ಮಂಗಳವಾರ, ಸೆಪ್ಟೆಂಬರ್ 28, 2021
25 °C

ಹಿಮವ್ಯಾಲಿಯ ಜಲಮೂಲ

ಶ್ರೀನಿವಾಸ ಮೂರ್ತಿ.ಎನ್.ಎಸ್. Updated:

ಅಕ್ಷರ ಗಾತ್ರ : | |

ಸಿಕ್ಕಿಂ ರಾಜ್ಯದ ಗ್ಯಾಂಗ್ಟಾಕ್ ಪ್ರವಾಸ ಮಾಡುವವರೆಲ್ಲ ಸಾಮಾನ್ಯವಾಗಿ ನಾಥೂಲ್‌ಪಾಸ್‌ಗೆ ಭೇಟಿ ನೀಡುತ್ತಾರೆ. ಗ್ಯಾಂಗ್ಟಾಕ್ ನಗರದಿಂದ ಜವಾಹರಲಾಲ್‌ ನೆಹರು ರಸ್ತೆಯಲ್ಲಿ ಸಾಗಿದರೆ ನಾಥೂಲ್‌ಪಾಸ್ ತಲುಪಬಹುದು. ಆದರೆ, ಅದೇ ದಾರಿಯಲ್ಲಿ 40 ಕಿ.ಮೀ ದೂರ ಕ್ರಮಿಸಿದರೆ, ಮತ್ತೊಂದು ಅದ್ಭುತ ಪ್ರವಾಸಿ ತಾಣ ಸಿಗುತ್ತದೆ. ಅದೇ ತ್ಸೊಮ್ಗೊ(Tsomgo Lake) ಸರೋವರ. ಇದನ್ನು ಚಾಂಗು ಸರೋವರ ಎಂದೂ ಕರೆಯುತ್ತಾರೆ. ಸ್ಥಳೀಯ ಭೂಟಿಯಾ ಭಾಷೆಯಲ್ಲಿ ತ್ಸೊಮ್ಗೊ ಎಂದರೆ ‘ನೀರಿನ ಮೂಲ’ ಎಂದು ಅರ್ಥ.

ಚಾಂಗು ಸರೋವರ ಚಳಿಗಾಲದಲ್ಲಿ ಹಿಮನದಿಯಂತಾಗುತ್ತದೆ. ಬೇಸಿಗೆಯಲ್ಲಿ ಹಿಮ ಕರಗಿ ನದಿಯಾಗಿ ಹರಿಯುತ್ತದೆ. ಸಮುದ್ರ ಮಟ್ಟದಿಂದ 12,313 ಅಡಿ ಎತ್ತರದಲ್ಲಿರುವ ಈ ಸರೋವರ, ಭಾರತದಲ್ಲೇ ಅತ್ಯಂತ ಎತ್ತರ ಪ್ರದೇಶಗಳಲ್ಲಿರುವ ಸರೋವರಗಳಲ್ಲಿ ಒಂದಾಗಿದೆ.

ಬೇಸಿಗೆಯಲ್ಲೇ ಹೊರಟೆವು..

ಇಂಥ ಹಲವು ವೈಶಿಷ್ಟ್ಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಸರೋವರವನ್ನು ನೋಡಬೇಕೆಂಬ ಕುತೂಹಲವಿತ್ತು. ಹಿಮದ ತೀವ್ರತೆ ಕಡಿಮೆ ಇದ್ದಾಗ ಈ ತಾಣಕ್ಕೆ ಭೇಟಿ ನೀಡಿದರೆ ಉತ್ತಮ ಎಂಬ ಸ್ನೇಹಿತರ ಸಲಹೆಯೂ ನೆನಪಿತ್ತು. ಅದಕ್ಕಾಗಿ ಈ ತಾಣಕ್ಕೆ ಭೇಟಿ ನೀಡಲು ಏಪ್ರಿಲ್ ತಿಂಗಳನ್ನೇ ಆಯ್ಕೆ ಮಾಡಿಕೊಂಡೆವು.

ಕಳೆದ ವರ್ಷ ಏಪ್ರಿಲ್ 18 ರಂದು ಗ್ಯಾಂಗ್ಟಾಕ್‌ ತಲುಪಿದಾಗ ನಮ್ಮ ದುರಾದೃಷ್ಟ ಅಲ್ಲಿ ವಾತಾವರಣ ಅನುಕೂಲಕರವಾಗಿರಲಿಲ್ಲ. ಬಾರಿ ಹಿಮಪಾತದ ಕಾರಣ ಐದು ದಿನದಿಂದ ಚಾಂಗು ಸರೋವರಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಿರಲಿಲ್ಲ. ನಮ್ಮ ಟ್ರಾವೆಲ್ ಏಜೆನ್ಸಿಯವರ ಸತತ ಪ್ರಯತ್ನದ ನಡುವೆ ಅಂತೂ ಇಂತು ಅನುಮತಿ ಸಿಕ್ಕಿತು. 

ಗ್ಯಾಂಗ್ಟಾಕ್‍ನಿಂದ ಹೊರಟು ಚಾಂಗು ಸರೋವರದ ಚೆಕ್‌ಪೋಸ್ಟ್‌ ದಾಟಿದಾಗ ಬೆಳಿಗ್ಗೆ 9 ಗಂಟೆಯಾಗಿತ್ತು. ಅಲ್ಲಿಂದ ಸುಮಾರು 12000 ಅಡಿ ಎತ್ತರದ ಪ್ರದೇಶಕ್ಕೆ ಸಾಗುವ ಪಯಣವೇ ರೋಚಕವಾದದ್ದು. ಹೆಜ್ಜೆ ಹೆಜ್ಜೆಗೂ ಸಿಗುವ ಪ್ರಪಾತದ ಕಣಿವೆಗಳು, ಸುಂದರ ಜಲಪಾತಗಳು, ಸರೋವರದ ಸಮೀಪಕ್ಕೆ ಹೋದಂತೆ ಬದಲಾಗುವ ವಾತಾವರಣ... ಓಹ್‌ ! ನಮ್ಮೆದುರಿಗೆ ಹೊಸ ಪ್ರಪಂಚವೇ ತೆರೆದುಕೊಂಡಂತಾಯಿತು.

ಹಿಮಾವೃತ ಬೆಟ್ಟಗಳ ಬಿಂಬ

ಸರೋವರದ ಸಮೀಪ ಹೋದಂತೆ ಸಾಲು ಸಾಲು ಬೆಟ್ಟಗಳು ಕಂಡವು. ಅವುಗಳ ನಡುವಿನಲ್ಲಿ ಅಂಡಾಕಾರದ ಸರೋವರ ಕಾಣಿಸಿತು. ಮಂಜಿನ ಪರದೆ ಸರಿದ ನಂತರ, 60 ಎಕರೆಯಷ್ಟು (25 ಹೆಕ್ಟೇರ್) ವಿಸ್ತಾರವಿರುವ 10 ರಿಂದ 50 ಅಡಿ ಆಳವಿರುವ ತಿಳಿನೀರ ಸರೋವರ ಕಾಣಿಸ ತೊಡಗಿತು. ಆ ಸರೋವರದ ನೀರಿನಲ್ಲಿ ಬೆಟ್ಟಗಳ ಬಿಂಬಗಳಾಗಿ ಕಾಣುತ್ತಿದ್ದವು.

ಬೇಸಿಗೆಯಲ್ಲಿ ಹಲವು ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಅದರಲ್ಲಿ ಬ್ರಾಹ್ಮಣಿ ಹಂಸ ಪ್ರಮುಖವಾಗಿ ಕಾಣಬಹುದಾದ ಪಕ್ಷಿ. ಇಲ್ಲಿ ಬೇಸಿಗೆಯಲ್ಲಿ ಅಪರೂಪದ ಹೂವುಗಳು ಅರಳುತ್ತವೆ.

ಈ ಚಾಂಗು ಸರೋವರಕ್ಕೆ ಸಮೀಪದಲ್ಲೇ ಕ್ಯಾಂಗ್ನೋಸ್ಲಾ (Kyongnosla) ವನ್ಯಜೀವಿಧಾಮವಿದೆ. 31 ಎಕರೆಯಲ್ಲಿರುವ ಈ ವನ್ಯಜೀವಿಧಾಮದಲ್ಲಿ ಅಳಿವಿ ನಂಚಿನ ಪ್ರಭೇದಗಳಿವೆ.

ಸರೋವರದ ಸುತ್ತ ಸ್ಥಳೀಯರು ಪ್ರವಾಸಿಗರನ್ನು ಸವಾರಿ ಮಾಡಿ ಸಲು ಚಮರಿ ಮೃಗಗಳನ್ನು ತಂದು ನಿಲ್ಲಿಸಿ ಕೊಂಡಿರುತ್ತಾರೆ. ಅವುಗಳ ಮೇಲೆ ಸವಾರಿ ಮಾಡುತ್ತಾ ಸರೋವರದ ಸೌಂದರ್ಯ ಸವಿಯಬಹುದು.

ಸಿಖ್ ಮತ್ತು ಬೌದ್ಧರಿಗೆ ಇದು ಪವಿತ್ರ ಸರೋವರ. ಆ ಧರ್ಮದವರು ರಕ್ಷಾ ಬಂಧನ ಮತ್ತು ಗುರು ಪೂರ್ಣಿಮಾ ದಿನದಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರಂತೆ. ಈ ಸರೋವರದಲ್ಲಿ ಕಾಲಕ್ಕೆ ಅನುಗುಣವಾಗಿ ಬಣ್ಣ ಬದಲಾಗುತ್ತದೆ. ಇದರ ಅನುಗುಣವಾಗಿ ಬೌದ್ಧರು ಕಾಲ ನಿರ್ಣಯಿಸುತ್ತಾರೆ ಎಂದು ಹೇಳುತ್ತಾರೆ.

ವಿಶೇಷ ಪರವಾನಗಿ ಅಗತ್ಯ

ಗ್ಯಾಂಗ್ಟಾಕ್‌ನಿಂದ ಚಾಂಗು ಸರೋವರಕ್ಕೆ ಖಾಸಗಿ ಅಥವಾ ಸ್ವಂತ ವಾಹನಗಳಿಗೆ ಪ್ರವೇಶವಿಲ್ಲ. ಚಾಂಗು ಸರೋವರ ಭೇಟಿಗಾಗಿ ಪ್ರವಾಸಿಗರು ಸಿಕ್ಕಿಂ ಸರ್ಕಾರದಿಂದ ವಿಶೇಷ ಪರವಾನಿಗೆ ಪಡೆಯಬೇಕು. ಗ್ಯಾಂಗ್ಟಾಕ್‌ನಲ್ಲಿ ಈ ಪರವಾನಗಿ ದೊರೆಯುತ್ತದೆ. ಅದಕ್ಕಾಗಿ ನಿಮ್ಮ ಟ್ರಾವೆಲ್ ಏಜೆನ್ಸಿಗಳು ಅಥವಾ ನೋಂದಾಯಿತ ಸ್ಥಳೀಯ ಪ್ರವಾಸಿ ಸಂಸ್ಥೆಗಳನ್ನು ಸಂಪರ್ಕಿಸಿ, ಮುಂಗಡವಾಗಿ ಪರವಾನಗಿ ಪಡೆದುಕೊಳ್ಳಬಹುದು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಗ್ಯಾಂಗ್ಟಾಕ್‌ಗೆ ನೇರ ವಿಮಾನ ಸೌಲಭ್ಯವಿದೆ. ರೈಲಿನಲ್ಲಿ ಬೆಂಗಳೂರು–ನ್ಯೂಜಲಪೈಗುರಿ ಮೂಲಕ ಗ್ಯಾಂಗ್ಟಾಕ್ ತಲುಪಬಹುದು.

‌ಗ್ಯಾಂಗ್ಟಾಕ್‌ನಲ್ಲಿ ಸಾಕಷ್ಟು ಸ್ಥಳೀಯ ಟ್ರಾವೆಲ್ ಏಜೆನ್ಸಿಗಳಿವೆ. ಅವುಗಳ ಮೂಲಕ ಒಂದು ದಿನದ ಪ್ರವಾಸವನ್ನು ನಿಗದಿಪಡಿಸಿಕೊಂಡರೆ, ಚಾಂಗು ಸರೋವರದ ಜತೆಗೆ, ಹರಿಭಜನ್ ಮಂದಿರ ಸೇರಿಂದಂತೆ ನಾತೂಲ್‌ ಪಾಸ್‌ವರೆಗಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು.

ಇನ್ನೂ ಏನೇನು ನೋಡಬಹುದು?

ಗ್ಯಾಂಗ್ಟಾಕ್‌ನಲ್ಲಿ ಭಂಜಕರಿ ಜಲಪಾತ, ಗಣೇಶ್‌ ಟೋಕ್, ಹನುಮಾನ್ ಟೋಕ್, ತಾಶೀ ವ್ಯೂ ಪಾಯಿಂಟ್ ನೋಡಬಹುದು. ಈ ಪ್ರಯಾಣದಲ್ಲಿ ಭಾರತದ ಅತೀ ಎತ್ತರದ ಪರ್ವತ ಕಾಂಚನಗಂಗಾದ ವಿಹಂಗಮ ದೃಶ್ಯವೂ ಕಾಣುತ್ತದೆ. ಜತೆಗೆ ಬೌದ್ಧ ಧಾರ್ಮಿಕ ಮಂದಿರಗಳು, ಎಂ.ಜಿ. ಮಾರ್ಗ್ ನೋಡಬಹುದು.

ಪ್ರವಾಸಕ್ಕೆ ಸೂಕ್ತ ಸಮಯ

ಮಾರ್ಚ್‌ನಿಂದ ಮೇ ತಿಂಗಳವರೆಗೆ ಪ್ರವಾಸಕ್ಕೆ ಸೂಕ್ತ ಸಮಯ. ಆ ಸಮಯದಲ್ಲಿ ಹಿಮ ಸುರಿವ ಪ್ರಮಾಣ ಕಡಿಮೆ ಇರುತ್ತದೆ. ಸರೋವರದ ಜತೆಗೆ ಜಲಪಾತಗಳು, ವನ್ಯಜೀವಿಧಾಮ ಹಾಗೂ ಬೇಸಿಗೆಯಲ್ಲಿ ಅರಳುವ ಅಪರೂಪದ ಹೂವುಗಳನ್ನು ನೋಡಬಹುದು.

ಚಾಂಗು ಸರೋವರಕ್ಕೆ ಹೋಗುವವರು ಮಧ್ಯಾಹ್ನದೊಳಗೆ ಹೋಗಿಬರಲು ವ್ಯವಸ್ಥೆ ಮಾಡಿಕೊಳ್ಳಬೇಕು. ಏಕೆಂದರೆ, ಮಧ್ಯಾಹ್ನದ ನಂತರದಲ್ಲಿ ಹವಾಮಾನ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ.

ಊಟ– ವಸತಿ

ಗ್ಯಾಂಗ್ಟಾಕ್‌ನಲ್ಲಿ ಉತ್ತಮ ಹೋಟೆಲ್‌ಗಳಿವೆ. ಲಾಡ್ಜ್‌ಗಳೂ ಇವೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಲು ಅವಕಾಶವಿದೆ. ಸ್ಥಳೀಯ ಪ್ರವಾಸಿ ಏಜೆಂಟ್‌ಗಳನ್ನು ಸಂಪರ್ಕಿಸಿಯೂ ಈ ವ್ಯವಸ್ಥೆ ಮಾಡಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು