ಶುಕ್ರವಾರ, ಜೂನ್ 25, 2021
29 °C

ಮುಳ್ಳ ಹಾಸಿಗೆ ಮೇಲೆ ಕಮಲದ ಪಕ್ಷ

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಮುಳ್ಳ ಹಾಸಿಗೆ ಮೇಲೆ ಕಮಲದ ಪಕ್ಷ

ಇದು ಸ್ವಭಾವದ ಸಮಸ್ಯೆ, ನಾಯಿಯ ಬಾಲದ ಹಾಗೆ. ಬಾಲವನ್ನು ಸೀದಾ ಮಾಡಬೇಕೆಂದು ಅದಕ್ಕೆ ಕೊಳವೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೆಗೆದರೆ ಮತ್ತೆ ಅದು ಡೊಂಕಾಗಿ ಬಿಡುತ್ತದೆ.ಬಿಜೆಪಿ ನಾಯಕರ ಸ್ವಭಾವವೂ ಹಾಗೆಯೇ ಆಗಿದೆ. ಮೊನ್ನೆ ಮೊನ್ನೆ ಬಿಜೆಪಿಯ ಅಗ್ರ ನಾಯಕರನ್ನೆಲ್ಲ ಆರ್‌ಎಸ್‌ಎಸ್ ಮುಖಂಡರು ಕರೆದು ಪಾಠ ಹೇಳಿದ್ದರು. ಮೂವತ್ತು ವರ್ಷಗಳ ಹಿಂದೆ ಈಗಿನ ನಾಯಕರೆಲ್ಲ ಹೇಗೆ `ಪಾದಚಾರಿ ಗಿರಾಕಿ~ಗಳಾಗಿದ್ದರು ಎಂದು ನೆನಪಿಸಿದ್ದರು. ಈ ಪಾಠದಿಂದ ಒಂದೇ ಸಾರಿ ಜ್ಞಾನೋದಯವಾದಂತೆ ಅಗ್ರ ನಾಯಕರು ತಪ್ಪನ್ನು ತಿದ್ದಿಕೊಳ್ಳುವ ಮಾತು ಆಡಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಂತೂ `ತಪ್ಪಾಗಿದೆ~ ಎಂದು ಬಹಿರಂಗವಾಗಿಯೇ ಜನರ ಕ್ಷಮೆ ಯಾಚಿಸಿದ್ದರು.ಬಿ.ಎಸ್.ಯಡಿಯೂರಪ್ಪನವರು ಕ್ಷಮೆ ಕೇಳಿರಲಿಲ್ಲ, ಆದರೆ `ತಪ್ಪಾಗಿದೆ ತಿದ್ದಿಕೊಳ್ಳುತ್ತೇವೆ~ ಎಂದಿದ್ದರು. ಇದಾಗಿ ಕೇವಲ ಮೂರು ತಿಂಗಳಾಗಿದೆ ಅಷ್ಟೆ. ಮತ್ತೆ ಮೂವರೂ ಅಗ್ರ ನಾಯಕರು ಬೀದಿ ಜಗಳದಲ್ಲಿ ತಲ್ಲೆನರಾಗಿದ್ದಾರೆ. ಒಬ್ಬರ ಕತ್ತಿಗೆ ಮತ್ತೊಬ್ಬರು ಕೈ ಹಾಕಿದ್ದಾರೆ. ಒಬ್ಬರ ವಿರುದ್ಧ  ಮತ್ತೊಬ್ಬರು ಯಾವ ಎಗ್ಗು ಸಂಕೋಚವಿಲ್ಲದೆ ದಾಳಿ ಮಾಡುತ್ತಿದ್ದಾರೆ.ಈಶ್ವರಪ್ಪ, ಯಡಿಯೂರಪ್ಪ ಮತ್ತು ಸದಾನಂದಗೌಡರಿಗೆ ಆರ್‌ಎಸ್‌ಎಸ್ ಮುಖಂಡರು ಮೂರು ತಿಂಗಳ ಹಿಂದೆ ಹೇಳಿದ  ಇನ್ನೊಂದು ಮುಖ್ಯ ಮಾತು ಮಾಧ್ಯಮಗಳ ಮುಂದೆ ಪಕ್ಷದ ವಿಚಾರಗಳನ್ನು ಚರ್ಚೆ ಮಾಡಬೇಡಿ ಎಂದು. ಈಗ ಏನಾಗುತ್ತಿದೆ? ಪಕ್ಷದ ಕಾರ್ಯಕಾರಿಣಿ ಸಭೆ ಸೇರಿ ಎಷ್ಟು ದಿನಗಳಾಯಿತು ಎಂದು ಯಾರಿಗಾದರೂ ನೆನಪು ಇದೆಯೇ? ಕೋರ್ ಕಮಿಟಿ ಎಂದು ಏನೋ ಮಾಡಿದ್ದರಲ್ಲ; ಅದರ ಸಭೆ ಎಂದಾದರೂ ನಡೆದಿದೆಯೇ? ಬಿಜೆಪಿ ನಾಯಕರಿಗೆ ಅಂಥ ಸಭೆಯ ಅಗತ್ಯವೇ ಇಲ್ಲ. ಇವರು ಹೋಗಿ ಬಂದಲ್ಲೆಲ್ಲ ಎದುರಾಗುವ ಮಾಧ್ಯಮಗಳ ಮುಂದೆಯೇ ಎಲ್ಲವೂ ಚರ್ಚೆ ಆಗುತ್ತದೆ; ತೀರ್ಮಾನವೂ ಆಗಿ ಬಿಡುತ್ತದೆ.

 

ಹಾಗಿರುವಾಗ ಕಾರ್ಯಕಾರಿಣಿಯ, ಕೋರ್ ಕಮಿಟಿಯ ಸಭೆ ಕರೆಯುವ ಅಗತ್ಯವಾದರೂ ಏನು? ಲೋಕಾಯುಕ್ತ ವರದಿ ಆಧರಿಸಿ ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ಕೈ ಬಿಡುತ್ತಿದ್ದಂತೆಯೇ ಮುಖ್ಯಮಂತ್ರಿಗಳು, `ಇದು ಕೇವಲ ಒಂದು ಪ್ರಕರಣ. ಇನ್ನೂ ಎಂಟು ಪ್ರಕರಣ ಅವರ ಮೇಲೆ ಇವೆ~ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟರು. ಅದರಿಂದ ಏನು ಪರಿಣಾಮ ಆದೀತು ಎಂದು ಅವರು ಯೋಚಿಸುವುದಿಲ್ಲ. ಲೋಕಾಯುಕ್ತ ಉರುಳಿನಿಂದ ಪಾರಾದವನು ತಮ್ಮ ಪಕ್ಷದ ನಾಯಕ, ಆತ ತನ್ನನ್ನು ಮುಖ್ಯಮಂತ್ರಿ ಮಾಡಿದವನು ಎಂಬುದೂ ಅವರ ನೆನಪಿನಲ್ಲಿ ಇರಲಿಲ್ಲ.ಮುಖ್ಯಮಂತ್ರಿ ಹಾಗೆ ಹೇಳಿದ ತಕ್ಷಣ ಇತ್ತ ಯಡಿಯೂರಪ್ಪನವರು ಉಡುಪಿ-ಚಿಕ್ಕಮಗಳೂರು ಚುನಾವಣೆ ಪ್ರಚಾರಕ್ಕೆ ಹೋಗಬಾರದು ಎಂದು ತೀರ್ಮಾನ ಮಾಡಿದರು. `ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಹೋದರೆ ಪಾಪ, ಮುಖ್ಯಮಂತ್ರಿಗೆ ಮುಜುಗರ ಆಗುತ್ತದೆಯಲ್ಲವೇ? ಅವರ ಪ್ರಕಾರ ನನ್ನ ವಿರುದ್ಧ ಇನ್ನೂ ಎಂಟು ಪ್ರಕರಣ ಇವೆಯಲ್ಲ?~ಎಂದು ಇವರೂ ಮಾಧ್ಯಮಗಳಿಗೆ ಹೇಳಿದರು. ಉಡುಪಿ-ಚಿಕ್ಕಮಗಳೂರಿನಲ್ಲಿ ಸ್ಪರ್ಧೆ ಮಾಡಿದವರು ತಮ್ಮ ಪಕ್ಷದ ಅಭ್ಯರ್ಥಿ. ಅವರನ್ನು ಗೆಲ್ಲಿಸುವುದು ತಮ್ಮ ಕರ್ತವ್ಯ ಎಂದು ಯಡಿಯೂರಪ್ಪ ಅವರಿಗೆ ಅನಿಸಲಿಲ್ಲ. ಸದಾನಂದಗೌಡರಿಗೆ ಪಾಠ ಕಲಿಸಬೇಕು ಎಂದೇ  ಅವರಿಗೆ ಮೊದಲು ಅನಿಸುತ್ತದೆ. ಪಾಠ ಕಲಿಸಲು ಏನೇನು ಮಾಡಬೇಕೋ ಅದನ್ನೆಲ್ಲ ಅವರು ಮಾಡಿಯೂ ಮಾಡುತ್ತಾರೆ. ಅದು ಫಲ ಕೊಡುತ್ತದೆಯೋ ಇಲ್ಲವೋ ಬೇರೆ ವಿಚಾರ. ಆದರೆ, ಉದ್ದೇಶ ಮಾತ್ರ ಪಾಠ ಕಲಿಸುವುದೇ ಆಗಿರುತ್ತದೆ.ಪಕ್ಷದ ಅಧ್ಯಕ್ಷ ಈಶ್ವರಪ್ಪನವರು ತಮ್ಮ ಬಹುಕಾಲದ ಗೆಳೆಯ ಯಡಿಯೂರಪ್ಪ ದೆಹಲಿಗೆ ಹೋಗಿ ಬರುವುದರಿಂದ, ವಿಮಾನ ಕಂಪೆನಿಗಳಿಗೆ ಮಾತ್ರ ಲಾಭ ಎಂದು ಕುಹಕವಾಡುತ್ತಾರೆ. ಅದನ್ನು ಅವರು ಎಲ್ಲಿಯೋ ಖಾಸಗಿಯಾಗಿ ಯಾರ ಜತೆಗೋ ಕುಳಿತಾಗ ಹೇಳುವುದಿಲ್ಲ.

 

ಅದನ್ನೂ ಅವರು ಮಾಧ್ಯಮದ ಮುಂದೆಯೇ ಹೇಳುತ್ತಾರೆ. ಬಹುಶಃ ಅವರಿಗೆ ತಮ್ಮ ಮನಸ್ಸಿನಲ್ಲಿ ಇರುವುದನ್ನು ಮುಚ್ಚಿ ಇಟ್ಟುಕೊಳ್ಳುವ ಇಷ್ಟವಿಲ್ಲ. ಗೊತ್ತಾದರೆ ಆಗಲಿ ಬಿಡಿ ಎಂಬ ಆಸೆಯೇ ಇದ್ದಂತೆ ಅನಿಸುತ್ತದೆ. ಒಂದು ಪಕ್ಷದ ರಾಜ್ಯ ಘಟಕದಲ್ಲಿ ಮೂವರು ಅಗ್ರ ನಾಯಕರೇ ಹೀಗೆ ಬೀದಿಯಲ್ಲಿ ನಿಂತು ಪರಸ್ಪರರ ವಿರುದ್ಧ ಹೇಳಿಕೆ ಕೊಡುತ್ತ ಪರಸ್ಪರರಿಗೆ ಗಾಯ ಮಾಡುತ್ತ ಇದ್ದರೆ ಆ ಪಕ್ಷ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿರಬಹುದು ಎಂದು ಯಾರಾದರೂ ಊಹಿಸಬಹುದು.ಮೂರು ತಿಂಗಳ ಹಿಂದೆ ಆರ್‌ಎಸ್‌ಎಸ್ ನಾಯಕರು ಸಂಧಾನ ಮಾಡಿದಾಗ `ಇದು ಬರೀ ತೇಪೆ ಕೆಲಸ, ಈ ಕದನ ವಿರಾಮ ಇನ್ನೆಷ್ಟು ದಿನ~ ಎಂದು ಎಲ್ಲರೂ ಅಂದುಕೊಂಡಿದ್ದರು.ಹಾಗೆ ಭವಿಷ್ಯ ನುಡಿದವರ ಮಾತೇ ಈಗ ನಿಜವಾಗಿದೆ. ಹೆಗ್ಗಣವನ್ನು ಬಿಲದಲ್ಲಿ ಇಟ್ಟು ಗುದ್ದು ಮುಚ್ಚಿದರೆ ಏನೂ ಪ್ರಯೋಜನವಾಗುವುದಿಲ್ಲ. ಸಮಸ್ಯೆಯ ಮೂಲಕ್ಕೆ ಹೋಗಿ ಅದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಈಗ ಏನಾಗಿದೆಯೋ ಅದೇ ಆಗುತ್ತದೆ. ವಿಚಿತ್ರ ಎಂದರೆ ಆರ್‌ಎಸ್‌ಎಸ್ ನಾಯಕರಿಂದ ಕನಿಷ್ಠ ತೇಪೆ ಹಾಕುವ ಕೆಲಸವಾದರೂ ಆಗಿ ಮೂರು ತಿಂಗಳು ಆಯಿತು.ದೆಹಲಿಯಲ್ಲಿ ಇರುವ ಬಿಜೆಪಿ ಹೈಕಮಾಂಡ್ ನಾಯಕರಿಂದ ಇಂಥದೇ ಒಂದು ಪ್ರಯತ್ನ ಇದುವರೆಗೆ ನಡೆದಿಲ್ಲ. ಅವರು ಯಾರೂ ಬಹಿರಂಗವಾಗಿ ರಾಜ್ಯ ಬಿಜೆಪಿ ನಾಯಕರ ಕಿವಿ ಹಿಂಡುವ ಕೆಲಸ ಮಾಡಿಲ್ಲ. `ನೀವು ಇದೇನು ಮಾಡುತ್ತಿದ್ದೀರಿ? ನಿಮಗೆ ಜನರು ಏಕೆ ಅಧಿಕಾರ ಕೊಟ್ಟಿದ್ದಾರೆ~ ಎಂದು ಕೇಳಿಲ್ಲ. ಗಡ್ಕರಿ, ಪಡ್ಕರಿಯವರಂಥ ನಾಯಕರು ಹೋಗಲಿ ಎಲ್.ಕೆ.ಅಡ್ವಾಣಿಯವರಂಥ ಹಿರಿಯ ನಾಯಕರೂ ಆ ಅಧಿಕಾರ ಕಳೆದುಕೊಂಡಿದ್ದಾರೆಯೇ? ಅವರೇಕೆ ಇಂಥ ಮೌನ ತಾಳಿದ್ದಾರೆ?ಹಿರಿಯ ನಾಯಕರ ಮೌನದ ಪರಿಣಾಮ ಏನಾಗಿದೆ ಎಂದರೆ ಬಿಜೆಪಿ ನಾಯಕರು ಹಾದಿ ಬೀದಿಗಳಲ್ಲಿ ಜಗಳದ ಜತೆಗೆ ಸಮಾವೇಶಗಳನ್ನೂ ಮಾಡುತ್ತಿದ್ದಾರೆ! ಆ ಸಮಾವೇಶದ ಉದ್ದೇಶ ಏನು ಎಂದು ಯಾರಿಗೂ ಗೊತ್ತಿಲ್ಲ. ಕೆಲವರು ಯಡಿಯೂರಪ್ಪನವರ ಅಭಿವೃದ್ಧಿ ಕೆಲಸಗಳಿಗೆ ಅಭಿನಂದನೆ ಎಂದರೆ ಇನ್ನು ಕೆಲವರು ಅವರ ಹುಟ್ಟು ಹಬ್ಬದ ನೆಪ ಹೇಳುತ್ತಾರೆ.

 

ಆದರೆ, ಇಂಥ ಸಮಾವೇಶಗಳಲ್ಲಿ ಏನೋ ಅನಾಹುತ ಆಗಿಬಿಡುತ್ತದೆ ಎಂದೇ ಎಲ್ಲರಿಗೂ ಅನಿಸುತ್ತದೆ. ಮತ್ತೆ ಅದು ಠುಸ್ ಆಗುತ್ತದೆ. ಠುಸ್ ಆಗುವಂತೆ ನಾಯಕರು ಏನೋ ತಂತ್ರ ಹೊಸೆಯುತ್ತಾರೆ. ಹುಬ್ಬಳ್ಳಿ ಸಮಾವೇಶದಲ್ಲಿ ಇಂಥ ಅನಾಹುತ ಆಗುವುದನ್ನು ತಡೆಯಲು ಗೃಹ ಸಚಿವ ಆರ್.ಅಶೋಕ ಅವರ ಮೂಲಕ ಯಡಿಯೂರಪ್ಪನವರಿಗೆ `ಸಂದೇಶ~ ತಲುಪಿಸಲಾಯಿತು. ಏನೋ ಹೇಳಬೇಕಿದ್ದ ಯಡಿಯೂರಪ್ಪನವರು ತಾವೂ ಸೇರಿದಂತೆ ಎಲ್ಲರೂ ಮರೆತು ಬಿಟ್ಟಿದ್ದ ದೀನದಯಾಳ ಉಪಾಧ್ಯಾಯ, ಸಾವರ್ಕರ್, ಗೋಳ್ವಾಲ್ಕರ್ ಅವರ ಹೆಸರುಗಳನ್ನು ಪಠಿಸಿದರು! ಉಳಿದವರು ಯಡಿಯೂರಪ್ಪನವರ ಅಭಿವೃದ್ಧಿ ಕೆಲಸಗಳ ಜಪ ಮಾಡಿದರು!ಅತ್ತ ಯಡಿಯೂರಪ್ಪನವರು ಸಮಾವೇಶ ಮಾಡುತ್ತಿರುವಾಗಲೇ ಇತ್ತ ಸದಾನಂದಗೌಡರ ಅಭಿನಂದನೆಗೆ ಸಮಾವೇಶ ಮಾಡುವ ಮಾತು ಕೇಳಿಬರುತ್ತವೆ. ಹಿಂದುಳಿದ ವರ್ಗಗಳ ಸ್ವಾಮಿಗಳು ಅವರ ಮನೆಗೆ ಬಂದು ಅನುದಾನ ಕೇಳುವ ನೆಪದಲ್ಲಿ ಲಿಂಗಾಯತ ಸ್ವಾಮಿಗಳ ವಿರುದ್ಧದ ವೇದಿಕೆಯನ್ನು ಸಜ್ಜುಗೊಳಿಸುತ್ತಾರೆ!

 

ಯಡಿಯೂರಪ್ಪ ಪರ ಸಮಾವೇಶ ಎಷ್ಟು ನಿರರ್ಥಕವೋ ಸದಾನಂದಗೌಡರ ಪರವಾಗಿ ನಡೆಯಲಿರುವ ಸಮಾವೇಶವೂ ಅಷ್ಟೇ ನಿಷ್ಪ್ರಯೋಜಕ. ಆಡಳಿತ ಪಕ್ಷ ಮಾಡುವ ಕೆಲಸವೇ ಇದು? ಅಲ್ಲ ಎಂದು ಅವರಾರಿಗೂ ಅನಿಸಿಲ್ಲ. ಸದಾನಂದಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಆಡಳಿತವನ್ನು ಹಳಿಗೆ ತರುವ, ಸರ್ಕಾರದ ವರ್ಚಸ್ಸನ್ನು ಮರಳಿ ಗಳಿಸುವ ಮಾತು ಆಡಿದ್ದರು. ಆ ಮಾತು ಅವರಿಗೇ ಮರೆತು ಹೋದಂತೆ ಕಾಣುತ್ತದೆ.

 

ಈಗ ಅವರ ಜತೆಗೆ ಯಾರೂ ಉಳಿದಂತೆ ಕಾಣುವುದಿಲ್ಲ. ನಿನ್ನೆ ಮೊನ್ನೆ ಯಡಿಯೂರಪ್ಪನವರ ಶತ್ರುಗಳ ಹಾಗೆ ಇದ್ದ ಜಗದೀಶ ಶೆಟ್ಟರ್, ಅಶೋಕ ಅವರಂಥ ಹಿರಿಯ ಸಚಿವರೇ ಪಾಳೆಯ ಬದಲಿಸಿ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರು ಬರೀ ಯಡಿಯೂರಪ್ಪನವರನ್ನು ಮಾತ್ರವಲ್ಲ ನೆರೆಮನೆಯ ಶೆಟ್ಟರ್ ಸೇರಿದಂತೆ ಅನೇಕ ಹಳೆಯ ಗೆಳೆಯರನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದೇ ಇದರ ಅರ್ಥ.

 

ಅದನ್ನು ಅವರು ತಿಳಿದು ಮಾಡುತ್ತಿದ್ದಾರೆಯೇ? ಅಥವಾ ಅವರಿಗೆ ಅನುಭವದ ಕೊರತೆಯೇ ಗೊತ್ತಾಗುವುದಿಲ್ಲ. ಅವರಿಗೆ ಪಕ್ಷದ ಜತೆಗಿನ ಸಮೀಕರಣವೇ ಹೊರಟು ಹೋಗಿದೆ. ಉಡುಪಿ-ಚಿಕ್ಕಮಗಳೂರು ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಅವರು ದೇವೇಗೌಡರ ಜತೆಗೆ ಹೆಚ್ಚು ನಿಕಟರಾದರು ಎಂಬ ಭಾವನೆ ಪಕ್ಷದ ವಲಯದಲ್ಲಿಯೇ ಬೆಳೆಯುತ್ತಿದೆ. ಅಲ್ಲಿ ಜೆ.ಡಿ (ಎಸ್) ಅಭ್ಯರ್ಥಿ ಹಾಕಿರುವುದು ಕಾಂಗ್ರೆಸ್ಸಿಗೆ ಅಡಚಣೆ ಮಾಡುವುದಕ್ಕೇ ಹೊರತು ಬಿಜೆಪಿಗೆ ಅಲ್ಲ ಎಂಬ ಮಾತನ್ನು ಕಾಂಗ್ರೆಸ್ಸಿನವರು ಬಹಿರಂಗವಾಗಿಯೇ ಹೇಳಿದರು.

 

ಇದನ್ನು ಜೆ.ಡಿ (ಎಸ್) ಒಪ್ಪದೇ ಇರಬಹುದು. ಮುಂದೆ ಬರುವ ವಿಧಾನಸಭೆ ಚುನಾವಣೆಗೆ ತಯಾರಿ ಮಾಡಲು ಇದು ಒಂದು ವೇದಿಕೆ ಎಂದೂ ಅದು ಹೇಳಬಹುದು. ಈ ಚುನಾವಣೆಯ ಫಲಿತಾಂಶ ಬಂದ ನಂತರ ನಿಜವಾಗಿಯೂ ಏನು ನಡೆಯಿತು ಎಂದು ಗೊತ್ತಾಗುತ್ತದೆ.2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಗಳಿಸಿದ ಮತಪ್ರಮಾಣವೇ ಸದಾನಂದಗೌಡರ ಗೆಲುವಿನ ಅಂತರವಾಗಿತ್ತು. ಆ ಮತಗಳು `ಜಾತ್ಯತೀತ~ ಪಕ್ಷದ ಅಭ್ಯರ್ಥಿಗೆ ಹೋಗಿದ್ದರೆ ಗೌಡರ ಗೆಲುವು ಕಷ್ಟವಾಗುತ್ತಿತ್ತು. ಆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಗೆ ಜೆ.ಡಿ (ಎಸ್) ಬೆಂಬಲ ಕೊಟ್ಟಿತ್ತು!ಸದಾನಂದಗೌಡರಿಗೆ ಈ ಉಪ ಚುನಾವಣೆ ಒಂದು ವೈಯಕ್ತಿಕ ಪ್ರತಿಷ್ಠೆ. ಕೊಪ್ಪಳ ಉಪಚುನಾವಣೆಯನ್ನು ಅವರು ಹೀಗೆ ಪ್ರತಿಷ್ಠೆಯಾಗಿ ತೆಗೆದುಕೊಂಡಿರಲಿಲ್ಲ. `ಇಂಥ ಚುನಾವಣೆಗಳು ಸರ್ಕಾರಕ್ಕೆ ಪ್ರತಿಷ್ಠೆಯಲ್ಲ, ಪಕ್ಷಕ್ಕೆ ಪ್ರತಿಷ್ಠೆ~ ಎಂದು ಅವರು ನುಣುಚಿಕೊಂಡಿದ್ದರು.ಆಗಲೂ ಯಡಿಯೂರಪ್ಪನವರು ಹೀಗೆಯೇ ಆಟ ಆಡಿದ್ದರು. ಈಗ ಅವರು ಹೆಚ್ಚು ಆಟ ಆಡಿದ್ದಾರೆ. ಈಗಲೂ ಸದಾನಂದಗೌಡರು ಪಕ್ಷದ ಹೆಗಲಿಗೆ ಹೊಣೆ ಹಾಕಿ ಸುಮ್ಮನೆ ಇದ್ದು ಬಿಡಬಹುದಿತ್ತು. ಅವರು ತಮ್ಮ ಹೆಗಲ ಮೇಲೆ ಹೊಣೆ ಹಾಕಿಕೊಂಡಿರುವುದಕ್ಕೂ ಅವರ ಕುರ್ಚಿಯ ಮೇಲೆ ಯಡಿಯೂರಪ್ಪ ಈಗ ಕಣ್ಣು ಹಾಕಿರುವುದಕ್ಕೂ ತಾಳೆಯಾಗಿದೆ.ಗಾಳಿಯಲ್ಲಿ ಇರುವ ಸುದ್ದಿಗಳನ್ನು ನಂಬಬೇಕೋ ಬೇಡವೋ ತಿಳಿಯದು. ಆದರೆ, ತೆರೆಯ ಹಿಂದೆ ಬಹಳಷ್ಟು ಬೆಳವಣಿಗೆ ಆಗುತ್ತಿದ್ದಂತಿದೆ. `ಸೋಮವಾರ ಸೇರುವ ಅಧಿವೇಶನದಲ್ಲಿ, ಬಿಜೆಪಿ ಮುಖ್ಯಮಂತ್ರಿ ಬಜೆಟ್ ಮಂಡಿಸುತ್ತಾರೆ~ ಎಂದು ಜನರೆಲ್ಲ ಮಳ್ಳರು ಎನ್ನುವ ಹಾಗೆ ಬಿಜೆಪಿ ನಾಯಕರೇ ಮಗುಂ ಆಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಬಣದ ಮಾತುಗಳು ಇಷ್ಟೇನು ಮಗುಂ ಆಗಿ ಇಲ್ಲ.

 

ಅವರು ಯಡಿಯೂರಪ್ಪನವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಅಥವಾ ಅಂಥ ಮಾತುಗಳು ದಟ್ಟವಾಗಿ ಚಾಲನೆಯಲ್ಲಿ ಇವೆ. ಹುಬ್ಬಳ್ಳಿ ಸಮಾವೇಶದಲ್ಲಿ ಯಡಿಯೂರಪ್ಪನವರಿಗೆ ಅಶೋಕ ಮೂಲಕ ಸಿಕ್ಕ ಸಂದೇಶ ಇದೇ ಎಂದೂ ಅವರು ಹೇಳುತ್ತಿದ್ದಾರೆ.

 

ಉಡುಪಿ- ಚಿಕ್ಕಮಗಳೂರು ಚುನಾವಣೆಯಲ್ಲಿ ಲಿಂಗಾಯತರ ಮತಗಳು ಬಿಜೆಪಿ ಕೈ ತಪ್ಪಬಾರದು ಎಂದು ಸದಾನಂದಗೌಡರ ಬಣ ಈ ಸುದ್ದಿ ಹಬ್ಬಿಸಿದೆ ಎಂದು ಹೇಳುವವರೂ ಇದ್ದಾರೆ. ಆದರೆ, ಯಡಿಯೂರಪ್ಪ ಬಣ ಇಷ್ಟು ಅಮಾಯಕವಾಗಿ ಬಲಿ ಬೀಳುವಂತೆ ಕಾಣುವುದಿಲ್ಲ. ಮುಂದಿನ ಬಜೆಟ್ ಅನ್ನು ಯಾರು ಮಂಡಿಸಿದರೂ ಮುಂದಿನ ದಿನಗಳು ಕಮಲದ ಪಕ್ಷಕ್ಕೆ ಮುಳ್ಳಿನ ಹಾದಿ. ಸರ್ಕಾರದ ಹಾದಿಯಲ್ಲಿ ಈ ಮುಳ್ಳನ್ನು ಯಾರು ಹಾಸುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.