ಭಾನುವಾರ, ಜೂನ್ 13, 2021
23 °C

ತೃತೀಯರಂಗ ಎಂಬ ಮರೀಚಿಕೆಯ ಬೆನ್ನತ್ತಿ....

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ಯಾವುದೋ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿಯನ್ನು ಬಿಟ್ಟು ಬೇರೊಂದು ಪ್ರಾದೇಶಿಕ ಪಕ್ಷ ಚುನಾವಣೆಯಲ್ಲಿ ಗೆದ್ದ ಕೂಡಲೇ ನಾಲ್ಕು ದಿಕ್ಕುಗಳಿಂದಲೂ ತೃತೀಯರಂಗದ ಗಂಟೆಗಳು ಮೊಳಗತೊಡಗುತ್ತವೆ. ಒಂದು ಕಾಲದಲ್ಲಿ ಈ ಗಂಟೆ ಆಡಿಸುತ್ತಿದ್ದವರು ಸಿಪಿಎಂ ಪಕ್ಷದ ನಾಯಕ ಹರಿಕಿಷನ್‌ಸಿಂಗ್ ಸುರ್ಜಿತ್.  ಬದುಕಿದ್ದರೆ ದೆಹಲಿಯಲ್ಲಿದ್ದ ಅವರ ಮನೆ ಈಗ ತೃತೀಯರಂಗದ ತಥಾಕಥಿತ ನಾಯಕರಿಂದ ತುಂಬಿ ತುಳುಕಾಡುತ್ತಿತ್ತೋ ಏನೋ? ಸುರ್ಜಿತ್ ನಂತರ ಅವರ ಚಪ್ಪಲಿಯಲ್ಲಿ ಕಾಲುತೂರಿ ಹೊರಟವರು ಮುಲಾಯಂ ಸಿಂಗ್ ಯಾದವ್. ಇದರಿಂದಾಗಿಯೇ ಉತ್ತರಪ್ರದೇಶದ ಚುನಾವಣೆಯ ನಂತರ ತೃತೀಯ ರಂಗದ ಆಶಾವಾದಿಗಳು ಮೈಮುರಿದು ಎದ್ದು ಕೂತಿದ್ದಾರೆ. ಆಗಲೇ ಮಾಧ್ಯಮಗಳು ತೃತೀಯರಂಗವನ್ನು ರಾಜಕೀಯ ಚರ್ಚೆಯ ಕೇಂದ್ರಸ್ಥಾನದಲ್ಲಿ ತಂದು ನಿಲ್ಲಿಸಿವೆ. ವಾಸ್ತವ ಸಂಗತಿ ಏನೆಂದರೆ, ಸದ್ಯದ ಭವಿಷ್ಯದಲ್ಲಿ ತೃತೀಯರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ. ಇನ್ನೂ ಸ್ವಲ್ಪ ಹುಂಬ ಧೈರ್ಯದಿಂದ ಹೇಳುವುದಾದರೆ ಭಾರತದಲ್ಲಿ ಕನಿಷ್ಠ ಮುಂದಿನ ಹತ್ತು ವರ್ಷ ತೃತೀಯರಂಗಕ್ಕೆ ಭವಿಷ್ಯ ಇಲ್ಲ.

ಈ ಸತ್ಯ ತೃತೀಯರಂಗದ ಪ್ರತಿಪಾದಕರೆಲ್ಲರಿಗೂ ಗೊತ್ತು, ಹೀಗಿದ್ದರೂ ಅವರು ತೃತೀಯ ರಂಗದ ಕನಸುಗಳನ್ನು ತುಂಬಿದ ಬಣ್ಣಬಣ್ಣದ ಬಲೂನ್‌ಗಳ ಮಾರಾಟವನ್ನು ನಿಲ್ಲಿಸುವುದಿಲ್ಲ, ಆ ಕನಸುಗಳ ಬಲೂನ್ ಎಷ್ಟು ಬಾರಿ ಒಡೆದುಹೋದರೂ ಅದನ್ನು ಒಂದಷ್ಟು ಜನ ಕೊಂಡು ಕೊಳ್ಳುವುದನ್ನೂ ನಿಲ್ಲಿಸುವುದಿಲ್ಲ. ಮೊದಲನೆಯದಾಗಿ, ತೃತೀಯರಂಗದ ಸ್ವರೂಪದ ಬಗ್ಗೆಯೇ ನಮ್ಮಲ್ಲಿ ಬಹಳಷ್ಟು ಗೊಂದಲಗಳಿವೆ. ಮೂಲ ಅರ್ಥದ ಪ್ರಕಾರ ತೃತೀಯರಂಗ ಎನ್ನುವುದು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರ ಇರುವ ಪಕ್ಷಗಳ ಒಕ್ಕೂಟ. ಈ ದೂರ ತತ್ವದ ಆಧಾರದ್ದು. ಆದರೆ ಬಹುತೇಕ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸುತ್ತಾ ವಿರೋಧಿಸುತ್ತಾ ಕೊನೆಗೆ ಅವುಗಳ ಗುಣಲಕ್ಷಣಗಳನ್ನೇ ಮೈಗೂಡಿಸಿಕೊಂಡಿವೆ. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ ಮತ್ತು ವಂಶಪರಂಪರೆಯನ್ನು ವಿರೋಧಿಸಿಯೇ 1977ರಲ್ಲಿ  ಪರ್ಯಾಯ ಹುಟ್ಟಿಕೊಂಡದ್ದು. ಆದರೆ ಉತ್ತರಪ್ರದೇಶದಲ್ಲಿ ಈಗ ನಡೆಯುತ್ತಿರುವುದೇನು?

ಈಗಿನ ವಿಜಯೋತ್ಸಾಹದ ಭರದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಎರಡು ಮುಖ್ಯ ಅನಿಷ್ಟಗಳಾದ ವಂಶಪರಂಪರೆಯ ಮುಂದುವರಿಕೆ ಮತ್ತು ಆಂತರಿಕ ಪ್ರಜಾಪ್ರಭುತ್ವದ ದಮನ, ಸಮಾಜವಾದಿ ಪಕ್ಷದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಕುರುಡರಾಗಿದ್ದಾರೆ. ಮಗನಿಗೆ ಪಟ್ಟ ಕಟ್ಟುವ ಅವಸರದಲ್ಲಿರುವ ಮುಲಾಯಂಸಿಂಗ್ ಯಾದವ್, ಪಕ್ಷ ಕಟ್ಟಲು ಬೆವರು ಸುರಿಸಿದ ಹಿರಿಯ ನಾಯಕರನ್ನು ಮೂಲೆಗೆ ತಳ್ಳಿದ್ದಾರೆ. ಅದು ನಿಜವಾದ ಅರ್ಥದಲ್ಲಿ `ತಂದೆ-ಮಗ~ನ ಪಕ್ಷವಾಗಿ ಹೋಗಿದೆ.  `ಲೋಹಿಯಾ ಕೆ ಸಾಥ್~ ಎಂಬ ಬ್ಯಾನರ್-ಪೋಸ್ಟರ್‌ಗಳ ಮೂಲಕ ಚುನಾವಣಾ ಪ್ರಚಾರ ನಡೆಸಿದ ಸಮಾಜವಾದಿ ಪಕ್ಷ, ರಾಜಕೀಯದಲ್ಲಿ ವಂಶಪರಂಪರೆಯನ್ನು ಲೋಹಿಯಾ ವಿರೋಧಿಸಿದ್ದರು ಎನ್ನುವುದನ್ನು ಜಾಣತನದಿಂದ ಮರೆತುಬಿಟ್ಟಿದೆ.

ತತ್ವದ ವಿಚಾರವನ್ನು ಪಕ್ಕಕ್ಕಿಟ್ಟು ಸಂಖ್ಯೆಯನ್ನಷ್ಟೇ ಗಮನಕ್ಕೆ ತೆಗೆದುಕೊಳ್ಳುವುದಾದರೆ ತೃತೀಯರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಎರಡು ರಾಷ್ಟ್ರೀಯ ಪಕ್ಷಗಳ ಬೆಂಬಲ ಇಲ್ಲದೆ ಸಾಮಾನ್ಯ ಬಹುಮತಕ್ಕೆ ಬೇಕಾಗಿರುವ 272 ಸದಸ್ಯರ ಸ್ವಂತ ಬಲವನ್ನು ಗಳಿಸಬೇಕು. 1952ರಿಂದ 2004ರ ವರೆಗಿನ ದೇಶದ ಚುನಾವಣಾ ಇತಿಹಾಸವನ್ನು ನೋಡಿದರೆ 1977ರ ಚುನಾವಣೆಯೊಂದನ್ನು (ಕಾಂಗ್ರೆಸ್ 154+ ಜನಸಂಘ 93=247) ಹೊರತುಪಡಿಸಿ ಬೇರೆ ಯಾವುದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿಯ ಒಟ್ಟು ಬಲ 272ಕ್ಕಿಂತ ಕೆಳಗೆ ಇಳಿದಿಲ್ಲ. ಕನಿಷ್ಠ ಎಂದರೆ 1989ರಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಗಳಿಸಿದ್ದ 282 ಸ್ಥಾನಗಳು. ಅಂದರೆ 1977ರ ಚುನಾವಣೆಯೊಂದನ್ನು ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ಒಟ್ಟು ಸದಸ್ಯ ಬಲ ಎಂದೂ 272 ತಲುಪಿಲ್ಲ. 1991ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಈ ಎರಡು ಪಕ್ಷಗಳು ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವುದು 2009ರ ಚುನಾವಣೆಯಲ್ಲಿ (ಕಾಂಗ್ರೆಸ್ 206+ಬಿಜೆಪಿ 114=320). ಹೀಗಿದ್ದಾಗ ಈ ಎರಡೂ ಪಕ್ಷಗಳನ್ನು ಹೊರಗಿಟ್ಟ ತೃತೀಯರಂಗ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ?

`ಅಂತರ ಇರುವುದು 40-50 ಸ್ಥಾನಗಳಲ್ಲವೇ? ಅದನ್ನು ಗಳಿಸುವುದು ಅಷ್ಟೇನೂ ಕಷ್ಟವಾಗಲಾರದು. ಉತ್ತರಪ್ರದೇಶದಲ್ಲಿಯೇ ಅದನ್ನು ಪಡೆದುಕೊಳ್ಳಬಹುದು~ ಎಂದು ಯಾರೋ ಕಡು ಆಶಾವಾದಿಗಳು ಹೇಳಬಹುದು. ಅದು ಕೂಡಾ ನಿಜವಾಯಿತೆಂದು ತಿಳಿದುಕೊಳ್ಳಿ, ಆಗಲೂ ತೃತೀಯರಂಗ ಅಧಿಕಾರಕ್ಕೆ ಬರಲು ಸಾಧ್ಯವಾಗಲಾರದು. ಇದಕ್ಕೆ ಕಾರಣ ತೃತೀಯ ರಂಗದೊಳಗಿರುವ ಪಕ್ಷಗಳ ನಡುವಿನ ಬಿಕ್ಕಟ್ಟು. ಇದನ್ನು ಉತ್ತರಪ್ರದೇಶದಿಂದಲೇ ಪ್ರಾರಂಭಿಸೋಣ. ಅಲ್ಲಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಟ್ಟಾಗಿ ಒಂದೇ ಸರ್ಕಾರದಲ್ಲಿ ಸೇರಿಕೊಳ್ಳಲು ಸಾಧ್ಯವೇ? ಅದೇ ರೀತಿ, ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ, ಬಿಹಾರದ ಜೆಡಿ (ಯು) ಮತ್ತು ಆರ್‌ಜೆಡಿ, ಪಶ್ಚಿಮಬಂಗಾಳದ ಎಡಪಕ್ಷಗಳು ಮತ್ತು ಟಿಎಂಸಿ, ಕಾಶ್ಮೀರದ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಒಟ್ಟಾಗಿ ಒಂದು ಮೈತ್ರಿಕೂಟದಡಿ ಇರಲು ಸಾಧ್ಯವೇ? ತೃತೀಯರಂಗದ ಆಶಾವಾದಿಗಳು ಎಷ್ಟೇ ಬೊಬ್ಬಿಟ್ಟರೂ ಅಂತಿಮವಾಗಿ ಅವರು ಒಂದೋ ಕಾಂಗ್ರೆಸ್ ನೇತೃತ್ವದ ಯುಪಿಎ ಜತೆ ಇಲ್ಲವೇ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಸೇರಿಕೊಳ್ಳಲೇಬೇಕು. ಅದನ್ನು ತೃತೀಯರಂಗ ಎಂದು ಕರೆಯಲು ಹೇಗೆ ಸಾಧ್ಯ? ಇನ್ನೂ ಹುಟ್ಟದ ತೃತೀಯರಂಗದ ಗಾಳಿಪಟ ಹಾರುತ್ತಿರುವುದನ್ನು ನೋಡಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮರೆಯಲ್ಲಿ ನಿಂತು ನಗುತ್ತಿರುವುದು ಈ ಕಾರಣಕ್ಕೆ. ಕೊನೆಗೂ ಈ ನಾಯಕರು ನಮ್ಮ ಮನೆ ಬಾಗಿಲು ತಟ್ಟಲೇ ಬೇಕು ಎಂದು ಅವರಿಗೆ ಗೊತ್ತಿದೆ.

ಈ ಹಿನ್ನೆಲೆಯಲ್ಲಿ 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವ ಮತ್ತು ನಂತರದಲ್ಲಿ ಕುತೂಹಲದಿಂದ ನೋಡಬೇಕಾಗಿರುವುದು ತೃತೀಯರಂಗದ ಹುಟ್ಟು-ಬೆಳವಣಿಗೆಯಲ್ಲ, ಅದು ಯುಪಿಎ ಇಲ್ಲವೇ ಎನ್‌ಡಿಎ-ಇವುಗಳಲ್ಲಿ ಯಾವ ರಂಗದ ಬಲವರ್ಧನೆಯಾಗಲಿದೆ ಎನ್ನುವುದನ್ನು. ಈಗಿನ ಬಲಾಬಲದಲ್ಲಿ ಕಾಂಗ್ರೆಸ್ (206) ನೇತೃತ್ವದ ಯುಪಿಎನಲ್ಲಿ, ತೃಣಮೂಲ ಕಾಂಗ್ರೆಸ್ (19), ಡಿಎಂಕೆ (18), ಎನ್‌ಸಿಪಿ (9) ಮತ್ತು ಇತರ ಸಣ್ಣಪಕ್ಷಗಳು (21) ಇವೆ. ಎಸ್‌ಪಿ (22), ಬಿಎಸ್‌ಪಿ (21) ಮತ್ತು ಇತರ ಸಣ್ಣಪಕ್ಷಗಳು (7) ಅದಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿವೆ. ಅದೇ ರೀತಿ, ಬಿಜೆಪಿ (114) ನೇತೃತ್ವದ ಎನ್‌ಡಿಎನಲ್ಲಿ ಜೆಡಿ (ಯು) (20) ಮತ್ತು ಇತರ ಸಣ್ಣಪಕ್ಷಗಳು (15) ಇವೆ. ಇವುಗಳ ಜತೆಗೆ ಈ ಎರಡೂ ಗುಂಪಿಗೂ ಸೇರದ ಸಿಪಿಎಂ (16), ಬಿಜೆಡಿ (14), ಎಐಎಡಿಎಂಕೆ (9) ಮತ್ತು ಇತರ ಪಕ್ಷಗಳು (26) ಇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳ ಬಲಾಬಲ ಏನಾಗಲಿದೆ ಎಂಬುದರ ಮೇಲೆ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎನ್ನುವುದು ನಿರ್ಧಾರವಾಗಬಹುದು.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯೇನಾದರೂ ಕನಿಷ್ಠ 80-100 ಸ್ಥಾನಗಳನ್ನು ಗಳಿಸಿದ್ದರೆ ಆ ಗೆಲುವು ಎನ್‌ಡಿಎ ಬಲವರ್ಧನೆಗೆ ಚಾಲನೆ ನೀಡುತ್ತಿತ್ತೋ ಏನೋ? ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಅನುಕೂಲಗಳಿರುವುದು ಯುಪಿಎಗೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ನಾಯಕರಲ್ಲಿ ಮುಲಾಯಂಸಿಂಗ್ ಯಾದವ್ ಸೇರಿದಂತೆ ಆಂತರಿಕವಾಗಿ ಹೆಚ್ಚಿನವರ ಒಲವು ಇರುವುದು ಎನ್‌ಡಿಎ ಕಡೆಗೆ. ಇದಕ್ಕೆ ವಾಜಪೇಯಿ ನೇತೃತ್ವದ ಆರು ವರ್ಷಗಳ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿ ನಾಯಕರು ಮಿತ್ರಪಕ್ಷಗಳನ್ನು ನಡೆಸಿಕೊಂಡ ರೀತಿ ಮೊದಲ ಕಾರಣ. ಬೇರೆ ಪಕ್ಷಗಳಿಗೆ ಎಷ್ಟು ಜಾಗ ಮತ್ತು ಅವಕಾಶವನ್ನು ಕೊಡಬೇಕೆಂದು ಆ ಪಕ್ಷದ ನಾಯಕರಿಗೆ ಗೊತ್ತಿದೆ. ಆದುದರಿಂದಲೇ ಬಿಜೆಪಿಯ ಕೇಂದ್ರನಾಯಕರೊಂದಿಗೆ ಜಗಳವಾಡಿಕೊಂಡು ಎನ್‌ಡಿಎಯಿಂದ ಹೊರಹೋದ ಪಕ್ಷಗಳು ಕಡಿಮೆ. ಹೆಚ್ಚಿನವರು ಎನ್‌ಡಿಎ ಜತೆ ಸಂಬಂಧ ಕಡಿದುಕೊಂಡಿದ್ದು ಮುಖ್ಯವಾಗಿ ತಮ್ಮ ರಾಜ್ಯದಲ್ಲಿನ ಮುಸ್ಲಿಂ ಮತದಾರರನ್ನು ಕಳೆದುಕೊಳ್ಳಬಹುದೆಂಬ ಭಯದಿಂದ. ಇನ್ನು ಕೆಲವು ಪಕ್ಷಗಳು ರಾಜ್ಯಮಟ್ಟದ ಬಿಜೆಪಿ ನಾಯಕರ ಜತೆಗಿನ ಸಂಘರ್ಷದ ಕಾರಣಕ್ಕೆ ದೂರವಾಗಿವೆ.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ದುರಹಂಕಾರಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಮೈಗೂಡಿಸಿಕೊಂಡ ಪಕ್ಷ. ಏಕಚಕ್ರಾಧಿಪತ್ಯವನ್ನು ಅದು ಎಂದೋ ಕಳೆದುಕೊಂಡಿದ್ದರೂ ಆ ಗುಂಗಿನಿಂದ ಹೊರಬಂದಿಲ್ಲ. ಅದಕ್ಕೆ ಪ್ರತಿಯೊಂದು ಮಿತ್ರಪಕ್ಷಗಳ ಬೆಳವಣಿಗೆಯಲ್ಲಿಯೂ ತನ್ನ ವಿರುದ್ಧದ ಸಂಚು ಕಾಣಿಸುತ್ತದೆ. ಯುಪಿಎ ಯಲ್ಲಿ ಈಗ ಇರುವ ಟಿಎಂಸಿ, ಡಿಎಂಕೆ ಇಲ್ಲವೇ ಎನ್‌ಸಿಪಿ ಯಾವ ಪಕ್ಷದ ಜತೆಯಲ್ಲಿಯೂ ಕಾಂಗ್ರೆಸ್ ಸಂಬಂಧ ಸೌಹಾರ್ದವಾಗಿಲ್ಲ. ಬೇರೆ ದಾರಿ ಇಲ್ಲದೆ ಈ ಪಕ್ಷಗಳು ಯುಪಿಎ ಜತೆಯಲ್ಲಿವೆ. ಮೂಲತಃ ಕಾಂಗ್ರೆಸ್ ವಿರೋಧಿಯಾಗಿರುವ ಮುಲಾಯಂಸಿಂಗ್ ಯಾದವ್ ಅವರಿಗೆ ಇದು ಚೆನ್ನಾಗಿ ಗೊತ್ತು. ದುರಂತವೆಂದರೆ ಈಗಲೂ ಅವರು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯ ಇದ್ದರೆ ಅದು ತಾನು ವೈಯಕ್ತಿಕವಾಗಿ ಒಲ್ಲದ ಆದರೆ ರಾಜಕೀಯವಾಗಿ ಅನಿವಾರ್ಯವಾಗಿರುವ ಯುಪಿಎ ಜತೆ ಮಾತ್ರ. ಎನ್‌ಡಿಎ ಜತೆ ಕೂಡಿಕೊಂಡರೆ  ಅವರು ಮತ್ತೊಮ್ಮೆ ಮುಸ್ಲಿಮರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಈ ಚುನಾವಣೆಯಲ್ಲಿ ಗಳಿಸಿರುವ ಹೆಚ್ಚುವರಿ ನಾಲ್ಕುವರೆಯಷ್ಟು ಮತಗಳು ಕೈಜಾರಿ ಹೋಗಬಹುದು. ಆದುದರಿಂದ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ತೃತೀಯರಂಗದ ಬಲವರ್ಧನೆಗೆ ನೆರವಾಗುವ ಸಾಧ್ಯತೆ ಇಲ್ಲ.

ಉತ್ತರ ಪ್ರದೇಶದ ಮತದಾರರಂತೆ ದೇಶದ ಮತದಾರರು ಕೂಡಾ ತ್ರಿಶಂಕು ಸ್ಥಿತಿ ಬೇಡವೇ ಬೇಡ ಎಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏನಾದರೂ ತೀರ್ಮಾನಿಸಿದರೂ ಅದರ ಲಾಭ ಎರಡರಲ್ಲಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಸಿಗಬಹುದೇ ಹೊರತು, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಸಿಗಲಾರದು. ಒಂದು ವೇಳೆ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸಿ ಅವುಗಳ ಬಲ ತೀರಾ ಕುಸಿದು ಬಿಟ್ಟರೆ, ಆಗ ತೃತೀಯರಂಗಕ್ಕೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷದ ಬೆಂಬಲ ಪಡೆದು ತೃತೀಯ ರಂಗದ ನಾಯಕನೊಬ್ಬ ಪ್ರಧಾನಮಂತ್ರಿಯಾಗಲು ಸಾಧ್ಯ. ಅಂತಹ ಸಂದರ್ಭದಲ್ಲಿ  ಇಬ್ಬರ ಅವಕಾಶ ಉಜ್ವಲವಾಗಿದೆ. ಮೊದಲನೆಯವರು ನಿತೀಶ್‌ಕುಮಾರ್, ಎರಡನೆಯವರು ಮುಲಾಯಂಸಿಂಗ್ ಯಾದವ್. ಬೆಂಬಲಕ್ಕಾಗಿ ಯಾವ ರಾಷ್ಟ್ರೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಇವರಿಬ್ಬರಿಗೂ ಹೆಚ್ಚು ಆಯ್ಕೆಗಳಿಲ್ಲ. ನಿತೀಶ್‌ಗೆ ಬಿಜೆಪಿ ಮತ್ತು ಮುಲಾಯಂ ಸಿಂಗ್‌ಗೆ ಕಾಂಗ್ರೆಸ್ ಅನಿವಾರ್ಯ. ಆದರೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲಿಸಿದ್ದ ತೃತೀಯರಂಗದ ಸರ್ಕಾರಗಳ ರಚನೆಯ ಈ ವರೆಗಿನ ಇತಿಹಾಸವನ್ನು ನೋಡಿದರೆ ಅಂತಹ ಸರ್ಕಾರ ಬಹಳ ದಿನ ಬಾಳಬಹುದೆಂದು ಅನಿಸುವುದಿಲ್ಲ. 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವನ್ನು ಬಿಜೆಪಿ ಉರುಳಿಸಿದ್ದರೆ, 1996ರಲ್ಲಿ ಮೊದಲು ಎಚ್.ಡಿ.ದೇವೇಗೌಡ ಮತ್ತು ನಂತರ ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಿದ್ದು ಕಾಂಗ್ರೆಸ್. ತೃತೀಯರಂಗ ಎನ್ನುವುದು ಕೊನೆಗೂ ಮರೀಚಿಕೆಯೇ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.