ಬುಧವಾರ, ಸೆಪ್ಟೆಂಬರ್ 18, 2019
22 °C

ತುರೇಮಣೆಯ ರೌಂಡಪ್‌

Published:
Updated:
Prajavani

ಎದ್ಬನ್ನಿ ರೆಸಾರ್ಟಿನ ಒಳಗೆ ಅದೇನು ನಡಿತಾ ಅದೆ ತಿಳಕೊಳ್ಳುವ ಕುತೂಹಲಕ್ಕೆ ತುರೇಮಣೆ ಒಳಹೊಕ್ಕ. ಟವಲ್ಲಿಂದ ಬೆವರು, ಕಣ್ಣೀರು ಒರೆಸಿಕೊಂಡು ತಾಕತ್ ಕೀ ದವಾ ಕುಡೀತಾ ಸಿ.ಎಂ. ನಿಂತಿದ್ದರು. ಒಳಗೆ ಬಂದ ಒಬ್ಬರನ್ನ ‘ಕಾರ್ಪೆಂಟರ್ ಬ್ರದರ್ ಬನ್ನಿ, ನನ್ನ ಸಿಂಹಾಸನದ ಕಾಲುಗಳು ಲೂಸಾಗವೆ. ಫೆವಿಕಾಲು ಹಾಕಿ ಮೊಳೆ ಹೊಡೆದು ಟೈಟ್ ಮಾಡಿ’ ಅಂತಂದು ತುರೇಮಣೆಗೆ ‘ಬ್ರದರ್ 20 ವಿಕೆಟ್ ಬೀಳ್ತಾ ಅವಂತೆ ನೋಡಿಕೊಂಡು ಬಂದು ಹೇಳಿ’ ಅಂದು ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಅಂತ ಒಳಗೋದರು.

ತುರೇಮಣೆ, ರಾಗಾ ಪಕ್ಷದ ಆಫೀಸಿನ ಕಡೆಗೆ ಬಂದ. ಅಲ್ಲಿ ಒಂದೇ ಕೂಗಾಟ ‘ಬ್ಯಾರೆಯೋರ ಮುಂದೆ ಉಜ್ಜಿ ಉಜ್ಜಿ ಅಂಗೈ ಸವದೋಗದೆ. ನಮಗೆ ಆದ್ಯತೆ ಸಿಕ್ತಾ ಇಲ್ಲ. ನಾವು 21ಕ್ಕೆ ಸುಮ್ಮಾನ ಮನಸ್ಕರ ಸಭೆ ಮಾಡ್ತೀವಿ. ನಮ್ಮದೇ ಸಿ.ಎಂ., ನಮ್ಮದೇ ಸರ್ಕಾರ ಬೇಕು’ ಅಂತ ಸಮಶೇಖರ್ ಸುರೇಂದ್ರಸ್ವಾಮಿ ಕೂಗ್ತಿದ್ರೆ, ಟಗರು ‘ಐ ವಾಸ್ ಎಕ್ಸ್‌ಪೆಲ್ಡ್ ಫ್ರಂ ತೆನೆ’ ಅಂತಿತ್ತು. ತುರೇಮಣೆ ಸುಮ್ಮನಿರಲಾರದೆ ಅಲ್ಲಿದ್ದ ಸನಕಪುರದ ಕಾರ್ಯಕರ್ತರನ್ನ ಕೇಳಿದ ‘ನಿಮ್ಮವೇ 20 ಕುದುರೆಗಳು ಕಮಲಕ್ಕೋಗವಂತೆ ಸರ್ಕಾರ ಹೆಂಗಾದದು?’

‘ಇದೆಲ್ಲಾ ಧವಳಣ್ಣ, ರಾಮುಲಣ್ಣ, ಅಶೋಕಣ್ಣನಂತಹಾ ದೊಡ್ಡವರಿಗೆ ಬೀಳ್ತಾ ಇರೋ ಕನಸುಗಳು ತುರೇಮಣೆ. ನಾವು ಸಾಮಾನ್ಯ ಕಾರ್ಯಕರ್ತರು. ನಮಗೆ ಇಂಥಾ ಕನಸುಗಳು ಬೀಳಲ್ಲ’ ಅಂದ್ರು ಅವರು. ತುರೇಮಣೆ 20-21 ಆಯ್ತು ಇನ್ನು 22 ನೋಡುಮಾ ಅಂತ ಹೊರಟ.

‘ಕ್ಷೇತ್ರದ ಅಭಿವೃದ್ಧಿಗಾಗಿ 20 ಜನ ನಮ್ಮ ಕಡೆ ಬರ್ತಿದ್ದಾರೆ. ಎರಡು ಉಪಚುನಾವಣೆಗಳು ನಮ್ಮವೇ. ನಮ್ಮದೇ 130 ಆಗುತ್ತೆ. ಮಿಶನ್ 22 ಯಶಸ್ವಿಯಾಗ್ತಿದೆ. ಡೆಲ್ಲೀಲಿ ಮೋದೀಜಿ, ಇಲ್ಲಿ ನಾನು ಪ್ರಮಾಣ ವಚನ ಸ್ವೀಕಾರ ಮಾಡ್ತೀವಿ. ಒಳಗೆ ಹೊಸಾ ಮಂತ್ರಿಗಳ ಪಟ್ಟಿ ಸಿದ್ಧವಾಗ್ತಾ ಇದೆ! ನೋಡ್ತೀರಾ? ಆಹಾ ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ!’ ಅಂತಾ ಎರಡು ಬೆರಳು ಅಲ್ಲಾಡಿಸ್ತಾ ಕರಗಿಹೋದರು ಧವಳಪ್ಪನವರು.

Post Comments (+)