ಒಂದೇ ಮನೆಗೆ ಹಲವು ವಾರಸುದಾರರು

7

ಒಂದೇ ಮನೆಗೆ ಹಲವು ವಾರಸುದಾರರು

Published:
Updated:

ಮನುಷ್ಯರಿಗೆ ಮನೆ ಕಟ್ಟಿಕೊಳ್ಳುವ ಹಂಬಲವಿರುವಂತೆಯೇ ಹಕ್ಕಿಗಳೂ ಸಹ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಆದರೆ ಹಕ್ಕಿಗಳು ಗೂಡನ್ನು ಮೊಟ್ಟೆಯಿಟ್ಟು ಮರಿ ಮಾಡಿ ಅವುಗಳನ್ನು ಪೋಷಿಸಲು ಮಾತ್ರ ಬಳಸುತ್ತವೆ. ಸಂತಾನದ ವೃದ್ಧಿಗೆ ಮಾತ್ರ ಹಕ್ಕಿಯ ಗೂಡು ಸೀಮಿತವಾಗಿರುತ್ತದೆ. ಮರಿಗಳು ಬೆಳೆದು ಹೊರ ಹೋಗುತ್ತಿದ್ದಂತೆಯೇ ಅವು ಗೂಡನ್ನು ತ್ಯಜಿಸುತ್ತವೆ.

ಕೆಲವು ಹಕ್ಕಿಗಳು ತಾವೇ ತಮ್ಮ ಕೊಕ್ಕಿನಲ್ಲಿ ಕಡ್ಡಿ, ನಾರನ್ನು ತಂದು ಗೂಡನ್ನು ನಿರ್ಮಿಸಿದರೆ, ಕೆಲವು ಮರದ ಪೊಟರೆಗಳನ್ನು ಆಶ್ರಯಿಸುತ್ತವೆ. ಈ ಪೊಟರೆಗಳನ್ನು ಆಶ್ರಯಿಸುವ ಹಕ್ಕಿಗಳಲ್ಲಿ ಗೂಡನ್ನು ಆಕ್ರಮಿಸಲು ಪೈಪೋಟಿ ಸಹ ನಡೆಯುತ್ತದೆ.

ಇಂತಹ ಸೋಜಿಗದ ಸಂಗತಿ ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ನಡೆಯಿತು. ಹಳೆಯದಾದ ತೆಂಗಿನ ಮರವೊಂದು ತನ್ನ ಗರಿಗಳನ್ನೆಲ್ಲಾ ಕಳೆದುಕೊಂಡು ಕೇವಲ ಕಾಂಡವಷ್ಟೇ ಉಳಿಸಿಕೊಂಡಿದೆ. ಅದರಲ್ಲಿ ಪೊಟರೆಯೊಂದಿದೆ. ಈ ಪೊಟರೆಯನ್ನು ತನ್ನದಾಗಿಸಿಕೊಳ್ಳಲು, ಅದರಲ್ಲಿ ಮೊಟ್ಟೆಯಿಡಲು ಗಿಣಿ, ಗೊರವಂಕ, ನೆಲಕುಟುಕ ಹಕ್ಕಿಗಳು ಪೈಪೋಟಿ ನಡೆಸಿವೆ. ಡಾರ್ವಿನ್‌ನ ‘ಅಸ್ಥಿತ್ವಕ್ಕಾಗಿ ಹೋರಾಟ’ ಸಿದ್ಧಾಂತವನ್ನು ಇಲ್ಲಿ ಕಾಣಬಹುದಾಗಿದೆ.

ಗಿಣಿ ಜೋಡಿಗಳು ಬಂದು ಮರದ ಕಾಂಡದ ಮೇಲೆ ಕುಳಿತುಕೊಳ್ಳುತ್ತವೆ. ಒಂದು ಗಿಣಿ ಹೊರಗೆ ಹೋಗಿ ಆಹಾರ ತಂದು ಇನ್ನೊಂದಕ್ಕೆ ಕೊಡುತ್ತದೆ. ಹತ್ತಿರದಲ್ಲಿ ಮನುಷ್ಯರ ಓಡಾಟ ಕಂಡಾಗ ಎರಡೂ ಹಾರಿ ದೂರದ ಮರದ ಮೇಲೆ ಕೂಡುತ್ತವೆ. ಅವು ಹೋದ ಸಮಯ ನೋಡಿ ಗೊರವಂಕ ಹಕ್ಕಿಗಳು ಬರುತ್ತವೆ. ಇವನ್ನು ಕಂಡು ದೂರದಲ್ಲಿರುವ ಗಿಣಿಗಳು ಜೋರಾಗಿ ಗದ್ದಲ ಮಾಡುತ್ತಾ ಆಕ್ರಮಣಶೀಲರಾಗಿ ಬಂದು ಓಡಿಸುತ್ತವೆ.

ನಂತರ ಸ್ವಲ್ಪ ಹೊತ್ತಿಗೆ ಯಾರೂ ಇಲ್ಲದ ಸಮಯದಲ್ಲಿ ಚಂದ್ರಮುಕುಟ ಅಥವಾ ನೆಲಕುಟುಕ ಹಕ್ಕಿ ಬರುತ್ತದೆ. ಅದನ್ನೂ ಸಹ ಗಿಣಿ ಓಡಿಸುತ್ತದೆ. ಗೂಡನ್ನು ಕಾಯುವುದು, ಜೊತೆಯಲ್ಲಿ ಸಂತಾನ ಕ್ರಿಯೆಗೆ ದೇಹಕ್ಕೆ ಬೇಕಾದ ಶಕ್ತಿಗೆ ಆಹಾರ ಹುಡುಕಿ ತಿನ್ನುವುದು ಎರಡೂ ಏಕಕಾಲದಲ್ಲಿ ನಡೆಯಬೇಕು. ಗೂಡನ್ನು ಸರಿಪಡಿಸಿಕೊಳ್ಳುವುದು, ಮೊಟ್ಟೆ ಇಡುವ ಮುನ್ನ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವ ಕೆಲಸವೂ ನಡೆಯುತ್ತಿರುತ್ತದೆ. ಇವೆಲ್ಲವುಗಳನಡುವೆ ಮೇಲೆ ಹಾರುತ್ತಾ ಹೊಂಚು ಹಾಕುವ ಹದ್ದಿನ ಬಗ್ಗೆಯೂ ನಿಗಾ ವಹಿಸಬೇಕು.

‘ತಮ್ಮ ಜೀವವನ್ನು ರಕ್ಷಿಸಿಕೊಳ್ಳುತ್ತಾ, ಮತ್ತೊಂದು ಜೀವಿಯನ್ನು ಜಗಕ್ಕೆ ಕೊಡಲು ಹಕ್ಕಿಗಳು ನಡೆಸುವ ಹೋರಾಟ ಅನುಪಮವಾದದ್ದು. ನಿಸರ್ಗದಲ್ಲಿ ಹಲವು ಕೌತುಕಗಳು ನಡೆಯುತ್ತಿರುತ್ತವೆ. ಇದೊಂದು ಅಗಮ್ಯ, ಅಪ್ರತಿಮವಾದುದು. ನಾವು ಅವನ್ನು ಗಮನಿಸಬೇಕು. ಮನುಷ್ಯನ ಬದುಕಿಗೆ ನಿಸರ್ಗ ಹಲವು ಪಾಠಗಳನ್ನು ಕಲಿಸುತ್ತವೆ. ನಾವು ಕಲಿಯಬೇಕಷ್ಟೆ. ಗಿಣಿಗಳು ಗೂಡು ಮಾಡಲು ನಡೆಸುತ್ತಿರುವ ಹೋರಾಟ, ಪರಿಶ್ರಮ, ಸಣ್ಣ ಕಾರಣಕ್ಕೆ ಜೀವನೋತ್ಸಾಹವನ್ನು ಕಳೆದುಕೊಳ್ಳುವವರಿಗೆ ಪಾಠವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ನಿಸರ್ಗದ ಪಾಠವನ್ನು ಕಲಿಸುವುದು ಬಹಳ ಅಗತ್ಯ’ ಎಂದು ಕೊತ್ತನೂರು ಸ್ನೇಕ್ ನಾಗರಾಜ್ ತಿಳಿಸಿದರು.

*

ಪಕ್ಷಿಗಳು ತೀರಾ ಸೂಕ್ಷ್ಮ ಜೀವಿಗಳು ಮನುಷ್ಯರ ಅಥವಾ ಅಪಾಯದ ಸೂಚನೆ ಕಂಡು ಬಂದರೆ ದೂರದ ಮರದ ಮೇಲೆ ಕುಳಿತು ಎಲ್ಲವನ್ನೂ ಗಮನಿಸುತ್ತವೆ.
-ಕೊತ್ತನೂರು ಸ್ನೇಕ್‌ ನಾಗರಾಜ್‌, ಪರಿಸರವಾದಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !