ಸುನಿಲ್ ಜಾನಾ ಅವರ ಹೆಸರನ್ನು ನಾನು ಮೊದಲು ಕೇಳಿದ್ದು 1980ರಲ್ಲಿ. ಬ್ರಿಟಿಷ್ - ಭಾರತೀಯ ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಕೃತಿಗಳ ಬಗ್ಗೆ ಆಗ ನಾನು ಹೆಚ್ಚು ಮೋಹಿತನಾಗ್ದ್ದಿದೆ. ಎಲ್ವಿನ್ ಬಗ್ಗೆ ಅಷ್ಟು ಆಸಕ್ತಿ ಇದ್ದಲ್ಲಿ, ಎಲ್ವಿನ್ ಜೊತೆ ನಿಕಟವಾಗಿ ಕೆಲಸ ಮಾಡಿದ್ದ ತನ್ನ ಮಾಮುನನ್ನು ಭೇಟಿ ಆಗಬೇಕೆಂದು ಕೊಲ್ಕತ್ತಾದ ನನ್ನ ಗೆಳತಿ ಹಾಗೂ ಪರಿಸರ ಕಾರ್ಯಕರ್ತೆ ಬೊನಾನಿ ಕಕ್ಕರ್ ತಿಳಿಸಿದ್ದಳು. ಆದರೆ ಛಾಯಾಗ್ರಹಣ ಕ್ಷೇತ್ರದಲ್ಲಿ ನನಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ.

ಭಾರತದ ಈ ಶ್ರೇಷ್ಠ ಛಾಯಾಚಿತ್ರಗ್ರಾಹಕರ ಬಗೆಗಂತೂ ನಾನೆಂದೂ ಕೇಳಿರಲೇ ಇಲ್ಲ. ಆಗ ಬೊನಾನಿಯೇ ಒಂದಷ್ಟು ಮಾಹಿತಿಗಳನ್ನು ನನಗೆ ತುಂಬಿದ್ದಳು.

ಈಗ ಮೂರು ದಶಕಳ ನಂತರ, ಸುನಿಲ್ ಜಾನಾ ಅವರ `ಫೋಟೊಗ್ರಾಫಿಂಗ್ ಇಂಡಿಯಾ' ಪುಸ್ತಕದ ಮೂಲಕ ಸುನಿಲ್ ಜಾನಾ ಅವರ ಬದುಕು ಹಾಗೂ ಪರಂಪರೆ ಕುರಿತು ನಾನು (ಮತ್ತು ಬೇರೆಲ್ಲರೂ) ಮರುಅವಲೋಕನ ಮಾಡಬಹುದು. ಅವರ ಬದುಕು, ಕೃತಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಬಂಧದೊಂದಿಗೆ ಆಯ್ದ ಛಾಯಾಚಿತ್ರಗಳು, ಅವರ ಮರಣಾನಂತರ ಪ್ರಕಟಿಸಲಾಗಿರುವ ಈ ಪುಸ್ತಕ ಒಳಗೊಂಡಿದೆ. 1940ರಿಂದ 1970ರವರೆಗೆ ಭಾರತದ ಸಾಮಾಜಿಕ ಹಾಗೂ ರಾಜಕೀಯ ಬದುಕಿನ ಅಮೂಲ್ಯ ಚಿತ್ರದಾಖಲೆಗಳು ಈ ಪುಸ್ತಕದಲ್ಲಿವೆ. ರೈತರು, ಕಾರ್ಮಿಕರು, ರಾಜಕಾರಣಿಗಳು, ಕಲಾವಿದರು, ಸಂಗೀತಗಾರರು, ರಸ್ತೆ-ಬೀದಿ, ಕಾರ್ಖಾನೆ , ಸಮುದ್ರ- ಈ ಎಲ್ಲ ದೃಶ್ಯಗಳೂ ಛಾಯಾಚಿತ್ರಗ್ರಾಹಕನ ಸೂಕ್ಷ್ಮ ಹಾಗೂ ವಿಸ್ತೃತ ಕ್ಯಾಮೆರಾಕಣ್ಣಿನಲ್ಲಿ ಸೆರೆಯಾಗಿವೆ.

ಸುಶಿಕ್ಷಿತ ಹಾಗೂ ಸುಸಂಸ್ಕೃತ ಬಂಗಾಳಿ ಕುಟುಂಬದಲ್ಲಿ 1918ರಲ್ಲಿ ಸುನಿಲ್ ಜಾನಾ ಜನಿಸಿದರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ, ಎಲ್ಲಾ ಆದರ್ಶ ಯುವಕರಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದತ್ತ ಆಕರ್ಷಿತರಾದರು. ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿದ್ದ ಅವರ ಛಾಯಾಚಿತ್ರಗಳು ಜನಪ್ರಿಯ ಮ್ಯಾಗಜೀನ್ಗಳಲ್ಲಿ ಪ್ರಕಟವಾಗುತ್ತಿದ್ದವು. 1943ರಲ್ಲಿ ಬಂಗಾಳದಲ್ಲಿ ತೀವ್ರ ಕ್ಷಾಮ ತಲೆದೋರಿದಾಗ, ಹಳ್ಳಿಗಳಲ್ಲೆಲ್ಲಾ ಸಂಚರಿಸಿ ಕ್ಷಾಮದ ತೀವ್ರತೆಯ ದೃಶ್ಯಗಳನ್ನು ದಾಖಲಿಸಲು ಸಿಪಿಐನ ಪ್ರಧಾನ ಕಾರ್ಯದರ್ಶಿ ಪಿ.ಸಿ. ಜೋಷಿ ಸೂಚಿಸಿದರು. ನಂತರ, ಈ ಚಿತ್ರಗಳು ಸಿಪಿಐನ `ಪೀಪಲ್ಸ್ ವಾರ್'ನಲ್ಲಿ ಪ್ರಕಟವಾಗಿ ವ್ಯಾಪಕ ಗಮನ (ಹಾಗೂ ಮೆಚ್ಚುಗೆಯನ್ನು) ಗಳಿಸಿಕೊಂಡವು. ಆಗಲೇ ಜಾನಾ ತಮ್ಮ ಓದು ನಿಲ್ಲಿಸಿ ಪೂರ್ಣಾವಧಿ ಛಾಯಾಚಿತ್ರಗ್ರಾಹಕರಾದರು.

1940ರ ದಶಕ ಭಾರತೀಯ ಇತಿಹಾಸದಲ್ಲಿ ಹಲವು ವಿದ್ಯಮಾನಗಳಿಗೆ ಕಾರಣವಾದ ದಶಕ. ಕ್ಷಾಮದ ನಂತರ, ಅಧಿಕಾರ ಹಸ್ತಾಂತರದ ಸಂಧಾನಗಳು, ಮಹಾತ್ಮ ಗಾಂಧಿಯವರ ಉಪವಾಸ ಸತ್ಯಾಗ್ರಹಗಳು, ಕೋಮು ಸೌಹಾರ್ದದ ಪಾದಯಾತ್ರೆಗಳು ಹಾಗೂ ವಿಭಜನೆಯ ಭಯಾನಕತೆಗಳನ್ನು ಜಾನಾ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ಮಾರ್ಗರೆಟ್ ಬೊರ್ಕ್ ವೈಟ್ ಅವರ ಹತ್ತಿರದ ಸ್ನೇಹಿತರಾಗಿದ್ದರು. ಮಾರ್ಗರೆಟ್ ಬೊರ್ಕ್ ವೈಟ್ ಅವರು ಆ ಕಾಲದಲ್ಲಿ ಸೆರೆ ಹಿಡಿದ ಚಿತ್ರಗಳು ಅಮರ ದೃಶ್ಯಗಳಾಗಿ ಜನಮಾನಸದಲ್ಲಿ ಅಚ್ಚೊತ್ತಿಬಿಟ್ಟಿವೆ. ಆದರೆ ತಾಂತ್ರಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಜಾನಾ ನೆರವ್ಲ್ಲಿಲದೆ ಇದ್ದಿದ್ದರೆ ಮಾರ್ಗರೆಟ್ ಬುರ್ಕ್ ವೈಟ್ ಅವರು ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧಿಸಿದ ಸಿದ್ಧಿಯನ್ನು ತಲುಪುವುದು ಸಾಧ್ಯವಿರಲಿಲ್ಲ. ಆಕೆ ವಿಶ್ವ ಪ್ರಸಿದ್ಧಿ ಗಳಿಸಿದರು. ಆದರೆ ತಾನು ಮಾತ್ರ ಆಯ್ದ ವಲಯದಲ್ಲಷ್ಟೇ ಉಳಿದುಕೊಂಡಂತಹ ವಿಚಾರಗಳಿಂದ ಮನಸು ಕೆಡಿಸಿಕೊಳ್ಳುವವರಾಗಿರಲಿಲ್ಲ ಜಾನಾ. ನಾನು ನೋಡಿದ ವ್ಯಕ್ತಿಗಳಲ್ಲೆಲ್ಲಾ ಯಾವುದೇ ಗರ್ವ ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಲ್ಲದ ಮುಕ್ತ ಮನದ ವ್ಯಕ್ತಿಯಾಗಿದ್ದರು ಅವರು.

ಆಕರ್ಷಕ, ಸುಸಂಸ್ಕೃತ ವ್ಯಕ್ತಿತ್ವದ ಪಿ.ಸಿ. ಜೋಷಿ ಅವರ ನಂತರ ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಉಗ್ರ ನಿಲುವುಗಳ ಬಿ.ಟಿ. ರಣದಿವೆ 1948ರಲ್ಲಿ ಅಧಿಕಾರ ವಹಿಸಿಕೊಂಡರು. ಸ್ವತಂತ್ರ ಮನದ ಕಲಾವಿದರುಗಳಿಗೆ ಪಕ್ಷದಲ್ಲಿ ಸ್ಥಾನವಿಲ್ಲದಾಯಿತು. ಕಮ್ಯುನಿಸ್ಟರಿಂದ ಪರಿತ್ಯಕ್ತರಾದ ಜಾನಾ, ಸಹಜ ಪ್ರತಿಭೆಯ, ಗಟ್ಟಿ ವ್ಯಕ್ತಿತ್ವದ ಬಂಗಾಳಿ ವೈದ್ಯೆ ಶೋಭಾ ಅವರ ಪ್ರೀತಿಯಲ್ಲಿ ಸಿಲುಕಿದರು. ಜಾನಾ ಬದುಕಿಗೆ ಹೊಸ ದಿಕ್ಕು ನೀಡಲು ಆಕೆ ನೆರವಾದರು. ಆ ನಂತರ ವೆರಿಯರ್ ಎಲ್ವಿನ್ ಅವರನ್ನು ಜಾನಾ ಭೇಟಿಯಾದರು. ಭಾರತದ ಆದಿವಾಸಿ ಪ್ರದೇಶಗಳಿಗೆ ಭೇಟಿ ನೀಡುತ್ತಾ, ಒಬ್ಬರು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಾ, ಮತ್ತೊಬ್ಬರು ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ ಇಬ್ಬರ ನಡುವಿನ ಮೈತ್ರಿ ಅರಳಿತು. ನಂತರ, ಜಾನಾ ಅವರಿಗೆ ಅಣೆಕಟ್ಟುಗಳು ಹಾಗೂ ಉಕ್ಕು ಘಟಕಗಳನ್ನು ಚಿತ್ರೀಕರಿಸಲು ಕೈಗಾರಿಕೆಗಳಿಂದ ಅನೇಕ ನಿಯೋಜನೆಗಳು ಸಿಕ್ಕಿದವು. ಇವೆಲ್ಲದರ ನಂತರ, ತಮ್ಮ ಗಮನವನ್ನು ಶಾಸ್ತ್ರೀಯ ನೃತ್ಯಗಳೆಡೆ ಹರಿಸಿದರು ಜಾನಾ. ಶಾಂತಾ ರಾವ್ ಹಾಗೂ ಬಾಲ ಸರಸ್ವತಿಯವರ ಚಿತ್ರಗಳು ಅವರು ತೆಗೆದಂತಹ ಶ್ರೇಷ್ಠ ಛಾಯಾಚಿತ್ರಗಳಾಗಿವೆ.

ಹಣದ ವಿಚಾರದಲ್ಲಿ ದಿವ್ಯನಿರ್ಲಕ್ಷ್ಯ ಹೊಂದಿದ್ದ ತಾವು ಅದು ಬಂದಷ್ಟೇ ವೇಗದಲ್ಲಿ ಖರ್ಚು ಮಾಡುತ್ತಿದ್ದ ಸ್ವಭಾವದವರು ಎಂದು ಜಾನಾ ಬರೆಯುತ್ತಾರೆ. ವ್ಯಾವಹಾರಿಕ ಬುದ್ಧಿ ಅಥವಾ ಅದಕ್ಕೂ ಹೆಚ್ಚಾಗಿ ಸಾಮಾನ್ಯ ತಿಳಿವಳಿಕೆಯ ಕೊರತೆ ತಮಗಿತ್ತು ಎಂದು ಅವರು ಹೇಳಿಕೊಳ್ಳುತ್ತಾರೆ. ತಮ್ಮ ಛಾಯಾಚಿತ್ರಗಳ ಬಗ್ಗೆ ಅವರೆಂದೂ ಹಕ್ಕುಸ್ವಾಮ್ಯ ಸಾಧಿಸಲಿಲ್ಲ. ಅವರ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ಅವರ ಅನೇಕ ಛಾಯಾಚಿತ್ರಗಳು ಭಾರತ ಮತ್ತು ವಿದೇಶಗಳಲ್ಲಿ ಎಲ್ಲೆಡೆ ಮರುಮುದ್ರಣಗೊಂಡಿವೆ. ಈ ಮಧ್ಯೆ ಸದಾ ದುರ್ಬಲವಾಗಿದ್ದ ಅವರ ಕಣ್ಣಿನ ದೃಷ್ಟಿ ಇನ್ನೂ ಹೆಚ್ಚು ಮಂಜಾಗತೊಡಗಿತ್ತು. ಒಳ್ಳೆಯ ಮದ್ಯದ ಮೇಲೆ ಅತಿಯಾದ ಪ್ರೀತಿಯೂ ಇತ್ತು (ಕಲಾವಿದರು ಹಾಗೂ ಕಮ್ಯುನಿಸ್ಟರಿಗೆ ಇದು ಸಾಮಾನ್ಯವಾದ ದೌರ್ಬಲ್ಯ).

ತನ್ನ ಪತಿಯ ಆರೋಗ್ಯ ಹಾಗೂ ವೃತ್ತಿಬದುಕು ಕುಸಿಯತೊಡಗಿದಂತೆ, 1978ರಲ್ಲಿ ಶೋಭಾ ಜಾನಾ ಅವರು ಲಂಡನ್ನಲ್ಲಿ ಆಸ್ಪತ್ರೆಯೊಂದರಲ್ಲಿ ಉದ್ಯೋಗ ಪಡೆದುಕೊಂಡರು. ಸ್ವಲ್ಪ ದಿನಗಳಲ್ಲೇ ಜಾನಾ ಕೂಡ ಲಂಡನ್ಗೆ ತೆರಳಿದರು. ಇಲ್ಲಿಯೇ 1990ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ನಾನವರನ್ನು ಭೇಟಿಯಾದದ್ದು. ನಾನವರನ್ನು ಅವರ ವಿಂಬಲ್ಡನ್ ಮನೆಯಲ್ಲಿ ಭೇಟಿಯಾದೆ. ಅಲ್ಲಿ ಪದೇಪದೇ ಚಹಾ ಕುಡಿಯುತ್ತಾ ಸುನೀಲ್ ಅವರು ತಮ್ಮ ಮಾನವಶಾಸ್ತ್ರಜ್ಞ ಗೆಳೆಯನ ಕುರಿತು ನಿರರ್ಗಳವಾಗಿ ಮಾತನಾಡಿದರು. ಆಗ ನಾನು ಆ ಮಾನವಶಾಸ್ತ್ರಜ್ಞನ ಕುರಿತ ಬರವಣಿಗೆಯಲ್ಲಿ ನಿರತನಾಗಿದ್ದೆ. ತಮ್ಮ ಸಮಯ ಹಾಗೂ ಸ್ಮೃತಿ ವಿಚಾರದಲ್ಲಿ ಅವರು ಬಹು ಉದಾರರಾಗಿದ್ದರು. ನನ್ನ ಪುಸ್ತಕ ಮುದ್ರಣಕ್ಕೆ ಹೋದಾಗ ತಾವು ತೆಗೆದಿದ್ದ (ಹಾಗೂ ಈ ಹಿಂದೆಂದೂ ಪ್ರಕಟವಾಗಿರದ) ವೆರಿಯರ್ ಎಲ್ವಿನ್ ಅವರ ಅಮೋಘ ಚಿತ್ರಗಳನ್ನು ನನಗಾಗಿಯೇ (ಉಚಿತವಾಗಿ) ಡೆವಲಪ್ ಮಾಡಿಕೊಟ್ಟರು.

ಇಂಗ್ಲೆಂಡ್ನಲ್ಲಿ 25 ವರ್ಷಗಳು ಬದುಕಿದ ನಂತರ, ಜಾನಾ ದಂಪತಿ ತಮ್ಮ ಮಕ್ಕಳಿಗೆ ಹತ್ತಿರವಾಗಿರಲು ಅಮೆರಿಕಕ್ಕೆ ತೆರಳಿದರು. ಕಳೆದ ವರ್ಷ ಇಬ್ಬರೂ ಒಂದೇ ತಿಂಗಳುಗಳ ಅಂತರದಲ್ಲಿ ಒಬ್ಬರಾದ ಮೇಲೆ ಒಬ್ಬರು ತೀರಿಕೊಂಡರು. ಆದರೆ ಅವರ ಪರಂಪರೆ `ಫೋಟೊಗ್ರಾಫಿಂಗ್ ಇಂಡಿಯಾ'ದಲ್ಲಿ ಜೀವಂತವಾಗಿ ಉಳಿದಿದೆ. ವ್ಯಕ್ತಿಯಂತೆಯೇ ಅವರ ಪುಸ್ತಕದ ಬರವಣಿಗೆಯೂ ಜ್ಞಾನ, ಚಾತುರ್ಯ ಹಾಗೂ ಕಕ್ಕುಲತೆಯಿಂದ ತುಂಬಿ ತುಳುಕಿದೆ. ಬರವಣಿಗೆಯ ಧಾಟಿಯಲ್ಲಿ ಸ್ವನಿರಾಕರಣೆಯ ದನಿಯೂ ಇದೆ. ನೆಹರೂ ಅವರ 36 ಚಿತ್ರಗಳನ್ನು ತೆಗೆದಾದ ನಂತರ ಅವೆಲ್ಲಾ ಬ್ಲರ್ ಆಗಿದ್ದುದು ಗಮನಕ್ಕೆ ಬರುವಂತಹ ಪ್ರಕರಣದ ನಿರೂಪಣೆಯಲ್ಲಿ ಇದು ಗೋಚರವಾಗುತ್ತದೆ. ಲೆನ್ಸ್ಗೆ ರೇಂಜ್ಫೈಂಡರ್ ಜೋಡಿಸುವುದು ಮರೆತಿದ್ದ ವಿಚಾರ ನಂತರ ಅರಿವಿಗೆ ಬಂದಿದ್ದನ್ನು ಪ್ರಾಮಾಣಿಕವಾಗಿ ನಿರೂಪಿಸಲಾಗಿದೆ.

ಕಲಾ ಲೋಕದುದ್ದಕ್ಕೂ - ಬಹುಶಃ ಸಂಗೀತ ಲೋಕ ಹೊರತು ಪಡಿಸಿದರೆ - ಹೆಚ್ಚು ಪ್ರತಿಭಾವಂತರು ಬೇರೆಯವರೊಂದಿಗೆ ಬೆರೆಯದೆ ತಮ್ಮಳಗೇ ಮುಳುಗಿದಂತಹವರು. ಪಿಕಾಸೊನಂತಹ ಅತಿ ಶ್ರೇಷ್ಠ ಚಿತ್ರಕಲಾವಿದ ಅಥವಾ ವಿ.ಎಸ್. ನೈಪಾಲ್ರಂತಹ ಅತ್ಯುತ್ತಮ ಲೇಖಕರಲ್ಲಿ ಉದಾರತೆ ಹಾಗೂ ಅನುಕಂಪದ ಭಾವ ಕಡಿಮೆ. ಆದರೆ ಸುನಿಲ್ ಜಾನಾ ಹಾಗಿರಲಿಲ್ಲ. ಹೀಗಿದ್ದೂ ಅವರು ಅತಿ ಶ್ರೇಷ್ಠ ಛಾಯಾಗ್ರಾಹಕ ಹಾಗೂ ಅತಿ ಒಳ್ಳೆಯ ಮನುಷ್ಯಜೀವಿ. ನನ್ನ ಬಗ್ಗೆ ವೈಯಕ್ತಿಕವಾಗಿ ಅವರು ತೋರಿದ ಒಳ್ಳೆಯತನ ಇಡಿಯಾಗಿ ಮಾನವೀಯತೆಯ ಕುರಿತಂತೆ ಅವರ ವಿಶಾಲ ಮನೋಧರ್ಮಕ್ಕೆ ಅನುಗುಣವಾಗಿಯೇ ಇತ್ತು. ಅವರ ಪ್ರತಿಭೆ, ಅವರು ತೆಗೆದ ಚಿತ್ರಗಳು ಹಾಗೂ ಅವರ ಸ್ವಭಾವ, ಮಾತುಗಳಲ್ಲಿ ಪ್ರತಿಬಿಂಬಿಸಿದೆ. `ಫೋಟೊಗ್ರಾಪಿಂಗ್ ಇಂಡಿಯಾ' ಪುಸ್ತಕದಲ್ಲಿರುವ ಪ್ರಬಂಧದಲ್ಲಿ ಬರುವ ಈ ಸಾಲುಗಳನ್ನು ಪರಿಗಣಿಸಿ.

ಬಹುಸಂಸ್ಕೃತಿ ಕುರಿತಂತೆ ಜಾನಾ ಮಾತುಗಳಿವು: `ಸಾಂಸ್ಕೃತಿಕ ವೈವಿಧ್ಯ ಯಾವುದೇ ರಾಷ್ಟ್ರದ ಬದುಕನ್ನು ಶ್ರೀಮಂತಗೊಳಿಸುತ್ತದೆ. ವಾಸಸ್ಥಾನದ ನೆಲೆಗಿಂತ ಧರ್ಮ, ಜನಾಂಗ ಅಥವಾ ಸ್ಥಳೀಯ ಭಾಷೆಯನ್ನು ರಾಜ್ಯ ಅಥವಾ ರಾಷ್ಟ್ರದ ಅಸ್ಮಿತೆಯಾಗಿ ವಿವರಿಸುವುದು ನಾಗರಿಕ ಸಂಘರ್ಷ ಹಾಗೂ `ಜನಾಂಗೀಯ ಶುದ್ಧೀಕರಣ' ಮತ್ತು `ಜನಾಂಗೀಯ ಹತ್ಯೆ'ಗಳಿಗೆ ನೆಪವಾಗಬಹುದು'.

ಸೌಂದರ್ಯ ಹಾಗೂ ಲೈಂಗಿಕತೆ ಕುರಿತಂತೆ ಭೂತಕಾಲ ಹಾಗೂ ವರ್ತಮಾನದ ಧೋರಣೆಗಳನ್ನು ಕುರಿತು ಜಾನಾ ಅವರು ಹೇಳುವ ಮಾತುಗಳಿವು: `ಹಿಂದೆ, ನಮ್ಮ ನಾಗರೀಕತೆ... ಮಾನವೀಯವಾಗಿರುವ ಎಲ್ಲಾ ಆಯಾಮಗಳನ್ನು ಆಲಿಂಗಿಸಿಕೊಂಡು ಸಂಭ್ರಮಿಸುತ್ತಿತ್ತು. ಅದು ಕಾಮ ಹಾಗೂ ಶೃಂಗಾರದ ಭಾವಗಳಿಗೆಂದೂ ಕಳಂಕ ಹೊರಿಸಿರಲಿಲ್ಲ. ಆದರೆ ಈ ಸಂಭ್ರಮ ಕೊಲ್ಲುವ ಅನೇಕ ಸಂಸ್ಕೃತಿಗಳ ಆಯಾಮಗಳನ್ನು ನಮ್ಮ ಜನರ ಮೇಲೆ ನಂತರ ಹೇರಲಾಯಿತು. ಅನೇಕ ವರ್ಷಗಳ ಅವಧಿಯಲ್ಲಿ ಮಹಿಳೆಯರ ಮುಖ ಮುಚ್ಚಿ ಅವರನ್ನು ಪ್ರತ್ಯೇಕವಾಗಿರಿಸಿದ ಇಸ್ಲಾಂನ ಪ್ರಭಾವ ಹಾಗೂ ಪೀಠೋಪಕರಣಗಳ ಕಾಲಿಗೂ ಬಟ್ಟೆ ಹೊದಿಸುವಂತಹ ಸಭ್ಯತೆಯ ಸಂಹಿತೆಯನ್ನು ನಿರ್ದೇಶಿಸುವ ವಿಕ್ಟೋರಿಯನ್ ಯುಗದ ಬ್ರಿಟಿಷರ ಕ್ರಿಶ್ಚಿಯಾನಿಟಿಯ ಪ್ರಭಾವಗಳು ಕಾಮ ಅಥವಾ ಮನುಷ್ಯ ದೇಹವನ್ನು ಲಜ್ಜೆಯ ಸಂಗತಿ ಎಂದು ಪರಿಗಣಿಸದಿದ್ದ ಸಂಸ್ಕೃತಿ ಹಾಗೂ ಪರಂಪರೆಯನ್ನು ಬುಡಮೇಲು ಮಾಡಿದವು.'

ನನ್ನನ್ನು ಸುನಿಲ್ ಜಾನಾ ಬಳಿಗೆ ಕರೆದೊಯ್ದ ಸ್ವತಂತ್ರ ಚಿಂತಕ, ಮಾನವಶಾಸ್ತ್ರಜ್ಞ ವೆರ್ರಿಯರ್ ಎಲ್ವಿನ್ ಅವರ ಚೆಂದದ ಛಾಯಾಚಿತ್ರಗಳೂ `ಫೋಟೊಗ್ರಾಫಿಂಗ್ ಇಂಡಿಯಾ' ಪುಸ್ತಕದಲ್ಲಿ ಇವೆ. ಇಲ್ಲಿರುವ ಎಲ್ವಿನ್ ಕುರಿತಂತಹ ಮಾತುಗಳೂ ಚೆನ್ನಾಗಿವೆ. ಆದರೆ 1999ರಲ್ಲಿ `ಟೈಮ್ಸ ಹೈಯರ್ ಎಜುಕೇಷನ್ ಸಪ್ಲಿಮೆಂಟ್'ನಲ್ಲಿ ಎಲ್ವಿನ್ ಕುರಿತಂತೆ ಜಾನಾ ಬರೆದಿದ್ದ ಪ್ರಬಂಧದಲ್ಲಿ ಇನ್ನೂ ಕೆಲವು ಉತ್ತಮ ಅಂಶಗಳಿವೆ. ಇಲ್ಲಿ ಜಾನಾ ಹೀಗೆ ಬರೆಯುತ್ತಾರೆ: ಎಲ್ವಿನ್ ತನ್ನ ಆಪ್ತ ಭಾವನೆಗಳನ್ನು ಹೆಚ್ಚು ಹೇಳಿಕೊಳ್ಳುತ್ತಿರಲಿಲ್ಲ. ಅವರಿಗೆ ಹುಷಾರಿಲ್ಲದ ಒಂದು ಸಂಜೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಕಲ್ಕತ್ತದಲ್ಲಿದ್ದ ಅವರ ಫ್ಲಾಟ್ಗೆ ನಾನು ಆಗ ಹೋಗಿದ್ದೆ. `ನಾವು ಬದುಕುವ ಸಂಸ್ಕೃತಿಯಲ್ಲಿನ ಕ್ಲಿಷ್ಟತೆಗಳಿಂದ ನಾವು ಪಾರಾಗಲಾಗದಿದ್ದರೂ ಅತ್ಯಾನಂದ ಹಾಗೂ ಸಂಪೂರ್ಣ ಶಾಂತಿಯ ಗಳಿಗೆಗಳನ್ನು ನಾವು ನಮ್ಮದಾಗಿಸಿಕೊಳ್ಳಬೇಕು. ಇವನ್ನು ನಾವು ಪದೇಪದೇ ಅನಿರೀಕ್ಷಿತವಾಗಿ ಅನುಭವಿಸಬಲ್ಲೆವು ಎಂಬುದನ್ನು ನಾವು ತಿಳಿದಾಗ, ನಾವು ಹಾದುಹೋಗುವ ಬದುಕಿನ ಕ್ಲೇಶ ಹಾಗೂ ಹತಾಶೆಯ ಕತ್ತಲ ಸುರಂಗಗಳು, ಬದುಕಿನ ಬಗೆಗಿನ ನಮ್ಮ ನಂಬಿಕೆಯನ್ನು ಕುಗ್ಗಿಸದು. ಹಾಗೂ ಬದುಕು, ನೊಂದ ವ್ಯಕ್ತಿಗೂ ಅದ್ಭುತ ಹಾಗೂ ಸಂತಸದಾಯಕವಾಗಿರುವ ಸಾಧ್ಯತೆ ಇದೆ' ಎಂದು ಎಲ್ವಿನ್ ಹೇಳಿದ್ದರು.

ಜಾನಾ ಅವರ ಬದುಕೂ ಕೆಲವೊಮ್ಮೆ ನೋವಿನದಾಗಿರುತ್ತಿತ್ತು, ಮತ್ತೆ ಕೆಲವೊಮ್ಮೆ ಸಂತಸದ್ದಾಗಿರುತ್ತಿತ್ತು. ಬಹಳಷ್ಟು ಕಷ್ಟದ ಕಾಲವನ್ನು ಹಾದುಹೋಗಿದ್ದರೂ ಅವರ ಕಮ್ಯುನಿಸ್ಟ್ ವರ್ಷಗಳ ಆರಂಭದ ಆಶಾವಾದ ಅವರನ್ನೆಂದೂ ಪೂರ್ಣ ಬಿಟ್ಟುಹೋಗಲಿಲ್ಲ. ತಮ್ಮ ಬದುಕಿನ ಕೊನೆಯಲ್ಲಿ ಜಾನಾ ಬರೆದ ಈ ಮಾತುಗಳನ್ನು ಪ್ರತಿ ಲೇಖಕ ಅಥವಾ ಛಾಯಾಚಿತ್ರಗ್ರಾಹಕ ತನ್ನ ಅಧ್ಯಯನ ಕೊಠಡಿ ಅಥವಾ ಸ್ಟುಡಿಯೋದಲ್ಲಿ ಅಂಟಿಸಿಕೊಳ್ಳಬೇಕು.

`ಈ ಪ್ರಪಂಚ ಹೆಚ್ಚೇನೂ ಉತ್ತಮಗೊಂಡಿಲ್ಲ. ಯುದ್ಧಭೂಮಿಗಳು, ದ್ವೇಷ ಹಾಗೂ ಬಂದೂಕುಗಳು ನಮ್ಮ ಸುತ್ತ ಇವೆ. ಇದು ದುಃಖಕರವಾದ ಹತಾಶೆಗೊಳಿಸುವ ವಿಶ್ವ. ಆದರೆ ಇದೊಂದೇ ಜಗತ್ತು ನಮಗಿರುವುದು. ಸಂದೇಶಗಳು, ಮಾತುಗಳು ಅಥವಾ ಚಿತ್ರಗಳು ಅದೇನೇ ಹೇಳಲಿ, ಅವು ಜನರ ಮನಸ್ಸು ಹಾಗೂ ಹೃದಯದಲ್ಲಿ ತಕ್ಷಣದ ಬದಲಾವಣೆಗಳನ್ನು ತರುವುದು ಕಡಿಮೆ. ಆದರೆ ಅವು ಜನರು ಯೋಚಿಸುವಂತೆ ಮಾಡುತ್ತವೆ. ಸ್ವಲ್ಪ ಕಾಲದ ನಂತರ ಇದು ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಆ ಲೇಖನ ಬರೆಯಲು, ಆ ಚಿತ್ರ ರಚಿಸಲು ಅಥವಾ ಛಾಯಾಚಿತ್ರ ತೆಗೆಯಲು ಪ್ರೇರಿತವಾಗುವುದು ಯಾವಾಗಲೂ ಒಳ್ಳೆಯದೆ'.

ಜಾನಾ ದಂಪತಿ ಸಾಯುವುದಕ್ಕೆ ಕೆಲ ಕಾಲದ ಮುಂಚೆ, ಅವರ ಜೊತೆ ನಾನು ಫೋನ್ನಲ್ಲಿ ಮಾತನಾಡಿದ್ದೆ. ಸುನಿಲ್ ಅವರ ಸಂಗ್ರಹದ ನೆಗೆಟಿವ್ಗಳು ಹಾಗೂ ಪ್ರಿಂಟ್ಗಳನ್ನು ಅವರ ತವರುದೇಶಕ್ಕೆ ವರ್ಗಾಯಿಸಲು ಭಾರತ ಸರ್ಕಾರವನ್ನು ನಾನು ಸಂಪರ್ಕಿಸಬಹುದೇ ಎಂದು ಕೇಳಿದ್ದೆ. ಈ ಕೆಲಸವಾಗಬೇಕೆಂದು ತಾವಿಬ್ಬರೂ ಇಚ್ಛಿಸುವುದಾಗಿ ಶೊಭಾ ಹೇಳಿದ್ದರು ಆದರೆ ಅವನ್ನು ಸಮರ್ಪಕವಾಗಿ ಜೋಪಾನಮಾಡಬೇಕೆಂಬುದಷ್ಟೇ ತಮ್ಮ ಬಯಕೆ ಎಂದಿದ್ದರು. ನಾನು ಅವರ ಈ ಹಂಬಲವನ್ನು ಸಂಸ್ಕೃತಿ ಸಚಿವಾಲಯದಲ್ಲಿನ ಉತ್ಕೃಷ್ಟ ಜಂಟಿ ಕಾರ್ಯದರ್ಶಿಯೊಬ್ಬರಿಗೆ ತಲುಪಿಸಿದ್ದೆ. ಆ ಮಹಿಳಾ ಅಧಿಕಾರಿ ಈ ಯೋಜನೆ ಮುಂದುವರಿಸಲು ಬಯಸಿದ್ದರು. ಆದರೆ ದುಃಖದ ಸಂಗತಿ ಎಂದರೆ ಆಗಲೇ ಅವರು ಬೇರೆ ಜಾಗಕ್ಕೆ ವರ್ಗಾವಣೆಯಾಗಿಹೋದರು. ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಅಥವಾ ಮಾಡುವುದಿಲ್ಲ ಎಂಬುದು ಗೊತ್ತಿರುವುದರಿಂದ, ಈ ಉತ್ಕೃಷ್ಟ ಭಾರತೀಯನ ಹಳೆ ಛಾಯಾಚಿತ್ರಗಳನ್ನು ಅವರು ತುಂಬಾ ಪ್ರೀತಿಸಿದ ನೆಲಕ್ಕೆ, ವಾಪಸ್ ಭಾರತಕ್ಕೆ ತರಲು ಉದಾರ ಮನದ ದಾನಿಯ ಅಗತ್ಯ ಬೀಳಬಹುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.