ಭಗವಂತನ ಕುರುಹು

7

ಭಗವಂತನ ಕುರುಹು

Published:
Updated:

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |

ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡುಕರದವೊಲು ? – ಮಂಕುತಿಮ್ಮ
||39||

ಪದ- ಅರ್ಥ: ಪುಸಿ=ಸುಳ್ಳು, ದಿಟ=ಸತ್ಯ, ಕಾಣ್ಬವೊಲೆಸಗೆ=ಕಾಣ್ಬ
ವೊಲ್(ಕಾಣುವಹಾಗೆ)=ಎಸಗೆ(ಮಾಡಿದರೆ), ಪರಬೊಮ್ಮನೆನ್ನ ವೊಡೆ
=ಪರಬೊಮ್ಮನು+ಎನ್ನುವೊಡೆ(ಎನ್ನುವುದಾದರೆ), ಒಸೆದೇತ
ಕವನೀಯನೆಮಗೊಂದು=ಒಸೆದು+ಏತಕೆ+ಅವನು+ಈಯನು(ಕೊಡುವುದಿಲ್ಲ)+ಎಮಗೆ+ಒಂದು, ಕುರುಹ=ಗುರುತು, ನಿಶೆಯೊಳುಡುಕರದವೊಲು+ನಿಶೆಯೊಳು(ಕತ್ತಲೆಯ ರಾತ್ರಿಯಲ್ಲಿ)+ಉಡುಕರದವೊಲು= ನಕ್ಷತ್ರದ ರೀತಿ.

ವಾಚ್ಯಾರ್ಥ: ಸುಳ್ಳನ್ನು ನೀನು ಸುಳ್ಳುಮಾಡಿ ಸತ್ಯವನ್ನು ಕಾಣುವ ಹಾಗೆ ಪರಬ್ರಹ್ಮ ಮುಸುಕು ಹಾಕಿಕೊಂಡಿದ್ದಾನೆ ಎನ್ನುವುದಾದರೆ, ರಾತ್ರಿಯಲ್ಲಿ ಹೇಗೆ ನಕ್ಷತ್ರಗಳು ಮಾರ್ಗಸೂಚಿಸುತ್ತವೊ ಹಾಗೆ ನಮಗೆ ಯಾಕೆ ಆತ ತನ್ನ ನೈಜರೂಪದ ಗುರುತನ್ನು ತೋರುವುದಿಲ್ಲ?

ವಿವರಣೆ: ಹಿಂದಿನ ಕಗ್ಗದ ಹಾಗೆ ಇಲ್ಲಿಯೂ ಸಾಧಕನ ಆರ್ತತೆಯ ಉತ್ಕಟತೆ ಕಾಣುತ್ತದೆ. ಭಗವಂತಾ, ನೀನು ಎಲ್ಲೆಲ್ಲಿಯೂ ಇದ್ದೀಯಾ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಕಾಣಬೇಕಲ್ಲ? ನೀನು ಸಮಸ್ತ ಪ್ರಪಂಚವನ್ನು ಆವರಿಸಿಕೊಂಡು ಮುಸುಕುಹಾಕಿದಂತೆ ಇರುವೆ ಎನ್ನುತ್ತವೆ ದರ್ಶನಶಾಸ್ತ್ರಗಳು. ಆದರೆ ನಾನು ಕಂಡಿಲ್ಲ. ಕಾಣಬೇಕೆಂಬ ಅಪೇಕ್ಷೆ ಅತ್ಯಂತ ತೀವ್ರವಾಗಿದೆ. ನೀನು ನನಗೆ ಸಂಪೂರ್ಣವಾಗಿ ಕಾಣಿಸಿಕೊಳ್ಳದಿದ್ದರೂ ಒಂದು ಗುರುತನ್ನು ನನಗಾಗಿ ಕೊಡು. ಗಾಢಾಂಧಕಾರದ ರಾತ್ರಿಯಲ್ಲಿ ನಕ್ಷತ್ರಗಳು ಬಹುದೂರವಿದ್ದರೂ ಒಂದು ಧೈರ್ಯವನ್ನು, ದಾರಿಯನ್ನು ತೋರುವಂತೆ ನಿನ್ನ ಇರುವಿನ ಗುರುತು ನೀಡಿ ನಮ್ಮನ್ನು ನಡೆಸು ಎನ್ನುವುದು ಈ ಕಗ್ಗದ ಆಂತರ್ಯ.

ಶ್ರೀ ರಾಮಕೃಷ್ಣರು ಕಾಳಿ ಮಂದಿರದಲ್ಲಿ ಹಗಲುರಾತ್ರಿ ಹಂಬಲಿಸಿ, ಹೊರ ಳಾಡಿ ಒದ್ದಾಡಿದ್ದು ಈ ದರ್ಶನಕ್ಕೆ. ಕೋಳೂರು ಕೊಡಗೂಸು, ಅಂಡಾಳ್, ಮೀರಾ ಅವರೆಲ್ಲರ ಮಾತು ಬೇರೆಯಾದರೂ ಮೂಲಧ್ವನಿ ಒಂದೇ - ನಿನ್ನ ಗುರುತನ್ನು ನಮಗೆ ನೀಡಿ ಮುನ್ನಡೆಸು. ಅವರೆಲ್ಲರಿಗೂ ಭಗವಂತ ದರ್ಶನವನ್ನಿತ್ತ ಎಂದು ನಂಬುವುದಾದರೆ ನಮಗೂ ಕಂಡಾನು. ಹೊರಗಣ್ಣಿನಿಂದ ಅವನನ್ನು ಕಾಣುವುದು ಅಸಾಧ್ಯ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ, ‘ಅರ್ಜುನ, ನಿನ್ನ ಹೊರಕಣ್ಣಿಗೆ ಈಗ ಜಗತ್ತೊಂದೇ ಕಾಣುತ್ತಿದೆ. ಆ ಜಗತ್ತಿನ ವ್ಯಾಪಾರ ನಿನ್ನನ್ನು ಕಾಡುತ್ತಿದೆ. ಒಳಗಣ್ಣಿನಿಂದ ನೋಡು. ಆಗ ಜಗತ್ತಿನ ಹಿಂದುಗಡೆ, ಅದಕ್ಕೆ ಆಶ್ರಯವಾಗಿ ಅನಂತ ಚೈತನ್ಯವಿರುವುದು ನಿನಗೆ ಗೋಚರವಾಗುತ್ತದೆ. ಆ ಪರವಸ್ತುವಿಗೆ ಶರಣಾಗು. ಅದು ಈಗ ತುಂಬ ದೂರ ಎನ್ನಿಸಬಹುದು. ಆದರೆ ನೀನು ಆ ಕಡೆಗೆ ಮುಖ ಮಾಡಿ, ಅದನ್ನೇ ನಂಬಿ, ಅದರ ದಾರಿಯಲ್ಲಿ ನಡೆ. ಆಗ ಅದನ್ನೇ ಸೇರುವೆ’.

ಭಗವದಭಿಮುಖವಾಗಿ ಸಾಗಿದ ಜೀವನವೇ ಧರ್ಮಜೀವನ, ಧನ್ಯಜೀವನ. ಅದಕ್ಕೆ ಯಾವ ನೈಜ ಕುರುಹೂ ಬೇಕಿಲ್ಲ. ಯಾಕೆಂದರೆ ಅದಕ್ಕೆ ಎಲ್ಲೆಲ್ಲೂ ಬ್ರಹ್ಮವೇ ಕಂಡೀತು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !