ಟೀ ಮಾಡಿ ₹50 ಗಳಿಸಿದ ಸಿಂಚನ್

7

ಟೀ ಮಾಡಿ ₹50 ಗಳಿಸಿದ ಸಿಂಚನ್

Published:
Updated:
Prajavani

ನನಗೆ ತಿನ್ನುವುದಕ್ಕಿಂತ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ. ತಿನ್ನುವುದೆಂದರೂ ಇಷ್ಟ. ಹಾಗಂತ ಹೆಚ್ಚೇನೂ ತಿನ್ನಲ್ಲ. ಅಡುಗೆ ಮಾಡಿ ಉಣಬಡಿಸುವುದರಿಂದ ತಿಂದವರ ಮನ ಕದಿಯಬಹುದು. ಅವರ ಮೆಚ್ಚುಗೆಯಿಂದ ಮತ್ತಷ್ಟು ಚೆನ್ನಾಗಿ ಅಡುಗೆ ಮಾಡಬಹುದು ಎಂಬುದು ನನ್ನ ಅಭಿಪ್ರಾಯ. ಓದಿದ್ದು ಸಹ ಫುಡ್ ನ್ಯೂಟ್ರಿಷಿಯನ್ ಕೋರ್ಸ್.

ನಾನು ಫ್ಯೂರ್ ಸಸ್ಯಹಾರಿ. ಕರ್ನಾಟಕ ಶೈಲಿಯ ಎಲ್ಲ ಆಹಾರವೂ ನನಗೆ ಇಷ್ಟ. ಮಂಗಳೂರು, ಉಡುಪಿ, ಹಾಸನ ಹಾಗೂ ಧಾರವಾಡ ಕಡೆಯ ಆಹಾರವೆಂದರೆ ಬಲುಪ್ರೀತಿ. ಹಾಡಾಡುತ್ತಾ ಆರಾಮವಾಗಿ ಸೇರುತ್ತೆ. ಉತ್ತರ ಭಾರತ ಹಾಗೂ ಚೈನೀಸ್ ಶೈಲಿಯ ಆಹಾರವೆಂದರೆ ಅಷ್ಟಕ್ಕಷ್ಟೇ.

ನಾನು ಬಹುತೇಕ ಅಡುಗೆ ಕಲಿತದ್ದು ಅಮ್ಮ ತೃಪ್ತಿ ದೀಕ್ಷಿತ್ ಹಾಗೂ ಅಜ್ಜಿ ನಳಿನಿ ದೀಕ್ಷಿತ್ ಅವರಿಂದ. ಅಮ್ಮ ಹಾಗೂ ಅಜ್ಜಿ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅಮ್ಮ ಮಾಡುವ ‘ಹೆಸರು ಕಾಳಿನ ಕಟ್ಟು ಸಾರು’ ರುಚಿಕರವಾಗಿ ಮಾಡುತ್ತಾರೆ. ಅದೆಂದರೆ ನನಗೆ ಇಷ್ಟ. ಅಜ್ಜಿ ಮಾಡುವ ಮಂಡಿಗೆ (ಸಕ್ಕರೆ ಹೋಳಿಗೆ) ಧಾರವಾಡ ಪೇಡ, ಬೇಸನ್ ಉಂಡೆ ಇಷ್ಟ.

ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ನನಗೆ ಅಡುಗೆ ಕಲಿಯಲೇ ಬೇಕು ಎಂಬ ಪ್ರಸಂಗ ಎದುರಾಗಲಿಲ್ಲ. ಅಪ್ಪ ಹಾಗೂ ಸೋದರ ಮಾವನಿಂದಲೂ ಅಡುಗೆ ಮಾಡುವುದನ್ನು ಕಲಿತಿದ್ದೇನೆ. ನಾಲ್ಕು ವರ್ಷದವಳಿದ್ದಾಗ ನಾನು ಮೊದಲ ಬಾರಿಗೆ ಟೀ ಮಾಡಿದ್ದೆ. ಸೋದರಮಾವ ನನ್ನ ನೆರವಿಗಿದ್ದರು.

ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೆ. ನಾನು ಮಾಡಿದ ಟೀ ಸವಿದ ಮನೆಯ ಐವರು ತಲಾ ₹ 10 ರೂಪಾಯಿಯಂತೆ ₹ 50 ರೂಪಾಯಿ ನೀಡಿದ್ದರು. ಅದು ನನಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್ಸ್. 8ನೇ ವರ್ಷದವಳಿದ್ದಾಗ ತರಕಾರಿ ಕೂಟು ಮಾಡಿದ್ದೆ. ಸಹಜವಾಗಿ ಆ ವಯಸ್ಸಿನಲ್ಲಿ ಯಾರೂ ಅಡುಗೆ ಮಾಡುವುದಿಲ್ಲ. ತರಕಾರಿ ಕೂಟು ಸವಿದ ಮನೆಯವರು, ಇನ್ನೂ ಚೆನ್ನಾಗಿ ಮಾಡು ಎಂದು ಪ್ರೋತ್ಸಾಹಿಸಿದ್ದರು.

ನಾನು ಕರ್ನಾಟಕ ಶೈಲಿಯ ಬಹುತೇಕ ಅಡುಗೆ ಮಾಡುತ್ತೇನೆ. ಜೊತೆಗೆ ಇಟಾಲಿಯನ್ ಶೈಲಿಯ ಖಾದ್ಯಗಳನ್ನೂ ಮಾಡುವೆ. ಪತಿ ಅಶಿತ್‌ಗೆ ಈಚೆಗಷ್ಟೇ ಗೋಬಿ ಮಂಚೂರಿ ಮಾಡಿಕೊಟ್ಟಿದ್ದೆ. ಸಹಜವಾಗಿ ನನ್ನ ಮೇಲಿನ ಪ್ರೀತಿಗಾಗಿ ‘ಈ ಮೊದಲು ಇಷ್ಟೊಂದು ರುಚಿಕರವಾದ ಗೋಬಿ ಮಂಚೂರಿ ತಿಂದಿರಲಿಲ್ಲ’ ಎಂದು ಹೊಗಳಿದ್ದರು.

ನಗರದ ಫುಡ್ ಸ್ಟ್ರೀಟ್ (ಆಹಾರ ಬೀದಿ) ನೆಚ್ಚಿನ ತಾಣ. ರಾಜಾಜಿನಗರದ ಪ್ರಭು ಸ್ವೀಟ್ಸ್‌ (ಈಗ ಮಹಾಲಕ್ಷ್ಮೀಪುರಕ್ಕೆ ಸ್ಥಳಾಂತರಗೊಂಡಿದೆ) ಮಳಿಗೆಯಲ್ಲಿ ಸಿಗುವ ಸಮೋಸಾ ಭಾರಿ ಇಷ್ಟ. ಈಗಲೂ ಸ್ನೇಹಿತರೆಲ್ಲರೂ ಅಲ್ಲಿಗೆ ಹೋಗಿ ಆಗಾಗ ಸಮೋಸಾ ಸವಿಯುವುದುಂಟು. ಅದರೊಟ್ಟಿಗೆ ಮಲ್ಲೇಶ್ವರದ ಸಾಯಿಶಕ್ತಿ ಹೋಟೆಲ್ ನೆಚ್ಚಿನ ತಾಣ.

ಸಿಂಚನ ಹೇಳಿದ ರೆಸಿಪಿ

ಬೇಕಾಗುವ ಸಾಮಗ್ರಿ: ಹೂ ಕೋಸು, 5 ಚಮಚ ಅಕ್ಕಿ ಹಿಟ್ಟು, 3 ರಿಂದ 5 ಚಮಚ ಕಾರ್ನ್ ಪೌಡರ್, ಅರ್ಧ ಚಮಚ ಉಪ್ಪು, ಸ್ವಲ್ಪ ಅಡುಗೆ ಅರಿಶಿಣ, ಅರ್ಧ ಚಮಚ ಖಾರದ ಪುಡಿ, ಎಣ್ಣೆ.

ಮಸಾಲೆಗಾಗಿ 2 ಚಮಚ ಎಣ್ಣೆ, 1 ದೊಡ್ಡ ಈರುಳ್ಳಿ, 1 ಕ್ಯಾಪ್ಸಿಕಂ, 4 ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, 3 ಚಮಚ ಟೊಮೆಟೊ ಸಾಸ್, 1 ಚಮಚ ಸೋಯಾ ಸಾಸ್, 2 ಚಮಚ ಗ್ರೀನ್ ಚಿಲ್ಲಿ ಸಾಸ್, ಅರ್ಧ ಚಮಚ ಉಪ್ಪು.

ಮಾಡುವ ವಿಧಾನ: ಸಣ್ಣ ಸಣ್ಣದಾಗಿ ಕತ್ತರಿಸಿದ ಹೂ ಕೋಸನ್ನು ನೀರಿನಲ್ಲಿ 20 ನಿಮಿಷ ನೆನೆಸಿ 2–3 ಬಾರಿ ಚೆನ್ನಾಗಿ ಶುಚಿಗೊಳಿಸಿ. ಅಕ್ಕಿ ಹಿಟ್ಟು, ಕಾರ್ನ್ ಪೌಡರ್, ಉಪ್ಪು, ಅರಿಶಿಣದ ಪುಡಿ, ಖಾರದ ಪುಡಿ ಮಿಶ್ರಣ ಮಾಡಿ. ಅದು ಗಟ್ಟಿ ಎನಿಸಿದರೆ ಸ್ವಲ್ಪ ನೀರು ಹಾಕಿ ಹೂ ಕೋಸಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಬಾಣಲೆಗೆಯಲ್ಲಿ ಎಣ್ಣೆ ಹಾಕಿ ಮಿಶ್ರಣ ಮಾಡಿದ ಗೋಬಿಯನ್ನು ಕರಿಯಬೇಕು.

ಬಾಣಲೆಗೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸೀಳಿದ ಹಸಿ ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿಯ ಎಸಳು ಹಾಕಿ ಚೆನ್ನಾಗಿ ಹುರಿಯಿರಿ. ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಅದಕ್ಕೆ ಬೇಕಿದ್ದಷ್ಟು ಉಪ್ಪು ಬೆರೆಸಿ. ಸಾಸ್‌ಗಳು ಹಾಗೂ ಗೋಬಿ ಹಾಕಿ ಚೆನ್ನಾಗಿ ಹುರಿದರೆ ಗೋಬಿ ಮಂಚೂರಿ ಸಿದ್ಧ. ಅದನ್ನು ತಟ್ಟೆಗೆ ಹಾಕಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !