ಮಂಗಳವಾರ, ಜೂನ್ 22, 2021
28 °C

ಹುಸಿ ಜನಮತದ ಉತ್ಪಾದನೆಯೇ ಎಲ್ಲರ ಗುರಿ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಹುಸಿ ಜನಮತದ ಉತ್ಪಾದನೆಯೇ ಎಲ್ಲರ ಗುರಿ

ರಾಜಕಾರಣದ ಒಟ್ಟು ಗುಣಮಟ್ಟದ ಬಗ್ಗೆ ನಿರಾಶರಾದವರು ಆಗಾಗ ಹೇಳುವ ಮಾತೊಂದಿದೆ. ವ್ಯತ್ಯಾಸಗಳೆಲ್ಲವೂ ವಿರೋಧ ಪಕ್ಷದಲ್ಲಿದ್ದಾಗ ಮಾತ್ರ. ಅಧಿಕಾರಕ್ಕೆ ಬಂದ ಮೇಲೆ ಎಲ್ಲರೂ ಒಂದೇ. ಈ ಮಾತನ್ನು ಸ್ವಲ್ಪ ಬದಲಾಯಿಸಿ ಹೇಳಬೇಕಾದ ಕಾಲ ಬಂದಿದೆ ಅನ್ನಿಸುತ್ತಿದೆ. ಈಗ ವಿರೋಧ ಪಕ್ಷಗಳೂ ಆಡಳಿತ ಪಕ್ಷಗಳ ದಾರಿಯನ್ನೇ ಹಿಡಿಯುತ್ತಿವೆ. ನರೇಂದ್ರಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಮುನ್ನ ತಮ್ಮ ‘ಇಮೇಜ್ ಮ್ಯಾನೇಜ್ಮೆಂಟ್’ ಕೆಲಸಕ್ಕಾಗಿ ಬಹುರಾಷ್ಟ್ರೀಯ ‘ಸಾರ್ವಜನಿಕ ಸಂಪರ್ಕ ಸಂಸ್ಥೆ’ ಆಪ್ಕೋ ವರ್ಲ್ಡ್ ವೈಡ್‌ನ ನೆರವು ಪಡೆದಿದ್ದರೆಂಬುದು ಸುದ್ದಿಯಾಗಿತ್ತು. ಈಗ ನರೇಂದ್ರಮೋದಿಯವರನ್ನು ವಿರೋಧಿಸಲು ಸಜ್ಜಾಗುತ್ತಿರುವ ರಾಹುಲ್ ಗಾಂಧಿ ಅಂಥದ್ದೇ ಬಹುರಾಷ್ಟ್ರೀಯ ಕಂಪೆನಿಯೊಂದನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈಗಿನ ಸುದ್ದಿ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಕೆಲಸ ಮಾಡಿದ್ದ ‘ಕೇಂಬ್ರಿಜ್ ಅನಲಿಟಿಕಾ’ವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆಯಂತೆ. ಇತ್ತೀಚೆಗೆ ಸ್ವತಃ ಕೇಂಬ್ರಿಜ್ ಅನಲಿಟಿಕಾದ ಮುಖ್ಯಸ್ಥರೇ ಭಾರತದ ಪ್ರಮುಖ ವಿರೋಧ ಪಕ್ಷವೊಂದರ ಜೊತೆ ನಮ್ಮ ಮಾತುಕತೆ ನಡೆಯುತ್ತಿದೆ ಎಂಬ ಅಂಶವನ್ನು ಬಹಿರಂಗ ಪಡಿಸಿದ್ದರು. ಈ ಮಾತುಕತೆ ಸಫಲವಾಗಿ ಕಾರ್ಯಾಚರಣೆ ಆರಂಭವಾಗಿದೆಯೇ ಎಂಬುದರ ಬಗ್ಗೆ ಕಾಂಗ್ರೆಸ್ ಏನನ್ನೂ ಹೇಳುತ್ತಿಲ್ಲ. ಕೇಂಬ್ರಿಜ್ ಅನಲಿಟಿಕಾ ಕೂಡಾ ಇದರ ಬಗ್ಗೆ ಏನನ್ನೂ ಹೇಳಿಲ್ಲ. ಈ ಬಗೆಯ ವಿಚಾರಗಳೆಲ್ಲವೂ ಯಾರೂ ಖಚಿತ ಪಡಿಸದ ಆದರೆ ಯಾರೂ ಅಲ್ಲಗಳೆಯದ ಸ್ಥಿತಿಯಲ್ಲೇ ಇರುತ್ತವೆ.

ಇಲ್ಲಿಯ ತನಕ ಬಿಜೆಪಿಯ ಆಡೊಂಬಲವಾಗಿದ್ದ ಸಾಮಾಜಿಕ ಮಾಧ್ಯಮದೊಳಕ್ಕೆ ಕಾಂಗ್ರೆಸ್ ಕೂಡಾ ಕಾಲಿರಿಸಿರುವುದು ಮತ್ತು ಬಿಜೆಪಿ ಬಳಸಿದ ಎಲ್ಲಾ ತಂತ್ರಗಳನ್ನೂ ಕಾಂಗ್ರೆಸ್ ಕೂಡಾ ಬಳಸಲಾರಂಭಿಸುವುದಂತೂ ನಿಜ. ಅದನ್ನು ಸಾಬೀತು ಮಾಡುವಂಥ ಸುದ್ದಿಯೊಂದು ಕಳೆದವಾರವಷ್ಟೇ ಬಯಲಿಗೆ ಬಂತು. ಇದನ್ನು ಬಯಲು ಮಾಡಿದ್ದ ಎಎನ್ಐ ಎಂಬ ಸುದ್ದಿ ಸಂಸ್ಥೆಯ ವರದಿ. ‘OfficeofRG’ ಎಂಬ ರಾಹುಲ್ ಗಾಂಧಿಯವರ ಟ್ವಿಟ್ಟರ್ ಹ್ಯಾಂಡಲ್ ಇದ್ದಕ್ಕಿದ್ದಂತೆಯೇ ಜನಪ್ರಿಯವಾಗಿದ್ದರ ರಹಸ್ಯವೇನೂ ಎಂದು ಹುಡುಕಿದ್ದರ ಫಲವೇ ಈ ವರದಿ. ಇದರಂತೆ ರಾಹುಲ್ ಗಾಂಧಿಯವರ ಅನೇಕ ಟ್ವೀಟ್‌ಗಳನ್ನು ಮರು ಟ್ವೀಟ್ ಮಾಡಿರುವುದು ರಷ್ಯ, ಕಝಕಿಸ್ತಾನ್, ಇಂಡೋನೇಷಿಯಾದ ಮೂಲದ ಟ್ವಿಟ್ಟರ್ ಹ್ಯಾಂಡಲ್‌ಗಳು ಎಂಬುದು ವರದಿಯ ಸಾರಾಂಶ. ಇವು ನಿಜವಾದ ಟ್ವಿಟ್ಟರ್ ಹ್ಯಾಂಡಲ್‌ಗಳೇ ಅಥವಾ ‘ಬಾಟ್’ ಎಂದು ಗುರುತಿಸಲಾಗುವ ಸ್ವಯಂ ಚಾಲಿತ ತಂತ್ರಾಂಶಾಧಾರಿತವೇ ಎಂಬ ಸಂಶಯವನ್ನೇ ವರದಿ ವ್ಯಕ್ತಪಡಿಸಿತ್ತು.

ಇದೇನೂ ಹೊಸ ವಿಚಾರವಲ್ಲ. 2012ರಲ್ಲಿ ನರೇಂದ್ರಮೋದಿಯವರಿನ್ನೂ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಅವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ 10 ಲಕ್ಷ ಮೀರಿತ್ತು. ಈ ಹಿಂಬಾಲಕರು ಯಾರು ಎಂದು ಅಂದೇ ತನಿಖೆ ನಡೆಸಿದ್ದ ‘ಸ್ಟೇಟಸ್ ಪೀಪಲ್’ ಎಂಬ ತಂತ್ರಾಂಶವನ್ನು ರೂಪಿಸಿದ್ದ ತಂಡ ಮೋದಿಯವರನ್ನು ಟ್ವಿಟ್ಟರ್‌ನಲ್ಲಿ ಹಿಂಬಾಲಿಸುತ್ತಿರುವ ಖಾತೆಗಳಲ್ಲಿ ಶೇಕಡಾ 46ರಷ್ಟು ಹುಸಿ ಖಾತೆಗಳು. ಶೇಕಡಾ 41ರಷ್ಟು ನಿಷ್ಕ್ರಿಯ ಖಾತೆಗಳು ಎಂದು ಪತ್ತೆ ಹಚ್ಚಿತ್ತು. 2009ರಲ್ಲಿ ಟ್ವಿಟ್ಟರ್ ಬಳಸಲು ಆರಂಭಿಸಿದ್ದ ನರೇಂದ್ರಮೋದಿಯವರಿಗೆ ನವೆಂಬರ್ 2011ರ ತನಕ ಇದ್ದ ಹಿಂಬಾಲಕರ ಸಂಖ್ಯೆ ನಾಲ್ಕು ಲಕ್ಷ. ಮುಂದಿನ ಒಂದೇ ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಅದು 10ಲಕ್ಷಕ್ಕೆ ಏರಿತ್ತು. ನರೇಂದ್ರಮೋದಿಯವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿರುವುದು ಹೇಗೆ ಎಂಬುದರ ಕುರಿತು ಅನೇಕ ಬಾರಿ ಚರ್ಚೆ ನಡೆದಿದೆ. 2015ರ ಏಪ್ರಿಲ್ 7ರಂದು ಒಂದೇ ದಿನ ಈ ಸಂಖ್ಯೆ 2.8 ಲಕ್ಷದಷ್ಟು ಹೆಚ್ಚಾಗಿತ್ತು. ಅದೇನು ವಿಶೇಷ ದಿನವಾಗಿರಲಿಲ್ಲ. ಅಂದಿನ ಟ್ವೀಟ್‌ನಲ್ಲಿ ವಿಶೇಷವಾದ ಯಾವುದೂ ಇರಲಿಲ್ಲ.

ರಾಜಕಾರಣಿಗಳ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಹಿಂಬಾಲಕರ ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆಯೇ ಕಂಡುಬರುವ ಏರಿಕೆಗಳು ಹೊಸತೇನೂ ಅಲ್ಲ. 2013ರಿಂದ ಈಚೆಗೆ ಈ ಬಗ್ಗೆ ಅನೇಕ ವರದಿಗಳು ಪ್ರಕಟವಾಗಿವೆ. ಇಲ್ಲಿಯ ತನಕ ಈ ಬಗೆಯ ಹುಸಿ ಹಿಂಬಾಲಕರ ಸಂಖ್ಯೆಯಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡದ್ದು ಬಿಜೆಪಿಯ ರಾಜಕಾರಣಿಗಳು. ಹುಸಿ ಹಿಂಬಾಲಕರನ್ನು ಹೊಂದಿರುವ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ರಾಜಕಾರಣಿಯ ಹೆಸರು ಶಶಿ ತರೂರ್ ಅವರದ್ದು. ಈಗ ಆ ಪಟ್ಟಿಗೆ ರಾಹುಲ್ ಗಾಂಧಿ ಹೆಸರೂ ಸೇರ್ಪಡೆಯಾಗಿದೆ.

ಸಾಮಾಜಿಕ ಮಾಧ್ಯಮಗಳು ಮತ್ತು ಚುನಾವಣೆಯ ನಡುವಣ ಸಂಬಂಧವಿದೆ ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡಿದ್ದು 2014ರ ಲೋಕಸಭಾ ಚುನಾವಣೆ. ಹೊಸ ಮಾಧ್ಯಮವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡ ಕೀರ್ತಿ ಬಿಜೆಪಿಯದ್ದು. ಮತ್ತೊಂದು ಲೋಕಸಭಾ ಚುನಾವಣೆ ಹತ್ತಿರವಾಗುವ ಹೊತ್ತಿಗೆ ಈ ಮಾಧ್ಯಮವನ್ನು ಬಳಸಿಕೊಳ್ಳುವುದಕ್ಕೆ ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಇದರ ಪರಿಣಾಮವೇ ರಾಹುಲ್ ಗಾಂಧಿಯವರ ಟ್ವಿಟ್ಟರ್ ಅರ್ರಂಗೇಟ್ರಂ.

ಆದರೆ ಇದಿಷ್ಟೇ ಆಗಿದ್ದರೆ ಇದರಲ್ಲಿ ಚರ್ಚಿಸುವ ವಿಚಾರವೇನೂ ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಂವಹನಕ್ಕಾಗಿ ಹೊಸತೊಂದು ಮಾಧ್ಯಮವನ್ನು ಬಳಸುತ್ತಿವೆ. ಈ ಹಿಂದೆ ಕರಪತ್ರ, ಜಾಹೀರಾತು ಇತ್ಯಾದಿಗಳಲ್ಲಿ ಮಾಡುತ್ತಿದ್ದ ಪರಸ್ಪರ ಆರೋಪ ಇತ್ಯಾದಿಗಳನ್ನು ಇಲ್ಲಿಯೂ ಮುಂದುವರಿಸುತ್ತಾರೆ ಎಂಬಷ್ಟಕ್ಕೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ನಡೆಯುತ್ತಿರುವ ಸಾಮಾಜಿಕ ಮಾಧ್ಯಮ ಸಂವಹನ ಹಿಂದಿನ ಸಾಂಪ್ರದಾಯಿಕ ಸಂವಹನಗಳಷ್ಟು ನೇರವೂ ಅಲ್ಲ. ಸ್ಪಷ್ಟವೂ ಅಲ್ಲ. ಇಲ್ಲಿ ಹುಸಿ ಜನತಮದ ಉತ್ಪಾದನೆಯೊಂದು ನಿರಂತರವಾಗಿ ನಡೆಯುತ್ತದೆ.

ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗುವುದಕ್ಕೆ ಆರಂಭಿಸಿದ ದಿನದಿಂದಲೂ ಸುಳ್ಳು ಸುದ್ದಿಗಳ ಹಾವಳಿ ಇದೆ. ರಾಜಕೀಯ ಪಕ್ಷಗಳು ಜನಮತದ ಉತ್ಪಾದನೆಗೆ ಸುಳ್ಳು ಸುದ್ದಿಗಳನ್ನು ಬಳಸಲು ಆರಂಭಿಸಿದರೆ ಏನೆಲ್ಲಾ ಸಂಭವಿಸಬಹುದು ಎಂಬುದನ್ನು ಕಳೆದ ಐದಾರು ವರ್ಷಗಳಲ್ಲಿ ನಾವು ಕಂಡಿದ್ದೇವೆ. ಕ್ಷುಲ್ಲಕ ಘಟನೆಗಳು ಧಾರ್ಮಿಕ ಅನನ್ಯತೆಯ ಪ್ರಶ್ನೆಗಳಾಗುವುದು. ವಿವಾದವೇ ಅಲ್ಲದ ವಿಚಾರಗಳು ಮತೀಯ ಭಾವನೆಗಳನ್ನು ಕೆರಳಿಸುವಂಥ ಸುದ್ದಿಗಳಾಗಿ ಬದಲಾಗುವುದೆಲ್ಲವೂ ರಾಜಕೀಯ ಪಕ್ಷಗಳು ‘ಒಮ್ಮತದ ಉತ್ಪಾದನೆ’ಗಾಗಿ ನಡೆಸುವ ಮೇಲಾಟದಿಂದ.

ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಎರಡು ಮುಖ್ಯವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡಿತು. ಮೊದಲನೆಯದ್ದು 500 ಮತ್ತು 1000 ರೂಪಾಯಿಗಳ ನೋಟುಗಳನ್ನು ರದ್ದು ಮಾಡಿದ್ದು. ಎರಡನೆಯದ್ದು ಇಡೀ ದೇಶಕ್ಕೇ ಒಂದೇ ತೆರಿಗೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ). ಈ ಎರಡರ ಒಳಿತು ಕೆಡುಕುಗಳ ಬಗ್ಗೆ ನಡೆದ ಚರ್ಚೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಆದರೆ ಈ ಚರ್ಚೆ ವಸ್ತುನಿಷ್ಠವಾಗಿತ್ತೇ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ‘ಒಮ್ಮತದ ಉತ್ಪಾದನೆ’ಯ ಕರಾಳ ಮುಖ ಅನಾವರಣಗೊಳ್ಳುತ್ತದೆ.

ರಿಸರ್ವ್ ಬ್ಯಾಂಕ್‌ನ ವಾರ್ಷಿಕ ವರದಿ ನೋಟು ರದ್ಧತಿಯ ನಿಜ ಮುಖವನ್ನು ಜನರ ಮುಂದೆ ತೆರೆದಿಟ್ಟಿತು. ಈ ವಾಸ್ತವವನ್ನು ಸುಳ್ಳು ಎಂದು ಹೇಳಲು ಸಾಮಾಜಿಕ ಮಾಧ್ಯಮದಲ್ಲಿ ವ್ಯವಸ್ಥಿತ ಪ್ರಯತ್ನವೊಂದು ನಡೆಯಿತು. #DemonetisationSuccess ಎಂಬ ಹ್ಯಾಶ್ ಟ್ಯಾಗ್ ಅನ್ನು ತಥಾಕಥಿತ ಸ್ವಯಂ ಸೇವಕರಿಗೆ ಹಂಚಿ ಭಾರೀ ಸಂಖ್ಯೆಯಲ್ಲಿ ಒಂದೇ ಬಗೆಯ ಟ್ವೀಟ್‌ಗಳ ಪ್ರವಾಹ ಸೃಷ್ಟಿಸುವ ಪ್ರಯತ್ನ ಇದಾಗಿತ್ತು. ಇದನ್ನು ಅಲ್ಟ್ ನ್ಯೂಸ್ ಜಾಲತಾಣ ಬಯಲು ಮಾಡಿತ್ತು.  ಮೊನ್ನೆ ಮೊನ್ನೆಯಷ್ಟೇ ರಿಚರ್ಡ್ ಥೇಲರ್ ಅವರಿಗೆ ನೊಬೆಲ್ ಬಂದಾಗಲೂ ನೋಟು ರದ್ಧತಿಯ ಪರವಾದ ಜನಾಭಿಪ್ರಾಯ ರೂಪಿಸುವ ಪ್ರಯತ್ನ ನಡೆಯಿತು. ಜಿಎಸ್‌ಟಿಗೆ ಸಂಬಂಧಿಸಿಯೂ ಈ ಬಗೆಯ ಟ್ವೀಟ್ ಪ್ರವಾಹವೊಂದನ್ನು ಸೃಷ್ಟಿಸಲಾಗಿತ್ತು ಎಂಬುದೂ ಈಗ ಬಯಲಾಗಿದೆ. ಹೀಗೆ ಕೃತಕ ಟ್ವೀಟ್ ಪ್ರವಾಹಗಳನ್ನು ಸೃಷ್ಟಿಸುವ ಕ್ಷೇತ್ರಕ್ಕೆ ಈಗ ಕಾಂಗ್ರೆಸ್ ಕೂಡಾ ಅಧಿಕೃತ ಪ್ರವೇಶ ಪಡೆದಿರುವುದು ಇತ್ತೀಚೆಗಿನ ಎಎನ್ಐ ವರದಿಯಿಂದ ಸ್ಪಷ್ಟವಾಗುತ್ತಿದೆ. ಇಲ್ಲಿಯೂ ಒಂದು ತಮಾಷೆ ಇದೆ. ಈ ಎಎನ್ಐ ವರದಿ ಪ್ರಕಟವಾದದ್ದರ ಹಿಂದೆಯೇ ಅದನ್ನು ಪ್ರಚಾರ ಮಾಡುವ ಬಿಜೆಪಿ ಬೆಂಬಲಿಗರ ಟ್ವೀಟ್ ಪ್ರವಾಹವೊಂದು ಹರಿದಿತ್ತು. ಇದರಲ್ಲಿ ಬಿಜೆಪಿಯ ಐಟಿ ಸೆಲ್‌ನ ಕೈವಾಡವಿರುವುದನ್ನೂ ಅಲ್ಟ್ ನ್ಯೂಸ್ ಸಾಕ್ಷ್ಯಾಧಾರಗಳ ಸಮೇತ ಬಿಚ್ಚಿಟ್ಟಿದೆ.

ಈ ಎಲ್ಲಾ ಉದಾಹರಣೆಗಳು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ತಮ್ಮ ಭಾರೀ ಪ್ರಚಾರ ತಂತ್ರಗಳ ಮೂಲಕ ತಮ್ಮ ಪರವಾದ ಜನಾಭಿಪ್ರಾಯವಿದೆ ಎಂಬ ಹುಸಿ ವಾತಾವರಣವೊಂದನ್ನು ಸೃಷ್ಟಿಸಲು ಪ್ರಯತ್ನಿಸುವುದನ್ನು ತೋರಿಸುತ್ತಿವೆ. ಹುಸಿಯಾದ ಯಾವುದನ್ನೂ ಬಹುಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇಡೀ ರಾಜಕೀಯ ಸಂವಹನ ಎಂಬುದೇ ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಹಂಚುವುದು ಎಂಬ ಸ್ಥಿತಿಯತ್ತ ಸಾಗುತ್ತಿರುವುದಂತೂ ನಿಜ. ಇದು ತಕ್ಷಣಕ್ಕೆ ನಿರಾಶೆಯ ಭವಿಷ್ಯವೊಂದನ್ನು ನಮ್ಮೆದುರು ತೆರೆದಿಡುತ್ತಿದೆಯಾದರೂ ‘ರಾಮರಾಜ್ಯ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ’ ಎಂಬ ಶ್ರೀಸಾಮಾನ್ಯನ ಸಾಮಾನ್ಯ ಜ್ಞಾನ ಈಗಲೂ ಸುಳ್ಳಾಗಿಲ್ಲ ಎಂಬುದನ್ನು ಮರೆಯುವಂತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.