ಸೋಮವಾರ, ಜನವರಿ 20, 2020
29 °C

ಬಂದಿದೆ ಮತದಾರರ ದಿನ: ಸ್ಪಂದನಶೀಲರಾಗಬಲ್ಲರೇ ಜನ?

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಜನವರಿ 26ರಂದು ಇಡೀ ದೇಶ ಗಣರಾಜ್ಯೋತ್ಸವ ದಿನ ಆಚರಿಸುತ್ತದೆ. 1950ರ ಇದೇ ದಿನ ನಮಗಾಗಿ ನಾವು ಸಂವಿಧಾನ ಮತ್ತು ಗಣರಾಜ್ಯವನ್ನು ರಚಿಸಿಕೊಂಡೆವು. ನಾಳೆ, ಅಂದರೆ ಜನವರಿ 25ರಂದು ಮತ್ತೊಂದು ಮಹತ್ವದ ದಿನಾಚರಣೆ ಸದ್ದಿಲ್ಲದೇ ಸಾಗಿ ಹೋಗುತ್ತದೆ.`ಮತದಾರರ ದಿನ~ ಎಂದು ಕರೆಯಲಾಗುವ ಈ ದಿನಕ್ಕೂ ಗಣರಾಜ್ಯೋತ್ಸವಕ್ಕೂ ನಿಕಟ ಸಂಬಂಧ ಇದೆ. ಈ ಎರಡೂ ಮಹತ್ವದ ದಿನಗಳು ನಮ್ಮ ಪ್ರಜಾಪ್ರಭುತ್ವದ ಸ್ಪಂದನಶೀಲ ಗುಣವನ್ನು ಪ್ರತಿಬಿಂಬಿಸುತ್ತವೆ.ಕಳೆದ ವರ್ಷ ಕೇಂದ್ರ ಸರ್ಕಾರ ಜನವರಿ 25ನ್ನು `ರಾಷ್ಟ್ರೀಯ ಮತದಾರರ ದಿನ~ವಾಗಿ ಆಚರಿಸಲು ನಿರ್ಧರಿಸಿತು. ಮತದಾನದ ಪ್ರಕ್ರಿಯೆಯಲ್ಲಿ ಮತದಾರ ಹೆಮ್ಮೆಯಿಂದ ಭಾಗವಹಿಸುವಂತೆ ಮಾಡುವುದೇ ಈ ದಿನಾಚರಣೆಯ ಉದ್ದೇಶ.ಪ್ರಜಾಪ್ರಭುತ್ವ ಎಂಬುದು `ಜನರ ಆಶೋತ್ತರ~ಗಳ ಪ್ರತೀಕ ಎಂದೇ ನಮಗೆಲ್ಲ ಕಲಿಸಲಾಗಿದೆ. ದೇಶದಲ್ಲಿ ಕಳೆದ ಒಂದು ವರ್ಷದಿಂದೀಚೆಗೆ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಜನರ ಆಶೋತ್ತರಗಳ ಅಭಿವ್ಯಕ್ತಿ ಎಂದು ಹೇಳುವವರು ಇದ್ದಾರೆ. ಇನ್ನು ಕೆಲವರು, ಇದು ನಮ್ಮ ಚುನಾಯಿತ ಸಂಸದರ ಅಧಿಕಾರ ಹರಣದ ಪ್ರಯತ್ನ ಎಂದೂ ವಾದಿಸುತ್ತಾರೆ.ಇದನ್ನು ಗಮನಿಸಿದಾಗ, ಹಾಗಿದ್ದರೆ ಜನರ ಆಶೋತ್ತರ ಎಂದರೇನು ಎಂಬ ಪ್ರಶ್ನೆ ನಮ್ಮೆದುರು ಮೂಡುತ್ತದೆ. ಮತ ಪೆಟ್ಟಿಗೆಯ ಮೂಲಕ ವ್ಯಕ್ತವಾಗುತ್ತಿರುವ ಜನರ ಆಶೋತ್ತರಗಳ ಬಗ್ಗೆ ನಾನು ಈ ಲೇಖನದಲ್ಲಿ ಗಮನ ಕೇಂದ್ರೀಕರಿಸುತ್ತೇನೆ.ಮತದಾನದಲ್ಲಿ ಪಾಲ್ಗೊಳ್ಳುವುದು ಪ್ರಜಾಪ್ರಭುತ್ವದ ಸಂರಕ್ಷಣಾ ಪ್ರಕ್ರಿಯೆಯ ಆರಂಭಕ್ಕೆ ಚಾಲನೆ ನೀಡುತ್ತದೆ ಎಂಬುದನ್ನು ನಾವು ಗ್ರಹಿಸಿದರೆ `ಮತದಾರರ ದಿನಾಚರಣೆ~ಗೆ ನಿಜಕ್ಕೂ ಮಹತ್ವ ಬರುತ್ತದೆ.ಇತ್ತೀಚಿನ ದಿನಗಳಲ್ಲಿ ನಾಗರಿಕ ವಿಷಯಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿರುವ ಸಾರ್ವಜನಿಕರು `ಈಗ ಅಥವಾ ಇನ್ನೆಂದಿಗೂ ಇಲ್ಲ~ ಎಂಬಂತಹ ರೀತಿಯಲ್ಲಿ ಪ್ರಜಾಪ್ರಭುತ್ವದ ಸಂರಕ್ಷಣೆಗೆ ಮುಂದಾಗಿದ್ದಾರೆ.

 

ವಿವಿಧ ಕ್ಷೇತ್ರಗಳ ಜನರನ್ನು ಸಂಪರ್ಕಿಸಿದ ನನಗೆ, ಅವರೆಲ್ಲ ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಈ ಪ್ರಕ್ರಿಯೆ ಚುನಾವಣೆಯಲ್ಲಿ ಆರಂಭವಾಗಿ ಅದರಲ್ಲೇ ಕೊನೆಗೊಳ್ಳುತ್ತದೆ ಎಂದೇನೂ ಅವರು ಭಾವಿಸಿಲ್ಲ ಎಂಬುದು ಸ್ಪಷ್ಟವಾಯಿತು.ಎಲ್ಲ ಹಿನ್ನೆಲೆಯ ಜನರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಪಾರವಾದ ಆಸಕ್ತಿ ಹೊಂದಿದ್ದಾರೆ. ತಾವು ಹೇಗೆ ಇದರಲ್ಲಿ ಪಾಲ್ಗೊಳ್ಳಬೇಕು, ರಾಜಕಾರಣಿಗಳು ಚುನಾವಣಾ ಪ್ರಚಾರಕ್ಕೆ ಬಂದಾಗ ಯಾವ ಬಗೆಯ ಪ್ರಶ್ನೆಗಳನ್ನು ಕೇಳಬೇಕು, ಮತ ಹಾಕುವ ಮೊದಲು ಅಭ್ಯರ್ಥಿಯಲ್ಲಿ ಯಾವ ಯಾವ ಗುಣಗಳನ್ನು ನಿರೀಕ್ಷಿಸಬೇಕು ಎಂಬುದನ್ನು ಅರಿಯಲು ಅವರು ಅತ್ಯಂತ ಉತ್ಸುಕರಾಗಿದ್ದಾರೆ.

ಪ್ರತಿ ಬಾರಿಯೂ ಗೆಲ್ಲುವ ಸಾಮರ್ಥ್ಯವನ್ನು ಹಣ ಮತ್ತು ಜಾತಿ ಸಮೀಕರಣ ಮಾತ್ರ ನಿರ್ಧರಿಸುತ್ತದೆ ಎಂದು ದೂರುವುದು ಸರಿಯಲ್ಲ ಎಂಬುದನ್ನು ಸಹ ಜನ ಅರ್ಥ ಮಾಡಿಕೊಂಡಿದ್ದಾರೆ.

 

ಮತದಾರ ಅವಕಾಶ ಮಾಡಿಕೊಟ್ಟಿರುವ ಕಾರಣಕ್ಕಷ್ಟೇ ಇಂತಹ ಸ್ಥಿತಿ ಉದ್ಭವವಾಗಿದೆ. ಈ ಬೆಳವಣಿಗೆಗೆ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಎಷ್ಟು ಕಾರಣವೋ ಸಾಮಾನ್ಯ ಜನರೂ ಅಷ್ಟೇ ಮಟ್ಟದಲ್ಲಿ ಹೊಣೆಗಾರರು.

 

ಹೀಗಾಗಿ `ಗೆಲ್ಲುವ ಸಾಮರ್ಥ್ಯ~ಕ್ಕೆ ನಾವೆಲ್ಲರೂ ಒಟ್ಟಾಗಿ ಸೇರಿ ಮರು ವ್ಯಾಖ್ಯಾನ ನೀಡಬೇಕಾಗಿದೆ. ನಮ್ಮ ವಿಧಾನಸಭೆ ಮತ್ತು ಸಂಸತ್ತನ್ನು ಯಾರು ಪ್ರತಿನಿಧಿಸಬೇಕು ಎಂಬುದನ್ನು ನಿರ್ಧರಿಸಲು ಸಾಧನೆ ಮತ್ತು ಹೊಣೆಗಾರಿಕೆಯಷ್ಟೇ ನಮಗೆ ಮಾನದಂಡವಾಗಬೇಕು.ಇದಕ್ಕಾಗಿ ನಾವು ಮೊದಲು ಮಾಡಲೇಬೇಕಾದ ಕೆಲಸ, ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕಾದುದು. ಮುಂದಿನ ಹಂತ, ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಧ್ಯಯನ ಮಾಡಿ ಅವರನ್ನು ವಿಶ್ಲೇಷಣೆಗೆ ಒಳಪಡಿಸುವುದು. ಈ ಸಂದರ್ಭದಲ್ಲಿ ನಮ್ಮ ಆಯ್ಕೆಯು ಹಣ, ಇನ್ನಾವುದೇ ಆಮಿಷಕ್ಕೆ ಒಳಗಾಗದೆ, ಜಾತಿ ಮತ್ತು ಪಕ್ಷಾತೀತವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.ಅಭ್ಯರ್ಥಿ ಆಯ್ಕೆಯ ನಮ್ಮ ನಿರ್ಧಾರವು ವ್ಯಕ್ತಿಯ ಕಾರ್ಯಶಕ್ತಿ, ಅರ್ಹತೆ, ಚುನಾಯಿತ ಪ್ರತಿನಿಧಿಯಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರು ತೋರುವ ಕೌಶಲ, ಅವರ  ಹಣಕಾಸು ಮತ್ತು ಅಪರಾಧ ಹಿನ್ನೆಲೆ, ಕ್ಷೇತ್ರದ ಜನಸಾಮಾನ್ಯರೊಟ್ಟಿಗೆ ಬೆರೆಯಬಲ್ಲ ಅವರ ಸಾಮರ್ಥ್ಯ ಇವೆಲ್ಲವನ್ನೂ ಒಳಗೊಳ್ಳಬೇಕಾಗುತ್ತದೆ.ಮತ ಹಾಕಿ ಬಂದ ಮಾತ್ರಕ್ಕೇ ನಮ್ಮ ಕೆಲಸ ಮುಗಿದುಹೋಯಿತು ಎಂದು ನಾವು ಅಂದುಕೊಳ್ಳಬಾರದು. ನಮ್ಮ ಶಾಸಕರು ಮತ್ತು ಸಂಸದರ ಮೇಲೆ ನಾವು ಸದಾ ಕಣ್ಗಾವಲು ಇಟ್ಟಿರಲೇಬೇಕಾಗುತ್ತದೆ.ಸದನದಲ್ಲಿ ಅವರ ಸಾಧನೆ, ಪ್ರಮುಖ ವಿಷಯಗಳ ಬಗ್ಗೆ ಅವರ ಜ್ಞಾನ ಮತ್ತು ಅಭಿಪ್ರಾಯ ಎಲ್ಲವನ್ನೂ ಗಮನಿಸುತ್ತಾ ಇರಬೇಕಾಗುತ್ತದೆ. ಈ ಮೂಲಕ, ಬರೀ ವರ್ಗಾವಣೆಗಳನ್ನು ಮಾಡಿಸಿಕೊಡುವುದು ಅಥವಾ ರಸ್ತೆ ದುರಸ್ತಿ ಮಾಡಿ ಕೈತೊಳೆದುಕೊಳ್ಳುವ ಕೆಲಸಗಳಿಗಷ್ಟೇ ಅವರು ಸೀಮಿತ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ.

 

ಇಡೀ ಅವಧಿಯುದ್ದಕ್ಕೂ ನಾವು ನಿರಂತರವಾಗಿ ಜನಪ್ರತಿನಿಧಿಗಳೊಂದಿಗೆ ತೊಡಗಿಸಿಕೊಂಡು ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ತಮ್ಮ ಮತದಾರರಿಗೆ ಅವರು ಹೊಣೆಗಾರರಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಪ್ರಜಾಪ್ರಭುತ್ವವನ್ನು ಮರಳಿ ಸರಿದಾರಿಗೆ ತಂದದ್ದೇ ಆದರೆ, ಅದರ ಇರುವಿಕೆ ಮತ್ತು ಉಳಿವು ಎಷ್ಟು ಅನಿವಾರ್ಯ ಎಂಬ ಸತ್ಯ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ.ಸಂಪರ್ಕ ಕೊಂಡಿ: ಮತದಾನ ನಮ್ಮ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ಸಂರಕ್ಷಣೆಗೆ ನೆರವಾಗುತ್ತದೆ. ನಾಗರಿಕರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ ಎಂದು ಅರಿತುಕೊಂಡಾಗ ಮಾತ್ರ ಪ್ರಜಾಸತ್ತಾತ್ಮಕ ಸಮುದಾಯ ಉಳಿಯಲು ಸಾಧ್ಯ. ಮತದಾನವು ನಾಗರಿಕರ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ.

 

ಮತ ಚಲಾಯಿಸಿ ನಮ್ಮ ನಾಯಕರನ್ನು ಒಪ್ಪುವ ಅಥವಾ ಒಪ್ಪದಿರುವ ಮೂಲಕ, ರಾಜಕೀಯ ಪ್ರಕ್ರಿಯೆಯು ವಿಭಿನ್ನ ನಿಲುವುಗಳನ್ನು ಹೇಗೆ ಅಂಗೀಕರಿಸುತ್ತದೆ ಮತ್ತು ಅವುಗಳನ್ನು ಬಹುಮತದ ಆಧಾರದ ಮೇಲೆ ಹೇಗೆ ನಿರ್ಣಯಿಸುತ್ತದೆ ಎಂಬುದನ್ನು ನಾವು ತೋರಿಸಿಕೊಟ್ಟಂತಾಗುತ್ತದೆ. ಮತದಾನದಿಂದ ದೂರ ಉಳಿದರೆ ವ್ಯಕ್ತಿಗಳು ಮತ್ತು ಸಮುದಾಯಗಳ ನಡುವಿನ ಸಂಪರ್ಕದ ಕೊಂಡಿಯನ್ನು ನಾವೇ ಕಳಚಿ ಒಗೆದಂತಾಗುತ್ತದೆ.

ಅಂತಿಮವಾಗಿ, ಮತದಾನವು ನಾಗರಿಕರಿಗೆ ನಮ್ಮ ರಾಜಕೀಯ ಪ್ರಕ್ರಿಯೆಯ ಜೊತೆ ಸಂಪರ್ಕ ಕಲ್ಪಿಸುತ್ತದೆ. ತಮ್ಮ ನಾಯಕರನ್ನು ಆಯ್ದುಕೊಳ್ಳಲು ನೆರವಾಗುತ್ತದೆ, ನಮಗೆ ಯಾವ ಬಗೆಯ ಸರ್ಕಾರ ಬೇಕು ಎಂಬುದನ್ನು ತೀರ್ಮಾನಿಸಲು, ಅಷ್ಟೇ ಅಲ್ಲದೆ, ಯಾವ ಬಗೆಯ ದೇಶ ನಮ್ಮದಾಗಬೇಕು ಎಂಬ ಬಗ್ಗೆ ಚಿಂತಿಸಲು ಕೂಡ ಅವಕಾಶ ಕಲ್ಪಿಸುತ್ತದೆ.ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯು ಆ ದೇಶದ ಪ್ರಜಾಪ್ರಭುತ್ವದ ಸ್ಥಿತಿಗತಿಗೆ ನೇರವಾಗಿ ಹಿಡಿಯುವ ಕನ್ನಡಿ ಎಂದೇ ಹೇಳಬಹುದು. ಜನರ ಪಾಲ್ಗೊಳ್ಳುವಿಕೆ ಹೆಚ್ಚಿದಷ್ಟೂ ಪ್ರಜಾಪ್ರಭುತ್ವ ಪ್ರಕ್ರಿಯೆ ಹೆಚ್ಚು ಹೆಚ್ಚು ಸ್ಪಂದನಶೀಲ ಆಗುತ್ತಾ ಹೋಗುತ್ತದೆ. ಆದರೆ, ಮತದಾನ ಮಾಡುವಷ್ಟಕ್ಕೇ ನಮ್ಮ ಪಾಲ್ಗೊಳ್ಳುವಿಕೆ ಸೀಮಿತವಾಗಬಾರದು.ಆಯ್ಕೆಗೆ ಅವಕಾಶ ಇರುವಂತಹ ಪಾಲ್ಗೊಳ್ಳುವಿಕೆ ನಮ್ಮದಾಗಬೇಕು. ವಿಷಾದದ ಸಂಗತಿಯೆಂದರೆ ನಮ್ಮ ಚುನಾವಣಾ ಫಲಿತಾಂಶ, ಧನಿಕರು ಮತ್ತು ಕೆಲ ಗಣ್ಯ ವ್ಯಕ್ತಿಗಳಷ್ಟೇ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವಂತೆ ಮಾಡುತ್ತಿದೆ.

 

ಭಾರತದ ಪ್ರಜಾಪ್ರಭುತ್ವವು ಸರ್ವ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೊಂದಿರುವಂತೆ ಮಾಡಬೇಕಾದುದು ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ ಆಗಬೇಕು. ಇದು ಚುನಾವಣೆಯಿಂದ ಆರಂಭವಾಗಿ, ಚುನಾಯಿತ ಪ್ರತಿನಿಧಿಗಳು ಸತತವಾಗಿ ಕಾರ್ಯಪ್ರವೃತ್ತರಾಗುವಂತೆ ಮಾಡುವ ನಿರಂತರ ಪ್ರಕ್ರಿಯೆಯಾಗಬೇಕು.ಭಾರತ ಈಗ ಉತ್ತೇಜನಕಾರಿ ಮತ್ತು ವಿರೋಧಾಭಾಸದ ಹಾದಿಯಲ್ಲಿದೆ. ಒಂದೆಡೆ ಸಮೃದ್ಧಿ, ಇನ್ನೊಂದೆಡೆ ಅತ್ಯಲ್ಪ ಎಂಬಂತಹ ಸ್ಥಿತಿ ನಮ್ಮದಾಗಿದೆ. ಹಲವು ವರ್ಷಗಳಿಂದ ಶೇ8ರಷ್ಟು ಆರ್ಥಿಕ ವೃದ್ಧಿಯನ್ನು ನಾವು ಕಾಣುತ್ತಿದ್ದೇವೆ.ಇದರ ಜೊತೆಗೇ ಶೇ 25ರಷ್ಟು (ಒಟ್ಟಾರೆ ವಿಶ್ವದ) ಬಡತನದ ಹೊರೆಯನ್ನೂ ಹೊತ್ತುಕೊಂಡಿದ್ದೇವೆ. ಯಾವುದೇ ರಾಷ್ಟ್ರ ಅಪಾರವಾದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕಾದರೆ ಅಲ್ಲಿ ಜವಾಬ್ದಾರಿಯುತ ಹಾಗೂ ಸ್ಪಂದನಶೀಲ ಸರ್ಕಾರ ಇರಬೇಕಾಗುತ್ತದೆ.

 

ಹೀಗಾಗಿ ಆಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರವನ್ನು ನಾವು ಅಲ್ಲಗಳೆಯುವಂತಿಲ್ಲವಾದ್ದರಿಂದ ಸಂದರ್ಭೋಚಿತವಾದ ಸಾಧನೆಗಳಿಗೆ ಅವರನ್ನು ನಾವು ಹೊಣೆ ಆಗಿಸಲೇಬೇಕಾಗುತ್ತದೆ. ಮಹತ್ವದ ಫಲಿತಾಂಶ ತಂದುಕೊಡುವ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯೂ ಅಷ್ಟೇ ಅನಿವಾರ್ಯ.

 

ಇದೆಲ್ಲ ಕಾರ್ಯರೂಪಕ್ಕೆ ಬರಬೇಕಾದರೆ ಯಾವ ಬಗೆಯ ಜನರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗಲಿದ್ದಾರೆ ಎಂಬುದು ಬಹಳ ಮುಖ್ಯ. ನಮಗೆ ಏನು ದಕ್ಕುತ್ತದೋ ಅದರ ಬಗ್ಗೆ ಬರೀ ದೂರುಗಳನ್ನು ಹೇಳುತ್ತಾ ಹೋದರಷ್ಟೇ ಪರಿಸ್ಥಿತಿ ಬದಲಾಗದು.

 

ನಾವು ಮತ ಹಾಕಲಿರುವ ಜನರನ್ನು ಅರ್ಥ ಮಾಡಿಕೊಳ್ಳಲು, ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಲು ರಚನಾತ್ಮಕ ಪ್ರಯತ್ನ ಆಗಬೇಕು, ನಮ್ಮ ಬಗ್ಗೆ ಅವರಿಗಿರುವ ದೃಷ್ಟಿಕೋನವನ್ನು ವಿವರಿಸಲು ಅವರಿಗೆ ಅವಕಾಶ ನೀಡಬೇಕು ಮತ್ತು ಒಳ್ಳೆಯ ಆಡಳಿತ ನೀಡುವ ತಮ್ಮ ಭರವಸೆಗೆ ಪೂರಕವಾಗಿ ಅವರು ನಡೆದುಕೊಳ್ಳುವರೇ ಎಂಬುದನ್ನು ಉತ್ತಮ ಸಂವಾದದ ಮೂಲಕ ಅರಿಯಲು ಪ್ರಯತ್ನಿಸಬೇಕು.ನಮ್ಮ ಯೋಗ್ಯತೆಗೆ ತಕ್ಕ ನಾಯಕರನ್ನು ನಾವು ಪಡೆಯುತ್ತೇವೆ ಎಂಬುದನ್ನು ನಾವು ಮರೆಯಬಾರದು. ಆದ್ದರಿಂದ ನಮ್ಮ ನಾಗರಿಕ ಹೊಣೆಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಆಯ್ಕೆಯ ಅವಕಾಶವನ್ನು ಮುಕ್ತವಾಗಿ ಇರಿಸಿಕೊಳ್ಳೋಣ.

 

ಬರೀ ಮೂಲಭೂತ ಹಕ್ಕು ಎಂಬ ಕಾರಣಕ್ಕಷ್ಟೇ ನಾವು ಮತ ಚಲಾಯಿಸುವುದು ಬೇಡ. ಭಾರತವನ್ನು ಸ್ಪಂದನಶೀಲ ಮತ್ತು ಆರೋಗ್ಯಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರ ಮಾಡುವುದರ ಆರಂಭವೇ ಚುನಾವಣೆ ಎಂಬ ಕಾರಣಕ್ಕಾಗಿ ಮತ ಹಾಕೋಣ.ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ಮಾತ್ರಕ್ಕೆ ಎಲ್ಲ ಸಾಧನೆಗಳೂ ತಾನೇತಾನಾಗಿ ಸಿದ್ಧಿಸಿಬಿಡುವುದಿಲ್ಲ. ಸಾಧನೆ ಸಿದ್ಧಿಸಬೇಕಾದರೆ ಪ್ರಜಾಪ್ರಭುತ್ವಕ್ಕೆ ಕೈ ಜೋಡಿಸುವುದು ಪ್ರತಿ ಭಾರತೀಯನ ಆದ್ಯ ಕರ್ತವ್ಯವಾಗಬೇಕು. ಒಳ್ಳೆಯ ನಾಯಕರ ಆಯ್ಕೆಯ ಮೂಲಕ ರಾಷ್ಟ್ರವನ್ನು ಮುಂಚೂಣಿಗೆ ತರುವ ಪ್ರಯತ್ನ ಪ್ರತಿಯೊಬ್ಬರದೂ ಆಗಬೇಕು. (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರತಿಕ್ರಿಯಿಸಿ (+)