ಸೋಮವಾರ, ಏಪ್ರಿಲ್ 12, 2021
31 °C

ವಿದ್ಯೆ ಬೇಕು, ಸ್ಕೂಲು ಬೇಡ

ಓ.ಎಲ್. ನಾಗಭೂಷಣಸ್ವಾಮಿ Updated:

ಅಕ್ಷರ ಗಾತ್ರ : | |

ವಿದ್ಯೆ ಬೇಕು, ಸ್ಕೂಲು ಬೇಡ

ನಮಗೆ ಪ್ರೀತಿ ಎಂಬ ಪದ ಗೊತ್ತು, ಪ್ರೀತಿ ಗೊತ್ತಿಲ್ಲ; ಸ್ವಾತಂತ್ರ್ಯವೆಂಬ ಪದ ಗೊತ್ತು, ಸ್ವಾತಂತ್ರ್ಯ ಬೇಕಾಗಿಲ್ಲ; ಬದಲಾವಣೆಯ ಬಯಕೆ ಇದೆ, ಸ್ವತಃ ಬದಲಾಗಲು ಯಾರೂ ಸಿದ್ಧರಿಲ್ಲ.ಹೀಗಿರದಿದ್ದರೆ ನಮ್ಮ ಮಕ್ಕಳನ್ನು ಹೀಗೆ ನೋಡಿಕೊಳ್ಳುತಿರಲಿಲ್ಲ, ಅವರ `ಶಿಕ್ಷಣ~ಕ್ಕೆಂದು ನಾವು ಕಟ್ಟಿಕೊಂಡಿರುವ `ಸ್ಕೂಲು~ ಹೀಗೆ ಇರುತ್ತಿರಲಿಲ್ಲ, ನಮ್ಮ ಸಮಾಜ, ಸರ್ಕಾರ ಯಾವುದೂ, ನಾವು ಕೂಡಾ, ಈಗ ಇರುವ ಹಾಗೆ ಇರುತ್ತಿರಲಿಲ್ಲ. ಕವಿ ವರ್ಡ್ಸ್‌ವರ್ತ್‌ನ ಸಾಲುಗಳು ನೆನಪಾಗುತ್ತಿವೆ:
`ಸ್ವರ್ಗ ನಮ್ಮ ಸುತ್ತಲೇ ಇರುವುದು ಬಾಲ್ಯದಲ್ಲಿ/ ಬೆಳೆ ಬೆಳೆದಂತೆ ಸೆರೆಮನೆಯ ನೆರಳು ದಟ್ಟೈಸುವುದು. ಬೆಳೆದು ದೊಡ್ಡವನಾಗುತ್ತ ಆಗುತ್ತ ದರ್ಶನದ ಪ್ರಭೆ ಮಸುಕಾಗುತ್ತ ಆಗುತ್ತ ಸಾಮಾನ್ಯ ದಿನದ ಸಾಮಾನ್ಯ ಬೆಳಕಷ್ಟೆ ಅವನ ಪಾಲಿಗೆ~. ದಿವ್ಯಪ್ರಭೆಯನ್ನು ಮಂಕು ಬೆಳಕಾಗಿಸುವುದೇ ಶಿಕ್ಷಣದ ಉದ್ದೇಶ, ಸ್ಕೂಲಿನ ಪರಮ ಗುರಿ.  ಮಕ್ಕಳಲ್ಲಿ ಪ್ರಶ್ನೆಗಳಿರುವುದಿಲ್ಲ, ಕುತೂಹಲವಿರುತ್ತದೆ. ದೊಡ್ಡವರಲ್ಲಿ ಪ್ರಶ್ನೆಗಳಿರುತ್ತವೆ, ಕುತೂಹಲದ ಬದಲಿಗೆ ಬೇರೆಯವರು ಹುಡುಕಿಕೊಟ್ಟ ಉತ್ತರಗಳನ್ನು ನಂಬುವ ಧಾವಂತವಿರುತ್ತದೆ. ಶಿಕ್ಷಣದ ಉದ್ದೇಶ ಕುತೂಹಲವನ್ನು ಕಡಿಮೆ ಮಾಡಿ ದೊಡ್ಡವರು ಕೊಡುವ ಉತ್ತರಗಳನ್ನು ಒಪ್ಪಿಕೊಳ್ಳುವಂತೆ ಮಕ್ಕಳನ್ನು ಶಿಕ್ಷಿಸುವುದೇ ಅಲ್ಲವೇ.ಒತ್ತಡವಿಲ್ಲದೆ, ಉತ್ತರ ಪಡೆಯಬೇಕೆಂಬ ಧಾವಂತವಿಲ್ಲದೆ, ಸರಿ ತಪ್ಪುಗಳ ಗೋಜಲಿಲ್ಲದೆ, ಪರೀಕ್ಷೆಯ ಆತಂಕವಿಲ್ಲದೆ ಸಹಜ ಕುತೂಹಲದಿಂದ ಮಗು ತಾನು ಕಲಿಯಬೇಕಾದ್ದರಲ್ಲಿ ಶೇಕಡಾ 90ರಷ್ಟನ್ನು ಸ್ಕೂಲಿಗೆ ಸೇರುವ ಮೊದಲೇ ಕಲಿತಿರುತ್ತದೆ.ನಮಗೆ ಮಕ್ಕಳ ಬಗ್ಗೆ ಪ್ರೀತಿ ಇದ್ದರೆ ಆ ತಾಜಾ ಮನಸುಗಳೊಡನೆ, ಜೀವಗಳೊಡನೆ ನಾವು ಹೊಂದಿಕೊಳ್ಳುವುದಕ್ಕೆ ಆಗಬೇಕು. ಅವರ ಕಣ್ಣಿನಿಂದ ಲೋಕವನ್ನು ಕಂಡು ಬೆರಗುಪಡುವುದಕ್ಕೆ ಆಗಬೇಕು.ಆದರೆ ಮಗು ನಮಗೆ, ಅಂದರೆ ದೊಡ್ಡವರಿಗೆ ಹೊಂದಿಕೊಳ್ಳಬೇಕು ಅನ್ನುವುದೇ ನಮ್ಮ ಅಪೇಕ್ಷೆ. ಬೆರಗು ಕಳೆದುಕೊಂಡು, ನಾವು ದಯಪಾಲಿಸುವ ಉತ್ತರಗಳನ್ನು ಒಪ್ಪಿಕೊಂಡು ನಮ್ಮಂತೆ, ಎಲ್ಲರಂತೆ ಆಗಬೇಕು ಮಗು ಎಂದು ಬಯಸುತ್ತೇವೆ.ಶಾಲೆಯಲ್ಲಿ ಕಲಿಯುವ ವಿಷಯ ಯಾವುದೇ ಇರಲಿ ಮಗುವಿನ ಮನಸಿಗೆ ತುಂಬುವ ಭಾಷೆಯ ಸ್ವರೂಪ ಮಾತ್ರ ಒಂದೇ. ಅದು ನಮಗೆ ಗೊತ್ತಿರುವ ಉತ್ತರಗಳನ್ನು ಮಗುವೂ ಹೇಳುವಂತಾಗಲಿ ಎಂದು ರೂಪಿಸಿದ ಪ್ರಶ್ನೆಗಳನ್ನು ಕೇಳುವುದು. ಭಾರತಕ್ಕೆ ಸ್ವಾತಂತ್ರ್ಯ ಯಾವಾಗ ಬಂತು? ಗಂಧಕಾಮ್ಲದ ಗುಣಸ್ವಭಾವಗಳೇನು?ನ್ಯೂಟನ್ನನ ಮೂರನೆಯ ನಿಯಮ ಯಾವುದು? ಅಸಹಾಯಕ ಮಕ್ಕಳು ಉತ್ತರಗಳನ್ನು ಕಲಿತು ಹೇಳುತ್ತವೆ, ಬರೆಯುತ್ತವೆ, ಮರೆಯುತ್ತವೆ. ಸುಮ್ಮನೆ ನೆನಪು ಮಾಡಿಕೊಳ್ಳಿ. ನೀವು ಶಾಲೆ ಕಾಲೇಜಿಗೆ ಹೋದವರಾಗಿದ್ದರೆ ಅಲ್ಲಿ ನಿಮಗೆ ಕಲಿಸಲ್ಪಟ್ಟ ವಿಷಯಗಳಲ್ಲಿ ಎಷ್ಟು ಈಗ ನಿಮ್ಮ ನೆನಪಿನಲ್ಲಿದೆ, ಎಷ್ಟು ನಿಮ್ಮ ಬದುಕಿಗೆ ಒದಗಿ ಬಂದಿದೆ?ನಮ್ಮ ಸಮರ್ಥನಿಗೀಗ ನಾಲ್ಕು ವರ್ಷ ಮುಗಿಯುತ್ತ ಬಂತು. ಕಳೆದ ಸುಮಾರು ಒಂದು ವರ್ಷದಿಂದ ಮನೆಯವರೆಲ್ಲ ಅವನೊಡನೆ ಮಾತನಾಡುವ ರೀತಿಯೇ ಬದಲಾಗಿದೆ. ಸಮರ್ಥನ ಅಮ್ಮ, ಅಪ್ಪ, ನಾನು, ಸಮರ್ಥನ ಅಜ್ಜಿ, ಮಾವಂದಿರು, ಚಿಕ್ಕಪ್ಪಂದಿರು ಎಲ್ಲರೂ ಅವನೊಡನೆ ಬಳಸುವ ವಾಕ್ಯಗಳಲ್ಲಿ ನೂರಕ್ಕೆ ಅರುವತ್ತು ಎಪ್ಪತ್ತರಷ್ಟು ನಿಷೇಧಾರ್ಥದ ವಾಕ್ಯಗಳೇ!ಹೀಗೆ ಮಾಡಬೇಡ, ಅಲ್ಲಿ ಕೂರಬೇಡ, ಸೋಫಾ ಮೇಲೆ ಕುಣಿಯಬೇಡ, ಗಲಾಟೆ ಮಾಡಬೇಡ, ಟಿವಿ ನೋಡಬೇಡ, ಚೂಯಿಂಗ್‌ಗಮ್ ತಿನ್ನಬೇಡ- ನಿಷೇಧಾರ್ಥದ ವಾಕ್ಯಗಳಿಲ್ಲದೆ ಮಕ್ಕಳೊಡನೆ ಮಾತಾಡುವುದು ಎಷ್ಟು ಕಷ್ಟ. ಹುಟ್ಟಿದ ಜೀವ ಸಂಪೂರ್ಣ ಸ್ವತಂತ್ರವಾದ ಮನಸಿನೊಡನೆ ಹುಟ್ಟಿರುತ್ತದೆ. ಭಾಷೆಯನ್ನು ಕಲಿಯುತ್ತ ಕಲಿಯುತ್ತ ಅದರ ಸ್ವಾತಂತ್ರ್ಯ ಇಷ್ಟಿಷ್ಟೆ ಕಳೆದುಕೊಳ್ಳುತ್ತ ಲೋಕಕ್ಕೆ ಹೊಂದಿಕೊಳ್ಳುತ್ತದೆ, ಅಥವ ಹಾಗೆ ನಾವು ಮಾಡುತ್ತೇವೆ.ಕಲಿಯುವುದರ ಬಗ್ಗೆಯೂ ನಮಗೆ ಎಷ್ಟೊಂದು ತಪ್ಪು ಕಲ್ಪನೆಗಳಿವೆ. ಮಕ್ಕಳು ಕಲಿಯಲೆಂದು ಸ್ಕೂಲು ಇರುವುದಲ್ಲ. ಸ್ಕೂಲು ಎಂಬ ಸಂಸ್ಥೆಯ ಅಗತ್ಯಕ್ಕೆ ಮಕ್ಕಳು ಕಚ್ಚಾ ವಸ್ತುಗಳಾಗಿ ಒದಗಿ ಬರುತ್ತವೆ ಅಷ್ಟೆ. ದಿನಕ್ಕೆ ಆರು ಗಂಟೆಯಂತೆ, ವಾರಕ್ಕೆ ಐದು ದಿನದ ಹಾಗೆ, ವರ್ಷಕ್ಕೆ ಹತ್ತು ತಿಂಗಳ ಕಾಲ, ಒಟ್ಟಾರೆ ಹನ್ನೆರಡು ವರ್ಷ ಸ್ಕೂಲು ಅನ್ನುವುದು ಮಗುವಿನ ಜೀವಂತಿಕೆಯನ್ನು ಎಷ್ಟು ಸಾಧ್ಯವೋ ಅಷ್ಟು ನಾಶಮಾಡುತ್ತದೆ.ಶಾಲೆಯಲ್ಲೂ ನಿಷೇಧಗಳದ್ದೇ ಕಾರುಬಾರು. ಮೇಷ್ಟರು ಹೇಳುವವರೆಗೆ ಮಾತಾಡಬಾರದು; ಪ್ರಶ್ನೆ ಕೇಳುವುದಿದ್ದರೆ ಕೈ ಎತ್ತಬೇಕು; ಅನುಮತಿ ಕೊಟ್ಟರೆ ಮಾತಾಡಬೇಕು; ಕಿಟಕಿಯಾಚೆ ನೋಡಬಾರದು; ಪಕ್ಕದ ಮಗುವಿನೊಡನೆ ಮಾತು ನಿಷಿದ್ಧ; ಗಲಾಟೆ ಮಾಡಕೂಡದು- ಎಷ್ಟೊಂದು ನಿಷೇಧಗಳು ಶಾಲೆಯಲ್ಲಿ.ಹನ್ನೆರಡು ವರ್ಷ ಬೆಳೆದ ಮಗು ಕಾಲೇಜಿಗೆ ಬಂದಾಗ ಸ್ವಂತ ಆಲೋಚನೆ ಇಲ್ಲ, ಸ್ವಂತವಾಗಿ ಬರೆಯುವುದಕ್ಕೆ ಬರುವುದಿಲ್ಲ, ವಿಷಯ ಕುರಿತು ಸಂವಾದದಲ್ಲಿ ಭಾಗವಹಿಸುವುದಿಲ್ಲ ಇತ್ಯಾದಿ ಆಕ್ಷೇಪ ಬೇರೆ. ಸ್ವಂತಿಕೆಯನ್ನು ಕಳೆಯುವ ಶಿಸ್ತಿಗೆ ಮಗುವನ್ನು ಒಳಪಡಿಸಿ ಸ್ವಂತಿಕೆ ಇಲ್ಲ ಎಂದು ಬೆಳೆದ ಮಗುವನ್ನು ಆಕ್ಷೇಪಿಸುವುದಕ್ಕಿಂತ ವಿಪರ್ಯಾಸ ಬೇರೆ ಇದೆಯೆ!ನಮ್ಮ ಇಡೀ ಶಿಕ್ಷಣ ಕ್ರಮ, ಇಡೀ ಪರೀಕ್ಷಾ ವ್ಯವಸ್ಥೆ, ಸ್ಕೂಲು, ಕಾಲೇಜು ಇವೆಲ್ಲ ಆತ್ಮವಂಚನೆಯ ತಳಹದಿಯ ಮೇಲೆ ನಿಂತಿವೆ ಅನಿಸುತ್ತದೆ. ಪಾಸು-ಫೇಲು ಅನ್ನುವುದನ್ನೆ ನೋಡಿ. ಜಗತ್ತಿನಾದ್ಯಂತ ನೂರಕ್ಕೆ ಅರುವತ್ತು ಮಕ್ಕಳು ಫೇಲ್ ಆಗುತ್ತಾರೆ. ಇನ್ನೂ ಶೇಕಡಾ ಮೂವತ್ತು ಪಾಸಾಗುತ್ತಾರೆ.ಆದರೆ ನಿಜವಾಗಿ ಅವರಿಗೆ ತಾವು ಪಾಸಾದ ವಿಷಯದಲ್ಲಿ ಏನೂ ನಿಜವಾಗಿ ತಿಳಿದಿರುವುದಿಲ್ಲ. ಯಾರನ್ನೂ ಫೇಲು ಮಾಡಬಾರದು ಅನ್ನುವ ನಿಯಮ ಬೇರೆ. ಮಕ್ಕಳ ಸಾಧನೆಯ ಮಾನದಂಡಗಳಲ್ಲ. ಪಾಸು-ಫೇಲು ಸಾಂಸ್ಥಿಕ ಅಗತ್ಯಗಳು,ಇಡೀ ಜಗತ್ತು ನಡೆಯುತ್ತಿರುವುದೇ ಫೇಲ್ ಆದವರಿಂದ ಅನ್ನಿಸುವುದಿಲ್ಲವೇ!ಮಕ್ಕಳು ಫೇಲ್ ಆಗುವುದಕ್ಕೆ ಅವರಿಗೆ ಬೋರ್ ಆಗುವುದು, ಭಯವಿರುವುದು, ಗೊಂದಲವಿರುವುದು, ತಮ್ಮಿಂದ ಅಪ್ಪ ಅಮ್ಮಂದಿರಿಗೆ ನಿರಾಸೆಯಾಗುವುದೆಂಬ ಆತಂಕ, ಅಳುಕು ಇವೆಲ್ಲ ಕಾರಣಗಳಿರಬಹುದು. ಅಪ್ಪ ಅಮ್ಮಂದಿರ ಅಪೇಕ್ಷೆಗಳ ಮೋಡ ಯಾವಾಗಲೂ ಮಗುವನ್ನು ಕವಿದುಕೊಂಡೇ ಇದ್ದರೆ ಫೇಲ್ ಆಗುವುದು ಸಹಜವಲ್ಲವೇ?ಶಾಲೆಯಲ್ಲಿ ಕಲಿಸುವ ವಿಷಯಗಳು ಕ್ಷುಲ್ಲಕ, ಬೇಸರದ್ದು, ಮಕ್ಕಳ ಶಕ್ತಿ ಸಾಮರ್ಥ್ಯ ಚೈತನ್ಯ ಕೌಶಲಗಳಿಗಿಂತ ತುಂಬ ಕಡಿಮೆ ಮಟ್ಟದ್ದು ಆಗಿರುವಾಗಲೂ ಬೇಸರ ಹುಟ್ಟುತ್ತದೆ. ಶಾಲೆಯಲ್ಲಿ ಕಿವಿಯನ್ನು ತುಂಬುವ ಮನಸ್ಸನ್ನು ಕಿಕ್ಕಿರಿಯುವ ಭಾಷಾ ಪ್ರವಾಹ ಅರ್ಥಹೀನ ಅನಿಸುತ್ತದೆ, ಮಕ್ಕಳಿಗೆ ಏನು ಗೊತ್ತಿದೆಯೋ ಅದಕ್ಕೂ ಶಾಲೆಯ ಭಾಷೆ ತಿಳಿಸಿಕೊಡುವ ಸಂಗತಿಗೂ ಸಂಬಂಧವಿಲ್ಲ, ಅಥವ ತದ್ವಿರುದ್ಧ ಅನಿಸುತ್ತದೆ.ಮಕ್ಕಳು ಶಾಲೆಯಲ್ಲಿ ಮಾತ್ರ ಕಲಿಯುತ್ತಾರೆ, ಅಪ್ಪ ಅಮ್ಮ ಹೇಳಿಕೊಟ್ಟದ್ದನ್ನು ಮಾತ್ರ ಕಲಿಯುತ್ತಾರೆ ಅನ್ನುವುದು ದೊಡ್ಡ ಅಪನಂಬಿಕೆ. ಎಲ್.ಕೆ.ಜಿ. ಶಾಲೆಗೆ ಹೋಗುವ ನಮ್ಮ ಸಮರ್ಥನನ್ನು ಅವರಮ್ಮ ಮೊನ್ನೆ ಕೇಳುತಿದ್ದರು, `ಹಾರ್ಟ್ ಅಂದರೆ ಗೊತ್ತೇನೋ?~.`ಗೊತ್ತು ಮಮ್ಮಿ, ಅದೇ ಕೆಂಪಗಿರುತ್ತೆ, ಬಾಣ ಚುಚ್ಚಿಕೊಂಡಿರುತ್ತೆ, ಐ ಲವ್ ಯು ಅನ್ನುತ್ತಲ್ಲ ಅದು~ ಅನ್ನುವ ಉತ್ತರಕೊಟ್ಟ ಅವನು. ಮಕ್ಕಳು ಏನು ನೋಡುತ್ತಾರೆ, ಏನು ಕಲಿಯುತ್ತಾರೆ, ಹೇಗೆ ಕಲಿಯುತ್ತಾರೆ- ನಮಗೆ ಗೊತ್ತಿಲ್ಲ, ಗೊತ್ತಾಗುವುದು ಸಾಧ್ಯವಿಲ್ಲ.

ಮಕ್ಕಳಿಗೆ ಏನು ಬೇಕು ಎಂದು ದೊಡ್ಡವರು ಭಾವಿಸಿದ್ದೇವೆಯೋ ಅದು ಶಿಕ್ಷಣಕ್ರಮವಾಗಿದೆ. ದೊಡ್ಡವರ ಹೆಮ್ಮೆಯನ್ನು ಪೋಷಿಸುವುದಕ್ಕಾಗಿ ಸ್ಕೂಲುಗಳಿವೆ.

 

ಮಗು ಹೀಗೇ ಬದುಕನ್ನು ನೋಡಬೇಕು, ಹೀಗೇ ಬದುಕನ್ನು ಅರ್ಥಮಾಡಿಕೊಳ್ಳಬೇಕು, ಹೀಗೇ ಆಲೋಚನೆ ಮಾಡಬೇಕು ಎಂದು ತಿದ್ದುವುದಕ್ಕಾಗಿ ಶಿಕ್ಷಣ ಅನ್ನುವ ಸಂಸ್ಥೆ ರೂಪುಗೊಂಡಿದೆ. ಶಿಕ್ಷಣ ಕ್ರಾಂತಿಕಾರಿಯಾಗುವುದಕ್ಕಿಂತ ಮಿಗಿಲಾಗಿ ಸಂಪ್ರದಾಯನಿಷ್ಠವಾಗಿರುವುದೇ ಹೆಚ್ಚು.

 

ಇರುವ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮನಸ್ಸು ತಿದ್ದುವುದೇ ಅದರ ಗುರಿ. ಪ್ರೀತಿ, ಸ್ನೇಹ, ಸಮಾಧಾನಗಳ ಪಾಠ ಹೇಳುತ್ತ ಸ್ಪರ್ಧೆ, ಮತ್ಸರ, ಆಕ್ರೋಶ, ವಂಚನೆಗಳು ಬದುಕಿಗೆ ಅಗತ್ಯ ಅನ್ನುವುದನ್ನು ಸುಪ್ತವಾಗಿ ಮನಸಿನಲ್ಲಿ ತುಂಬುವುದೇ ಶಾಲೆಯ ಭಾಷೆಯ ಲಕ್ಷಣ.ಟಾಲ್ಸ್‌ಟಾಯ್, ರವೀಂದ್ರನಾಥ ಟ್ಯಾಗೋರ್, ವಿನೋಬಾ ಭಾವೆ, ಇವಾನ್ ಇಲಿಚ್, ಜಾನ್ ಸಿ. ಹಾಲ್ಟ್, ನೀಲ್, ಒಬ್ಬಿಬ್ಬರಲ್ಲ ನೂರಾರು ಜನ ಸೂಕ್ಷ್ಮಜ್ಞರು ಶಾಲೆ ಅನ್ನುವ ಸಂಸ್ಥೆಯ ಕೆಡುಕುಗಳ ಬಗ್ಗೆ ಹೇಳಿದ್ದಾರೆ, ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ.ಅಂಥ ಬಲ್ಲವರ ಮಾತಿನ ಸಾರಾಂಶ ಇದು: ವಿದ್ಯೆ ಅನ್ನುವದು ಕುತೂಹಲದಿಂದ ಒಳಗುಮಾಡಿಕೊಂಡು ತನ್ನದಾಗಿಸಿಕೊಂಡದ್ದು, ಶಿಕ್ಷಣ ಅನ್ನುವುದು ಬಲವಂತವಾಗಿ ತುಂಬಿಸಿದ್ದು.ಯಶಸ್ವೀ ಆಸಾಮಿಯನ್ನು ಸೃಷ್ಟಿಸುವುದಕ್ಕಿಂತ ಸಂತೋಷವಾಗಿರುವ ಮನುಷ್ಯರನ್ನು ಸೃಷ್ಟಿಸುವುದು ವಿದ್ಯೆಯ ಗುರಿಯಾಗಬೇಕು. ಹೀಗೆ ಆಗುವುದಕ್ಕೆ ವಿಫಲತೆಯ ಭಯವಿಲ್ಲದೆ ಕುತೂಹಲದಿಂದ ಅರಿಯುವ ಮನಸ್ಸಿಗೆ ಶಕ್ತಿ ತುಂಬಬೇಕು.ಖಲೀಲ್ ಗಿಬ್ರಾನ್‌ನ ಸುಪ್ರಸಿದ್ಧ ಕವಿತೆಯ ಸಾಲು ನೋಡಿ: `ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಬದುಕಿನ ಬಗ್ಗೆ ಬದುಕಿಗೇ ಇರುವ ಹಂಬಲದ ಮಕ್ಕಳು ಅವು. ನಿಮ್ಮ ಮೂಲಕ ಬರುತ್ತಾರೆ, ಆದರೆ ನಿಮ್ಮಿಂದ ಬಂದವರಲ್ಲ; ನಿಮ್ಮಂದಿಗೆ ಇರುತ್ತಾರೆ, ನಿಮ್ಮ ಅಧೀನರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ಕೊಡಬಹುದು, ನಿಮ್ಮ ಆಲೋಚನೆಗಳನ್ನಲ್ಲ. ಮಕ್ಕಳಿಗೆ ಅವರದ್ದೇ ಆಲೋಚನೆಗಳಿವೆ.ಮಕ್ಕಳ ಮೈಯಿಗೊಂದು ಮನೆ ಕೊಡಬಹುದು, ಅವರ ಆತ್ಮಕ್ಕಲ್ಲ. ಮಕ್ಕಳ ಆತ್ಮ ಬದುಕುವುದು ನಾಳೆಗಳಲ್ಲಿ. ನಿಮ್ಮ ಕನಸಿನಲ್ಲೂ ಆ ನಾಳೆಯನ್ನು ನೀವು ಕಾಣಲಾರಿರಿ. ಮಕ್ಕಳಂತೆ ಆಗಲು ಯತ್ನಿಸಬಹುದು ನೀವು, ಅವರನ್ನು ನಿಮ್ಮಂತೆ ಮಾಡಬೇಡಿ. ಬದುಕು ಮುಂದೆ ಸಾಗುವುದೇ ಹೊರತು ಹಿಂದೆ ಹರಿಯುವುದಲ್ಲ, ನಿನ್ನೆಗಳ ಸುಳಿಯಲ್ಲಿ ಸಿಕ್ಕುವುದೂ ಅಲ್ಲ.ನೀವು ಧನುಸ್ಸು, ನಿಮ್ಮ ಮಕ್ಕಳು ಆ ಧನುಸಿಗೆ ಹೂಡಿದ ಬಾಣ. ಹೆದೆ ಸೆಳೆದ ಬಿಲ್ಲುಗಾರ ಅನಂತದಲ್ಲಿರುವ ಬಿಂದುವಿಗೆ ಗುರಿ ಹೂಡಿದ್ದಾನೆ. ಬಾಣ ಅಲ್ಲಿಗೆ ತಲುಪಲೆಂದು ಕಸುವೆಲ್ಲ ಹಾಕಿ ಬಿಲ್ಲು ಬಾಗುವಂತೆ ಎಳೆದಿದ್ದಾನೆ. ಬಿಲ್ಲುಗಾರನ ಕೈಯ ಬಿಲ್ಲಿನಂತೆ ಬಾಗಿ ಆನಂದಪಡಿ. ಹಾರುವ ಬಾಣ ಅವನಿಗಿಷ್ಟ. ಅಂತೆಯೇ ಸ್ಥಿರವಾದ ಧನುಸ್ಸು ಕೂಡಾ~.ಸರ್ಕಾರ, ಶಿಕ್ಷಣ, ಸೈನ್ಯ, ಪೋಲೀಸು, ಸೆರೆಮನೆ, ನ್ಯಾಯಾಲಯ, ಧರ್ಮ, ಆಸ್ಪತ್ರೆ ಇವೆಲ್ಲವೂ ನಾವು ಬಳಸುವ ಭಾಷೆಯಿಂದಲೇ ರೂಪುಗೊಂಡಿರುವ `ಸಂಸ್ಥೆ~ಗಳು, ರಚನೆಗಳು. ಸಂಸ್ಥೆ ಅಂದರೆ ಸ್ಥಾಪಿತವಾದದ್ದು, ನಿಯಮಗಳನ್ನುಳ್ಳದ್ದು, ಸ್ಥಿರವಾದದ್ದು. ಈ ಸಂಸ್ಥೆಗಳೆಂಬ ರಚನೆಗಳೇ ವ್ಯಕ್ತಿತ್ವವನ್ನೂ ರೂಪಿಸುತ್ತವೆ, ಮನುಷ್ಯತ್ವ ಅನ್ನುವುದರ ವ್ಯಾಖ್ಯೆಯನ್ನೂ ನೀಡುತ್ತವೆ.ಇವನ್ನು ಕುರಿತ ಚಿಂತನೆ ಭಾಷೆಯ ತತ್ವದ ಬಲು ಮುಖ್ಯ ಭಾಗ. ಅವನ್ನು ಪರಿಶೀಲಿಸುವುದಕ್ಕೆ ಮುನ್ನುಡಿಯಾಗಿ ಮಕ್ಕಳ ದಿನಾಚರಣೆಯ ಹೊತ್ತಿನಲ್ಲಿ ಈ ವಾರದ ಬರಹ ರೂಪುಗೊಂಡಿದೆ. ಇಲ್ಲಿನ ಕೆಲವು ಮಾತುಗಳು ಉತ್ಪ್ರೇಕ್ಷೆ ಅನಿಸಿದರೂ ಅದರ ಹಿಂದೆ ಇರುವ ಸತ್ಯ ಮನಸಿಗೆ ಇಳಿಯಲೆಂಬುದು ಹಾರೈಕೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.