‘ಅಮ್ಮನಿಗಿಂತ ಚೆನ್ನಾಗಿ ಅಡುಗೆ ಮಾಡುವೆ’

7

‘ಅಮ್ಮನಿಗಿಂತ ಚೆನ್ನಾಗಿ ಅಡುಗೆ ಮಾಡುವೆ’

Published:
Updated:

ದಿವ್ಯಾಗೆ ಚಿಕ್ಕಂದಿನಿಂದಲೂ ಅಡುಗೆ ಮಾಡುವುದೆಂದರೆ ಖುಷಿಯ ಕೆಲಸವಂತೆ. ಚಿಕ್ಕವರಿದ್ದಾಗ ಮೊದಲು ಟ್ರೈ ಮಾಡಿದ್ದೇ ಚಿಕನ್‌ ಕರಿ ಅಂತೆ. ಆದರೆ, ಚಿಕನ್‌ ಕರಿ ಮಾಡಲು ಹೋಗಿ ರಸಂ ಮಾಡಿದ ಕತೆ ಅವರ ಮಾತಿನಲ್ಲೇ ಕೇಳಿ.

ಚಿಕ್ಕವಳಿದ್ದಾಗ ಒಂದಿನ ಮನೆಯಲ್ಲಿ ಅಮ್ಮ, ಅಪ್ಪ ಇಬ್ಬರೂ ಇರಲಿಲ್ಲ. ನಾನು, ಅಕ್ಕ ಇಬ್ಬರೇ ಇದ್ದೆವು. ಆ ದಿನವೇ ಮನೆಗೆ ನೆಂಟರು ಬಂದರು. ನಾನು ಮತ್ತು ಅಕ್ಕ ಇಬ್ಬರೂ ಚಿಕನ್‌ ಸಾರು ಮಾಡೋಣ ಎಂದು ನಿರ್ಧರಿಸಿ, ನಾವೇ ಚಿಕನ್‌ ಅಂಗಡಿಗೆ ಹೋಗಿ ಒಂದು ಕೆ.ಜಿ ಮಾಂಸ ತಂದು ಅಡುಗೆ ಶುರು ಮಾಡಿದೆವು. ಅಮ್ಮ ದಿನಾ ಅಡುಗೆ ಮಾಡುವುದನ್ನು ನೋಡಿದ್ದೆವಲ್ಲ, ಹಾಗೇ ಮಾಡಿದರಾಯಿತು ಎಂದು ಮಸಾಲೆ ಸಿದ್ಧಪಡಿಸಿ ಚಿಕನ್‌ ಸಾರು ಮಾಡಲು ಶುರು ಮಾಡಿದೆವು. ಚೆನ್ನಾಗಿ ಸಾಸಿವೆ ಒಗ್ಗರಣೆ ಎಲ್ಲ ಹಾಕಿ ಸಾರು ಮಾಡಿದೆವು. ಅದು ಥೇಟ್‌ ರಸಂ ತರ ಆಗಿತ್ತು. ನಂತರ ಚಿಕನ್‌ ಕರಿ ಮಾಡುವ ವಿಧಾನವನ್ನು ಅಮ್ಮ ಹೇಳಿಕೊಟ್ಟರು.

ಆನಂತರ ಅಂತಹ ಎಡವಟ್ಟುಗಳು ಆಗಿಲ್ಲ. ಚಿಕನ್‌ ಬಿರಿಯಾನಿ ಚೆನ್ನಾಗಿ ಮಾಡುತ್ತೇನೆ. ನೀರು ದೋಸೆ, ಚಿಕನ್‌ ಸುಕ್ಕ ಗೊತ್ತು. ನಿಜ ಹೇಳಬೇಕೆಂದರೆ ಅಮ್ಮನಿಗಿಂತ ಚೆನ್ನಾಗಿ ನಾನೇ ಅಡುಗೆ ಮಾಡುತ್ತೇನೆ! 

ನನಗೆ ಮಂಗಳೂರು ಅಡುಗೆಗಳೇ ಈಗಲೂ ಇಷ್ಟ. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ ಬಿಸಿಬೇಳೆ ಬಾತ್ ಮಾಡೋದು ಕಲಿತಿಲ್ಲ. ನನಗೇನಿದ್ದರೂ ಕುಚ್ಚಲಕ್ಕಿ ಅನ್ನ, ಮೀನು ಫ್ರೈ, ಚಿಕನ್ ಕರಿ, ಬಿರಿಯಾನಿ ಇಷ್ಟ. ಮಂಗಳೂರಿನ ವಿಶೇಷ ಖಾದ್ಯ ಬಾಳೆಹಣ್ಣಿನ ಬನ್ಸ್‌ ಮಾಡುತ್ತೇನೆ.

ಬಾಳೆಹಣ್ಣಿನ ಬನ್ಸ್‌
ಬೆಳಿಗ್ಗೆ ಬನ್ಸ್‌ ಮಾಡಬೇಕಿದ್ದರೆ ಹಿಂದಿನ ದಿನ ರಾತ್ರಿಯೇ ಹಿಟ್ಟು ಹದ ಮಾಡಿಟ್ಟುಕೊಳ್ಳಬೇಕು. ಚೆನ್ನಾಗಿ ಹಣ್ಣಾದ ಚುಕ್ಕಿ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅಥವಾ ಮಿಕ್ಸಿಯಲ್ಲಿ ರುಬ್ಬಿ. ರುಬ್ಬುವಾಗಲೇ ಸ್ವಲ್ಪ ಉಪ್ಪು ಮತ್ತು ಬೇಕಿಂಗ್ ಸೋಡಾ ಒಂದು ಚಿಟಿಕೆ ಹಾಕಿ. ಮೈದಾ ಮತ್ತು ಸ್ವಲ್ಪ ಗೋಧಿ ಹಿಟ್ಟನ್ನು ಬೆರೆಸಿ ಸ್ವಲ್ಪ ಜೀರಿಗೆ ಹಾಕಿ ಬಾಳೆಹಣ್ಣಿನ ಮಿಶ್ರಣದ ಜೊತೆ ಸೇರಿಸಿ ಚೆನ್ನಾಗಿ ನಾದಬೇಕು. ನೀರು ಬಳಸಬಾರದು. ನಾದಲು ಎಣ್ಣೆ ಬಳಸಬೇಕು. ನಂತರ ಈ ಹಿಟ್ಟನ್ನು ಗಾಳಿಯಾಡದಂತೆ ಮುಚ್ಚಿಡಬೇಕು. ಬೆಳಿಗ್ಗೆಯಾಗುವಾಗ ಹಿಟ್ಟು ಹದಕ್ಕೆ ಬಂದಿರುತ್ತದೆ. ನಂತರ ದಪ್ಪ ಪೂರಿ ತರ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದರೆ ಮಂಗಳೂರು ಬನ್ಸ್‌ ಸಿದ್ಧವಾಗುತ್ತದೆ. ತೆಂಗಿನಕಾಯಿ ಚಟ್ನಿ ಜೊತೆಗೆ ಬನ್ಸ್‌ ತಿನ್ನಲು ರುಚಿಯಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !