ಚುನಾವಣೆ ವ್ಯಾಪಾರ ಅಲ್ಲ ನಮ್ಮ ಮತ ಮಾರಾಟಕ್ಕಿಲ್ಲ‌..

ಗುರುವಾರ , ಏಪ್ರಿಲ್ 25, 2019
22 °C

ಚುನಾವಣೆ ವ್ಯಾಪಾರ ಅಲ್ಲ ನಮ್ಮ ಮತ ಮಾರಾಟಕ್ಕಿಲ್ಲ‌..

Published:
Updated:
Prajavani

‘ಚುನಾವಣೆ ವ್ಯಾಪಾರ ಅಲ್ಲ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಘೋಷಣಾ ಫಲಕಗಳು ಇದೀಗ ಬೆಂಗಳೂರಿನ ಗಲ್ಲಿ-ಗಲ್ಲಿಗಳಲ್ಲಿ ಕಾಣತೊಡಗಿವೆ. ಬೀದಿ ಬದಿಯ ವರ್ತಕರು, ತರಕಾರಿ,  ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಆಟೊ ಚಾಲಕರು ‘ನಮ್ಮ ಮತ ಮಾರಾಟಕ್ಕಿಲ್ಲ’ ಎಂಬ ಸಂದೇಶ ರವಾನಿಸುತ್ತಿದ್ದಾರೆ. 

‘ಪ್ರಜಾಪ್ರಭುತ್ವದಲ್ಲಿ ಮತದಾರರೇ ಶ್ರೇಷ್ಠ. ಮತದಾರರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮತಗಳನ್ನು ಮಾರಿಕೊಳ್ಳಬೇಡಿ’ ಎಂಬ ಮನಮುಟ್ಟುವ ಸಂದೇಶಗಳೊಂದಿಗೆ ಸಂಘ–ಸಂಸ್ಥೆಗಳು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿವೆ. 

ಈ ನಡುವೆ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂಸ್ಥೆ ಮತ್ತು ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ಸಿಡಬ್ಲುಸಿ) ಸರ್ಕಾರೇತರ ಸಂಸ್ಥೆಗಳು ಮತದಾನದ ಜಾಗೃತಿ ಮೂಡಿಸಲು ಬೀದಿಗಿಳಿದಿವೆ. ಮತದಾರರ ಗುಂಪು ಸಭೆ, ಸಂವಾದಗಳ ಮೂಲಕ ಮತದಾನದ ಮಹತ್ವ ಸಾರುವ ಕೆಲಸ ಮಾಡುತ್ತಿವೆ.  

ಏಕೆ ಮತ ಹಾಕಬೇಕು?
ನಾವು ಏಕೆ ಮತ ಹಾಕಬೇಕು ಮತ್ತು ಮತ ಹಾಕಿದರೆ ಸಿಗುವ ಲಾಭಗಳು ಏನು? ನನ್ನ ಒಂದು ಮತಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆಯಾ? ರಾಜಕೀಯ ವ್ಯವಸ್ಥೆ ಬಗ್ಗೆ  ಜನರಿಗೆ ಇರುವ ಅಭಿಪ್ರಾಯಗಳು ಏನು? ಹೀಗೆ ಹಲವು ವಿಚಾರಗಳ ಕುರಿತು ಸಂವಾದ, ಚರ್ಚೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. 

ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಅಗತ್ಯ. ಪ್ರತಿಯೊಬ್ಬರೂ ತಪ್ಪದೆ ಮತಹಾಕಬೇಕು. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇದರಿಂದ ದೇಶ ಸದೃಢವಾಗಲಿದೆ ಎಂಬ ವಿಷಯವನ್ನು ಮತದಾರರಿಗೆ ಮನವರಿಕೆ ಮಾಡಲಾಗುತ್ತಿದೆ.

‘ನಾನು ಹಾಗೂ ನನ್ನ ಮತ ಮಾರಾಟಕ್ಕಿಲ್ಲ, ಮತ ಮಾರಾಟದ ವಸ್ತುವಲ್ಲ’ ಎಂಬ ಪ್ರತಿಜ್ಞಾವಿಧಿಯನ್ನು ಕೊನೆಯಲ್ಲಿ ಮತದಾರರಿಗೆ ಬೋಧಿಸಲಾಗುತ್ತದೆ. ಇದರ ಫಲವಾಗಿ ನಗರದ ಮನೆ, ಅಂಗಡಿಗಳ ಮುಂದೆ ‘ನನ್ನ ಮತ ಮಾರಾಟಕ್ಕಿಲ್ಲ’, ‘ಮತ ಮಾರಾಟದ ವಸ್ತುವಲ್ಲ’ ಎಂಬ ಫಲಕಗಳು ನೇತಾಡುತ್ತಿವೆ. ‘ನನ್ನ ಮತ ನಮ್ಮ ಹೆಮ್ಮೆ’ ಎನ್ನುವ ಬ್ಯಾಡ್ಜ್‌, ಸ್ಟಿಕ್ಕರ್‌ಗಳು ದ್ವಿಚಕ್ರ ವಾಹನ ಮತ್ತು ಆಟೊಗಳನ್ನು ಅಲಂಕರಿಸಿವೆ.

ಅಂಗಡಿಗಳ ಮುಂದೆ ನೇತು ಹಾಕಿದ ‘ನಾವು ತರಕಾರಿ ಮಾರುತ್ತೇವೆ. ಮತ ಮಾರುವುದಿಲ್ಲ’, ‘ಇಲ್ಲಿ ಕಬ್ಬಿನ ಹಾಲು ಮಾರಾಟಕ್ಕಿದೆ, ಮತ ಮಾರಾಟಕ್ಕಿಲ್ಲ’, ‘ದೇಹದ ಆರೋಗ್ಯಕ್ಕಾಗಿ ಹಣ್ಣುಗಳು, ದೇಶದ ಆರೋಗ್ಯಕ್ಕಾಗಿ ಮತ’ ಫಲಕಗಳು ಗಮನ ಸೆಳೆಯುತ್ತವೆ. 

ವ್ಯಾಪಾರಿಗಳು, ಗ್ರಾಹಕರು, ಆಟೊಚಾಲಕರು, ದ್ವಿಚಕ್ರ ವಾಹನ ಸವಾರರು, ಸರಕು ಸಾಗಾಟ ವಾಹನದ ಮಾಲೀಕರು, ಚಾಲಕರು, ಕೂಲಿ, ಕಾರ್ಮಿಕರಿಗೆ ಮತವನ್ನು ಮಾರಿಕೊಳ್ಳದಂತೆ ಮನವರಿಕೆ ಮಾಡಿಕೊಡಲಾಗಿದೆ. ವೈಯಕ್ತಿಕ ಆಸೆ, ಆಮಿಷಗಳನ್ನು ಬದಿಗಿಟ್ಟು ಸಂವಿಧಾನದ ರಕ್ಷಣೆ ಯಾರು ಮಾಡುತ್ತಾರೆ ಅವರಿಗೆ ಮತ ಹಾಕುವಂತೆ ಹೇಳಲಾಗುತ್ತಿದೆ. 

‘ಪಕ್ಷಗಳ ಪ್ರಣಾಳಿಕೆ ಬದಲು ಮತದಾರರೇ ಪ್ರಣಾಳಿಕೆ ಸಿದ್ಧ ಪಡಿಸಬೇಕಿದೆ. ಮತದಾರರ ಪ್ರಣಾಳಿಕೆಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ನಮ್ಮ ಮತವನ್ನು ನ್ಯಾಯಯುತವಾಗಿ ಚಲಾಯಿಸಿದಾಗ ಮಾತ್ರ ಭಾರತದ ರಾಜಕಾರಣದ ದಿಕ್ಕನ್ನು ಬದಲಿಸಬಹುದು’ ಎನ್ನುತ್ತಾರೆ ಸಿಡಬ್ಲುಸಿ ನಿರ್ದೇಶಕಿ ಕವಿತಾ ರತ್ನ.

**

ರಜೆ ಅಲ್ಲ, ಮಹತ್ವದ ಕರ್ತವ್ಯ ನಿಭಾಯಿಸುವ ದಿನ
ಮತದಾನದ ದಿನ ರಜೆಯ ದಿನ ಅಲ್ಲ. ಸಂವಿಧಾನದತ್ತ ಹಕ್ಕು ಚಲಾಯಿಸುವ ಮತ್ತು ಕರ್ತವ್ಯ ನಿಭಾಯಿಸುವ ಮಹತ್ವದ ದಿನ. ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ನಗರವಾಸಿಗಳು ಮತ್ತು ಯುವಕರು ವಾರಾಂತ್ಯದಲ್ಲಿ ರಜೆ ಹಾಕಿ ಮೋಜು ಮಾಡಲು ತೆರಳುವುದು ಇದಕ್ಕೆ ಕಾರಣ. ಈ ಬಾರಿಯೂ ಮತದಾನದ ಹಿಂದೆ ಮತ್ತು ಮುಂದೆ ಸರಣಿ ರಜೆಗಳು ಬಂದಿವೆ. ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ಮಹತ್ವದ ಅವಕಾಶವನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ತಪ್ಪದೇ  ಮತದಾನದಲ್ಲಿ ಭಾಗವಹಿಸಬೇಕು
– ಕವಿತಾ ರತ್ನ, ನಿರ್ದೇಶಕಿ, ಸಿಡಬ್ಲ್ಯುಸಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !