ಮಂಗಳವಾರ, ಮೇ 24, 2022
30 °C

ಫ್ಲೊರಿನಾ ಎಂಬ ರಂಗನಟಿಯ ಜೊತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಲೊರಿನಾ ಎಂಬ ರಂಗನಟಿಯ ಜೊತೆ...

ವೃತ್ತಿ ರಂಗಭೂಮಿಯ ಕವಿಗಳನ್ನು ಅಧ್ಯಯನ ಮಾಡುತ್ತ ನಾನು ಹಿಂದೊಮ್ಮೆ ಗದಗ ಸೀಮೆಯಲ್ಲಿ ಅಡ್ಡಾಡುತ್ತಿದ್ದೆ. ಆಗ ಕಂದಗಲ್ ಹಣಮಂತರಾಯರ ನಾಟಕಗಳಲ್ಲಿ ನಟಿಸುತ್ತಿದ್ದ ಹಿರಿಯ ನಟಿ ಫ್ಲೊರಿನಾ ಅವರನ್ನು ಅಕಸ್ಮಾತ್ ಭೇಟಿಯಾಗಬೇಕಾಯಿತು. ಅದೊಂದು ಅಪೂರ್ವ ಭೇಟಿ. ಮಿತ್ರರಾದ ರವೀಂದ್ರನಾಥ ದೊಡ್ಡಮೇಟಿ ನನ್ನನ್ನು ಅವರಲ್ಲಿಗೆ ಕರೆದೊಯ್ದಿದ್ದರು. ಫ್ಲೊರಿನಾ ವಾಸವಾಗಿದ್ದ ಶಾಪೂರಪೇಟೆಯು, ನಾಟಕ ಕವಿಗಳು, ಸೀನರಿ ಬರೆವ ಪೈಂಟರುಗಳು, ವೇಷಭೂಷಣ ಸರಬರಾಜುಗಾರರು, ಮೇಕಪ್ ಮ್ಯಾನ್‌ಗಳು, ತಬಲಾದವರು, ಪೇಟಿಯವರು ಒಟ್ಟಿಗೇ ನೆಲೆಸಿರುವ ಒಂದು ವಸಾಹತು. ಅಲ್ಲಿನ ಒಂದು ಚಾಳಿನಲ್ಲಿ ಫ್ಲೊರಿನಾ ಇದ್ದರು. ಅದೊಂದು ತೀರಾ ಚಿಕ್ಕದಾದ ಬಡಕಲು ಮನೆ. ಮನೆಯಲ್ಲಿ ಒಂದೆಡೆ ಪುಟ್ಟರಾಜ ಗವಾಯಿಗಳ, ಇನ್ನೊಂದೆಡೆ ಏಸು ಮೇರಿಯರ ಚಿತ್ರಪಟಗಳಿದ್ದ ಪೂಜಾಜಗುಲಿಗಳು; ಮನೆಯ ಪರಿಸರಕ್ಕೆ ಹೊಂದಾಣಿಕೆಯಾಗದೆ ಧರಣಿ ಕುಳಿತಂತಿರುವ ತಾಮ್ರದ ದೊಡ್ಡ ಹಂಡೆ; ಗೋಡೆಯ ಮೇಲೆ ಸಮಸ್ತ ದೇವತೆಗಳ ಜತೆಗೆ ಫ್ಲೊರಿನಾ ವಿವಿಧ ಪಾತ್ರಗಳಲ್ಲಿ ನಟಿಸಿದ ಫೊಟೊಗಳು. ಕಾಟಿನ ಮೇಲೆ ದಪ್ಪಗಾಜಿನ ಚಶ್ಮಾ ಧರಿಸಿ ಕುಳಿತಿದ್ದ ಫ್ಲೊರಿನಾರ ಬಾಳಸಂಗಾತಿ ಕೊಟ್ರಪ್ಪನವರು.ಕೊಟ್ರಪ್ಪನವರ ಒಂದು ಕಣ್ಣಿಗೆ ಬೇನೆಯಾಗಿ ನೀರೊಸರುತ್ತಿತ್ತು. ಹಣೆತುಂಬ ವಿಭೂತಿ ಧರಿಸಿ, ಕರಿಟೊಪ್ಪಿಗೆಯ ಕಿರೀಟವಿಟ್ಟು, ಗಿರಿಜಾ ಮೀಸೆ ಬಿಟ್ಟುಕೊಂಡು, ಖರೇ ಕಂಪನಿ ಮಾಲೀಕರ ಗತ್ತಿನಲ್ಲಿ ಫೋಟೊದಲ್ಲಿ ವಿರಾಜಿಸುತ್ತಿದ್ದ ಶ್ರೀಯುತರು, ಸದ್ಯ ಜರಾಜೀರ್ಣರಾಗಿ ಜನರಲ್ ವಾರ್ಡಿನ ರೋಗಿಯಂತೆ ಪಿಳಿಪಿಳಿ ಕುಳಿತಿದ್ದರು. ಮನೆಯ ಪರಿಸ್ಥಿತಿ ಏನೂ ಚೆನ್ನಾಗಿರಲಿಲ್ಲ.ಕಲಾವಿದರ ಪೆನ್‌ಶನ್ನೇ ಮುಖ್ಯ ಆದಾಯವಿರಬೇಕು. ಬಣ್ಣದ ಲೋಕದಲ್ಲಿ ಮೆರೆದ ಬಹುತೇಕ ರಂಗನಟರ ಕೊನೆಯ ದಿನಗಳು ಯಾಕೊ ಏನೊ ದುರ್ಭರವಾಗಿರುತ್ತವೆ. ಅಪ್ಪಾಲಾಲ್ ನದಾಫ, ಧುತ್ತರಗಿ ಎಲ್ಲರೂ ಕೊನೇ ದಿನಗಳಲ್ಲಿ ನರಳಾಡಿ ಲೋಕರಂಗಕ್ಕೆ ವಿದಾಯ ಹೇಳಿದರಷ್ಟೇ.ನನಗೆ ವಿಶೇಷವೆನಿಸಿದ್ದು, ರಾಜೀವ್‌ಗಾಂಧಿ ಕೊಲೆ ವರದಿಯಿದ್ದ ಸುದ್ದಿಪತ್ರಿಕೆಗೆ ಫ್ರೇಂ ಹಾಕಿಸಿಟ್ಟಿದ್ದು. ವಿಚಾರಿಸಲು `ಅವರು ನಮಿಗಿಷ್ಟ~ ಎಂದು ಉತ್ತರ ಬಂತು. ಅಂತಸ್ತಿನ ಬಗ್ಗೆ ತಲೆಕೆಡಿಸಿಕೊಳ್ಳದೆ, ಸಾಮಾನ್ಯ ಕುಟುಂಬದ ಕ್ರೈಸ್ತ ಹುಡುಗಿಗೆ ಒಲಿದ ರಾಜೀವರ ಗುಣ ಫ್ಲೊರಿನಾರಿಗೆ ಪಸಂದಾಗಿರಬಹುದು. ನಮ್ಮ ಆಸುಪಾಸಲ್ಲಿ ಎಷ್ಟೋ ಅಂತರ್ ಧರ್ಮೀಯ ಸಂಬಂಧಗಳು ಕಾಣಸಿಗುತ್ತವೆ. ಆದರೆ ರಂಗಭೂಮಿ, ಸಿನಿಮಾ, ಸಂಗೀತಗಳಂತಹ ಗಾಂಧರ್ವ ಕಲೆಗಳ ಲೋಕದಲ್ಲಿ ಇವುಗಳ ಪ್ರಮಾಣ ಹೆಚ್ಚು. ಇದಕ್ಕೆ ಕೆಲವು ವಾಸ್ತವಿಕ ಕಾರಣಗಳಿವೆ. ಉದಾಹರಣೆಗೆ, ಬೇರೆಬೇರೆ ಊರು ಮತ್ತು ಕುಟುಂಬಗಳಿಂದ ಬಂದು ಒಂದು ಕಂಪನಿಯೊಳಗೆ ಸೇರಿಕೊಳ್ಳುತ್ತಿದ್ದ ನಟರು, ಪರಸ್ಪರ ಪ್ರೀತಿಸಿ ಸಂಗಾತಿಗಳಾಗುತ್ತಿದ್ದರು.ಕೆಲವೊಮ್ಮೆ ನಟಿಯರು ಕಂಪನಿ ಬಿಟ್ಟುಹೋಗಬಾರದೆಂದೋ ಪಗಾರ ಪಾವತಿಯಿಂದ ತಪ್ಪಿಸಿಕೊಳ್ಳಲೆಂದೋ ಮಾಲಕರೇ ಅವರನ್ನು ಲಗ್ನವಾಗುತ್ತಿದ್ದುದೂ ಉಂಟು. ನಟಿಯರು ಆಯಾ ಭಾಗದ ಶ್ರೀಮಂತರನ್ನು ಸಂಗಾತಿಯನ್ನಾಗಿ ಆರಿಸಿಕೊಂಡಾಗಲೂ ಧರ್ಮದ ಲಕ್ಷ್ಮಣರೇಖೆ ಅಳಿಯುತ್ತಿತ್ತು. (ಮೊಕಾಶಿ ಪುಣೇಕರರ `ಗಂಗವ್ವ ಗಂಗಾಮಾಯಿ  ಕಾದಂಬರಿಯು ಮೆಹಬೂಬಜಾನ-ರಾಘವಪ್ಪರ ಸಂಬಂಧವನ್ನು ಚಿತ್ರಿಸಿದೆ). ಇವುಗಳೆಲ್ಲದರ ಜತೆಗೆ, ಮತಧರ್ಮಗಳ ಸರಹದ್ದನ್ನು ದಾಟುವ ಯಾವುದೋ ಒಂದು ಗುಣ ಈ ಕಲೆಗಳ ಜಾಯಮಾನದಲ್ಲೇ ಇದ್ದಂತಿದೆ. ದೇವಲೋಕದ ಗಂಧರ್ವರವೂ ಕಟ್ಟಳೆಗಳನ್ನು ಮೀರಿದ ಸಂಬಂಧಗಳು ತಾನೇ? ಗಾಂಧರ್ವ ವಿಧಿಯು ಪ್ರೇಮಿಗಳ ವ್ಯಕ್ತಿ ಸ್ವಾತಂತ್ರ್ಯದ ಸಂಕೇತ.ಪ್ರೇಮ ಸಂಬಂಧಗಳಲ್ಲಿ ಸಾಧ್ಯವಾಗುವ ಸಾಮಾಜಿಕ ಮೀರುವಿಕೆ, ಕಲೆಯ ಸೃಜನಶೀಲ ಪ್ರಯೋಗಕ್ಕೆ ಹೇಗೊ ಜೀವಾಳವಾಗುತ್ತದೆ. ಇಲ್ಲೇ ಸೂಫಿಗಳು ಹಾಗೂ ಹುಟ್ಟಿನಿಂದ `ಮುಸ್ಲಿಮ~ರಾದ ಹಿಂದೂಸ್ತಾನಿ ಕಲಾವಿದರು, ಧರ್ಮನಿಷಿದ್ಧವಾದ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು ನೆನಪಾಗುತ್ತದೆ. ಹಿಂದೂಸ್ತಾನಿ ಪದ್ಧತಿಯ ಪ್ರಮಥನೆನಿಸಿಕೊಂಡಿರುವ ಅಮೀರ್ ಖುಸ್ರೋವಿನ ಹುಟ್ಟಿನಲ್ಲೇ ಈ ಬಹುಧರ್ಮೀಯತೆಯಿದೆ. ವಿಭಿನ್ನ ರಾಗಗಳು ಬೆರೆತು ಹೊಸರಾಗ ಹುಟ್ಟುವಂತೆ, ಧಾರ್ಮಿಕ ಸೀಮ್ಲ್ಲೊಲಂಘನವು ಸಂಗೀತಗಾರರ ಗುರುಶಿಷ್ಯರ ಮತ್ತು ಕೌಟುಂಬಿಕ ಸಂಬಂಧಗಳಲ್ಲಿ  ಸಹಜವಾಯಿತು. ಉಸ್ತಾದ್ ಅಬ್ದುಲ್ ಕರೀಂಖಾನರು ಬಡೋದೆಯ ಇಂದಿರಾಬಾಯಿಯನ್ನು ಪ್ರೇಮಿಸಿದರು. ಇವರ ಮಕ್ಕಳಾದ ಸುರೇಶ್ ಮಾಣೆ ಮತ್ತು ಹೀರಾಬಾಯಿ ಬಡೋದೆಕರ್ ಪ್ರಸಿದ್ಧ ಗಾಯಕರಾದರು. ಸಿತಾರ್‌ವಾದಕ ಅಲಾವುದ್ದೀನ್ ಖಾನರು ಮದನಮಂಜರಿ ದೇವಿಯನ್ನು ಲಗ್ನವಾದರು. ಇವರ ಮಗಳಾದ ಅನ್ನಪೂರ್ಣಾದೇವಿ, ಸಿತಾರ್ ಬಾಜಿಸುವ  ಪಂಡಿತ್ ರವಿಶಂಕರ ಅವರೊಟ್ಟಿಗೆ ಸೇರಿದರು. ವಾವೆಯಲ್ಲಿ ಟಿಪ್ಪುವಿನ ಮರಿಮೊಮ್ಮಗನಾದ ಸೂಫಿ ದಾರ್ಶನಿಕ ಹಾಗೂ ಸಂಗೀತಗಾರ ಹಜರತ್ ಇನಾಯತ್ ಖಾನರು, ಐರೋಪಿ ಮಹಿಳೆಯನ್ನು ಲಗ್ನವಾದರು. ಸಿತಾರಪಟು ರಹಿಮತ್ ಖಾನರದೂ ಅಂತರ್‌ಧರ್ಮೀಯ ಸಂಸಾರ. ಹೇಳುತ್ತಾ ಹೋದರೆ ಇದೊಂದು ದೊಡ್ಡ ಪಟ್ಟಿ.ಕನ್ನಡ ರಂಗಭೂಮಿಯಲ್ಲೂ ಈ ಪರಂಪರೆ ಮುಂದುವರೆಯಿತು. ಗದಗದಿಂದ ವಾಮನರಾವ್ ಕಂಪನಿಯ ಮೂಲಕ ರಂಗಪ್ರವೇಶ ಮಾಡಿದ ಅಮೀರಬಾಯಿ ಕರ್ನಾಟಕಿ, ಒಬ್ಬ ಪಾರ್ಸಿಯನ್ನು ಸಂಗಾತಿಯಾಗಿ ಆರಿಸಿಕೊಂಡರು. ಇದೇ ಕಂಪನಿ ಮೂಲಕ ಹೊಮ್ಮಿದ ಅವರ ಅಕ್ಕ ಗೋಹರ್‌ಬಾಯಿ, ಮರಾಠಿ ರಂಗಭೂಮಿಯ ತಾರಾನಟ ಬಾಲಗಂಧರ್ವರ ಪತ್ನಿಯಾದರು. ಅಮೀರಬಾಯಿಯವರ ಸೋದರಮಾವ ಬೇವೂರಿನ ಬಾದಶಾ ಮಾಸ್ತರರ ದಾಂಪತ್ಯ ಕೂಡ ಅಂತರ್ ಧರ್ಮೀಯವಾಗಿತ್ತು. ಅವರ ಒಬ್ಬ ಮಗಳು ಸಿದ್ಧರಾಮ ಜಂಬಲದಿನ್ನಿಯವರ ಕೈಹಿಡಿದರು. ನಟ ಮಹಮದ್ ಪೀರ್ ಅವರದೂ ಅಂತರ್ ಧರ್ಮೀಯ ಸಂಬಂಧವೇ.ಈ ಧರ್ಮಾತೀತ ಸಂಬಂಧಗಳು ಹಿಂದಿ ಸಿನಿಮಾ ಜಗತ್ತಿನಲ್ಲಿ ಸಾಮಾನ್ಯವಾಗಿವೆ. ಭರತಖಂಡದ ಸಮಸ್ತ ಭಾಷೆ, ಪ್ರಾಂತ್ಯ, ಧರ್ಮಗಳಿಂದ ಬಂದ ಜನರನ್ನು ಒಗ್ಗೂಡಿಸುವ ಬೋಗುಣಿಯಾಗಿದ್ದ ಮುಂಬೈ, ಅಂತರ್ ಧರ್ಮೀಯ ಪ್ರೇಮ ಮತ್ತು ದಾಂಪತ್ಯಗಳಿಗೆ ವಿಪುಲಾವಕಾಶ ಒದಗಿಸಿತು. ದೇವಿಕಾರಾಣಿ-ರೋರಿಚ್, ಮನಸೂರಲಿ ಖಾನ್-ಶರ್ಮಿಳಾ, ಸೋಹ್ರಾಬ್ ಮೋದಿ-ಮೆಹತಾಬ್, ನರ್ಗೀಸ್-ಸುನೀಲ್‌ದತ್, ವಹೀದಾ ರೆಹಮಾನ್-ಕಮಲಜಿತ್, ಮಧುಬಾಲಾ- ಕಿಶೋರ್‌ಕುಮಾರ್, ಲಕ್ಕಿಅಲಿ-ಮೀಘನ್, ಹೃತ್ವಿಕ್-ಸೂಜಾನ್, ಗೌರಿ-ಶಾರೂಖ್, ಕಿರಣ್-ಅಮೀರ್‌ಖಾನ್ ಹೀಗೆ ನೂರಾರು ಜೋಡಿಗಳು. ಸಿನಿಮಾ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ ಅವರ `ಲೆಟರ್ ಟು ಎ ಡೆಮಾಕ್ರಟಿಕ್ ಮದರ್~ ಕೃತಿಯನ್ನು ಈಚೆಗೆ ಓದುತ್ತಿದ್ದೆ. ಕ್ರೈಸ್ತ ಕುಟುಂಬಕ್ಕೆ ಅಳಿಯನಾದ ಮಿರ್ಜಾ, ತನ್ನೆಲ್ಲ ಮಕ್ಕಳು ಮತಾತೀತವಾಗಿ ವಿವಾಹವಾಗಿದ್ದನ್ನು ಸಹಜವಾಗಿ ಸ್ವೀಕರಿಸಿದ ತಮ್ಮ ತಾಯಿಯನ್ನು, ಅಸಲಿ ಜಾತ್ಯತೀತಳು ಎಂದು ಬಣ್ಣಿಸುತ್ತಾರೆ. ಇದಕ್ಕೆ ಹೋಲಿಸಿದರೆ ಪ್ರಾದೇಶಿಕ ಸಿನಿಮಾ ಜಗತ್ತು ಹಾಗೂ ಕರ್ನಾಟಕ ಸಂಗೀತ ಜಗತ್ತುಗಳು ತುಸು ಸಂಪ್ರದಾಯವಾದಿ ಅನಿಸುತ್ತವೆ.  ಆದರೆ ದೇಶ ವಿಭಜನೆಯ ಬಳಿಕ, ಧಾರ್ಮಿಕ ಸಮುದಾಯಗಳ ನಡುವೆ ಆಳವಾಗಿ ಬಿಟ್ಟ ಬಿರುಕು, ಹೊಸ ಸಾಮಾಜಿಕ ಮನೋಧರ್ಮವನ್ನು ರೂಪಿಸಿತು. ಮೂಲಭೂತವಾದವೂ ಮತೀಯವಾದವೂ ಬಲಿಯುತ್ತ, ಸಂಕರ ಸಂಬಂಧಗಳು ಅಪರಾಧ ಚಟುವಟಿಕೆಗಳಾಗಿ ತೋರತೊಡಗಿದವು. ಮತೀಯ ಗಲಭೆಗಳಾದಾಗ, ಅಂತರ ಧರ್ಮೀಯ ಜೋಡಿಗಳು ಬಾಯಲ್ಲಿ ಅಕ್ಕಿಕಾಳು ಹಾಕಿಕೊಂಡು ಬದುಕುವಂತಾಯಿತು. `ನಮ್ಮ~  ಧರ್ಮದ ಮಹಿಳೆ `ಅನ್ಯಧರ್ಮ~ದ ಪುರುಷನನ್ನು ಪ್ರೀತಿಸಿದರೆ ಅಥವಾ ಮದುವೆಯಾದರೆ ಅಪಮಾನವೆಂದೂ, `ನಮ್ಮ~ ಗಂಡು `ಅನ್ಯಧರ್ಮ~ದ ಮಹಿಳೆಯನ್ನು ವರಿಸಿದರೆ ಅದೊಂದು ದಿಗ್ವಿಜಯವೆಂದೂ ಭಾವಿಸುವ ಮನೋಭಾವ ಕಾಣಿಸಿತು. ಅಂತರ್ ಧರ್ಮೀಯ ಪ್ರೇಮ ಪ್ರಕರಣಗಳನ್ನೋ ಅವುಗಳಿಂದಾಗುವ ಆತ್ಮಹತ್ಯೆ ಸಾವುಗಳನ್ನೋ ವರದಿಮಾಡುವಾಗ, ಹುಡುಗ `ಅನ್ಯಧರ್ಮೀಯ~ನೋ ಅಲ್ಲವೋ ಎಂಬುದು ಮಾಧ್ಯಮಗಳಿಗೆ ಮಾನದಂಡವಾಯಿತು.ಹೆಣ್ಣಿನ ವಿಷಯ ಸಂಸ್ಕೃತಿ, ಧರ್ಮ, ಜಾತಿ, ಕುಟುಂಬಗಳ ಮರ್ಯಾದೆಯ ಪ್ರಶ್ನೆಯಾಯಿತು. ಕುಲಮರ‌್ಯಾದೆಯ ಪ್ರಶ್ನೆಯು, ಮಗಳನ್ನೋ ತಂಗಿಯನ್ನೋ ಕೊಲ್ಲಬಲ್ಲ ಅಮಾನುಷತೆ ಪಡೆದುಕೊಂಡಿತು.ಈ ಹಿನ್ನೆಲೆಯಲ್ಲಿ ಕಲಾಲೋಕದ ಅಂತರ್ ಧರ್ಮೀಯ ಸಂಬಂಧಗಳು ಮಹತ್ವದವಾಗಿವೆ. ಮತಧರ್ಮಗಳ ಎಲ್ಲೆ ಮೀರುವುದಕ್ಕೆ ಕಲಾಲೋಕದೊಳಗಿರುವ ಯಾವ ಗುಣ ಕಾರಣ? ಬಣ್ಣ ವೇಷ ಸ್ವರಗಳ ಬದಲಾವಣೆಯಿಂದ ಸಂಭವಿಸುವ ರೂಪಾಂತರ ಇರಬಹುದೇ?ನಟನೆಯಲ್ಲಿ ಲಿಂಗ ಮತ್ತು ವಯಸ್ಸಿನ ಬದಲಾವಣೆ ಸಾಧ್ಯ. ತರುಣ ಮುದುಕನ, ಮುದುಕ ತರುಣನ ಪಾತ್ರ ಹಾಕಬಹುದು. ಸಮಕಾಲೀನ ವ್ಯಕ್ತಿ ಚರಿತ್ರೆಯ ಇಲ್ಲವೇ ಪುರಾಣ ಲೋಕದಲ್ಲಿ ಅವತರಿಸಬಹುದು. ಒಂದು ಧರ್ಮದ ನಟರು ಇನ್ನೊಂದು ಧರ್ಮದ ದೇವತೆಯ ಪಾತ್ರ ಮಾಡಬಹುದು. ಇದಕ್ಕೆ ಪೂರಕವೆಂಬಂತೆ ಮಧುಬಾಲಾ, ಮೀನಾಕುಮಾರಿ, ದಿಲೀಪ್‌ಕುಮಾರ್, ರಾಜಕುಮಾರ್ ಮುಂತಾದವರು, ತಮ್ಮ ಮುಸ್ಲಿಂ ಹೆಸರುಗಳನ್ನು ಬಿಟ್ಟು ಹೊಸ ಹೆಸರುಗಳನ್ನೇ ಪಡೆದುಕೊಂಡರು. ಮಮ್ತೋಜ್, ಶಾಂತಿ ಮೊದಲಾದವರು ದ್ವಿಧಾರ್ಮಿಕ ಹೆಸರುಗಳನ್ನು ಇಟ್ಟುಕೊಂಡರು. ಕಲಾಲೋಕದಲ್ಲಿ ಕಾಲ, ಧರ್ಮ, ಜಾತಿ, ಲಿಂಗ, ವಯಸ್ಸು, ಪ್ರದೇಶಗಳು ಇರುವುದೇ ಮೀರುವುದಕ್ಕಾಗಿ ಎಂದು ಕಾಣುತ್ತದೆ.ಪ್ರಶ್ನೆಯೆಂದರೆ, ವಾಸ್ತವಿಕ ಜೀವನದಲ್ಲಿ ಜಾತಿಮತಗಳ ಕಟ್ಟಳೆಗಳನ್ನು ನಿಷ್ಠುರವಾಗಿ ಉಳಿಸಿಕೊಳ್ಳುವುದಕ್ಕೆಂದೇ, ಸಮಾಜವು ಇಂತಹದೊಂದು ಉಲ್ಲಂಘನೆಯ ಉದಾರ ಸ್ಪೇಸನ್ನು ಕಲಾಲೋಕದೊಳಗೆ ನಿರ್ಮಿಸಿಕೊಂಡಿದೆಯೇ? ಸಾಮಾನ್ಯವಾಗಿ ಗಂಧರ್ವ ಕಲೆಗಳು ರಾತ್ರಿ ಮತ್ತು ಕತ್ತಲಲ್ಲಿ ಪ್ರದರ್ಶನಗೊಳ್ಳುವುದು ಮಾರ್ಮಿಕವಾಗಿದೆ. ನಿಶೆಯ ಆವರಣವು ತನ್ಮಯತೆ, ಟ್ರಾನ್ಸ್ ಮತ್ತು ಮೀರುವಿಕೆಗೆ ಬೇಕಾದ ಮನೋಭೂಮಿಕೆ ಒದಗಿಸುತ್ತದೆ. ರಾತ್ರಿ ಸಾಧ್ಯವಾಗುವ  ಮೀರುವಿಕೆ, ಹಗಲ ಬೆಳಕಿನಲ್ಲಿ ಲೋಕದ ನಿಯಮಗಳಿಗೆ ಬದ್ಧವಾಗಿ ಸಮತೋಲನ ಸಾಧಿಸುತ್ತದೆ. ಇದೊಂದು ಸಾಮಾಜಿಕ ಮೆಕ್ಯಾನಿಸಂನ ಉಪಾಯವೂ ಇದ್ದೀತು. ಎಂತಲೇ ಒಂದು ತಲೆಮಾರಿನಲ್ಲಿ ಸಾಧ್ಯವಾಗುವ ಧರ್ಮಾತೀತ ಸಂಬಂಧಗಳ ಧಾರೆ, ನಂತರದ ತಲೆಗಳಲ್ಲಿ ಸಾಂಪ್ರದಾಯಕ ಪ್ರಧಾನಧಾರೆಗೆ ಬಂದು ಕೂಡುವುದು. ಕೊನೇಪಕ್ಷ ಸಾವಿನ ಆಚರಣೆಗಳ ಹೊತ್ತಿಗೆ ಮತಧರ್ಮಗಳು ನಿಯಮಾವಳಿಯೊಂದಿಗೆ ಪ್ರತ್ಯಕ್ಷವಾಗಿಬಿಡುತ್ತವೆ. ಸೀಮಾರೇಖೆಯನ್ನು ಕಲಾವಿದರು ಮತ್ತು ಸಂತರು ದಾಟಿದಂತೆಲ್ಲ, ಅವರನ್ನು ಅವರ ಹುಟ್ಟುಮೂಲದ ಚೌಕಟ್ಟಿಗೆ ಸಮಾಜವು ಎಳೆದು ತಂದು ಹಾಕುತ್ತಲೇ ಇರುತ್ತದೆ.ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಕೃಷ್ಣಹೊಳೆಯಲ್ಲೊಂದು ನಡುಗಡ್ಡೆಯಿದ್ದು ಆ ಬಗ್ಗೆ ಸ್ವಾರಸ್ಯಕರ ಕತೆಯಿದೆ. ಅಲ್ಲಿದ್ದ ಸೂಫಿಸಂತನು ತೀರಿಕೊಂಡಾಗ, ಇವನು ನಮ್ಮವನೆಂದು ಎರಡು ಧರ್ಮದವರೂ ಹಕ್ಕುಸಾಧನೆ ಮಾಡಿದರಂತೆ. ಜಗಳ ಬಗೆಹರಿಯಲಿಲ್ಲ. ಬೆಳಕು ಹರಿಯುವ ಹೊತ್ತಿಗೆ ಸಂತ ಮಲಗಿದ್ದ ಜಾಗವು ನಡುಗಡ್ಡೆಯಾಗಿ, ಸುತ್ತಲೂ ಹೊಳೆ ಹರಿಯುತ್ತಿತ್ತಂತೆ. ನಿರ್ದಿಷ್ಟ ಮತಧರ್ಮಗಳಿಗೆ ಅತೀತನಾಗಲು ಬಯಸಿದ ಸಂತನ ಆಶಯವೇ ಈ ಕತೆಯಾಗಿ ರೂಪುತಾಳಿರಬೇಕು. ಕಬೀರನ ವಿಷಯದಲ್ಲಿಯೂ ಇಂತಹುದೇ ಕತೆಯಿದೆ. ಈಗಲೂ ಕಬೀರನಿಗೆ ಎರಡು ಧರ್ಮದ ಆಚರಣೆಗಳುಳ್ಳ ಗದ್ದಿಗೆಗಳಿವೆ.ದ್ವಿಧಾರ್ಮಿಕ ಪರಂಪರೆಗೆ ಸೇರಿದವರಿಗೆ ಎರಡೂ ಕಡೆಯ ನೆಲೆ ಇರುವಂತೆ, ಯಾವುದೂ ಖಚಿತವಿಲ್ಲದ ಅತಂತ್ರತನವೂ ಇದೆ. ವರ ಮತ್ತು ಶಾಪಗಳು ಒಂದಾದ ಸ್ಥಿತಿಯಿದು.

ಧರ್ಮ ಸಂಬಂಧವಾಗಿ ನಿಮ್ಮ ಜೀವನದಲ್ಲಿ ಏನಾದರೂ ಇಕ್ಕಟ್ಟು ಎದುರಾಯಿತೇ ಎಂದು ಫ್ಲೊರಿನಾ ದಂಪತಿಗಳನ್ನು ಕೇಳಿದೆ. ಅದಕ್ಕೆ ಕೊಟ್ರಪ್ಪನವರು- `ಎಂಥಾ ಕೆಲ್ಸ ಮಾಡಬಿಟ್ಯೊ ಕೊಟ್ರಪ್ಪ ಅಂದರ‌್ರೀ ಜನ. ಇಲ್ಲಪ್ಪಾ, ಅವಳ ಕಲಾಕ್ಕ ಮೆಚ್ಚಿದೀನಿ. ಧರ್ಮ ಬಣ್ಣ ನೋಡಂಗಿಲ್ಲ. ಭೂಮಿಯೊಳಗ ಹೌದನ್ನಂಗ ಬದಕಬೇಕು ಅಷ್ಟೆ ಅಂದೇನ್ರಿ. ಅವರನ್ನೇನು ಕೇರ್ ಮಾಡಲಿಲ್ರೀ ನಾ~ ಎಂದರು. `ಕೆಆರ್ ಪೇಟೆ ಕ್ಯಾಂಪಿನೊಳಗ ಇದ್ದಾಗ, ನಮ್ಮ ಜನ ಗುರುಗಳನ್ನ ಕೂಡಿಕಂಡು ಬಂದರ‌್ರಿ. ನಮ್ಮ ಧರ್ಮದೊಳಗ ಹೀಂಗ ಪಾರ್ಟು ಮಾಡಾಂಗಿಲ್ಲ. ನೀ ಹೊಳ್ಳಿ ಬಾ. ನಿನಗ ಸುಸೂತ್ರ ಜೀವನ ನಡೆಯೊ ಹಂಗ ವ್ಯವಸ್ಥಾ ಮಾಡ್ತೀವಿ ಅಂದರ‌್ರಿ. ನಾನು ಪಾರ್ಟು ಮಾಡಾಕ ಹತ್ತೀನಿ. ಕ್ಯಾಂಪ್ ಕೀಳೊ ಹೊತ್ನಾಗೆ ಬರ‌್ತೀನಿ ಅಂತ ಸುಳ್ ಹೇಳಿ ತಪ್ಪಿಸಿಕೊಂಡು ಗದಗ್ಗಿಗೆ ಓಡಿ ಬಂದೇನ್ರಿ. ಈಗ ಎಲ್ಲ ಮತದೋರು ಪಾರ್ಟು ಮಾಡ್ಲಿಕ್ಕ ಹತ್ಯಾರಲ್ಲರೀ? ಆ ಕಲ್ಪನಾ ನಮ್ಮೊರಾಕಿಯಂತೆ. ನನಗೂ ಮಂದಿ ಮಿನುಗುತಾರೆ ಅನ್ತಾರ‌್ರಿ~ ಎಂದು ಫ್ಲೊರಿನಾ ಉತ್ತರಿಸಿದರು.ಒಂದು ವರ್ಷದ ಬಳಿಕ ಗದಗಿಗೆ ಹೋದಾಗ, ಫ್ಲೊರಿನಾ-ಕೊಟ್ರಪ್ಪರನ್ನು ಮತ್ತೆ ಭೇಟಿಯಾದೆ. ಈಗ ಕೊಟ್ರಪ್ಪನವರ ಆರೋಗ್ಯ ಸುಧಾರಿಸಿತ್ತು. ಆದರೆ ಫ್ಲೊರಿನಾ ಲಾಚಾರಾಗಿದ್ದರು.ಮೈತುಂಬ ವಿಭೂತಿ ಧರಿಸಿ ಶಿವಪೂಜೆ ಮಾಡುತ್ತಿದ್ದ ಕೊಟ್ರಪ್ಪ, ನನಗೂ ಫ್ಲೊರಿನಾಗೂ ಚಹ ಮಾಡಿ ತಂದುಕೊಟ್ಟರು. `ಮಾಲಕರು ಸರಿಯಾಗಿ ಪಗಾರ ಕೊಡ್ತಿದ್ರಾ?~ ಎಂದು ಕೇಳಿದೆ.ಅದಕ್ಕೆ ಫ್ಲೊರಿನಾ `ಎಲ್ಲಿ ಕೊಡ್ತಿದ್ದನಪ್ಪ? ನನ್ನ ಪ್ರೀತಿಯೇ ನಿನ್ನ ಸಂಬಳ ಅಂತ ಮೋಸಮಾಡ್ತಿದ್ದ. ಅದಕ್ಕ ಈಗ ನನ್ನ ಸಾಕಲಿಕ್ಕ ಹತ್ಯಾನ~ ಎಂದರು. ಅವರು ಹಾಗೆ ಹೇಳುವಾಗ ಕೊಟ್ರಪ್ಪನವರ ತುಟಿ ನಿಧಾನವಾಗಿ ಅರಳಿತು. ಕಣ್ಣು ಫಳಫಳಿಸಿದವು. ಬಹುಶಃ 50 ವರುಷಗಳ ಹಿಂದಿನ ನೆನಪುಗಳೆಲ್ಲ ಮರುಕಳಿಸುತ್ತಿರಬೇಕು. ಇಬ್ಬರಿಗೂ ಪ್ರೇಮಾಂಕುರವಾದ ಸನ್ನಿವೇಶದ ಬಗ್ಗೆ ನನಗೆ ಕುತೂಹಲವಿತ್ತು. ಕೇಳಲು ಇಬ್ಬರೂ ವಿಭಿನ್ನ ಆವೃತ್ತಿಗಳನ್ನು ಕೊಟ್ಟರು.ಫ್ಲೊರಿನಾ ಆವೃತ್ತಿ: “ಇವರು ದೊಡ್ಡ ಶ್ರೀಮಂತರಂತೆ. ಕಾಳಕಡಿ ವ್ಯಾಪಾರಸ್ಥರಂತೆ. ಅದೆಲ್ಲ ನನಗ್ಗೊತ್ತಿದ್ದಿಲ್ರಿ. ನಾಟಕ ನೋಡೋಕೆ ಬಂದೋರು ಪಾರ್ಟು ಮೆಚ್ಕೊಂಡು `ಈಕಿನ್ನ ಬಿಟ್ರೆ ಕಂಪನಿ ನಡಿಯಂಗಿಲ್ಲ~ ಅಂತ ರೊಕ್ಕ ಕೊಟ್ಟು ಹಾರಿಸಿಕೊಂಡು ನನ್ನ ತಂದರ‌್ರಿ. ನಾನೇನು ಇವರ ದುಡ್ಡಿಪಡ್ಡಿಗೆ ಬಂದಿದ್ದಲ್ಲ. ಏನೋ ದೈವ ಕೊಡಿಸಿತು. ಬಂದೆ. ನನ್ನಿಂದ ಇವರ ಕಂಪನಿ ನಡೀತು. ಕೊಳ್ಳಾಗಿನ ತಾಳಿ ಮಾರಿ ನಟರಿಗೆ ಊಟಕ್ಕೆ ಹಾಕೀನ್ರೀ. ಯಾವತ್ತೂ ಈ ಕಂಪನಿ ಮಾಲಕರನ್ನ ನಂಬಬಾರದ್ರಿ. ಎಷ್ಟೋ ನಟಿಯರ ಜೀವನಾನ ಬರಬಾದ್ ಮಾಡ್ಯಾರ.ಇವರೂ ಏನು ಕಮ್ಮಿಯಿಲ್ಲ. ಭಾಳ ಉರದಾಡೋರು. ಆದರೆ ಆಲ್ ಇಂಡಿಯಾದೊಳಗ 50 ವರ್ಷ ಒಬ್ಬ ನಟಿಯ ಜತಿ ಬಾಳ್ವೆ ಮಾಡಿದೋರಿಲ್ಲ. ಅವರ ಕಷ್ಟದಾಗ ನಾನು ಭಾಗಿಯಾಗ್ಯೇನಿ. ನನ್ನ ಕಷ್ಟದೊಳಗ ಅವರು ಭಾಗಿಯಾಗ್ಯಾರ. ನಳದ ತಗ್ಗಿನ್ಯಾಗ ಬಿದ್ದು ಕಾಲು ಮುರದಾಗ ನನ್ನ ಜೋಪಾನ ಮಾಡ್ಯಾರ”.ಕೊಟ್ರಪ್ಪನವರ ಆವೃತ್ತಿ: “1960ನೇ ಇಸವಿ ಇರಬೇಕು. ಮನಿದೇವ್ರ ಕೊಟ್ಟೂರ ಬಸವೇಶ್ವರ ಜಾತ್ರೀಗಂತ ಹೋಗಿದ್ದೆ. ಅಲ್ಲಿ ಫಕ್ರು ನಿಂಗನ ಕಂಪನಿಯೊಳಗ `ತಾಯಿ ಕರುಳು~ ನಾಟಕ ನಡೀತಿತ್ತರಿ. ಈಕೀದು ಸರಸ್ವತಿ  ಪಾರ್ಟು ಅಗದೀ ಪ್ರಸಿದ್ಧ ಇತ್ತು. ಗೇಟಮ್ಯಾನಿಗೆ `ಈ ಫ್ಲೊರಿನಾ ಅಂದರ ಯಾರು?~ ಅಂತ ಕೇಳ್ದೆ. ತೋರಿಸ್ದ. ಕರೇ ಮುಸುಡ್ಯಾಗ ಹಲ್ಲೊಂದೇ ಘನಾ ಎದ್ದು ಕಾಣ್ತಿದ್ದವು. `ಇಕೀ ಫ್ಲೊರಿನಾ! ಇಕೇನ್ ಪಾರ್ಟ ಮಾಡ್ತಾಳಪ್ಪಾ?~ ಅಂತ ನನಗೆ ಗಾಬಾತು. ಅದಕ್ಕ ಗೇಟಮ್ಯಾನ್ `ನೀವು ಪಾಲ್ಟು ನೋಡಿ ಆಮ್ಯಾಲ ಮಾತಾಡ್ರಿ~ ಅಂದ.ನಾಟಕಕ್ಕೆ ಹೋಗಿ ಕುತ್ತೇನ್ರಿ. ಈಕಿ ಬಂದ್ಲು. `ಏಏ ಸ್ಟೇಜಿನ ಟೈಗರ್ ಬಂದ್ಲು~ ಅಂದರ‌್ರಿ ಜನ. ಈಕೀದು ಅತ್ತಿ ಪಾರ್ಟು. ತೆಲೀಮ್ಯಾಲ ನೀರ ಹಾಕ್ಕೊಂಡು ಕೂದಲಾ ಒರಸಿಕೊಂಡು ನಿಂತಿದ್ದ ಸೊಸೀಗಿ ಬಹಳ ಕ್ರೂರ ಮಾತಾಡೋ ಸೀನ್ರಿ. ಆಗ ಮಂದಿ ತಡೀಲಾರ್ದೆ ಕಾಲ್ಮರಿ ತಗದು ಸ್ಟೇಜಿನ ಮ್ಯಾಲ ಒಗದಬಿಟ್ಟರ‌್ರಿ. `ಅಬಬಾ, ಏನ್ ಪಾರ್ಟು ಮಾಡ್ತಾಳಪ್ಪ~ ಅಂತ ಬಾಯಿಮ್ಯಾಲ ಕೈಯಿಟ್ಟೆ. ಬೇಕಾದ್ದ ಪಗಾರ ಕೇಳಲಿ, ಇಕೀನ ತೊಗಂಡು ಹೋಗಕೇ ಬೇಕು ಅಂತ ವಿಚಾರ ಮಾಡಿ, ಗುಟ್ಟಾಗಿ ಭೆಟ್ಟಿಯಾದೆ. `ನಮಗ ನಿಮ್ಮ ಪಾರ್ಟು ಮನಸಿಗೆ ಬಂತು. ನೀವು ನಮ್ಮ ಕಂಪನಿಗೆ ಬರಬೇಕು~ ಅಂದೆ. ಆವಾಗ ಈಕಿಗೆ 75 ರೂಪಾಯಿ ಪಗಾರ ಇತ್ತು. ನಾನು ಒಮ್ಮೇಲೆ 300 ರೂಪಾಯಿ ಪಗಾರ, 10 ಸಾವರ ಅಡ್ವಾನ್ಸ್ ಕೊಟ್ಟೆ.ಬಂದುಬಿಟ್ಟಳು. ಇವಳಿಂದ ನನ್ನ ಕಂಪನಿ ನಡೀತ್ರಿ. ಇವತ್ತಿಗೂ ಫ್ಲೊರಿನಾ ಮಾಡಿದ ಪಾರ್ಟು ಉಳಕೀದೋರು ಮಾಡೋಕೆ ಹೆಸರು ಕೆಡ್ತದ ಅಂತ ಹೆದರ್ತಾರ. ನಾವು ಗಂಡ ಹೆಂಡ್ರೀಗಿಂತ ಹೆಚ್ಚರಿ. ಒಂದಿವಸಾ ಜಗಳಾ ಮಾಡಿಲ್ಲ. ಈ ಮುಪ್ಪಿನ್ಯಾಗೆ ಅವಳೂ ನನ್ನ ಬಿಡಬಾರದು. ನಾನೂ ಆಕೀನ ಬಿಡಬಾರದು”.ನಾನು ಫ್ಲೊರಿನಾ ಜತೆ ಮಾತಾಡುತ್ತಿರುವಾಗ ಕೊಟ್ರಪ್ಪನವರು ಜತನವಾಗಿಟ್ಟಿದ್ದ ಫ್ಲೊರಿನಾ ನಟನೆಯ ಫೋಟೊಗಳನ್ನು ತೋರಿಸತೊಡಗಿದರು. ಅದೇ ಹೊತ್ತಿಗೆ ಅಕ್ಕಪಕ್ಕದ ಮನೆಗಳಿಂದ ಚಹಾ ತಿಂಡಿಗಳ ಸರಬರಾಯಿ ಆಗತೊಡಗಿತು. `ಎಲ್ಡ ದಿವಸದಿಂದ ಚಿಮಣಿ ಎಣ್ಣೆ ಇದ್ದಿದ್ದಿಲ್ಲ. ತ್ರಾಸ್ ಭಾಳಾತು. ಅದಕ್ಕ ಎಲ್ಲರೂ ಅಡಿಗೆ ತಂದುಕೊಡಲಿಕ್ಕ ಹತ್ತಾರ~ ಎಂದರು ಕೊಟ್ರಪ್ಪ. ಇಡೀ ಚಾಳು ಈ ದಂಪತಿಯನ್ನು ಮಕ್ಕಳಂತೆ ಸಾಕುತ್ತಿತ್ತು.`ಯಾವುದಾದರೂ ನಾಟಕದ ಡೈಲಾಗ್ ಹೇಳಿ~ ಎಂದು ಕೇಳಿದೆ. ಫ್ಲೊರಿನಾ ಕಂದಗಲ್ಲರ `ರಕ್ತರಾತ್ರಿ~ ನಾಟಕದಿಂದ `ಎಲೆ ಉತ್ತರೆ ನಿನ್ನ ಗರ್ಭಸ್ಥ ಪಿಂಡಕ್ಕೂ ಪ್ರಳಯ. ದಿನ ಮೂರು ಕಳೆಯುವುದರೊಳಗಾಗಿ ಈ ಪಾಂಡವಪೃಥ್ವಿ.. ಹ್ಹಹ್ಹಹ್ಹಾ~ ಎಂದು ಉಚ್ಚಸ್ವರದಲ್ಲಿ ಉಗ್ಗಡಿಸಿದರು. ಸಣ್ಣಮನೆ ಗಡಗಡಿಸಿತು. `ಇದು ಅಶ್ವತ್ಥಾಮನ ಡೈಲಾಗಾತು. ನಿಮ್ಮದು ಹೇಳ್ರಿ~ ಎಂದೆ.  ಆಗ `ಕೊರವಂಜಿ~ ನಾಟಕದ ಒಂದು ಪ್ರಸಂಗವನ್ನು ನೆನೆಸಿಕೊಂಡು, ಕೊಟ್ರಪ್ಪನವರ ಮುಖದತ್ತ ನಾಟಕೀಯವಾಗಿ ಕೈಚಾಚಿ `ಒಯ್‌ಒಯ್‌ಒಯ್, ಏ ಗೌಡಾ! ನೋಟ ಇಟ್ರೆ ಚೀಟಿ ನೋಟನಾ, ಮಾಟಿಲ್ಲ ಮದ್ದಿಲ್ಲ, ನಿನ್ನ ಜಿಡ್ಡಿಬಿಟ್ಟು ಕಣಿ ಹೇಳ್ತೀನಿ ಕೇಳಾ ಗೌಡಾ. ಯಾಕ ಮಾರಿ ಸಪ್ಪಾ ಮಾಡ್ಕೆಂಡು ಕುಂತಿದ್ದೀಯಲ್ಲಾ, ಏನಾಯ್ತ್ ನಿನ್ನ ಜೀವನದಾಗ?~ಎಂದರು.ಡೈಲಾಗು ಹೇಳಿದ ಬಳಿಕ ಅವರಲ್ಲಿ ವಿಚಿತ್ರವಾದ ಶಕ್ತಿ ಸಂಚಾರವಾದಂತಿತ್ತು. `ಮತ್ತೆ ಬಣ್ಣ ಹಚ್ಚಿಕೊಂಡು ಪಾರ್ಟು ಮಾಡೋಹಂಗೆ ಶಕ್ತಿ ಕೊಡವ್ವಾ ಅಂತ ಸಂಜಿ ಮುಂಜಾನಿ ಆ ಕಲಾದೇವತೆ ಸರಸ್ವತೀನ, ಆ ಮರಿಯಮ್ಮನ ಬೇಡಕೋತೀನ್ರೀ~ ಎಂದು ಭಕ್ತಿಯಿಂದ ಕಣ್ಮುಚ್ಚಿ ಪ್ರಾರ್ಥಿಸಿದರು. ಅದಕ್ಕೆ ಕೊಟ್ರಪ್ಪ `ಮತ್ತ ಪಾರ್ಟು ಮಾಡ್ತಾಳಂತ ಪಾರ್ಟು. ಹಲ್ಲು ಹೋದಮೇಲೆ ಏನ್ ಮಾಡ್ತಿ? ಡೈಲಾಗ್ ಹೇಳಕ್ ಬರಂಗಿಲ್ಲ. ಪುಸ್‌ಪುಸ್ ಗಾಳಿ ಬರ್ತದ~ ಎಂದರು. `ಯಾಕ? ಹಲ್ಲ ಕಟ್ಟಸ್ಕೋತೀನಿ. ಸೆಟ್ಟು ಕೆಳಗ ಬೀಳದಂಗ ಹಲ್ಲು ಕಟ್ಟುದ ಬಂದದಂತಲ್ಲ~ ಎಂದರು ಪ್ಲೊರಿನಾ. ಅವರ ಕೊನೆಯ ಆಸೆ ಕೇಳಿ ವಿಸ್ಮಯವಾಯಿತು.ಬಡತನ ಮುಪ್ಪು ಕಾಯಿಲೆಗಳಲ್ಲೂ ಇವರ ಮುಖದಲ್ಲಿ ಪ್ರಿಯ ಸಂಗಾತಿಯ ಜತೆ ಬಾಳಿದ ಸಂತೃಪ್ತಿ ಲಾಸ್ಯವಾಡುತ್ತಿತ್ತು. ಇದೇ ಭಾವವನ್ನು ಸಹನಟಿ ಪುಷ್ಪಾಮಾಲಾರನ್ನು ವರಿಸಿದ ಅಬ್ದುಲ್‌ಸಾಬ್ ಅಣ್ಣಿಗೇರಿಯವರ ಮುಖದಲ್ಲೂ ಕಂಡಿದ್ದೆ. ರಂಗದ ಮೇಲೆ ಜೀವತಳೆದು ಬರುವ ನಾಟಕದ ಮುಂದೆ ಮುದ್ರಿತ ನಾಟಕ ಯಾವತ್ತೂ ಅರೆಜೀವ; ಆದರೆ ನಾಟಕೀಯವೂ ವಿಸ್ಮಯಕರವೂ ಆದ ನಟರ ನಿಜಬಾಳಿನ ಎದುರು, ರಂಗದ ಮೇಲೆ ಸೃಷ್ಟಿಯಾಗುವ ನಾಟಕದ ಪ್ರದರ್ಶನ ಉಪ್ಪಖಾರವಿಲ್ಲದ ಸಪ್ಪೆ ಅನಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.