ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚಿಲ್‌ ಪೂರ್ವಗ್ರಹ ಮತ್ತು ಗಾಂಧಿ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಈ ತಿಂಗಳ ಆರಂಭದಲ್ಲಿ ಲಂಡನ್‌ನ ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ ಪುತ್ಥಳಿ ಅನಾವರಣಗೊಂಡಿದೆ. ಈ ಸ್ಥಳದಲ್ಲಿ ಇದು 11ನೇ ಪುತ್ಥಳಿಯಾದರೂ, ಅವುಗಳಲ್ಲೆಲ್ಲ ಸರ್ಕಾರಿ ಸ್ಥಾನಮಾನ ಹೊಂದಿರದಿದ್ದ ಮೊದಲ ವ್ಯಕ್ತಿಯದಾಗಿದೆ. ಇಲ್ಲಿ ಈ ಮೊದಲೇ ತಮ್ಮ ಪುತ್ಥಳಿಗಳನ್ನು ಹೊಂದಿದ್ದ ನಾಯಕರಲ್ಲಿ ಬ್ರಿಟನ್‌ನ ಏಳು ಪ್ರಧಾನ ಮಂತ್ರಿಗಳು, ದಕ್ಷಿಣ ಆಫ್ರಿಕಾದವರಾದ ನೆಲ್ಸನ್‌ ಮಂಡೇಲಾ, ಜ್ಯಾನ್‌ ಕ್ರಿಶ್ಚಿಯನ್‌ ಸ್ಮುತ್ಸ್ ಹಾಗೂ ಅಮೆರಿಕದ ಅಬ್ರಹಾಂ ಲಿಂಕನ್‌ ಸೇರಿದ್ದಾರೆ.

ಗಾಂಧಿಗೆ ಸ್ಮುತ್ಸ್ ಅವರ ಪರಿಚಯ ಚೆನ್ನಾಗಿಯೇ ಇತ್ತು. ಅವರಿಬ್ಬರೂ ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಎದುರಾಳಿಗಳಾಗಿದ್ದವರು. ಭಾರತೀಯರಿಗೆ ಮಹತ್ವದ ಹಕ್ಕುಗಳನ್ನು ನೀಡಬೇಕೆಂಬ ಗಾಂಧೀಜಿಯ ಆಗ್ರಹವನ್ನು, ಮೊದಲು ವಸಾಹತುಶಾಹಿಯ ಕಾರ್ಯದರ್ಶಿಯಾಗಿದ್ದ ಮತ್ತು ನಂತರ ಆಂತರಿಕ ಸಚಿವರಾಗಿದ್ದ ಸ್ಮುತ್ಸ್ ವಿರೋಧಿಸಿದ್ದರು. ಹೀಗೆ ಮುಖಾಮುಖಿಯಾಗುತ್ತಲೇ ಅವರಲ್ಲಿ ಪರಸ್ಪರ ಅಸೂಯಾಪೂರ್ವಕ ಮೆಚ್ಚುಗೆ ಬೆಳೆದುಬಂದಿತ್ತು. 1915ರಲ್ಲಿ ಗಾಂಧಿ ಭಾರತಕ್ಕೆ ಹಿಂದಿರುಗಿದಾಗ ಸ್ಮುತ್ಸ್‌ ತಮ್ಮ ಸ್ನೇಹಿತರೊಬ್ಬರಿಗೆ ‘ಸಂತ ನಮ್ಮ ದೇಶವನ್ನು ತೊರೆದಾಯ್ತು. ಇನ್ನೆಂದಿಗೂ ಬರಲಾರರೆಂದು ಆಶಿಸುತ್ತೇನೆ’ ಎಂದು ಬರೆದಿದ್ದರು.

25 ವರ್ಷಗಳ ಬಳಿಕ, ಗಾಂಧೀಜಿ ಅವರ 70ನೇ ಜನ್ಮದಿನೋತ್ಸವದ ಪ್ರಯುಕ್ತ (1939, ಅಕ್ಟೋಬರ್‌ 2) ಹೊರತರಲು ಉದ್ದೇಶಿಸಿದ್ದ ‘ಅಭಿನಂದನ ಗ್ರಂಥ’ಕ್ಕೆ ಲೇಖನವೊಂದನ್ನು ಬರೆದುಕೊಡುವಂತೆ ಸ್ಮುತ್ಸ್‌ ಅವರನ್ನು ಕೇಳಲಾಗಿತ್ತು. ಆಗ ಅವರು ಪುಟ್ಟದಾಗಿದ್ದರೂ ಮೊನ
ಚಾಗಿದ್ದ ತಮ್ಮ ಬರಹದಲ್ಲಿ, ಗಾಂಧೀಜಿಯವರ ಆರಂಭದ ಸತ್ಯಾಗ್ರಹಗಳು ಹೇಗಿರುತ್ತಿದ್ದವು, ‘ಅತ್ಯಂತ ತ್ರಾಸದಾಯಕವಾದ’ ಆ ಸಂದರ್ಭಗಳಲ್ಲೆಲ್ಲ ತಾವೆಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತಿತ್ತು ಎಂಬುದನ್ನೆಲ್ಲ ತೆರೆದಿಟ್ಟಿದ್ದರು. ಭಾರಿ ಸಂಖ್ಯೆಯ ಭಾರತೀಯರನ್ನು ಬಂಧಿಸುವಾಗ ಉಂಟಾಗುತ್ತಿದ್ದ ‘ಪ್ರಕ್ಷುಬ್ಧ ಸ್ಥಿತಿ’, ‘ಅವರನ್ನು ನಿಯಂತ್ರಿಸಲಾಗದ ಅವ್ಯವಸ್ಥೆ, ಸ್ವತಃ ಬಂಧನದಲ್ಲಿದ್ದಾಗ ಗಾಂಧಿ ಮೌನಿಯಾಗಿ ಬಿಡುತ್ತಿದ್ದ ಪರಿ’ ಎಲ್ಲವನ್ನೂ ಸ್ಮರಿಸಿದ್ದರು.

‘ಮೇಲ್ನೋಟಕ್ಕೆ ಪ್ರಜಾಪ್ರಭುತ್ವ ಮತ್ತು ಪಾಶ್ಚಾತ್ಯ ನಾಗರಿಕತೆಯಿಂದ ಹೊರತಾಗಿರುವಂತೆ ಕಾಣುತ್ತಿದ್ದ ಗಾಂಧಿ ಮಾರ್ಗವು ಅವರೊಬ್ಬ ಮೋಸದಿಂದ ತೀವ್ರವಾಗಿ ನಲುಗುತ್ತಿರುವ ವ್ಯಕ್ತಿ ಎಂಬ ಅಭಿಪ್ರಾಯವನ್ನು ಮೂಡಿಸುತ್ತಿತ್ತು. ಇದು ಕ್ರಿಶ್ಚಿಯನ್ನರಿಗೆ ತಮ್ಮ ಹಿಂದಿನ ಹುತಾತ್ಮರು ಮತ್ತು ಪ್ರತಿಭಟನಾಕಾರರನ್ನು ನೆನಪಿಗೆ ತರುತ್ತಿತ್ತು. ರಾಜಕೀಯ ವಿಧಾನಕ್ಕೆ ಗಾಂಧಿ ಕೊಟ್ಟ ಈ ವಿಶಿಷ್ಟ ಕೊಡುಗೆಯ ಹಿಂದೆ, ತಮ್ಮನ್ನು ತಾವು ಕಷ್ಟಕ್ಕೆ ಒಡ್ಡಿಕೊಳ್ಳುವ ಮೂಲಕ ತಮ್ಮ ಧ್ಯೇಯಕ್ಕೆ ಇತರರ ಅನುಕಂಪ ಮತ್ತು ಬೆಂಬಲ ಗಳಿಸುವ ಉದ್ದೇಶವಿತ್ತು. ತಾರ್ಕಿಕ ವಿಧಾನ, ಮನವೊಲಿಕೆಯಂತಹ ಸಾಧಾರಣ ಮಾರ್ಗಗಳು ವಿಫಲವಾದಾಗ, ಭಾರತ ಹಾಗೂ ಪೌರಾತ್ಯ ದೇಶಗಳ ಪ್ರಾಚೀನ ಪರಿಪಾಠಗಳನ್ನು ಆಧಾರವಾಗಿಟ್ಟುಕೊಂಡ ಈ ಹೊಸ ತಂತ್ರವನ್ನು ಅವರು ಅಳವಡಿಸಿಕೊಂಡಿದ್ದರು’ ಎಂದು ಸ್ಮುತ್ಸ್‌ ಬರೆದಿದ್ದರು.

ಹಿಂದಿನ ವರ್ಷಗಳ ತಮ್ಮ ಅನುಭವದ ಪರಿಪಕ್ವತೆಯಿಂದ ಗಾಂಧಿ ಕುರಿತು ಸ್ಮುತ್ಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿ ಪುತ್ಥಳಿ ಹೊಂದಿರುವ ಮತ್ತೊಬ್ಬ ವ್ಯಕ್ತಿ ವಿನ್‌ಸ್ಟನ್‌ ಚರ್ಚಿಲ್‌ ಅವರಿಗೆ ಈ ಮಾತನ್ನು ಅನ್ವಯಿಸಲಾಗದು. 20ನೇ ಶತಮಾನದ ಮಹತ್ವದ ರಾಜಕಾರಣಿಗಳ ಅಂತಿಮ ಪಟ್ಟಿಯಲ್ಲಿ ಚರ್ಚಿಲ್‌ ಮತ್ತು ಗಾಂಧಿ ಇಬ್ಬರೂ ಸ್ಥಾನ ಪಡೆದಿದ್ದರು. ಒಬ್ಬರು ಹಿಟ್ಲರ್‌ ಮತ್ತು ನಾಜಿತತ್ವವನ್ನು ಬಗ್ಗುಬಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು. ಮತ್ತೊಬ್ಬರು ಅಹಿಂಸಾತ್ಮಕ ಚಳವಳಿಯ ಮೂಲಕ ಸಾಮ್ರಾಜ್ಯವನ್ನು ಉರುಳಿಸಲು ನೆರವಾದವರು. ಈ ಬಗೆಯ ಚಳವಳಿಯು ಬಳಿಕ ಇತರ ದೇಶಗಳು ಮತ್ತು ಸಂದರ್ಭಗಳಲ್ಲೂ ವ್ಯಾಪಕವಾಗಿ ಬಳಕೆಗೆ ಬಂತು.

ಗಾಂಧೀಜಿಗೆ ಚರ್ಚಿಲ್‌ ಅವರ ಬಗ್ಗೆ ನಿರ್ದಿಷ್ಟವಾದ ನಿಲುವುಗಳೇನೂ ಇರಲಿಲ್ಲ. ಆದರೆ ಆ ಶ್ರೀಮಂತ ಬ್ರಿಟನ್ನಿಗ ಮಾತ್ರ ಭಾರತದ ಹೋರಾಟಗಾರನನ್ನು ಬಹುವಾಗಿ ದ್ವೇಷಿಸುತ್ತಿದ್ದರು. 1930ರಲ್ಲಿ ಗಾಂಧಿ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದಾಗ, ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳದಂತೆ ಬ್ರಿಟನ್ನಿಗರನ್ನು ಎಚ್ಚರಿಸಿದ್ದರು. ಆ ಮೂಲಕ ಅವರು, ಅದಾಗಲೇ ಕಳೆದುಹೋಗುತ್ತಿದ್ದ ತಮ್ಮ ಹಿಡಿತವನ್ನು ಮರು ಸ್ಥಾಪಿಸಲು ಯತ್ನಿಸಿದ್ದರು.

‘ಗಾಂಧಿ ಭಾರತದಿಂದ ಬ್ರಿಟನ್ನರನ್ನು ಹೊರದೂಡುವ ಮತ್ತು ಅವರ ವ್ಯಾಪಾರವನ್ನು ಅಲ್ಲಿಂದ ಶಾಶ್ವತವಾಗಿ ಬಹಿಷ್ಕರಿಸಬೇಕೆಂಬ ನಿಲುವಿನ ಪರವಾಗಿದ್ದಾರೆ. ಗಾಂಧಿವಾದ ಇವೆಲ್ಲವನ್ನೂ ಒಳಗೊಂಡಿದೆ. ಅವರೊಟ್ಟಿಗೆ ಎಂದಿಗೂ ರಾಜಿ ಸಾಧ್ಯವಿಲ್ಲ. ಇಂದೋ ನಾಳೆಯೋ ಅವರನ್ನು ಹಿಡಿತಕ್ಕೆ ತೆಗೆದುಕೊಂಡು ಅಂತಿಮವಾಗಿ ಬಗ್ಗುಬಡಿಯಬೇಕಾಗಿದೆ’ ಎಂದು ಚರ್ಚಿಲ್‌ ಘೋಷಿಸಿದ್ದರು.

ಇದಾದ ವರ್ಷದ ಬಳಿಕ ದುಂಡು ಮೇಜಿನ ಸಮ್ಮೇಳನ ಕ್ಕಾಗಿ ಗಾಂಧಿ ಲಂಡನ್‌ಗೆ ತೆರಳಿದ್ದರು. ಅವರು ಅಲ್ಲಿಗೆ ಬಂದಿ ಳಿದ ದಿನ ಪತ್ರಕರ್ತರನ್ನು ಭೇಟಿಯಾಗಿ ‘ನಾನು ಚರ್ಚಿಲ್‌ ಮತ್ತು ಲಾರ್ಡ್‌ ರೋದರ್‌ಮೇರ್‌ (ಸಾಮ್ರಾಜ್ಯ ಪರ ವೃತ್ತಪತ್ರಿಕೆಯ ಮಾಲೀಕ) ಅವರಿಗೆ ಪತ್ರ ಬರೆದು, ನನಗೆ ಸಂದರ್ಶನ ನೀಡುವಂತೆ ಕೇಳಲಿದ್ದೇನೆ. ಇದು ತಮಾಷೆಯ ಸಂಗತಿಯಲ್ಲ. ನನ್ನನ್ನು ವಿರೋಧಿಸಿದವರನ್ನು ಕಾಣಬಯಸುತ್ತೇನೆ. ಇದರಿಂದ ಅವರೆದುದು ನನ್ನ ನಿಲುವು ಮಂಡಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದರು.

ಆದಾಗ್ಯೂ ಗಾಂಧಿ ಭೇಟಿಗೆ ಚರ್ಚಿಲ್‌ ಒಪ್ಪಲಿಲ್ಲ. 1930ರಲ್ಲಂತೂ, ಭಾರತೀಯರಿಗೆ ಮಹತ್ವದ ಹಕ್ಕುಗಳನ್ನು ನೀಡುವುದನ್ನು ವರ್ಷದುದ್ದಕ್ಕೂ ಅವರು ವಿರೋಧಿಸುತ್ತಲೇ ಬಂದರು. 1940ರ ಮೇ ತಿಂಗಳಿನಲ್ಲಿ ಪ್ರಧಾನಿಯಾದ ಬಳಿಕ ಸಹ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯವಾದಿಗಳ ಜೊತೆ ಚರ್ಚಿಸಲು ಚರ್ಚಿಲ್‌ ಒಪ್ಪಲಿಲ್ಲ. ‘ಕ್ವಿಟ್‌ ಇಂಡಿಯಾ’ ಚಳವಳಿಯನ್ನು ನಿರ್ದಯವಾಗಿ ದಮನ ಮಾಡಲಾಯಿತು. 1944ರಲ್ಲಿ ಗಾಂಧಿ ಬಿಡುಗಡೆಗೊಂಡು ವೈಸ್‌ರಾಯ್‌ ಲಾರ್ಡ್‌ ವೇವೆಲ್‌ ಅವರೊಂದಿಗೆ ಮಾತುಕತೆಗೆ ಉದ್ಯುಕ್ತವಾದಾಗ ‘ಮತ್ತೆ ಜೈಲಿಗೆ ದೂಡಬೇಕಾಗಿರುವ ದೇಶದ್ರೋಹಿಯೊಂದಿಗೆ ಮಾತುಕತೆ ನಡೆಸಬೇಕಾದ ಅಗತ್ಯ ವೈಸ್‌ರಾಯ್‌ ಅವರಿಗಿಲ್ಲ’ ಎಂದು ಆಗ್ರಹಿಸಿದ್ದರು.

1948ರಲ್ಲಿ ಗಾಂಧಿ ನಿಧನರಾದರು. ಮೂರು ವರ್ಷಗಳ ತರುವಾಯ ಚರ್ಚಿಲ್‌ ತಮ್ಮ ಸಂಗ್ರಾಮದ ಘಟನಾವಳಿಗಳ ಬಗ್ಗೆ ‘ದಿ ಹಿಂಜ್‌ ಆಫ್‌ ಫೇಟ್‌’ ಎಂಬ ಹೆಸರಿನ ಬರಹಗಳ ಕಂತೊಂದನ್ನು ಪ್ರಕಟಿಸಿದರು. ಅದರಲ್ಲಿ ತಮ್ಮ ಹಳೆಯ ವೈರಿಯ ಬಗ್ಗೆ ಅವರು ವಿಸ್ಮಯಕಾರಕ ಆರೋಪಗಳನ್ನು ಮಾಡಿದ್ದರು. ಅದನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ.

‘1943ರ ಫೆಬ್ರುವರಿಯ ಆರಂಭದಲ್ಲಿ ಮೂರು ವಾರಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಗಾಂಧಿ ಪ್ರಕಟಿಸಿದ್ದರು. ಪುಣೆಯ ಹೊರಭಾಗದಲ್ಲಿ ಅತ್ಯಂತ ಅನುಕೂಲಕರವಾಗಿದ್ದ ಸಣ್ಣ ಅರಮನೆಯೊಂದರಲ್ಲಿ ಬಂಧನದಲ್ಲಿದ್ದ ಅವರ ಮೇಲೆ ಬ್ರಿಟಿಷ್‌ ಮತ್ತು ಭಾರತೀಯ ವೈದ್ಯರು ತೀವ್ರ ನಿಗಾ ವಹಿಸಿದ್ದರು. ಗಾಂಧಿ ಹಟಮಾರಿತನದಿಂದ ಸತ್ಯಾಗ್ರಹವನ್ನು ಮುಂದುವರಿಸಿದರು ಮತ್ತು ಅವರ ಸಾವು ಸನ್ನಿಹಿತವಾಗುತ್ತಿದೆ ಎಂಬಂತೆ ವಿಶ್ವದಾದ್ಯಂತ ವ್ಯವಸ್ಥಿತ ಪ್ರಚಾರ ನಡೆಯಿತು.

ಆರಂಭದಲ್ಲಿ, ಗಾಂಧಿ ಗ್ಲೂಕೋಸ್‌ ಬೆರೆಸಿದ ನೀರನ್ನು ಕುಡಿಯುತ್ತಿದ್ದರು. ಈ ಕಾರಣದಿಂದ ಮತ್ತು ತಮ್ಮ ಅತಿಯಾದ ಚಟುವಟಿಕೆ, ಜೀವನಪರ್ಯಂತ ಅನುಸರಿಸಿಕೊಂಡು ಬಂದ ನೇಮನಿಷ್ಠೆಯಿಂದಾಗಿ, ಸೂಕ್ಷ್ಮಪ್ರವೃತ್ತಿಯ ಈ ವ್ಯಕ್ತಿ ದೃಗ್ಗೋಚರವಾದ ಯಾವ ಆಹಾರವನ್ನು ಸೇವಿಸದೆಯೂ ಬದುಕುಳಿಯಲು ಸಾಧ್ಯವಾಯಿತು. ಅಂತಿಮವಾಗಿ, ನಾವು ಜಗ್ಗುವುದಿಲ್ಲವೆಂಬುದು ಮನವರಿಕೆಯಾದ ಬಳಿಕ ಅವರು ಉಪವಾಸವನ್ನು ತ್ಯಜಿಸಿದರು. ಹೀಗಾಗಿ ಅತ್ಯಂತ ಕೃಶರಾಗಿದ್ದರೂ ಅವರ ಆರೋಗ್ಯಕ್ಕೆ ಗಂಭೀರವಾದ ತೊಡಕುಗಳೇನೂ ಆಗಲಿಲ್ಲ’.

ಈ ಪ್ರಕಟಣೆ ಭಾರತದಲ್ಲಿ ಕೋಲಾಹಲವನ್ನೇ ಎಬ್ಬಿಸಿತು. ಗಾಂಧಿಯವರ ಕಾರ್ಯದರ್ಶಿ ಪ್ಯಾರೆಲಾಲ್‌ ಹಾಗೂ ಅವರ ವೈದ್ಯ ಬಿಧಾನ್‌ ಚಂದ್ರ ರಾಯ್‌ ಆಕ್ರೋಶಭರಿತ ಪತ್ರಗಳನ್ನು ಚರ್ಚಿಲ್‌ ಅವರಿಗೆ ಬರೆದರು. ಇದೊಂದು ಸುಳ್ಳು ಆರೋಪ ಎಂದು ತಳ್ಳಿಹಾಕಿದರು. ಗ್ಲೂಕೋಸ್‌ ಸೇವಿಸದಿದ್ದರೆ ನೀವು ಸಾಯಬಹುದು ಎಂದು ಸರ್ಕಾರಿ ವೈದ್ಯರು ಎಚ್ಚರಿಸಿದ್ದರೂ ಉಪವಾಸ ಸತ್ಯಾಗ್ರಹದ ಯಾವ ಸಂದರ್ಭದಲ್ಲೂ ಅದನ್ನು ಸೇವಿಸಲು ಗಾಂಧಿ ಒಪ್ಪಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಉಪವಾಸ ಸತ್ಯಾಗ್ರಹ ಕರಾರುವಾಕ್ಕಾಗಿ ಮೂರು ವಾರಗಳ ಅವಧಿಯದು ಎಂದು ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಸ್ಮರಿಸಿದರು.

ಈ ಕುತೂಹಲಕರ ಸಂಗತಿಯ ಬಗ್ಗೆ ನಾನೊಂದಿಷ್ಟು  ಶೋಧನೆ ನಡೆಸಿದಾಗ, ಭಾರತದ ಪತ್ರಿಕೆಗಳಲ್ಲಿ ಈ ಕುರಿತು ಕೆಲವು ಕಟುವಾದ ಸಂಪಾದಕೀಯಗಳು ಪ್ರಕಟವಾಗಿದ್ದುದು ತಿಳಿಯಿತು. ‘ದಿ ಟ್ರಿಬ್ಯೂನ್‌’ (ಆಗ ಅಂಬಾಲದಿಂದ ಪ್ರಕಟವಾಗುತ್ತಿತ್ತು) ‘1943ರಲ್ಲಿ ಗಾಂಧಿ ಅವರನ್ನು ನೋಡಿಕೊಳ್ಳುತ್ತಿದ್ದ ಬ್ರಿಟನ್‌ ಮತ್ತು ಭಾರತೀಯ ವೈದ್ಯರೇ ಖುದ್ದಾಗಿ ಚರ್ಚಿಲ್‌ ಅವರ ಆರೋಪವನ್ನು ನಿರಾಕರಿಸಿದ್ದರು’ ಎಂದು ತಿಳಿಸಿತ್ತು. ‘ಈ ಹೇಳಿಕೆಗಳು ಮಹಾತ್ಮನ ವ್ಯಕ್ತಿತ್ವವನ್ನು ಚರ್ಚಿಲ್ ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ ಮತ್ತು ಈ ದೇಶದ ಬಗ್ಗೆ ಅವರಿಗೆಷ್ಟು ನಿರ್ಲಕ್ಷ್ಯ ಧೋರಣೆಯಿತ್ತು  ಎಂಬುದನ್ನು ಸೂಚಿಸುತ್ತದೆ. ಚರ್ಚಿಲ್‌ ಒಬ್ಬ ಮಹಾನ್‌ ಸಮರ ನಾಯಕ. ಆದರೆ ಅತ್ಯಂತ ಸಂಕುಚಿತ ಸ್ವಭಾವದವರು. ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳ ಜನರಿಗೆ ತಮ್ಮದೇ ಬದುಕು ಕಟ್ಟಿಕೊಳ್ಳುವ ಅರ್ಹತೆ ಇದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ಅಭಿಪ್ರಾಯಪಟ್ಟಿತ್ತು.

ಈಗ ಪ್ರಕಟಣೆ ನಿಲ್ಲಿಸಿರುವ ‘ಇಂಡಿಯನ್‌ ನ್ಯೂಸ್‌ ಕ್ರಾನಿಕಲ್‌’ ಇದಕ್ಕಿಂತಲೂ ಹೆಚ್ಚು ಕಠಿಣವಾಗಿ ಪ್ರತಿಕ್ರಿಯಿಸಿತ್ತು. 1951ರ ಸೆ.27ರಂದು ಹೊರಬಂದ ‘ಚರ್ಚಿಲ್ಲಿ ಯಾನ’ ಎಂಬ ಹೆಸರಿನ ಸಂಪಾದಕೀಯವು, ‘ಚರ್ಚಿಲ್‌ ಅವರು ವಿವರಿಸಿರುವ ಸಂಗ್ರಾಮದ ಘಟನಾವಳಿಗಳು ಸಂಪೂರ್ಣ ಕಪೋಲಕಲ್ಪಿತ ಮತ್ತು ತಪ್ಪು ಹೇಳಿಕೆಗಳಿಂದ ಕೂಡಿವೆ ಎಂಬುದಕ್ಕೆ ಗಾಂಧಿ ವಿರುದ್ಧದ ಅವರ ಅಪನಿಂದೆಗಳೇ ನಿದರ್ಶನ. ಚರ್ಚಿಲ್‌ ಅವರ ಇಡೀ ರಾಜಕೀಯ ಭವಿಷ್ಯವೇ ಅವಕಾಶವಾದಿತನ, ಅಸಮಂಜಸ ಮತ್ತು ಸಂಪೂರ್ಣ ನೀಚತನದಿಂದ ಕೂಡಿದೆ. ಅವರೊಬ್ಬ ಪ್ರತಿಗಾಮಿ ಮತ್ತು ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಕಡು ಆರಾಧಕ’ ಎಂದು ಹೇಳಿತ್ತು.

‘ಚರ್ಚಿಲ್‌ ಸರಿಪಡಿಸಲಾಗದಷ್ಟು ಕೆಟ್ಟುಹೋಗಿರುವ, ಹಳೆಯ ಕಾಲದ ಮತ್ತು ದಿನದಿಂದ ದಿನಕ್ಕೆ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ವ್ಯಕ್ತಿ. ಅವರ ಸಂಗ್ರಾಮದ ಘಟನಾವಳಿಯು ಶಬ್ದಾಡಂಬರದ ಪದವಿನ್ಯಾಸ, 19ನೇ ಶತಮಾನದ ಇಂಗ್ಲಿಷ್‌ನ ಕಾರಣಕ್ಕಾಗಿ ಓದಿಸಿಕೊಳ್ಳಬಹುದೇ ಹೊರತು, ಯಾವೊಬ್ಬ ಇತಿಹಾಸ ವಿದ್ಯಾರ್ಥಿಯೂ ಅದನ್ನು ಒಂದು ಉತ್ತಮವಾದ ಮಾರ್ಗದರ್ಶಿ ಎಂದು ಪರಿಗಣಿಸುವುದಿಲ್ಲ. ಕಾಲಕ್ರಮೇಣ ಅದು ಕಸದ ಬುಟ್ಟಿಗೆ ಹೋಗುವ ಸಂಭವವೇ ಹೆಚ್ಚು’ ಎಂದು ಹೇಳಿತ್ತು.

‘ಮಹಾತ್ಮ ಗಾಂಧಿ ಅವರನ್ನು ಕುರಿತ ಇಂತಹ ದುರುದ್ದೇಶಪೂರಿತ ಟೀಕೆಗಳು ಯಾರನ್ನೂ ದಾರಿ ತಪ್ಪಿಸುವುದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಚರ್ಚಿಲ್‌ ಮತ್ತು ಅವರ ಬರಹಗಳು ಗತಕಾಲಕ್ಕೆ ಸರಿದ ಬಳಿಕ, ಮಾನವಕೋಟಿಯು ಗಾಂಧೀಜಿ ಅವರನ್ನು ಶಾಂತಿದೂತ ಎಂದೇ ಮತ್ತೆ ಮಾನ್ಯ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟಿತ್ತು.

‘ದಿ ಹಿಂದೂಸ್ತಾನ್‌ ಟೈಮ್ಸ್’ನ ಪ್ರತಿಕ್ರಿಯೆ ಹೆಚ್ಚು ಖಂಡನಾತ್ಮಕವಾಗಿ ಇರದಿದ್ದರೂ ಪರಿಣಾಮಕಾರಿಯಾ‌ಗಿತ್ತು. ಗಾಂಧಿ ಅವರ ಪುತ್ರ ದೇವದಾಸ್‌ ಆಗ ಅದರ ಸಂಪಾದಕರಾಗಿದ್ದರು. 1943ರಲ್ಲಿ ಗಾಂಧಿ ಉಪವಾಸ ಸತ್ಯಾಗ್ರಹ ನಡೆಸಿದ್ದಾಗ ಅವರನ್ನು ನೋಡಿಕೊಂಡಿದ್ದ ಬ್ರಿಟನ್‌ ವೈದ್ಯ ಮೇಜರ್‌ ಜನರಲ್‌ ಆರ್‌.ಎಚ್‌.ಕ್ಯಾಂಡಿ ಅವರನ್ನು ಪತ್ತೆ ಹಚ್ಚಲು ವರದಿಗಾರರೊಬ್ಬರನ್ನು ಅವರು ನಿಯೋಜಿಸಿದ್ದರು. ಡಾ.ಕ್ಯಾಂಡಿ ಆಗ ನಿವೃತ್ತರಾಗಿ ಹ್ಯಾಂಪ್‌ಶೈರ್‌ನ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದರು. ಗ್ಲೂಕೋಸ್‌ ಸೇವಿಸುವಂತೆ ತಾವು ನೀಡಿದ್ದ ಸಲಹೆಯನ್ನು ಗಾಂಧಿ ತಿರಸ್ಕರಿಸಿದ್ದುದಾಗಿ ಅವರು ಸ್ಪಷ್ಟಪಡಿಸಿದ್ದರು.

ಇಂತಹ ತಿದ್ದುಪಡಿಗಳ ಬಗ್ಗೆ ಚರ್ಚಿಲ್‌ ಅವರ ಪ್ರತಿಕ್ರಿಯೆ ಏನಿತ್ತೋ ತಿಳಿದುಬಂದಿಲ್ಲ. ಆದರೂ ಗಾಂಧಿಯವರ ಬಗ್ಗೆ ಅವರಿಗಿದ್ದ ದ್ವೇಷ ಭಾವನೆಯ ತೀವ್ರತೆ ಇಲ್ಲಿ ಗಮನಾರ್ಹ. 1930ರಲ್ಲಿ ರಾಷ್ಟ್ರದ್ರೋಹಿ ಎಂದು ಅವರು ತಳ್ಳಿಹಾಕಿದ್ದ ವ್ಯಕ್ತಿ, 1950ರ ಹೊತ್ತಿಗೆ ಬಹುತೇಕ ವಿಶ್ವಮಾನ್ಯರಾದರು. ಹೀಗಾಗಿ ಬಹುಶಃ ಚರ್ಚಿಲ್‌ ಅವರ ಬರಹದಲ್ಲಿನ ವ್ಯಂಗ್ಯವಾದ ಮೊನಚು, ಗಾಂಧಿಗೆ (ಆ ವೇಳೆಗೆ ನಿಧನರಾಗಿದ್ದ) ಅವಮಾನ ಮಾಡುವ ಅವರ ಕೊನೆಯ ಪ್ರಯತ್ನವಾಗಿತ್ತೇನೋ.

ಚರ್ಚಿಲ್‌ ಮತ್ತು ಗಾಂಧಿ ಒಮ್ಮೆ ಮಾತ್ರ 1906ರಲ್ಲಿ ಲಂಡನ್‌ನಲ್ಲಿ ಭೇಟಿಯಾಗಿದ್ದರು. ಆಗ ಚರ್ಚಿಲ್‌ ವಸಾಹತುಗಳ ಅಧೀನ ಕಾರ್ಯದರ್ಶಿಯಾಗಿದ್ದರು. ಈ ಅಧಿಕಾರವನ್ನು ಬಳಸಿಕೊಂಡು ಅವರು ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್‌ ಮತ್ತು ಇತರ ಪಟ್ಟಣಗಳ ಮುಖ್ಯ ಬೀದಿಗಳಲ್ಲಿ ಭಾರತೀಯ ವ್ಯಾಪಾರಿಗಳ ತೆರವನ್ನು ಬೆಂಬಲಿಸಿದ್ದರು. ಬಿಳಿಯ ವ್ಯಾಪಾರಿಗಳಿಗೆ ಸ್ಪರ್ಧೆ ಇಲ್ಲದಂತೆ ನೋಡಿಕೊಳ್ಳುವುದು ಅವರ  ಉದ್ದೇಶವಾಗಿತ್ತು. ತಮ್ಮ ಈ ನಿಲುವನ್ನು ಸಮರ್ಥಿಸಿಕೊಂಡಿದ್ದ ಚರ್ಚಿಲ್‌ ‘ಬಿಳಿಯರು ಮತ್ತು ಇತರ ವರ್ಣೀಯರ ಕ್ವಾರ್ಟರ್ಸ್ ಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ಯುರೋಪಿಯನ್ನರು, ಏಷ್ಯನ್ನರು ಮತ್ತು ಸ್ಥಳೀಯ ಕುಟುಂಬಗಳು ಅಕ್ಕಪಕ್ಕ ಇರಲು ಬಿಟ್ಟರೆ ಸಾಕಷ್ಟು ಕೆಡುಕುಗಳಿಗೆ ದಾರಿಯಾಗುತ್ತದೆ’ ಎಂದು ಹೇಳಿದ್ದರು.

ಆದರೆ ಗಾಂಧಿ ನಂಬಿಕೆಯೇ ಬೇರೆಯಾಗಿತ್ತು. ವಾಸ್ತವದಲ್ಲಿ, ಚರ್ಚಿಲ್‌ರನ್ನು ಭೇಟಿಯಾದ ಸಂದರ್ಭದಲ್ಲಿ ಕಸ್ತೂರಬಾ ಮತ್ತು ಗಾಂಧಿ ಜೊಹಾನ್‌್ಸಬರ್ಗ್‌ನಲ್ಲಿ ಹೆನ್ರಿ ಹಾಗೂ ಮಿಲ್ಲಿ ಪೊಲಾಕ್‌ ಎಂಬ ಇಂಗ್ಲಿಷ್‌ ದಂಪತಿಯೊಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಜನಾಂಗಗಳು ಎಂದೆಂದಿಗೂ ದೂರ ಇರುವುದಕ್ಕಿಂತ ಒಟ್ಟಿಗೇ ಜೀವಿಸುವುದು ಹೆಚ್ಚು ಮಾನವಿಕ ಮತ್ತು ನಾಗರಿಕತೆಯಿಂದ ಕೂಡಿದ್ದು ಎಂಬುದನ್ನು ಚರ್ಚಿಲ್‌ ಅವರಿಗೆ ಮನವರಿಕೆ ಮಾಡಿಕೊಡಲು ಗಾಂಧಿಗೆ ಸಾಧ್ಯವಾಗಲಿಲ್ಲ.

1906ರ ಭೇಟಿಯ ನಂತರದ ಒಂದು ಶತಮಾನಕ್ಕೂ ಹೆಚ್ಚು ಕಾಲಾನಂತರ ಗಾಂಧಿ ಮತ್ತು ಚರ್ಚಿಲ್‌ ಈಗ ಮತ್ತೊಮ್ಮೆ ಲಂಡನ್‌ನಲ್ಲಿ (ಮರಣಾನಂತರ) ಭೇಟಿಯಾಗಿದ್ದಾರೆ. ವರ್ಣಭೇದ ನೀತಿ ಹಾಗೂ ವಸಾಹತುಶಾಹಿ ಕುರಿತ ವಿನ್‌ಸ್ಟನ್‌ ಚರ್ಚಿಲ್‌ ಅವರ ದೃಷ್ಟಿಕೋನಗಳಿಂದ ಇಂಗ್ಲೆಂಡ್‌ ಎಷ್ಟರಮಟ್ಟಿಗೆ ಹೊರಬಂದಿದೆ ಎಂಬುದಕ್ಕೆ, ಪಾರ್ಲಿಮೆಂಟ್‌‌ ಸ್ಕ್ವೇರ್‌ನಲ್ಲಿ ಶ್ವೇತವರ್ಣೀಯರೊಟ್ಟಿಗೆ ಗಾಂಧಿ ಮತ್ತು ಮಂಡೇಲ ಅವರು ನಿಂತಿರುವುದೇ ಸಾಕ್ಷಿ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT