ಶನಿವಾರ, ಆಗಸ್ಟ್ 8, 2020
22 °C

ವಿಷಗಾಳಿ: ನಾನೂ ಏನಾದರೂ ಮಾಡಬೇಕು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ವಿಷಗಾಳಿ: ನಾನೂ ಏನಾದರೂ ಮಾಡಬೇಕು

ಈ ಅಂಕಣದ ತಲೆಬರಹಕ್ಕೆ ರಾಜ್‌ಕಪೂರ್‌ ಅವರ ಬಾಬ್ಬಿ (1973) ಚಿತ್ರದಲ್ಲಿನ ಸಂಭಾಷಣೆಯೇ ಸ್ಫೂರ್ತಿಯಾಗಿದೆ. ಚಿತ್ರದ ನಾಯಕಿ ಡಿಂಪಲ್‌ ಕಪಾಡಿಯಾ, ಲತಾ ಮಂಗೇಶ್ಕರ್‌ ದನಿಯಲ್ಲಿ ಹೇಳುವ ‘ಮುಝೆ ಕುಛ್‌ ಕೆಹ್ನಾ ಹೈ’ (ನಾನು ನಿನಗೆ ಏನನ್ನೋ ಹೇಳಬೇಕಾಗಿದೆ), ಹಾಡಿಗೆ ಪ್ರತಿಯಾಗಿ ನಾಯಕ ಪಾತ್ರಧಾರಿ ರಿಷಿ ಕಪೂರ್‌, ‘ಮುಝೆ ಭೀ ಕುಛ್‌ ಕೆಹ್ನಾ ಹೈ’ (ನಾನೂ ನಿನಗೆ ಏನನ್ನೋ ಹೇಳಬೇಕಾಗಿದೆ) ಎಂದು ಮಾರುತ್ತರ ಕೊಡುತ್ತಾನೆ. ಆನಂದ್‌ ಬಕ್ಷಿ ಅವರ ಈ ಜನಪ್ರಿಯ ಹಾಡಿನ ಮೂಲಕವೇ ಅಂದಿನ ಬಹುತೇಕ ತರುಣ ತರುಣಿಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು.

ಸಾಕಷ್ಟು ಜನಪ್ರಿಯಗೊಂಡಿದ್ದ ಈ ಸಾಲುಗಳನ್ನು ನಾನಿಲ್ಲಿ ವಿಶ್ಲೇಷಿಸುತ್ತಿರುವ ವಿದ್ಯಮಾನಕ್ಕೆ ಪೂರಕವಾಗಿ ತಿರುಚುವ ಪ್ರಯತ್ನ ಮಾಡಿಲ್ಲ. ‘ಕೆಹ್ನಾ’ಕ್ಕೆ (ಹೇಳಲು) ಪ್ರತಿಯಾಗಿ ನಾನು ಇಲ್ಲಿ ‘ಕರ್ನಾ’ (ಮಾಡಲು) ಶಬ್ದ ಬಳಸಲು ಬಯಸಿರುವೆ. ನಾವೆಲ್ಲ ಉಸಿರಾಡುವ ಗಾಳಿಯೇ ಉತ್ತರ ಭಾರತದಲ್ಲಿ ವಿಷವಾಗಿ ಪರಿಣಮಿಸಿದೆ. ಇಂತಹ ರಾಷ್ಟ್ರೀಯ ತುರ್ತು ಪರಿಸ್ಥಿತಿಯೂ ಸೇರಿದಂತೆ ಗಂಭೀರ ಸ್ವರೂಪದ ಬಿಕ್ಕಟ್ಟುಗಳಿಗೆ ನಮ್ಮ ಪ್ರತಿಕ್ರಿಯೆ ‘ಮುಝೆ ಕುಛ್‌ ಕರ್ನಾ ಹೈ’ (ನನಗೆ ಏನನ್ನೋ ಮಾಡಬೇಕಾಗಿದೆ) ಎಂದೇ ಆಗಿರುತ್ತದೆ. ಸಮಾಜದ ಗಣ್ಯರು, ಹೋರಾಟಗಾರರು, ಮಾಧ್ಯಮ, ನ್ಯಾಯಾಂಗ ಮತ್ತು ಎಲ್ಲಕ್ಕಿಂತ ಹೆಚ್ಚು ಬುದ್ಧಿವಂತರಾದ ರಾಜಕಾರಣಿಗಳು ಸಹ ‘ನನಗೂ ಏನನ್ನೋ ಮಾಡಬೇಕಾಗಿದೆ’ (ಮುಝೆ ಭೀ ಕುಛ್‌ ಕರ್ನಾ ಹೈ) ಎಂದಷ್ಟೇ ಪ್ರತಿಕ್ರಿಯಿಸಿ ಕೈತೊಳೆದುಕೊಳ್ಳುತ್ತಾರೆ.

ಪ್ರತಿಯೊಬ್ಬರೂ ಬಾಬ್ಬಿ ಚಿತ್ರದ ಪಾತ್ರಧಾರಿ ಡಿಂಪಲ್‌ಳಂತೆಯೇ ತಮ್ಮ ಆತ್ಮಸಾಕ್ಷಿ ಸಂತೈಸಲು ತೊಡಗುತ್ತಾರೆ. ಮಾಧ್ಯಮಗಳು ಆಕರ್ಷಕ ಮತ್ತು ಥಟ್ಟನೆ ಗಮನ ಸೆಳೆಯುವ ತಲೆಬರಹದ ಮೂಲಕ ಇಲ್ಲಸಲ್ಲದ ಭಯ ಮೂಡಿಸುತ್ತವೆ. ದೀಪಾವಳಿ ಮತ್ತು ಚಳಿಗಾಲದ ದಿನಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ತಾತ್ಕಾಲಿಕ ನೆಲೆಯಲ್ಲಿ ಕಠಿಣ ಕ್ರಮಗಳನ್ನೂ ಘೋಷಿಸಲಾಗುತ್ತಿದೆ. ‘ಹೊಂಜು’ ದೂರ ಮಾಡುವ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೇ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಈ ಗಂಭೀರ ಸ್ವರೂಪದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದುವರೆಗೂ ಸೂಕ್ತ ಸಂಶೋಧನೆಯೇ ನಡೆದಿಲ್ಲ. ಪರಿಹಾರ ಕಂಡುಕೊಳ್ಳಲು ಸುದೀರ್ಘ ಸಮಯವೂ ಹಿಡಿಯಲಿದೆ. ಅಷ್ಟೇ ಅಲ್ಲ, ಅದಕ್ಕೆ ಪ್ರತಿಯೊಬ್ಬರೂ ತುಂಬ ಕಠಿಣ ಪರಿಶ್ರಮವನ್ನೂ ಪಡಬೇಕಾಗಿದೆ.

ಇಷ್ಟೆಲ್ಲ ಪರಿಶ್ರಮ ಪಡುತ್ತಿದ್ದರೂ ಗಾಳಿಯ ಗುಣಮಟ್ಟದ ಕುರಿತು ಉದ್ಭವಿಸಿರುವ ಸದ್ಯದ ಪರಿಸ್ಥಿತಿ ನಿಭಾಯಿಸಲು ಈ ಕ್ರಮಗಳು ಏನೇನೂ ಸಾಕಾಗುವುದಿಲ್ಲ. ಈ ಕಾರಣಕ್ಕಾಗಿಯೇ ಈ ಬಗ್ಗೆ ಇನ್ನಷ್ಟು ಗಂಭೀರ ಪ್ರಯತ್ನಗಳು ನಡೆಯಬೇಕಾಗಿವೆ.

ವೈಯಕ್ತಿಕ ನೆಲೆಯಲ್ಲಿ ಯಾರಾದರೂ ಮಾಲಿನ್ಯ ನಿಯಂತ್ರಿಸಲು ಯಾವುದಾದರೂ ನಿರ್ಧಾರ ಕಾರ್ಯಗತಗೊಳಿಸಿದರೆ ಅಲ್ಲಿಗೆ ಅವನ ಹೊಣೆಗಾರಿಕೆ ಕೊನೆಗೊಂಡಿತು ಎಂದೇ ಅರ್ಥ. ಕೆಲವರು ಏರ್‌ಕಂಡಿಷನರ್‌ಗೆ ತಗುಲುವ ವೆಚ್ಚದಲ್ಲಿಯೇ ಏರ್‌ ಪ್ಯುರಿಫೈಯರ್‌ (ಶುದ್ಧ ಗಾಳಿ ಹೊರ ಸೂಸುವ ಸಾಧನ) ಖರೀದಿಸುತ್ತಾರೆ. ಇಂತಹ ಸಾಧನ ಖರೀದಿಸಲು ಸಾಧ್ಯವಾಗದವರು ವಿಷಪೂರಿತ ಗಾಳಿಯನ್ನೇ ಅನಿವಾರ್ಯವಾಗಿ ಸೇವಿಸುತ್ತ, ಏದುಸಿರು ಬಿಡುತ್ತ ಈ ಗಂಡಾಂತರದಿಂದ ಬೇಗ ಪಾರುಮಾಡಪ್ಪ ದೇವರೇ ಎಂದು ಪ್ರಾರ್ಥನೆಯಲ್ಲಿ ತೊಡಗುತ್ತಾರೆ.

ಕೆಲ ವರ್ಷಗಳಿಂದಲೂ ಹೊಂಜು ದೂರ ಮಾಡುವ ಇಂತಹ ಗಮನ ಸೆಳೆಯುವಂತಹ ತಲೆಬರಹಗಳೇ ಕಣ್ಣಿಗೆ ರಾಚುತ್ತವೆ. ತುಂಬ ಹಳೆಯದಾದ ವಾಹನಗಳ ಮೇಲೆ ದೆಹಲಿಯಲ್ಲಿ ನಿಷೇಧ ವಿಧಿಸಬೇಕು ಎಂದು ಕೆಲವರು ಪ್ರತಿಪಾದಿಸುತ್ತಾರೆ. ಇನ್ನು ಕೆಲವರು, ಡೀಸೆಲ್‌ ಬಳಕೆಯನ್ನೇ ನಿಲ್ಲಿಸಬೇಕು ಎಂದು ಹೇಳುತ್ತಾರೆ. ನಗರ ಪ್ರವೇಶಿಸುವ ಭಾರಿ ಸರಕು ಸಾಗಣೆಯ ಟ್ರಕ್‌ಗಳ ಮೇಲೆ ಮಾಲಿನ್ಯ ತೆರಿಗೆ ವಿಧಿಸಬೇಕು ಎನ್ನುವುದು ಕೆಲವರ ವಾದ. ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ರಸ್ತೆ ಬದಿ ಸುರಿಯುವುದನ್ನು ನಿರ್ಬಂಧಿಸಲು ಅಂಥವರಿಗೆ ದಂಡ ವಿಧಿಸಬೇಕು ಎನ್ನುವುದು ಹಲವರ ಒತ್ತಾಯವಾಗಿದೆ.

ಏರ್ ಪ್ಯುರಿಫೈಯರ್‌ ತಯಾರಕರು ಪರಿಚಯಿಸಿದ ಅಷ್ಟೇನೂ ಕಾರ್ಯಸಾಧ್ಯವಲ್ಲದ ಕೆಲ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಈ ಬಗ್ಗೆ ಟಿ.ವಿ. ಚಾನೆಲ್‌ಗಳಲ್ಲಿ ಪ್ರಾಯೋಜಕರು ಸಿದ್ಧಪಡಿಸಿದ ಅಬ್ಬರದ ಪ್ರಚಾರವನ್ನೂ ನೀಡಲಾಯಿತು. ಈಗ ಪಟಾಕಿಗಳು ಬೇರೆ ಕಾರಣಕ್ಕೆ ಸದ್ದು ಮಾಡುತ್ತಿವೆ. ಅವುಗಳ ಮಾರಾಟದ ಮೇಲೆ ಕೋರ್ಟ್‌ ನಿಷೇಧ ವಿಧಿಸಿದೆ. ಈ ನಿಷೇಧದಿಂದ ನಗರದಲ್ಲಿನ ಗಾಳಿಯ ಗುಣಮಟ್ಟ ಅದೆಷ್ಟರ ಮಟ್ಟಿಗೆ ಸುಧಾರಿಸಿದೆ ಎನ್ನುವುದನ್ನು ಏರ್‌ ಫಿಲ್ಟರ್‌ ಸಾಧನದಲ್ಲಿ ನೀವೇ ಅಳೆದು ತೀರ್ಮಾನಕ್ಕೆ ಬರಬೇಕು.

90ರ ದಶಕದಲ್ಲಿಯೇ ಶುದ್ಧ ಗಾಳಿ ಕುರಿತು ನ್ಯಾಯಾಂಗ ಮತ್ತು ಹೋರಾಟಗಾರರು ಗಮನ ಸೆಳೆಯತೊಡಗಿದ್ದರು. ‘ಪರಿಸರ’ ನ್ಯಾಯಮೂರ್ತಿ ಎಂದೇ ಖ್ಯಾತರಾಗಿದ್ದ ಕುಲದೀಪ್‌ ಸಿಂಗ್‌ ಮತ್ತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೋರಾಟಗಾರ ಎಂ. ಸಿ. ಮೆಹ್ತಾ ಅವರು ಈ ವಿಷಯದಲ್ಲಿ ನಿಜವಾಗಿಯೂ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಹೋರಾಟದ ಫಲವಾಗಿ ನಗರದ ಸಾರ್ವಜನಿಕ ಸಾರಿಗೆ ಮತ್ತು ವಾಣಿಜ್ಯ ವಾಹನಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಕೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ಈ ಕ್ರಮವು ನಗರದಲ್ಲಿನ ಗಾಳಿಯ

ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ತಂದುಕೊಟ್ಟಿತ್ತು. ಆದರೆ, ಇದು ಒಂದು ದಶಕದ ಹಿಂದಿನ ಕಥೆ.

ಅದಾದ ನಂತರದ ದಿನಗಳಲ್ಲಿ ಅಂತಹ ಅನೇಕ ಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ. ವಿಚಾರರಹಿತ, ಅಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಗಳ ಇಂತಹ ಯೋಜನೆಗಳು ಜಾರಿಯಾಗಿವೆ. ಹೋರಾಟಗಾರರು, ಮಾಧ್ಯಮದಲ್ಲಿನ ಸ್ನೇಹಿತರು ಮತ್ತು ನ್ಯಾಯಮೂರ್ತಿಗಳು ಜನರಿಗೆ ಯಾವುದು ಒಳಿತು ಎನ್ನುವುದನ್ನು ನಿರ್ಧರಿಸುತ್ತಿದ್ದಾರೆ. ಇವರು ಹೇಳಿದ್ದನ್ನು, ಜನಸಾಮಾನ್ಯರು ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ನ್ಯಾಯಾಂಗ ನಿಂದನೆಯ ತೂಗುಗತ್ತಿಯ ಭಯದಿಂದ ಯಾರೊಬ್ಬರೂ ಯಾವುದನ್ನೂ ಪ್ರಶ್ನಿಸುತ್ತಿಲ್ಲ. ಉತ್ತರದಾಯಿತ್ವವನ್ನೂ ಬಯಸುತ್ತಿಲ್ಲ.

ದೆಹಲಿಯ ಅಶುದ್ಧ ಗಾಳಿಯು ಹತಾಶೆಯ ಸಮಸ್ಯೆಯಾಗಿದೆ. ಈ ಸಮಸ್ಯೆ ನಿವಾರಣೆ ಮಾಡುವ ಪರಿಹಾರಗಳು ಕೂಡ ಹತಾಶೆ ಮತ್ತು ದುಡುಕಿನಿಂದ ಕೂಡಿವೆ. ನಗರದಲ್ಲಿನ ಎಲ್ಲ ಗುಡಿ ಕೈಗಾರಿಕೆಗಳನ್ನು ರಾತ್ರೊರಾತ್ರಿ ನಗರದ ಹೊರವಲಯದ ಬವಾನಾಕ್ಕೆ ಸ್ಥಳಾಂತರಿಸಲಾಯಿತು. ಹೊಸ ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಬದ್ಧತೆ ತೋರದೆ ಗಡಿಬಿಡಿಯಲ್ಲಿ ಈ ನಿರ್ಧಾರ ಜಾರಿಗೆ ತರಲಾಯಿತು. ಸಾರ್ವಜನಿಕ ಸಾರಿಗೆ ಮತ್ತು ವಸತಿ ಸೌಲಭ್ಯ ಒದಗಿಸುವ ಮೊದಲೇ ಕೈಗಾರಿಕೆಗಳು ಮತ್ತು ಉದ್ಯೋಗಗಳು ಸ್ಥಳಾಂತರಗೊಂಡವು. ಇದರಿಂದ ನಗರ ವ್ಯಾಪ್ತಿಯಲ್ಲಿ ನಿರುದ್ಯೋಗ ಹೆಚ್ಚಿತು. ಹೊಸ ಕೊಳೆಗೇರಿಗಳು ತಲೆ ಎತ್ತಿದವು. ಭೂಕಬಳಿಕೆಯ ಮಾಫಿಯಾದಿಂದ ಅಕ್ರಮ ವಸತಿ ಯೋಜನೆಗಳು ಕಾರ್ಯಗತಗೊಂಡವು. ಇದರಿಂದ ರಾಜಧಾನಿಯ ಹೃದಯ ಭಾಗದಲ್ಲಿನ ವಾಯು ಮಾಲಿನ್ಯವು ನಗರದ ಹೊರವಲಯಕ್ಕೆ ವರ್ಗಾವಣೆಗೊಂಡಿದ್ದೇ ಸಾಧನೆಯಾಗಿತ್ತು.

ದೆಹಲಿಯಲ್ಲಿನ ಕೈಗಾರಿಕೆಗಳ ಬಗ್ಗೆ ಅರೆಬೆಂದ ಚಿಂತನೆ ಕಾರ್ಯಗತಗೊಂಡಿತಷ್ಟೆ. ವಿಶೇಷ ಹಕ್ಕುಗಳನ್ನು ಹೊಂದಿರುವ ಸಮುದಾಯವೊಂದು ತನ್ನೆಲ್ಲ ಮಾಲಿನ್ಯದ ಹೊರೆಯನ್ನು ಕಡಿಮೆ ಹಕ್ಕುಗಳನ್ನು ಹೊಂದಿರುವ ಜನಸಮುದಾಯಕ್ಕೆ ವರ್ಗಾಯಿಸಿತು ಎನ್ನುವುದೇ ಒಂದು ತಮಾಷೆಯ ಸಂಗತಿಯಾಗಿದೆ. ತನ್ನ ಒಡಲಲ್ಲಿ ವಿಷವನ್ನೇ ಹೊಂದಿರುವ, ನಾವೆಲ್ಲ ಉಸಿರಾಡುವ ಗಾಳಿಯು ರಾಜಧಾನಿ ಅಥವಾ ನಗರದ ಹೊರ ವಲಯದ ಮುನ್ಸಿಪಲ್ ಪ್ರದೇಶ ಎಂದೇನೂ ತಾರತಮ್ಯ ಮಾಡಲಾರದು ಎನ್ನುವ ಪಾಠವನ್ನು ಆಧುನಿಕ ಪರಿಸರ ಹೋರಾಟದ ಪಿತಾಮಹ ಲೆಸ್ಟರ್‌ ಬ್ರೌನ್‌ ಅವರ 1972ರಲ್ಲಿಯೇ ಪ್ರಕಟಗೊಂಡಿರುವ ಕೃತಿ ‘ವರ್ಲ್ಡ್‌ ವಿದೌಟ್‌ ಬಾರ್ಡರ್ಸ್‌’ ನಮಗೆ ಬಹಳ ಹಿಂದೆಯೇ ಬೋಧಿಸಿತ್ತು.

ಮಾಜಿ ಹೋರಾಟಗಾರರನ್ನು ಒಳಗೊಂಡ ಆಮ್‌ ಆದ್ಮಿ ಪಾರ್ಟಿ (ಎಎಪಿ) 2015ರಲ್ಲಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಿತು. ಅಧಿಕಾರಕ್ಕೆ ಬರುತ್ತಿದ್ದಂತೆ ಈ ಪಕ್ಷವು ತನ್ನ ಭ್ರಷ್ಟಾಚಾರ ವಿರೋಧಿ ಕಾರ್ಯಸೂಚಿ ಬದಿಗಿಟ್ಟು, ಪರಿಸರ ಮಾಲಿನ್ಯ ನಿಯಂತ್ರಣ ಕಾರ್ಯಸೂಚಿಯನ್ನು ಹೊಸ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಆರಂಭಿಸಿತು. ಎಎಪಿಯ ಹೊಸ ಹೋರಾಟದ ವಿವರಗಳನ್ನು ನಾನಿಲ್ಲಿ ನನ್ನ ಸಹೋದ್ಯೋಗಿ ರಾಜಗೋಪಾಲ್‌ ಸಿಂಗ್‌ ಅವರ ನೆರವಿನಿಂದ ಸಂಗ್ರಹಿಸಿ ಕೊಟ್ಟಿರುವೆ.

ಮೊದಲಿಗೆ ಎಎಪಿಯು ಕಾರ್ಯಸಾಧ್ಯವಲ್ಲದ ಮತ್ತು ಗಾಳಿಯ ಶುದ್ಧತೆಯಲ್ಲಿ ಹೆಚ್ಚಿನ ಬದಲಾವಣೆಯನ್ನೇನೂ ತರದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿತು. ಗರಿಷ್ಠ ಪ್ರಮಾಣದ ಪರಿಸರ ಮಾಲಿನ್ಯ ಇರುವ ಸ್ಥಳಗಳಲ್ಲಿ ದೈತ್ಯ ಗಾತ್ರದ ಐದು ಏರ್‌ ಪ್ಯುರಿಫೈಯರ್‌ಗಳನ್ನು ಅಳವಡಿಸಿತು. ಪ್ರಾಯೋಗಿಕವಾಗಿ ಮಂಜಿನ ಕಾರಂಜಿ ಮತ್ತು ಚಿಮಣಿಗಳನ್ನು ಆರಂಭಿಸಲು ಮುಂದಾಗಿತ್ತು. ಶ್ವಾಸಕೋಶಗಳಿಗೆ ಅಪಾರ ಹಾನಿ ಉಂಟು ಮಾಡುವ ರಸ್ತೆಗಳಲ್ಲಿನ ದೂಳಿನ ಪ್ರಮಾಣ ಕಡಿಮೆ ಮಾಡಲು ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಭರವಸೆಯನ್ನೂ ನೀಡಿತು. ನಂತರದ ದಿನಗಳಲ್ಲಿ ಅಂತಹ ಯಂತ್ರಗಳು ನಗರದ ರಸ್ತೆಗಳಲ್ಲಿ ಕಂಡು ಬರಲೇ ಇಲ್ಲ.ಈ ಮಧ್ಯೆ, ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು, ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ತಮ್ಮದೇ ಆದ ಯೋಜನೆಗಳನ್ನು ಕಾರ್ಯಗತಗೊಳಿಸಲು ಗಮನ ಕೇಂದ್ರೀಕರಿಸಿದ್ದವು. ವಾಹನಗಳು ಮತ್ತು ಅವುಗಳು ಬಳಸುವ ಇಂಧನದ ಬಗ್ಗೆ ಸಾಕಷ್ಟು ಆದೇಶಗಳನ್ನು ನೀಡಿದ್ದವು. ‘ಇಪಿಸಿಎ’, ಈ ವರ್ಷದ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಸಮಗ್ರ ವರದಿಯು (http://www.epca.org.in/EPCA-Reports1999-1917/Report-no.65.pdf) ಕೋರ್ಟ್‌ನ ಆದೇಶಗಳನ್ನು ಜಾರಿಗೆ ತಂದಿರುವ ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿದೆ.

ರಾಜಧಾನಿಯಲ್ಲಿ ಹೊಂಜು ಸೃಷ್ಟಿಸುವ ಅವಾಂತರಕ್ಕೆ ಕಡಿವಾಣ ಹಾಕುವ ಕೋರ್ಟ್‌ನ ಕ್ರಿಯಾ ಯೋಜನೆ ಬಗ್ಗೆ ಇಪಿಸಿಎ ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಿರುವ ವರದಿಯು ಹೆಚ್ಚಿನ ಮಾಹಿತಿ ನೀಡುತ್ತದೆ. ಕೋರ್ಟ್‌ ಆದೇಶವು ಅರ್ಥಪೂರ್ಣ, ಸಮಗ್ರ ಮತ್ತು ಪರಿಪೂರ್ಣ ಸ್ವರೂಪದಲ್ಲಿ ಇದೆ. ಆದರೆ, ಅದನ್ನು ಕಾರ್ಯಗತಗೊಳಿಸುವುದು ಮಾತ್ರ ಅಷ್ಟು ಸುಲಭವಲ್ಲ. ಇದು ಸಾಧ್ಯವಾಗಬೇಕು ಎಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 24ಕ್ಕೂ ಹೆಚ್ಚು ಸಂಸ್ಥೆಗಳು ಕೈಜೋಡಿಸಬೇಕು. ಇದು ಸರ್ಕಾರಗಳ ವಾರ್ಷಿಕ ಬಜೆಟ್‌ ಮೇಲೂ ಪರಿಣಾಮ ಬೀರಲಿದೆ. ದೆಹಲಿಗೆ ಹೊಂದಿಕೊಂಡಿರುವ ಹರಿಯಾಣ ಮತ್ತು ಪಂಜಾಬ್‌ಗಳ ಗಡಿ ಜಿಲ್ಲೆಗಳಲ್ಲಿನ ಇಂಧನ, ತೆರಿಗೆ, ಕೃಷಿ ವಲಯ ಮತ್ತು ಪೌರ ಸಂಸ್ಥೆಗಳ ಬಜೆಟ್‌ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ದೆಹಲಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಖರೀದಿಸಬೇಕು. ಅವುಗಳಿಗೆಂದೇ ಪ್ರತ್ಯೇಕ ಮಾರ್ಗ ನಿರ್ಮಿಸಬೇಕಾಗುತ್ತದೆ.

ಈ ವರದಿಯ ಪ್ರತಿಯೊಂದು ಸಲಹೆಯನ್ನು ನೀವು ವಿವರವಾಗಿ ಓದಿದರೆ ಒಂದು ಮಾತಂತೂ ಸ್ಪಷ್ಟವಾಗುತ್ತದೆ. ಸರ್ಕಾರಿ – ನಾಗರಿಕ ಸಂಸ್ಥೆಗಳು ಇವುಗಳನ್ನೆಲ್ಲ ಜಾರಿಗೆ ತರಲು ಸುಪ್ರೀಂ ಕೋರ್ಟ್‌ನ ಪ್ರತ್ಯೇಕ ಪೀಠ ಅಥವಾ ಇಡೀ ಸುಪ್ರೀಂ ಕೋರ್ಟ್, 12 ವಿಶೇಷ ಸಮಿತಿಗಳ ಮೇಲ್ವಿಚಾರಣೆಗೆ ಒಳಪಡಿಸಿ ಪ್ರತಿ ದಿನ ಪ್ರಗತಿ ಪರಿಶೀಲಿಸಬೇಕಾಗುತ್ತದೆ. ಕೋರ್ಟ್‌ ಬಗ್ಗೆ ಅಪಾರ ಗೌರವ ಭಾವನೆ ಇಟ್ಟುಕೊಂಡೇ ನಾನಿಲ್ಲಿ ಒಂದು ಮಾತನ್ನು ಹೇಳಲು ಇಷ್ಟಪಡುವೆ. ಈ ವರದಿ ಓದಿದರೆ ಮಾಲಿನ್ಯ ನಿಯಂತ್ರಣ ಕ್ರಮಗಳ ಬಗ್ಗೆ ಭರವಸೆ ಮೂಡುತ್ತದೆಯಾದರೂ, ಅವುಗಳನ್ನೆಲ್ಲ ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಲು ಸಾಧ್ಯ ಎನ್ನುವ ಅನುಮಾನವಂತೂ ಮನದಲ್ಲಿ ಉಳಿದು ಬಿಡುತ್ತದೆ.

ನಾವಿಲ್ಲಿ ವಸ್ತುಸ್ಥಿತಿಯನ್ನೂ ಗಣನೆಗೆ ತೆಗೆದುಕೊಳ್ಳೋಣ. 2010ರಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ನ ನಂತರ ದೆಹಲಿ ಸರ್ಕಾರ ಯಾವುದೇ ಹೊಸ ಬಸ್‌ ಖರೀದಿಸಿಲ್ಲ. ಸದ್ಯಕ್ಕೆ ಜಾರಿಯಲ್ಲಿ ಇರುವ ಮೆಟ್ರೊ ಮೂರನೇ ಹಂತವು ಒಂದು ವರ್ಷಕ್ಕಿಂತ ಹೆಚ್ಚು ತಡವಾಗಿದೆ. ನಾಲ್ಕನೇ ಹಂತದ ಯೋಜನೆಯು ಎರಡೂವರೆ ವರ್ಷ ವಿಳಂಬವಾಗಿದೆ. ಈ ಎಲ್ಲ ಗೊಂದಲಗಳು ಆ ದೇವರಿಗೂ ಸರಿಯಾಗಿ ಅರ್ಥವಾಗಲಿಕ್ಕಿಲ್ಲ.

ಸತ್ಯ ಮಾತನಾಡದಿರುವುದು ಹೇಡಿತನವಾಗಲಿದೆ. ಅಷ್ಟೇ ಅಲ್ಲ, ನಮ್ಮ ಮಕ್ಕಳ ಶ್ವಾಸಕೋಶಗಳ ಆರೋಗ್ಯದ ಬಗ್ಗೆ ಅಪ್ರಾಮಾಣಿಕ ನಿಲುವು ತಳೆದಂತೆಯೂ ಆಗಲಿದೆ. ಇದು ನಿರ್ದಯವಾದರೂ ಕಟು ಸತ್ಯ ಸಂಗತಿ.

1985ರಲ್ಲಿ ಎಂ. ಸಿ. ಮೆಹ್ತಾ ಅವರು ಆರಂಭಿಸಿದ್ದ ಪಿಐಎಲ್‌ ಹೋರಾಟದ ಫಲವಾಗಿಯೇ ಪರಿಸರ ಮಾಲಿನ್ಯ ನಿಯಂತ್ರಣ ಉದ್ದೇಶದ ಅನೇಕ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ಈ ಸಮಿತಿಗಳು ನಮಗೆ ನಕ್ಷತ್ರಗಳನ್ನೇ ತಂದುಕೊಡುವ ಭರವಸೆ ನೀಡಿದ್ದವು. ಆದರೆ, ಈಗ ಅವುಗಳ ಅಸ್ತಿತ್ವದ ಉಪಯುಕ್ತತೆಯೇ ಇಲ್ಲದಂತಾಗಿದೆ. ಸರ್ಕಾರಗಳ ಇತರ ಅಧಿಕಾರಶಾಹಿಯಂತೆ ಇವುಗಳೂ ಈಗ ರೇಜಿಗೆ ಮೂಡಿಸಿವೆ. ದಣಿದಿವೆ, ಪುನರಾವರ್ತನೆಯಲ್ಲಿಯೇ ದಿನ ದೂಡುತ್ತಿವೆ.

ಕೋರ್ಟ್‌ ಆದೇಶದ ಮೇರೆಗೆ ಅಸ್ತಿತ್ವಕ್ಕೆ ಬಂದಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರವು ದೀರ್ಘ ಸಮಯದಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಾಧಿಕಾರ ಮುಖ್ಯಸ್ಥ ಭುರೆ ಲಾಲ್‌ (ಬೊಪೋರ್ಸ್‌ ಹಗರಣದಲ್ಲಿ ಇವರ ಹೆಸರು ಈಗ ಮತ್ತೆ ಚಲಾವಣೆಗೆ ಬಂದಿದೆ) 90ರ ದಶಕದಲ್ಲಿಯೇ ನಿವೃತ್ತರಾಗಿದ್ದಾರೆ. 1998ರಲ್ಲಿ ಈ ಹುದ್ದೆ ಅಲಂಕರಿಸಿದ್ದ ಇವರು ಭಾರತದ 17 ಮುಖ್ಯ ನ್ಯಾಯಮೂರ್ತಿಗಳ ಅಧಿಕಾರವಧಿಯಲ್ಲಿ ಇದೇ ಹುದ್ದೆಯಲ್ಲಿ ಮುಂದುವರೆದಿದ್ದರು. ನಾವು ಉಸಿರಾಡುವ ಗಾಳಿಯ ಗುಣಮಟ್ಟವು ಕಿಂಚಿತ್ತಾದರೂ ಸುಧಾರಿಸಿದ್ದರೆ ಮಾತ್ರ ಇದಕ್ಕೊಂದು ಅರ್ಥ ಇರುತ್ತಿತ್ತು.

ಉಸಿರಾಡುವ ಗಾಳಿಯ ಗುಣಮಟ್ಟ ಸುಧಾರಿಸಲು ಪ್ರಧಾನಿ ನೇತೃತ್ವದಲ್ಲಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ರಚಿಸಲು ಇದು ಸೂಕ್ತ ಸಮಯವಾಗಿದೆ. ಈ ಸಮಿತಿಯ ಕಾರ್ಯನಿರ್ವಹಣೆಗೊಂದು ಗುರಿ ನಿಗದಿಪಡಿಸಿ ಹೊಣೆಗಾರಿಕೆ ನಿಗದಿಪಡಿಸಬೇಕು.

ನಾನಿಲ್ಲಿ ತುಂಬ ವಿನೀತನಾಗಿ ಒಂದು ಮಾತು ಹೇಳಲು ಇಷ್ಟಪಡುವೆ. ಇದುವರೆಗೆ ಸಾಕಷ್ಟು ಕೆಲಸ ಮಾಡಿರುವ ಕೋರ್ಟ್‌ ಈಗ ಈ ವಿಷಯದಲ್ಲಿ ಹಿಂದೆ ಸರಿಯಬೇಕು. ಕಾರ್ಯಾಂಗವು ಹಿಂದೆ ಕುಳಿತು ಕೋರ್ಟ್‌ಗಳ ಮೇಲೆ ಹೊಣೆ ಹೊರಿಸುವ ಪ್ರವೃತ್ತಿ ದೂರ ಆಗಬೇಕು. ಕೋರ್ಟ್‌ ಕ್ರಮಗಳು ಪರಿಣಾಮಕಾರಿ ಆಗದಿರುವುದನ್ನು ಗೇಲಿ ಮಾಡುವುದನ್ನು ಕಾರ್ಯಾಂಗವು ಇನ್ನು ಮೇಲಾದರೂ ನಿಲ್ಲಿಸಲಿ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.