ಮಂಗಳವಾರ, ಮಾರ್ಚ್ 2, 2021
31 °C

ಮತೀ(ಠೀ)ಯ ಧ್ರುವೀಕರಣದ ಅಪಾಯಕಾರಿ ಹಾದಿ

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಮತೀ(ಠೀ)ಯ ಧ್ರುವೀಕರಣದ ಅಪಾಯಕಾರಿ ಹಾದಿ

ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುತ್ತೇವೆ. ಕಳೆದ ಭಾನುವಾರ ತಮ್ಮ ಮನೆಗೆ ಕರೆದಿದ್ದ ಲಿಂಗಾಯತ ಸ್ವಾಮಿಗಳಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಾಗಿ ನಮಸ್ಕರಿಸುವಾಗ ತೆಗೆದ ಚಿತ್ರ ಇಂಥ ಸಾವಿರ ಪದಗಳಿಗೆ ಸಮನಾದುದು.`ಲಿಂಗಾಯತ ಸ್ವಾಮಿಗಳು ತಮ್ಮ ಮನೆಗೆ ಬಂದುದು ಒಂದು ಸುದ್ದಿಯಾಗಬೇಕು ಮತ್ತು ಚಿತ್ರವಾಗಬೇಕು~ ಎಂದು ಪರಮೇಶ್ವರ್ ಬಯಸಿದ್ದರಲ್ಲಿ ಒಂದು ರಾಜಕೀಯ ಉದ್ದೇಶವಿದೆ. ಬಾಗಿ ನಮಸ್ಕಾರ ಮಾಡುವುದರಲ್ಲಿಯೂ ಅದೇ ಉದ್ದೇಶವಿದೆ. ಪರಮೇಶ್ವರ್ ಬೆಳೆದು ಬಂದ ಬಗೆ, ಅವರ ವಿದೇಶ ವಿದ್ಯಾಭ್ಯಾಸ, ನಂಬಿಕೆ ಯಾವುದೂ ಹೀಗೆ ಸ್ವಾಮಿಗಳಿಗೆ ಬಾಗಿ ನಮಸ್ಕರಿಸುವುದಕ್ಕೆ ಪೂರಕವಾಗಿ ಇಲ್ಲ.ಆದರೆ, ಹೀಗೆ `ಶರಣಾಗದೇ~ ವಿಧಿಯಿಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಒಬ್ಬ ನಾಯಕನ ದುರಂತ ಇದು; ಕಷ್ಟ ಇದು. ಪರಮೇಶ್ವರ್ ಅವರ ಮೇಲೆ ತಮ್ಮ ಪಕ್ಷವನ್ನು ಅಧಿಕಾರಕ್ಕೆ  ತರುವ ಹೊಣೆ ಇದೆ. ಆ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸಬೇಕಿದೆ. ಅದನ್ನು ನಿಭಾಯಿಸುವ ಹಾದಿಯಲ್ಲಿ ಪರಮೇಶ್ವರ್ ಇಂಥ ರಾಜಿಗಳನ್ನೆಲ್ಲ ಮಾಡಿಕೊಳ್ಳಬೇಕಾಗಿದೆ.ಕೆಲವೇ ವರ್ಷಗಳ ಹಿಂದೆ, ಅದೇಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವವರೆಗೆ ಸ್ವಾಮಿಗಳ ಮೇಲೆ, ಮಠಗಳ ಮೇಲೆ ಇಷ್ಟೆಲ್ಲ ಅವಲಂಬಿಸಬೇಕಾದ ಅಗತ್ಯವಿರಲಿಲ್ಲ. ಮಠಗಳಿಗೂ, ಸರ್ಕಾರಕ್ಕೂ ಒಂದು ಸಂಬಂಧ ಎಂಬುದು ಇತ್ತು. ಆದರೆ, ಅದು ರಹಸ್ಯವಾಗಿತ್ತು.ಹೀಗೆ ಜಗಜ್ಜಾಹೀರು ಆಗಿರಲಿಲ್ಲ. ಹಿಂದಿನ ಸರ್ಕಾರಗಳೂ ಮಠಗಳಿಗೆ ಭೂಮಿ, ಕಾಣಿ ಕೊಟ್ಟಿರಲಿಲ್ಲ ಎಂದು ಅಲ್ಲ. ಕೊಟ್ಟಿದ್ದುವು. ಆದರೆ, ಯಾವ ಸರ್ಕಾರವೂ ಮಠಗಳಿಗೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಿರಲಿಲ್ಲ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಟ್ಟ ಮೊದಲು ಇಂಥ ನಿರ್ಧಾರ ತೆಗೆದುಕೊಂಡು ಸರ್ಕಾರ ಮತ್ತು ಮಠಗಳ ನಡುವಿನ ಸಂಬಂಧಕ್ಕೆ ಒಂದು ಅಧಿಕೃತ ಮುದ್ರೆಯನ್ನು ಒತ್ತಿದರು. ಆ ಮೂಲಕ ಮಠಗಳಿಗೆ ಸರ್ಕಾರದ ಮೇಲೆ ಒಂದು ನಿಯಂತ್ರಣ ಶಕ್ತಿಯನ್ನೂ ಕೊಟ್ಟರು.ಕಳೆದ ಮೂರು ವರ್ಷಗಳಲ್ಲಿ ಈ ನಿಯಂತ್ರಣ ಎಷ್ಟು ದೂರ ಹೋಗಿದೆ ಎಂದರೆ ಕೆಲವರು ಮಠಾಧೀಶರು ಈ ಸರ್ಕಾರದಲ್ಲಿ ಯಾರು ಮಂತ್ರಿಗಳಾಗಬೇಕು ಎಂಬುದನ್ನೂ ತೀರ್ಮಾನಿಸಿದ್ದಾರೆ. ಅದನ್ನು ಮುಖ್ಯಮಂತ್ರಿಗಳು ಪಾಲಿಸಿದ್ದಾರೆ.ಈಗ ರಾಜ್ಯದಲ್ಲಿ ಮತೀ(ಠೀ)ಯ ಧ್ರುವೀಕರಣ ಆಗಿದೆ. ಲಿಂಗಾಯತರು ಬಿಜೆಪಿ ಜತೆಗಿದ್ದಾರೆ. ಒಕ್ಕಲಿಗರು ಜೆ.ಡಿ (ಎಸ್) ಜತೆಗಿದ್ದಾರೆ. ಅಥವಾ ಬಹುತೇಕ ಲಿಂಗಾಯತರು ಬಿಜೆಪಿ ಜತೆಗಿದ್ದಾರೆ. ಹಾಗೆಯೇ ಬಹುತೇಕ ಒಕ್ಕಲಿಗರು ಜೆ.ಡಿ (ಎಸ್) ಜತೆಗಿದ್ದಾರೆ.ಇಷ್ಟೆಲ್ಲ ಸುರಕ್ಷಿತವಾಗಿ ಮಾತನಾಡಬೇಕಾದ ಅಗತ್ಯವೇನೂ ಇಲ್ಲ. ಏಕೆಂದರೆ ಚುನಾವಣೆ ಫಲಿತಾಂಶಗಳು ಅದನ್ನು ಸ್ಪಷ್ಟವಾಗಿ ಬಿಂಬಿಸುತ್ತಿವೆ;  ಅಲ್ಲೊಂದು ಇಲ್ಲೊಂದು ಅಪವಾದ ಇದ್ದರೂ. ಈ ಮತೀ(ಠೀ)ಯ ಧ್ರುವೀಕರಣ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಈ ಎರಡು ಪ್ರಬಲ ಸಮುದಾಯಗಳ ಪೈಕಿ ಒಂದರ ಬೆಂಬಲ ಇಲ್ಲದೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಕಾಂಗ್ರೆಸ್ಸಿಗೆ ಮನದಟ್ಟಾಗಿದೆ. ಬರೀ ಎರಡು ದೊಡ್ಡ ಸಮುದಾಯಗಳು ಮಾತ್ರವಲ್ಲ ಯಡಿಯೂರಪ್ಪನವರು ಇದುವರೆಗೆ ಕಾಂಗ್ರೆಸ್ಸಿನ ಮತಪೆಟ್ಟಿಗೆ ಎಂದೇ ಭಾವಿಸಲಾಗಿದ್ದ ಪರಿಶಿಷ್ಟ ಜಾತಿ ವರ್ಗಗಳ ಮತಗಳಿಗೂ ಕೈ ಹಾಕಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಸ್ಪೃಶ್ಯ ದಲಿತರನ್ನು ಅವರು ಒಲಿಸಿಕೊಂಡಿದ್ದಾರೆ.ಪರಿಶಿಷ್ಟ ವರ್ಗಗಳ ಮತಗಳ ಮೇಲೆ ಶ್ರೀರಾಮುಲು ಅವರನ್ನು ಮುಂದೆ ಇಟ್ಟುಕೊಂಡು ರೆಡ್ಡಿ ಸೋದರರು ಹಿಡಿತ ಇಟ್ಟುಕೊಂಡಿದ್ದಾರೆ. ಹೀಗೆಲ್ಲ ಆಗಿ ಕಾಂಗ್ರೆಸ್ಸಿನ ಮತ ಬುನಾದಿ ಕರಗುತ್ತಿದೆ.  ಕುರುಬ ಮತದಾರರು ಕೂಡ ಸಿದ್ದರಾಮಯ್ಯ ಅವರ ಹಿಂದೆ ಬಲವಾಗಿ ನಿಂತಿದ್ದಾರೆ ಎಂದು ಖಚಿತವಾಗಿ ಹೇಳುವ ಸ್ಥಿತಿಯಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು `ದೂರ~ ಎಂದು ಆ ಸಮುದಾಯಕ್ಕೆ ಅನಿಸುತ್ತಿರಬಹುದು.ಕುರುಬ ಸಮುದಾಯದವರು ಕೂಡ ಲಿಂಗಾಯತ ಅಥವಾ ಒಕ್ಕಲಿಗ ಮತದಾರರ ಜತೆಗೆ ಹೋಗುವಂಥವರು. ಸಿದ್ದರಾಮಯ್ಯ ಅವರಲ್ಲಿ ಇರುವ ಗೊಂದಲ ಆ ಸಮುದಾಯದಲ್ಲಿಯೂ ಇರಬಹುದು. ಪರಮೇಶ್ವರ್ ಅವರ ಕಷ್ಟ  ಏನು ಎಂದು ಹೇಳಲು ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಿಲ್ಲ ಎನಿಸುತ್ತದೆ.ಅವರು ಮತ್ತೆ ಹೊಸದಾಗಿ ಪಕ್ಷವನ್ನು ಕಟ್ಟಬೇಕಿದೆ. ದೇವರಾಜ ಅರಸು ಪಕ್ಷವನ್ನು ಕೆಳಗಿನಿಂದ ಕಟ್ಟಿದ್ದರು. ಅಂಥ ನಾಯಕರು ಈಗ ಯಾರೂ ಇಲ್ಲ. ಬಹುಶಃ ಮೇಲಿನಿಂದ ಕಟ್ಟುವುದು ಸುಲಭ ಎಂದು ಎಲ್ಲರಿಗೂ ಅನಿಸುತ್ತಿರಬಹುದು! ಪರಮೇಶ್ವರ್, ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ಪಾದಪೂಜೆ ಮಾಡಿರುವುದು ಒಂದು ರೀತಿಯಲ್ಲಿ ಮೇಲಿನಿಂದ ಪಕ್ಷವನ್ನು ಕಟ್ಟುವ ಕೆಲಸ. ಅದು ಯಾವ ಫಲ ಕೊಡುತ್ತದೆ ಎಂದು ಈಗಲೇ ಹೇಳುವುದು ಕಷ್ಟ.ಆದರೆ, ಎಲ್ಲ ರಾಜಕೀಯ ಪಕ್ಷಗಳಿಗೆ ಯಡಿಯೂರಪ್ಪ ಇಂಥ ಅನಿವಾರ್ಯತೆಯನ್ನು ತಂದು ಇಟ್ಟುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾದುದು. ಮಠಾಧೀಶರು ಈಗ ಸಂವಿಧಾನೇತರ ಶಕ್ತಿಗಳಾಗಿ ಪರಿವರ್ತನೆಯಾಗಿ ಬಿಟ್ಟಿದ್ದಾರೆ. ಅವರೇ ಸರ್ಕಾರದ ಆಗು ಹೋಗುಗಳನ್ನು ನಿಯಂತ್ರಿಸುತ್ತಿದ್ದಾರೆ.ಯಡಿಯೂರಪ್ಪ ಮಂಜುನಾಥನ ಸನ್ನಿಧಿಗೆ ಹೋಗಿ ಪ್ರಮಾಣ ಮಾಡುತ್ತೇನೆ ಎಂದು ತೀರ್ಮಾನ ಮಾಡುವುದು ಕೂಡ ಮಠಗಳು, ದೇವಸ್ಥಾನಗಳು ಈ ಸರ್ಕಾರದ ಮನಸ್ಸನ್ನು ಆಳುತ್ತಿರುವುದಕ್ಕೆ ಒಂದು ಸಂಕೇತ. ಭಕ್ತಿ ವೈಯಕ್ತಿಕವಾದುದು. ಯಾರು ಬೇಕಾದವರು ತಮಗೆ ಬೇಕಾದ  ದೇವಸ್ಥಾನಕ್ಕೆ, ಮಠಕ್ಕೆ  ಹೋಗಿ ತಮ್ಮ ಭಕ್ತಿ, ಶ್ರದ್ಧೆ ತೋರಿಸಿ ಬರಬಹುದು.ಅದಕ್ಕೆ ಅಭ್ಯಂತರವಿಲ್ಲ. ಆದರೆ, ಆಳುವ ಪ್ರಭುವಿಗೆ ಮತಧರ್ಮದ ಎಲ್ಲೆ ಕಟ್ಟು ಇರಬಾರದು. ಆತನಿಗೆ ಎಲ್ಲ ಧರ್ಮಗಳು, ಮತಗಳು  ಸಮಾನ. ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರಪ್ರಸಾದರು ಕಾಶಿಯಲ್ಲಿ ಬ್ರಾಹ್ಮಣರ ಪಾದಪೂಜೆ ಮಾಡಿದ್ದನ್ನು ರಾಮಮನೋಹರ ಲೋಹಿಯಾ ಇದೇ ಕಾರಣಕ್ಕಾಗಿ ವಿರೋಧ ಮಾಡಿದ್ದರು. ಆಗ ಕಾಶಿಯಲ್ಲಿ ಒಬ್ಬ ಬ್ರಾಹ್ಮಣ, ಪ್ರಸಾದರಿಂದ ಪಾದ ಪೂಜೆ ಮಾಡಿಸಿಕೊಳ್ಳಲು ನಿರಾಕರಿಸಿದ್ದ.ಈಗ ಇಂಥದನ್ನೆಲ್ಲ ವಿರೋಧಿಸುವ ರಾಜಕಾರಣಿಗಳೂ ಇಲ್ಲ, `ಬ್ರಾಹ್ಮಣ~ರೂ ಇಲ್ಲ. ರಾಜಕಾರಣಿಗಳಿಗೆ ಓಲೈಕೆ  ಅನಿವಾರ್ಯವಾಗಿದ್ದರೆ, ಓಲೈಸಿಕೊಳ್ಳುವುದನ್ನು ಇಷ್ಟಪಡುವ ಮನಃಸ್ಥಿತಿ ಮಠಾಧೀಶರಲ್ಲಿ ಬಲಿತಿದೆ.ಹಾಗೆಂದು ನಾನು ಮಠಾಧೀಶರು ಮಾಡಿದ ಸಾಮಾಜಿಕ ಸೇವೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಿಲ್ಲ. ವಿಜಾಪುರ ಜಿಲ್ಲೆಯ ನನ್ನ ಊರು ಮುದ್ದೇಬಿಹಾಳದಲ್ಲಿ 60ರ ದಶಕದಲ್ಲಿ ಬಂಥನಾಳ ಶಿವಯೋಗಿಗಳು ಸ್ಥಳೀಯ ದಾನಿಗಳಿಂದ ಒಂದು ಹೈಸ್ಕೂಲು, ಕಾಲೇಜನ್ನು ಸ್ಥಾಪಿಸದೇ ಇದ್ದರೆ ನನ್ನಂಥ ಲಕ್ಷಾಂತರ ವಿದ್ಯಾರ್ಥಿಗಳು ಇದ್ದ ಊರಿನಲ್ಲಿಯೇ ವಿದ್ಯೆ ಸಂಪಾದಿಸಲು ಆಗುತ್ತಿರಲಿಲ್ಲ.ನಮಗೆಲ್ಲ ಧಾರವಾಡಕ್ಕೆ ಹೋಗಿ ಕಲಿಯಲು ಶಕ್ತಿ ಇರಲಿಲ್ಲ. ನಮ್ಮ ಊರಿನ ಬೋರ್ಡಿಂಗ್‌ಗೆ ಅಯ್ಯನವರು ಪ್ರತಿ ಮನೆಯಿಂದ `ಭಿಕ್ಷಾಂದೇಹಿ~ ಎಂದು ಹಿಡಿ ಹಿಟ್ಟು ಸಂಗ್ರಹಿಸುತ್ತಿದ್ದರು. ಮನೆ ಮನೆಯಿಂದ ಸಂಗ್ರಹಿಸಿದ ಹಿಟ್ಟನ್ನು ರೊಟ್ಟಿ ಮಾಡಿ  ಪರವೂರುಗಳಿಂದ ಬಂದ ಬಡ ವಿದ್ಯಾರ್ಥಿಗಳಿಗೆ ಬಡಿಸುತ್ತಿದ್ದರು.ನನಗೆ ತಿಳಿದ ಮಟ್ಟಿಗೆ ಇಂಥ ಶಿಕ್ಷಣ ಮತ್ತು ಅನ್ನ ದಾಸೋಹ ಕರ್ನಾಟಕದ ವಿಶೇಷ. ಇದರ ಹಿಂದೆ ಬಸವಣ್ಣನ ಆದರ್ಶ ಇತ್ತು.  ಈಗಲೂ ಅನೇಕ ಮಠಗಳು ಇಂಥದೇ ಕೆಲಸವನ್ನು ಮಾಡುತ್ತಿವೆ.ಆದರೆ, ಮಠಗಳ ಆಶ್ರಯದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳು ವಾಣಿಜ್ಯೀಕರಣಗೊಂಡಿವೆ. ಶಿಕ್ಷಣ ಸಂಸ್ಥೆಗಳ ವ್ಯಾಪ್ತಿ ದೊಡ್ಡದಾಗುತ್ತ ನಡೆದಂತೆ ಮಠಾಧೀಶರು ಅತಿ ದೊಡ್ಡ ಭೂ ಒಡೆಯರೂ ಆಗುತ್ತಿದ್ದಾರೆ. ಅವರ ಅಧಿಕಾರದ, ಪ್ರಭಾವದ ವ್ಯಾಪ್ತಿಯೂ ಹೆಚ್ಚುತ್ತಿದೆ. ಈಗ, ರಾಜ್ಯದ ಬಿಜೆಪಿ ಸರ್ಕಾರ ಮಠಗಳಿಗೆ ನೇರವಾಗಿ ಹಣದ ದೇಣಿಗೆ ನೀಡುವ ಮೂಲಕ ಈ ಪ್ರಭಾವಕ್ಕೆ ಅಧಿಕೃತ ಮುದ್ರೆಯನ್ನು ಒತ್ತಿದೆ. ಯಡಿಯೂರಪ್ಪನವರಿಗೆ ಮತ್ತು ಅವರ ಪಕ್ಷಕ್ಕೆ ಮಠಗಳು ಮತ್ತು ಸರ್ಕಾರದ ನಡುವೆ ಇಂಥ ನೇರ ಸಂಬಂಧವೇ ಬೇಕಿತ್ತು ಅನಿಸುತ್ತದೆ.ಅದನ್ನು ಅವರು ಸಾಧಿಸಿದ್ದಾರೆ. ಈಗ ಉಳಿದ ರಾಜಕೀಯ ಪಕ್ಷಗಳಿಗೆ  ಅದನ್ನು ಮುಂದುವರಿಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಇದುವರೆಗೆ ಆಯಾ ಸಮುದಾಯದ ಜನರು ಮತ್ತು ಸರ್ಕಾರದ ನಡುವೆ ಇದ್ದ ಸಂಬಂಧಕ್ಕೆ ಬದಲಾಗಿ ಅದು ಆಯಾ ಸಮುದಾಯದ ಮಠಗಳು ಮತ್ತು ಸರ್ಕಾರದ ನಡುವಿನ ಸಂಬಂಧ ಎನ್ನುವಂತೆ ಆಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಸಲ್ಲದ ಬೆಳವಣಿಗೆ. ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾದ ವಿದ್ಯಮಾನ.ಪರಮೇಶ್ವರ್ ಅವರಿಗೆ ಅಥವಾ ಪರಮೇಶ್ವರ್ ಅವರ ಮನೆಗೆ ಲಿಂಗಾಯತ ಸ್ವಾಮಿಗಳು ಬಂದಿದ್ದಾಗ ಜತೆಗಿದ್ದ ಪ್ರೊ.ಬಿ.ಕೆ.ಚಂದ್ರಶೇಖರ್ ಅವರಿಗೆ ಇದೆಲ್ಲ ಗೊತ್ತಿಲ್ಲ ಎಂದಲ್ಲ. ಆದರೆ, ಕಾಂಗ್ರೆಸ್ ಮತ್ತು ಲಿಂಗಾಯತರ ನಡುವೆ ಹಳಸಿದ ಸಂಬಂಧವನ್ನು ಪುನಃ ಸ್ಥಾಪಿಸುವುದು ಅವರಿಗೆ ಅಗತ್ಯವಾಗಿದೆ. ಕಾಂಗ್ರೆಸ್ ಮತ್ತು ಲಿಂಗಾಯತರ ನಡುವೆ ಸಂಬಂಧ ಮೊದಲ ಬಾರಿ ಹಳಸಿದ್ದು ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ.ಎಲ್.ಜಿ.ಹಾವನೂರು ಅವರ ನೇತೃತ್ವದಲ್ಲಿ ಅರಸು ಅವರು ಹಿಂದುಳಿದ ವರ್ಗಗಳ ಆಯೋಗ ನೇಮಿಸಿದ್ದರು. ಹಾವನೂರರು ಲಿಂಗಾಯತರನ್ನು ಮುಂದುವರಿದ ವರ್ಗ ಎಂದು ಪರಿಗಣಿಸಿದರು. ಆಯೋಗದ ವರದಿ ವಿಧಾನಸಭೆಯಲ್ಲಿ ಚರ್ಚೆಗೆ ಬಂದಾಗ ಭೀಮಣ್ಣ ಖಂಡ್ರೆಯವರು ವರದಿಯ ಪ್ರತಿಗೆ ಸದನದಲ್ಲಿಯೇ ಬೆಂಕಿ ಹಚ್ಚಿದ್ದರು. ಖಂಡ್ರೆ ಅವರು ಆಗಲೂ ಕಾಂಗ್ರೆಸ್ಸಿನಲ್ಲಿ ಇದ್ದರು. ಈಗಲೂ ಇದ್ದಾರೆ.ಆದರೆ ಅವರು ಆಗ ಹಾವನೂರು ವರದಿಗೆ ಮಾತ್ರ ಬೆಂಕಿ ಹಚ್ಚಲಿಲ್ಲ, ಲಿಂಗಾಯತರ ಮನಸ್ಸಿಗೂ ಕಿಚ್ಚು ಹಚ್ಚಿದರು. (ಹಾವನೂರು ವರದಿ ಲಿಂಗಾಯತರಿಗೆ ಮಾಡಿದ ಆಘಾತವೇನು ಎಂದು ಗೊತ್ತಿದ್ದೇ ಎಚ್.ಡಿ.ದೇವೇಗೌಡರು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ವೆಂಕಟಸ್ವಾಮಿ ಆಯೋಗದ ಶಿಫಾರಸುಗಳನ್ನು ಹಾದಿ-ಬೀದಿಗಳಲ್ಲಿ ವಿರೋಧಿಸಿದರು. ವೆಂಕಟಸ್ವಾಮಿ ಆಯೋಗ, ಒಕ್ಕಲಿಗರನ್ನು ಹಿಂದುಳಿದ ವರ್ಗಗಳಿಂದ ಹೊರಗೆ ಇಟ್ಟಿತ್ತು.ಈ ಹೋರಾಟದ ಮೂಲಕ ದೇವೇಗೌಡರು ತಾವು ಒಕ್ಕಲಿಗರ ಏಕೈಕ ನಾಯಕ ಎಂಬುದನ್ನೂ ಸ್ಥಾಪಿಸಿದರು.) 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಕಿತ್ತು ಹಾಕಿದ ರಾಜೀವ ಗಾಂಧಿ ಎರಡನೇ  ಸಾರಿ ಲಿಂಗಾಯತರಿಗೆ ಆಳವಾದ ಗಾಯ ಮಾಡಿದರು.ಈ ಗಾಯಗಳು ಗೊತ್ತಿದ್ದೇ ಯಡಿಯೂರಪ್ಪ ಲಿಂಗಾಯತರನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ. ಕಾಂಗ್ರೆಸ್ ತೆಕ್ಕೆಯಲ್ಲಿ ಇದ್ದ ಘಟಾನುಘಟಿ ಲಿಂಗಾಯತ ನಾಯಕರನ್ನು ತಮ್ಮ ಪಕ್ಷದ ತೆಕ್ಕೆಗೆ ಬರಮಾಡಿಕೊಂಡಿದ್ದಾರೆ. ನೇರವಾಗಿ ಲಿಂಗಾಯತ ಮಠ ಮಾನ್ಯಗಳಿಗೇ ಹಣ ಹಂಚಿದ್ದಾರೆ.ತಮ್ಮ ಸರ್ಕಾರದ ವ್ಯವಹಾರಗಳಲ್ಲಿ `ಹಸ್ತಕ್ಷೇಪ~ ಮಾಡಲೂ ಬಿಟ್ಟಿದ್ದಾರೆ. ವಿರೋಧ ಪಕ್ಷಗಳು ಎಂಥ ಒತ್ತಡಕ್ಕೆ ಸಿಲುಕಿವೆ ಎಂದರೆ ಅವೂ ಬಹಿರಂಗವಾಗಿ ಮಠಾಧೀಶರನ್ನು ಓಲೈಸುವ ಅನಿವಾರ್ಯತೆಗೆ ಸಿಲುಕಿವೆ. ಪರಮೇಶ್ವರ್ ಅವರು ಅಂಥ ಒಂದು ಪ್ರಯತ್ನಕ್ಕೆ ಬಹಿರಂಗವಾಗಿಯೇ ಕೈ ಹಾಕಿದ್ದಾರೆ.ಅವರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ತುಮಕೂರಿಗೆ ಹೋಗಿ ಶಿವಕುಮಾರಸ್ವಾಮಿಗಳ `ಆಶೀರ್ವಾದ~ ಪಡೆದಿದ್ದರು. ಈಗ ಅದರ ಮುಂದುವರಿದ ಭಾಗವಾಗಿ ತಮ್ಮ ಮನೆಗೇ ಮಠಾಧೀಶರನ್ನು ಕರೆಸಿಕೊಂಡಿದ್ದಾರೆ. ಯಡಿಯೂರಪ್ಪ ಪ್ರಾರಂಭಿಸಿದ  `ರಾಜಕೀಯ~ವನ್ನು ಟೀಕಿಸುತ್ತಲೇ ಪರಮೇಶ್ವರ್ ಅವರೂ ಅದೇ ರಾಜಕೀಯವನ್ನು ಮಾಡುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆಯನ್ನು ದುರ್ಬಲಗೊಳಿಸಿದಂತೆ.ಆದರೆ, ಇದನ್ನು ಬಿಟ್ಟು ಅವರಿಗೆ  ಬೇರೆ ದಾರಿ ಇದ್ದಂತೆ ಕಾಣುವುದಿಲ್ಲ. ಇದು ರಾಜಕೀಯ ಪಕ್ಷಗಳಿಗಿಂತ ಜನರು ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಪ್ರಶ್ನೆ. ಏಕೆಂದರೆ ಅಂತಿಮವಾಗಿ ಪ್ರಜಾಪ್ರಭುತ್ವ ಇರಬೇಕಾದುದು ಜನರಿಗೆ, ಜನರಿಂದ ಮತ್ತು ಜನರಿಗಾಗಿ.

                                                                      

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.