ಭಾನುವಾರ, ಜೂನ್ 26, 2022
28 °C

ವಿವಾದದ ಸುಳಿಯಲ್ಲಿ ಸಿಬಿಐ, ನೀವು ತಿಳಿದಿರಬೇಕಾದ ಅಂಶಗಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನಮ್ಮ ದೇಶದಲ್ಲಿ ಸಿಬಿಐ ಅಂದ್ರೆ ಎಲ್ಲರಿಗೂ ಒಂದು ರೀತಿಯ ಗೌರವ ಭಾವನೆ ಇದೆ. ಪೊಲೀಸ್ ತನಿಖೆಯಲ್ಲಿ ನ್ಯಾಯ ಸಿಗದಿದ್ದಾಗ, ಸಿಬಿಐ ತನಿಖೆಗೆ ವಹಿಸಿಕೊಡಿ ಎಂದು ಒತ್ತಾಯಿಸುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಇಂಥ ಸಿಬಿಐ ಇಂದು ಬಹುದೊಡ್ಡ ವಿವಾದದ ಸುಳಿಯಲ್ಲಿದೆ. ಸಿಬಿಐನ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿದೆ. ಸರ್ಕಾರದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 10 ದಿನಗಳೊಳಗೆ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಬೀದಿರಂಪ ಆಗಿರುವ ಸಿಬಿಐ ವಿವಾದವನ್ನು ಸರಳವಾಗಿ ವಿವರಿಸುವ ಪ್ರಯತ್ನ ಇಲ್ಲಿದೆ.

* ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸುಪ್ರೀಂಕೋರ್ಟ್ ಬಾಗಿಲು ಬಡಿದಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿಯು ಬುಧವಾರ ಮುಂಜಾನೆ ಸಿಬಿಐನ ಜಂಟಿ ನಿರ್ದೇಶಕರಾಗಿದ್ದ ಎಂ.ನಾಗೇಶ್ವರ್‌ ರಾವ್ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಿಸಿತು. ‘ಇದು ಮಧ್ಯಂತರ ಕ್ರಮ’ ಎಂಬ ಒಕ್ಕಣೆಯೊಂದಿಗೆ ‘ತಕ್ಷಣದಿಂದ ಈ ಆದೇಶ ಜಾರಿಯಾಗಲಿದೆ’ ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಮಂಗಳವಾರ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರ ಅಧಿಕಾರವನ್ನು ಮೊಟಕುಗೊಳಿಸಿ ಆದೇಶ ಹೊರಡಿಸಿದ ನಂತರ ಸರ್ಕಾರ ಈ ನಿರ್ದೇಶನ ನೀಡಿತು. ಇದನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋದರು. ಇಂದು (ಶುಕ್ರವಾರ) ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ.12ಕ್ಕೆ ವಿಚಾರಣೆಯನ್ನು ಕಾಯ್ದಿರಿಸಿ ಆದೇಶ ಹೊರಡಿಸಿತು. 10 ದಿನಗಳ ಒಳಗೆ ಸಿವಿಸಿ ತನಿಖೆ ಪೂರ್ಣಗಳಿಸಬೇಕು ಎಂದು ಸೂಚಿಸಿತು.

* ವರ್ಮಾ ವಿರುದ್ಧ ಜಾಗೃತ ಆಯೋಗ ಮತ್ತು ಸರ್ಕಾರ ಕ್ರಮ ಜರುಗಿಸಲು ಕಾರಣವೇನು?

ತಮ್ಮ ವಿರುದ್ಧ ಲಂಚದ ಆರೋಪ ಹೊರಿಸಿ ಸಿದ್ಧಪಡಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ದೆಹಲಿ ಹೈಕೋರ್ಟ್‌ಗೆ ಮಂಗಳವಾರ ಮನವಿ ಸಲ್ಲಿಸಿದ್ದರು. ಅ.29ರವರೆಗೆ ಯಾವುದೇ ಕ್ರಮ ಜರುಗಿಸದೇ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ಸಿಬಿಐಗೆ ಸೂಚಿಸಿತ್ತು. ಬುಧವಾರ ಜಾಗೃತ ಆಯೋಗ ಮತ್ತು ಸರ್ಕಾರ ವರ್ಮಾ ಅವರನ್ನೇ ಸಿಬಿಐನಿಂದ ಹೊರ ಕಳಿಸುವಲ್ಲಿ ಯಶಸ್ವಿಯಾದವು. ಲಭ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಸರ್ಕಾರ ಹೇಳಿತು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಬಿಐ ನಿರ್ದೇಶಕ ವರ್ಮಾ ₹2 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಒದಗಿಸುವಂತೆ ಸಿಬಿಐ ನಿರ್ದೇಶಕರಿಗೆ ಸಿವಿಸಿ ಮೂರು ಬಾರಿ ನೋಟಿಸ್ ಜಾರಿ ಮಾಡಿತ್ತು. ಸಿಬಿಐ ಮತ್ತಷ್ಟು ಕಾಲಾವಧಿ ಕೋರಿದ್ದರೂ ವರ್ಮಾ ಮಾತ್ರ ಅಸಹಕಾರ ಧೋರಣೆ ಮುಂದುವರಿಸಿದ್ದರು. ಇದರಿಂದ ಸಿವಿಸಿ ಕಾರ್ಯನಿರ್ವಹಣೆಗೆ ಧಕ್ಕೆಯೊದಗಿತ್ತು. ಹೀಗಾಗಿ ವರ್ಮಾ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಯಿತು ಎಂದು ಸರ್ಕಾರ ಹೇಳುತ್ತದೆ.

* ಸಿವಿಸಿ ನಿರ್ಧಾರ ಕಾನೂನುಬದ್ಧವೇ? 

ಸಿಬಿಐಗೆ ‘ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್ (ಡಿಎಸ್‌ಪಿಇ) 1946’ ಅಧಿಕಾರಗಳನ್ನು ನೀಡುತ್ತದೆ. ಈ ಕಾಯ್ದೆಯ 4 (1)ನೇ ಪರಿಚ್ಛೇದವು ಸಿವಿಸಿಗೆ ಕಾಯ್ದೆ ಜಾರಿಯ ಮೇಲುಸ್ತುವಾರಿ ಅಧಿಕಾರ ಇದೆ ಎನ್ನುವುದು ಸಿವಿಸಿ ಮಂಡಿಸುವ ವಾದ. ಸಿವಿಸಿ ಕಾಯ್ದೆಯ ಕೆಲ ಕಾಲಂಗಳೂ ಆಯೋಗಕ್ಕೆ ಸಿಬಿಐನ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ನೀಡುತ್ತವೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಸಿರಿಕೊಂಡು, ‘ಮಧ್ಯಂತರ ಕ್ರಮವನ್ನು ಬದಲಿಸುವ ಅಥವಾ ತೆರವುಗೊಳಿಸುವವರೆಗೆ ವರ್ಮಾ ಅವರು ಅಧಿಕಾರ ಚಲಾಯಿಸುವಂತಿಲ್ಲ’ ಎಂದು ಸಿವಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

* ಸಿವಿಸಿಗೆ ಇಂಥ ಶಿಫಾರಸ್ಸು ಮಾಡುವ ಅಧಿಕಾರವಿದೆಯೇ?

ಡಿಎಸ್‌ಪಿಇ ಕಾಯ್ದೆಯ 48ನೇ ಪರಿಚ್ಛೇದವು ಸಿಬಿಐ ನಿರ್ದೇಶಕರ ಕಾರ್ಯವೈಖರಿಗೆ ಆಧಾರವಾಗುವ ನಿಯಮಗಳನ್ನು ತಿಳಿಸುತ್ತದೆ.  ಸಿಬಿಐ ನಿರ್ದೇಶಕರನ್ನು ‘ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಅವಧಿಯವರೆಗೆ ವರ್ಗಾವಣೆ ಮಾಡುವಂತಿಲ್ಲ. ಒಂದು ವೇಳೆ ವರ್ಗಾವಣೆ ಮಾಡಬೇಕು ಎಂದಾದಲ್ಲಿ ನಿರ್ದೇಶಕರನ್ನು ನೇಮಿಸುವ ಸಮಿತಿಯ ಗಮನಕ್ಕೆ ತರಬೇಕು’ ಎಂದು ಹೇಳುತ್ತದೆ. ಈ ಸಮಿತಿಯಲ್ಲಿ ಪಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಇರುತ್ತಾರೆ. ಕಾಯ್ದೆಯ ಈ ನಿಯಮದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸಿವಿಸಿ ಮೌನವಾಗಿಯೇ ಇವೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಬಗ್ಗೆ ಸಿವಿಸಿ ಪ್ರಸ್ತಾಪಿಸುತ್ತದೆ. ಆದರೆ ವರ್ಮಾ ಅವರನ್ನು ಎಲ್ಲಿಯೂ ಈ ಕಾಯ್ದೆಯ ಅನ್ವಯ ಆರೋಪಿ ಎಂದು ಉಲ್ಲೇಖಿಸಿಲ್ಲ.

ವರ್ಮಾ ವಿರುದ್ಧ ಸಿವಿಸಿ ಕಾಯ್ದೆಯ 8 (1) (ಡಿ) ಪರಿಚ್ಛೇದದ ಅನ್ವಯ ಕ್ರಮ ಜರುಗಿಸಲಾಗಿದೆ. ಈ ಪರಿಚ್ಛೇದವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಅಪರಾಧ ಎಸಗಿದ ಯಾವುದೇ ವ್ಯಕ್ತಿಯ ವಿಚಾರಣೆ ಅಥವಾ ತನಿಖೆಯ ಅಧಿಕಾರವನ್ನು ಉಲ್ಲೇಖಿಸುತ್ತದೆ. 11ನೇ ಸೆಕ್ಷನ್ ಪ್ರಕಾರ ಸಿವಿಸಿಗೆ ಸಿಟಿ ಸಿವಿಲ್ ಕೋರ್ಟ್‌ಗೆ ಇರುವಷ್ಟು ಅಧಿಕಾರ ಇದೆ ಎಂದು ಹೇಳುತ್ತದೆ. ಆದರೆ ಸಿವಿಸಿ ಉಲ್ಲೇಖಿಸುವ ಈ ಕಾಯ್ದೆ ಮತ್ತು ಪರಿಚ್ಛೇದಗಳು ಸಿಬಿಐ ನಿರ್ದೇಶಕರ ಅಧಿಕಾರ ಕಿತ್ತುಕೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ಸಿವಿಸಿಗೆ ಇದೆ ಎಂದು ಎಲ್ಲಿಯೂ ಹೇಳುವುದಿಲ್ಲ.

* ಸಿವಿಸಿ ನಿರ್ದೇಶನವನ್ನು ಜಾರಿ ಮಾಡುವ, ಸಿಬಿಐ ನಿರ್ದೇಶಕರನ್ನು ರಜೆಯ ಮೇಲೆ ಕಳಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ?  

ಈ ಪ್ರಶ್ನೆಗೆ ಸುಪ್ರೀಂಕೋರ್ಟ್‌ ವಿಚಾರಣೆ ಸಂದರ್ಭ ಉತ್ತರ ಸಿಗಲಿದೆ. 1997ರ ವಿನೀತ್ ನಾರಾಯಣ್ ಪ್ರಕರಣದ ವಿಚಾರಣೆ ವೇಳೆ ಸಿಬಿಐ ನಿರ್ದೇಶಕರ ಅಧಿಕಾರಚ್ಯುತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿತ್ತು. ನಿರ್ದೇಶಕರ ಅಧಿಕಾರ ಅವಧಿ ಕನಿಷ್ಠ ಎರಡು ವರ್ಷ ಆಗಿರುತ್ತದೆ. ಅವಧಿಪೂರ್ವ ವರ್ಗಾವಣೆಗೆ ಆಯ್ಕೆ ಸಮಿತಿಯ ಅನುಮೋದನೆ ಅಗತ್ಯ ಎಂದು ಹೇಳಿತ್ತು. ಆಯ್ಕೆ ಸಮಿತಿಯ ಸಮ್ಮತಿಯಿಲ್ಲದೆ ಸಿಬಿಐ ನಿರ್ದೇಶಕರನ್ನು ವರ್ಗಾಯಿಸುವಂತಿಲ್ಲ ಎಂದು ಮನಮೋಹನ್‌ಸಿಂಗ್ ಸರ್ಕಾರ ಜುಲೈ 2013ರಲ್ಲಿ ಹೇಳಿತ್ತು. ರಾಷ್ಟ್ರಪತಿಗೆ ಮಾತ್ರ ಸಿಬಿಐ ನಿರ್ದೇಶಕರನ್ನು ತೆಗೆದುಹಾಕುವ ಅಥವಾ ಅಮಾನತು ಮಾಡುವ ಅಧಿಕಾರ ಇದೆ. ನಿರ್ದೇಶಕರ ಅಸಾಮರ್ಥ್ಯ ಅಥವಾ ತಪ್ಪು ನಡವಳಿಕೆ ಕುರಿತು ಸಿವಿಸಿ ಸಲ್ಲಿಸಿದ ವರದಿಯನ್ನು ಆಧರಿಸಿ ರಾಷ್ಟ್ರಪತಿ ಈ ನಿರ್ಧಾರ ತೆಗೆದುಕೊಳ್ಳುತ್ತಾರೆ. ವರ್ಮಾ ಪ್ರಕರಣದಲ್ಲಿ ಸರ್ಕಾರವು ಆಯ್ಕೆ ಸಮಿತಿಯ ಅನುಮತಿ ಪಡೆದುಕೊಂಡಿಲ್ಲ. ಸಿವಿವಿ ಸಹ ವರ್ಮಾ ಅವರ ತಪ್ಪು ನಡವಳಿಕೆ ಅಥವಾ ಅಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿಲ್ಲ.

* ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ವರ್ಮಾ ಹೇಳಿರುವುದೇನು?

ಪ್ರಭಾವಿಗಳ ವಿರುದ್ಧ ತನಿಖೆ ಆರಂಭಿಸಿದ ಹಿನ್ನೆಲೆಯಲ್ಲಿ ಮತ್ತು ಸರ್ಕಾರದ ಇಚ್ಛೆಯಂತೆ ಕೆಲಸ ಮಾಡದ ಹಿನ್ನೆಲೆಯಲ್ಲಿ ನನ್ನನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ. ಸಿಬಿಐ ನಿರ್ದೇಶಕರಿಗೆ ಕನಿಷ್ಠ ಎರಡು ವರ್ಷಗಳ ಅಧಿಕಾರ ಅವಧಿ ಇದೆ ಎನ್ನುವ ದೆಹಲಿ ಪೊಲೀಸ್ ಕಾಯ್ದೆಯ 4ನೇ ಬಿ ಸೆಕ್ಷನ್ ಅನ್ವಯ ಅವರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಸಿಬಿಐ ನಿರ್ದೇಶಕರ ವಿರುದ್ಧ ಯಾವುದೇ ಕ್ರಮ ಜರುಗಿಸುವ ಮೊದಲು ಆಯ್ಕೆ ಸಮಿತಿ ಅನುಮೋದನೆ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಉಲ್ಲಂಘಿಸಲಾಗಿದೆ ಎಂದು ವರ್ಮಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.