ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಉದ್ಯೋಗ ಶೋಭನಾ ಸಾಧನೆ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹಿಳೆಯರು ಎಂದರೆ ಅಡುಗೆ, ಅಡುಗೆಮನೆಯೇ ಏಕೆ ನೆನಪಾಗಬೇಕು? ಮಹಿಳೆಯರು ವ್ಯಾಪಾರ – ವಹಿವಾಟು ಮಾಡಲು ಹೊರಟರೆಂದ ಕೂಡಲೆ  ಹಪ್ಪಳ, ಉಪ್ಪಿನಕಾಯಿ  ವಹಿವಾಟೇ ಏಕಾಗಬೇಕು? ಗಂಡಸರು ಮಾಡುವ ವ್ಯವಹಾರವನ್ನೇ ಮಾಡುವ  ಮಹಿಳೆಯರು ಇಲ್ಲವೆ? ಅದೂ ಅಂತರರಾಷ್ಟ್ರೀಯ ಮಟ್ಟದಲ್ಲಿ. ಅಂತಹ ಯಶಸ್ವಿ ಮಹಿಳಾ ಉದ್ಯಮಿಗಳ ಪೈಕಿ ಶೋಭನಾ ಪ್ರಕಾಶ್‌ ಅವರೂ ಒಬ್ಬರಾಗಿದ್ದಾರೆ.

ಬಿ.ಕಾಂ ಪದವೀಧರೆಯಾಗಿರುವ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ 1985ರಲ್ಲಿ ಹಣಕಾಸಿನ ವಿಷಯದಲ್ಲಿ ಎಂಬಿಎ  ಮುಗಿಸಿದರು. ತಂದೆ ‘ಮೈಯಾಗಿರಿ’ ಆಗಲೇ ಬೆಂಗಳೂರಿನಲ್ಲಿ ‘ರೆಸಿಸ್ಟರ್’ (ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕಿಟ್‌ನಲ್ಲಿ ವಿದ್ಯುತ್‌ ನಿಯಂತ್ರಿಸುವ ಉಪಕರಣ) ತಯಾರಿಕಾ ಘಟಕ  ಶುರುಮಾಡಿದ್ದರು. ತಂದೆ ಶುರುಮಾಡಿದ ಸಂಸ್ಥೆಯೇ ಶೋಭನಾರಿಗೆ ಮೊದಲ ಪಾಠಶಾಲೆ, ತಯಾರಿಕೆ ಮತ್ತು ಮಾರಾಟದ ಎಲ್ಲ ಒಳ ಹೊರಗನ್ನು ತಿಳಿದುಕೊಂಡು ಸಂಸ್ಥೆಯ ಮಾರುಕಟ್ಟೆ  ವಿಸ್ತರಿಸಿದರು. ಸಂಸ್ಥೆಯ ಶೇ 90ರಷ್ಟು  ತಯಾರಿಕೆಯನ್ನು ಐಟಿಐ  ಮತ್ತು ಬಿಇಎಲ್    ಸಂಸ್ಥೆಗಳಿಗೆ ಮಾರಾಟ ಮಾಡುತ್ತ ವಹಿವಾಟು ವಿಸ್ತರಿಸುತ್ತ ಹೊರಟರು. ಮುಂದೆ ಶೋಭನಾ ಅವರು ತಮ್ಮ ಸರಕುಗಳ ಮಾರುಕಟ್ಟೆಯನ್ನು ವಿಸ್ತರಿಸಿದಾಗ, ಸಂಸ್ಥೆಯಲ್ಲಿ ತಯಾರಿಸಿದ ರೆಸಿಸ್ಟರ್ ವಿದೇಶಕ್ಕೂ ಕಾಲಿಟ್ಟಿತು.  ಜಾಗತಿಕ ಖ್ಯಾತಿಯ  ಕಂಪೆನಿಗಳಾದ ಜಿಇ , ಬಾಷ್‌  , ಅಲ್‌ಸ್ಟಾಮ್‌,  ಶ್ನೇಡರ್  ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಶೋಭನಾ ಅವರ ಸಂಸ್ಥೆಯಲ್ಲಿ ತಯಾರಿಸಿದ ರೆಸಿಸ್ಟರುಗಳನ್ನು ಬಳಸಿಕೊಳ್ಳತೊಡಗಿದವು. ಈ ಸಂಸ್ಥೆಗಳಲ್ಲಿ ಶೋಭನಾ ಅವರ ತಯಾರಿಕೆಯ ರೆಸಿಸ್ಟರುಗಳನ್ನು  ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸದೆ ಖರೀದಿಸಲಾಗುತ್ತಿದೆ.  ಈ ಕಾರಣಕ್ಕೆ ಶೋಭನಾ ಅವರನ್ನು ದೋಷರಹಿತ ಉತ್ಪನ್ನ ಪೂರೈಕೆದಾರರು (Green Channel Vendor) ಎಂದು ಗುರುತಿಸಲಾಗಿದೆ. ಹೀಗೆ ತಯಾರಿಕೆಯ ಶೇ 65 ಉತ್ಪನ್ನಗಳು ಅಮೆರಿಕ, ಫಿಲಿಪ್ಪೀನ್ಸ್‌, ಚೀನಾ, ಕೊಲಂಬಿಯಾ  ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಉಳಿದ ಶೇ 35ರಷ್ಟು ತಯಾರಿಕೆಯನ್ನು  ದೇಶಿ  ವಿದ್ಯುತ್ ಕ್ಷೇತ್ರದಲ್ಲಿ  ಎಲ್‌ಇಡಿ, ಇನ್ವರ್ಟರ್ ಮತ್ತು ವಾಹನ  ತಯಾರಿಕಾ ಸಂಸ್ಥೆಗಳು ಖರೀದಿಸುತ್ತಿವೆ.

ವಿಶ್ವದ ಹಲವು ಸಂಸ್ಥೆಗಳು ತಮ್ಮನ್ನು  ದೋಷರಹಿತ ಉತ್ಪನ್ನ ಪೂರೈಕೆದಾರರು ಎಂದು ಗುರುತಿಸಿದ ಬಗ್ಗೆ ಮಾತನಾಡುತ್ತ ಶೋಭನಾ, ‘ಖರೀದಿಸುವವರ ಬೇಡಿಕೆಗೆ ತಕ್ಕಂತೆ, ಗುಣಮಟ್ಟ ಕಾಪಾಡಿಕೊಂಡು ತಯಾರಿಸಿ, ಸಮಯಕ್ಕೆ ಸರಿಯಾಗಿ ಸರಬರಾಜು ಮಾಡಿದರೆ ಗ್ರಾಹಕನ ವಿಶ್ವಾಸಗಳಿಸಿ, ಸುಸ್ಥಿರ ರೀತಿಯಲ್ಲಿ ವ್ಯವಹಾರ ಸಂಬಂಧವನ್ನು ಬೆಳೆಸಬಹುದು, ಎಷ್ಟೋ ಸಲ ಸರಕನ್ನು ವಿದೇಶದ ಗೋದಾಮಿನಲ್ಲಿಟ್ಟು, ಗ್ರಾಹಕ ಸಂಸ್ಥೆಯ ಬಾಗಿಲವರೆಗೂ ತಲುಪಿಸಿದ ನಿದರ್ಶನಗಳಿವೆ’ ಎಂದು ಹೇಳುತ್ತಾರೆ.

ಆರಂಭದಲ್ಲಿ ಶೋಭನಾ ಅವರು ತಮ್ಮ ತಂದೆ ಮತ್ತು ಅಣ್ಣನಿಗೆ ಸೇರಿದ ಸಹಭಾಗಿ ಸಂಸ್ಥೆಯಲ್ಲಿ   ಪಾಲುದಾರರಾಗಿದ್ದರು. ಮುಂದೆ ತಮ್ಮ ಮಕ್ಕಳನ್ನು ಸೇರಿಸಿಕೊಂಡು ‘ಆರ್.ಎಮ್.ಸಿ ಎಲೆಕ್ಟ್ರಾನಿಕ್ಸ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ’ಯನ್ನು   2011 ರಲ್ಲಿ ಹುಟ್ಟು ಹಾಕಿದರು. 2012 ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ವಂತ ಕಟ್ಟಡ  ನಿರ್ಮಿಸಿದರು. ಆರ್.ಎಮ್.ಸಿ ಸಂಸ್ಥೆಯ ತಯಾರಿಕಾ ಘಟಕದಲ್ಲಿ   50 ಜನ ಕೆಲಸ ಮಾಡುತ್ತಿದ್ದು, ಅದರಲ್ಲಿ ಶೇಕಡ 95 ರಷ್ಟು ಉದ್ಯೋಗಿಗಳು ಮಹಿಳೆಯರೇ ಆಗಿದ್ದಾರೆ. 

ಆರ್.ಎಮ್.ಸಿ ತಯಾರಿಕಾ ಘಟಕಕ್ಕೆ ಕಚ್ಚಾ ವಸ್ತುಗಳನ್ನು ಜಪಾನ್, ತೈವಾನ್, ಚೀನಾ, ಗುಜರಾತ್‌ನಿಂದ ತರಿಸಲಾಗುತ್ತಿದೆ. ಇನ್ನು ಕೆಲವು ಸರಕುಗಳು ಬೆಂಗಳೂರಿನಲ್ಲೇ ಸಿಗುತ್ತವೆ. ಸಂಸ್ಥೆಯು ಐಎಸ್‌ಒ 9001-2008 ಪ್ರಮಾಣ ಪತ್ರ ಹೊಂದಿದ್ದು, ಸದ್ಯದಕ್ಕೇ ಐಎಸ್‌ಒ 9001-2015  ಪ್ರಮಾಣ ಪತ್ರ ಸಿಗುವ ಭರವಸೆ ಹೊಂದಿದೆ. ಇಂತಹ ಪ್ರಮಾಣ ಪತ್ರ ಪಡೆಯುವ  ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಶೋಭನಾ ತಮ್ಮ ಸಂಸ್ಥೆಯಲ್ಲಿ ತಯಾರಿಸಿದ ರೆಸಿಸ್ಟರ್‌ಗಳನ್ನು ಭಾರತದ ಉನ್ನತ ಅಂತರರಾಷ್ಟ್ರೀಯ ವ್ಯಾಪಾರ ಮೇಳವಾದ ‘ಎಲೆಕ್ಟ್ರಾನಿಕಾ’ದಲ್ಲಿ ಪ್ರದರ್ಶನಕ್ಕಿಡುತ್ತಾರೆ.
ಶೋಭನಾ ತಮ್ಮ ಉದ್ದಿಮೆ ವಹಿವಾಟಿನಲ್ಲಿನ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ  1987ರಲ್ಲೇ ಅವೇಕ್ (AWAKE) ಸಂಸ್ಥೆ  ಸೇರಿದರು.

ಸಂಸ್ಥೆಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಹೊಸದಾಗಿ ಉದ್ಯೋಗ ಶುರುಮಾಡಲು ಹೊರಟ ಮಹಿಳೆಯರಿಗೆ ತರಬೇತಿಕೊಡುವ ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ,  ಶೋಭನಾ ಅವೇಕ್‌ನ ಉಪಾಧ್ಯಕ್ಷರಾಗಿದ್ದಾರೆ. ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್ ಅಸೊಸಿಯೇಷನ್   ’ಕ್ಲಿಕ್’ (CLICK) ನ ಮಾಜಿ ಅಧ್ಯಕ್ಷರೂ ಹೌದು,  ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)   ಲಘು ಉದ್ಯೋಗ್ ಭಾರತಿ ಮತ್ತು ಪೀಣ್ಯ ಕೈಗಾರಿಕಾ ಸಂಘದ  ಸದಸ್ಯರಾಗಿದ್ದಾರೆ.  
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಕೊಡುವ ‘ಪ್ರಿಯದರ್ಶಿನಿ’ ಪ್ರಶಸ್ತಿಯು ಇವರನ್ನು ಹುಡುಕಿಕೊಂಡು ಬಂದಿದೆ.

ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವ ಶೋಭನಾ,  ತಮ್ಮ ಸಂಸ್ಥೆಯ ಉತ್ಪನ್ನವಾದ ರೆಸಿಸ್ಟರನ ಮಾರುಕಟ್ಟೆಯನ್ನು ಭಾರತದಲ್ಲಿ ಇನ್ನೂ ಹೆಚ್ಚು ವಿಸ್ತರಿಸುವ ಗುರಿ ಹಾಕಿಕೊಂಡಿದ್ದಾರೆ. ತಮ್ಮ ಸಂಸ್ಥೆಯ ಉತ್ಪನ್ನವಲ್ಲದೆ ಇನ್ನೂ ಹಲವು ಬಗೆಯ  ರೆಸಿಸ್ಟರ್‌ಗಳನ್ನು ವಿತರಿಸುವ ಹೊಣೆಗಾರಿಕೆ ನಿರ್ವಹಿಸುವ ಆಲೋಚನೆಯೂ ತಮಗೆ ಇದೆ ಎಂದು  ಹೇಳಿಕೊಂಡಿದ್ದಾರೆ.

ಹಿಂಜರಿಕೆ ಬೇಡ

‘80-90ರ ದಶಕದಲ್ಲಿ ಸಾಲ ಪಡೆಯಲು ತುಂಬ ಶ್ರಮ ಪಡಬೇಕಾಗುತ್ತಿತ್ತು.  ಈಗ ಪರಿಸ್ಥಿತಿ ಬದಲಾಗಿದೆ, ಮಹಿಳೆಯರು ಸ್ವ ಉದ್ಯೋಗಕ್ಕೆ ಕರ್ನಾಟಕ  ರಾಜ್ಯ  ಕೇವಲ ಶೇ 4 ಬಡ್ಡಿದರದಲ್ಲಿ  ಸಾಲ ಕೊಡುತ್ತದೆ. ಸ್ವ ಉದ್ಯೋಗ ಶುರುಮಾಡಿ, ಉದ್ದಿಮೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ‘ಅವೇಕ್‌’ನಂತಹ ಸಂಸ್ಥೆಗಳೂ ಮಾರ್ಗದರ್ಶನ ನೀಡುತ್ತಿವೆ.  

‘ಬೇಕಾದ ಮಾಹಿತಿಗಳು ಅಂತರ್ಜಾಲದಲ್ಲಿ ಸುಲಭದಲ್ಲಿ ಸಿಗುತ್ತಿದೆ. ವಿಷಯ ಸಂಗ್ರಹಿಸಲು ಹೆಚ್ಚು ಕಷ್ಟ ಪಡಬೇಕಿಲ್ಲ.  ಮಹಿಳೆಯರು ವಿಷಯ ಅರಿಯದೇ ಲಂಚ ಕೊಟ್ಟು ಮೋಸ ಹೋಗಬಾರದು. ಉದ್ದಿಮೆ ಸ್ಥಾಪಿಸುವ  ವಿಷಯದಲ್ಲಿ  ಮಹಿಳೆಯರು   ಯಾವುದೇ ಕಾರಣಕ್ಕೂ ಹಿಂಜರಿಯಬಾರದು’ ಎಂದು ಶೋಭನಾ ಅವರು  ಸ್ವ ಉದ್ಯೋಗ ಮಾಡಲು ಹೊರಟ ಮಹಿಳೆಯರಿಗೆ   ಕಿವಿ ಮಾತು ಹೇಳುತ್ತಾರೆ.

‘ಮಹಿಳೆಯರು ಮನೆ, ಮಕ್ಕಳು, ಉದ್ಯೋಗದ ಮಧ್ಯೆ ಸಮತೋಲನ ಮಾಡಿಕೊಂಡು ಉದ್ದಿಮೆ ವಹಿವಾಟನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು  ಸವಾಲಿನ ಸಂಗತಿ.  ಮಹಿಳೆಯರು  ಉದ್ದಿಮೆ ವಹಿವಾಟಿನಲ್ಲಿ ಮುನ್ನಡೆಯುವುದರಿಂದ   ಬರೀ ಕುಟುಂಬದವರಿಗೆ ಅಷ್ಟೆ ಅಲ್ಲದೆ, ಇಡಿ ಸಮಾಜಕ್ಕೆ ಅದರ ಪ್ರಯೋಜನ  ದೊರೆಯುವುದು’ ಎಂದು ಹೇಳುತ್ತಾರೆ. 

ಮಹಿಳೆಯರು ಹೆಚ್ಚು ಹೆಚ್ಚು ಸ್ವ ಉದ್ಯೋಗ ಶುರುಮಾಡಿ, ಧೈರದಿಂದ ಮುನ್ನುಗ್ಗಲು ಯಾವ ತರಹದ ಸಹಾಯವನ್ನು ಅಪೇಕ್ಷಿಸುತ್ತೀರಿ ಎಂದಾಗ, ಶೋಭನಾ
‘ಮಹಿಳೆಯರ ಸ್ವ ಉದ್ಯೋಗಕ್ಕೆ   ಸಹಾಯಧನದ ಪ್ರಮಾಣ ಹೆಚ್ಚಬೇಕು.  ಸಾಲ ಮರುಪಾವತಿಗೆ ಅಧಿಕ ಕಾಲಾವಕಾಶ ನೀಡಬೇಕು. ದೊಡ್ಡ ಸಂಸ್ಥೆಗಳು ವಸ್ತುಗಳನ್ನು ಖರೀದಿಸುವಾಗ  ಕನಿಷ್ಠ ಶೇ 10ರಷ್ಟನ್ನು ಮಹಿಳೆಯರು ಸ್ವ ಉದ್ಯೋಗದಿಂದ ತಯಾರಿಸಿದ ವಸ್ತುಗಳನ್ನೇ ಕಡ್ಡಾಯವಾಗಿ ಖರೀದಿಸಲು ಕಾನೂನು ಜಾರಿಗೆ ತರಬೇಕು. ಇದು, ಮಹಿಳೆಯರು  ಸ್ವಂತ ಉದ್ಯೋಗ ಆರಂಭಿಸುವುದಕ್ಕೆ  ದೊಡ್ಡ ಕೊಡುಗೆಯಾಗಲಿದೆ.  ಇಂತಹ ಕಾನೂನು ವಿಶ್ವದ ಹಲವು ರಾಷ್ಟ್ರಗಳಲ್ಲಿ  ಈಗಾಗಲೇ ಜಾರಿಯಲ್ಲಿ ಇದೆ’ ಎಂದು ಅವರು ಹೇಳುತ್ತಾರೆ.

ಆರ್ಎಂಸಿ ಎಲೆಕ್ಟ್ರಾನಿಕ್ಸ್‌ನ ಮುಖ್ಯಸ್ಥೆ ಶೋಭನಾ ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT