ಮಂಗಳವಾರ, ಮಾರ್ಚ್ 9, 2021
23 °C

ಹುಸಿ–ನೈಜ ಜಗ್ಗಾಟದಲ್ಲಿ ಸಾಂವಿಧಾನಿಕ ಮೌಲ್ಯ ಅನಾಥ

ನಾರಾಯಣ ಎ Updated:

ಅಕ್ಷರ ಗಾತ್ರ : | |

ಹುಸಿ–ನೈಜ ಜಗ್ಗಾಟದಲ್ಲಿ ಸಾಂವಿಧಾನಿಕ ಮೌಲ್ಯ ಅನಾಥ

ಸೆಕ್ಯುಲರ್‌ವಾದ ಅಥವಾ ಸೆಕ್ಯುಲರಿಸಂ. ಭಾರತದ ರಾಜಕೀಯ ಚರ್ಚೆಗಳಲ್ಲಿ ಇದೊಂದು ವಿಷಯದ ಪರ– ವಿರೋಧ ವಾದಗಳಿಗಾಗಿ ಆದಷ್ಟು ಕಂಠ ಶೋಷಣೆ ಬೇರೆ ಯಾವುದೇ ವಿಚಾರದ ಕುರಿತಂತೆ ಯಾವುದೇ ದೇಶದಲ್ಲಿ ಆಗಿರಲಾರದು. ಎಲ್ಲಾ ಚರ್ಚೆಗಳೂ ದಿನಕಳೆದಂತೆ ಕಾವು, ಕಸುವು ಕಳೆದುಕೊಳ್ಳುವುದು ವಾಡಿಕೆ. ಭಾರತದಲ್ಲಿ ಸೆಕ್ಯುಲರ್‌ವಾದದ ವಿಚಾರ ಹಾಗಲ್ಲ. ಅದರ ಸುತ್ತ ನಡೆಯುವ ಖಂಡನೆ– ಮಂಡನೆಗಳು ದಿನಕಳೆದಂತೆ ಹೆಚ್ಚು ಹೆಚ್ಚು ತೀವ್ರವಾಗುತ್ತಿರುವುದು ಮಾತ್ರವಲ್ಲ, ಅವು ಬರ ಬರುತ್ತಾ ಹೊಸ ಹೊಸ ಆಯಾಮಗಳನ್ನು ಪಡೆದುಕೊಂಡು ಹೊಸ ಹೊಸ ಅಖಾಡಗಳನ್ನು ಪ್ರವೇಶಿಸುತ್ತಿವೆ. ಇದಕ್ಕೆ ಇನ್ನೊಂದು ಪುರಾವೆ ಎಂದರೆ ಅದು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮತ್ತು ಉಡುಪಿಯಲ್ಲಿ ನಡೆದ ಹಿಂದುತ್ವ ಸಮ್ಮೇಳನದ ವೇದಿಕೆಗಳಿಂದ ಏಕಕಾಲದಲ್ಲಿ ಸೆಕ್ಯುಲರ್ ಮಂತ್ರದ ಪಠಣ ನಡೆದಿದ್ದು ಮತ್ತು ವಿವಾದಗಳನ್ನು ಹುಟ್ಟುಹಾಕಿದ್ದು.

ಸೆಕ್ಯುಲರಿಸಂ ಕುರಿತಾದ ರಾಜಕೀಯಕರಣ ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂದರೆ ಒಂದು ವರ್ಗ ಸೆಕ್ಯುಲರಿಸಂ ಎನ್ನುವ ಪದ ಕೇಳಿದರೆ ಹೇಸಿಗೆ ಮೆಟ್ಟಿದಂತೆ ವರ್ತಿಸುತ್ತದೆ, ಇನ್ನೊಂದು ವರ್ಗ ಸೆಕ್ಯುಲರಿಸಂ ಕುರಿತು ಯಾರಾದರೂ ಸಣ್ಣಗೆ ಪ್ರಶ್ನಿಸಿದರೂ ಮೈಮೇಲೆ ಕ್ಷುದ್ರಶಕ್ತಿಗಳ ಅವಾಹನೆಯಾದಂತೆ ಪ್ರತಿಕ್ರಿಯಿಸುತ್ತದೆ. ಈ ದೇಶದಲ್ಲಿ ಹುಸಿ ಸೆಕ್ಯುಲರಿಸಂ ಇದೆ ಎನ್ನುವುದು ನಿಜ. ಆದರೆ ಸೆಕ್ಯುಲರಿಸಂ ವಿರೋಧಿಗಳು ಹುಸಿ ಸೆಕ್ಯುಲರಿಸಂ ಅನ್ನು ವಿರೋಧಿಸುವ ಭರದಲ್ಲಿ ಸಂವಿಧಾನ ಒಪ್ಪಿಕೊಂಡಿರುವ ಉದಾತ್ತ ಆಶಯವೊಂದನ್ನೇ ಅಲ್ಲಗಳೆಯುವ ಹಾಗೆ ತೋರುತ್ತಿದೆ. ಇನ್ನೊಂದೆಡೆ ಸೆಕ್ಯುಲರಿಸಂ ಪರ ವಾದಿಸುವವರು ದೇಶದ ಸೆಕ್ಯುಲರ್ ಆಚರಣೆಯಲ್ಲಿ ಆಗಿರುವ, ಆಗುತ್ತಿರುವ ಸ್ಪಷ್ಟವಾದ ದೋಷಗಳನ್ನೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಇವರ ಮಧ್ಯೆ ಸೆಕ್ಯುಲರಿಸಂ ಎನ್ನುವ ಪರಿಕಲ್ಪನೆ ಭಾರತದಲ್ಲೀಗ ಅನಾಥ ಸಾಂವಿಧಾನಿಕ ಮೌಲ್ಯ.

ಸೆಕ್ಯುಲರ್‌ವಾದದ ವಿರೋಧಿಗಳು ಈ ಪರಿಕಲ್ಪನೆ ಮೂಲ ಸಂವಿಧಾನದಲ್ಲಿ ಇರಲಿಲ್ಲವೆಂದೂ, ರಾಜಕೀಯ ಕಾರಣಗಳಿಗೋಸ್ಕರ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಸಂದರ್ಭ ಬಳಸಿಕೊಂಡು 42ನೆಯ ಸಾಂವಿಧಾನಿಕ ತಿದ್ದುಪಡಿಯ (1976) ಮೂಲಕ ‘ಸೆಕ್ಯುಲರ್’ ಮತ್ತು ‘ಸೋಷಿಯಲಿಸ್ಟ್’ ಎಂಬ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿ ಅನಗತ್ಯವಾಗಿ ಅವುಗಳನ್ನು ದೇಶದ ಮೇಲೆ ಹೇರಿದರೆಂದೂ ಹೇಳುತ್ತಾರೆ. ಈ ವಾದ ಮಂಡಿಸುವವರ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ-ಧರ್ಮಗಳ ನಡುವಣ ಸಹಬಾಳ್ವೆ ಭಾರತದ ಪರಂಪರೆಯಲ್ಲಿ ಸಹಜವಾಗಿಯೇ ಸದಾ ನೆಲೆಸಿತ್ತು. ಆದಕಾರಣ ಈ ದೇಶಕ್ಕೆ ಸೆಕ್ಯುಲರಿಸಂನ ಪರಿಕಲ್ಪನೆಯೇ ಅನಗತ್ಯ ಎನ್ನುವ ವಿಚಾರವನ್ನು ಮನಗಂಡೇ ಸಂವಿಧಾನ ನಿರ್ಮಾತೃಗಳು ಮೂಲ ಸಂವಿಧಾನದಲ್ಲಿ ಈ ಸೆಕ್ಯುಲರ್ ಎನ್ನುವ ವಿಚಾರವನ್ನು ಸೇರಿಸಿಲ್ಲ. ಈ ವಾದ ಮೂಲಭೂತವಾಗಿ ಸಂಪೂರ್ಣ ತಪ್ಪು.

ಇಂದಿರಾ ಗಾಂಧಿಯವರ ಕಾಲದಲ್ಲಿ ‘ಸೆಕ್ಯುಲರ್’ ಮತ್ತು ‘ಸೋಷಿಯಲಿಸ್ಟ್’ ಎನ್ನುವ ಪದಗಳನ್ನು ಸಂವಿಧಾನದ ಪ್ರಸ್ತಾವನೆಯ ಮೊದಲ ಸಾಲಿಗೆ ಸೇರಿಸಲಾಯಿತು ಎನ್ನುವುದನ್ನು ಬಿಟ್ಟರೆ ಸೆಕ್ಯುಲರಿಸಂನ ಪರಿಕಲ್ಪನೆ ಸಂವಿಧಾನದ ಮೂಲಭೂತ ಮೌಲ್ಯಗಳಲ್ಲಿ ಒಂದು ಎಂದು ಆರಂಭದಿಂದಲೂ ಸ್ಥಿರೀಕರಿಸಲಾಗಿತ್ತು. ಸಂವಿಧಾನ ರಚನಾ ಸಭೆಯಲ್ಲಿ ಕೆ.ಟಿ.ಷಾ ಎನ್ನುವ ಸದಸ್ಯರು ‘ಸೆಕ್ಯುಲರ್’ ಮತ್ತು ‘ಸೋಷಿಯಲಿಸ್ಟ್’ ಎನ್ನುವ ಪದಗಳನ್ನು ಸಂವಿಧಾನದ ಮುಖ್ಯಪಠ್ಯದಲ್ಲೇ ಸೇರಿಸಬೇಕು ಎಂದು ವಾದಿಸಿದ್ದರು. ಅಂಬೇಡ್ಕರ್ ಈ ಸಲಹೆಯನ್ನು ತಿರಸ್ಕರಿಸಿದ್ದರು. ಅದಕ್ಕೆ ಅಂಬೇಡ್ಕರ್ ನೀಡಿದ ಕಾರಣ ಸಂವಿಧಾನದಲ್ಲಿ ಈಗಾಗಲೇ ಯಾವ ಯಾವ ವಿಚಾರಗಳು ಸ್ಪಷ್ಟವಾಗಿವೆಯೋ ಅವುಗಳನ್ನು ಮತ್ತೆ ಮತ್ತೆ ಪ್ರತ್ಯೇಕ ಶಬ್ದಗಳನ್ನು ಬಳಸಿ ಹೇಳುವ ಅಗತ್ಯವಿಲ್ಲ ಎಂಬುದಾಗಿತ್ತು. ಅಂದರೆ ಮೂಲ ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಪದ ಬಳಕೆಯಾಗಿಲ್ಲ, ಆದರೆ ಸೆಕ್ಯುಲರ್ ವಾದದ ಆಶಯಅಂತರ್ಗತವಾಗಿತ್ತು.

42ನೆಯ ತಿದ್ದುಪಡಿಗೆ ಮೊದಲೇ ಪ್ರಸಿದ್ಧ ಕೇಶವಾನಂದ ಭಾರತಿಪ್ರಕರಣದಲ್ಲಿ (1973) ಸುಪ್ರೀಂ ಕೋರ್ಟ್ ಸೆಕ್ಯುಲರ್ ವಾದವನ್ನು ಸಂವಿಧಾನದಲ್ಲಿ ಬದಲಿಸಲಾಗದ ಮತ್ತು ಬದಲಿಸಬಾರದ ಮೂಲ ರಚನೆಯ ಭಾಗ (basic structure) ಎಂದು ಸ್ಪಷ್ಟವಾಗಿ ಹೇಳಿತ್ತು. ಎಸ್‌.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಇದನ್ನೇ ಕೋರ್ಟು ಮತ್ತೆ ಹೇಳಿತು. 1977 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರ (ಅದರಲ್ಲಿ ಎಲ್.ಕೆ. ಅಡ್ವಾಣಿ ಮತ್ತು ಎ.ಬಿ.ವಾಜಪೇಯಿ ಪ್ರಮುಖ ಸಚಿವರಾಗಿದ್ದರು) 42ನೆಯ ತಿದ್ದುಪಡಿಯನ್ನು ಅಕ್ಷರಶಃ ಅಳಿಸಿ ಹಾಕುವಾಗಲೂ ‘ಸೆಕ್ಯುಲರ್’ ಎನ್ನುವ ಪದವನ್ನು ಮುಂದುವರಿಸಿತು ಎನ್ನುವುದುಇಲ್ಲಿ ಉಲ್ಲೇಖನೀಯ. ಆದುದರಿಂದ ಸೆಕ್ಯುಲರ್‌ವಾದಎನ್ನುವುದು ನೆಹರೂ ಅವರಿಂದ ಬಂತು, ಇಂದಿರಾ ಗಾಂಧಿಯವರಿಂದ ಬಂತು, ಕಾಂಗ್ರೆಸ್ಸಿನಿಂದ ಬಂತು ಮುಂತಾದ ಹೇಳಿಕೆಗಳೆಲ್ಲ ಒಂದು ವ್ಯವಸ್ಥಿತ ಅಪಪ್ರಚಾರದ ಭಾಗ.

ಸರ್ಕಾರ ಯಾವುದೇ ಧರ್ಮದ ಜತೆ ಗುರುತಿಸದೆ ಇರುವುದು ಅಂದರೆ ಧರ್ಮದ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸದೇ ಇರುವುದು, ಎಲ್ಲಾ ಧರ್ಮದವರನ್ನು ಕಾನೂನು ಸಮಾನ ದೃಷ್ಟಿಯಲ್ಲಿ ಪರಿಗಣಿಸುವುದು ಮತ್ತು ಮೂಲಭೂತ ಧಾರ್ಮಿಕ ಸ್ವಾತಂತ್ರ್ಯ ಇವು ಭಾರತೀಯ ಸಂವಿಧಾನ ಎತ್ತಿಹಿಡಿಯುವ ಸೆಕ್ಯುಲರಿಸಂನ ಪ್ರಧಾನ ಅಂಶಗಳು (ಸಂವಿಧಾನದ 25, 26, 27, 28ನೆಯ ವಿಧಿಗಳು). ಅದೇ ರೀತಿ ಸಂವಿಧಾನವು ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು (44ನೆಯ ವಿಧಿ) ಎನ್ನುವ ಆಶಯವನ್ನೂ ಪ್ರತಿಪಾದಿಸುತ್ತದೆ. ಇವೆಲ್ಲವೂ ಬೇರೆ ಬೇರೆ ರಾಜಕೀಯ ಕಾರಣಗಳಿಗೆ ಆಚರಣೆಯಾಗದೆ ಇರಬಹುದು ಅಥವಾ ಆಚರಣೆಯಲ್ಲಿ ಇವುಗಳ ಉಲ್ಲಂಘನೆಯಾಗಿರಬಹುದು. ಈ ಉಲ್ಲಂಘನೆಯನ್ನು ಹುಸಿ ಸೆಕ್ಯುಲರಿಸಂ ಎಂದು ಕರೆಯುವ ಭರದಲ್ಲಿ ಈಗ ಸೆಕ್ಯುಲರಿಸಂ ಎನ್ನುವ ಪರಿಕಲ್ಪನೆಯನ್ನೇ ಪ್ರಶ್ನಿಸುವುದು, ಪರಿಹಾಸ್ಯ ಮಾಡುವುದು ನಡೆದಿದೆ.

ಈ ಸೆಕ್ಯುಲರ್ ಮೌಲ್ಯಗಳು ಮೂಲಭೂತವಾಗಿ ಪಾಶ್ಚಾತ್ಯ ಮೌಲ್ಯಗಳು, ಭಾರತೀಯ ಸಂದರ್ಭದಲ್ಲಿ ಇವುಗಳು ಒಂದೋ ಅನಗತ್ಯ ಅಥವಾ ಅಪ್ರಾಯೋಗಿಕ ಎನ್ನುವ ಕಾರಣಕ್ಕೆ ಈ ಮೌಲ್ಯಗಳಿಗೆ ಸಂವಿಧಾನದಲ್ಲಿ ಸ್ಥಾನವಿಲ್ಲ ಎನ್ನುವ ಹಾಗಿಲ್ಲ. ಹಾಗೆಯೇ ಭಾರತಕ್ಕೆ ಚಾರಿತ್ರಿಕವಾಗಿ ಸಹಬಾಳ್ವೆಯ ಪರಂಪರೆ ಇದೆ ಎನ್ನುವುದು ಈ ಮೌಲ್ಯಗಳಿಗೆ ಸಂಪೂರ್ಣ ಪರ್ಯಾಯವಲ್ಲ. ಇಷ್ಟನ್ನು ಅರಿತುಕೊಂಡೇ ಸಂವಿಧಾನ ನಿರ್ಮಾತೃಗಳು ಈ ಆಶಯಗಳನ್ನು ಸಂವಿಧಾನದಲ್ಲಿ ಸೇರಿಸಿರುವುದು. ಈ ಕಾರಣದಿಂದಲೇ ಸುಪ್ರೀಂ ಕೋರ್ಟ್ ಈ ಆಶಯಗಳು ಸಂವಿಧಾನದ ಮೂಲ ಆಧಾರ ಸ್ತ೦ಭಗಳ ಪೈಕಿ ಒಂದು ಎಂದೂ, ಇದನ್ನು ಅಸ್ಥಿರಗೊಳಿಸಬಾರದು ಎಂದೂ ಸಾರಿ ಸಾರಿ ಬಾರಿ ಬಾರಿ ಹೇಳಿರುವುದು. ಸೆಕ್ಯುಲರ್ ಎನ್ನುವ ಪರಿಕಲ್ಪನೆಯನ್ನು ಅಣಕಿಸುವುದು, ಅದರ ಪ್ರಸ್ತುತತೆಯನ್ನು ಪರಿಹಾಸ್ಯ ಮಾಡುವುದು ಎಂದರೆ ಒಂದು ರೀತಿಯಲ್ಲಿ ಸಂವಿಧಾನ ನಿರ್ಮಾತೃಗಳ ಮತ್ತು ಸುಪ್ರೀಂ ಕೋರ್ಟ್‌ನ ತಿಳಿವಳಿಕೆ ಮತ್ತು ಪ್ರಾಮಾಣಿಕತೆಯನ್ನು ಅನುಮಾನಿಸಿದಂತೆ ಮತ್ತು ಅವಮಾನಿಸಿದಂತೆ.

ಸಂವಿಧಾನದ ಸೆಕ್ಯುಲರ್ ಆಶಯಗಳ ಮುಂದುವರಿದ ಭಾಗವಾಗಿ ಅಲ್ಪಸಂಖ್ಯಾತರಿಗೆ ಕೆಲ ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ (29 ಮತ್ತು 30ನೆಯ ವಿಧಿಗಳು). ಒಂದು ರೀತಿಯಲ್ಲಿ ಇದು ಸಂವಿಧಾನ ಪ್ರತಿಪಾದಿಸುವ ಧಾರ್ಮಿಕ ಸಮಾನತೆಗೆ ತದ್ವಿರುದ್ಧವಾಗಿದೆ ಎನ್ನುವುದು ಸತ್ಯ. ಆದರೆ ಇಲ್ಲೂ ಒಂದು ಉದಾತ್ತ ತತ್ವ ಇದೆ. ಅಲ್ಪಸಂಖ್ಯಾತರ ‘ಭಾಷೆ, ಲಿಪಿ ಮತ್ತು ಸಂಸ್ಕೃತಿಗಳು’ ಬಹುಸಂಖ್ಯಾತರ ಪ್ರಾಬಲ್ಯದ ಮಧ್ಯೆ ಸೊರಗಿ ಹೋಗುವ ಅಪಾಯವಿದೆ ಎನ್ನುವ ಕಾರಣಕ್ಕೆ ಈ ವಿಶೇಷ ರಕ್ಷಣೆಗಳನ್ನು ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿದೆ. ಅಲ್ಪಸಂಖ್ಯಾತರಿಗೆ ನೀಡಲಾದ ಈ ಸವಲತ್ತುಗಳನ್ನು ಕೇವಲ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರ ಪಡೆದುಕೊಳ್ಳುತ್ತಿಲ್ಲ. ಈ ಸೌಲಭ್ಯಗಳು ಭಾಷಾ ಅಲ್ಪಸಂಖ್ಯಾತರಿಗೆ ಕೂಡಾ ದೊರೆಯುತ್ತವೆ. ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಸವಲತ್ತುಗಳನ್ನು ಪಡೆಯುವ ಹಲವು ಸಮುದಾಯಗಳು ಬಹುಸಂಖ್ಯಾತ ಎಂದು ಗುರುತಿಸಿಕೊಂಡ ವರ್ಗಗಳೇ ಆಗಿವೆ.

ಅಲ್ಪಸಂಖ್ಯಾತರಿಗೆ ದೊರೆಯುವ ಈ ವಿಶೇಷ ರಿಯಾಯಿತಿಗಳನ್ನು ಈಗ ಹುಸಿ ಸೆಕ್ಯುಲರಿಸಂನ ಭಾಗವಾಗಿ ಕಾಣಲಾಗುತ್ತಿದೆ. ಸೆಕ್ಯುಲರ್‌ವಾದವನ್ನು ಒಪ್ಪಿಕೊಂಡ ನಂತರವೂ ಅಲ್ಪಸಂಖ್ಯಾತರಿಗೆ ಕೆಲ ವಿಶೇಷ ಸವಲತ್ತು ಒದಗಿಸಿದ ಮಾತ್ರಕ್ಕೆ ಸಂವಿಧಾನದ ಸೆಕ್ಯುಲರ್ ಮೌಲ್ಯಗಳು ಹುಸಿ ಎನ್ನಿಸಿಕೊಳ್ಳುವುದಿಲ್ಲ. ಸಮಾನತೆಯ ತತ್ವವನ್ನು ಒಪ್ಪಿಕೊಂಡ ನಂತರವೂ ಸಂವಿಧಾನವು ಮೀಸಲಾತಿಯ ಅಡಿ ಕೆಲವು ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡಿದೆ. ಇದು ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಸಂವಿಧಾನ ಕಂಡುಕೊಂಡ ವಿಧಾನ. ಅಲ್ಪಸಂಖ್ಯಾತರಿಗೆ ನೀಡಿದ ಸೌಲಭ್ಯಗಳು ಭವಿಷ್ಯದಲ್ಲಿ ಅವರ ಭಾಷೆ, ಸಂಸ್ಕೃತಿ ಮತ್ತು ಲಿಪಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ನೀಡಿದ ಸೌಲಭ್ಯಗಳು. ಇವುಗಳ ಸದುಪಯೋಗ, ದುರುಪಯೋಗದ ಬಗ್ಗೆ ಚರ್ಚೆ ಆಗಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಅನಗತ್ಯ ಎಂದು ಕಂಡುಬಂದರೆ ಅವುಗಳನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆದರೂ ತಪ್ಪಿಲ್ಲ. ಅಂತಹ ಬೇಡಿಕೆಗಳನ್ನು ಸಾರಾ ಸಗಟಾಗಿ ‘ಕಮ್ಯುನಲ್’ ಎಂದು ಬಿಂಬಿಸುವ ಅಗತ್ಯವಿಲ್ಲ. ಆದರೆ ಈ ರೀತಿಯ ಬೇಡಿಕೆ ಮುಂದಿಡುವ ಧೈರ್ಯ ಯಾರೂ ಮಾಡುವುದಿಲ್ಲ. ಬದಲಾಗಿ ಈಗ ಅಲ್ಪಸಂಖ್ಯಾತರಿಗೆ ನೀಡಿದ ಸೌಲಭ್ಯಗಳನ್ನು ಇತರರಿಗೂ ನೀಡಿ ಎನ್ನುವ ವಾದ ಮುಂದಿಡಲಾಗುತ್ತಿದೆ.

ಯಾವ ತತ್ವದಡಿ ಸಾಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ನೀಡಲಾಗಿದೆಯೋ ಆ ತತ್ವಗಳಡಿ ಅವುಗಳನ್ನು ಇತರ ವರ್ಗಗಳಿಗೆ ವಿಸ್ತರಿಸಲು ಸಾಧ್ಯವಿಲ್ಲ. ಇದಕ್ಕಿಂತಲೂ ಮುಖ್ಯವಾಗಿ ಸೆಕ್ಯುಲರಿಸಂಗೆ ಸಂಬಂಧಿಸಿದ ವಿಚಾರಗಳನ್ನು ಸಂವಿಧಾನದಲ್ಲಿ ಮನಬಂದಂತೆ ಬದಲಿಸಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಪಸಂಖ್ಯಾತರಿಗೆ ನೀಡಲಾದ ಸೌಲಭ್ಯಗಳ ಸ್ವರೂಪ ಮತ್ತು ವ್ಯಾಪ್ತಿಗೆ ಸಂಬಂಧಿಸಿದ ಹಲವು ಪ್ರಕರಣಗಳು ಇನ್ನೂ ನ್ಯಾಯಾಲಯದ ಪರಿಶೀಲನೆಯಲ್ಲಿವೆ. ಹಾಗಿರುವಾಗ ಈ ಸೌಲಭ್ಯಗಳ ಪ್ರಶ್ನೆಯನ್ನು ಮುಂದಿರಿಸಿಕೊಂಡು ಸೆಕ್ಯುಲರಿಸಂನಿಂದಾಗಿ ಅನ್ಯಾಯ ಆಯಿತು ಎಂದು ಏಕಾಏಕಿ ಜನರ ಭಾವನೆಗಳನ್ನು ಬಡಿದೆಬ್ಬಿಸುವುದು, ಅಲ್ಪಸಂಖ್ಯಾತರಿಗೆ ನೀಡಿದ ರಿಯಾಯಿತಿಗಳು ಇತರರಿಗೂ ಸಿಗಬೇಕು ಎನ್ನುವ ಬೇಡಿಕೆ ಮುಂದಿಡುವುದು, ‘ಅವರಿಗೆ ನೀಡಿದ್ದು ನಿಮಗೆ ನೀಡಿಲ್ಲ’ ಎಂಬ ಸರಳೀಕೃತ ನಿರ್ಣಯವನ್ನು ಅಮಾಯಕ ಜನರೆದುರು ಮಂಡಿಸುವ ಮೂಲಕ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಕೆರಳುವಂತೆ ಮಾಡುವುದು ಇತ್ಯಾದಿಗಳೆಲ್ಲ ಸೆಕ್ಯುಲರ್‌ ವಾದದ ಸುತ್ತ ನಡೆಯುವ ರಾಜಕೀಯದ ಭಾಗ. ಇದರಲ್ಲಿ ಧರ್ಮದ ಪ್ರಶ್ನೆ ಏನೂ ಬರುವುದಿಲ್ಲ.

ಸಂವಿಧಾನದ 25(2)(a) ವಿಧಿಯ ಅನ್ವಯ ಸರ್ಕಾರ ಧಾರ್ಮಿಕ ಸಂಸ್ಥೆಗಳ ಲೌಕಿಕ ವ್ಯವಹಾರಗಳನ್ನು ಅಂದರೆ ಆಸ್ತಿ, ಹಣಕಾಸು ಇತ್ಯಾದಿಗಳಿಗೆ ಸಂಬಂಧಿಸಿದ ವಿಚಾರಗಳನ್ನು ನಿಯಂತ್ರಿಸಬಹುದು. ಈ ನಿಯಂತ್ರಣಾಧಿಕಾರವನ್ನು ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳ ನಿಯಂತ್ರಣಕ್ಕೆ ಹೆಚ್ಚು ಬಳಸಿಕೊಂಡಿದೆ ಎನ್ನುವುದು ಸೆಕ್ಯುಲರ್ ವಿರೋಧಿಗಳ ಆಪಾದನೆ. ಇದರಲ್ಲಿ ಸತ್ಯವಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಅರ್ಥಾತ್ ದೇವಸ್ಥಾನಗಳನ್ನು ಸರ್ಕಾರ ನಿಯಂತ್ರಿಸಬಾರದು ಎನ್ನುವ ಬೇಡಿಕೆಯ ಕುರಿತು ಚರ್ಚೆ ನಡೆಯಬೇಕಾಗಿರುವುದು ಸರ್ಕಾರ ಈಗ ಹಿಂದೂಯೇತರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುತ್ತಿಲ್ಲ ಎನ್ನುವ ಒಂದೇ ಕಾರಣಕ್ಕಲ್ಲ. ಅದಕ್ಕೆ ಇನ್ನೂ ಎರಡು ಕಾರಣಗಳನ್ನು ನೀಡಬಹುದು. ಒಂದು ಈ ರೀತಿಯ ನಿಯಂತ್ರಣ ಸಂವಿಧಾನವೇ ಒಪ್ಪಿಕೊಂಡ ಧಾರ್ಮಿಕ ತಟಸ್ಥ ನೀತಿಗೆ ವ್ಯತಿರಿಕ್ತವಾಗಿದೆ. ಇನ್ನೊಂದು, ದೇವಸ್ಥಾನಗಳನ್ನು ನಡೆಸುವುದು, ಅವುಗಳ ಉಸಾಬರಿ ನೋಡಿಕೊಳ್ಳುವುದು ಸೆಕ್ಯುಲರ್ ನೀತಿಯ ಹೊರಗಡೆ ಕೂಡ ಸರ್ಕಾರದ ಕೆಲಸವಲ್ಲ. ಆದುದರಿಂದ ಸೆಕ್ಯುಲರ್‌ವಾದದ ವಿರೋಧಿಗಳು ಹೀಗೊಂದು ಬೇಡಿಕೆ ಮುಂದಿಡುತ್ತಿರುವುದು ಸಾಧುವಾಗಿದೆ. ಸೆಕ್ಯುಲರ್ ವಿರೋಧಿ ರಾಜಕಾರಣದಲ್ಲೇ ತನ್ನ ನೆಲೆ ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿ ಹಿಂದೆ ಅಧಿಕಾರದಲ್ಲಿದ್ದ ಮತ್ತು ಈಗ ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಲ್ಲಿ ಇದು ಯಾಕೆ ಆಗಿಲ್ಲ ಎನ್ನುವುದು ಮಾತ್ರ ಚೋದ್ಯದ ಪ್ರಶ್ನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.