ಮಕ್ಕಳನ್ನು ಕಾಡುವಕಣ್ಣಿನ ಸಮಸ್ಯೆ

ಮಂಗಳವಾರ, ಜೂನ್ 25, 2019
30 °C

ಮಕ್ಕಳನ್ನು ಕಾಡುವಕಣ್ಣಿನ ಸಮಸ್ಯೆ

Published:
Updated:
Prajavani

ಶಾಲೆ ಮತ್ತೆ ಆರಂಭವಾಗಿದೆ. ಮಗು ಶಾಲೆಯಲ್ಲಿ ಹಲವಾರು ಸೂಕ್ಷ್ಮ ಜೀವಿಗಳಿಗೆ ಎಕ್ಸ್‌ಪೋಸ್ ಆಗುತ್ತದೆ ಮತ್ತು ಅದು ಕಣ್ಣುಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಮಕ್ಕಳ ಕಣ್ಣುಗಳನ್ನು ಆರೋಗ್ಯಕರವಾಗಿಡುವುದು ಮತ್ತು ಸ್ವಚ್ಛವಾಗಿಡುವುದು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಇದು ಸವಾಲಿನ ಕೆಲಸವೂ ಹೌದು. 

ಮಗುವಿನ ಕಣ್ಣಿನ ಪರೀಕ್ಷೆ ಮಾಡಿಸಿ
ಪೋಷಕರು ತಮ್ಮ ಮಕ್ಕಳಿಗೆ ಸಮಗ್ರ ಕಣ್ಣಿನ ಪರೀಕ್ಷೆಯನ್ನು ಮಾಡಿಸಬೇಕು. ಸಮರ್ಪಕವಾದ ದೃಷ್ಟಿಯು ಮಗುವಿನ ಶಿಕ್ಷಣದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಮಗುವು ಮಸುಕಾದ ದೃಷ್ಟಿಯನ್ನು ಹೊಂದಿದ್ದು, ವಿಲಕ್ಷಣತೆಯಿಂದ ಕೂಡಿದ್ದರೆ ಕಲಿಕೆ ಸಮಯವನ್ನು ಕಳೆದುಕೊಳ್ಳುತ್ತದೆ ಮತ್ತು ದೃಷ್ಟಿಯ ಗಂಭೀರ ಸ್ವರೂಪದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸಮಸ್ಯೆಗಳೇನಾದರೂ ಇದ್ದರೆ ಅವುಗಳನ್ನು ಬೇಗನೇ ಪತ್ತೆ ಮಾಡಿ ಚಿಕಿತ್ಸೆ ಕೊಡಿಸಬಹುದು ಮತ್ತು ಗಂಭೀರ ಸ್ವರೂಪಕ್ಕೆ ಹೋಗುವ ಮುನ್ನ ತಡೆಗಟ್ಟಬಹುದು. ಚಿಕ್ಕ ಮಕ್ಕಳನ್ನು ಕಾಡುವ ಅಂಬ್ಲಿಯೋಪಿಯಾ ಅಥವಾ ಲೇಝಿ ಐನಂತಹ ಸಮಸ್ಯೆಗಳನ್ನು ಪತ್ತೆ ಮಾಡಲು ಕಣ್ಣಿನ ಪರೀಕ್ಷೆ ಮಾಡಿಸುವುದು ಉತ್ತಮ.

ಹಣ್ಣು– ತರಕಾರಿಯುಕ್ತ ಲಂಚ್‌ ಬಾಕ್ಸ್‌
ಪಾಲಕ್‌, ಬಸಳೆ ಮತ್ತು ಬ್ರೊಕೊಲಿಯಂತಹ ಹಸಿರು ಎಲೆಯ ತರಕಾರಿಗಳು ಮತ್ತು ಹಣ್ಣುಗಳನ್ನು ತುಂಬಿದ ಲಂಚ್‌ ಬಾಕ್ಸ್‌ ಪ್ಯಾಕ್ ಮಾಡಿ. ಕಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಪೂರಕವಾದ ಆರೋಗ್ಯಕಾರಿ ವಿಟಮಿನ್‌ಗಳನ್ನು ಈ ಹಣ್ಣು– ತರಕಾರಿಗಳು ಹೊಂದಿವೆ. ಮೀನು ಕೂಡ ಬೆರೆಸಿ. ಇದರಲ್ಲಿ ಒಮೆಗಾ-3 ಕೊಬ್ಬಿನ ಕ್ಷಾರ, ನಟ್ ಇರುತ್ತವೆ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಹಳದಿ ರಂಗಿನ ಕ್ಯಾರೆಟ್, ಮಾವಿನಹಣ್ಣು ಮತ್ತು ಪಪ್ಪಾಯದಂತಹ ಹೆಚ್ಚು ಬೇಟಾ-ಕ್ಯಾರೋಟಿನ್ ಅಂಶವಿರುವ ಹಣ್ಣು– ತರಕಾರಿಗಳನ್ನು ಮಕ್ಕಳಿಗೆ ನೀಡಿ. ಇವುಗಳು ನಮ್ಮ ದೇಹಕ್ಕೆ ಕಣ್ಣಿನ ಸ್ನೇಹಿ ವಿಟಮಿನ್-ಎ ಅಂಶವನ್ನು ನೀಡುತ್ತವೆ.

ಮಕ್ಕಳು ಚಟುವಟಿಕೆಯಿಂದ ಕೂಡಿದ್ದರೆ ಮತ್ತು ಆರೋಗ್ಯಕರವಾದ ತೂಕವನ್ನು ಹೊಂದಿದ್ದರೆ ಇಂತಹ ಸಮಸ್ಯೆಗಳ ಅಪಾಯದಿಂದ ದೂರವಿರಬಹುದು.

ಕಣ್ಣು ಮಿಟುಕಿಸುವುದನ್ನು ಗಮನಿಸಿ
ಮಕ್ಕಳಿಗೆ ಸ್ಪಷ್ಟ ಮತ್ತು ಮಸುಕಾದ ದೃಷ್ಟಿಯ ನಡುವಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಒಂದು ವೇಳೆ ಸ್ಕ್ವಿಂಟಿಂಗ್, ಟಿವಿ ಮುಂದೆ ತುಂಬಾ ಹತ್ತಿರವಾಗಿ ಕುಳಿತುಕೊಳ್ಳುವುದು ಅಥವಾ ಓದುವ ಸಂದರ್ಭದಲ್ಲಿ ಒಂದು ಕಣ್ಣನ್ನು ಮುಚ್ಚಿದರೆ ಆಗ ಕನ್ನಡಕದ ಅಗತ್ಯವಿರುತ್ತದೆ.

ಆಟದ ವೇಳೆಯಲ್ಲಿ ಕಣ್ಣಿನ ರಕ್ಷಣೆ ಮಾಡಿ
ಮಕ್ಕಳು ಆಟವಾಡುತ್ತಿರುವಾಗ ಕಣ್ಣುಗಳಿಗೆ ಹೆಚ್ಚಿನ ಗಾಯಗಳಾಗುತ್ತವೆ ಮತ್ತು ಸೂಕ್ತ ರೀತಿಯಲ್ಲಿ ರಕ್ಷಣಾತ್ಮಕವಾದ ಐವೇರ್‌ಗಳನ್ನು ಧರಿಸಿದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು. ಪಠ್ಯೇತರ ಚಟುವಟಿಕೆಗಳ ಸಂದರ್ಭದಲ್ಲಿ ಮಕ್ಕಳ ಕಣ್ಣಿನ ಸುರಕ್ಷತೆ ಮಾಡುವ ನಿಟ್ಟಿನಲ್ಲಿ ಯಾವ ರೀತಿಯ ಸುರಕ್ಷತಾ ಐವೇರ್‌ಗಳನ್ನು ಧರಿಸಬೇಕೆಂಬುದರ ಬಗ್ಗೆ ನಿಮ್ಮ ಕಣ್ಣಿನ ವೈದ್ಯರ ಸಲಹೆಗಳನ್ನು ಪಡೆಯಿರಿ.

ಸ್ಕ್ರೀನ್ ಬ್ರೇಕ್‌ಗಳನ್ನು ತೆಗೆದುಕೊಳ್ಳಿ
ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು, ಟಿವಿ ನೋಡುವುದರಿಂದ, ಟ್ಯಾಬ್ಲೆಟ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಆಟವಾಡುವುದರಿಂದ ಮಕ್ಕಳ ಕಣ್ಣುಗಳಿಗೆ ವಿಶ್ರಾಂತಿ ನೀಡುವ ದೆಸೆಯಲ್ಲಿ ಮಕ್ಕಳಿಗೆ ಸ್ಕ್ರೀನ್ ಬ್ರೇಕ್ ನೀಡಿ. ಸ್ಕ್ರೀನ್ ಮತ್ತು ಕಣ್ಣುಗಳ ನಡುವೆ ಸೂಕ್ತ ಅಂತರ ಇಟ್ಟು ಕುಳಿತುಕೊಳ್ಳುವಂತೆ ನಿಮ್ಮ ಮಕ್ಕಳಿಗೆ ವಿವರಿಸಬೇಕು ಮತ್ತು ಹೀಗೆ ಮಾಡುವುದರಿಂದ ಕಣ್ಣಿಗೆ ಆಗುವ ಆಯಾಸವನ್ನು ತಡೆಗಟ್ಟಬಹುದು ಎಂಬುದನ್ನು ತಿಳಿ ಹೇಳಿ.

ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಪುಸ್ತಕವನ್ನು ಓದುವಾಗ ಸೂಕ್ತ ಬೆಳಕು ಇರುವ ಜಾಗದಲ್ಲಿ ಕುಳಿತುಕೊಳ್ಳುವಂತೆ ಹೇಳಿ. ಇದರಿಂದ ಸ್ಕ್ರೀನ್ ಅಥವಾ ಪುಟಗಳನ್ನು ಓದುವಾಗ ಮಕ್ಕಳ ಕಣ್ಣಿಗೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. 20/ 20/ 20 ನಿಯಮವನ್ನು ಪ್ರಯತ್ನಿಸಿ: ಪ್ರತಿ 20 ನಿಮಿಷಕ್ಕೆ ಒಮ್ಮೆ 20 ಅಡಿ ದೂರದವರೆಗೆ 20 ಸೆಕೆಂಡುಗಳ ಕಾಲ ನೋಡುವಂತೆ ತಿಳಿಸಿ.

ಕೈಗಳನ್ನು ತೊಳೆಯಿರಿ
ವಿಶೇಷವಾಗಿ ಶಾಲೆಯಲ್ಲಿ ಮಕ್ಕಳು ಸೂಕ್ಷ್ಮಜೀವಿಗಳೊಂದಿಗೆ ಸಂಪರ್ಕಕ್ಕೆ ಬರಬಹುದು. ಕಣ್ಣುಗಳನ್ನು ಮುಟ್ಟದಂತೆ ಮತ್ತು ಕೈಗಳನ್ನು ತೊಳೆಯುವುದರಿಂದ ಕಣ್ಣುಗಳ ಸೋಂಕು ತಪ್ಪಿಸಬಹುದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಸೂಕ್ಷ್ಮಜೀವಿಗಳ ಸಂಪರ್ಕ, ಧೂಳು ಮತ್ತು ಬೇರೆ ವಸ್ತುಗಳು ಕಣ್ಣಿನ ಒಳಗೆ ಪ್ರವೇಶಿಸುವ ಅಪಾಯ, ಕಣ್ಣುಗಳನ್ನು ಉಜ್ಜುವುದರಿಂದ ಒರಟಾಗುವುದು ಅಥವಾ ಕಾರ್ನಿಯಾದಲ್ಲಿ ಸಣ್ಣ ಗುಳ್ಳೆಗಳು ಬರುವ ಅಪಾಯವಿರುತ್ತದೆ. ಕಣ್ಣಿಗೆ ಆಗಬಹುದಾದ ಗಾಯವನ್ನು ಮತ್ತು ಕಣ್ಣಿನ ರೋಗವನ್ನು ತಡೆಗಟ್ಟಲು, ಮಕ್ಕಳು ಕಣ್ಣನ್ನು ಮುಟ್ಟಿಕೊಳ್ಳುವ ಮುನ್ನ ಕೈಗಳನ್ನು ತೊಳೆಯಬೇಕು ಮತ್ತು ಒಂದು ವೇಳೆ ಕಣ್ಣಿನಲ್ಲಿ ಕಿರಿಕಿರಿ ಉಂಟಾದರೆ ಕಣ್ಣಿಗೆ ನೀರನ್ನು ಎರಚಬೇಕು.

ಶೇಡ್‌ಗಳನ್ನು ಧರಿಸಿ
ಅತಿ ನೇರಳೆ ಕಿರಣ ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದೆ, ಶೇ 100ರಷ್ಟು ಈ ಕಿರಣದಿಂದ ರಕ್ಷಣೆ ನೀಡುವ ಸನ್‌ಗ್ಲಾಸ್ ಆಯ್ಕೆ ಮಾಡಿಕೊಳ್ಳಿ. ಮಕ್ಕಳ ಕಣ್ಣುಗಳು ಅತಿ ನೇರಳೆ ಕಿರಣವನ್ನು ಫಿಲ್ಟರ್ ಮಾಡುವುದಿಲ್ಲ. ಯುವಿ ಎಕ್ಸ್‌ಪೋಸರ್ ಮೋಡ ಕವಿದ ದಿನಗಳಲ್ಲೂ ಅಪಾಯವನ್ನು ತಂದೊಡ್ಡುತ್ತದೆ. ಸಮಸ್ಯೆ ಇಲ್ಲದಿದ್ದರೂ ಮಕ್ಕಳ ಕಣ್ಣುಗಳನ್ನು ವರ್ಷಕ್ಕೆ ಒಮ್ಮೆ ಮತ್ತು ಕನ್ನಡಕ ಧರಿಸುವ ಮಕ್ಕಳ ಕಣ್ಣುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು.

ಸೂಕ್ತ ವಿಶ್ರಾಂತಿ ಇರಲಿ
ಮಕ್ಕಳು ಶಾಲೆ ಇಲ್ಲದಿರುವ ಸಂದರ್ಭದಲ್ಲಿ ಬಹುತೇಕ ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿ ಅಥವಾ ಕಂಪ್ಯೂಟರಿನಲ್ಲಿ ಕೆಲಸ ಮಾಡುವುದರಲ್ಲಿ ಕಳೆಯುತ್ತಾರೆ. ಆದರೆ, ಅವರಿಗೆ ಸೂಕ್ತವಾದ ವಿಶ್ರಾಂತಿಯ ಅಗತ್ಯವೂ ಇದೆ. ಒಂದು ವೇಳೆ ಸೂಕ್ತ ವಿಶ್ರಾಂತಿ ದೊರೆಯದಿದ್ದರೆ ಸುಸ್ತಾಗುವುದು, ಕಿರಿಕಿರಿ ಅನುಭವಿಸುವುದು ಮತ್ತು ಕಲಿಕಾ ಸಮಸ್ಯೆಗಳು ಎದುರಾಗುತ್ತವೆ. ಉತ್ತಮವಾದ ನಿದ್ದೆ, ತಾಜಾ ಗಾಳಿ ಸೇವನೆಗೆ ಹೊರ ಹೋಗುವುದು ಮತ್ತು ವ್ಯಾಯಾಮ ಮಾಡುವುದು ಆರೋಗ್ಯಕರವಾದ ಕಣ್ಣುಗಳಿಗೆ ಮುಖ್ಯ.

ಕಣ್ಣುಗಳು ಸಾಕಷ್ಟು ವಿಶ್ರಾಂತಿ ಪಡೆದರೆ ಕಣ್ಣಿನ ಒತ್ತಡ, ಡ್ರೈ ಐ, ಮಸುಕಾದ ದೃಷ್ಟಿ, ತಲೆನೋವು, ಬೆನ್ನು ನೋವು ಇತ್ಯಾದಿ ಅಪಾಯಗಳ ಪ್ರಮಾಣ ಕಡಿಮೆಯಾಗುತ್ತದೆ. ಉತ್ತಮವಾದ ವಾತಾವರಣದಲ್ಲಿ ಮಕ್ಕಳು ಓದಲು ಮತ್ತು ಬರೆಯಲು ಅವಕಾಶ ಮಾಡಿಕೊಡುವುದು ಅತ್ಯಂತ ಪ್ರಮುಖವಾದ ಅಂಶ. ನಿದ್ದೆಯ ಸ್ಥಿತಿಯಲ್ಲಿ ಓದುವುದನ್ನು ತಪ್ಪಿಸಿ; ಕಣ್ಣುಗಳು ಒಣಗಲು ಕಾರಣವಾಗುವ ಸೆಲ್ ಫೋನ್‌ಗಳು/ ಐ-ಪಾಡ್‌ನಂತಹ ಗ್ಯಾಜೆಟ್‌ಗಳನ್ನು ಬಳಸುವುದನ್ನು ಆದಷ್ಟೂ ಕಡಿಮೆ ಮಾಡಿ.

(ಲೇಖಕರು ಬೆಂಗಳೂರಿನ ಡಾ.ಅಗರವಾಲ್‌ ಕಣ್ಣಿನ ಆಸ್ಪತ್ರೆಯ ಪೀಡಿಯಾಟ್ರಿಕ್ ಆಪ್ತೊಲ್ಮೋಲಾಜಿ, ನ್ಯೂರೋ ಆಪ್ತೊಲ್ಮೋಲಾಜಿ ತಜ್ಞರು)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !