ಬುಧವಾರ, ಏಪ್ರಿಲ್ 14, 2021
29 °C

ವಾಗ್ಮೀಯತೆ ಲಕ್ಷಣ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ತಾವು ಅನೇಕ ಅದ್ಭುತ ಮಾತುಗಾರರ ಭಾಷಣಗಳನ್ನು ಕೇಳಿರಬಹುದು. ಅವರು ಮಾತನಾಡುವ ಶೈಲಿ, ವಿಷಯ ಪ್ರತಿಪಾದನೆ ಮಾಡುವ ರೀತಿ, ಹಾವಭಾವ ಪ್ರದರ್ಶನ ಮನಸ್ಸನ್ನು ಹಿಡಿಯುತ್ತವೆ. ಅವರ ಹಾಗೆ ನಾವೂ ಮಾತನಾಡಬೇಕು ಎನ್ನಿಸುತ್ತದೆ. ಮಾರ್ಟಿನ್ ಲೂಥರ್ ಕಿಂಗ್  ಅವರ ಭಾಷಣ  `ನನಗೊಂದು ಕನಸಿದೆ~  (ಐ ಹಾವ್ ಎ ಡ್ರೀಮ್) ಇಂದಿಗೂ ರೋಮಾಂಚನವನ್ನುಂಟು ಮಾಡುತ್ತದೆ.ಅವರ ಅಂದಿನ ಭಾಷಣ ಅಮೆರಿಕದಲ್ಲಿ ರಾಜಕೀಯ ಸ್ಥಿತ್ಯಂತರಗಳನ್ನೇ ಉಂಟುಮಾಡಿತು. ಈಗಲೂ ಅವರ ಭಾಷಣವನ್ನು ಅಮೆರಿಕೆಯ ಟೆಲಿವಿಷನ್‌ದಲ್ಲಿ ಆಗಾಗ ತೋರಿಸುತ್ತಾರೆ. ಎಷ್ಟೋ ಶಾಲಾ ಮಕ್ಕಳು ಅವರ ಭಾಷಣದ ಪೂರ್ತಿ ಪಾಠವನ್ನು ಕಂಠಸ್ಥ ಮಾಡಿಕೊಂಡಿದ್ದಾರೆ.

 

ಅತ್ಯುತ್ತಮ ಭಾಷಣದ ಪರಿಣಾಮ ಇದು. ನಾವೂ ಅನೇಕ ಉತ್ತಮ ವಾಗ್ಮಿಗಳನ್ನು ನೋಡಿದ್ದೇವೆ. ಅವರ ಈ ಶಕ್ತಿಯ ಗುಟ್ಟೇನು ಎಂದು ಗಮನಿಸಿದರೆ ಒಂದು ವಿಷಯ ತಿಳಿಯುತ್ತದೆ. ಎಲ್ಲ ಶ್ರೇಷ್ಠ ಮಾತುಗಾರರೂ ತುಂಬ ಒಳ್ಳೆಯ ಕೇಳುಗರಾಗಿರುತ್ತಾರೆ. ಯಾರಿಗೆ ಕೇಳಿಸಿಕೊಳ್ಳಲು ತಾಳ್ಮೆ ಇಲ್ಲವೋ ಅವರು ಒಳ್ಳೆಯ ಮಾತುಗಾರ ಆಗಲಾರರು. ಕೆಲ ವರ್ಷಗಳ ಹಿಂದೆ ನಡೆದ ತಮಾಷೆ ಘಟನೆಯೊಂದು ನೆನಪಿಗೆ ಬಂತು.

 

ಒಮ್ಮೆ ಒಂದು ಪ್ರದೇಶದ ಕುದುರೆ ರೇಸ್ ನಡೆಸುವ ಕಂಪನಿಯ ಜನರು ನನ್ನನ್ನು ಅವರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದರು. ನನಗೊಂದು ದುರಭ್ಯಾಸವೆಂದರೆ ಅವರು ಹೇಳಿದ ಸಮಯಕ್ಕೆ ಹೋಗುವುದು. ಅವರು ತಿಳಿಸಿದಂತೆ ಸರಿಯಾಗಿ ಆರು ಗಂಟೆಗೆ ಹೋದೆ. ಬಾಗಿಲಿನಲ್ಲಿ, ಒಳಗೆ ಒಬ್ಬರೂ ಕಾಣಲಿಲ್ಲ.ತಪ್ಪು ಸ್ಥಳಕ್ಕೆ ಬಂದಿದ್ದೇನೋ ಎಂದುಕೊಂಡು ಆಮಂತ್ರಣ ಪತ್ರ ನೋಡಿಕೊಂಡೆ. ಇಲ್ಲ, ವಿಳಾಸ ಸರಿಯಾಗಿತ್ತು. ನಿಧಾನವಾಗಿ ಒಳಗಿನ ಕೊಠಡಿಗೆ ಕಾಲಿಟ್ಟೆ. ಅಲ್ಲಿ ಒಬ್ಬ ಮಹಿಳೆ ಮೂರು ಜನ ಕೂಡುವ ಸೋಫಾದ ತುಂಬ ಕುಳಿತಿದ್ದರು. ಮತ್ತೆ ಬೇರೆ ಕುರ್ಚಿ ಇರಲಿಲ್ಲ. ನಾನೇ ವಿನಯದಿಂದ ನನ್ನ ಪರಿಚಯ ಮಾಡಿಕೊಂಡೆ.

 

ಅವರ ಕಣ್ಣಲ್ಲಿ ಹೊಳಪು ಕಂಡಿತು,  ಓಹೋ, ನೀವೇ ಅಲ್ಲವೇ ಇಂದಿನ ಭಾಷಣಕಾರರು. ಬನ್ನಿ ಕುಳಿತುಕೊಳ್ಳಿ  ಎಂದು ತಮ್ಮ ದೇಹವನ್ನು ಸ್ವಲ್ಪ ಕುಗ್ಗಿಸಲು ಶ್ರಮವಹಿಸಿದರು. ನಾನೂ ಮುಜುಗರದಿಂದ ದೇಹವನ್ನು ಹಿಡಿಮಾಡಿಕೊಂಡು ಅಲ್ಲಿಯೇ ಸೋಫಾದ ತುದಿಯಲ್ಲಿ ಕುಳಿತೆ. ಆಕೆ ಉತ್ಸಾಹದಿಂದ,  ನೀವು ಯಾವ ವಿಷಯದ ಬಗ್ಗೆ ಮಾತನಾಡುತ್ತೀರಿ.  ಎಂದು ಕೇಳಿ ನಾನು ಬಾಯಿ ತೆರೆಯುವ ಮೊದಲೇ,  ಹೇ, ಹೇ ಮತ್ತಾವ ವಿಷಯ, ಕುದುರೆಗಳ ಬಗ್ಗೆ ಅಲ್ಲವೇ.  ಎಂದು ಗಹಗಹಿಸಿ ನಕ್ಕರು.  ನಿಮಗೆ ಕುದುರೆಗಳ ಬಗ್ಗೆ ಗೊತ್ತೇ. ನನ್ನದೂ ನಾಲ್ಕು ಕುದುರೆಗಳು ಇವೆ. ರೇಸ್‌ಗಾಗಿ ಓಡುತ್ತಿವೆ.

 

ಒಂದೊಂದಕ್ಕೂ ಎರಡೆರಡು ಲಕ್ಷ ರೂಪಾಯಿ. ಹಾಗೆ ನೋಡಿದರೆ ಇದೇನೂ ಹೆಚ್ಚಿನ ಬೆಲೆಯಲ್ಲ, ಕೆಲವೊಂದು ಕುದುರೆಗಳ ಬೆಲೆ ಐದು ಲಕ್ಷಕ್ಕೂ ಹೆಚ್ಚಿದೆ... ಅವರ ಮಾತು ಮುಗಿಯುವ ಹಾಗೆಯೇ ತೋರಲಿಲ್ಲ. ನನಗೀಗ ಕುದುರೆಗಳ ಬಗೆಗಿನ ಜ್ಞಾನ ಹೆಚ್ಚಾಗಿತ್ತು. ನನಗೆ ಮಾತನಾಡಲು ಅವಕಾಶವೇ ಇರಲಿಲ್ಲ.ಕೇವಲ,  ಓಹೊ, ಹಾಂ, ಹೌದೇ, ಭಲೇ  ಎನ್ನುವುದು ಮಾತ್ರ ನನಗೆ ದೊರೆತ ಭಾಗ್ಯ. ಅರ್ಧ ತಾಸು ಆಕೆಯ ಮಾತು ನಡೆಯಿತು. ಆ ಹೊತ್ತಿಗೆ ಜನವೆಲ್ಲ ಸೇರಿದರು. ನಂತರ ಸಭೆ ಪ್ರಾರಂಭವಾಯಿತು. ನನಗೆ ಭಾರಿ ಆಶ್ಚರ್ಯ ಕಾದಿತ್ತು. ನನ್ನೊಂದಿಗೆ ಇದುವರೆಗೂ ಮಾತನಾಡಿದ ಮಹಿಳೆಯೇ ನನ್ನನ್ನು ಪರಿಚಯಿಸಲು ನಿಂತುಕೊಂಡರು.ನನ್ನ ಬಗ್ಗೆ ಬಹಳಷ್ಟು ವಿಷಯವನ್ನು ತಪ್ಪು ತಪ್ಪಾಗಿ ಹೇಳುವುದು ಮಾತ್ರವಲ್ಲ, ನನ್ನ ಹೆಸರನ್ನು ತಪ್ಪಾಗಿ ಉಚ್ಚರಿಸಿದರು. ಆದರೆ ಆಕೆ ಕೊನೆಗೆ ಹೇಳಿದ ಮಾತು ಚೆನ್ನಾಗಿತ್ತು. ಇಂದು ನಮಗೆ ಭಾಷಣ ನೀಡಲು ಬಂದ ಅತಿಥಿಯವರು ನನ್ನೊಡನೆ ಅರ್ಧ ತಾಸು ಮಾತನಾಡುತ್ತಿದ್ದರು. ಅವರು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಗೊತ್ತಲ್ಲಾ. ನಾನು ಮಾತೇ ಆಡಿರಲಿಲ್ಲ ಅಥವಾ ಆಕೆ ಮಾತನಾಡುವುದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಆಗ ನನಗೆ ಅರ್ಥವಾಯಿತು, ಚೆನ್ನಾಗಿ ಮಾತನಾಡುವುದೆಂದರೆ ಬಾಯಿಮುಚ್ಚಿಕೊಂಡು ಕೇಳಿಸಿಕೊಳ್ಳುವುದು ಎಂದು. ಇದು ತಮಾಷೆಯ ಮಾತಾದರೂ ತುಂಬ ಸತ್ಯ. ನಾವು ಲಕ್ಷ್ಯವಿಟ್ಟು ಕೇಳಿಸಿಕೊಂಡಷ್ಟು, ಮಾತು ಕಡಿಮೆ ಮಾಡಿ ಕೇಳಿದ್ದನ್ನು ಅರಗಿಸಿಕೊಂಡಷ್ಟೂ ನಾವು ಉತ್ತಮ ಮಾತುಗಾರರಾಗುತ್ತೇವೆ. ಕೇಳಿಸಿಕೊಳ್ಳುವುದು ಮಾತನಾಡುವ ಶಕ್ತಿ ಬೆಳೆಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.