ಹೊಣೆ ಮರೆತರೆ ಕೇಡು ಯಾರಿಗೆ?

ಬುಧವಾರ, ಮೇ 22, 2019
27 °C

ಹೊಣೆ ಮರೆತರೆ ಕೇಡು ಯಾರಿಗೆ?

Published:
Updated:
Prajavani

ನಾವು ಬದುಕುತ್ತಿರುವ ಕಾಲಘಟ್ಟದಲ್ಲಿ ಧಾರ್ಮಿಕ ಕಟ್ಟರ್‌ವಾದಿಗಳು ಹಾಗೂ ಸೆಕ್ಯುಲರ್‌ ಮೂಲಭೂತವಾದಿಗಳು ಎನ್ನುವ ಎರಡು ವಿಪರೀತಗಳ ನಡುವೆ ಒಂದು ವರ್ಗ ಇದೆ. ಅವರು ಜನಸಾಮಾನ್ಯರು. ಅಸಂಖ್ಯ ಜಾತಿ, ‍ಪಂಗಡಗಳಿಗೆ ಸೇರಿದವರು ಅವರು. ಬಡವರಾದರೂ ಅವರು ಸ್ಥಿತಪ್ರಜ್ಞರು. ಕಷ್ಟಪಟ್ಟು ದುಡಿಯುವವರು, ಸಹಿಷ್ಣುಗಳು, ಉದಾರ ಹೃದಯಿಗಳು. ಎಂದೂ ಬತ್ತದ ಆಶಾವಾದವೊಂದು ಅವರಲ್ಲಿದೆ. ತಾವು ಚುನಾಯಿಸಿದ ಪಕ್ಷವು ಭರವಸೆಗಳನ್ನು ಈಡೇರಿಸಿಲ್ಲ ಎಂಬುದು ಅರ್ಥವಾದಾಗ, ಆಡಳಿತಾರೂಢರನ್ನು ನಿರ್ದಯವಾಗಿ ಅಧಿಕಾರದಿಂದ ಇಳಿಸುತ್ತಾರೆ. ಅವಕಾಶ ಸಿಗಬೇಕು ಎಂದು ತಾವು ಭಾವಿಸಿದ ಪಕ್ಷವನ್ನು ಚುನಾಯಿಸುತ್ತಾರೆ.

ಆದರೆ, ಇತ್ತೀಚೆಗೆ ಸುಶಿಕ್ಷಿತರು ಮತ ಚಲಾವಣೆ ಪ್ರಕ್ರಿಯೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಇವರಲ್ಲಿ ಬಹುಪಾಲು ಜನ ಸಿನಿಕರು ಕೂಡ ಹೌದು. ಇವರಲ್ಲಿ ಒಂದು ಪ್ರಶ್ನೆ ಇದೆ. ಎಲ್ಲ ಪಕ್ಷಗಳೂ ಭ್ರಷ್ಟಗೊಂಡಿರುವಾಗ, ಯಾವ ರಾಜಕಾರಣಿಯೂ ವಿಶ್ವಾಸ ಮೂಡಿಸುವಂತೆ ಇಲ್ಲದಿರುವಾಗ ಯಾರಿಗೆ ಮತ ನೀಡುವುದು?

ತೀರಾ ವಿಷಕಾರಿಯಾಗಿರುವ, ಮುಖ್ಯವಾಹಿನಿಯ ಮಾಧ್ಯಮಗಳೂ ವಾಸ್ತವವನ್ನು ತಿರುಚಿ ಒಂದಲ್ಲ ಒಂದು ಪಕ್ಷ–ಸಿದ್ಧಾಂತದ ತೆಕ್ಕೆಗೆ ಸಿಲುಕಿರುವ ಈ ಸಂದರ್ಭದಲ್ಲಿ ‘ನಿಮಗೆ ಏನನಿಸುತ್ತಿದೆ’ ಎಂದು ಗಾಂಧೀವಾದಿಯೂ ಮಾಜಿ ರಾಯಭಾರಿಯೂ ಆಗಿರುವವರೊಬ್ಬರನ್ನು ಯುವಕರು ಈಚೆಗೆ ಪ್ರಶ್ನಿಸಿದರು.

ಅವರು ಜನರಿಗೆ ನೀಡಿದ ಸಲಹೆ ಏನಿತ್ತು? ಅವರು ಹೀಗೆ ಉತ್ತರಿಸಿದರು: ‘ಒಂದು ಕಡೆ ದೈತ್ಯರಿದ್ದಾರೆ, ಇನ್ನೊಂದೆಡೆ ಹುಚ್ಚರಿದ್ದಾರೆ. ನಾವೇನು ಮಾಡಬಹುದು? ರಾಜಕಾರಣದಲ್ಲಿ ಕೆಲವು ವ್ಯಕ್ತಿಗಳು ಒಳ್ಳೆಯವರಿದ್ದರೂ, ಎಲ್ಲ ಪಕ್ಷಗಳೂ ಭ್ರಷ್ಟಗೊಂಡಿವೆ. ಒಂದು ಪಕ್ಷ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆದರೆ, ಇತರ ಪಕ್ಷಗಳು ಜಾತಿ ರಾಜಕೀಯ ನಡೆಸುತ್ತವೆ, ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿವೆ. ಹಾಗಾಗಿ ಆಯ್ಕೆ ಸುಲಭವಲ್ಲ. ಆದರೆ, ಜನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ಪ್ರತಿ ಮತದಾರನೂ ನಿರ್ಭಾವುಕವಾಗಿ, ವಸ್ತುನಿಷ್ಠವಾಗಿ ತನ್ನ ತೀರ್ಮಾನ ಹೇಳಬೇಕು. ಕಣದಲ್ಲಿರುವವರಲ್ಲಿ ಅತ್ಯುತ್ತಮ ವ್ಯಕ್ತಿಯನ್ನು ಆರಿಸಬೇಕು. ಸಭ್ಯ, ‍ಪ್ರಾಮಾಣಿಕ, ಭಿನ್ನತೆಗೆ ಗೌರವ ನೀಡುವವ ಜನರ ಮತ ಪಡೆಯಬೇಕು’.

ಆಗ ಅಲ್ಲಿದ್ದವರೊಬ್ಬರು, ‘ನಮಗೆ ಒಂದು ನಿರ್ದಿಷ್ಟ ಪಕ್ಷ ಇಷ್ಟವಿಲ್ಲ, ಅದರ ಅಭ್ಯರ್ಥಿ ಒಳ್ಳೆಯವ. ಹಾಗೆಯೇ, ಇರುವುದರಲ್ಲಿ ಒಳ್ಳೆಯದಾದ ಪಕ್ಷವೊಂದರ ಅಭ್ಯರ್ಥಿ ಒಬ್ಬ ಕ್ರಿಮಿನಲ್. ಆಗ ಏನು ಮಾಡುವುದು’ ಎಂದು ಕೇಳಿದರು. ಇದಕ್ಕೆ ಆ ಗಾಂಧೀವಾದಿ ನೀಡಿದ ಉತ್ತರಕ್ಕೆ ಚಪ್ಪಾಳೆಗಳು ಬಂದವು. ‘ಆಗ ನೀವು, ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ, ಪಕ್ಷದ ಮೌಲ್ಯಗಳು ಕ್ರಿಮಿನಲ್‌ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಆದರೆ, ಸಂವಿಧಾನವನ್ನು ತುಳಿಯುವ, ಎಲ್ಲರನ್ನೂ ಸಮಾನವಾಗಿ ಕಾಣದ ಪಕ್ಷದಲ್ಲಿ ಒಬ್ಬ ಪ್ರಾಮಾಣಿಕ ಇದ್ದರೂ, ಆತ ಅಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದು ಕಡಿಮೆ. ಎಡಪಂಥವಿರಲೀ, ಬಲಪಂಥವಿರಲೀ ಸರ್ವಾಧಿಕಾರಿ ಆಡಳಿತವನ್ನು ತಿರಸ್ಕರಿಸಬೇಕು’ ಎಂದರು.

ಭಾರತದ ರಾಜಕೀಯವು ಏಳು ದಶಕಗಳ ಅವಧಿಯಲ್ಲಿ ಕೇಂದ್ರದ ಮಟ್ಟದಲ್ಲಿ ಬಹುತೇಕ ಎರಡು ಪಕ್ಷಗಳ ವ್ಯವಸ್ಥೆಯಾಗುವತ್ತ ಹೊರಳಿದೆ. ಅದರಲ್ಲಿ ಒಂದು ಪಕ್ಷ ಬಿಜೆಪಿ. ಇದನ್ನು ಆರ್ಥಿಕ ಹಾಗೂ ಧಾರ್ಮಿಕ ವಿಚಾರಗಳಲ್ಲಿ ‘ಬಲಪಂಥೀಯ’ ಎಂದು ಕಾಣಲಾಗುತ್ತಿದೆ. ಇನ್ನೊಂದು ಪಕ್ಷ ಕಾಂಗ್ರೆಸ್. ಇದನ್ನು ಆರ್ಥಿಕ ವಿಚಾರಗಳಲ್ಲಿ ಎಡಪಂಥದತ್ತ ವಾಲಿಕೊಂಡಿರುವ, ದಲಿತ ಹಾಗೂ ಮುಸ್ಲಿಂ ಪರ ಇರುವ ಪಕ್ಷವಾಗಿ ಕಾಣಲಾಗುತ್ತಿದೆ. ಬಿಜೆಪಿಯ ನಾಯಕ ಹಿಂದೂ ರಾಷ್ಟ್ರೀಯವಾದಿ ಸರ್ವಾಧಿಕಾರಿ ಎಂಬ ಆರೋಪ ಇದ್ದರೆ, ಯುಪಿಎ–2ರ ಅವಧಿಯಲ್ಲಿ ಕಾಂಗ್ರೆಸ್, ಪಕ್ಷದ ಮಾತೆಯ ಮಾತು ಕೇಳುವ ಒಬ್ಬ ಕೈಗೊಂಬೆ ಪ್ರಧಾನಿಯನ್ನು ನೇಮಿಸಿದ್ದ ಆರೋಪ ಹೊಂದಿದೆ. ಇವೆರಡಲ್ಲದೆ, ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಹಲವು ಇವೆ.

ಈ ಎಲ್ಲ ಪಕ್ಷಗಳ ನಾಯಕರು ಪ್ರಾಂತೀಯ ದೃಷ್ಟಿಕೋನ ಹೊಂದಿರುವ, ಜಾತಿವಾದಿಗಳಾಗಿರುವ, ಪಕ್ಷ ಹಾಗೂ ದೇಶಕ್ಕಿಂತಲೂ ತಮ್ಮ ಕುಟುಂಬದ ಸದಸ್ಯರೇ ಹೆಚ್ಚು ಎಂಬ ಧೋರಣೆ ಇರುವವರು. ಇಂತಹ ಪಕ್ಷಗಳು ಬಹಳ ಸುಲಭವಾಗಿ ಯಾರ ಜೊತೆ ಬೇಕಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬಲ್ಲವು. ಪರಿಸ್ಥಿತಿ ಬಂದರೆ ಕಾಂಗ್ರೆಸ್ಸಿನ ಜೊತೆಗೂ ಬಿಜೆಪಿ ಜೊತೆಗೂ ಹೆಜ್ಜೆಹಾಕಬಲ್ಲವು. ಇವು ಕಾಲ ಸರಿದಂತೆ ತಮ್ಮ ರಾಜ್ಯಗಳಲ್ಲಿ ಹಿಡಿತ ಬಿಗಿಗೊಳಿಸಿಕೊಳ್ಳುತ್ತಿವೆ. ಇನ್ನುಳಿದಿರುವುದು, ಪಳೆಯುಳಿಕೆಯಂತೆ ಇರುವ ಎಡಪಕ್ಷಗಳು.

ಪಂಡಿತ್ ನೆಹರೂ ನಾಯಕತ್ವ ಇದ್ದಾಗ ಕಾಂಗ್ರೆಸ್ಸನ್ನು ನಿಜವಾದ ಸೆಕ್ಯುಲರ್ ಹಾಗೂ ಉದಾರವಾದಿ ಪಕ್ಷವನ್ನಾಗಿ ಕಾಣಲಾಗುತ್ತಿತ್ತು. ಸಮಾಜವಾದಿ ಒಲವು ಹೊಂದಿದ್ದ, ತುಳಿತಕ್ಕೆ ಒಳಗಾದವರ ಹಾಗೂ ಬಡಜನರ ಉದ್ಧಾರದ ಬಗ್ಗೆ ನೈಜ ಕಾಳಜಿ ಹೊಂದಿದ್ದ ಪಕ್ಷವನ್ನಾಗಿ ಅದನ್ನು ಕಾಣಲಾಗಿತ್ತು. ಕಾಂಗ್ರೆಸ್ ಪಕ್ಷವು ತನ್ನೆಲ್ಲ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದು ಕೆಲವರು ವಾದಿಸಬಹುದು– ಈ ಪಕ್ಷ ಎಡಪಂಥೀಯ ಆರ್ಥಿಕ ವಿಚಾರ ಒಪ್ಪಿಕೊಂಡು ಲೈಸೆನ್ಸ್‌ ರಾಜ್‌ ವ್ಯವಸ್ಥೆ ಜಾರಿಗೆ ತಂದಿತು. ಆದರೆ, ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ದಿಟ್ಟವಾದ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿತು. ನಂತರ, ಯುಪಿಎ–1ರ ಅವಧಿಯಲ್ಲೂ ಈ ಕೆಲಸ ಮಾಡಿತು. ವಾಜಪೇಯಿ ಆಡಳಿತ ಅವಧಿಯಲ್ಲಿ ಕೂಡ ಇಂತಹ ಕ್ರಮಗಳು ಆಗಿದ್ದವು. ಆದರೆ, ಎರಡೂ ಪಕ್ಷಗಳು ಕಾಲಾನುಕ್ರಮದಲ್ಲಿ ಸಮಾಜವಾದ ಮತ್ತು ಬಡವರ ಆರ್ಥಿಕ ಸ್ಥಿತಿ ಸುಧಾರಿಸುವ ಹೆಸರಿನಲ್ಲಿ ದೇಶದ ಆರ್ಥಿಕ ಸ್ಥಿರತೆಗೆ ಗಮನ ನೀಡಲಿಲ್ಲ. ಅಪಾರ ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ನೀಡಿದವು. ಅದರಲ್ಲಿ ಶೇಕಡ 80ರಷ್ಟು ಅರ್ಹರನ್ನು ತಲುಪಲಿಲ್ಲ.

ಈ ಪಕ್ಷಗಳ ಪ್ರಣಾಳಿಕೆಗಳು ಏನೇ ಹೇಳಿದರೂ, ಎರಡೂ ‘ಸಮಾಜವಾದಿ ಸ್ವಾರ್ಥಕೂಟ’ ರಚಿಸಿಕೊಂಡಿದ್ದವು. ಸಾಯುವ ಸ್ಥಿತಿಯಲ್ಲಿದ್ದ ಸರ್ಕಾರಿ ಉದ್ಯಮಗಳನ್ನು ಹಾಗೆಯೇ ಉಳಿಸಿಕೊಂಡಿದ್ದವು. ಮತ್ತೊಂದು ಕಡೆ, ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಹೆಸರಿನಲ್ಲಿ, ಈ ಪಕ್ಷಗಳು ಸರ್ಕಾರಿ ನೀತಿಗಳ ಮೇಲೆ ಪ್ರಭಾವ ಬೀರುವ, ತಮ್ಮ ಲಾಭಕ್ಕಾಗಿ ಸ್ಪರ್ಧೆಯನ್ನು ಹಿಸುಕುವ ‘ಬಂಡವಾಳಶಾಹಿ ಸ್ವಾರ್ಥಕೂಟ’ದ ನೆರವಿನಿಂದ ಪರ್ಯಾಯ ಅರ್ಥವ್ಯವಸ್ಥೆಯೊಂದನ್ನು ಸೃಷ್ಟಿಸಿದ್ದವು.

ಬಿಜೆಪಿಯ ವಿಭಜನಕಾರಿ, ಕೋಮುವಾದಿ ರಾಜಕಾರಣ ಇದ್ದಕ್ಕಿದ್ದಂತೆ ಮೇಲೆ ಬಂದಿದ್ದು ದೇಶದ ಬೇರುಗಳನ್ನು ಅಲುಗಾಡಿಸಿದೆ. ಆದರೆ ಜನ ಮತ ಚಲಾಯಿಸುವ ಬಗೆ ನೋಡಿ ಪಕ್ಷಗಳು ಕಲಿತುಕೊಳ್ಳುವುದಿದೆ. ಜನರಿಗೆ ಶಾಂತಿ, ಕೋಮುಸೌಹಾರ್ದ ಬೇಕಿದೆ. ಅವಿಲ್ಲದಿದ್ದರೆ ಆರ್ಥಿಕ ಸಮೃದ್ಧಿ ಕೂಡ ಇರುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ರಾಜಕೀಯ ಶೈಲಿಯನ್ನು ಬದಲಿಸಿಕೊಳ್ಳದಿದ್ದರೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಸಾಧ್ಯತೆ ಕಡಿಮೆ. ಸಿಎಜಿ, ಸಿಬಿಐನಂತಹ ಸಂಸ್ಥೆಗಳ, ನ್ಯಾಯಾಂಗದ ಸ್ವಾತಂತ್ರ್ಯ ಕಾಯ್ದುಕೊಳ್ಳಬೇಕು. ಮಾಧ್ಯಮಗಳ ಸ್ವಾತಂತ್ರ್ಯವನ್ನು ಸರ್ಕಾರದಿಂದ ಮಾತ್ರವಲ್ಲದೆ ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳಿಂದಲೂ ರಕ್ಷಿಸಿಕೊಳ್ಳಲು ಅವಕಾಶ ಆಗುವಂತೆ ಹೊಸ ಕಾನೂನು ರಚನೆಯಾಗಬೇಕು.

ಇಂತಹ ಸ್ಥಿತಿಯಲ್ಲಿ ನಿಜವಾಗಿಯೂ ಮಧ್ಯಮ ಪಂಥ ಅನುಸರಿಸಬಲ್ಲ ರಾಜಕೀಯ ಪಕ್ಷವೊಂದಕ್ಕೆ ಅವಕಾಶವಿದೆ. ಆ ಪಕ್ಷ ಆರ್ಥಿಕ ಉದಾರವಾದ ಮತ್ತು ಸಾಮಾಜಿಕ ಉದಾರವಾದವನ್ನು ಸಮತೋಲನದಿಂದ ಕೊಂಡೊಯ್ಯುವಂತೆ ಇರಬೇಕು. ಆದರೆ ಅಂಥದ್ದೊಂದು ಪಕ್ಷ ಬರುವವರೆಗೂ ಸಿನಿಕರಾಗಿ ಕುಳಿತುಕೊಳ್ಳುವಂತಿಲ್ಲ. ನಮ್ಮ ಹಕ್ಕು ಚಲಾಯಿಸಬೇಕು. ಮತ ಚಲಾವಣೆಯ ಹೊಣೆ ಮರೆತರೆ ನಮಗೇ ಕೇಡು.


ಕ್ಯಾಪ್ಟರ್ ಜಿ.ಆರ್. ಗೋಪಿನಾಥ್

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !