9 ನಿಗಮ–ಮಂಡಳಿಗೆ ಅಧ್ಯಕ್ಷರ ನೇಮಕ: ಜೆಡಿಎಸ್ ಶಾಸಕರು, ಮುಖಂಡರಿಗೆ ಆದ್ಯತೆ

ಬೆಂಗಳೂರು: ಒಂಬತ್ತು ನಿಗಮ– ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಎಲ್ಲರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ಜೆಡಿಎಸ್ ಮುಖಂಡ ಮೊಹಮ್ಮದ್ ಜಫ್ರುಲ್ಲಾ ಖಾನ್ ಸೇರಿ ಎಂಟು ಜೆಡಿಎಸ್ ಶಾಸಕರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಪ್ರಮುಖ ನಿಗಮ–ಮಂಡಳಿಯಾದ ಕರ್ನಾಟಕ ಗೃಹ ಮಂಡಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಬಿ ಸತ್ಯನಾರಾಯಣ ಅವರನ್ನು ನೇಮಿಸಲಾಗಿದೆ.
ಅಪರೇಷನ್ ಕಮಲ ಆಡಿಯೊದಿಂದ ಸುದ್ದಿಯಾಗಿದ್ದ ಶರಣ ಗೌಡ ಅವರ ತಂದೆ ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನ ಗೌಡ ಕಂದಕೂರ ಅವರಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಲಾಗಿದೆ.
ಇನ್ನು ಉಳಿದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಡಿ.ಸಿ.ಗೌರಿಶಂಕರ್ ಅವರಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, , ನಿಸರ್ಗ ನಾರಾಯಣಸ್ವಾಮಿ ಅವರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ, ಕೆ. ಅನ್ನದಾನಿ ಅವರಿಗೆ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೆ. ಮಹದೇವ ಅವರಿಗೆ ಕರ್ನಾಟಕ ರಾಜ್ಯ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಹಿಂದೆ 14 ನಿಗಮ–ಮಂಡಳಿಗಳ ನೇಮಕದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಡಿದ ಶಿಫಾರಸಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನುಮೋದನೆ ನೀಡಲು ಹಿಂದೇಟು ಹಾಕಿದ್ದರಿಂದ ‘ದೋಸ್ತಿ’ಗಳ (ಕಾಂಗ್ರೆಸ್- ಜೆಡಿಎಸ್) ಮಧ್ಯೆ ಹಗ್ಗಜಗ್ಗಾಟ ನಡೆದಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.