ಶನಿವಾರ, ಮೇ 8, 2021
17 °C

ಡಿ . ಆರ್ . ನಾಗರಾಜ್ ಎಂಬ ಸವಾಲು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಡಿ . ಆರ್ . ನಾಗರಾಜ್ ಎಂಬ ಸವಾಲು

ಮೊನ್ನೆ ಗೆಳೆಯ ಮಂಜೇಶ್ ಫೋನು ಮಾಡಿ ನನ್ನನ್ನು ಕೇಳಿದ: ‘ಅಲ್ಲಯ್ಯ, ನೀನು ನಿನ್ನ ಡ್ರೈವರ್ ಮೇಲೂ ಅಂಕಣ ಬರೀತೀಯ. ನಮ್ಮ ನಾಗರಾಜನ ಮೇಲೆ ಯಾಕೆ ಬರೆಯಲ್ಲ?’ ಮಂಜೇಶ್ ನನ್ನ ಆತ್ಮೀಯ ಗೆಳೆಯರ­ಲ್ಲೊಬ್ಬ; ಕಷ್ಟಗಳಲ್ಲಿ ಒದಗು­ವಂಥ­ವನು. ಅವನು ಡಿಆರ್‌ರ ಹತ್ತಿರದ ಸಂಬಂಧಿಕ ಕೂಡ.  ‘ಈ ಹದಿ­ಮೂರು ಅವನ ಹುಟ್ಟುಹಬ್ಬ. ಈವಾಗಲಾ­ದರೂ ಬರಿ’ ಅಂತ ಸ್ನೇಹದ ಆದೇಶ ಕೊಟ್ಟ.ಯೋಗಾಯೋಗವೆನ್ನೋ ಹಾಗೆ ಮರುದಿನ ನನ್ನ ಯುವ ಕವಿಮಿತ್ರ ರಮೇಶ  ಅರೋಲಿ ಹೊರ­ನಾಡಿನಿಂದ ಮೊನ್ನೆ ಮೊನ್ನೆ ಬಂದ ನನಗೆ ನಟರಾಜ ಹುಳಿಯಾರರ ‘ಇಂತಿ ನಮಸ್ಕಾರ­ಗಳು’ ಪುಸ್ತಕವನ್ನು ತಂದುಕೊಟ್ಟು ‘ಇದನ್ನ ನೀವು ಓದಲೇಬೇಕು ಸರ್’ ಎಂದು ಹೇಳಿದ. ಓದಿನಲ್ಲಿ ಸ್ವಲ್ಪ ಸೋಂಬೇರಿಯಾದ ನಾನು ಇಡೀ ರಾತ್ರಿ ಜಾಗರಣೆ ಮಾಡಿ ಆ ಪುಸ್ತಕವನ್ನು ಓದಿ ಮುಗಿಸಿದೆ. ಈಗಾಗಲೇ ಜನಪ್ರಿಯವಾಗಿರುವ ಈ ಪುಸ್ತಕ ನನ್ನ ವಿದ್ಯಾಗುರುಗಳಾದ ಲಂಕೇಶ್ ಮತ್ತು ನನ್ನ ಹತ್ತಿರದ ಒಡನಾಡಿಯಾಗಿದ್ದ ಡಿ.ಆರ್.­ನಾಗರಾಜ್‌ ಕುರಿತದ್ದು. ನಟರಾಜ ಹುಳಿಯಾರ­ರಿ­ಗಿಂತ ಬಹಳ ಮೊದಲೇ ನಾನೂ ಡಿಆರ್ ಅವರೂ ತೀರಾ ಅನ್ಯೋನ್ಯವಾಗಿದ್ದವರು. ಅವರು ನಟರಾಜರಿಗೆ ಹತ್ತಿರವಾಗುವ ಹೊತ್ತಿಗೆ ನನ್ನ ಮತ್ತು ಅವರ ನಡುವೆ ಬಿರುಕುಂಟಾಗಿ ಪರಸ್ಪರ ಮಾತಾಡದಷ್ಟು ದೂರವಾಗಿದ್ದೆವು. ಆದರೆ ತನ್ನ ಜೀವಿತದ ಕೊನೆಯ ಎರಡು ವರ್ಷಗಳಲ್ಲಿ ಡಿಆರ್ ಮತ್ತೆ ನನಗೆ ಹಿಂದಿನಷ್ಟು ಅಲ್ಲದಿದ್ದರೂ ಸಾಕಷ್ಟು ಹತ್ತಿರವಾದರು.ಡಿಆರ್ ವಿಶ್ವ­ಪ್ರಸಿದ್ಧ­ವಾಗಿದ್ದ ಬಹುತೇಕ ಸಮಯದಲ್ಲಿ ನಾನು ಅವರನ್ನು ಓದು­ತ್ತಿದ್ದೆನೇ ಹೊರತು ಹತ್ತಿರದಿಂದ ನೋಡುತ್ತಿರ­ಲಿಲ್ಲ. ಆ ಅವಧಿಯ ನಿಕಟ ಪರಿಚಯ ನಟರಾಜರ ಪುಸ್ತಕದಲ್ಲಿರುವುದರಿಂದ ನನ್ನ ಮನಸ್ಸಿನಲ್ಲಿದ್ದ ಡಿಆರ್ ಚಿತ್ರಾವಳಿಗೆ ಅದು ಪೂರಕವಾಗಿ  ಹೆಚ್ಚೂ­ಕಡಿಮೆ ಒಟ್ಟು ಚಿತ್ರ ಮೂಡಿದಂತಾಯಿತು.ಕೊನೆಯ ದಿನಗಳಲ್ಲಿ ನನ್ನ ಮತ್ತು ಡಿಆರ್ ಅವರ ಗೆಳೆತನ ಮತ್ತೆ ಚಿಗುರಿದರೂ ಹಳೆಯ ಜಗಳ­ಗಳನ್ನು ಚುಕ್ತಾ ಮಾಡಿಕೊಳ್ಳುವ ಮೊದಲೇ ಅವರ ಉಲ್ಕೆಯಂಥ ಬದುಕು ಕೊನೆಯಾಯಿತು. ಅವರು ಕಾಲವಾದ ನಂತರ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಕೃತಿ  ‘ಅಲ್ಲಮ ಮತ್ತು ಶೈವಪ್ರತಿಭೆ’ಯ ಬಗ್ಗೆ ‘ಡೆಕ್ಕನ್ ಹೆರಾಲ್ಡ್’ ಮತ್ತು ಪುಸ್ತಕ ಪ್ರಾಧಿಕಾರದ ಪತ್ರಿಕೆಯಲ್ಲಿ ವಿಮರ್ಶೆ ಬರೆಯುವುದರ ಮೂಲಕ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿದ್ದಲ್ಲದೆ, ‘ಅನ್ವೇಷಣೆ’ಯಲ್ಲಿ ಒಂದು ಸಣ್ಣ ವೈಯಕ್ತಿಕ ಟಿಪ್ಪಣಿಯನ್ನೂ ಬರೆದು ನಮ್ಮ ಗೆಳೆತನದ ಮಧುರಕ್ಷಣಗಳನ್ನು ದಾಖಲಿ­ಸಿದ್ದೆ. ಆ ನಂತರ ನನಗಿಂತ ಹಿರಿಯರಾದ ಕನ್ನಡದ ಸಿದ್ಧಪ್ರಸಿದ್ಧರು ಅವರ ಬಗ್ಗೆ ಬೇಕಾದಷ್ಟು ಬರೆದಿದ್ದರಿಂದ ನಾನು ಮತ್ತೆ ಬರೆಯುವ ಅಗತ್ಯ­ವಿಲ್ಲವೆಂದು ಸುಮ್ಮನಾಗಿದ್ದೆ.ಈ ಬರವಣಿಗೆಯಲ್ಲಿ ನಮ್ಮಿಬ್ಬರ ಜಗಳದ ಬಗ್ಗೆಯಾಗಲಿ ನಮ್ಮಿಬ್ಬರಿಗೆ ತಂದಿಕ್ಕಿ ತಮಾಷೆ ನೋಡಿದ ತಗಲೂಫಿದಾರರ ಬಗ್ಗೆಯಾಗಲಿ

ಬರೆ­ಯ­ಲೊಲ್ಲದೆ ಡಿಆರ್ ಅವರಿಂದ ನಾನು ವ್ಯಕ್ತಿ­ಗತವಾಗಿ ಏನು ಪಡೆದುಕೊಂಡೆ, ಇಡೀ ಕನ್ನಡದ ಬರವಣಿಗೆಯ ಸುತ್ತುನೆಲೆ ಏನು ಪಡೆದು­ಕೊಂಡಿತು ಎಂಬುದರ ಬಗ್ಗೆ ಕೆಲವು ವಿಚಾರ­ಗಳನ್ನು ಹೇಳಹೊರಟಿದ್ದೇನೆ.ನನಗೆ ಡಿಆರ್ ಪರಿಚಯವಾದಾಗ ನಾವಿ­ಬ್ಬರೂ ಮೊದಲ ಎಂ.ಎ. ಓದತೊಡಗಿದ್ದೆವು. ನಮ್ಮಿ­ಬ್ಬರ ನಡುವಿನ ವ್ಯತ್ಯಾಸಗಳು ಆಗಲೇ ನನಗೆ ಸ್ಪಷ್ಟವಾಗಿದ್ದರೂ ನಮ್ಮಿಬ್ಬರನ್ನೂ ಹತ್ತಿರ ತಂದದ್ದು ಕಾವ್ಯದ ಬಗೆಗಿನ ತೀವ್ರ ಆಕರ್ಷಣೆ. ನನಗಾಗ ಕಾವ್ಯ ರಚಿಸುವ ಹುಚ್ಚು; ಅವರಿಗೆ ಕಾವ್ಯವನ್ನು ಅರ್ಥೈಸುವ ಹುಚ್ಚು.  ಆಗ ತಾನೇ ಇಂಗ್ಲಿಷ್ ಕಾವ್ಯವನ್ನು ಓದತೊಡಗಿದ್ದ ಡಿಆರ್‌­ರನ್ನು ಅವರ ಅಂದಿನ ಆತ್ಮೀಯ ಮಿತ್ರರಾದ ಕೆಂಗೇರಿ ನಾಗರಾಜು, ಕೆಂಪೇಗೌಡರು ‘ವಾಟಾಳ್’ ಎಂಬ ಅಡ್ಡ ಹೆಸರಿಂದ ಕರೆಯು­ತ್ತಿ­ದ್ದರು. ಯಾಕಂದರೆ ಡಿಆರ್ ಆ ಕಾಲದಲ್ಲಿ ಬೆಂಗಳೂರಿನ ಅಪ್ರತಿಹತ ಕನ್ನಡ ಚರ್ಚಾಗೋಷ್ಠಿ ಪರಿಣತರಾಗಿದ್ದರು.ದೊಡ್ಡಬಳ್ಳಾಪುರದ ಬಡಕುಟುಂಬದಿಂದ ಬಂದ ಈ ಹುಡುಗ ಬಹಳ ಕಡಿಮೆ ಸಮಯದಲ್ಲಿ ಇಡೀ ಕನ್ನಡ ಸಂಸ್ಕೃತಿಯನ್ನು ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟ­ದಲ್ಲೂ ಬೆಳೆದು ನಿಂತಿದ್ದೊಂದು ಚಮತ್ಕಾರ. ತನ್ನ ಹಿನ್ನೆಲೆಯ ಬಗ್ಗೆ ಸದಾ ಅಸಮಾಧಾನಿಯಾಗಿದ್ದ ಆತ ಮೇಲೇರಿದ್ದು ವಿಶಿಷ್ಟ ವ್ಯಕ್ತಿಪ್ರತಿಭೆ ಮತ್ತು ಕರ್ತವ್ಯಬಲದ ಜಾಗರಣೆಯಿಂದ. ನಮ್ಮ ಗೆಳೆತನದ ಮೊದಲ ದಿನಗಳಲ್ಲಿ ಆತ ಹೇಳಿದ ಮಾತು ಚೆನ್ನಾಗಿ ನೆನಪಿದೆ:  ‘ಆದರೆ ಒಂದು ಬೆಟ್ಟದ ಹಂಗಾಗಬೇಕು; ಬರೀ ತಿಟ್ಟ-ತೆವರಿನ ಥರ ಆದರೆ ಏನು ಪ್ರಯೋಜನ?’ಆ ಮಾತಿನಲ್ಲಿ ಹೊಮ್ಮುತ್ತಿದ್ದ ಉತ್ಕಟ ಮಹ­ತ್ವಾಕಾಂಕ್ಷೆ ಡಿಆರ್ ಹುಟ್ಟುಗುಣ. ತನ್ನ ಮಹತ್ವಾ­ಕಾಂಕ್ಷೆಯನ್ನು ಸಾಧಿಸುವುದಕ್ಕೆ ಅವಿರತ ಪ್ರಯತ್ನ­ಶೀಲರಾಗಿದ್ದರಿಂದಲೇ ಆತ  ಅಂದಿನ ಕನ್ನಡ ವಿಮರ್ಶೆಯ ಸಂಕೋಚದ ಭಾಷೆಯನ್ನು ಮುರಿದ ‘ಅಮೃತ ಮತ್ತು ಗರುಡ’ ಕೃತಿಯ ಬಳಿಕ ನಿಂತ ನೀರಾಗದೆ ಮುಂದೆ ‘ಶಕ್ತಿಶಾರದೆಯ ಮೇಳ’, ‘ಸಾಹಿತ್ಯ ಕಥನ’, ‘ಅಲ್ಲಮಪ್ರಭು ಮತ್ತು ಶೈವ­ಪ್ರತಿಭೆ’ ಇತ್ಯಾದಿಯಾಗಿ ಕೃತಿಯಿಂದ ಕೃತಿಗೆ ಬೆಳೆ­ಯುತ್ತಾ ಹೋಗಿ ಕನ್ನಡ ಹಿಂದೆ ಕಾಣದ ಪ್ರತಿಭಾ­ವಂತ ಸಾಹಿತ್ಯ–-ಸಂಸ್ಕೃತಿ ಚಿಂತಕನಾಗಿ ಹೆಸರು ಪಡೆದದ್ದು.ಡಿಆರ್‌ ಎಂಬ ಮದ್ದಾನೆ ತುಳಿದ ಹಾದಿಯನ್ನು ಆ ನಂತರ ಯಾರೂ ತುಳಿಯಲಿಲ್ಲ.  ಅವರ ಅರೆ ಆಯುಷ್ಯದ ಬದುಕಿನಲ್ಲಿ ಅವರ ಪ್ರಭಾವ ಮತ್ತು ಕೀರ್ತಿ ಕರ್ನಾಟಕದ ಗಡಿಗಳನ್ನು ದಾಟಿ ಇಡೀ ಭಾರತ ಮತ್ತು ಹೊರನಾಡು­ಗಳಲ್ಲೂ ಹಬ್ಬತೊಡಗಿತು. ಹೀಗೆ ಹೆಸರಾಂತ­ರಾದ ಇತರ ಹಿರಿಯರು ಕನ್ನಡದಲ್ಲಿದ್ದರೂ ಡಿಆರ್ ಅವರೆಲ್ಲರಿಗಿಂತ ಭಿನ್ನ. ಇತರರು ತಮ್ಮ ಸೃಜನಶೀಲ ಪ್ರತಿಭೆ ಮತ್ತು ಅದೃಷ್ಟದಿಂದ ಹೆಸರುವಾಸಿಯಾದರು. ಆದರೆ ಡಿಆರ್ ಹೆಸರು ಮಾಡಿದ್ದು ಒಬ್ಬ ದರ್ಶನಗಂಧಿಯಾದ ಸಾಹಿತ್ಯ-–ಸಂಸ್ಕೃತಿ ಚಿಂತಕನಾಗಿ.ಡಿಆರ್ ಅವರ ಬಹುತೇಕ ತೀರ್ಮಾನಗಳನ್ನು ನಾನು ಒಪ್ಪದಿದ್ದರೂ ಅವರ ವಿದ್ವತ್-–ಪ್ರತಿಭೆಗಳಿಂದ ಇಂದಿಗೂ ವಿಸ್ಮಿತ­ನಾಗಿದ್ದೇನೆ. ಉದಾಹರಣೆಗೆ ಷೆಲ್ದನ್ ಪೋಲಕರು ಸಂಪಾದಿಸಿದ ‘ಲಿಟರರಿ ಕಲ್ಚರ್ ಇನ್ ಹಿಸ್ಟರಿ’ ಎಂಬ ಪುಸ್ತಕದಲ್ಲಿ ಡಿಆರ್ ಬರೆದಿರುವ ಕನ್ನಡ ಸಾಹಿತ್ಯ ಕುರಿತ ಭಾಗ ಅತ್ಯಂತ ಮೋಹಕವಾಗಿದೆ. ಅದನ್ನು ಓದಿದಾಗ ಟ್ರಾಟ್‌ಸ್ಕಿ ಬಗ್ಗೆ ಲೆನಿನ್ ಹೇಳುತ್ತಿದ್ದ ಮಾತು ನನಗೆ ನೆನಪಾಯಿತು:‘ಹಿ ಕೆನ್ ಬಿ ಬ್ರಿಲ್ಯಂಟ್ಲಿ ರಾಂಗ್’. ಅವರ ತೀರ್ಮಾನ­ಗಳು ಈ  ನನ್ನ ಮಧ್ಯಕಾಲೀನ ಕನ್ನಡ ಸಾಹಿತ್ಯದ ಬಗ್ಗೆ ನಾನು ಬರೆದಿರುವ ಲೇಖನದ ಅನುಮಾನ­ಗಳಿಗೆ ತದ್ವಿರುದ್ಧ. ಅವರು ಎಲ್ಲಿ ಒಂದು ತಾರ್ಕಿಕ ಸರಳರೇಖಾತ್ಮಕ ಬೆಳವಣಿಗೆ­ಯನ್ನು ಗುರುತಿಸು­ತ್ತಾರೋ ಅಲ್ಲಿ ನನಗೆ ಕಾಣುವುದು ಸಂಕೀರ್ಣ­ವಾದ ಒಡಕು ಮತ್ತು ಕೂಡಿಕೆಗಳ ಏರುಪೇರುಗಳ ಇತಿಹಾಸ.ಸಾಹಿತ್ಯ ವಿಮರ್ಶೆ ಇತ್ಯಾದಿಗಳಲ್ಲಿ ತೊಡಗಿಸಿ­ಕೊಳ್ಳುವ ಮೊದಲು ಡಿಆರ್‌ಗೆ ಎರಡು ಹುಚ್ಚುಗ­ಳಿ­ದ್ದವು. ಒಂದು: ಸೃಜನಾತ್ಮಕ ಬರಹಗಾರನಾಗ­ಬೇಕು. ಎರಡು: ರಾಜಕೀಯ ಪ್ರಭಾವ ಬೆಳೆಸಿ­ಕೊಳ್ಳಬೇಕು.  ತೀರಾ ಆತ್ಮವಿಶ್ವಾಸಿಯಾಗಿದ್ದ ಆತ ನಮ್ಮ ಗೆಳೆತನದ ಹೊಸತರಲ್ಲಿ ಒಂದು ರಮ್ಯ ಪ್ರೇಮ ಕುರಿತ ತನ್ನ ಸಣ್ಣಕತೆಯನ್ನು ನನಗೆ ಗೋಪ್ಯ­ವಾಗಿ ತೋರಿಸಿ ಅಭಿಪ್ರಾಯ ಕೇಳಿದ್ದರು. ಆ ಕತೆ ನನಗೆ ಹಿಡಿಸಿ ಅದನ್ನು ತಿಳಿಸಿದಾಗ ಅವರಿಗೆ ಸಿಟ್ಟು ಬಂತು.‘ಏನ್ರಿ, ಕ್ರಿಟಿಕಲ್ ಆಗಿ ಹೇಳೋದನ್ನು ಬಿಟ್ಟು ಕಾಲೆಳೀತಿದೀರಲ್ರಿ’ ಎಂದು ಚಡಪಡಿಸಿ­ದ್ದರು. ಮುಂದೆ ಆ ಕತೆ ಕಾಲಗರ್ಭವನ್ನು ಸೇರಿತು. ಆ ನಂತರ ಅವರ ಸೃಜನಶೀಲ ಬರಹವೆಂದರೆ ‘ಕತ್ತಲೆ ದಾರಿ ದೂರ’ ಎಂಬ ಷೆಕಾಫ್ ಕತೆ ಆಧಾರಿತ ನಾಟಕ.  ಪ್ರತಿಭಾವಂತ ನಿರ್ದೇಶಕ ನರಸಿಂಹನ್ ಅವರ ದಿಗ್ದರ್ಶನದಲ್ಲಿ ಯಶಸ್ವಿ­ಯಾಗಿ ಪ್ರಯೋಗವಾಯಿತು.ಅದು ಪ್ರಕಟ­ವಾಗಿದ್ದು ನನಗೆ ನೆನಪಿಲ್ಲ. ಆ ನಾಟಕವನ್ನು ತಾವೇ ಬರೆದದ್ದಾಗಿ ದಿವಂಗತ ನರಸಿಂಹನ್ ಮತ್ತು ಅದರಲ್ಲಿ ನಟಿಸಿದ್ದ ಗೆಳೆಯ ಲೋಹಿತಾಶ್ವ ನನಗೆ ಹೇಳಿದ್ದರು. ಆದರೆ ಅದರಲ್ಲಿದ್ದ  ಅತ್ಯಂತ ಭಾವ­ಗೀತಾತ್ಮಕವಾದ ಸಾಲುಗಳನ್ನು ಡಿಆರ್ ಮಾತ್ರ ಬರೆಯಲು ಸಾಧ್ಯ ಎಂದು ನನ್ನ ಅನಿಸಿಕೆ. ನನ್ನ ಪ್ರಕಾರ ಡಿಆರ್ ಕನ್ನಡದ ಶಕ್ತ ಸೃಜನಶೀಲವಾದ ಬರಹಗಾರನಾಗಬಹುದಿತ್ತು. ಡಿಆರ್ ಆ ಸಾಧ್ಯತೆ­ಯನ್ನು ಕೈಬಿಟ್ಟದ್ದಕ್ಕೆ ಕಾರಣ ಅವರ ತೀವ್ರ ರಾಜಕೀಯ ತುಡಿತ. ಹತ್ತರಲ್ಲಿ ಹನ್ನೊಂದನೆ­ಯವ­ನಾಗುವ ಬದಲು ಇಡೀ ಸಾಹಿತ್ಯಲೋಕದ ನಿಯಂತ್ರಕ ಶಕ್ತಿಯಾಗುವ ಹಟದಿಂದ ತಮ್ಮ ಹಾದಿ ಬದಲಿಸಿಕೊಂಡರು.‘ಅಮೃತ ಮತ್ತು ಗರುಡ’ದಲ್ಲಿ ಕನ್ನಡ ವಿಮರ್ಶೆಗೆ ಡಿಆರ್ ನೀಡಿದ ಕೊಡುಗೆಗಳೆಂದರೆ ಉತ್ಕಟ ಕಾವ್ಯಾತ್ಮಕತೆ ಮತ್ತು ರಾಜಕೀಯ ತೀವ್ರತೆ. ಸಾಹಿತ್ಯ ಸಮಾಜಗಳೆರಡನ್ನೂ ತುರ್ತಾಗಿ ಬದಲಿಸಬೇಕೆಂಬ ದರ್ದು ಅದರ ಜೀವಾಳ. ಡಿಆರ್ ಮುಂದೊಮ್ಮೆ ಈ ಕೃತಿ ತೀರಾ ಬಾಲಿಶ­ವಾಯಿತೆಂದು ನನಗೆ ಹೇಳಿದಾಗ ನಾನದನ್ನು ಒಪ್ಪಲಿಲ್ಲ. ಇಂದಿಗೂ ಒಪ್ಪುವುದಿಲ್ಲ. ಆದರೆ ಅಂಥಾ ಪ್ರಖರತೆಯಲ್ಲಿ ಎಷ್ಟು ದಿವಸ ಬರೆಯಲು, ಬಾಳಲು ಸಾಧ್ಯ?ರಾಜಕೀಯ ತುಡಿತವೇ ಡಿಆರ್‌ರನ್ನು ಬಂಡಾಯಕ್ಕೆ ತಂದದ್ದು. ‘ಖಡ್ಗವಾಗಲಿ ಕಾವ್ಯ’ ಎಂಬ ಬಂಡಾಯ ಕರಪತ್ರದ ವಾಕ್ಯ ನೋಡಿ ನನಗೆ ನಗು ಬಂದಿತ್ತು. ‘ಯಾಕ್ರೀ ನಗ್ತಿದೀರ?’ ಅಂತ ಡಿಆರ್ ಕೇಳಿದಾಗ ನಾನು ಹೇಳಿದ್ದೆ: ‘ಅಲ್ರೀ ಕೆಮಿ­ಕಲ್ ವೆಪನ್ಸ್ ಕಾಲದಲ್ಲಿ ಬಡಪಾಯಿ

ಕತ್ತಿ­ಯಿಂದ ಏನು ಪ್ರಯೋಜನ? ಅಂಥ ಖಡ್ಗಕ್ಕಿಂತಾ ಷೇವಿಂಗ್ ಬ್ಲೇಡೋ ತರಕಾರಿ ಕೊಯ್ಯುವ ಚಾಕೋ ಅಂದಿದ್ದರೆ ಒಪ್ಪುತ್ತಿದ್ದೆ’.ಸಾಹಿತ್ಯದ ತತ್‌ಕ್ಷಣದ ಪ್ರಯೋಜನವನ್ನು ನಂಬುತ್ತಿದ್ದ ಡಿಆರ್ ಮುಂದೆ ಬಂಡಾಯವನ್ನು ಬಿಟ್ಟು ಶ್ರೇಷ್ಠ ಸಾಹಿತ್ಯದ ಬಗ್ಗೆ ಮಾತಾಡ­ತೊಡಗಿ­ದರು. ಅವರ ಬರಹದ ಭಾಷೆ ಮತ್ತು ಉದ್ದಿಶ್ಯ­ಗಳು ಬದಲಾದವು. ಅಂದರೆ ಅವರ ಭಾಷೆಯ ಕಾವ್ಯಾತ್ಮಕತೆ ಮತ್ತು ರಾಜಕೀಯ ತುಡಿತ ಕಡಿಮೆ­ಯಾಯಿತೆಂದಲ್ಲ, ಅದು ಹೆಚ್ಚು ಚಿಂತನಶೀಲವೂ ಗಾಢವೂ ವಿಸ್ತಾರವೂ ಆಯಿತು. ಮೊದಲ ಘಟ್ಟದಲ್ಲಿ ಅವರೇ ಜೀವವಿರೋಧಿ ಎಂದು ಕರೆ­ಯು­ತ್ತಿದ್ದ ಬರಹಗಾರರನ್ನೂ ಆಳವಾಗಿ ಚರ್ಚಿ­ಸುವ ಒತ್ತಾಯಗಳನ್ನೂ ಅವರು ಆಯ್ದು­ಕೊಂಡರು. ಇದು ಕೇವಲ ಬದಲಾವಣೆ­ಯಾಗಿ­ರದೆ ಬೆಳವಣಿಗೆಯೂ ಆಗಿತ್ತು.

 

ತನ್ನ ಕಿರಿಯ ವಯಸ್ಸಿನಲ್ಲೇ ಹಿರಿಯದನ್ನು ಸಾಧಿಸಿ ಗುಣ-ಗಾತ್ರಗಳೆರಡರಲ್ಲೂ ಅನನ್ಯವಾದು­ದನ್ನು ಸೃಜಿಸಿ ಕಣ್ಮರೆಯಾದ ಡಿಆರ್ ಅವರ ಒಟ್ಟು ಸಾಧನೆಯನ್ನು ಚುಟುಕವಾಗಿ ಹೇಗೆ ಹೇಳಬಹುದು? ಕನ್ನಡ ನವೋದಯದ ಸಾಹಿತ್ಯ ಮತ್ತು ಸಂಸ್ಕೃತಿ ಲೋಕದಲ್ಲಿ ಶೂದ್ರ ಜನಾಂಗದ ಅನುಭವ­ರಾಶಿಯ ಬಗ್ಗೆ ಒಂದು ತೆರನ ಅರಿವಳಿಕೆ­ಯುಂಟಾ­ಗಿತ್ತು; ನವ್ಯ ಮತ್ತು ಬಂಡಾಯಗಳ ಸಂದರ್ಭ­ದಲ್ಲಿ ಈ ಜನಾಂಗಗಳ ಅನುಭವಗಳು ಬರ­ತೊಡ­ಗಿ­ದರೂ ತತ್ ಸಂಬಂಧವಾದ ಪರಿಕಲ್ಪನೆಗಳ ಬಗ್ಗೆ ಅರಿವಳಿಕೆಯುಂಟಾಗಿತ್ತು.ಮರವೆಗೊಳಗಾಗಿದ್ದ ಈ ಪರಂಪರೆಗಳನ್ನು ಗುರುತಿಸಿ, ತತ್ವೀಕರಿಸಿ, ಸಮಕಾಲೀನ ಸನ್ನಿವೇಶದಲ್ಲಿ ಚಾಲನೆ ಮತ್ತು ವಿಶ್ಲೇಷಣೆಗೊಳಪಡಿಸಿದ್ದು ಡಿಆರ್‌ರ ಮುಖ್ಯ ಸಾಧನೆ. ಆ ಮೂಲಕ ಕನ್ನಡದ ಚಿಂತನೆಯನ್ನು ನಿರ್ವಸಾಹತೀಕರಣವನ್ನು ಮಾಡಿದ ಸಂಸ್ಕೃತಿ ಚಿಂತಕ ಡಿಆರ್. ಇದರ ದೊಡ್ಡ ದಾಖಲೆ ಅವರ ಸಂಪಾದನೆಯ ಪರ್ಯಾಯ ಸಂಸ್ಕೃತಿ ಮಾಲೆಯ ಪುಸ್ತಕಗಳು.ನನ್ನ ಮತ್ತು ಅವರ ಸ್ನೇಹ–-ವಿರಸಗಳ ನಡುವೆ ನಮ್ಮಿಬ್ಬರಿಗೂ ಸಾಮಾನ್ಯವಾಗಿದ್ದದು ಈ ಆಸಕ್ತಿ­­ಗಳೇ. ನಾನು ‘ನಾಗಾರ್ಜುನ’ನನ್ನು ಕುರಿತು ಕವಿತೆ ಬರೆದೆ. ಡಿಆರ್ ಆ ಬಗ್ಗೆ ಚಿಂತನಾತ್ಮಕ ಪುಸ್ತಕ ಸಂಪಾದಿಸಿದರು. ನಾನು ರೂಮಿ ಬಗ್ಗೆ ಕವಿತೆ ಬರೆದಿದ್ದೆ. ಡಿಆರ್ ಮುಂದೆ ರೂಮಿ ಕಾವ್ಯದ ತರ್ಜುಮೆ ಮಾಡಿದರು. ನಾನು ಮಂಟೇಸ್ವಾಮಿ ಕುರಿತ ನಾಟಕ ಬರೆದೆ. ಡಿಆರ್ ಟೆಲಿಸಿನಿಮಾ ಮಾಡಿದರು.

ಅವರ ಅಲ್ಲಮಪ್ರಭು ಕುರಿತ ಪುಸ್ತಕಕ್ಕೆ ನಾನು ಮುನ್ನುಡಿ ಬರೆಯಬೇಕೆಂದು ಬಲವಂತ ಮಾಡಿ­ದ್ದರು. ಅದು ಆಗಲಿಲ್ಲ.ಮುಂದೆ ನಾವಿಬ್ಬರೂ ಒಟ್ಟಾಗಿ ಯಾವುದಾದರೂ ಪ್ರಾಜೆಕ್ಟ್ ಮಾಡ­ಬೇಕೆಂದು ಬಯಸಿದ್ದರು. ಅದೂ ಆಗಲಿಲ್ಲ. ಡಿಆರ್ ಬದುಕಿದ್ದಾಗ ನನಗೆ ಮತ್ತು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಸವಾಲಾ­ಗಿದ್ದರು. ಈಗ ಅಂಥ ಸವಾಲುಗಳೇ ಇಲ್ಲದಿರು­-ವಾಗ ಎಲ್ಲಿ ನನ್ನ ಬರವಣಿಗೆಯ ಬೆಳವಿಗೆಗೆ ತಡೆಯಾಗುತ್ತದೋ ಎಂಬ ಆತಂಕ ನನಗೆ. ‘ಈ ಕುಬ್ಜರಿಗೆಲ್ಲಾ ನಾನೆಲ್ರೀ ಅರ್ಥವಾಗ್ತೀನಿ?’ -ಡಿಆರ್ ಆಗಾಗ ಹೇಳುತ್ತಿದ್ದ ಮಾತು.

  

  ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.