ಮಂಗಳವಾರ, ಡಿಸೆಂಬರ್ 10, 2019
26 °C
ಮೇಯರ್‌ ಚುನಾವಣೆಯಲ್ಲಿ ಬೆಂಬಲಿಸದ್ದಕ್ಕೆ ಮುಯ್ಯಿ ತೀರಿಸಿಕೊಂಡ ಬಿಜೆಪಿ

ಚಂದ್ರಪ್ಪ ರೆಡ್ಡಿಗೆ ಕೈತಪ್ಪಿದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿಸಮಿತಿಯ ಅಧ್ಯಕ್ಷರಾಗುವ ಪಕ್ಷೇತರ ಸದಸ್ಯ ಚಂದ್ರಪ್ಪ ರೆಡ್ಡಿ ಅವರ ಕನಸಿಗೆ ಬಿಜೆಪಿ ತಣ್ಣೀರೆರಚಿತು. ಮೇಯರ್‌ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿ ಬಳಿಕ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದ ರೆಡ್ಡಿ ವಿರುದ್ಧ ಬಿಜೆಪಿ ಈ ಮೂಲಕ ಮುಯ್ಯಿ ತೀರಿಸಿಕೊಂಡಿತು.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಾಗಿ ಚಂದ್ರಪ್ಪ ರೆಡ್ಡಿ ಅವರಿಗೆ ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದರು. 11 ಮಂದಿ ಸದಸ್ಯರ ಸ್ಥಾನಗಳಿಗೆ ರೆಡ್ಡಿ ಅವರು ಸೇರಿದಂತೆ ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದ್ದರು. ಅವಿರೋಧ ಆಯ್ಕೆ ನಡೆಯಬೇಕಿದ್ದರೆ ಇಬ್ಬರು ಉಮೇದುವಾರಿಕೆ ಹಿಂಪಡೆಯಬೇಕಿತ್ತು. ಕಾಂಗ್ರೆಸ್ ಸದಸ್ಯ ರಾಜಣ್ಣ ಹಿಂದಕ್ಕೆ ಪಡೆದರು. ಆದರೆ, ‘ಚಂದ್ರಪ್ಪ ರೆಡ್ಡಿ ನಾಮಪತ್ರ ಹಿಂದಕ್ಕೆ ಪಡೆದರೆ ಮಾತ್ರ ನಮ್ಮ ಪಕ್ಷದ ಸದಸ್ಯರೊಬ್ಬರು ಉಮೇದುವಾರಿಕೆ ಹಿಂದಕ್ಕೆ ಪಡೆಯುತ್ತಾರೆ’ ಎಂದು ಬಿಜೆಪಿ ಮುಖಂಡರು ತಿಳಿಸಿದರು.

‘ಮತದಾನ ನಡೆದರೆ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಎಣಿಕೆ ನಡೆಸಬೇಕಾಗುತ್ತದೆ. ಇದಕ್ಕೆ ಒಂದು ವಾರ ಬೇಕಾಗಬಹುದು’ ಎಂದು ಚುನಾವಣಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ರಾಮಲಿಂಗಾ ರೆಡ್ಡಿ, ಎಚ್.ಎಂ.ರೇವಣ್ಣ, ಮುನಿರತ್ನ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅವರು ಬಿಜೆಪಿ ಮುಖಂಡರಾದ ಆರ್.ಅಶೋಕ, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಅವರ ಮನವೊಲಿಸಲು ಯತ್ನಿಸಿದರೂ ಅವರು ಪಟ್ಟು ಸಡಿಲಿಸಲಿಲ್ಲ. ಕೊನೆಗೂ ಒಲ್ಲದ ಮನಸ್ಸಿನಿಂದ ಚಂದ್ರಪ್ಪ ರೆಡ್ಡಿ ನಾಮಪತ್ರ ಹಿಂಪಡೆದರು. ಬಳಿಕ ಬಿಜೆಪಿಯ ಗುರುಮೂರ್ತಿ ರೆಡ್ಡಿ ಹಾಗೂ ಕೆ.ನಾರಾಯಾಣರಾಜು ಉಮೇದುವಾರಿಕೆ ಹಿಂದಕ್ಕೆ ಪಡೆದರು.

ಪ್ರಸ್ತುತ ಈ ಸ್ಥಾಯಿಸಮಿತಿಗೆ ಕೇವಲ 9 ಸದಸ್ಯರು ಮಾತ್ರ ಆಯ್ಕೆ ಆಗಿದ್ದಾರೆ. ಇನ್ನಿಬ್ಬರು ಸದಸ್ಯರ ಆಯ್ಕೆಗೆ ಮತ್ತೆ ಚುನಾವಣೆ ನಡೆಯಬೇಕಿದೆ.

ಇನ್ನುಳಿದ 11 ಸ್ಥಾಯಿ ಸಮಿತಿಗಳ ಸದಸ್ಯರನ್ನು ಅವಿರೋಧವಾಗಿ ಆಯ್ಕೆಯಾದರು.

ಇಬ್ಬರು ಪಕ್ಷೇತರರಿಗೆ ಮಾತ್ರ ಅವಕಾಶ

ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟವನ್ನು ಬೆಂಬಲಿಸಿದ ಪಕ್ಷೇತರ ಸದಸ್ಯರೆಲ್ಲರಿಗೂ (ಎಸ್‌ಡಿಪಿಐ ಸದಸ್ಯ ಸೇರಿ ಆರು ಮಂದಿ) ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಆದರೆ, ದೊಮ್ಮಲೂರು ವಾರ್ಡ್‌ನ ಲಕ್ಷ್ಮಿನಾರಾಯಣ, ಕೆಂಪಾಪುರ ಅಗ್ರಹಾರ ವಾರ್ಡ್‌ನ ಎಂ.ಗಾಯತ್ರಿ ಹಾಗೂ ಎಂ.ಚಂದ್ರಪ್ಪ ರೆಡ್ಡಿ ಅವರಿಗೆ ಅವಕಾಶ ಕೈತಪ್ಪಿದೆ. ಪಕ್ಷೇತರ ಸದಸ್ಯ ವಿ.ಏಳುಮಲೈ ಆರೋಗ್ಯ ಹದಗೆಟ್ಟಿದ್ದು, ಅವರು ಸ್ಪರ್ಧೆಯಲ್ಲಿರಲಿಲ್ಲ.

ಮೇಯರ್‌ ಆಯ್ಕೆಗೆ ನಡೆದ ಮತದಾನದಂದು ಬಿಜೆಪಿ ಜತೆ ಗುರುತಿಸಿಕೊಂಡು ಕೊನೆಯ ಕ್ಷಣದಲ್ಲಿ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸಿದ ಆನಂದ ಕುಮಾರ್‌ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಪತ್ನಿ ಸೋಲಿಗೆ ಸೇಡು ತೀರಿಸಿಕೊಂಡ ಶಾಸಕ?

‘ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಚಂದ್ರಪ್ಪ ರೆಡ್ಡಿ ಅವರ ಹಿರಿಯ ಮಗಳು ಲಾವಣ್ಯ ನರಸಿಂಹ ಮೂರ್ತಿ ಅವರು ಸಿಂಗನಾಯಕನಹಳ್ಳಿ ಕ್ಷೇತ್ರದಲ್ಲಿ ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಪತ್ನಿ ವಾಣಿ ವಿರುದ್ಧ ಗೆದ್ದಿದ್ದರು. ಇದು ವಿಶ್ವನಾಥ್‌ ಅವರ ಸಿಟ್ಟಿಗೆ ಕಾರಣವಾಗಿತ್ತು. ಹಾಗಾಗಿ ಬಿಜೆಪಿಯ ಬೇರೆ ನಾಯಕರು ಚಂದ್ರಪ್ಪ ರೆಡ್ಡಿ ಬಗ್ಗೆ ಕರುಣೆ ತೋರಿದರೂ ವಿಶ್ವನಾಥ್‌ ಮಾತ್ರ ಪಟ್ಟು ಸಡಿಲಿಸಲಿಲ್ಲ’ ಎಂಬ ಮಾತು ಪಾಲಿಕೆಯ ಪಡಸಾಲೆಯಲ್ಲಿ ಕೇಳಿಬಂತು.

ಸುಮಾರು 30 ವರ್ಷ ಬಿಜೆಪಿಯಲ್ಲೇ ಇದ್ದ ಚಂದ್ರಪ್ಪ ರೆಡ್ಡಿ ಈ ಹಿಂದೆಯೂ ಒಂದು ಬಾರಿ ಪಾಲಿಕೆ ಸದಸ್ಯರಾಗಿದ್ದರು. ಕಳೆದ ಚುನಾವಣೆಯಲ್ಲಿ ಪಕ್ಷವು ಟಿಕೆಟ್‌ ನೀಡದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು.

‘ತಮ್ಮ ಜೊತೆಗಿದ್ದ ವ್ಯಕ್ತಿಯೇ ಮೇಯರ್‌ ಸ್ಥಾನ ಕೈತಪ್ಪಲು ಕಾರಣನಾದನಲ್ಲ ಎಂಬುದೂ ಪಕ್ಷದ ನಾಯಕರ ಸಿಟ್ಟಿಗೆ ಪ್ರಮುಖ ಕಾರಣವಾಗಿತ್ತು’ ಎಂದು ಬಿಜೆಪಿ ಕಾರ್ಪೊರೇಟರ್‌ ಒಬ್ಬರು ತಿಳಿಸಿದರು.

‘ಸಕಾಲದಲ್ಲಿ ಚುನಾವಣೆ ನಡೆಸಿಲ್ಲ ಏಕೆ?’

‘ಸ್ಥಾಯಿ ಸಮಿತಿಗಳ ಅಧಿಕಾರದ ಅವಧಿ ಮುಗಿಯುವ ಮುನ್ನವೇ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಿಲ್ಲ ಏಕೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಚುನಾವಣಾಧಿಕಾರಿ ಶಿವಯೋಗಿ ಕಳಸದ ಅವರನ್ನು ಪ್ರಶ್ನಿಸಿದರು.

‘ಮೇಯರ್‌ ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಸ್ಥಾಯಿ ಸಮಿತಿಗಳ ಅವಧಿಯೂ ಮುಕ್ತಾಯವಾಗುತ್ತದೆ ಎಂದು ಹೈಕೋರ್ಟ್‌ ಆದೇಶವೊಂದರಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ಸರ್ಕಾರಿ ಆದೇಶವೂ ಇದೆ. ಆದರೂ ಸ್ಥಾಯಿ ಸಮಿತಿಗಳಿಗೆ ಮೇಯರ್‌ 
ಆಯ್ಕೆ ದಿನವೇ ಮತದಾನ ನಡೆಸಿಲ್ಲ ಏಕೆ ಎಂದು ಉತ್ತರಿಸಬೇಕು’ ಎಂದು ಒತ್ತಾಯಿಸಿದರು. 

‘ಚುನಾವಣಾ ಪ್ರಕ್ರಿಯೆಯ ನಡುವೆ ಬೇರೆ ಚರ್ಚೆಗೆ ಅವಕಾಶ ಇಲ್ಲ’ ಎಂದು ಕಳಸದ ಪ್ರತಿಕ್ರಿಯಿಸಿ ಮತದಾನ ಪ್ರಕ್ರಿಯೆಯನ್ನು ಮುಂದುವರಿಸಿದರು.

‘ನೀವು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸಿದ್ದೀರಿ’ ಎಂದು ಪದ್ಮನಾಭ ರೆಡ್ಡಿ ಆರೋಪಿಸಿದರು.

ನಾಮಪತ್ರ ಸಲ್ಲಿಕೆ ಗಡುವು ವಿಸ್ತರಣೆ

ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬೆಳಿಗ್ಗೆ 9.30ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಸದಸ್ಯರಾಗಲು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದುದರಿಂದ ಎರಡೂ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರಲಿಲ್ಲ.

ನಿಗದಿತ ಅವಧಿಯೊಳಗೆ ಮೂವರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಹಾಗಾಗಿ ಉಪಮೇಯರ್‌ ಚುನಾವಣೆ ಮುಗಿದ ಬಳಿಕ ಚುನಾವಣಾಧಿಕಾರಿ ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 12.30ರವರೆಗೆ ಅವಕಾಶ ಕಲ್ಪಿಸಿದರು. ಸಭೆ ಮತ್ತೆ ಆರಂಭವಾಗುವಾಗ 1 ಗಂಟೆ 10 ನಿಮಿಷ ಆಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು