ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಯ್ತಿ: ರಿಯಲ್ ಎಸ್ಟೇಟ್ ಚೇತರಿಕೆ

Last Updated 16 ಏಪ್ರಿಲ್ 2013, 11:18 IST
ಅಕ್ಷರ ಗಾತ್ರ

ಹೊಸ ಕಟ್ಟಡಗಳ ನಿರ್ಮಾಣ ಹೆಚ್ಚಿರುವುದರಿಂದ ಮತ್ತು ನಿರ್ಮಾಣಗಾರರು ದರದಲ್ಲಿ ಗಮನಾರ್ಹ ರಿಯಾಯ್ತಿ ಪ್ರಕಟಿಸಿರುವುದರಿಂದ ಭಾರತದ ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಜನವರಿ-ಮಾರ್ಚ್ ಅವಧಿಯಲ್ಲಿ ಚೇತರಿಕೆ ಕಂಡಿದೆ... ಇದು ಅಮೆರಿಕದ  ಪ್ರಮುಖ ಹಣಕಾಸು ಸಂಸ್ಥೆ `ಮೆರಿಲ್ ಲಿಂಚ್' ನಡೆಸಿದ ಸಮೀಕ್ಷೆಯ ಮುಖ್ಯಾಂಶ.

ಕಟ್ಟಡ ನಿರ್ಮಾಣಗಾರರು ಗ್ರಾಹಕರನ್ನು ಸೆಳೆಯಲು ಹೊಸ ಕಟ್ಟಡಗಳಿಗೆ ದರ ಕಡಿತ ಮಾಡಿದ್ದಾರೆ. ಅಷ್ಟೇ ಅಲ್ಲ, ಹಲವು ರಿಯಾಯ್ತಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಹೀಗಾಗಿ ಮಾರುಕಟ್ಟೆ ಚೇತರಿಕೆ ಕಂಡಿದೆ.

ಆದಾಗ್ಯೂ, ಪ್ರಮುಖ ರಿಯಲ್ ಎಸ್ಟೇಟ್ ಮಾರುಕಟ್ಟೆಯಾದ ಗುಡಗಾಂವ್‌ನಲ್ಲಿ ಬೇಡಿಕೆ ಅಲ್ಪ ಪ್ರಮಾಣದಲ್ಲಿ ಕುಸಿದಿದೆ. ಹೊಸ ಕಟ್ಟಡಗಳ ನಿರ್ಮಾಣ ತಗ್ಗಿರುವುದೇ ಇದಕ್ಕೆ ಪ್ರಮುಖ ಕಾರಣ. ಕೆಲವು ನಿರ್ಮಾಣಗಾರರು ಹಳೆಯ ಯೋಜನೆಗಳನ್ನು ಪೂರ್ಣಗೊಳಿಸುವ ತರಾತುರಿಯಲ್ಲಿದ್ದಾರೆ. ಜತೆಗೆ ನಿವೇಶನಗಳ ಬೆಲೆಯೂ ಈ ಮೊದಲು ಏರಿದ್ದುದು ಕೂಡ ಬೇಡಿಕೆ ತಗ್ಗುವಂತೆ ಮಾಡಿದೆ ಎನ್ನುತ್ತದೆ `ಮೆರಿಲ್ ಲಿಂಚ್'.

ಮುಂಬೈನಲ್ಲಿ ನಿವೇಶನ ಬೆಲೆ ಕಳೆದ 10 ವರ್ಷಗಳಲ್ಲಿ ವಾರ್ಷಿಕ ಸರಾಸರಿ ಶೇ 14ರಷ್ಟು ಏರಿಕೆ ಕಂಡಿದೆ. ಈ ರೀತಿಯ ಬೆಲೆ ಏರಿಕೆ ಇನ್ನೂ 2-3 ವರ್ಷ ಮುಂದುವರೆಯಬಹುದು. ನಗರ ವಾಸಿಗಳ ವರಮಾನದಲ್ಲೂ ಏರಿಕೆಯಾಗಿರುವುದರಿಂದ  ನಿವೇಶನ ಖರೀದಿಸುವ ಸಾಮರ್ಥ್ಯ ಹೆಚ್ಚಿದೆ. ಕೆಲವು ಕಟ್ಟಡ  ನಿರ್ಮಾಣಗಾರರು ಜನವರಿ-ಮಾರ್ಚ್ ಅವಧಿಯಲ್ಲಿ  ಸರಾಸರಿ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಕಟ್ಟಡ ಮಾರಾಟ ಮಾಡಿದ್ದಾರೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಅಧ್ಯಯನ ಸಂಸ್ಥೆಯೊಂದರ ವಿಶ್ಲೇಷಕ ಅಭಿಷೇಕ್ ಗುಪ್ತಾ.

ಮೆರಿಲ್ ಲಿಂಚ್ ಸಮೀಕ್ಷೆಯಂತೆ 2008ರಿಂದ ವಸತಿ ಕಟ್ಟಡಗಳ ಮಾರಾಟದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಯುಗಾದಿ ಸಂದರ್ಭದಲ್ಲಿ (ಏಪ್ರಿಲ್‌ನಲ್ಲಿ) ಇಲ್ಲಿ ಹೊಸ ಕಟ್ಟಡಗಳ ಖರೀದಿ ಹೆಚ್ಚುವುದು ಸಾಮಾನ್ಯ. ಕಳೆದ 10 ವರ್ಷಗಳಲ್ಲಿ ವಾರ್ಷಿಕ ಸರಾಸರಿ ಶೇ 8.5ರಂತೆ ಬೆಂಗಳೂರಿನಲ್ಲಿ ನಿವೇಶನಗಳ ಬೆಲೆ ಏರಿದೆ. ಉದ್ಯೋಗ ಭದ್ರತೆ, ವೇತನ ಏರಿಕೆ ಮತ್ತು ಹೂಡಿಕೆದಾರರು ಹೆಚ್ಚಿರುವುದು ಕೂಡ ಮಾರಕಟ್ಟೆ ಸ್ಥಿರತೆಗೆ ಕಾರಣ ಎನ್ನುವುದು ಗುಪ್ತಾ ಅವರ ವಿಶ್ಲೇಷಣೆ.

`ಗ್ರೇಟರ್ ನೊಯಿಡಾ'ದಲ್ಲಿ ನಿವೇಶನಗಳ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ. ಆದರೆ, ಇತರೆ ಮೆಟ್ರೊ ನಗರಗಳಿಗೆ ಹೋಲಿಸಿದರೆ ಮಾರಾಟವಾಗದೆ ಉಳಿದ ಕಟ್ಟಡಗಳ ಸಂಖ್ಯೆಯೇ ಇಲ್ಲಿ ಹೆಚ್ಚಿದೆ. ಇದರಿಂದ ಕಟ್ಟಡ ನಿರ್ಮಾಣಗಾರು ನಿಜಕ್ಕೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೊಸ ಯೋಜನೆಗಳಣ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದೂ ಈ ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT