ಒತ್ತುವರಿ ಜಾಗದಲ್ಲೇ ಬಿಜೆಪಿ ಶಾಸಕನ ಹುಟ್ಟುಹಬ್ಬ

ಬುಧವಾರ, ಜೂಲೈ 17, 2019
27 °C
ಜಿಲ್ಲಾಡಳಿತ ತೆರವು ಮಾಡಿದ್ದ ಜಾಗ ಮತ್ತೆ ಅತಿಕ್ರಮಣ ಆರೋಪ * ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಒತ್ತುವರಿ ಜಾಗದಲ್ಲೇ ಬಿಜೆಪಿ ಶಾಸಕನ ಹುಟ್ಟುಹಬ್ಬ

Published:
Updated:
Prajavani

ಬೆಂಗಳೂರು: ನಗರ ಜಿಲ್ಲಾಡಳಿತ ತೆರವು ಮಾಡಿದ್ದ ಚಿಕ್ಕಕಲ್ಲಸಂದ್ರ ಕೆರೆ ಜಾಗ ಮತ್ತೆ ಒತ್ತುವರಿ ಆಗಿದ್ದು, ಆ ಜಾಗದಲ್ಲೇ ಶಾಸಕ ಆರ್. ಅಶೋಕ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂ­ಕಿನ ಚಿಕ್ಕಕಲ್ಲಸಂದ್ರ ಗ್ರಾಮದ ಸರ್ವೆ ಸಂಖ್ಯೆ 76ರಲ್ಲಿರುವ 12 ಎಕರೆ 26 ಗುಂಟೆ ಕೆರೆಯ ಜಾಗ ಒತ್ತುವರಿ ಆಗಿತ್ತು. 2014ರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ವಿ. ಶಂಕರ್, ಒತ್ತುವರಿ ತೆರವು ಮಾಡಿದ್ದರು.

ಅದಾದ ನಂತರವೂ ಹಲವರು ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ಹಾಗೂ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ, ಅದೇ ಜಾಗದಲ್ಲಿ ಪದ್ಮನಾಭನಗರ ಶಾಸಕ ಆರ್. ಅಶೋಕ್‌ ಅವರ ಹುಟ್ಟುಹಬ್ಬ ಆಚರಣೆಗೆ ತಯಾರಿ ನಡೆದಿದೆ. ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಅಶೋಕ್‌, ಒತ್ತುವರಿ ಮಾಡಲಾದ ಸರ್ಕಾರದ ಜಾಗದಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

‘ಚಿಕ್ಕಕಲ್ಲಸಂದ್ರ ಕೆರೆ ಜಾಗವನ್ನು ಮೈದಾನವನ್ನಾಗಿ ಮಾಡಿರುವ ಭೂಗಳ್ಳರು, ಮನೆ ಹಾಗೂ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಬೇರೆಯವರಿಗೆ ಜಾಗ ಬಾಡಿಗೆ ಕೊಟ್ಟು ಹಣ ಮಾಡುತ್ತಿದ್ದಾರೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಸ್ಥಳೀಯ ಪಾಲಿಕೆ ಸದಸ್ಯೆ ಎಲ್‌. ಶೋಭಾ ಹಾಗೂ ಅವರ ಪತಿ ಆಂಜನಪ್ಪ ಅವರೇ ಹುಟ್ಟಹಬ್ಬ ಕಾರ್ಯಕ್ರಮ ಆಯೋಜಿಸಿದ್ದಾರೆ. ಕೆರೆ ಜಾಗದಲ್ಲೇ ಬೃಹತ್ ವೇದಿಕೆ ನಿರ್ಮಿಸಿದ್ದು, ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಆ ಬಗ್ಗೆ ಮಾಹಿತಿ ನೀಡುವ ಕಟೌಟ್‌ ಹಾಗೂ ಬ್ಯಾನರ್‌ಗಳು ಗ್ರಾಮದಲ್ಲೆಲ್ಲ ರಾರಾಜಿಸುತ್ತಿವೆ. ಕೆರೆ ಉಳಿಸುವ ಇಚ್ಛೆ ಅಶೋಕ್‌ ಅವರಿಗೆ ಇದ್ದಿದ್ದರೆ, ಕಾರ್ಯಕ್ರಮಕ್ಕೆ ಒಪ್ಪುತ್ತಿರಲಿಲ್ಲ’ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟರು.

ಕುರುಹು ಇಲ್ಲದಂತೆ ಒತ್ತುವರಿ: ‘ಗ್ರಾಮದಲ್ಲಿ ಕೆರೆ ಇತ್ತು ಎಂಬುದು ದಾಖಲೆಗಳಲ್ಲಿ ಮಾತ್ರ ಇದೆ. ಕೆರೆ ಬಗ್ಗೆ ಯಾವುದೇ ಕುರುಹುಗಳನ್ನೂ ಭೂಗಳ್ಳರು ಉಳಿಸಿಲ್ಲ. ಕೆರೆ ­ಪಾತ್ರದಲ್ಲೇ ಮನೆಗಳು, ಕಟ್ಟಡಗಳು ಹಾಗೂ ವಾಣಿಜ್ಯ ಚಟುವಟಿಕೆ ಕೇಂದ್ರಗಳು ತಲೆ ಎತ್ತಿವೆ’ ಎಂದು ಸ್ಥಳೀಯರೊಬ್ಬರು ದೂರಿದರು. 

‘2010ರ ಅಕ್ಟೋಬರ್‌ನಲ್ಲಿ ಸಮೀಕ್ಷೆ ನಡೆಸಿದ್ದ ಸರ್ವೇ­ಕ್ಷಣಾ ಇಲಾಖೆ, ಒತ್ತುವರಿಯಾದ ಪ್ರದೇಶವನ್ನು ನಕ್ಷೆಯಲ್ಲಿ ಗುರುತಿಸಿತ್ತು. ಜಿಲ್ಲಾಧಿಕಾರಿ ಶಂಕರ್, 12 ಎಕರೆಯಲ್ಲಿದ್ದ ಮನೆಗಳು ಮತ್ತು ಕಟ್ಟಡಗಳನ್ನು 2014ರಲ್ಲಿ ನೆಲಸಮಗೊಳಿಸಿದ್ದರು. ಅದಾದ ಬಳಿಕವೂ ಕೆಲವರು ಕೆರೆ ಜಾಗ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದರು. ಆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ’ ಎಂದು ದೂರಿದರು.  

‘ನಮ್ಮ ಯಜಮಾನರ ಅಣ್ಣನ ಜಾಗ’
‘ಶಾಸಕ ಆರ್. ಅಶೋಕ್ ಅವರ ಹುಟ್ಟುಹಬ್ಬಕ್ಕಾಗಿ ವೇದಿಕೆ ನಿರ್ಮಿಸಿರುವ ಜಾಗ, ನಮ್ಮ ಯಜಮಾನರ ಅಣ್ಣ ನಾಗರಾಜ್‌ ಅವರಿಗೆ ಸೇರಿದ್ದು’ ಎಂದು ಪಾಲಿಕೆ ಸದಸ್ಯೆ ಎಲ್‌. ಶೋಭಾ ಆಂಜನಪ್ಪ ಹೇಳಿದರು.

‘ಕೆರೆ ಒತ್ತುವರಿ ಜಾಗವನ್ನು ಈಗಾಗಲೇ ತೆರವು ಮಾಡಲಾಗಿದೆ. ಅದರ ಪಕ್ಕದಲ್ಲಿರುವ ಜಾಗ ನಾಗರಾಜ್ ಅವರಿಗೆ ಸೇರಿದ್ದು. ನಾವು ಜಾಗ ಒತ್ತುವರಿ ಮಾಡಿಲ್ಲ. ನಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ಇದೇ ಜಾಗದಲ್ಲಿ ಮಾಡುತ್ತೇವೆ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !