶವಾಹಿಗಳ ಗುಣಮಟ್ಟದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹೀಗೆ ಮಾಡಿದಾಗ ಆರೋಗ್ಯವಂತ ಮಗು ಜನಿಸುವ ಸಾಧ್ಯತೆ ಹೆಚ್ಚುತ್ತದೆ.

ಸುಧಾರಿತ ತಂತ್ರಜ್ಞಾನ- 
ಪಿಜಿಎಸ್ ಆಧಾರಿತ ಐವಿಎಫ್ ಚಿಕಿತ್ಸೆಯನ್ನು ಹೆಚ್ಚು ಕರಾರುವಾಕ್ಕಾಗಿ ಮಾಡುವ ಇನ್ನೊಂದು ತಂತ್ರಜ್ಞಾನ ಕೂಡ ಇದೆ. ಅದು ಮುಂದಿನ ಪೀಳಿಗೆಯ ಜೋಡಣೆ (Next-Generation Sequencing). ವಂಶವಾಹಿಗಳನ್ನು ಮರುಜೋಡಣೆ ಮಾಡುವ ತಂತ್ರಜ್ಞಾನವೀಗ ಸಾಕಷ್ಟು ಅಭಿವೃದ್ಧಿ ಹೊಂದಿರುವುದರಿಂದ, ಅದರ ನೆರವು ಪಡೆದು ಪಿಜಿಎಸ್ ಪರೀಕ್ಷೆ ವೇಳೆ ವಂಶವಾಹಿಗಳನ್ನು ಅತ್ಯಂತ ಕರಾರುವಾಕ್ಕಾಗಿ ಪರೀಕ್ಷಿಸುವ ವಿಧಾನವಿದು.

ಎಲ್ಲಾ 24 ವರ್ಣತಂತುಗಳನ್ನೂ ಹಿಂದೆಂದೂ ಸಾಧ್ಯವಿಲ್ಲದಿದ್ದಷ್ಟು ನಿಖರವಾಗಿ ಇದು ಅಧ್ಯಯನ ಮಾಡುತ್ತದೆ. ಜೆನೆಸಿಸ್ ಜೆನೆಟಿಕ್ ಸಂಸ್ಥೆಯು ಇಲ್ಯುಮಿನಾ ಎಂಬ ಇನ್ನೊಂದು ಸಂಸ್ಥೆಯ ಜೊತೆ ಸೇರಿ ಜಂಟಿಯಾಗಿ ಈ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಪಿಜಿಎಸ್ ಮೂಲಕ ಐವಿಎಫ್ ಚಿಕಿತ್ಸೆಗೆ ಒಳಗಾಗುವವರು ಇದರ ನೆರವನ್ನೂ ಪಡೆಯಬಹುದು.

‘ಸಮೀಕ್ಷೆಗಳ ಪ್ರಕಾರ ಶೇ 50ರಷ್ಟು ಗರ್ಭಧಾರಣೆಗಳಲ್ಲಿ ವಂಶವಾಹಿ ಸಮಸ್ಯೆಯಿರುತ್ತದೆ. ಅದರ ಪರಿಣಾಮವಾಗಿ ಮಗುವಿನ ಬೆಳವಣಿಗೆ ಸಹಜವಾಗಿ ಆಗುವುದಿಲ್ಲ. ಪಿಜಿಎಸ್ ಪರೀಕ್ಷೆಯಿಂದ ಲಾಭವಾಗುವುದೇ ಇಲ್ಲಿ. ಭ್ರೂಣದ ವಂಶವಾಹಿಯಲ್ಲಿ ಇರಬಹುದಾದ ತೊಂದರೆಯನ್ನು ಈ ಪರೀಕ್ಷೆಯಲ್ಲಿ ಪತ್ತೆಹಚ್ಚುವುದರಿಂದ ಅಸಹಜ ಭ್ರೂಣವನ್ನು ಗರ್ಭಕೋಶಕ್ಕೆ ವರ್ಗಾಯಿಸುವುದನ್ನು ತಪ್ಪಿಸಬಹುದು. ಗರ್ಭಪಾತಕ್ಕೆ ಪ್ರಮುಖ ಕಾರಣವೇ ವಂಶವಾಹಿಗಳಲ್ಲಿರುವ ತೊಂದರೆ.

ಹೀಗಾಗಿ ಪಿಜಿಎಸ್ ಮೂಲಕ ಮೊದಲೇ ವಂಶವಾಹಿಗಳ ಜೋಡಣೆ ಸರಿಯಾಗಿರುವ ಭ್ರೂಣವನ್ನೇ ಆಯ್ಕೆ ಮಾಡಿಕೊಂಡು ಗರ್ಭಕೋಶಕ್ಕೆ ವರ್ಗಾಯಿಸುವುದರಿಂದ ಗರ್ಭಪಾತದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಪ್ರತಿಯೊಂದು ಭ್ರೂಣದ ವಂಶವಾಹಿಗಳ ರಚನೆಯನ್ನೂ ತಿಳಿದುಕೊಳ್ಳುವುದರಿಂದ ಆರೋಗ್ಯವಂತ ಭ್ರೂಣವನ್ನೇ ಆಯ್ಕೆ ಮಾಡಿಕೊಂಡು ವರ್ಗಾವಣೆ ಮಾಡಲು ಸಾಧ್ಯ. ಆಗ ಐವಿಎಫ್ ಯಶಸ್ವಿಯಾಗುವ ಪ್ರಮಾಣ ಹೆಚ್ಚುತ್ತದೆ.  

ಮಾಹಿತಿಗೆ ಸಂಪರ್ಕಿಸಿ: 080-41312600 ಅಥವಾ 080-26673585.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT