ಶುಕ್ರವಾರ, ಏಪ್ರಿಲ್ 3, 2020
19 °C

ಅಲ್ಪಸಂಖ್ಯಾತರ ಕುರಿತ ತೋರಿಕೆಯ ಕಾಳಜಿ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಅಲ್ಪಸಂಖ್ಯಾತರ ಕುರಿತ ತೋರಿಕೆಯ ಕಾಳಜಿ

ಈ ವಿಷಯದ ಕುರಿತು ನಾವು ಮೊದಲು, ನಮ್ಮ ನ್ಯಾಯಮೂರ್ತಿಗಳು ಅನುಸರಿಸುವ ತೋರಿಕೆಯ ವಾಸ್ತವಾಂಶಗಳನ್ನು ಪರಿಗಣಿಸಿ ತೀರ್ಮಾನಕ್ಕೆ ಬರುವಂತೆ ಈ ವಾದವನ್ನು ಪರಿಶೀಲಿಸೋಣ. ಆನಂತರ ಈ ವಾದ ಒಳ್ಳೆಯದೊ ಅಥವಾ ಕೆಟ್ಟದ್ದೋ ಎನ್ನುವ ಅಂತಿಮ ನಿರ್ಧಾರಕ್ಕೂ ಬರೋಣ. ಮೊಹಮ್ಮದ್‌ ಹಮೀದ್‌ ಅನ್ಸಾರಿ ಅವರು ಉಪರಾಷ್ಟ್ರಪತಿ ಹುದ್ದೆ ತೊರೆಯುತ್ತಿದ್ದಂತೆ, ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ಕಳೆದ 50 ವರ್ಷಗಳಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಲೋಕಸಭಾಧ್ಯಕ್ಷ ಮತ್ತು ರಕ್ಷಣೆ, ಗೃಹ, ವಿದೇಶಾಂಗ ವ್ಯವಹಾರದಂತಹ ಪ್ರಮುಖ ಸಚಿವ ಹುದ್ದೆಗಳನ್ನು ಅಲ್ಪಸಂಖ್ಯಾತರು ನಿಭಾಯಿಸಿದ ನಿದರ್ಶನಗಳೇ ಇಲ್ಲ. ನನ್ನ ವಾದ ತಪ್ಪು ಎಂದು ಸಾಬೀತುಪಡಿಸಲು ನೀವು ಜಾರ್ಜ್‌ ಫರ್ನಾಂಡಿಸ್‌ ಅವರ ಉದಾಹರಣೆ ನೀಡುವಿರಿ ಎಂಬುದನ್ನು ನಾನು ಬಲ್ಲೆ. ಮುಸ್ಲಿಮರು, ಕ್ರೈಸ್ತರಷ್ಟೇ ಅಲ್ಪಸಂಖ್ಯಾತರಲ್ಲ. ಸಿಖ್‌ರೂ ಅಲ್ಪಸಂಖ್ಯಾತರು ಎನ್ನುವುದನ್ನು ಮಾತ್ರ ದಯವಿಟ್ಟು ಮರೆಯಬೇಡಿ.

ನರೇಂದ್ರ ಮೋದಿ ಅವರ ಸಚಿವ ಸಂಪುಟದ ಸದಸ್ಯರ ಹೆಸರುಗಳನ್ನು ಒಮ್ಮೆ ಪರಿಶೀಲಿಸಿ. ಕ್ಯಾಬಿನೆಟ್‌ ದರ್ಜೆಯ ಸಚಿವರ ಪೈಕಿ ಒಬ್ಬರು ಮಾತ್ರ ಅಲ್ಪಸಂಖ್ಯಾತರ ಬಣಕ್ಕೆ ಸೇರಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಅಕಾಲಿ ದಳದ ಹರ್‌ಸಿಮ್ರತ್‌ ಕೌಲ್‌ ಬಾದಲ್‌ ಅವರು ಅತ್ಯಂತ ಮಹತ್ವದ ಆಹಾರ ಸಂಸ್ಕರಣಾ ಸಚಿವರಾಗಿದ್ದಾರೆ. ಸಚಿವೆಯ ಬೆಂಬಲಿಗರಂತೂ ಅದೊಂದು ಉಪ್ಪಿನಕಾಯಿ, ಜಾಮ್‌, ಹಣ್ಣಿನ ರಸ, ಚಟ್ನಿಪುಡಿಯ ಸಚಿವ ಹುದ್ದೆಯಾಗಿದೆಯಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೆಳ ಹಂತದ ಸಚಿವರ ಪಟ್ಟಿ ಮೇಲೆ ಕಣ್ಣಾಡಿಸುತ್ತ ಹೋದಂತೆ, ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರು ಸ್ವತಂತ್ರ ಕಾರ್ಯನಿರ್ವಹಣೆಯ ರಾಜ್ಯ ಸಚಿವರಾಗಿದ್ದು, ಅಲ್ಪಸಂಖ್ಯಾತರನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದಾರೆ ಎನ್ನುವ ಇನ್ನೊಂದು ಮಹತ್ವದ ಸಂಗತಿಯನ್ನು ಮರೆಯಬೇಡಿ. ಎಂ. ಜೆ. ಅಕ್ಬರ್‌ ಅವರೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.

ಕ್ರೈಸ್ತರ ಯಾವೊಬ್ಬ ಪ್ರತಿನಿಧಿಯೂ ಇಲ್ಲದಿರುವುದು ಕೂಡ ಪ್ರಧಾನಿ ಮೋದಿ ಸಂಪುಟದ ವೈಶಿಷ್ಟ್ಯತೆಗಳಲ್ಲಿ ಒಂದು. ಕ್ರೈಸ್ತ ಸಮುದಾಯ ಪ್ರಾಬಲ್ಯ ಹೊಂದಿರುವ ಈಶಾನ್ಯದ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯ ಮಿತ್ರ ಪಕ್ಷಗಳೇ ಅಧಿಕಾರದಲ್ಲಿ ಇರುವಾಗ ಅವರ ಯಾವೊಬ್ಬ ಪ್ರತಿನಿಧಿಯೂ ಕೇಂದ್ರ ಸಚಿವ ಸಂಪುಟದಲ್ಲಿ ಇಲ್ಲ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ ಹೊರತುಪಡಿಸಿ, ದೇಶದ ಉಳಿದ 24 ರಾಜ್ಯಗಳಲ್ಲಿಯೂ ಅಲ್ಪಸಂಖ್ಯಾತರಿಗೆ ಸೇರಿದ ಯಾರೊಬ್ಬರೂ ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿಲ್ಲ. ಇದು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಇನ್ನೂ ಮುಂದಕ್ಕೆ ಓದಿ.

ಇಂದಿರಾ ಗಾಂಧಿ ಅವರ ಉಚ್ಛ್ರಾಯ ದಿನಗಳ ನಂತರ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಬಿಜೆಪಿಯು ಸದ್ಯಕ್ಕೆ ಅತ್ಯಂತ ಬಲಿಷ್ಠ ರಾಷ್ಟ್ರೀಯ ರಾಜಕೀಯ ಪಕ್ಷವಾಗಿದೆ. ಅಧಿಕಾರ ಅನುಭವಿಸುತ್ತಿರುವವರನ್ನು ಹೊರತುಪಡಿಸಿದರೆ, ಶಹನವಾಜ್‌ ಹುಸೇನ್‌, ಎಸ್‌. ಎಸ್‌. ಅಹ್ಲುವಾಲಿಯಾ ಮತ್ತು ತಜಿಂದರ್‌ ಪಾಲ್‌ ಬಗ್ಗಾ (ದೆಹಲಿಯಲ್ಲಿ ಬಿಜೆಪಿಯ ವಕ್ತಾರ) ಅವರು ಬಿಜೆಪಿಯಲ್ಲಿ ಕೆಲಮಟ್ಟಿಗೆ ಗಮನ ಸೆಳೆಯುತ್ತಾರೆ.

ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ಎಡಪಕ್ಷ ಮತ್ತು ಇತರ ಪ್ರಮುಖ ಪಕ್ಷಗಳಲ್ಲೂ ಇದೇ ಬಗೆಯ ವಾತಾವರಣ ಇದೆ ಎಂದು ಓದುಗರು ಪ್ರತಿವಾದ ಮಂಡಿಸಬಹುದು.

ನಮ್ಮ ರಾಜಕೀಯವು ಅತ್ಯಂತ ವಿರೋಧಾಭಾಸದ ವಶೀಕರಣ ಮಂತ್ರ ಒಳಗೊಂಡಿದೆ. ಎಲ್‌. ಕೆ. ಅಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರು (ನಾನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಅಡ್ವಾಣಿ ಹೆಸರನ್ನು ಮೊದಲಿಗೆ ಪ್ರಸ್ತಾಪಿಸಿರುವೆ) ಪಕ್ಷವನ್ನು ಪುನರುತ್ಥಾನಗೊಳಿಸುವಾಗ ಹಿಂದೂ ಬಹುಸಂಖ್ಯಾತರಲ್ಲಿನ ಅಲ್ಪಸಂಖ್ಯಾತ ಸಂಕೀರ್ಣತೆ ಆಧರಿಸಿಯೇ ಪಕ್ಷವನ್ನು ಬಲಪಡಿಸಿದರು.

ಕಾಂಗ್ರೆಸ್ ಪಕ್ಷದ ದಶಕಗಳ ಆಡಳಿತಾವಧಿಯಲ್ಲಿ ನೆಹರೂ ಅವರ ಸರಳ ಧರ್ಮನಿರಪೇಕ್ಷ ವಾದದ ಫಲವಾಗಿ ಇಂದಿರಾ ಗಾಂಧಿ ಅವರೂ ಅಲ್ಪಸಂಖ್ಯಾತರ ರಕ್ಷಕರಾಗಿರುವಂತೆ ಕಂಡು ಬಂದರು. ರಾಜೀವ್‌ ಗಾಂಧಿ ಅವರಂತೂ ಶಾ ಬಾನೊ ಪ್ರಕರಣದಲ್ಲಿ ಅಲ್ಪಸಂಖ್ಯಾತರಿಗೆ ಸಂಪೂರ್ಣವಾಗಿ ಶರಣಾಗತರಾಗಿದ್ದರು, ರಾಜೀವ್‌ ನಿಲುವು ಅದೆಷ್ಟರ ಮಟ್ಟಿಗೆ ನಾಟಕೀಯವಾಗಿತ್ತು ಎಂದರೆ, ಅವರದ್ದೇ ‍ಪಕ್ಷದ ಉದಾರವಾದಿ ಮುಸ್ಲಿಮರೇ ಈ ಬಗ್ಗೆ ಚಕಿತಗೊಂಡಿದ್ದರು.

ಅಲೀಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರಾಜಕೀಯದಿಂದ ಬೆಳೆದು ಬಂದಿದ್ದ ರಾಜೀವ್‌ ಸಂಪುಟದಲ್ಲಿ ರಾಜ್ಯ ಸಚಿವರಾಗಿದ್ದ ಅರಿಫ್‌ ಮೊಹಮ್ಮದ್‌ ಖಾನ್‌ ಅವರು, ಈ ನಿರ್ಧಾರ ಪ್ರತಿಭಟಿಸಿ ಸಂಪುಟದಿಂದ ಹೊರ ನಡೆದಿದ್ದರು. ಹಿಂದೂ ಸಂಹಿತೆ ಮಸೂದೆ ಜಾರಿಗೆ ತರಲು ಮುಂದಾಗಿದ್ದ ಕಾಂಗ್ರೆಸ್‌ ಪಕ್ಷದ ಸುಧಾರಣಾ ಉತ್ಸಾಹಕ್ಕೆ ಹೋಲಿಸಿದರೆ ಹಿಂದೂ ಸಂಪ್ರದಾಯವಾದಿಗಳ ದೃಷ್ಟಿಯಲ್ಲಿ ಇದು ತೀವ್ರ ವಿರೋಧಾಭಾಸದ ಧೋರಣೆಯಾಗಿ ಕಂಡಿತ್ತು.

ಬಹುಸಂಖ್ಯಾತರಲ್ಲಿನ ಇಂತಹ ಅಲ್ಪಸಂಖ್ಯಾತ ಸಂಕೀರ್ಣ ಭಾವವು ಅಡ್ವಾಣಿ ಅವರಿಗೂ ಆರಂಭದಲ್ಲಿ ಬಿಜೆಪಿಯ ನೆಲೆ ವಿಸ್ತರಿಸಲು ನೆರವಾಗಿತ್ತು. ಈ ಭಾವವು ಭಾರತದ ರಾಜಕೀಯವನ್ನು ಮೂಲಭೂತ ನೆಲೆಯಲ್ಲಿ ಬದಲಾಯಿಸಿತ್ತು. ಅದರ ಪರಿಣಾಮವಾಗಿಯೇ ಇಂದಿನ ಅಲ್ಪಸಂಖ್ಯಾತ ಮುಕ್ತ ಭಾರತ ಸರ್ಕಾರವನ್ನು ನಾವಿಂದು ಕಾಣುತ್ತಿದ್ದೇವೆ.

1993-94ರಲ್ಲಿ ನಾನು ಲಂಡನ್ನಿನ ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆಗೆ (ಐಐಎಸ್‌ಎಸ್) ‘ಪಾತ್ರ ಮರು ವ್ಯಾಖ್ಯಾನಿಸಿಕೊಂಡ ಭಾರತ’ (India Redefines its Role) ವಿಷಯದ ಕುರಿತು ಪ್ರಬಂಧ ಬರೆದಿದ್ದೆ. ಬಿಜೆಪಿಯು ಭಾರತದ ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆಯುವ ಸಾಧ್ಯತೆಯನ್ನು ನಾನು ಆ ಲೇಖನದಲ್ಲಿ ವಿವರವಾಗಿ ಚರ್ಚಿಸಿದ್ದೆ.

ಅಟಲ್‌ ಬಿಹಾರಿ ವಾಜಪೇಯಿ ಅವರು ತಾವು ಎದುರಿಸಿದ ಮೊದಲ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತ, ಈ ಲೇಖನವನ್ನು ಉಲ್ಲೇಖಿಸಿದ್ದರು. ಹಿಂದೂ ಬಹುಸಂಖ್ಯಾತರಲ್ಲಿ ಅಲ್ಪಸಂಖ್ಯಾತರ ಕುರಿತು ಸಂಕೀರ್ಣ ಭಾವನೆ ಮನೆ ಮಾಡಿರುವ ಕುರಿತು ಅವರು ತುಂಬ ವಿಷಾದ ಭಾವದಲ್ಲಿ ಮಾತನಾಡುತ್ತ, ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಪ್ರತಿಪಾದಿಸಿದ್ದರು.

ಬಹುಸಂಖ್ಯಾತರಲ್ಲಿನ ಈ ಬಗೆಯ ಅಲ್ಪಸಂಖ್ಯಾತ ಸಂಕೀರ್ಣ ಭಾವವನ್ನು ಸಮರ್ಥಿಸಿಕೊಳ್ಳುವ ಬದಲಿಗೆ ಅವರು ಆ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಜತೆಗೆ, ಈ ಬಗ್ಗೆ ಏನನ್ನಾದರೂ ಮಾಡುವ ಬಗ್ಗೆ ಭರವಸೆಯನ್ನೂ ನೀಡಿದ್ದರು. ಬಹುಸಂಖ್ಯಾತರಲ್ಲಿ ಮನೆ ಮಾಡಿರುವ ಕಳವಳವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರಿಂದಲೇ 1998ರಲ್ಲಿ ಅವರನ್ನು ಬಹುವಾಗಿ ಶ್ಲಾಘಿಸಲಾಗಿತ್ತು.

ಅಲ್ಲಿಂದಾಚೆಗಿನ ಎರಡು ದಶಕಗಳ ನಂತರ, ಅಲ್ಪಸಂಖ್ಯಾತರಲ್ಲಿ ಇದೇ ಬಗೆಯ ಭಾವನೆ ಇರುವುದನ್ನು ಪ್ರಸ್ತಾಪಿಸಿದ ಕಾರಣಕ್ಕೆ ಹಮೀದ್‌ ಅನ್ಸಾರಿ ಅವರ ವಿರುದ್ಧ ಈಗ ಟೀಕಾಪ್ರಹಾರ ಮಾಡಲಾಗುತ್ತಿದೆ.

ವಾಜಪೇಯಿ ಅವರ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸಿದ ರೀತಿಯಲ್ಲಿಯೇ ಈಗ ಅನ್ಸಾರಿ ಅವರ ನಿಲುವನ್ನೂ ಪರಿಗಣಿಸಬೇಕಾಗಿದೆ. ವಾಜಪೇಯಿ ಅವರ ನಿಲುವು ಸರಿ ಎಂದು ಭಾವಿಸಿದರೆ, ನಮ್ಮ ರಾಜಕೀಯವು ಅದನ್ನು ನಂತರ ಸರಿಪಡಿಸಿತೇ. ಅದು ನಿಜವೇ ಆಗಿದ್ದರೆ, ಅನ್ಸಾರಿ ಅವರೂ ಪ್ರಾಮಾಣಿಕ ಕಳವಳ ವ್ಯಕ್ತಪಡಿಸಿರುವರೇ.

ಅಭದ್ರತೆ ಭಾವನೆ ದೂರ ಮಾಡಿ ಆಗಿರುವ ತಪ್ಪು ಸರಿಪಡಿಸಲು ಅವರು ಕರೆ ಕೊಟ್ಟಿರುವರೇ. ಈ ಬಗ್ಗೆ ಅಲ್ಪಸಂಖ್ಯಾತರಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆಯೇ. ಅವರೂ ಈ ಬಗ್ಗೆ ಕಳವಳ ಹೊಂದಿರುವರೇ ಮುಂತಾದ ಪ್ರಶ್ನೆಗಳು ಇಲ್ಲಿ ಉದ್ಭವಗೊಳ್ಳುತ್ತವೆ.

ಮೂರು ಪ್ರಜಾಸತ್ತಾತ್ಮಕ ದೇಶಗಳಲ್ಲೂ ಅಲ್ಪಸಂಖ್ಯಾತರ ಕುರಿತು ಇದೇ ಬಗೆಯ ಚರ್ಚೆ ನಡೆಯುತ್ತಿದೆ. 1993ರಲ್ಲಿ ಇಸ್ರೇಲ್‌ ಪ್ರಧಾನಿ ಶಿಮೊನ್‌ ಪೆರೆಸ್‌ ಅವರು ನನಗೆ ನೀಡಿದ್ದ ಸಂದರ್ಶನದಲ್ಲಿ, ‘ಮುಸ್ಲಿಂ ಅಲ್ಪಸಂಖ್ಯಾತರೂ ಸೇರಿದಂತೆ ತಮ್ಮ ಎಲ್ಲ ಮತದಾರರಿಗೆ ನ್ಯಾಯೋಚಿತ ಮತದಾನದ ಹಕ್ಕು ನೀಡಿದ ದೇಶಗಳಲ್ಲಿ ಭಾರತ ಮತ್ತು ಇಸ್ರೇಲ್‌ ಮುಂಚೂಣಿಯಲ್ಲಿ ಇವೆ’ ಎಂದು ಹೇಳಿದ್ದರು.

ಇಸ್ರೇಲ್‌, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದ್ದರೂ ಅವರಿಗೆ ಪೂರ್ಣ ಪ್ರಮಾಣದ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮತ್ತು ಯಹೂದಿ ನಾಗರಿಕರಿಗೆ ಇರುವ ಆಯ್ಕೆ ಅವಕಾಶಗಳನ್ನು ನೀಡಿಲ್ಲ. ಅಧುನಿಕ ಮತ್ತು ಉದಾರವಾದಿ ಪ್ರಜಾಪ್ರಭುತ್ವ ಅಳವಡಿಸಿಕೊಂಡಿರುವ ಇಸ್ರೇಲ್‌, ಯಹೂದಿ ಸಿದ್ಧಾಂತದ ಚೌಕಟ್ಟು ಹಾಕಿಕೊಂಡಿರುವುದು ಅದರ ಡೋಲಾಯಮಾನ ಧೋರಣೆಗೆ ಸಾಕ್ಷಿಯಾಗಿದೆ.

ಒಂದು ವೇಳೆ ಇಸ್ರೇಲ್‌, ಪಶ್ಚಿಮ ದಂಡೆ ಪ್ರದೇಶವನ್ನು ಉಳಿಸಿಕೊಳ್ಳಲು ಬಯಸಿದ್ದರೆ, ಎಲ್ಲ ಅರಬ್ಬರಿಗೆ ಮತದಾನದ ಹಕ್ಕು ನೀಡಿದ್ದರೆ ಅದು ಯಹೂದಿ ದೇಶವಾಗಿ ಮುಂದುವರೆಯುವುದನ್ನು ಬಿಟ್ಟುಕೊಡಬೇಕಾಗುತ್ತದೆ. ಇಂತಹ ಹಕ್ಕುಗಳನ್ನು ಒದಗಿಸಿಕೊಡದಿದ್ದರೆ ಆ ದೇಶ ಗಣರಾಜ್ಯವಾಗಿ ಉಳಿಯಲಾರದು. ಇಸ್ರೇಲ್‌ ಈಗಲೂ ಒಂದು ಬಗೆಯ ವಿಲಕ್ಷಣ ಸ್ವರೂಪದ ಪ್ರಜಾಪ್ರಭುತ್ವವಾಗಿದೆ. ಅಲ್ಲಿ ಎಲ್ಲರಿಗೂ ಮತದಾನದ ಹಕ್ಕು ಇದೆ. ಆದರೆ ಅದು ಎಲ್ಲರಿಗೂ ಸಮಾನವಾಗಿಲ್ಲ. ಅರಬ್ಬರು ಉನ್ನತ ಹುದ್ದೆಗೆ ಏರದಿದ್ದರೆ ಅದನ್ನು ಯಾರೊಬ್ಬರೂ ಅಲ್ಲಿ ಪ್ರಶ್ನಿಸುವಂತಿಲ್ಲ.

ಅದೇ ಬಗೆಯಲ್ಲಿ ಪಾಕಿಸ್ತಾನವು ಕೂಡ ಇಸ್ರೇಲ್‌ನಲ್ಲಿ ಜಾರಿಯಲ್ಲಿ ಇರುವ ಎರಡು ಬಗೆಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಪಟ್ಟಿದೆ. ಪ್ರಾಸಂಗಿಕವಾಗಿ ಹೇಳುವುದಾದರೆ, ಇಸ್ರೇಲ್‌ನಂತೆ ಪಾಕಿಸ್ತಾನವೂ ಒಂದು ಸೈದ್ಧಾಂತಿಕ ದೇಶ. ಅದು ಕೂಡ ಇದೇ ಬಗೆಯ ಪ್ರಶ್ನೆಗಳನ್ನು ಎದುರಿಸುತ್ತಿದೆ. ಅಲ್ಪಸಂಖ್ಯಾತರು ಸಮಾನ ರಾಜಕೀಯ ಹಕ್ಕುಗಳನ್ನು ಹೊಂದಿದರೆ ಅದೊಂದು ಇಸ್ಲಾಂ ಗಣರಾಜ್ಯವಾಗಿ ಇರಲಿದೆಯೇ?

ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಬಿಳಿ ಪಟ್ಟಿಯು ದೇಶದ ಹಸಿರು ಬಣ್ಣದ ಧ್ವಜದ ಮೇಲೆ ಇರುವಂತೆ ಪಾಕಿಸ್ತಾನದ ಸ್ಥಾಪಕರು ಕಾಳಜಿ ವಹಿಸಿದ್ದರು. ಆದರೆ, ರಾಜಕೀಯದಲ್ಲಿ, ವಸಾಹತುಶಾಹಿ ಶೈಲಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ಮತಕ್ಷೇತ್ರಗಳ ಪದ್ಧತಿಯನ್ನು ಅಲ್ಲಿ ಮುಂದುವರೆಸಿಕೊಂಡು ಬರಲಾಗಿದೆ.

ಅಂತರ ಪ್ರಾಂತೀಯ ಸಮನ್ವಯ ಸಚಿವರನ್ನಾಗಿ ದರ್ಶನ್‌ ಲಾಲ್‌ ನೇಮಕ, ಸೇನೆಯ ಮೊದಲ ಸಿಖ್‌ ಅಧಿಕಾರಿ ಹರ್‌ಚರಣ್‌ ಸಿಂಗ್‌ ಮತ್ತು ಹಿಂದೂ ಹುತಾತ್ಮ ಲಾನ್ಸ್ ನಾಯಕ್‌ ಚಾಂದ್‌ ರಾಬ್ರಿ ಅವರ ಸೇವೆಯನ್ನು ಸ್ಮರಿಸಿಕೊಂಡಿರುವುದು ಪಾಕಿಸ್ತಾನದಲ್ಲಿ ಜಾರಿಯಲ್ಲಿ ಇರುವ ಅಲ್ಪಸಂಖ್ಯಾತರ ಕುರಿತ ಸಾಂಕೇತಿಕ ಧೋರಣೆಗೆ ನಿದರ್ಶನಗಳಾಗಿವೆ.

ಹಿಂದೂ ಮಹಿಳೆಯನ್ನು ಅಪಹರಿಸಿ ಒತ್ತಾಯದಿಂದ ಮತಾಂತರಿಸಿ ಸಂಭ್ರಮಿಸಿದ್ದನ್ನು ರಾಜಕಾರಣಿಯೊಬ್ಬ ಸಮರ್ಥಿಸಿಕೊಂಡ ಘಟನೆಯೂ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿದೆ. ಹಿಂದೂಗಳನ್ನು ಹೊರ ಹಾಕಲು, ಅವರ ಜನಸಂಖ್ಯೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಹಿಂದೂಗಳಲ್ಲದೆ ಸಿಖ್‌, ಕ್ರೈಸ್ತರೂ ಅಲ್ಪಸಂಖ್ಯಾತರಾಗಿದ್ದಾರೆ. ಜತೆಗೆ, ಅಹ್ಮದಿಯಾಸ್‌ ಮುಸ್ಲಿಮರಿಗೂ ಕಿರುಕುಳ ನೀಡಲಾಗುತ್ತಿದೆ.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ ಜಾತ್ಯತೀತ ಸರ್ಕಾರಗಳು ಅಲ್ಪಸಂಖ್ಯಾತ ವೋಟ್‌ ಬ್ಯಾಂಕ್‌ ರಾಜಕೀಯದ ಆಟ ಆಡುತ್ತಿದ್ದವು ಎಂದು ಬಲಪಂಥೀಯರು ಹೇಳುವುದರಲ್ಲಿಯೂ ಅರ್ಥ ಇದೆ. ಅಲ್ಪಸಂಖ್ಯಾತರು ಬಿಜೆಪಿ ವಿರುದ್ಧ ಮತ ಚಲಾಯಿಸಿ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ಅಧಿಕಾರದಲ್ಲಿ ಮುಂದುವರೆಯುವಂತೆ ನೋಡಿಕೊಂಡಿದ್ದರು ಎನ್ನುವುದು ಕೂಡ ನಿಜ. ಆದರೆ, ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ವಿಶ್ಲೇಷಿಸಿದರೆ ಅಲ್ಪಸಂಖ್ಯಾತರ ವೋಟ್‌ ಬ್ಯಾಂಕ್‌ ಈಗ ತನ್ನ ಮಹತ್ವ ಕಳೆದುಕೊಂಡಿರುವ ಭಾವನೆ ಮೂಡಿಸುತ್ತದೆ.

ಅಲ್ಪಸಂಖ್ಯಾತರಿಗೆ ಸುರಕ್ಷತೆ ಒದಗಿಸಲು, ಅವರ ಸಾಮಾಜಿಕ ಸ್ಥಿತಿಗತಿ ಸುಧಾರಿಸಲು ನಮ್ಮ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ನಮ್ಮದೇ ಆದ ದರ್ಶನ ಲಾಲ್‌ ಅಂತಹವರನ್ನು ಸಚಿವರನ್ನಾಗಿ ಮಾಡಿ ಅವರ ಬಗ್ಗೆ ತನಗೆ ತೋರಿಕೆಯ ಕಾಳಜಿ ಮಾತ್ರ ಇದೆ ಎಂದು ಸಾಂಕೇತಿಕ ಸಹಾನುಭೂತಿ ತೋರ್ಪಡಿಸುತ್ತಲೇ ಅಧಿಕಾರ ಹಂಚಿಕೊಳ್ಳಲು ಹಠ ಮಾಡಬೇಡಿ ಎಂದು ಹೇಳುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ನಾವು ಪಾಕಿಸ್ತಾನ ಅನುಸರಿಸುತ್ತಿರುವ ಅಲ್ಪಸಂಖ್ಯಾತರಿಗೆ ತುಂಬ ಮಹತ್ವ ನೀಡಬೇಕಾದ ಅಗತ್ಯ ಇಲ್ಲ ಎನ್ನುವ ಉತ್ತರವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಾವು ನಮ್ಮ ರಾಷ್ಟ್ರೀಯತೆಯನ್ನು ಮರು ವ್ಯಾಖ್ಯಾನ ಮಾಡಬೇಕಾಗಿದೆಯೇ, ಈ ವಿಷಯದಲ್ಲಿ ನಮಗೆ ಅಂತಿಮವಾಗಿ ಪಾಕಿಸ್ತಾನವೇ ಆದರ್ಶವಾಗಿರಬೇಕೇ ಎನ್ನುವ ಪ್ರಶ್ನೆಗಳೊಂದಿಗೆ ನಾವು ಈ ಚರ್ಚೆಗೆ ಕೊನೆ ಹಾಡಬೇಕಾಗುತ್ತದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)