ಸೋಮವಾರ, ಜೂನ್ 14, 2021
20 °C

ಕಣೇರಿ ಮಠ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಮೊನ್ನೆ ಮಹಾರಾಷ್ಟ್ರದ ಕೊಲ್ಹಾ­ಪುರದ ಹತ್ತಿರವೇ ಇರುವ ಕಣೇರಿ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಹದಿ­ಮೂರು ನೂರು ವರ್ಷಗಳ ಹಿಂದಿನ ಕಾಡಸಿದ್ಧೇಶ್ವರ ಮಠ ಇದೆ. ಅದೊಂದು ಶ್ರದ್ಧಾಕೇಂದ್ರ. ಇಂದು ಅಲ್ಲಿಯ ಪೀಠಾ­ಧ್ಯಕ್ಷರು ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು. ಇಂದು ಸ್ವಾಮಿಗಳು ಹೇಗಿರಬೇಕೆನ್ನುವುದಕ್ಕೆ ಅವರೊಬ್ಬ ಆದರ್ಶ ಮಾದರಿ.  ಅವರಿಗೆ ಅದೃಶ್ಯ ಎಂಬ ಹೆಸರನ್ನು ಗುರುಗಳು ಏಕೆ ನೀಡಿದರೋ ತಿಳಿಯದು. ಆದರೆ ಅದು ಸಾರ್ಥಕ­ವಾಗಿದೆ.  ಅದೃಶ್ಯ ಎಂದರೆ ಕಣ್ಣಿಗೆ ಕಾಣದ್ದು.  ಗಾಳಿ ಕಣ್ಣಿಗೆ ಕಾಣುವು­ದಿಲ್ಲ, ಆದರೆ ಅದಿಲ್ಲದಿದ್ದರೆ ಬದುಕು ಅಸಾಧ್ಯ. ಪರಿಮಳ ಕಣ್ಣಿಗೆ ಕಾಣದು, ಆದರೆ ನಮ್ಮನ್ನು ಪ್ರಚೋದಿ­ಸುತ್ತದೆ.ಭಗವಂತನ ಶಕ್ತಿ ಕಣ್ಣಿಗೆ ಕಾಣುವುದಿಲ್ಲ, ಆದರೆ ಪ್ರಪಂಚವನ್ನೇ ನಡೆಸುತ್ತದೆ. ಹಾಗೆಯೇ ಈ ಸ್ವಾಮಿಗಳು ಎಲ್ಲಿಯೇ ಇದ್ದರೂ ಮಠದ ಎಲ್ಲೆಡೆ­ಯಲ್ಲಿ, ಭಕ್ತರ ಮನಸ್ಸಿನಲ್ಲಿ ನೆಲೆಯಾಗಿ ನಿಂತದ್ದು ಗೋಚರ­ವಾಗುತ್ತದೆ. ಒಬ್ಬ ಅತ್ಯಂತ ಸಮಾಜ­ಮುಖಿಯಾದ, ಸೃಜನಶೀಲನಾದ ವ್ಯಕ್ತಿ ಏನೆಲ್ಲ ಮಾಡಬ­ಹುದೋ ಅದೆಲ್ಲವನ್ನು ಅವರು ಮಾಡಿದ್ದಾರೆ.  ಬಡ ರೈತ­ಕುಟುಂಬ ಆತ್ಮಗೌರವ­ದಿಂದ, ಸಂತೋಷ­ದಿಂದ ಕೇವಲ ಒಂದು ಎಕರೆ ಜಮೀನಿ­ನಲ್ಲಿ ಹೇಗೆ ಬದುಕಬ­ಹುದೆಂಬ ಪ್ರಾತ್ಯಕ್ಷಿಕೆ ಮಾಡಿದ್ದಾರೆ. ಕೃಷಿಯಲ್ಲಿ ಡಾಕ್ಟರೇಟ್ ಮಾಡಿರುವವರಿಗೆ ಪಾಠ ಅಲ್ಲಿ ದೊರಕೀತು.  ನಮ್ಮ ದೇಶದ ಹಸುಗಳ ರಕ್ಷಣೆ, ಪೋಷಣೆಯನ್ನು ಮಾದರಿ ಎಂಬಂತೆ ಮಾಡಿ ತೋರಿ­ಸಿದ್ದಾರೆ. ಬೇರೆ ಗುರುಗಳು ಮಾತಿನಿಂದ ಮಾರ್ಗದರ್ಶನ ಮಾಡಿದರೆ ಇವರು ಮಾದರಿಗಳನ್ನು ಕಣ್ಣಿಗೆ ಕಾಣುವಂತೆ ಮಾಡಿಟ್ಟು ಅನುಸರಿಸುವಂತೆ ಮಾಡಿ­ದ್ದಾರೆ. ವಿದ್ಯುತ್‌ ಶಕ್ತಿಯಂತೆ ಒಂದು ಕ್ಷಣವೂ ನಿಂತಲ್ಲಿ ನಿಲ್ಲದೇ ಸಹಸ್ರಾರು ಜನರನ್ನು ಪ್ರೇರೇಪಿಸುತ್ತ ಉತ್ಸಾಹದ ಬುಗ್ಗೆಯಂತೆ ಕೆಲಸ ಮಾಡುವುದನ್ನು ಕಂಡರೆ ಬದುಕಿನ ಕೊನೆಯ ಕ್ಷಣದಲ್ಲಿ­ದ್ದವನೂ ಕೊಡವಿಕೊಂಡು ಎದ್ದು ನಿಲ್ಲುವಂತಾಗುತ್ತದೆ. ಇತ್ತೀಚಿಗೆ ಕಣೇರಿ ಮಠ ಭಾರತೀಯ ಸಂಸ್ಕೃತಿ ಉತ್ಸವವನ್ನು ನಡೆಸಿತು.  ಅದೊಂದು ಅಭೂತಪೂರ್ವ ಸಂಭ್ರಮ. ಏಳುದಿನಗಳಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಜನ ಕಾರ್ಯಕ್ರಮಗಳಿಗೆ ಬಂದಿದ್ದರು ಎಂದರೆ ಅದರ ಸ್ವರೂಪದ ಅರ್ಥವಾ­ದೀತು.ದಿನವೂ ಎರಡು-ಮೂರು ಲಕ್ಷ ಜನ ಕಣೇರಿಯಂಥ ಪುಟ್ಟ ಗ್ರಾಮದಲ್ಲಿ ಸೇರಿದರೆ ಜನದಟ್ಟಣೆ  ಹೇಗಾದೀತು ಎಂಬುದನ್ನು ಹೇಳಬೇಕಿಲ್ಲ. ರಾಶಿರಾಶಿ ಜನಸಮೂಹ ಗಾಳಿಯಲ್ಲಿ ತೇಲಿ ಹೋಗುವಂತೆ ಕಾಣುತ್ತಿತ್ತು. ಎಷ್ಟೇ ತಯಾರಿ ಮಾಡಿದರೂ ಅಷ್ಟೊಂದು ಜನಕ್ಕೆ ಊಟದ, ವಸತಿ ಶೌಚಾಲಯದ ವ್ಯವಸ್ಥೆ ಮಾಡುವುದು ಕಷ್ಟಸಾಧ್ಯ­ವಾದದ್ದು.  ನನಗೆ ಅಚ್ಚರಿಯಾಗು­ವುದೆಂದರೆ ಅಷ್ಟೊಂದು ಜನ, ಅಷ್ಟು ತೊಂದರೆ ಮಾಡಿಕೊಂಡು ಆ ಗದ್ದಲದಲ್ಲಿ ಯಾಕೆ ಬಂದರು ಎನ್ನುವುದು.ಒಂದು ದಿನ ವಾರಕರಿ ಉತ್ಸವದಂದು ನಾನೊಬ್ಬ ಹಿರಿಯರನ್ನು ಕಂಡೆ.  ಅವ­ರಿಗೆ ಸುಮಾರು ಎಪ್ಪತ್ತೈದರಿಂದ ಎಂಬತ್ತು ವರ್ಷವಿದ್ದೀತು. ಅವರ ಬಲ­ಗಾಲು ಆನೆಯ ಕಾಲಿನಂತಾಗಿದೆ. ಕೆರೆದು­ಕೊಂಡು ಅಲ್ಲಲ್ಲಿ ರಕ್ತ ಬರುತ್ತಿದೆ, ಸರಿ­ಯಾಗಿ ನಡೆ­ಯಲು ಆಗುತ್ತಿಲ್ಲ.  ನೀವು ಏಕೆ ಇಲ್ಲಿಗೆ ಬಂದಿರಿ ಎಂದು ಕೇಳಿದಾಗ ಅವರು ಹೇಳಿದರು, ‘ನಾನು ಮತ್ತೊಮ್ಮೆ ಇಲ್ಲಿಗೆ ಬರುತ್ತೇನೋ ಇಲ್ಲವೋ ತಿಳಿ­ದಿಲ್ಲ. ಬಂದರೆ ಸರಿ, ಇಲ್ಲದಿದ್ದರೆ ಇಂದೇ ದೇವರಿಗೆ ನಮಸ್ಕಾರ ಹಾಕಿ ಭಗವಂತ ಕರೆ­ಸಿಕೋ ಎಂದು ಹೇಳಿ ಹೋಗಿಬಿಡುತ್ತೇನೆ. ಆತ ನನ್ನ ಕೈ ಬಿಡುವುದಿಲ್ಲ’. ಅದೆಂಥ ಶ್ರದ್ಧೆ!ಇನ್ನೊಬ್ಬ ಪುಟ್ಟ ದಂಪತಿ ಅಲ್ಲಿದ್ದರು. ತಾಯಿಗೇ ವಯಸ್ಸು ಇಪ್ಪತ್ತು- ಇಪ್ಪ­ತ್ತೆರ­ಡಿದ್ದೀತು. ಆಕೆ ತನ್ನ ಹದಿಮೂರು ದಿನದ ಮಗುವನ್ನು ಎದೆಗೊತ್ತಿ­ಕೊಂಡು ಬಂದಿ­ದ್ದಳು. ‘ಆ ಗಲಾಟೆ, ಆ ದೂಳು, ಆ ನೂಕುನುಗ್ಗಲಾಟ ಇವುಗ­ಳಲ್ಲಿ ಈ ಮಗು­ವನ್ನು ಕರೆದುಕೊಂಡು ಹಸೀ ಬಾಣಂತಿ ಏಕೆ ಬಂದೆ’ ಎಂದು ಕೇಳಿದರೆ ಆಕೆ, ‘ನನ್ನ ಮಗುವನ್ನು ಸಿದ್ಧೇಶ್ವರರ, ಗುರುಗಳ ಪಾದಕ್ಕೆ ಹಾಕಿ ಹೋದರೆ ಅವ­ನಿಗೇನೂ ಆಗು­ವುದಿಲ್ಲ’ ಎಂದಳು! ಈ ಮಾತುಗಳು ಕೆಲವರಿಗೆ ಹುಂಬತನ­ವೆನ್ನಿಸ­ಬಹುದು. ಆದರೆ ಈ ಅನನ್ಯವಾದ ಶ್ರದ್ಧೆ ಅಸಾಧ್ಯವಾದದ್ದನ್ನು ಸಾಧ್ಯವಾಗಿ­ಸು­ತ್ತದೆ. ಸಾಮಾನ್ಯರ ಹೃದಯದಲ್ಲಿ ಅಸಾಮಾನ್ಯ ಧೈರ್ಯ ತುಂಬು­ತ್ತದೆ, ನಿರಾಶೆ ಕತ್ತಲಲ್ಲಿ ಆಸೆಯ ಬೆಳಕನ್ನು ತೋರುತ್ತದೆ. ಅಂತೆಯೇ ಕಣೇರಿ ಮಠದಂತಹ ಶ್ರದ್ಧಾ ಕೇಂದ್ರಗಳೇ ನಮ್ಮ ಭಾರತೀಯ ಸಂಸ್ಕೃತಿಯ ಮೂಲ ಸ್ರೋತ­ಗಳು. ಅವು ಸಾವಿರವಾಗಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.