ಭಾನುವಾರ, ಜೂನ್ 20, 2021
21 °C

ಕಾಂಗ್ರೆಸ್ ಸೋಲು: ಗರಿಗೆದರಿದ ತೃತೀಯ ರಂಗದ ಕನಸು

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಸಾರ್ವತ್ರಿಕ ಚುನಾವಣೆಗಳು ಅಖಿಲ ಭಾರತ ಮಟ್ಟದ ವ್ಯವಹಾರಗಳು. ಹೊಸ ಲೋಕಸಭೆ ಚುನಾಯಿಸಲು 28 ರಾಜ್ಯಗಳ ನಾಗರಿಕರು ಪಾಲ್ಗೊಳ್ಳುತ್ತಾರೆ. ಮತ್ತೊಂದೆಡೆ, ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳು ಆಯಾ ರಾಜ್ಯಗಳ ನಾಗರಿಕರಿಗೆ ನಿರ್ದಿಷ್ಟವಾದದ್ದನ್ನೇನೋ ಧ್ವನಿಸುತ್ತವೆ.ಆದರೂ, ಕೆಲವು ರಾಜ್ಯ ಚುನಾವಣೆಗಳು ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುತ್ತವೆ. ಅಂತಹ ಮೊದಲನೆಯ ಚುನಾವಣೆ ನಡೆದದ್ದು 1957ರಲ್ಲಿ ಕೇರಳದಲ್ಲಿ. ಆಗ ಆಡಳಿತ ಕಾಂಗ್ರೆಸ್ ಪಕ್ಷವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸೋಲಿಸಿತ್ತು.ಈ ಮುಂಚೆ ಅದೇ ದಶಕದಲ್ಲಿ ಏಕ ಪಕ್ಷ ಸರ್ವಾಧಿಕಾರವನ್ನು ಸ್ಥಾಪಿಸಲು ಭಾರತದ ಪ್ರಭುತ್ವದ ವಿರುದ್ಧ ಕಮ್ಯುನಿಸ್ಟರು ಸಶಸ್ತ್ರ ಬಂಡಾಯವನ್ನು ಆರಂಭಿಸಿದ್ದರು. ನಂತರ 1952ರಲ್ಲಿ ಶಸ್ತ್ರಾಸ್ತ್ರಗಳನ್ನು ತೊರೆದು, ಪ್ರಥಮ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲು  ಮುಖ್ಯವಾಹಿನಿಗೆ ಬಂದಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಆರಾಮವಾಗಿ ಜಯ ಗಳಿಸಿದರೂ, ಲೋಕಸಭೆಯಲ್ಲಿ ಏಕೈಕ ದೊಡ್ಡ ವಿರೋಧ ಪಕ್ಷವಾಗಿ ಸಿಪಿಐ ಉದಯವಾಗಿತ್ತು.1957ರಲ್ಲಿ ಕೇರಳದಲ್ಲಿ ಕಮ್ಯುನಿಸ್ಟರ ಗೆಲುವು, ಕಾಂಗ್ರೆಸ್ ಅಧಿಪತ್ಯಕ್ಕೆ ಗಂಭೀರ ಸವಾಲೆಸೆಯಬಹುದಾದ ಏಕೈಕ ಪಕ್ಷವೆಂದರೆ ಕಮ್ಯುನಿಸ್ಟರು ಎಂಬಂತಹ ಭಾವನೆಯನ್ನು ಬಲಪಡಿಸಿತು.ಇದರಿಂದಲೇ ಇರಬಹುದು ಶಾಸನಾತ್ಮಕವಾಗಿ ಚುನಾಯಿತವಾಗಿದ್ದ ಸರ್ಕಾರದ ವಿರುದ್ಧ ಕ್ಯಾಥೊಲಿಕ್ ಚರ್ಚ್, ನಾಯರ್ ಸರ್ವೀಸ್ ಸೊಸೈಟಿ ಹಾಗೂ ಸ್ವತಃ ಕಾಂಗ್ರೆಸ್ ಪಕ್ಷವೂ ಸೇರಿದಂತಹ ಕಮ್ಯುನಿಸ್ಟ್ ವಿರೋಧಿ ಸಮ್ಮಿಶ್ರ ಗುಂಪು ಸಾಮೂಹಿಕ ಪ್ರತಿಭಟನೆಗಳನ್ನು ಏರ್ಪಡಿಸಿತ್ತು.ಈ ಕಾರಣವಾಗಿ ಆ ಸರ್ಕಾರವನ್ನು ಕೇಂದ್ರ  ವಜಾ ಮಾಡಿತ್ತು. ನಂತರ,1960ರಲ್ಲಿ ನಡೆದ ಮಧ್ಯಂತರ ಚುನಾವಣೆಗಳಲ್ಲಿ ಕೇರಳದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಗಳಿಸಿಕೊಂಡಿತ್ತು.ಜವಾಹರಲಾಲ್ ನೆಹರೂ ಇರುವವರೆಗೆ ಕಾಂಗ್ರೆಸ್ ಪಕ್ಷ ರಾಷ್ಟ್ರದಾದ್ಯಂತ ಪ್ರಾಬಲ್ಯ ಸಾಧಿಸಿತ್ತು. ನೆಹರೂ ನೇತೃತ್ವ ಇಲ್ಲದೆ 1967ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲೂ ಭಾರತದ ಹಳೆಯ ರಾಜಕೀಯ ಪಕ್ಷವೇ ಆಗಲೂ ಕೇಂದ್ರದಲ್ಲಿ ಅಧಿಕಾರವನ್ನು ಗೆದ್ದುಕೊಂಡಿತ್ತು. ಆದರೆ ಕಾಂಗ್ರೆಸ್ (ಆಗ ಮದ್ರಾಸ್ ಎಂದು ಕರೆಯಲಾಗುತ್ತಿದ್ದ) ತಮಿಳುನಾಡಿನಲ್ಲಿ ಕೊಚ್ಚಿ ಹೋಗಿತ್ತು.

 

ಆಡಳಿತಾತ್ಮಕ ಕಟ್ಟಳೆಯ ಮೂಲಕ ಹಿಂದಿಯನ್ನು ಹೇರಲು ಹೊರಟ ನವದೆಹಲಿಯ ಪ್ರಯತ್ನದಿಂದ ಉಂಟಾದ ಕಾಂಗ್ರೆಸ್‌ವಿರೋಧಿ, ಕೇಂದ್ರ ಸರ್ಕಾರ ವಿರೋಧಿ ಹಾಗೂ ಉತ್ತರ ಭಾರತ ವಿರೋಧಿ ಭಾವನೆಗಳ ಅಲೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಅನುಕೂಲಕರ ಬಹುಮತವನ್ನು ಗೆದ್ದುಕೊಂಡಿತ್ತು.

 

ಇದು ಕಾಂಗ್ರೆಸ್‌ನ ಬಹು ದೊಡ್ಡ ನಿರ್ಣಾಯಕ ಸೋಲಾಗಿತ್ತು (ಏಕೆಂದರೆ ಅದು ಬಹು ಹಿಂದಿನಿಂದಲೂ ಮದ್ರಾಸ್‌ಅನ್ನು ಕಾಂಗ್ರೆಸ್‌ನ ಬಲವಾದ ಕೋಟೆ ಎಂದೇ ಭಾವಿಸಿತ್ತು). ಆದರೆ, 1967ರಲ್ಲಿ  ಪಶ್ಚಿಮ ಬಂಗಾಳದಲ್ಲಿ ಬಂಡಾಯ ಕಾಂಗ್ರೆಸ್ಸಿಗರು ಹಾಗೂ ಕಮ್ಯುನಿಸ್ಟರ ಮೈತ್ರಿ;  ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಒಡಿಶಾಗಳಲ್ಲಿ ಇತರ ಕಾಂಗ್ರೆಸ್ ವಿರೋಧಿ ಮೈತ್ರಿಗಳಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು.

 

ಆಗೆಲ್ಲಾ, ದೆಹಲಿಯಿಂದ ಹೌರಾದವರೆಗೆ ಪಯಣಿಸಿದಲ್ಲಿ ಕಾಂಗ್ರೆಸ್ ಆಡಳಿತವಿರುವ ಒಂದೇ ಒಂದು ರಾಜ್ಯ ಸಿಕ್ಕದು ಎಂದು ಒಂದಿಷ್ಟು ಅಚ್ಚರಿ ಹಾಗೂ ಕೌತುಕದಿಂದ ಹೇಳಲಾಗುತ್ತಿತ್ತು.  ಈ ನಷ್ಟಗಳು, 1967ರಲ್ಲಿ ಕಾಂಗ್ರೆಸ್‌ಅನ್ನು ಪುನರ್‌ವಿನ್ಯಾಸಗೊಳಿಸುವ ಕ್ರಮಗಳಿಗೆ ನಾಂದಿಯಾಯಿತು. ಪ್ರಧಾನಿ ಇಂದಿರಾಗಾಂಧಿ ಅವರ ಬಲವಾದ ರಾಜಕೀಯ ವಿಚಾರಧಾರೆಗಳ ಬಗ್ಗೆ ಈ ಹಿಂದೆ ಅಷ್ಟೇನೂ ತಿಳಿದಿರಲಿಲ್ಲ.ಆದರೆ, ಈಗ ಅವರು ಸಮಾಜವಾದಿಯಾಗಿ ತಮ್ಮನ್ನು ತಾವು  ಪುನರ್‌ಸ್ಥಾಪಿಸಿಕೊಂಡರು. ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರು. ರಾಜಧನ ರದ್ದು ಮಾಡಿದರು. ಜೊತೆಗೆ `ಗರೀಬಿ ಹಠಾವೊ~ ಎಂಬಂತಹ ಹೃದಯಸ್ಪರ್ಶಿ ಘೋಷಣೆಯಡಿ  ಪ್ರಚಾರಾಂದೋಲನ ನಡೆಸುತ್ತಾ ಸಾರ್ವತ್ರಿಕ ಚುನಾವಣೆಯನ್ನೂ ಬೇಗನೇ ಘೋಷಿಸಿದರು.

 

ಇದರಿಂದ ಕೇಂದ್ರದಲ್ಲಿ ಭಾರಿ ಬಹುಮತ ಗಳಿಸಲು ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿತು. ಜೊತೆಗೆ ಅನೇಕ ಉತ್ತರ ಹಾಗೂ ಪೂರ್ವ ರಾಜ್ಯ ವಿಧಾಸಭೆಗಳನ್ನು ಮತ್ತೆ ಗೆದ್ದುಕೊಳ್ಳುವುದೂ ಸಾಧ್ಯವಾಯಿತು.1971ರ ಜನವರಿಯಲ್ಲಿ, ಚುನಾವಣೆಗಳಲ್ಲಿ ಇಂದಿರಾಗಾಂಧಿಯವರ ವಿಜಯದ ಜೊತೆ ಜೊತೆಗೇ ಅದೇ ವರ್ಷದ ಕೊನೆಯಲ್ಲಿ ಯುದ್ಧಭೂಮಿಯಲ್ಲಿ ಅದಕ್ಕೆ ಸರಿಸಮನಾದ ವಿಜಯವೂ ದಕ್ಕಿತು. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಕೀರ್ತಿಯನ್ನು ಒಂದಿಷ್ಟು ಮುಕ್ತಿವಾಹಿನಿಗೆ. ಮತ್ತೊಂದಿಷ್ಟು ಭಾರತೀಯ ಸೇನೆಗೆ ಸ್ಲ್ಲಲಿಸಲಾಗುತ್ತದೆ.

 

ಆದರೆ, ಬಹುತೇಕ ಅಥವಾ ಅದಕ್ಕೂ ಮಿಗಿಲಾಗಿ ಆ ಕೀರ್ತಿಯನ್ನು ಭಾರತ ಪ್ರಧಾನಿಗೇ ಮೀಸಲಾಗಿರಿಸಲಾಗಿತ್ತು. ತಮ್ಮ ಕಡೆಯವರು ಗೆಲ್ಲುತ್ತಾರೆಂದು ಚೆನ್ನಾಗಿ ಗೊತ್ತಿದ್ದೇ ಯುದ್ಧವನ್ನು ಪ್ರಚೋದಿಸಿ ತಮ್ಮ ರಾಜಕೀಯ ವ್ಯಕ್ತಿತ್ವವನ್ನು ಹಾಗೂ ಲಕ್ಷಾಂತರ ನಿರಾಶ್ರಿತರಿಗೆ ನೆಲೆ ಒದಗಿಸಿ ಮಾನವೀಯ ಮುಖವನ್ನೂ ಇಂದಿರಾ ಅನಾವರಣಗೊಳಿಸಿದ್ದರು.

 

ಈ ಅವಳಿ ಗೆಲುವುಗಳು ಅವರಲ್ಲಿ ಒಂದಿಷ್ಟು ದುರಭಿಮಾನ ಹಾಗೂ ತಮ್ಮನ್ನು ಯಾರೂ ಏನೂ ಮಾಡಲಾಗದು ಎಂಬ ಭಾವವನ್ನು ಅವರಲ್ಲಿ ತುಂಬಿದವು. ಈ ಹಿಂದೆ ಆಡಳಿತ ನಡೆಸಲು ಕಾಂಗ್ರೆಸ್‌ಗೆ ದೈವಿಕವಾದ ಹಕ್ಕಿದೆ ಎಂಬ ಭಾವನೆ ಹೊಂದಲಾಗಿತ್ತು. ಈಗ, ಆ ಹಕ್ಕು ಏಕೈಕ ಕುಟುಂಬಕ್ಕೆ ಮಾತ್ರ ಸೇರಿದ್ದು ಎಂದು ಅವರು ಭಾವಿಸಿದರು.ಅವರ ಲೆಕ್ಕಾಚಾರ ತಪ್ಪಾಗಿತ್ತು. ಏಕೆಂದರೆ 1977ರಲ್ಲಿ ನಡೆದ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಕೇಂದ್ರ ಹಾಗೂ ಅನೇಕ ಉತ್ತರದ ರಾಜ್ಯಗಳಲ್ಲಿ ಕಾಂಗ್ರೆಸ್‌ಅನ್ನು  ಸದೆಬಡಿಯಲಾಗಿತ್ತು. ರಾಷ್ಟ್ರೀಯ ಪ್ರಾಮುಖ್ಯದ ಮುಂದಿನ ರಾಜ್ಯ ಚುನಾವಣೆಗಳು ನಡೆದದ್ದು 1983ರಲ್ಲಿ. ಆ ವರ್ಷ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಇದಕ್ಕೂ ಹೆಚ್ಚು ಗಮನ ಸೆಳೆದ ಸೋಲೆಂದರೆ ಇದುವರೆಗೂ ಸೋಲೇ ಅರಿಯದಿದ್ದಂತಹ ಆಂಧ್ರ ಪ್ರದೇಶದಲ್ಲೂ ಕಾಂಗ್ರೆಸ್ ಅನುಭವಿಸಿದ ಸೋಲು. ಇದಕ್ಕೆ, ರಾಜೀವ್‌ಗಾಂಧಿಯವರು, ಆ ರಾಜ್ಯ ಮುಖ್ಯಮಂತ್ರಿಗೆ ಮಾಡಿದ ಅವಮಾನ ಒಂದು ನೆಪವಾಯಿತು. ದಶಕಗಟ್ಟಲೆ ಕಾಂಗ್ರೆಸ್ ದುರಾಡಳಿತದಿಂದ ಹಾನಿಗೀಡಾಗಿದ್ದ ತೆಲುಗು ಹೆಮ್ಮೆಯನ್ನು ಮರಳಿ ಪಡೆಯಲು ಪ್ರಸಿದ್ಧ ಚಿತ್ರನಟ  ಎನ್. ಟಿ. ರಾಮರಾವ್ ಅವರು ಹೊಸ ಪಕ್ಷ ಆರಂಭಿಸಿದರು. ಅವರ ತೆಲುಗು ದೇಶಂ ಪಕ್ಷಕ್ಕೆ ಯಾವುದೇ ಇತಿಹಾಸ ಇರಲಿಲ್ಲ. ಸಂಘಟನೆ ಇರಲಿಲ್ಲ. ಯಾವ ಸಿದ್ಧಾಂತವೂ ಇರಲಿಲ್ಲ.

 

ಯಾರೂ, ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳಂತೂ ಅವರು ಗೆದ್ದು ಬರಬಹುದೆಂದು ಒಂದಿಷ್ಟೂ ಎಣಿಸಿರಲಿಲ್ಲ. ಕಾಂಗ್ರೆಸ್ ಪಕ್ಷದ ಸಂಘಟನಾ ಶಕ್ತಿ, ಹಣ, ಇತಿಹಾಸ ಎಲ್ಲದಕ್ಕೂ ಸವಾಲೆಸೆಯಲು ಒಬ್ಬ ವ್ಯಕ್ತಿಯ ಆಕರ್ಷಣೆ (ಶಕ್ತಿ) ಸಾಕಾಗಿತ್ತು. ಇದು ಕಾಂಗ್ರೆಸ್‌ಗೆ ಅತಿ ದೊಡ್ಡ ಎದ್ದು ಕಾಣುವ ದಯನೀಯ ಸೋಲಾಗಿತ್ತು.

 

ಏಕೆಂದರೆ ಹಿಂದೆ ಕಾಂಗ್ರೆಸ್ ವಿರುದ್ಧ ಗೆದ್ದವರು, ಎಂದರೆ ಕಮ್ಯುನಿಸ್ಟರು, ಡಿಎಂಕೆ ಹಾಗೂ ಜನತಾಪಕ್ಷದವರೆಲ್ಲಾ ಅನುಭವಿ ರಾಜಕಾರಣಿಗಳ ನಾಯಕತ್ವ ಹೊಂದಿದ್ದವು. ಪ್ರಚಾರಾಂದೋಲನಗಳನ್ನು ಸಂಘಟಿಸಲು ಅವರಿಗೆಲ್ಲಾ ಭದ್ರವಾದ ಸಹ ಕಾರ್ಯಕರ್ತರ ಪಡೆಗಳೇ ಇದ್ದವು.  ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆ, ಈ ಐತಿಹಾಸಿಕ ಪ್ರವೃತ್ತಿಗೆ ತದ್ವಿರುದ್ಧವಾದುದಾಗಿತ್ತು. 1957ರಲ್ಲಿ ಕೇರಳ, 1967ರಲ್ಲಿ ತಮಿಳುನಾಡು, 1977ರಲ್ಲಿ ಪಶ್ಚಿಮ ಬಂಗಾಳ ಅಥವಾ 1983ರಲ್ಲಿ ಆಂಧ್ರ ಪ್ರದೇಶಗಳ್ಲ್ಲಲಾದಂತೆ, ಕಾಂಗ್ರೆಸ್ ಪ್ರಧಾನಶಕ್ತಿಯಾಗಿ ಇಲ್ಲಿ ಚುನಾವಣೆಗಳಿಗೆ ಪ್ರವೇಶಿಸಲಿಲ್ಲ.

 

ಆದರೆ, ಅಂಚಿಗೆ ಸರಿದು ಹೋಗಿದ್ದ ಪಕ್ಷವಾಗಿ, ಇತ್ತೀಚಿನ ವರ್ಷಗಳಲ್ಲಿ ಅಷ್ಟೇನೂ ಪ್ರಭಾವ ಹೊಂದಿರದ ಪಕ್ಷವಾಗಿ ರಾಜ್ಯಕ್ಕೆ ಮರಳಿ ಬರುವ ಹತಾಶ ಯತ್ನ ಇಲ್ಲಿತ್ತು. ಅದರಲ್ಲೂ, ಯುವ ಕಾಂಗ್ರೆಸ್ ನಾಯಕರಲ್ಲಿ ಮುಖ್ಯರಾದ ರಾಹುಲ್‌ಗಾಂಧಿಯವರು ಹಾಕಿದ್ದ ಅಷ್ಟೊಂದು ಪರಿಶ್ರಮದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಚುನಾವಣೆಗಳು ಮತ್ತಷ್ಟು ಪ್ರಾಮುಖ್ಯ ಪಡೆದುಕೊಂಡಿದ್ದವು.

 

2014ಕ್ಕೆ ಸದ್ಯಕ್ಕೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನುಡಿಯಾಗಿ 2012ರ ಉತ್ತರ ಪ್ರದೇಶ ಚುನಾವಣೆಗಳನ್ನು `ಸೆಮಿ ಫೈನಲ್~ ಎಂದು ಅವರು ಪರಿಗಣಿಸಿದ್ದರು. ಹಿಂದಿನ ವರ್ಷವೇ ರಾಹುಲ್ ಗಾಂಧಿಯವರು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದರು. ತಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಸ್ವತಃ ತಾವೇ ನೂರಾರು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದರು.ಇತರ ಪಕ್ಷಗಳಿಗೂ ಇದು ಮುಖ್ಯವಾದುದಾಗಿತ್ತು. ಉತ್ತರ ಪ್ರದೇಶದ ಮೂಲಕವೇ ಭಾರತೀಯ ಜನತಾ ಪಕ್ಷವು ರಾಷ್ಟ್ರೀಯವಾಗಿ ಪ್ರವರ್ಧಮಾನಕ್ಕೆ ಬರಲು ಆರಂಭಿಸಿದ್ದು. 1980 ಹಾಗೂ 1990ರ ದಶಕಗಳಲ್ಲಿ ಕೆಲ ಕಾಲ ರಾಜ್ಯದಲ್ಲಿ ಅದು ಅಧಿಕಾರದಲ್ಲಿತ್ತು.ಆದರೆ ಆ ನಂತರ ಬಿಜೆಪಿ ವರ್ಚಸ್ಸು ಗಣನೀಯ ಇಳಿಮುಖವಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಅನ್ನು ಗಂಭೀರವಾಗಿ ಎದುರಿಸಲು ಯುಪಿಯಲ್ಲಿ ಅದು ಅಸಾಧಾರಣ ಪ್ರದರ್ಶನ ನೀಡುವುದು ಅವಶ್ಯವಾಗಿತ್ತು. ಈ ಚುನಾವಣೆಗಳು ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳಿಗೂ ಮಹತ್ವದ್ದಾಗಿದ್ದವು. ಸಮಾಜವಾದಿ ಪಕ್ಷವಂತೂ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಹಂಬಲಿಸುತ್ತಿತ್ತು. ಬಹುಜನ ಸಮಾಜ ಪಕ್ಷ ಅಧಿಕಾರ ಉಳಿಸಿಕೊಳ್ಳಲು ಸೆಣಸುತ್ತಿತ್ತು.ಈ ಚುನಾವಣೆಗಳಲ್ಲಿ ಒಳ್ಳೆಯ ಪ್ರದರ್ಶನ ಎಂದರೆ ಅದು ಈ ಎರಡು ಪಕ್ಷಗಳಿಗೂ ಕೇಂದ್ರದಲ್ಲಿನ ಪ್ರಭಾವವನ್ನು ಇಮ್ಮಡಿಗೊಳಿಸುವಂತಹದ್ದಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಐದು ಬಹು ಮುಖ್ಯ ರಾಜ್ಯ ಚುನಾವಣೆಗಳಲ್ಲಿ ಉತ್ತರ ಪ್ರದೇಶ ಚುನಾವಣೆಯೂ ಸೇರಿದೆ ಎಂಬುದರಲ್ಲಿ ಎರಡು ಮಾತಿಲ್ಲ.

 

ಈ ಚುನಾವಣೆಗಳ ಫಲಿತಾಂಶ ನಾಲ್ಕು ಪಕ್ಷಗಳಿಗೆ ಬಹು ಮುಖ್ಯವಾಗಿತ್ತು. ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಎಂದರೆ ಅದು ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಯಶಸ್ವಿ ಮೈತ್ರಿಗೆ ದಾರಿಯಾಗುವುದೆಂಬ ಆಶಯ ಬಿಜೆಪಿ ಹಾಗೂ ಕಾಂಗ್ರೆಸ್‌ನದಾಗಿತ್ತು. ಬಿಎಸ್‌ಪಿ ಹಾಗೂ ಎಸ್‌ಪಿಗಳಿಗೆ ಇಲ್ಲಿನ ಜಯ ಎಂದರೆ ಅದು ಭಾರತದ ಅತಿ ದೊಡ್ಡ ರಾಜ್ಯದಲ್ಲಿ ನೆಲೆಯನ್ನು ಬಲ ಪಡಿಸಿಕೊಳ್ಳುವಂತಹದ್ದು ಹಾಗೂ ನವದೆಹಲಿಯಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಲು ಅವಕಾಶ ನೀಡುವಂತಹ್ದ್ದದಾಗಿರುತ್ತಿತ್ತು. ಇವು ಚುನಾವಣೆಗಳಲ್ಲಿ ನಾಲ್ಕು ಪ್ರಮುಖ ಪಕ್ಷಗಳಿಗಿದ್ದ ನಿರೀಕ್ಷೆ. ಈಗ ಫಲಿತಾಂಶಗಳು ಬಂದ ನಂತರ ಇವು ಹೇಗೆ ಭಾವಿಸಿರಬಹುದು? ಸಮಾಜವಾದಿ ಪಕ್ಷಕ್ಕಂತೂ ದೊಡ್ಡ ಸಂತಸ. ಇತರ ಮೂರು ಪಕ್ಷಗಳಿಗೆ ತೀವ್ರ ನಿರಾಶೆ. ಈ ಸಂತಸ ಹಾಗೂ ನಿರಾಸೆ ವೈಯಕ್ತಿಕ ಹಾಗೂ ಸಾಮೂಹಿಕವಾದದ್ದೂ ಆಗಿದೆ.

 

ಫಲಿತಾಂಶ ಕುರಿತಾದ ಆರಂಭದ ವರದಿ `ಯಾದವ್ ವಂಶದ ಕುಡಿಯ ಮೇಲುಗೈ, ಗಾಂಧಿ ವಂಶದ ಕುಡಿ ಕೆಳಗೆ~ ಎಂಬುದಾಗಿತ್ತು. ಕಳೆದ ವರ್ಷಾಂತ್ಯದಿಂದ ಇಂಗ್ಲಿಷ್ ಮಾಧ್ಯಮಗಳು ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಪ್ರಚಾರಾಂದೋಲನದ ಕುರಿತು ವಿಸ್ತೃತ ವರದಿಗಳನ್ನು ನೀಡುತ್ತಿವೆ.

 

ದಲಿತರ ಮನೆಗಳಲ್ಲಿ ಅವರು ಉಳಿದುಕೊಂಡಿದ್ದು, ಜಾಟ್ ರೈತರನ್ನು ಭೇಟಿಯಾಗಿದ್ದು ಎಲ್ಲದರ ಬಗೆಗೂ ವಿಸ್ತೃತವಾಗಿ ಪತ್ರಿಕೆಗಳು ಬರೆದಿವೆ. ಈ ಮಧ್ಯೆ, ನವದೆಹಲಿಯ ಸುರಕ್ಷಿತತೆಯ ನೆಲೆಯಿಂದ ಹೊರಬಂದು ರಾಹುಲ್ ನೀಡುತ್ತಿದ್ದ ಭೇಟಿಗಳಿಗಿಂತ, ತನ್ನ ಸ್ವಂತ ರಾಜ್ಯದಲ್ಲಿ ಅಖಿಲೇಶ್ ಯಾದವ್ ಹೆಚ್ಚು ಸ್ಥಿರವಾಗಿ ಕಾರ್ಯ ನಿರ್ವಹಿಸಿದ್ದಾರೆ.

 

ಚುನಾವಣೆಯ ಕಡೆಯ ಹಂತಗಳ್ಲ್ಲಲ್ಲಷ್ಟೇ  ಗ್ರಾಮೀಣ ವಂಶಜನೇ ರಾಹುಲ್ ಗಾಂಧಿಗಿಂತ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳು ಅರ್ಥ ಮಾಡಿಕೊಂಡವು.ಕಾಂಗ್ರೆಸ್ ಸೋಲಿನ ಪ್ರಮಾಣ ಎಷ್ಟೆಂದು ಮತಗಟ್ಟೆ ಸಮೀಕ್ಷೆಗಳು ಸ್ಪಷ್ಟಪಡಿಸಿಯಾದ ನಂತರ `ಚಮಚಾ~ಗಳು ಈ ಫಲಿತಾಂಶವನ್ನು ತಮ್ಮ ನಾಯಕನಿಂದ ದೂರ ಇಡಲು ಯತ್ನಿಸಿದರು. ದಿಗ್ವಿಜಯ ಸಿಂಗ್, ಸಲ್ಮಾನ್ ಖುರ್ಷಿದ್, ರೇಣುಕಾ ಚೌಧರಿ ಹಾಗೂ ರೀಟಾ ಬಹುಗುಣ  ಜೋಷಿ ಎಲ್ಲರೂ ಪಕ್ಷದ ಅಸಹಾಯಕ ಕಾರ್ಯಕರ್ತನನ್ನೇ ದೂಷಿಸಿದರು.ಆದರೆ ತಾನೇ ಪ್ರಾಥಮಿಕ ಹೊಣೆ ಹೊರಬೇಕು ಎಂಬುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ.  ಈ ಫಲಿತಾಂಶಗಳು ಅವರ ಪಕ್ಷಕ್ಕೆ ಹಾಗೂ ಅವರಿಗೆ ವೈಯಕ್ತಿಕವಾಗಿ ಭಾರಿ ಹೊಡೆತ. ಈಗಾಗಲೇ ಕಾಂಗ್ರೆಸ್‌ನ ಈ ಅವಮಾನದಲ್ಲಿ, ಉತ್ತರ ಪ್ರದೇಶದಿಂದ ದೂರ ಇರುವ ರಾಜ್ಯಗಳಲ್ಲಿನ ಜಯಲಲಿತಾ, ಮಮತಾ ಬ್ಯಾನರ್ಜಿಯಂತಹ ಪ್ರಾದೇಶಿಕ ನಾಯಕಿಯರು, 2014ರಲ್ಲಿ ತೃತೀಯ ರಂಗ ಸರ್ಕಾರದ ಸಾಧ್ಯತೆಗಳನ್ನು ಕಾಣುತ್ತಿದ್ದಾರೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.