ಭಾನುವಾರ, ಮಾರ್ಚ್ 29, 2020
19 °C

ಭಾರತೀಯರು ನಾವು ಅಲ್ಪತೃಪ್ತರು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಭಾರತೀಯರಾದ ನಾವು ನಮ್ಮೆಲ್ಲ ವೈಫಲ್ಯಗಳಿಗೆ ಸಾಮಾನ್ಯವಾಗಿ ಹಲವಾರು ಸಬೂಬುಗಳ ರಕ್ಷಣೆಯ ಮೊರೆ ಹೋಗುತ್ತೇವೆ. ವಿವಿಧ ಕ್ಷೇತ್ರಗಳಲ್ಲಿನ ಸೋಲುಗಳಿಗೆ ನಾವು ವ್ಯವಸ್ಥೆಯ ದೋಷ ಮತ್ತು ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನು ಹೊಣೆ ಮಾಡುವ ಪ್ರವೃತ್ತಿ ರೂಢಿಸಿಕೊಂಡು ಬಂದಿದ್ದೇವೆ. ಕೆಲವೊಮ್ಮೆ ಅಪರೂಪದ ಸಾಧನೆ ಮಾಡಿದ ಸಂದರ್ಭಗಳಲ್ಲಿ ಇಂತಹ ಪ್ರತಿಕೂಲಗಳ ಹೊರತಾಗಿಯೂ ಇಷ್ಟು ಮಾಡಿದ್ದೇ ದೊಡ್ಡದು ಎನ್ನುವ ಸಂತೃಪ್ತ ಭಾವನೆ ನಮ್ಮದಾಗಿದೆ.ಪೂರ್ವಭಾವಿ ಸಿದ್ಧತೆ ಮತ್ತು ರಿಯೊ ಒಲಿಂಪಿಕ್ಸ್‌  ಕ್ರೀಡಾಕೂಟ ನಡೆದ ದಿನಗಳಲ್ಲಿ ನಾವು ‘ಆದಾಗ್ಯೂ’ ಎನ್ನುವ ಶಬ್ದಕ್ಕೆ ಹೆಚ್ಚಾಗಿ ಮೊರೆ ಹೋಗಿದ್ದೆವು. ಈ ಶಬ್ದದ ಆಶ್ರಯದಲ್ಲಿಯೇ ನಮ್ಮೆಲ್ಲ ವೈಫಲ್ಯಗಳ ಕಾರಣಗಳನ್ನು ವಿಶ್ಲೇಷಿಸುತ್ತಿದ್ದೆವು. ರಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳ ಸಾಧನೆ ತುಂಬ ಸೀಮಿತವಾಗಿತ್ತು.ಒಂದು ಬೆಳ್ಳಿ, ಒಂದು ಕಂಚು, ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ, 36 ವರ್ಷಗಳ ನಂತರ ಟ್ರ್ಯಾಕ್‌ನ ಅಂತಿಮ ಸುತ್ತಿನಲ್ಲಿ ಭಾಗವಹಿಸುವ ಅರ್ಹತೆ ಪಡೆದದ್ದೇ ಭಾರತದ ದೊಡ್ಡ ಸಾಧನೆಯಾಗಿತ್ತು. ಇದನ್ನು ಹೊರತುಪಡಿಸಿದರೆ ಗಮನಾರ್ಹವಾದಂತಹ ಬೇರೆ ಯಾವುದೇ ಸಾಧನೆ ಕಂಡು ಬರಲಿಲ್ಲ. ಪುರುಷರ ಮ್ಯಾರಥಾನ್‌ನಲ್ಲಿ ಇಬ್ಬರು ಸೈನಿಕರು 25 ಮತ್ತು 26ನೇ ಸ್ಥಾನ ತಲುಪಿ ವೈಯಕ್ತಿಕ ಸಾಧನೆ ಉತ್ತಮಪಡಿಸಿಕೊಂಡರಷ್ಟೆ.ಮಹಿಳೆಯರ ಮ್ಯಾರಥಾನ್‌ನಲ್ಲಿ 157 ಸ್ಪರ್ಧಾಳುಗಳ ಪೈಕಿ ಭಾರತದ ಸ್ಪರ್ಧಿ ಒ.ಪಿ.ಜೈಶಾ 89ನೇ ಸ್ಥಾನ ತಲುಪಿದ್ದರು. ಸ್ವದೇಶದಲ್ಲಿ ರಾಷ್ಟ್ರೀಯ ದಾಖಲೆ ಮಾಡಿ  ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದರೂ, ರಿಯೊ ಮ್ಯಾರಥಾನ್‌ನಲ್ಲಿ ಅವರು ರಾಷ್ಟ್ರೀಯ ದಾಖಲೆಗಿಂತ 13 ನಿಮಿಷ ಹಿಂದೆ ಬಿದ್ದಿದ್ದರು.ಭಾರತಕ್ಕೆ ಮರಳುತ್ತಿದ್ದಂತೆ, ತಾವು ಓಟದಲ್ಲಿ ಭಾಗಿಯಾಗಿದ್ದಾಗ ಭಾರತದ ಅಧಿಕಾರಿಗಳು ತಮಗೆ ಕುಡಿಯಲು ನೀರು ಮತ್ತು ಶಕ್ತಿವರ್ಧಕ ಪೇಯ ಒದಗಿಸಿರಲಿಲ್ಲ, ಹೀಗಾಗಿ ತೀವ್ರ ಆಯಾಸದಿಂದ   ಪ್ರಜ್ಞೆತಪ್ಪಿ ಹೋಗುವಂತಾಗಿತ್ತು ಎಂದು ಜೈಶಾ ಅಧಿಕಾರಿಗಳ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದರು. ಇದೊಂದು ಸಂಪೂರ್ಣವಾಗಿ ನಂಬುವಂತಹ ಹೇಳಿಕೆಯಾಗಿದೆ.ನಮ್ಮ ಅಥ್ಲೀಟ್‌ಗಳ ಹಣೆಬರಹ ಇದು. ಅಧಿಕಾರಿಗಳ ಕ್ರೂರ ಬಗೆಯ ತಾರತಮ್ಯದ ಹೊರತಾಗಿಯೂ ಜೈಶಾ ತಮ್ಮ ಸ್ಪರ್ಧೆ ಪೂರ್ಣಗೊಳಿಸಿದ್ದರು. ಕ್ರೀಡಾಪಟುಗಳ ವೈಫಲ್ಯಗಳಿಗೆ ಇತರ ಪೂರಕ ಸೌಲಭ್ಯಗಳು ಕೊರತೆಯಾಗಿರುವುದನ್ನು ಹಗುರವಾಗಿ  ಪರಿಗಣಿಸುವ ಪ್ರವೃತ್ತಿಯನ್ನು ನಾವು ರೂಢಿಸಿಕೊಂಡು  ಬಿಟ್ಟಿದ್ದೇವೆ. ನಮ್ಮ ಶೂಟರ್ಸ್‌ಗಳಿಗೆ ಅಗತ್ಯವಾದ ಸಾಮಗ್ರಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿರದಿದ್ದರೂ ಅವರು ರಿಯೊಗೆ ಅರ್ಹತೆ ಪಡೆದಿದ್ದರು.ನಮ್ಮ ಕುಸ್ತಿಪಟುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ವಾತಾನುಕೂಲಿ ವ್ಯವಸ್ಥೆ ಕಲ್ಪಿಸಿರದಿದ್ದರೂ ಅವರು ಕೂಡ ರಿಯೊದಲ್ಲಿ ಭಾಗಿಯಾಗಿದ್ದರು. ಜಿಮ್ನಾಸ್ಟಿಕ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ದೀಪಾ ಕರ್ಮಾಕರ್‌ ಕಲಾತ್ಮಕ ಜಿಮ್ನಾಸ್ಟಿಕ್ಸ್‌ನಲ್ಲಿ ಅದ್ಭುತ ಸಾಮರ್ಥ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಈ ವಿಭಾಗದಲ್ಲಿ ತರಬೇತಿ ಪಡೆಯಲು ಅಗತ್ಯ ಸೌಲಭ್ಯಗಳು ಇರದಿದ್ದರೂ ದೀಪಾ ಶ್ರೇಷ್ಠ ಸಾಧನೆ ಪ್ರದರ್ಶಿಸಿದ್ದಾರೆ. ಮೂಲ ಸೌಕರ್ಯಗಳು ಅಥವಾ ಸೌಲಭ್ಯಗಳ ಕೊರತೆ ಬಗ್ಗೆ ದೀಪಾ ಎಲ್ಲಿಯೂ ಮಾತನಾಡಿಲ್ಲ.  120 ಕೋಟಿ ಜನಸಂಖ್ಯೆಯ ದೇಶಬಾಂಧವರು ಬೆರಳೆಣಿಕೆಯಷ್ಟು ಪದಕ ಗಳಿಸಿದ್ದನ್ನೇ ಸಂಭ್ರಮಾಚರಣೆ ಮಾಡುವುದನ್ನು ಬ್ರಿಟನ್ನಿನ ಪತ್ರಕರ್ತ ಪಿಯರ್ಸ್‌ ಮಾರ್ಗನ್‌ ಲೇವಡಿ ಮಾಡಿ ನಮ್ಮ ಅಹಂಗೆ ಗಾಸಿ ಮಾಡಿದ್ದಾರೆ. ಜಲಿಯನ್ ವಾಲಾಬಾಗ್‌ ಹತ್ಯಾಕಾಂಡ ಅಥವಾ ರಾಬರ್ಟ್‌ ಕ್ಲೈವ್‌ ವಿಚಾರಣೆ ಬಗ್ಗೆ ವಿವರಣೆ ನೀಡುವಂತೆ ಯಾರಾದರೂ ಅವರನ್ನು ಪ್ರಶ್ನಿಸಬಹುದಾಗಿತ್ತು. ನನ್ನಿಂದಲೂ ಅದು ಸಾಧ್ಯವಾಗಲಿಲ್ಲ. ಆದರೆ, ನನಗಿಂತಲೂ ಹೆಚ್ಚು ಕ್ರೀಡಾಭಿಮಾನಿಯಾಗಿರುವ ನನ್ನ ಕಿರಿಯ ಸಹೋದ್ಯೋಗಿಯೊಬ್ಬಳು ಈ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಳು. ಪದಕಗಳನ್ನು ಕಳೆದುಕೊಳ್ಳುವುದು ಎಂದರೆ ಏನರ್ಥ ಎಂದು ಆಕೆ ನನ್ನನ್ನು ಪ್ರಶ್ನಿಸಿದ್ದಳು. ಆಕೆಯ ವಾದದಲ್ಲಿಯೂ ಹುರುಳಿತ್ತು. ಪದಕಗಳು ಯಾವುದೇ ಬಣ್ಣದಲ್ಲಿ ಇರಲಿ ಅವುಗಳನ್ನು ಗೆಲ್ಲಲೇಬೇಕು.ಪಂದ್ಯವೊಂದರಲ್ಲಿ ಸೋತಾಗ ಕಂಚು ಅಥವಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಕಳೆದುಕೊಂಡ ಪದಕದ ಬಗ್ಗೆ ಹೆಚ್ಚು ಚರ್ಚಿಸಬಾರದು. ಆದರೆ, ನಾವು ಆ ಬಗ್ಗೆಯೇ ಹೆಚ್ಚು ಮಾತನಾಡಿದ್ದೇವೆ. ಹಲವಾರು ಪ್ರತಿಕೂಲಗಳು ಮತ್ತು  ಪ್ರತಿಯೊಂದನ್ನೂ ಹಗುರವಾಗಿ ಪರಿಗಣಿಸುವ ವ್ಯವಸ್ಥೆ ಮಧ್ಯೆಯೂ ನಮ್ಮ ಕ್ರೀಡಾಪಟುಗಳು ಕೆಲ ಪದಕಗಳನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.ಪಿ.ವಿ.ಸಿಂಧು ಅವರ ಕೋಚ್‌ ಗೋಪಿಚಂದ್‌ ಮಾತ್ರ ಹೆಚ್ಚು ಪ್ರಜ್ಞಾಪೂರ್ವಕವಾಗಿ ಮಾತನಾಡಿದ್ದಾರೆ. ತಮ್ಮ ಶಿಷ್ಯೆಯ ಸಾಧನೆಯ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಖಾಸಗಿ ಟಿ.ವಿ. ಚಾನೆಲ್‌ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ‘ಸಿಂಧು ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾಗಿರುವುದಕ್ಕೆ ನನಗೂ ನಿರಾಶೆಯಾಯಿತು. ದೊರೆತಿದ್ದ ಅವಕಾಶವೊಂದು ನಮ್ಮ ಕೈತಪ್ಪಿ ಹೋಯಿತು’ ಎಂದು ಅಭಿಪ್ರಾಯಪಟ್ಟಿದ್ದರು.  ನಮ್ಮೆಲ್ಲ ಕ್ರೀಡಾಪಟುಗಳ ಸಾಮಾನ್ಯ ಸಾಧನೆಯ ಹೊರತಾಗಿಯೂ ಅವರು ಬ್ಯಾಡ್ಮಿಂಟನ್‌  ಚಾಂಪಿಯನ್‌ಗಳನ್ನು ತಯಾರಿಸುವುದರಲ್ಲಿ ತಮ್ಮೆಲ್ಲ ಗಮನ ಕೇಂದ್ರೀಕರಿಸಿದ್ದಾರೆ. ಕ್ರೀಡೆ ಎನ್ನುವುದು ವಿಶಿಷ್ಟ ಕ್ಷೇತ್ರವಾಗಿದೆ, ಇಲ್ಲಿ ಜಾಗತಿಕ ಸ್ಪರ್ಧೆ ಇರುತ್ತದೆ.ಕ್ರೀಡೆಗೆ ಸಂಬಂಧಿಸಿದಂತೆಯೇ ಮಾತನಾಡುವುದಾದರೆ, ಕ್ರಿಕೆಟ್‌ ಲೋಕದಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ಇದ್ದೇವೆ.  ಕ್ರಿಕೆಟ್‌ ಪಟುಗಳಿಗಾಗಿ ಅತ್ಯುತ್ತಮ ಸೌಲಭ್ಯಗಳು ನಮ್ಮಲ್ಲಿವೆ. 2004ರಲ್ಲಿ ಸಿಡ್ನಿಯಲ್ಲಿ ನಡೆದ ಕ್ರಿಕೆಟ್‌ ಟೆಸ್ಟ್‌ ಪಂದ್ಯದ 5ನೇ ದಿನ ವಿಕೆಟ್‌ ಕೀಪರ್‌ ಪಾರ್ಥಿವ್‌  ಪಟೇಲ್‌ ಕ್ಯಾಚ್‌ ಮತ್ತು ಸ್ಟಂಪಿಂಗ್‌ ಪ್ರಯತ್ನಗಳಲ್ಲಿ ವಿಫಲರಾಗಿ, ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ವಾ ಅವರ ವಿದಾಯದ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣರಾಗಿದ್ದರು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವ ಸಾಧ್ಯತೆ ಕೈತಪ್ಪುವಂತೆ ಮಾಡಿದ್ದರು.ನಮ್ಮ ಸುದ್ದಿ ಮನೆಯಲ್ಲಿ ಕೆಲವರು ಈ ಬಗ್ಗೆ ಸಾಕಷ್ಟು ಸಿಡಿಮಿಡಿಗೊಂಡಿದ್ದರು. ಆಗ ನನ್ನ ಸಹೋದ್ಯೋಗಿಯೊಬ್ಬ, 18 ವರ್ಷದ ಪಟೇಲ್‌ ಅವರ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿದ್ದ. ಪಟೇಲ್‌ ಅವರ ವಯಸ್ಸು ಏನೇ ಇರಲಿ, ಅವರು ಪ್ರಬುದ್ಧ ತಂಡದ ಜತೆ ಆಟವಾಡುತ್ತಿದ್ದರಿಂದ ಆ ಮಾನದಂಡದ  ಪ್ರಕಾರ ಅವರ ಆಟದ ವೈಖರಿ ಅಳೆಯಲಾಗುತ್ತಿತ್ತೇ ಹೊರತು ವಯಸ್ಸಿನ ಕಾರಣಕ್ಕೆ ರಿಯಾಯಿತಿ  ನೀಡಬೇಕಾಗಿರಲಿಲ್ಲ. ಪಟೇಲ್‌ ಅವರು ತಂಡದಲ್ಲಿ ಮುಂದುವರೆದ ಕಾರಣಕ್ಕೆ ಇನ್ನೊಬ್ಬ ಯುವ ಆಟಗಾರ ಎಡಗೈ ಸ್ಪಿನ್ನರ್‌ ಮುರಳಿ ಕಾರ್ತಿಕ್‌ ಅವರ ಟೆಸ್ಟ್‌ ಬದುಕನ್ನು ಹಾಳು ಮಾಡಿದ್ದರು. ಕಾರ್ತಿಕ್‌ 18 ವರ್ಷದವರಾಗಿದ್ದರೂ, ದೊಡ್ಡ ಮಟ್ಟದ ಕ್ರಿಕೆಟ್‌ ಪಂದ್ಯಗಳಲ್ಲಿ ವಿಕೆಟ್‌ ಕೀಪಿಂಗ್‌ ಅನ್ನು ಸಮರ್ಥವಾಗಿಯೇ ಮಾಡುತ್ತಿದ್ದರು. ಆದಾಗ್ಯೂ ಅವರ ಈ ಸಾಧನೆ ಅವರಿಗೆ ದೊಡ್ಡವರ ತಂಡದಲ್ಲಿ ಆಡಲು ಹೆಚ್ಚು ಅವಕಾಶಗಳನ್ನೇ ತಂದುಕೊಡಲಿಲ್ಲ.ಜೀವನದ ಎಲ್ಲ ಹಂತಗಳಲ್ಲಿ ಸಾಧಾರಣ ಮಟ್ಟದ ಸಾಧನೆಗೆ ತೃಪ್ತಿಪಟ್ಟುಕೊಳ್ಳುವುದೇ ಭಾರತದ ಅತಿದೊಡ್ಡ ಪೀಡೆಯಾಗಿ ಪರಿಣಮಿಸಿದೆ. ಶಿಕ್ಷಣ ಕ್ಷೇತ್ರ, ಆಡಳಿತ, ವಿಜ್ಞಾನ, ಉದ್ದಿಮೆ ಮತ್ತು ಸೇನಾ ವಲಯದಲ್ಲಿಯೂ  ತಪ್ಪುಗಳನ್ನು ಹಗುರವಾಗಿ ಪರಿಗಣಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಪಡೆಯುವುದೇ ಶಿಕ್ಷಣ ರಂಗದ ಶ್ರೇಷ್ಠ ಸಾಧನೆ ಎಂದು ನಾವು ಬಣ್ಣಿಸುತ್ತೇವೆ. ಆನಂತರ ಉದ್ಯೋಗ ಖಾತರಿ ನೀಡುವ ಅತ್ಯುತ್ತಮವಾದ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದು, ಮದುವೆಯಾಗುವುದು ಮತ್ತು ಉತ್ತಮ ರೀತಿಯಲ್ಲಿ ಜೀವಿಸುವುದರಲ್ಲಿಯೇ ಬಹುತೇಕರು ತೃಪ್ತಿ– ಸಮಾಧಾನಪಟ್ಟುಕೊಳ್ಳುತ್ತಾರೆ. ಈ ಸೂತ್ರದಲ್ಲಿ ಏನಾದರೂ ಏರುಪೇರು ಉಂಟಾದರೆ ಅದಕ್ಕೆ ಕಾರಣವಾದವರನ್ನೇ ದೂಷಿಸಲಾಗುವುದು.  ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಕೆಲವು ಸ್ಟಾರ್ಟ್‌ಅಪ್‌ಗಳು ಇತ್ತೀಚೆಗೆ ಉದ್ಯೋಗ ನೇಮಕಾತಿ ಕೈಬಿಟ್ಟಿದ್ದವು.ಇದೇ ಕಾರಣಕ್ಕೆ ಐಐಟಿ – ಬಾಂಬೆ ಈ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಜೆಇಇಯಲ್ಲಿ ಇತರರನ್ನು ಹಿಂದಿಕ್ಕುವ ಮೂಲಕ ವಿದ್ಯಾರ್ಥಿಗಳು ಯಾವ ಶ್ರೇಷ್ಠ ಸಾಧನೆ ಮಾಡುತ್ತಾರೆ? ದೇಶದಲ್ಲಿ ಲಭ್ಯ ಇರುವ ಅತ್ಯುತ್ತಮ ಶಿಕ್ಷಣದ ಹೊರತಾಗಿಯೂ ಇವರು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳಾದ ಸೋಪ್‌, ಶಾಂಪೂ, ಹಣ್ಣಿನ ರಸ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಉಪಾಧ್ಯಕ್ಷ ಅಥವಾ ಜನರಲ್‌ ಮ್ಯಾನೇಜರ್‌ ಹುದ್ದೆ ನಿಭಾಯಿಸುವುದರಲ್ಲಿಯೇ ಹೆಚ್ಚು ಜಂಬ ತೋರುತ್ತಾರೆ. ಇವರಿಗೆಲ್ಲ ಈಗ ಪತಂಜಲಿ ಸಂಸ್ಥೆ ಹೊಸ ಸವಾಲನ್ನು ಒಡ್ಡಿದೆ. ಸ್ವಾತಂತ್ರ್ಯಪೂರ್ವದ ತಲೆಮಾರು ಅಥವಾ ನಂತರದ ಭಾಭಾ, ವಿಕ್ರಂ ಸಾರಾಭಾಯಿ ಅವರಂತಹ ನಿಜವಾದ ವಿಜ್ಞಾನಿಗಳು ಅತ್ಯಾಧುನಿಕ ಸಂಶೋಧನೆ, ತಂತ್ರಜ್ಞಾನ, ಪೇಟೆಂಟ್‌ಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹೊರಗುತ್ತಿಗೆ ಹೊರತುಪಡಿಸಿ, ಯಾವುದೇ ಜಾಗತಿಕ ಬ್ರ್ಯಾಂಡ್‌ ಇರದಿದ್ದರೂ ದೈತ್ಯ ಸಾಫ್ಟ್‌ವೇರ್‌ ಸಮರ್ಥ ದೇಶ ಎಂದು ಭಾರತ ತನ್ನನ್ನು ಬಣ್ಣಿಸಿಕೊಳ್ಳುತ್ತಿದೆ.ದೂರಸಂಪರ್ಕ ಮಾರುಕಟ್ಟೆಗೆ ಸಂಬಂಧಿಸಿದಂತೆ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಅತಿದೊಡ್ಡ ಬಳಕೆದಾರ ದೇಶವಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ, ಪ್ರತಿ ವರ್ಷ ಐಐಟಿಗಳಿಂದ ಹೊರ ಬರುವ ಸಾವಿರಾರು ಪ್ರತಿಭಾನ್ವಿತರು, ಎಂಜಿನಿಯರಿಂಗ್ ಕಾಲೇಜುಗಳ ಲಕ್ಷಾಂತರ ಪದವೀಧರರ ಪೈಕಿ ಯಾರೊಬ್ಬರೂ  ಮೊಬೈಲ್‌ ಮಾದರಿಯೊಂದನ್ನು ವಿನ್ಯಾಸ ಮಾಡಿದ, ಸಂಶೋಧಿಸಿದ, ಪೇಟೆಂಟ್‌ ಪಡೆದ ಒಂದೇ ಒಂದು ನಿದರ್ಶನ ನಮ್ಮಲ್ಲಿ ಇಲ್ಲ. ಈ ವಿಷಯದಲ್ಲಿ ಚೀನಾ ಮತ್ತು ಕೊರಿಯಾದ ಎಂಜಿನಿಯರ್‌ಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ, ಭಾರತೀಯರಾದ ನಾವು ಉದ್ಯೋಗ ಸಿಗುತ್ತಿದ್ದಂತೆ ಅದನ್ನೇ ದೊಡ್ಡ ಸಾಧನೆ ಎಂಬಂತೆ ಸಂಭ್ರಮಿಸಿ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುತ್ತೇವೆ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಕ್ಷಿಪಣಿ ತಂತ್ರಜ್ಞರಾಗಿ, ವಿಜ್ಞಾನಿಯಾಗಿ ಭಾರತೀಯರ ಪಾಲಿಗೆ  ನಿರಂತರವಾಗಿ ಸ್ಫೂರ್ತಿ ನೀಡುವ ಆದರ್ಶ   ವ್ಯಕ್ತಿಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ತನ್ನ ಅಂತರಿಕ್ಷ ಕಾರ್ಯಕ್ರಮಗಳಿಗೆ ಈಗಲೂ ಪಿಎಸ್‌ಎಲ್‌ವಿ ತಂತ್ರಜ್ಞಾನ ನೆಚ್ಚಿಕೊಂಡಿದೆ. ಪಾಶ್ಚಿಮಾತ್ಯ ದೇಶಗಳ ತಂತ್ರಜ್ಞಾನದ ನೆರವು ಅಸಹಕಾರ ಮತ್ತು ನಿರ್ಬಂಧಗಳ ಹೊರತಾಗಿಯೂ ಇಸ್ರೊ ಉತ್ತಮ ಸಾಧನೆ ಮಾಡಿದ್ದರೂ, ಇತರ ದೇಶಗಳು ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನಡೆದಿರುವುದನ್ನು ಅಲ್ಲಗಳೆಯುವಂತಿಲ್ಲ.ಒಲಿಂಪಿಕ್ಸ್‌ ಪದಕಗಳ ಪಟ್ಟಿಯಲ್ಲಿ ವಿವಿಧ ದೇಶಗಳು ಮುಂಚೂಣಿಯಲ್ಲಿ ಮತ್ತು ಭಾರತ ಕೊನೆಯಲ್ಲಿ ಇದೆ.  ಪೇಟೆಂಟ್ ವಿಷಯದಲ್ಲಿಯೂ ಇದೇ ಬಗೆಯ ಪಟ್ಟಿ ಸಿದ್ಧಪಡಿಸಿದರೆ, ನಮ್ಮ ಎಂಜಿನಿಯರುಗಳು ಮತ್ತು ವಿಜ್ಞಾನ ಪದವೀಧರರು ಭಾರತವನ್ನು ಮುಂಚೂಣಿಗೆ ಕೊಂಡೊಯ್ಯಬಲ್ಲರು. ಆದರೆ, ಅವರೆಲ್ಲ ಹಲವಾರು ಪ್ರತಿಕೂಲಗಳ ಮಧ್ಯೆ ಪದವಿ ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ಪಡೆಯುವುದಕ್ಕೆ ತಮ್ಮ ಹೋರಾಟ ಸೀಮಿತಗೊಳಿಸಿದ್ದಾರೆ. ಅಮೆರಿಕದ ಪತ್ರಕರ್ತ ಪಿ.ಜೆ.ಒರೌರ್ಕೆ ಅವರು ಭಾರತಕ್ಕೆ ಭೇಟಿ ನೀಡಿದ ನಂತರ ಬರೆದ ಪುಸ್ತಕದಲ್ಲಿ ಉಲ್ಲೇಖಿಸಿರುವ ಸಂಗತಿ ಇಲ್ಲಿ ನನಗೆ ನೆನಪಾಗುತ್ತದೆ. ಕೋಲ್ಕತ್ತದಿಂದ ಪ್ರಕಟವಾಗುವ ‘ದ ಟೆಲಿಗ್ರಾಫ್‌’ನ ಮುಖಪುಟದಲ್ಲಿ ಪ್ರಕಟವಾದ, ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ವಿಜ್ಞಾನ ಪದವೀಧರರನ್ನು ಹೊಂದಿರುವ ಸುದ್ದಿಯತ್ತ ಅವರು ಗಮನ ಸೆಳೆದಿದ್ದಾರೆ.ಕೋಲ್ಕತ್ತದ ಜನರಲ್‌ ಪೋಸ್ಟ್‌ ಆಫೀಸ್‌ ಸುತ್ತಮುತ್ತ ಅವರು ತಿರುಗಾಡಿದಾಗ ಅಲ್ಲಿ ಸುಶಿಕ್ಷಿತರು, ಅಶಿಕ್ಷಿತರಿಗೆ ಪತ್ರ ಬರೆದು ಕೊಡುವುದನ್ನು ಕಂಡು ದಂಗಾಗಿದ್ದರು. ವಿಶ್ವದ ಅತಿದೊಡ್ಡ ವಿಜ್ಞಾನ ಪದವೀಧರರನ್ನು ಹೊಂದಿರುವ ದೇಶದಲ್ಲಿ  ಇತರರಿಗಾಗಿ ಪತ್ರ ಬರೆಯುವುದರ ಮೂಲಕವೇ ಜೀವನ ನಿರ್ವಹಿಸುತ್ತಿರುವವರೂ ಇರುವುದು ಏಕೆಂದು ಅವರು ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ನಮ್ಮಲ್ಲಿ  ಅನೇಕ ಅಶಿಕ್ಷಿತರು ಇದ್ದರೂ ನಾವು ಹಲವಾರು ವಿಜ್ಞಾನ ಪದವೀಧರರನ್ನೂ ಹೊಂದಿದ್ದೇವೆ ಎಂದು ಹೇಳುವ ಮೂಲಕ ಅವರ ಪ್ರಶ್ನೆಗೆ ನಾವು ಉತ್ತರ ನೀಡಬಹುದು.ದಿನನಿತ್ಯದ ಬದುಕಿನಲ್ಲಿ ಇಂತಹ ಹಲವಾರು ನಿದರ್ಶನಗಳು ಕಂಡು ಬರುತ್ತವೆ. ಅವುಗಳ ಪೈಕಿ ಕಾರ್ಗಿಲ್‌ ಯುದ್ಧ ನನ್ನ ಗಮನವನ್ನು ಹೆಚ್ಚಾಗಿ ಸೆಳೆದಿತ್ತು. ಯುದ್ಧದ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಎದುರಾಗಿತ್ತು. ‘ನಮ್ಮಲ್ಲಿ ಲಭ್ಯ ಇರುವ ಶಸ್ತ್ರಾಸ್ತ್ರಗಳೊಂದಿಗೆ ನಾವು ಶತ್ರುಪಾಳಯವನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ’ ಎಂದು ಅಂದಿನ ಸೇನಾ ಮುಖ್ಯಸ್ಥ ವಿ.ಪಿ.ಮಲಿಕ್‌ ಭರವಸೆ ನೀಡಿದ್ದರು. ಮದ್ದುಗುಂಡು ಮತ್ತಿತರ ಶಸ್ತ್ರಾಸ್ತ್ರಗಳ ಕೊರತೆ ಏನೇ ಇರಲಿ, ಕೊನೆಗೂ ಗೆಲುವು ನಮ್ಮದಾಗಿತ್ತು.ಈಗ ಮತ್ತೆ ಕ್ರೀಡೆಗಳಿಗೆ ಮರಳಿ ಬರೋಣ. ಇಬ್ಬರು ಪದಕ ವಿಜೇತರೂ ಸೇರಿದಂತೆ ಏಳು ಮಂದಿ ಅತ್ಯುತ್ತಮ ಸಾಧನೆ ತೋರಿದವರು ತಮ್ಮ ಎದುರಾಳಿಗಳಿಗಿಂತ ಹೆಚ್ಚು ಸಾಧನೆ ಮಾಡಬಹುದಾಗಿತ್ತು. ಇನ್ನಷ್ಟು ಶ್ರೇಷ್ಠ ಸಾಧನೆ ತೋರಲು ಅವಕಾಶಗಳೂ ಇದ್ದವು. ವಿಶ್ವದ 10ನೇ ಸಂಖ್ಯೆಯ ಆಟಗಾರ್ತಿ, ವಿಶ್ವದ ನಂಬರ್‌  2 ಆಟಗಾರ್ತಿಯನ್ನು ಸೋಲಿಸಿ, ಅಂತಿಮ ಪಂದ್ಯದಲ್ಲಿ 1ನೇ ಕ್ರಮಾಂಕದ ಎದುರಾಳಿ ಜತೆ ಸ್ಪರ್ಧೆಗಿಳಿದಿದ್ದಳು. ಅಷ್ಟೇನೂ ಪರಿಚಿತಳಲ್ಲದ ಮಹಿಳಾ ಕುಸ್ತಿಪಟು ಕೊನೆಯ 8 ಸೆಕೆಂಡ್‌ಗಳಲ್ಲಿ 0–5 ಸ್ಕೋರ್‌ ಅನ್ನು ತಿರುಗು ಮುರುಗು ಮಾಡಿದ್ದಳು. ಜಿಮ್ನಾಸ್ಟಿಕ್ಸ್‌ನಲ್ಲಿ 8ನೇ ಸ್ಥಾನದಲ್ಲಿ ಇದ್ದವಳು ಅಂತಿಮ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದಳು. ಇವರೆಲ್ಲ ಕ್ರೀಡೆಯ ಜಾಗತಿಕ ವೇದಿಕೆಯಾದ ಒಲಿಂಪಿಕ್ಸ್‌ನಲ್ಲಿ ತಮ್ಮ ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು.ಆದರೆ, ಇವರೆಲ್ಲ ತರಬೇತಿ ಸಂದರ್ಭದಲ್ಲಿ ತಮಗೆ ಸೌಲಭ್ಯಗಳ ಕೊರತೆಯಾಗಿತ್ತು ಎಂದು ದೂರಿದ್ದು ಯಾರೊಬ್ಬರ ಕಿವಿಗೂ ಬಿದ್ದಿಲ್ಲ. ಫಿಸಿಯೊ ಗೈರುಹಾಜರಿ ಬಗ್ಗೆಯೂ ದೀಪಾ ಕರ್ಮಾಕರ್‌ ಆರೋಪ ಮಾಡಿರಲಿಲ್ಲ. ತಾವು ಅಂತಿಮ ಸುತ್ತಿನಲ್ಲಿ ಚಿನ್ನ ಗೆಲ್ಲಲಿಲ್ಲವಲ್ಲ, ನಾವು ಇನ್ನಷ್ಟು ಉತ್ತಮ ಸಾಧನೆ ಮಾಡಬಹುದಿತ್ತಲ್ಲ ಎನ್ನುವುದೊಂದೇ ಅವರ ನೋವಾಗಿತ್ತು ಎಂದು ನಾನು ಖಚಿತವಾಗಿ ಹೇಳಬಲ್ಲೆ.

 

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)