ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರ, ಮಾಂತ್ರಿಕತೆಗಳ ಒಳಹೊರಗು

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಸಾಹತುಶಾಹಿ ಸಂದರ್ಭದಲ್ಲಿ ಪಡುವಲ ನಾಡುಗಳಲ್ಲಿ ರೂಪಿತವಾದ ಭೌತಿಕ ಲೋಕ ದೃಷ್ಟಿ ನಮ್ಮ ಬದುಕಿನಲ್ಲಿ ಪ್ರವೇಶಿಸಿತು. ಈ ಬೆಳವಣಿಗೆಯ ಅಂಗವಾಗಿ ನಮ್ಮಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಧರ್ಮ ಗಳು ನೆಲೆಯೂರಿ ಹಲವು ರೀತಿಗಳಲ್ಲಿ ನಮಗೆ ನೆರವಾದವು. ಗತದ ಅಂಧಶ್ರದ್ಧೆಗಳನ್ನು ಪ್ರಶ್ನಿಸು ವಲ್ಲಿ, ಜಡ್ಡುಗಟ್ಟಿದ ಸಂಪ್ರದಾಯಗಳನ್ನು ಜರೆ ಯುವಲ್ಲಿ, ಅಸಮಾನತೆಯ ಹಂಗನ್ನು ಹರಿಯು ವಲ್ಲಿ ಈ ದೃಷ್ಟಿಕೋನಗಳಿಂದ ನಮಗೆ ಪ್ರೇರಣೆ ಮತ್ತು ಪ್ರೋತ್ಸಾಹ ದೊರಕಿದವು.

ಆಧುನಿಕ ಅಧ್ಯಾತ್ಮ ಚಿಂತಕರಾದ ರಾಜಾರಾಮ್ ಮೋಹನ ರಾಯ್, ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮುಂತಾದವರು ಕಾವ್ಯದೃಷ್ಟಾರ ರಾದ ರವೀಂದ್ರನಾಥ ಟ್ಯಾಗೋರ್, ಸುಬ್ರಹ್ಮಣ್ಯ ಭಾರತಿ, ಕುವೆಂಪು ಮುಂತಾದವರು ಸಂಪ್ರದಾ ಯದತ್ತ ಅಂಧಶ್ರದ್ಧೆ, ಅಸಮಾನತೆ ಮತ್ತು ಕಂದಾಚಾರಗಳನ್ನು ಕೊನೆಗೊಳಿಸಿ ಸಂಪ್ರದಾಯ ಗಳ ಶ್ರೇಷ್ಠ ಅಂಶಗಳನ್ನು ವಿಚಾರ ಮತ್ತು ವಿಜ್ಞಾನಸಮ್ಮತವಾದ ಮಾನವತಾವಾದದ ಜೊತೆಗೆ ಬೆಸೆಯಲು ಶ್ರಮಿಸಿದರು.

ಆದರೆ ಇತಿಹಾಸದಲ್ಲಿ ಯಾವ ಪ್ರಗತಿಯೂ ಸಂಪೂರ್ಣ ದೋಷ ಮುಕ್ತವಲ್ಲ. ಇಂದು ನಮ್ಮ ಸುತ್ತಮುತ್ತಲಿನ ಸಮಾಜವನ್ನು ನೋಡಿದಾಗ ಕುರುಡು ನಂಬಿಕೆಗಳು ಇನ್ನೂ ತಾಂಡವವಾ ಡುತ್ತಿರುವುದನ್ನು ಕಾಣಬಹುದು. ಒಂದು ಕಡೆ ಆಧುನಿಕತೆಯನ್ನೇ ಕಾಯಿಲೆಯನ್ನಾಗಿ ನೋಡುವ ಹಳೆಯ ಮೂಢನಂಬಿಕೆಗಳು; ಇನ್ನೊಂದು ಕಡೆ ತರ್ಕದ ತೆಕ್ಕೆಗೆ ಸಿಕ್ಕದಿದ್ದರೂ ವಿಕಾಸಪರವಾದ ಚಿಂತನೆ ಮತ್ತು ಅನುಭವಗಳನ್ನು ಸಾರಾಸಗ ಟಾಗಿ ನಿರಾಕರಿಸುವ ಆಧುನಿಕ ವಿಕಾರಗಳು. ನಮ್ಮ ನಡುವೆ ಹಲವು ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿರುವ ಮೂಲಭೂತವಾದಿ ಧಾರ್ಮಿಕತೆ ಮೊದಲನೆಯದರ ಅಭಿವ್ಯಕ್ತಿಯಾಗಿ ರುವಂತೆ ಮಾನವ ಅನುಭವಗಳ ಬಹುಮು ಖತೆಯನ್ನು, ಅನಿರೀಕ್ಷಿತತೆಯನ್ನು ಅರ್ಥೈಸುವ ಗೋಜಿಗೆ ಹೋಗದ ಭೌತಿಕವಾದಿ ಅತಿರೇಕ ಎರಡನೆಯದರ ಪ್ರಕಟ ರೂಪವಾಗಿದೆ. ಈ ಸಂದಿಗ್ಧದಲ್ಲಿ ಮಾನವಾನುಭವದ ಅವಿಭಾಜ್ಯ ಅಂಗವಾದ ಆಧ್ಯಾತ್ಮಿಕತೆಯನ್ನು ಹೇಗೆ ಗ್ರಹಿಸ ಬೇಕು? ವಿಚಾರವಾದಿಗಳನ್ನು ಕೇಳಿ.
ಅವರು  ಹೇಳುತ್ತಾರೆ, ‘ಅದೆಲ್ಲ ಕಂತೆ ಪುರಾಣ’. ಸಂಪ್ರದಾ ಯಸ್ಥರನ್ನು ಕೇಳಿ. ಅವರು ಹೇಳುತ್ತಾರೆ, ‘ನಮ್ಮ ತಾತಮುತ್ತಾತಂದಿರ ಧರ್ಮದಲ್ಲಿ ಹೇಳಬೇಕಾ ದುದ್ದನ್ನೆಲ್ಲ ಹೇಳಿಯಾಗಿದೆ. ದೂಸರಾ ಮಾತಿಲ್ಲದೆ ಅದನ್ನು ಪರಿಪಾಲಿಸದಿದ್ದಲ್ಲಿ ಜಗತ್ತು ಹಾಳಾಗಿ ಹೋಗುತ್ತದೆ. ಏಕೆಂದರೆ ನಮ್ಮದೇ ಅತ್ಯಂತ ಶ್ರೇಷ್ಠ ಮತ್ತು ವೈಜ್ಞಾನಿಕ ಧರ್ಮ’. ಆ ಇಬ್ಬರಿಗೂ ಅಧ್ಯಾತ್ಮದ ಕಳವಳವಿಲ್ಲ.

ನಾವು ಶುದ್ಧ ವಿಚಾರವಂತರಾದರೆ ವಿಜ್ಞಾನ ಮತ್ತು ತರ್ಕಗಳ ಬುನಾದಿಯ ಮೇಲೆ ಪ್ರೇಮ, ಸ್ನೇಹ ಮತ್ತು ಜೀವ ಕಾರುಣ್ಯವನ್ನು ತಳಮಟ್ಟ ತಿಳಿಯಲಾರೆವು. ಅದೇ ರೀತಿ ಯಾವುದೇ ಪ್ರಶ್ನೆ ಯನ್ನು ಎದುರಿಸದ ಪರೀಕ್ಷೆಗೆ ಹೆದರುವ ಧರ್ಮ ಪಾಲಕರಾದರೆ ಅನುಭವದ ಅತ್ಯಂತ ಸೂಕ್ಷ್ಮ ವೈವಿಧ್ಯೆಗಳನ್ನು, ಅನಿರೀಕ್ಷಿತಗಳನ್ನು ಮತ್ತು ಅನಿ ರ್ದಿಷ್ಟತೆಯನ್ನು ಗುರುತಿಸಲಾರೆವು. ನಮ್ಮ ಪರಂಪರೆಯ ಹಿರಿಯ ಚೇತನಗಳಾದ ಬುದ್ಧ, ಮಹಾವೀರ, ಬಸವ, ತುಕಾರಾಮ, ಕಬೀರಾದಿಗಳು ಈ ಎರಡ ರಿಂದಲೂ ಹೊರತು. ಪರಿಖ್ಖಾತ್ ಗಹ್ಯಂ ಬಿಖ್ಖವೇ (ಪರೀಕ್ಷೆಯ ಮೂಲಕವೇ ಗ್ರಹಿಸಿ, ಬಿಕ್ಷುಗಳೇ) ಎಂಬ ಬುದ್ಧ ಶಾಸನವು ಅವರೆಲ್ಲರ ಮೂಲ ಮಂತ್ರ.

ಈ ಆಲೋಚನಾತರಂಗಗಳು ನನ್ನ ಮನಸ್ಸಿನಲ್ಲಿ ಮೂಡತೊಡಗಿದ್ದು ಈಚೆಗೆ ಅಗ್ನಿ ಶ್ರೀಧರ್ ಅವರ  ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಎಂಬ  ಹೃದ್ಯ ಪುಸ್ತಕವನ್ನು ಓದಿ ಮುಗಿಸಿದಾಗ. ಇಂಗ್ಲಿಷಿನಲ್ಲಿ ಇದೇ ತರಹದ ಅನುಭವಗಳನ್ನು ಕುರಿತ ರಾಬರ್ಟ್ ಸ್ವಬೋಧ ಅವರ ‘ಅಘೋರ’ದ ಮೂರು ಭಾಗಗಳನ್ನು ಓದಿದಾಗ ಅದೂ ನನ್ನನ್ನು ಇದೇ ರೀತಿಯಲ್ಲಿ ಪ್ರಭಾವಿಸಿತ್ತು. ಸಾಂಸ್ಥಿಕ ಧರ್ಮಗಳು ತಡಬಡಾ ಯಿಸುತ್ತಿರುವ, ಆಧುನಿಕ ಆಧ್ಯಾತ್ಮಿಕ ಪಂಥಗಳು ಮಾರಾಟದ ವಸ್ತುಗಳಾಗುತ್ತಿರುವ, ಭಾವನೆಗಳ ದಾಹವನ್ನು ನೀಗಿಸಲು ಭೌತಿಕವಾದಿ ಸಿದ್ಧಾಂತ ಗಳು ಸೋತಿರುವ ಇಂದಿನ ಸುತ್ತು ನೆಲೆಯಲ್ಲಿ ಸ್ವಾನುಭವಾಧಾರಿತವಾದ ಅಧಿಕೃತ ಆಧ್ಯಾತ್ಮಿಕ ಪ್ರಯೋಗಗಳನ್ನು ಒಪ್ಪಿತವಾಗುವ ರೀತಿಯಲ್ಲಿ ನಮಗೆ ತಲುಪಿಸುವ ಇಂತಹ ಅಪೂರ್ವ ಪುಸ್ತಕ ಗಳ ಮಹತ್ವ ಇಂದು ಎಂದಿಗಿಂತಲೂ ಹೆಚ್ಚು. ಈ ಹಿಂದೆ ನಾನು ಇವುಗಳಿಗಿಂತ ಭಿನ್ನವಾದ ರೀತಿ ಯಲ್ಲಿ ನನ್ನ ಆಧ್ಯಾತ್ಮಿಕ ಅನುಭವಗಳನ್ನು ನಿರೂಪಿ ಸಲು ಬರೆದ ‘ಬತ್ತೀಸರಾಗ’ ತೆರೆದ ಮನಸ್ಸಿನ ಸಾವಿರಾರು ಓದುಗರನ್ನು ಮೆಚ್ಚಿಸಿದ್ದನ್ನು ತರ್ಕೋಪಜೀವಿಗಳನ್ನು, ವಿಚಾರ ಪೂಜಕರನ್ನು ಬೆಚ್ಚಿಸಿದ್ದನ್ನು ಇಲ್ಲಿ ನೆನೆಯಬಹುದು.

ಕನ್ನಡದಲ್ಲಿ ತಂತ್ರ ಸಾಧನೆಯ ರಹಸ್ಯಗಳನ್ನು ಕೆದಕುವ ಪುಸ್ತಕಗಳು ಕೆಲವಾದರೂ ಬಂದಿವೆ. ಸತ್ಯಕಾಮರ ಪಂಚ‘ಮ’ಕಾರಗಳ ನಡುವೆ ಮತ್ತು ಇಂದಿರಾತನಯ ಅವರ ಒಂದಿಷ್ಟು ಕಾದಂಬರಿ ಗಳು ತಂತ್ರದ ಕೆಲವು ಮಜಲುಗಳನ್ನು ನಮಗೆ ಪರಿಚಯಿಸಿವೆ. ಓಶೋ ಅವರ ಕೆಲವು ಬರವಣಿ ಗೆಗಳು ಕನ್ನಡಕ್ಕೆ ಬಂದಿವೆ. ನನ್ನ ‘ಬತ್ತೀಸರಾಗ’ ದಲ್ಲಿ ನಾನು ತಂತ್ರಗಳನ್ನು ವಿವರಿಸಲು ಹೋಗದೆ ನನಗಾದ ಯೌಗಿಕ ಅನುಭವಗಳನ್ನು ಮಾತ್ರ ದಾಖಲಿಸಿದ್ದೇನೆ. ಅಗ್ನಿ ಶ್ರೀಧರ್ ಅವರ ಪುಸ್ತಕ ಈ ಎಲ್ಲವುಗಳಿಗಿಂತ ಭಿನ್ನವಾಗಿದೆ.

ಶ್ರೀಧರ್ ಅವರೇ ಹೇಳಿಕೊಂಡಿರುವ ಹಾಗೆ ಸಾವಿನ ಸಹವಾಸದಲ್ಲಿ ಪ್ರತಿದಿನವೂ ತನ್ನ ಕೊನೆಯ ದಿನವೇನೊ ಎಂಬಂತೆ ಬದುಕುತ್ತಿರುವ ಸಂದರ್ಭದಲ್ಲಿ ಅವ ರಿಗೆ ಈ ವಿಷಯಗಳ ಬಗ್ಗೆ ಆಸಕ್ತಿ ಮೂಡಿತು. ಹೀಗಾಗಿ ಅವರು ಬಂಗಾಳದ ತಾರಾಪೀಠದಲ್ಲಿ ಮತ್ತು ಪಾಂಡಿಚೇರಿಯಲ್ಲಿ ತಂತ್ರದ ಹಲವು ರಹಸ್ಯಗಳನ್ನು, ಸ್ವಾರಸ್ಯಗಳನ್ನು ಪಾಗಲ್ ಬಾಬಾ, ತಪನ್, ಸೋದಿಮಾ ಮತ್ತು ಬೌಲ್ ಹೆಣ್ಣಿನ ಮೂಲಕ ಪಡೆದುಕೊಂಡರು. ತಮ ಗಾದ ಅನುಭವಗಳನ್ನು ತಮಗೆ ದೊರಕಿದ ಒಳ ನೋಟಗಳನ್ನು ಅತ್ಯಂತ ಕುತೂಹಲ ಜನಕವಾದ ದೀರ್ಘ ಕಥನದಲ್ಲಿ ಕಣ್ಣಿಗೆ ಕಟ್ಟುವಂತೆ, ಮನಸ್ಸನ್ನು ಮುಟ್ಟುವಂತೆ ಅಂತರಾಳವನ್ನು ತಟ್ಟುವಂತೆ ನಿರೂಪಿಸಿದ್ದಾರೆ. ಆತ್ಮಚರಿ ತ್ರಾತ್ಮಕವಾದ ಈ ಕಥನದಲ್ಲಿ ತಪನ್ ಎಂಬ ಬಂಗಾಳಿ ಸಿದ್ಧರ ನಿರೂಪಣೆಯು ಬಹುಮುಖ್ಯ ಭಾಗವಾಗಿದೆ. ಅತ್ಯಂತ ಆಪ್ತಧ್ವನಿಯಲ್ಲಿ ನಮ್ಮೊಡನೆ ಸಂಭಾಷಿಸಬಲ್ಲ ಈ ಕೃತಿ ನಮ್ಮ ಸಾಮಾಜಿಕ ತನ್ನರಿವಿನ ಹಲವು ಕೊರೆಗಳನ್ನು ತಿದ್ದುವುದಲ್ಲದೆ ತಂತ್ರದ ಬಗ್ಗೆ ನಮಗಿರುವ ಅರೆಬರೆ ಮತ್ತು ತಪ್ಪು ತಿಳಿವಳಿಕೆಗಳನ್ನು ಸರಿಪಡಿ ಸಬಲ್ಲುದಾಗಿದೆ. ಶ್ರೀಧರ್ ಅವರ ನಿರೂಪಣೆಯ ಇನ್ನೊಂದು ವಿಶೇಷವೆಂದರೆ ಅದರಲ್ಲಿ ಬಂದು ಹೋಗುವ ಅಪೂರ್ವ  ಯೋಗಿನಿಯರು. ಆಧ್ಯಾತ್ಮಿಕ ತಿಳಿವಿನ ಅತ್ಯುನ್ನತ ಮಜಲುಗಳನ್ನು ತಲುಪಿರುವವರ ಮೂಲಕ ಅವಿಸ್ಮರಣೀಯ ವಾದ ಮತ್ತು ಅಪರೂಪವಾದ ಸ್ತ್ರೀ ವ್ಯಕ್ತಿತ್ವಗಳನ್ನು ಕಟೆದು ನಿಲ್ಲಿಸಿದ್ದಾರೆ. ಅವರ ಬಗ್ಗೆ ಶ್ರೀಧರ್ ಬರೆಯದೆ ಹೋಗಿದ್ದರೆ ಈ ಅನರ್ಘ್ಯ ಜೀವಗಳ ಖಬರು ನಮಗಿರುತ್ತಿರಲಿಲ್ಲ.

ಮಾನಸಿಕ ವಿಕಾಸ ಹೊಂದುವ ಇಚ್ಛೆಯುಳ್ಳ ಎಲ್ಲರೂ ಓದಲೇಬೇಕಾದ ಈ ಪುಸ್ತಕದ ಕಥೆ ಯನ್ನು ಹೇಳಲು ನಾನು ಹೊರಡುವುದಿಲ್ಲ.  ತಂತ್ರದ ಬಗ್ಗೆ ಅದರ ಸಮರ್ಥಕರು ಮತ್ತು ವಿರೋಧಿಗಳು ಇಬ್ಬರ ಪೂರ್ವಗ್ರಹಗಳನ್ನು ಪ್ರಶ್ನಿಸುವುದು ಮಾತ್ರವಲ್ಲದೆ ತುಂಬ ಪ್ರಸ್ತುತ ವಾದ ರೀತಿಯಲ್ಲಿ ತಂತ್ರದ ಅಗತ್ಯ ನಮಗೆಲ್ಲರಿಗೂ ಇರುವುದನ್ನು ತನ್ನ ದಟ್ಟ ನಿರೂಪಣೆಯ ಮೂಲಕ ಈ ಪುಸ್ತಕ ನಮಗೆ ತಿಳಿಸುತ್ತದೆ. ಅದನ್ನು ನಾನು ಅರ್ಥಮಾಡಿಕೊಂಡಂತೆ ಕೆಲವು ಉದಾಹರಣೆ ಮತ್ತು ವಿವರಗಳ ಮೂಲಕ ಇಲ್ಲಿ ಸಂಗ್ರಹಿಸುತ್ತಿದ್ದೇನೆ.  ತಂತ್ರವೆಂಬ ಶಬ್ದಕ್ಕೆ ಪರಂಪರೆಯಲ್ಲಿ ಅತ್ಯಂತ ವಿಶಾಲ ಅರ್ಥಗಳಿರು ವುದನ್ನು ನಾನು ಈ ಸಂದರ್ಭದಲ್ಲಿ ವಾಮಾ ಚಾರ ತಂತ್ರಗಳನ್ನು ಕುರಿತು ಮಾತನಾಡುತ್ತಿದ್ದೇನೆ. ಅಘೋರಿಗಳು, ಬೌಲ್ ಸಾಧಕರು, ಸಾಮಾಜಿಕವಾಗಿ ಒಪ್ಪಿತವಲ್ಲದ ಆಚರಣೆಗಳ ಮೂಲಕ ಅಂತರಂಗದ ವಿಕಾಸ ವನ್ನು ಪಡೆಯಲು ಯತ್ನಿಸುತ್ತಾರೆ.

ಯಾವ ಅನುಭವವಲಯಗಳ ನೇರ ಪರೀಕ್ಷೆಗೆ ಇಡೀ ಜಗತ್ತು ಹೆದರಿ ಹಿಂಜರಿಯುತ್ತದೊ ಅವುಗಳನ್ನು ವಾಮಾಚಾರಿಗಳು, ನಿರ್ಭೀತರಾಗಿ ಮುಖಾಬಿಲೆ ಮಾಡಿ ಎಲ್ಲ ಭೀತಿಗಳಿಂದ ಮುಕ್ತ ರಾಗುತ್ತಾರೆ. ಸಾಂಸ್ಥಿಕ ಧರ್ಮಗಳು, ಸಾಂಪ್ರದಾ ಯಿಕ ನೀತಿ ಸಂಹಿತೆಗಳು ಸಾವು ಮತ್ತು ಕಾಮದ ಭಯದ ನೆರಳಿನಲ್ಲಿ ತಮ್ಮನ್ನು ನಿರ್ಮಿಸಿಕೊಂಡಿವೆ. ಸಾವು ಅನಿವಾರ್ಯವೆಂದು ಗೊತ್ತಿದ್ದರೂ ಸಹಿತ ಅದನ್ನು ದೂರವಿಡುವ ಪ್ರಯತ್ನದಲ್ಲಿ ನಾವೆಲ್ಲ ತೊಡಗಿರುತ್ತೇವೆ. ಸ್ಮಾರಕಗಳ ನಿರ್ಮಾಣ, ಕೀರ್ತಿಶನಿಯ ಪರದಾಟ, ಆಸ್ತಿ-ಪಾಸ್ತಿಯ ಹುಚ್ಚಾಟ ಇತ್ಯಾದಿ ಮಾನವ ಪ್ರವೃತ್ತಿಗಳು ಸಾವನ್ನು ಮರೆಸುವ, ದೂರವಿಡುವ ಉಪಾಯ ಗಳು. ಆದರೆ ತಾಂತ್ರಿಕರು ಸಾವಿನ ಜೊತೆಗೆ ಸ್ನೇಹವನ್ನು ಸ್ಮಶಾನ ಮತ್ತು ಶವ ಸಾಧನೆಗಳ ಮೂಲಕ ಬೆಳೆಸಿಕೊಳ್ಳುತ್ತಾರೆ. ಬದುಕಿನ ಸುಖ ಗಳನ್ನು, ವಿಸ್ಮಯಗಳನ್ನು, ಚೆಲುವನ್ನು ಗಾಢವಾಗಿ ಅನುಭವಿಸಬೇಕೆಂದರೆ ಸಾವನ್ನು ಪ್ರೀತಿಸಬೇಕೆಂದು ಸಾರುತ್ತಾರೆ.

ಕಾಮವು ಬದುಕಿನ ಮೂಲ ಮತ್ತು ಗುರಿಯೆಂದು ಒಪ್ಪಿಕೊಳ್ಳಲು ನಾವು ಬಹು ಮಟ್ಟಿಗೆ ಹಿಂಜರಿಯುತ್ತೇವೆ. ಗಂಡಾಳಿಕೆಯ ಸಮಾಜಗಳು ಹೆಂಗಸರ ಲೈಂಗಿಕತೆಗೆ ಹೆದರು ತ್ತವೆ. ಆದರೆ ಇದರಲ್ಲಿ ಅದಮ್ಯ ಸೆಳೆತವೂ ಇರುತ್ತದೆ. ಆದ್ದರಿಂದ ಹೆಣ್ಣನ್ನು ಗಂಡು ಕಾಮದ ಭೋಗ ವಸ್ತುವನ್ನಾಗಿ ಮತ್ತು ಅದೇ ಸಮಯ ದಲ್ಲಿ ನಿಯಂತ್ರಣದ ವಸ್ತುವನ್ನಾಗಿ ನೋಡಲಾಗುತ್ತದೆ.

ಶಕ್ತಿಯ ನಿಂದನೆ, ಖಂಡನೆ ಮತ್ತು ಅಪಮೌಲ್ಯೀಕರಣ ಗಂಡು ಧರ್ಮಗ್ರಂಥ ಗಳಲ್ಲಿ ಹೇರಳವಾಗಿವೆ. ನಮ್ಮ ಕೆಲವು ಪರಂಪರೆ ಗಳು  ಹೆಣ್ಣನ್ನು ಮಾಯೆ ಎಂದವು. ಆಧ್ಯಾತ್ಮಿಕ ವಾಗಿ ಮಾತೆಯೆಂದು ಆರಾಧಿಸುವಾಗಲೂ ಸಾಮಾಜಿಕವಾಗಿ ಹೆಣ್ಣನ್ನು ಗಂಡು ಬಳಕೆಯ ಸಾಧನವಾಗಿ ನೋಡಲಾಯಿತು. ಬೈಬಲ್ಲಿನಲ್ಲಿ ಹೆಣ್ಣನ್ನು ಪಾಪದ ಮೂಲಕಾರಣವೆಂದು ಗಣಿಸ ಲಾಯಿತು. ಪುರುಷ ಪ್ರಧಾನ ಆಧ್ಯಾತ್ಮಿಕ ಪರಂಪರೆಗಳಲ್ಲಿ ಸ್ತ್ರೀ ಸಂಸರ್ಗಪತನವೆಂದೂ ಬ್ರಹ್ಮಚರ್ಯ ಪಾಲನೆ ಆತ್ಮೋದ್ಧಾರದ ಏಕಮೇವ ಮಾರ್ಗವೆಂದೂ ಸಾರಲಾಯಿತು. ಆದರೆ ಇವೆಲ್ಲವೂ ಹೆಂಗಸರ ಭಯದಲ್ಲಿ ಗಂಡ ಸರು ಕಟ್ಟಿದ ಮನೋರಚನೆಗಳು. ಆದರೆ ತಾಂತ್ರಿಕರು ಸಮಸ್ತ ಸೃಷ್ಟಿಯನ್ನು ಹೆಣ್ಣಾಗಿ ಆರಾಧಿಸುತ್ತಾರೆ. ಸ್ತ್ರೀ-ಪುರುಷರ ನಿಯಮಬದ್ಧ ಕೂಟವೇ ಆಧ್ಯಾತ್ಮಿಕತೆಯ ಅತ್ಯುನ್ನತ ಮಜಲೆನ್ನುತ್ತಾರೆ. ಸ್ತ್ರೀ ತತ್ವಕ್ಕೆ ಅಂಜದೆ ಅದನ್ನು ಆವಾಹನೆ ಮಾಡಿ ಅದರ ಮೂಲಕವೇ ಸಿದ್ಧಿ ಮತ್ತು ಮುಕ್ತಿಗಳನ್ನು ಪಡೆದುಕೊಳ್ಳುತ್ತಾರೆ.

ತಾರಾಪೀಠದಲ್ಲಿ ಶ್ರೀಧರ್ ಅವರಿಗೆ ಆದ ಅನುಭವಗಳು ಪ್ರಧಾನತಃ ಸಾವಿಗೆ ಸಂಬಂಧಿಸಿ ದವು. ಅಲ್ಲಿ ಅವರಿಗೆ ಎದುರಾದ ತಾರಾಮಾಳ ಭಕ್ತ ಪಾಗಲ್ ಬಾಬಾ, ಮುಂದುವರೆದ ಸಾಧಕ ತಪನ್, ಬೌದ್ಧ ಧ್ಯಾನ ಪದ್ಧತಿಗನುಸಾರ ಹೆಣಗಳನ್ನು ಗಮನವಿಟ್ಟು ಧ್ಯಾನಿಸುವ ಡೇವಿಡ್-- ಇವರೆಲ್ಲರೂ ಸ್ಮಶಾನ ಸಾಧನೆಯ ಹುರಿಯಾಳು ಗಳು. ಗರ್ಭಿಣಿಯರ ಶವದಿಂದ ಹೊರ ತೆಗೆದ ಭ್ರೂಣದಿಂದ ತನ್ನ ಧ್ಯಾನದ ಆಸನವನ್ನು ಮಾಡಿ ಕೊಳ್ಳುವ ಸೋನಿಮಾ ಈ ಸ್ಮಶಾನ ಸಾಧನೆಗೆ ಲೈಂಗಿಕ ವಾಮಾಚಾರದ ಆಯಾಮವನ್ನು ಕೊಡುತ್ತಾಳೆ. ಸಮಾಜದ ನಿಯಮಗಳ ಹೊರಗೆ ಬದುಕುತ್ತಿರುವ ಈ ವ್ಯಕ್ತಿ ವಿಶೇಷಗಳು ಸ್ವೇಚ್ಛಾ ಚಾರಿಗಳಲ್ಲ. ಕಠೋರ ನಿಯಮಗಳ ಮೂಲಕ, ಸಾಧನೆಗಳ ಮೂಲಕ ಸ್ವಾತಂತ್ರ್ಯವನ್ನು ಪಡೆದು ಕೊಂಡವರು. ಆದರೆ ಸ್ಮಶಾನ ಸಾಧನೆ ಅದೆಷ್ಟೇ ಪ್ರಭಾವಯುತವಾದರೂ ಅದರಲ್ಲೊಂದು ಕೃತಕತೆಯಿದೆ. ವಿಶೇಷವಾದ ಪರಿಕರಗಳ ಮತ್ತು ಪರಿಪಾಲನೆಗಳ ಆಧಾರ ಅದಕ್ಕಿದೆ.

ಇದಕ್ಕೆ ವ್ಯತಿರಿಕ್ತವಾಗಿ ಶ್ರೀಧರ್ ಅವರ ಪುಸ್ತಕದ ಕೊನೆಯ ಭಾಗದಲ್ಲಿ ಬರುವ ತಪನ್‌ ಅವರ ತಾಂತ್ರಿಕ ಸಂಗಾತಿ ಬೌಲ್ ಹೆಣ್ಣು ತಂತ್ರ ಸಾಧನೆಗೆ ಇನ್ನೂ ವಿಶಾಲವಾದ ಭಿತ್ತಿಯನ್ನು ನೀಡುತ್ತಾಳೆ. ಅವಳ ಪ್ರಕಾರ ಪ್ರತಿನಿತ್ಯದ ಬದುಕು ನಮಗೊಡ್ಡುವ ಅನಿರೀಕ್ಷಿತೆಗಳ ಮತ್ತು ಅಪಾಯ ಗಳ ಮೂಲಕ ಸಾಧನೆಯಲ್ಲಿ ಮುಂದುವರೆ ಯುವುದು ಹೆಚ್ಚು ಸಮಂಜಸ.

ದೈನಿಕ ಸಂದರ್ಭ ಗಳಲ್ಲೇ ತಪನ್‌ ಅವರ ಗಂಡು ಅಹಂಕಾರವನ್ನು ಬುಡಸಮೇತ ಅಲುಗಿಸಿ ಆ ಮೂಲಕ ಅವರ ಸೀಮಿತ ಅರಿವನ್ನು ಆಕೆ ಹಿಗ್ಗಿಸುತ್ತಾಳೆ. ಈ ದೃಷ್ಟಿ ಅತ್ಯಂತ ಅಪೂರ್ವವಾದುದು. ಅವಳದು ಸಹಜ ಮಾರ್ಗ. ಸಮಾಜದ ಧರ್ಮಗಳ, ಸಿದ್ಧ ಆಚರಣೆಗಳ ಕೃತಕತೆಯಿಂದ ಹೊರತಾದದ್ದು. ಸಾಧಾರಣವಾದ ಜಗತ್ತಿನಲ್ಲಿ ಅಸಾಧಾರಣ ವಾದುದನ್ನು ಕಾಣಿಸುವಂತಹದು. ಆಕೆ ಮೈವೆತ್ತಿರುವ ಲೈಂಗಿಕ ಸಾಧನೆ ಮುಕ್ತ ಕಾಮಪ್ರತಿಪಾದಕರ ಮಾರ್ಗವೂ ಅಲ್ಲ, ಮಡಿವಂತರ ಕಾಮನಿರಸನ ಮಾರ್ಗವೂ ಅಲ್ಲ.

ಆಧ್ಯಾತ್ಮಿಕ ವಿಕಾಸಕ್ಕಾಗಿ ಗಿರಿ ಗುಹೆಗಳಿಗೆ ಹೋಗಬೇಕಾಗಿಲ್ಲ, ಆಶ್ರಮಗಳನ್ನು ಆಶ್ರಯಿಸ ಬೇಕಾಗಿಲ್ಲ. ಧರ್ಮಗಳಿಗೆ ಸಲಾಮು ಮಾಡಬೇ ಕಾಗಿಲ್ಲ. ಅದಕ್ಕೆ ಬೇಕಾದದ್ದು ಹೆದರಿಕೆ ಇಲ್ಲದ ತೆರೆದ ಮನಸ್ಸು ಮತ್ತು ಪರೀಕ್ಷೆಗಳನ್ನು ಎದುರಿ ಸುವ ದಿಟ್ಟತನ.
ಮಾರ್ಗದರ್ಶಿಗಳಿಲ್ಲದೆ ಮಾರ್ಗ ಗಳನ್ನು ದಾಟಲಾಗುವುದಿಲ್ಲ. ಆದರೆ ಮಾರ್ಗ ದಲ್ಲಿ ನಮಗಿಂತ ಬಹಳ ಮುಂದೆ ತಲುಪಿರುವ ಬೌಲ್ ಹೆಣ್ಣಿನಂತಹ  ಸಿದ್ಧರು ಮಾತ್ರ ಕೈಹಿಡಿದು ಮುನ್ನಡೆಸಬಲ್ಲರು. ಅಂತಹ ವ್ಯಕ್ತಿಗಳನ್ನು ನಮಗೆ ಜೀವಂತವಾಗಿ ನೇರ ಪರಿಚಯ ಮಾಡಿಸುವ ಶ್ರೀಧರ್ ಅವರ ಪುಸ್ತಕವೂ ಪರೋಕ್ಷವಾಗಿ ನಮಗೆ ಮಾರ್ಗದರ್ಶಿಯಾಗಿದೆ.

- ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT