ಸೋಮವಾರ, ಜೂನ್ 14, 2021
20 °C

ಕೈಲಾಸಪತಿಯನ್ನು ಜಯಿಸಿದ ಕಾಯಕ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಹನ್ನೆರಡನೆಯ ಶತಮಾನ ನಮ್ಮ ದೇಶದ ಇತಿಹಾಸದಲ್ಲಿ ಒಂದು ಪರ್ವ­ಕಾಲ.  ಮನುಷ್ಯ ಹಾಗೂ ಸಮಾಜದ ಸಂಬಂಧಗಳನ್ನು ಕುರಿತು ಅಂದಿನ ವಚನಕಾರರು ಕಂಡ ಚಿಂತನೆ ಅಭೂತ­ಪೂರ್ವವಾದದ್ದು. ಇಂದು ನಮ್ಮ ಭಾಷೆ, ಸಂಸ್ಕೃತಿ ಮತ್ತು ಚಿಂತನೆಯ ಧಾಟಿಗಳು ಎದುರಿಸುತ್ತಿರುವ ಅಪಾಯ ಮತ್ತು ಆತಂಕಗಳನ್ನು ಕಂಡಾಗ ಅಂದಿನ ವಚನಕಾರರ ಬದುಕಿನೊಡನೆ ನಾವು ಸಂವಾದವನ್ನು ಕಲ್ಪಿಸುವ ಅಗತ್ಯತೆ ಕಾಣುತ್ತದೆ.  ಶರಣರು ನುಡಿಗೆ ಬೆಲೆ ನೀಡದೆ ನಡೆಗೆ ಮಣೆ ಹಾಕಿದ­ವರು. ವ್ಯಕ್ತಿಯನ್ನು ಜಾತಿಯಿಂದ ಗುರುತಿಸದೆ ಕಾಯಕದಿಂದ ಪ್ರೀತಿಸಿದವರು. ಅದಕ್ಕೇ ಕಾಯಕವೇ ಕೈಲಾಸ. ಅದಕ್ಕೊಂದು ಪೂಜ್ಯನೆಲೆ.  ಹೀಗೆ ಕಾಯಕದಿಂದ ಶಿವ­ನನ್ನೇ ಗೆದ್ದ ನಕ್ಕೀರನ ಕಥೆ ತುಂಬ ಸುಂದರ.ಇದು ಕರ್ನಾಟಕಕ್ಕಿಂತ ತಮಿಳು­ನಾಡಿ­ನಲ್ಲಿ ಹೆಚ್ಚು ಪ್ರಚಲಿತವಿದ್ದ ಕಥೆ. ನಕ್ಕೀರ ಯಾವಾಗಲೂ ಸಮುದ್ರದ ತಡಿ­ಯಲ್ಲೇ ಇರುವವನು. ಅವನ ಕೆಲಸ­ವೆಂದರೆ ಸಮುದ್ರದ ಆಳಕ್ಕೆ ಮುಳುಗಿ ಅಲ್ಲಿದ್ದ ಮುತ್ತುಗಳನ್ನು ಆಯ್ದು ತರು­ವುದು. ಅದು ಅವನ ದೈಹಿಕ ಕೆಲಸ­ವಾದರೂ ಅವನ ಪ್ರತಿ ಉಸಿರಿನಲ್ಲಿ ಶಿವ. ಅವನು ನೀರಿನಲ್ಲಿ ಮುಳುಗುವಾಗ, ಮುತ್ತು­ಗಳನ್ನು ಆಯುವಾಗ, ನೀರಿನಿಂದ ಹೊರಬಂದು ಅವುಗಳನ್ನು ಬೇರ್ಪಡಿ­ಸುವಾಗ ಪ್ರತಿಕ್ಷಣವೂ ಶಿವಧ್ಯಾನ. ಅವನಿಗೆ ಶಿವಭಕ್ತನೆಂದು ಅಷ್ಟು ದೊಡ್ಡ ಹೆಸರು ಬಂದ­ದ್ದನ್ನು ಕಂಡು ಶಿವನಿಗೂ ಅಸೂಯೆಯಾಯಿತಂತೆ.  ಅವನನ್ನು ಕಂಡು ಪರೀಕ್ಷಿಸ­ಬೇಕೆಂದು ಶಿವ ಸಮುದ್ರ ದಂಡೆಗೆ ಬಂದು ಪ್ರತ್ಯಕ್ಷನಾದ. ನಕ್ಕೀರ ತನ್ನ ಕಾಯಕ­ದಲ್ಲಿ ಎಷ್ಟು ತನ್ಮಯ­ನಾಗಿದ್ದನೆಂದರೆ ಮುಂದೆ ಶಿವ ನಿಂತದ್ದು ಕಾಣಲಿಲ್ಲವಂತೆ! ಅವನನ್ನು ಗಮನಿಸದೇ ನೀರಿನಲ್ಲಿ ಮುಳುಗು ಹಾಕಿದ. ಶಿವನಿಗೆ ಕೋಪ ಬಂತು.  ತನ್ನ ಭಕ್ತನೆಂದು ಜನ ಈತನನ್ನು ಕೊಂಡಾಡುತ್ತಿದ್ದರೆ ಈತ ಸಾಕ್ಷಾತ್ ತಾನೇ ಮುಂದೆ ಬಂದು ನಿಂತರೂ ಗಮನಿಸುತ್ತಿಲ್ಲ. ಶಿವನ ಕೋಪ ಹೆಚ್ಚಾ­ಯಿತು.ನಕ್ಕೀರ ನೀರಿನಿಂದ ಮೇಲೆ ಬಂದೊಡನೆ ಕ್ರುದ್ಧನಾಗಿ ತನ್ನ ಮೂರನೆಯ ಕಣ್ಣನ್ನು ತೆರೆದ. ಶಿವನ ಹಣೆಗಣ್ಣು ತೆರೆದರೆ ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ.  ನಕ್ಕೀರ ಹೇಗೆ ಬದುಕಿ ಉಳಿದಾನು? ಆದರೆ ಆಶ್ಚರ್ಯ! ಶಿವನ ತೆರೆದ ಕಣ್ಣೀರಿನ ಬೆಂಕಿಯ ಉರಿ ನಕ್ಕೀರನಿಗೆ ತಗುಲಲಿಲ್ಲ. ಅವನು ತನ್ನ ಕೆಲಸದಲ್ಲೇ ತೊಡಗಿದ್ದ. ಶಿವ ಆಶ್ಚರ್ಯದಿಂದ ನಕ್ಕೀರನನ್ನು ಕೇಳಿದ,  ‘ಅಲ್ಲಯ್ಯ,  ನನ್ನನ್ನು ಕಾಣಲೆಂದು ಅನೇ­ಕಾ­ನೇಕ  ಶರಣರು ನೂರಾರು ವರ್ಷ ತಪಸ್ಸು ಮಾಡಿದರೂ ದೊರೆಯದ ನಾನು, ನಿನ್ನ ಮುಂದೆಯೇ ನಿಂತಿದ್ದರೂ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತೀ­ದ್ದೀಯಾ.  ಇದಕ್ಕೆ ಏನು ಕಾರಣ?’ ಆಗ ನಕ್ಕೀರ, ‘ದೇವಾ, ನಾನು ನನ್ನ ಕೆಲಸದಲ್ಲಿ ತನ್ಮಯ­ನಾಗಿದ್ದೆ.  ನನಗೆ ಕಾಯಕವೇ ಪೂಜೆ.  ಆ ಕಾಯಕ ನೀನೇ, ನೀನೇ ನನ್ನ ಕಾಯಕದ ಉದ್ದೇಶ’ ಎಂದಾಗ ಶಿವ, ‘ಹೌದು, ಆದರೆ ನನ್ನ ಉರಿಗಣ್ಣಿನ ಬೆಂಕಿ  ನಿನ್ನನ್ನು ಯಾಕೆ ಸುಡಲಿಲ್ಲ?’ ಎಂದು ಕೇಳುತ್ತಾನೆ.ಅದಕ್ಕೆ ನಕ್ಕೀರ, ‘ದೇವಾ, ನಾನು ದುಡಿದು ತಿನ್ನುವವನು, ನೀನು ತಿರಿದು ತಿನ್ನುವವನು. ದುಡಿದು ತಿನ್ನುವವನು ತಿರಿದು ತಿನ್ನುವವನಿಗಿಂತ ದೊಡ್ಡವನು.  ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿ ಹೆಚ್ಚು’ ಎನ್ನುತ್ತಾನೆ.  ಈ ಮಾತಿಗೆ ಶಿವ ಮೆಚ್ಚುತ್ತಾನೆ, ನಕ್ಕೀರನ ಕಾಯಕದ ಶಕ್ತಿ­ಯನ್ನು ಹೊಗಳುತ್ತಾನೆ, ಆಶೀರ್ವದಿ­ಸುತ್ತಾನೆ. ಎಂಥ ಸುಂದರ ಕಥೆ ಇದು! ಕಾಯಕ ಬರೀ ಕೈಲಾಸವಲ್ಲ, ಅದು ಕೈಲಾಸ­­ಪತಿಯ ಶಕ್ತಿಯನ್ನೂ ಮೀರಿಸು­ವಂಥದ್ದು! ಕಥೆ ಧ್ವನಿಪೂರ್ಣವಾಗಿದೆ. ನಾವು ಒಪ್ಪಿಕೊಂಡಿರುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ತನ್ಮಯತೆಯಿಂದ ಮಾಡಿದರೆ ಭೌತಿಕ ಜಗತ್ತಿನಲ್ಲಿ ಯಶಸ್ಸು ಪಡೆಯುವುದಲ್ಲದೇ, ಭಗವಂತನ ಕೃಪೆಗೂ ಪಾತ್ರರಾಗುತ್ತೇವೆ ಎಂದು ತಿಳಿಸಿದ ಶರಣರ ಮಾತು ನಮ್ಮ ಬದುಕಿನಲ್ಲಿ ಬೆಳಕು ಚೆಲ್ಲಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.