ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಣ್ಯರ ಪರವಾಗಿ ‘ಗಣ್ಯ’ರಿಗೊಂದು ನಮನ

Last Updated 23 ಏಪ್ರಿಲ್ 2017, 20:26 IST
ಅಕ್ಷರ ಗಾತ್ರ

ವಿಷಯ ಬಹಳ ಚಿಕ್ಕದು. ಚಿಕ್ಕದು ಅಂತ ತಗೊಂಡರೆ ಚಿಕ್ಕದು. ಅಧಿಕಾರದಲ್ಲಿರುವ ಕೆಲ ಮಂದಿ ತಮ್ಮ ಕಾರಿನ ಮೇಲೆ ಕೆಂಪು ದೀಪಗಳನ್ನು ಅಳವಡಿಸುವುದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ನಿಷೇಧ ಹೇರಿದೆ. ಇದರ ಬಗ್ಗೆ ಬಹಳಷ್ಟು ಮಂದಿ ಬಹಳಷ್ಟು ಹೇಳಿ ಆಗಿದೆ. ಆದರೂ ಹೇಳದೆ ಉಳಿದ ಕೆಲ ವಿಚಾರಗಳನ್ನು ಹೇಳಬೇಕಿದೆ. ಕೆಲವೊಮ್ಮೆ ಹೇಳಿದ್ದನ್ನೇ ಮತ್ತೆ ಹೇಳಬೇಕಾಗಿದೆ.

ಸ್ವತಂತ್ರ ಭಾರತದಲ್ಲಿ ಸರ್ಕಾರಿ ವ್ಯವಸ್ಥೆ ಹೇಗಿರಬೇಕು ಎನ್ನುವ ಚಿಂತನೆ ಪ್ರಾರಂಭವಾದಾಗ ಗಾಂಧೀಜಿ ಒಂದು ರೀತಿಯಲ್ಲಿ ಯೋಚಿಸಿದರೆ, ಬಿ.ಆರ್. ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಅವರು ಇನ್ನೊಂದು ರೀತಿಯಲ್ಲಿ ಯೋಚಿಸುತ್ತಾರೆ. ಕೇಂದ್ರೀಕೃತ ಅಧಿಕಾರವಿರುವ ಬೃಹತ್ ಸರ್ಕಾರಿ ವ್ಯವಸ್ಥೆಯ ಬಗ್ಗೆ ಗಾಂಧೀಜಿಗೆ ಅಪಾರ ಆತಂಕವಿತ್ತು.

ಅವರ ಪ್ರಕಾರ ಆಧುನಿಕ ಸರ್ಕಾರಿ ವ್ಯವಸ್ಥೆ (modern state) ಜನರಿಂದ  ಸದಾ ದೂರ ಉಳಿದು ಅವರನ್ನು ಶೋಷಿಸುವ ಆತ್ಮರಹಿತ ಯಂತ್ರ (soulless machine). ಭಾರತೀಯ ಸಮಾಜದ ಸ್ಥಿತಿಗತಿಗಳ ಬಗ್ಗೆ ತಮ್ಮದೇ ಆದ ಆತಂಕಗಳನ್ನು ಇರಿಸಿಕೊಂಡಿದ್ದ ಅಂಬೇಡ್ಕರ್ ಮತ್ತು ನೆಹರೂ ಅವರಿಗೆ, ಆಧುನಿಕ ಸರ್ಕಾರಿ ವ್ಯವಸ್ಥೆ ಸಾಮಾಜಿಕ ಅಂಕುಡೊಂಕುಗಳನ್ನು ಅಳಿಸಿಹಾಕಬಲ್ಲ ಯಂತ್ರವಾಗಿ ಕಾಣಿಸುತ್ತದೆ.

ಈ ಚಾರಿತ್ರಿಕ ಬೌದ್ಧಿಕ ಸಂಘರ್ಷದಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ವಾದ ಗೆದ್ದು ಭಾರತೀಯ ಸಂವಿಧಾನ ಕೇಂದ್ರೀಕೃತ-ಬೃಹತ್ ಸರ್ಕಾರಿ ಯಂತ್ರವನ್ನು ಒಪ್ಪಿಕೊಳ್ಳುತ್ತದೆ. ಹಾಗೆ ಅಸ್ತಿತ್ವಕ್ಕೆ ಬಂದ ಸರ್ಕಾರಿ ವ್ಯವಸ್ಥೆ ಈ ಎರಡು ರೀತಿಯ ನಂಬಿಕೆಗಳನ್ನು ಒಂದು ರೀತಿಯಲ್ಲಿ ಸಮರ್ಥಿಸುತ್ತಾ, ಒಂದು ರೀತಿಯಲ್ಲಿ ಹುಸಿಗೊಳಿಸುತ್ತಾ ಬೆಳೆದದ್ದು ಈಗ ಇತಿಹಾಸ.

ಅಧಿಕಾರವನ್ನು ಆರಾಧಿಸುವ ಅಧಿಕಾರಸ್ಥರನ್ನು ಓಲೈಸುವ, ಅಧಿಕಾರದ ಮುಂದೆ ಬೋರಲು ಬೀಳುವ, ಮೇಲು-ಕೀಳು ಎಂದು ಶ್ರೇಣೀಕೃತವಾಗಿಯೇ ಯೋಚಿಸುವ ಭಾರತೀಯ ಮನಸ್ಥಿತಿಯನ್ನು ಆಧುನಿಕ ಸರ್ಕಾರಿ ಯಂತ್ರ ಮತ್ತು ಅದಕ್ಕೆ ಬುನಾದಿಯಾಗಿರುವ ಪ್ರಜಾತಂತ್ರ ವ್ಯವಸ್ಥೆ ಅಳಿಸಿಹಾಕಬಹುದು ಎಂಬ  ಅಂಬೇಡ್ಕರ್-  ನೆಹರೂ ನಂಬಿಕೆ ಹುಸಿಯಾಗಿ ಅದಕ್ಕೆ ವ್ಯತಿರಿಕ್ತವಾದ ಸತ್ಯವೊಂದು ನಮ್ಮ ಮುಂದಿದೆ.

ಯಾವ ಮನಸ್ಥಿತಿಯನ್ನು ಆಧುನಿಕ ರಾಜ್ಯ- ರಾಜ್ಯಾ೦ಗ ಅಳಿಸಿಹಾಕಬೇಕಿತ್ತೋ ಆ ಮನಸ್ಥಿತಿ ಇಡೀ ಆಧುನಿಕ ವ್ಯವಸ್ಥೆಯನ್ನೇ ಆವರಿಸಿಕೊಂಡುಬಿಟ್ಟಿತು. ಅಧಿಕಾರ ಪಡೆದ ಮಂದಿ ತಮ್ಮ ವಾಹನಗಳ ಮೇಲೆ ಅಳವಡಿಸಿಕೊಳ್ಳುವ ಕೆಂಪು ದೀಪ ಈ ವಿಪರ್ಯಾಸದ ಸಂಕೇತ.

ಅದು ಅಧಿಕಾರದ ಸಂಕೇತ ಮಾತ್ರವಲ್ಲ; ಅದೊಂದು ಪರ್ಯಾಯ ಜಾತಿ ವ್ಯವಸ್ಥೆಯ ಸಂಕೇತ ಕೂಡಾ. ಯಾಕೆಂದರೆ ಅದು ಅಧಿಕಾರಸ್ಥರಿಗೆ ‘ನಾವು ನಿಮಗಿಂತ  ಬೇರೆ, ಇತರರಿಗಿಂತ ಬೇರೆ, ಇತರರಿಗಿಂತ ಮೇಲೆ, ಇತರರಿಗಿಂತ ಶ್ರೇಷ್ಠ, ಇತರರಿಗಿಂತ ಉತ್ಕೃಷ್ಟ’ ಎಂದು ಇತರೀಕರಿಸುವ (otherization) ವರ್ಣಾಶ್ರಮ ವ್ಯವಸ್ಥೆಯ ಆಧುನಿಕ ರೂಪ.

ಇಲ್ಲೊಂದು ವ್ಯಂಗ್ಯ ಗಮನಿಸಿ. ಕೆಂಪು ದೀಪದ ಬಳಕೆ ಬ್ರಿಟಿಷರ ಬಳುವಳಿ. ಆದರೆ ಇಂದು ಇಂಗ್ಲೆಂಡ್‌ನಲ್ಲಿ ಕೆಂಪು ದೀಪ ಬಳಸುವುದು ಕಸ ಎತ್ತುವ ವಾಹನಗಳು ಮಾತ್ರ. ‘ಈ ವಾಹನದಲ್ಲಿ ಕಸ ಇದೆ; ಸ್ವಲ್ಪ ದೂರವಿರಿ’ ಎಂದು ಸಾರುವುದಕ್ಕೆ ಅದನ್ನು ಅಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಕೆಂಪು ದೀಪ ಅಳವಡಿಸಿದ ವಾಹನಗಳಲ್ಲಿ ಇರುವುದು ಅಧಿಕಾರ. ಬ್ರಿಟನ್‌ನಲ್ಲಿ ಅಂತಹ ವಾಹನಗಳ ಒಳಗೆ ಇರುವುದು ಕೊಳಕು. ಎರಡೂ ಸನ್ನಿವೇಶಗಳ ಮಧ್ಯೆ ಮೇಲ್ನೋಟಕ್ಕೆ ಭಿನ್ನತೆ ಇದೆ- ಆಳವಾಗಿ ಯೋಚಿಸಿದರೆ ಸಾಮ್ಯತೆ ಇದೆ.

ಅಧಿಕಾರಸ್ಥರಿಗೆ ನೀಡಿದ ಭದ್ರತೆ ಇತ್ಯಾದಿಗಳನ್ನು ಈ ಸಾಲಿಗೆ ಸೇರಿಸಬಹುದಾದರೂ ಎಲ್ಲಾ ರೀತಿಯ ಭದ್ರತೆಯ ವಿಚಾರವನ್ನು ಕೆಂಪು ದೀಪದ ಜತೆ ಹೋಲಿಸಬಾರದು. ಯಾಕೆಂದರೆ ಕೆಲವರಿಗೆ ಭದ್ರತೆ ಅಗತ್ಯವಾಗಿರಬಹುದು. ಭದ್ರತಾ ವ್ಯವಸ್ಥೆಯಲ್ಲಿ ಎಷ್ಟು ಅಗತ್ಯ, ಎಷ್ಟು ಅನಗತ್ಯ ಎನ್ನುವ ಪ್ರಶ್ನೆ ಎತ್ತಬಹುದು. ಆದರೆ ಭದ್ರತೆಯನ್ನು ಕೇವಲ ಅಧಿಕಾರ ಪ್ರದರ್ಶನದ ಸಾಂಕೇತಿಕತೆ ಎಂದಷ್ಟೇ ಹೇಳಲು ಸಾಧ್ಯವಿಲ್ಲ. ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವ ವಿಷಯ ತೀರಾ ಭಿನ್ನವಾದದ್ದು. ಅದು ಪ್ರಖರ ಹಾಗೂ ಕ್ರೂರವಾದ ಒಂದು ಸಂಕೇತ.

ಒಂದು ಸಮಾಜದಲ್ಲಿ ಜನ ಯಾವ್ಯಾವ ವಿಷಯಗಳಿಗೆ ಎಷ್ಟೆಷ್ಟು ನಾಚಿಕೆಪಡುತ್ತಾರೆ ಎನ್ನುವುದು ಆ ಸಮಾಜದ ನಾಗರಿಕತೆಯ ಮತ್ತು ಸಂಸ್ಕೃತಿಯ ಸತ್ವ ಎಷ್ಟಿದೆ ಎನ್ನುವುದನ್ನು ಜಗತ್ತಿಗೆ ಸಾರುತ್ತದೆ. ಯಾವ ವಿಷಯದಲ್ಲೂ ನಾಚಿಕೆ ಎನ್ನುವ ಸ್ವಭಾವ ಅಥವಾ ಸಂವೇದನೆಯೇ ಕಾಣದ ಸಂಕೀರ್ಣ ಸ್ಥಿತಿಯೊಂದನ್ನು ಭಾರತ ತಲುಪಿದಂತಿದೆ.

ಬರಬರುತ್ತಾ ನಾಚಿಕೆ ಪಡಬೇಕಾದ ವಿಷಯಗಳೆಲ್ಲಾ ಅಂತಸ್ತಿನ ಮತ್ತು ಪ್ರತಿಷ್ಠೆಯ ವಿಚಾರಗಳಾಗುತ್ತಿರುವುದು ಇನ್ನೂ ಅಪಾಯಕಾರಿ. ಕೆಂಪು ದೀಪ ಅಳವಡಿಸಿಕೊಂಡು ಅಧಿಕಾರ ಪ್ರದರ್ಶನ ನಡೆಸುವವರಿಗೆ ನಾಚಿಕೆ ಇರಲಿಲ್ಲ. ನೋಡುವ ಜನ ಕೂಡಾ ಕೊನೇಪಕ್ಷ ಅದರ ಕುರಿತು ಛೀ ಛೀ ಅನ್ನಲಿಲ್ಲ. ಬದಲಿಗೆ ಇಂತಹ ಅಧಿಕಾರ ಪ್ರದರ್ಶನದ ಸಂಕೇತಗಳನ್ನೆಲ್ಲಾ ಜನ ಬೆರಗಿನಿಂದ ನೋಡಿದರು.

ಸಾಧ್ಯವಾದರೆ ‘ನಾವು ಈ ರೀತಿ ಅಧಿಕಾರ ಪ್ರದರ್ಶಿಸುವ ಮಟ್ಟ ತಲುಪಬೇಕು’ ಎಂದು ಆಕಾಂಕ್ಷಿಗಳಾದರು. ಬರಬರುತ್ತಾ ಎಲ್ಲಾ ರೀತಿಯ ಅಧಿಕಾರ ಪ್ರದರ್ಶನಗಳೂ ಪ್ರತಿಷ್ಠೆಯ ಸಂಕೇತಗಳಾದವು. ಈಗ ರೇಪ್ ಮಾಡಿ ಆ ದೃಶ್ಯಗಳನ್ನು  ಅಳವಡಿಸುವುದು ಕೂಡಾ ಒಂದು ಪ್ರದರ್ಶನ, ಒಂದು ಪ್ರತಿಷ್ಠೆಯ ವಿಷಯ. ನಾಚಿಕೆಪಡಬೇಕಾದಲ್ಲಿ ನಾಚಿಕೆ ಪಡಲಾಗದ  ಒಂದು ಸಮಾಜಕ್ಕೆ ಹೇಸಿಗೆ ಪಡಬೇಕಾದಲ್ಲಿ ಹೇಸಿಗೆ ಪಡಲಾಗುವುದಿಲ್ಲ. ಯಾವುದೂ  ಅಸಹ್ಯ ಹುಟ್ಟಿಸುವುದಿಲ್ಲ.

ಮೊನ್ನೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಾಗ ‘ಗಣ್ಯರು’ ತಮ್ಮ ವಾಹನಗಳ ಮೇಲೆ ಕೆಂಪು ದೀಪ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ವರದಿಗಳು ಬಂದವು. ಇಲ್ಲಿ ಬಳಕೆಯಾದ ಗಣ್ಯರು ಎನ್ನುವ ಪದ ತೀರಾ ವಿಚಿತ್ರವಾಗಿದೆ. ಅದೊಂದು ಅಸಾಂವಿಧಾನಿಕ - ಪ್ರಜಾತಂತ್ರ ವಿರೋಧಿ ಪದ. ಅಧಿಕಾರಸ್ಥ ಮಂದಿಯನ್ನು ‘ಗಣ್ಯರು’ ಎಂದು ಕರೆಯುವ ಮಾಧ್ಯಮಗಳ ಮನಸ್ಥಿತಿ ಕೂಡ ಮೇಲೆ ಹೇಳಿದ ಭಾರತೀಯ ಶ್ರೇಣೀಕೃತ ಮನಸ್ಥಿತಿಯ ಇನ್ನೊಂದು ಅವತಾರ.

ಅಧಿಕಾರ ಹಿಡಿದವರು ಗಣ್ಯರು ಎಂದಾದರೆ ಅವರಿಗೆ ಅಧಿಕಾರ ಕೊಟ್ಟವರು ನಗಣ್ಯರೇ? ಅಧಿಕಾರ ಹಿಡಿಯುವುದು ಜನಪ್ರತಿನಿಧಿಗಳು. ಪ್ರತಿನಿಧಿಗಳಾದವರು ಅವರು ಯಾರನ್ನು ಪ್ರತಿನಿಧಿಸುತ್ತಾರೋ ಅವರಿಗಿಂತ ಗಣ್ಯರಾಗುವುದು ಹೇಗೆ?  ಪ್ರಪಂಚದ ಇನ್ನೊಂದು ದೇಶದ ಮಾಧ್ಯಮಗಳು ‘ಗಣ್ಯರು’ ಎನ್ನುವ ಪದ ಬಳಸುವುದಿಲ್ಲ.

ಸಂವಿಧಾನ ಜಾರಿಗೆ ಬಂದು  67 ವರ್ಷಗಳಾದ ನ೦ತರವಾದರೂ ಈಗ ಇಂತಹದ್ದೊಂದು ವಿಚಾರ ಸರ್ಕಾರದ ತಲೆಗೆ ಬಂತಲ್ಲ. ಇದು ಸಂವಿಧಾನ ಸಾರಿದ ಸಮಾನತೆಯ ಪರ್ವದ ಉದಯ ಅಂತ ತಿಳಿದುಕೊಳ್ಳೋಣವೇ ಅಥವಾ ಕೊನೆಗೂ ಭಾರತದ ಅಧಿಕಾರಸ್ಥರ ರಕ್ತಕ್ಕೆ ಈ ತನಕ ಇಲ್ಲದೆ ಇದ್ದ ನಾಚಿಕೆಯ ಸ್ವಭಾವದ ಸಂಚಯನ ಆಯಿತು ಎಂದು ತಿಳಿದುಕೊಳ್ಳೋಣವೇ? ಹಾಗಾಗಿದ್ದರೆ ಸರ್ಕಾರದ ನಿರ್ಧಾರವನ್ನು ಚಾರಿತ್ರಿಕ ಎನ್ನಬಹುದಿತ್ತು.

ಅಧಿಕಾರಸ್ಥ ಮಂದಿಯ ವಾಹನದಿಂದ ಕೆಂಪು ದೀಪ ಇಳಿದದ್ದನ್ನು 1947ರ ಆಗಸ್ಟ್ 14–15ರ ಮಧ್ಯರಾತ್ರಿ ಯೂನಿಯನ್ ಜಾಕ್ (ಬ್ರಿಟಿಷ್ ಧ್ವಜ) ಕೆಳಗಿಳಿದದ್ದಕ್ಕೆ ಹೋಲಿಸಬಹುದಿತ್ತು. ಆದರೆ ಇಲ್ಲಿ ಆಗಿರುವುದೇ ಬೇರೆ. ಅದು ಏನು ಎಂದು ತಿಳಿದುಕೊಳ್ಳಲು ಇಡೀ ನಿರ್ಧಾರದ ಹಿನ್ನೆಲೆಯನ್ನು ಪರಿಶೀಲಿಸಬೇಕು.

ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರನ್ನು ಹೊರತುಪಡಿಸಿ ಇತರರು ಕೆಂಪು ದೀಪ ಬಳಸುವುದನ್ನು ನಿಯಂತ್ರಿಸಬೇಕು ಎಂದು ಈ ಹಿಂದೆ ನ್ಯಾಯಾಂಗ ಹಲವು ಬಾರಿ ಹೇಳಿದರೂ ಯಾರೂ ಕೇಳಿಸಿಕೊಂಡಿರಲಿಲ್ಲ ಅಥವಾ ಸಾಂವಿಧಾನಿಕ ಹುದ್ದೆಗಳಲ್ಲಿ ಇದ್ದವರು ಬಳಸುವ ಅವಶ್ಯಕತೆ ಏನಿದೆ  ಎನ್ನುವ ಪ್ರಶ್ನೆಯನ್ನು ಯಾರೂ ಎತ್ತಲಿಲ್ಲ. ಹೆಚ್ಚೆಂದರೆ ಪೊಲೀಸರು ಮತ್ತು ಕಾನೂನು-ಸುವ್ಯವಸ್ಥೆ ನೋಡಿಕೊಳ್ಳುವ ಅಧಿಕಾರಸ್ಥ ಮಂದಿ ಅದನ್ನು ಬಳಸಬಹುದು ಎಂದರೆ ಅದಕ್ಕೊಂದು ಅರ್ಥವಿತ್ತು.

ಈ ವರ್ಗದವರಿಗೂ ಇದು ತೀರಾ ಅಗತ್ಯ ಅಂತ ಏನೂ ಇಲ್ಲ. ಅದಕ್ಕೆ ಪರ್ಯಾಯವಾದ ಇತರ ಸಾಧನಗಳನ್ನು ಬಳಸಬಹುದು. ಏನೇ ಇರಲಿ, ನ್ಯಾಯಾಂಗವು ನಿಯಂತ್ರಣ ಹೇರುವುದು ಮತ್ತು ಅದಕ್ಕೆ ಯಾರೂ ಹೆಚ್ಚಿನ ಬೆಲೆ ಕೊಡದಿರುವುದು ನಡೆಯುತ್ತಾ ಬಂತು. ಇಷ್ಟರ ಮಧ್ಯೆ ಈ ವಿಷಯ ಒಂದು ನಿರ್ಣಾಯಕವಾದ ಚರ್ಚೆಗೆ ಬಂದದ್ದು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡ ನಂತರ.

ಆಮ್ ಆದ್ಮಿ ಪಕ್ಷ ವಿಐಪಿ ಸಂಸ್ಕೃತಿಯನ್ನು ವಿರೋಧಿಸುವ ತನ್ನ ಚುನಾವಣಾ ಅಸ್ತ್ರಗಳ ಪೈಕಿ ಕೆಂಪು ದೀಪದ ಪ್ರಶ್ನೆಯನ್ನು ಮುಂದೆ ಇಟ್ಟಿತು.  ‘ಅಧಿಕಾರಕ್ಕೆ ಬಂದರೆ ನಮ್ಮ ಪಕ್ಷದವರು ಅದನ್ನು ಬಳಸುವುದಿಲ್ಲ’ ಎಂದು ಹೇಳಿತು ಮತ್ತು ಹೇಳಿದ್ದನ್ನು ಮಾಡಿ ತೋರಿಸಿತು. ಕೆಂಪು ದೀಪ  ನಿಷೇಧದ ವಿಷಯಕ್ಕೆ ಈ ಮೂಲಕ ಒಂದು ರಾಜಕೀಯ ಆಕರ್ಷಣೆ ಬಂತು. ಆಮ್ ಆದ್ಮಿ ಪಕ್ಷವನ್ನು ನೇರವಾಗಿ ಎದುರಿಸಬೇಕಾದ ಎಲ್ಲರೂ ಈಗ ಆ ಪಕ್ಷ ತನ್ನ ಯಶಸ್ಸಿಗೆ ಬಳಸಿಕೊಂಡ ಅಸ್ತ್ರಗಳನ್ನು  ತಾವೂ ಬಳಸಿಕೊಳ್ಳುತ್ತಿದ್ದಾರೆ.

ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಅಧಿಕೃತ ವಿರೋಧ ಪಕ್ಷವಾಯಿತು.  ಕೆಂಪು ದೀಪದ ವಿಷಯದಲ್ಲಿ ಎಂದೂ ತಲೆಕೆಡಿಸಿಕೊಳ್ಳದ ಆ ರಾಜ್ಯದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಲೇ ಕೆಂಪು ದೀಪದ ಬಳಕೆ ನಿಷೇಧಿಸಿತು. ದೆಹಲಿ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಎದುರಿಸಬೇಕಾಗಿತ್ತು.

ಆ ಪಕ್ಷ ಈಗ ಹಿಂದಿನಷ್ಟು ಪ್ರಬಲ ಅಲ್ಲದೆ ಹೋದರೂ ಅದಕ್ಕೆ ಒಂದು ಕಾಲದಲ್ಲಿ ನೆರವಾದ ಅಸ್ತ್ರವೊಂದನ್ನು ಈಗ ಬಿಜೆಪಿ ಬಳಸಿಕೊಳ್ಳುತ್ತಿದೆ ಅಥವಾ ದೇಶದಾದ್ಯಂತ ಆರ್ಭಟಿಸುತ್ತಿರುವ ವಿಐಪಿ ಸಂಸ್ಕೃತಿ ಸಾಮಾನ್ಯ ಜನರ ಸಹನೆ ಪರೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ಪ್ರದರ್ಶನದ ಕೆಲ ಕುರುಹುಗಳ ಪಾವಿತ್ರ್ಯ ನಾಶ ಮಾಡದೆ ಹೋದರೆ ಇವುಗಳ ವಿರುದ್ಧ ನೊಂದ ಜನ ಕಲ್ಲು ಕೈಗೆತ್ತಿಕೊಳ್ಳುವ ದಿನ ದೂರವಿಲ್ಲ ಎಂದು ಬಿಜೆಪಿಯಲ್ಲಿರುವ ಕೆಲವರಿಗೆ ಅನಿಸಿರಬಹುದು.

ಏನೇ ಇರಲಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವವರು ಜನಪರವಾದ ಕೆಲಸ ಮಾಡುವುದು ರಾಜಕೀಯ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಎನ್ನುವುದರಲ್ಲಿ ಹೊಸತೇನೂ ಇಲ್ಲ. ಹಾಗೆ ಮಾಡುವುದು ತಪ್ಪು ಎಂದೂ ಹೇಳುವ ಹಾಗಿಲ್ಲ. ಪಕ್ಷಗಳ ರಾಜಕೀಯ ಹಿತ ಮತ್ತು ಜನಹಿತಗಳ ನಡುವೆ ಒಂದು ಸಮತೋಲಿತ ಸಮೀಕರಣ ಕಾಯ್ದುಕೊಳ್ಳುವುದರಲ್ಲಿ ಪ್ರಜಾತಂತ್ರದ ಯಶಸ್ಸು ಅಡಗಿದೆ ಎನ್ನುವುದು ಸಾರ್ವತ್ರಿಕವಾಗಿ ಒಪ್ಪಿತವಾದ ರಾಜಕೀಯ ತತ್ವ. ಆದುದರಿಂದ ಕೇಂದ್ರ ಸರ್ಕಾರ ಕೆಂಪು ದೀಪದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಗಿಮಿಕ್ ಆದರೂ ಪರವಾಗಿಲ್ಲ - ಅದು ಸ್ವಾಗತಾರ್ಹ.

ಆದುದರಿಂದ, ಭಾರತೀಯ ಪ್ರಜಾತಂತ್ರದ ಮುಖದ  ಮೇಲಣ ದುರ್ಮಾಂಸ ತುಂಬಿದ ಮೊಡವೆಯಂತೆ  ಕಾಣುತ್ತಿದ್ದ ಈ ಕೆಂಪುದೀಪದ ಸಂಕೇತವನ್ನು ಕಿತ್ತುಹಾಕುವಲ್ಲಿ ಕ್ರಮ ಕೈಗೊಂಡ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಮಸ್ತ ನಗಣ್ಯ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ಬಿಜೆಪಿಯ ನಿರ್ಣಯಕ್ಕೆ ನಿರ್ಣಾಯಕವಾದ ವೇದಿಕೆ ನಿರ್ಮಿಸಿದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಮತ್ತು ಬಳಗದವರಿಗೆ ಕೃತಜ್ಞತೆಗಳು.

ಈ ಎಲ್ಲಾ ಬೆಳವಣಿಗೆಗೆ ಮೊದಲೇ ಕರ್ನಾಟಕದಲ್ಲಿ ಸಚಿವರಾಗಿದ್ದಾಗ ತಮ್ಮ ಅಧಿಕೃತ ವಾಹನದಿಂದ ಸದ್ದುಗದ್ದಲವಿಲ್ಲದೆ ಕೆಂಪು ದೀಪ ಕಿತ್ತೆಸೆದು ಮಾದರಿಯಾದ  ಬಿಜೆಪಿಯ ಎಸ್. ಸುರೇಶ್ ಕುಮಾರ್ ಅವರಿಗೆ ಧನ್ಯವಾದಗಳು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ಕೂಡಾ ಹೀಗೆ ಮಾಡಿದ್ದಾಗಿ ಪತ್ರಿಕೆಯೊಂದರಲ್ಲಿ ಹೇಳಿದ್ದಾರೆ.

ಅವರಿಗೂ ಧನ್ಯವಾದಗಳು. ಕೊನೆಯದಾಗಿ ಈ ಲೇಖಕನ ಗಮನಕ್ಕೆ ಬಾರದೆ ದೇಶದಾದ್ಯಂತ ಈ ಮಾದರಿ ಪಾಲಿಸಿದ ಯಾರಾದರೂ ಇದ್ದರೆ ಅಂತಹವರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಕೆಲ ಸಂಕೇತಗಳಿಗೆ ಸಾಂಕೇತಿಕತೆಯನ್ನು ಮೀರಿದ ಪ್ರಾಧಾನ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT