ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಅವಧೂತ ಮತ್ತು ಕ್ಯಾಂಪಸ್‌ ಸತ್ಯಗಳು

ಪ್ರಶ್ನೆ ಕೇಳಲು ಬಾರದ ವಿದ್ಯಾರ್ಥಿಗಳ ಮಧ್ಯೆ ಜಗ್ಗಿ ವಾಸುದೇವರು ಆಡಿದ್ದೆಲ್ಲವೂ ಉತ್ತರ...
Last Updated 8 ಅಕ್ಟೋಬರ್ 2018, 20:14 IST
ಅಕ್ಷರ ಗಾತ್ರ

ಅದೊಂದು ಸಂವಾದ ಸರಣಿ. ಅಂಥಿಂಥ ಸಂವಾದ ಅಲ್ಲ. ಒಂದೆಡೆ ಈ ದೇಶದ ಅತ್ಯಂತ ಪ್ರತಿಷ್ಠಿತ ಎಂದೆನಿಸಿಕೊಂಡ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು. ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದು ಎಂದರೆ ಒಂದು ದೊಡ್ಡ ಬೌದ್ಧಿಕ ಯುದ್ಧ ಜೈಸಿದಂತೆ. ಸದ್ಯ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಾಗೆ ಶ್ರೇಷ್ಠಾತಿಶ್ರೇಷ್ಠ ಎಂದು ಪರಿಗಣಿತರಾದ ವಿದ್ಯಾರ್ಥಿಗಳು ಈ ಸಂವಾದ ಸರಣಿಯಲ್ಲಿ ಪ್ರಶ್ನೆ ಕೇಳುವವರು. ಉತ್ತರಿಸುವವರಾದರೂ ಎಂತಹವರು ಎನ್ನುತ್ತೀರಿ? ಅವರನ್ನು ಸಾಮಾನ್ಯವಾಗಿ ‘ಅವಧೂತರು’ (mystic) ಎಂದು ಪರಿಚಯಿಸಲಾಗುತ್ತದೆ.

ಅವರ ಸಂಸ್ಥೆಯ ಅಧಿಕೃತ ಜಾಲತಾಣವೂ ಅವರನ್ನು ಹಾಗೆಯೇ ಪರಿಚಯಿಸುತ್ತದೆ. ಭಕ್ತ ಜನಸಮೂಹ ಅವರನ್ನು ‘ಸದ್ಗುರು’ ಎಂದು ಸಂಬೋಧಿಸುತ್ತದೆ. ಸಮಕಾಲೀನ ಭಾರತದ ‘ಗುರು’ಗಳ ಸಮೂಹದಲ್ಲೇ ಐಹಿಕ, ಪಾರಮಾರ್ಥಿಕ ಬದುಕಿನ ಬಗ್ಗೆ ಆಳವಾಗಿ, ಸ್ಪಷ್ಟವಾಗಿ, ಮನಮೋಹಕವಾಗಿ ಮಾತನಾಡಬಲ್ಲವರು. ಅದೂ ಇಂಗ್ಲಿಷ್ ಭಾಷೆಯಲ್ಲಿ. ಎಂಥೆಂಥ ವಿದ್ವಾಂಸರನ್ನೇ ಒಂದು ಕ್ಷಣ ಅಳುಕುವಂತೆ ಮಾಡುವ ಅಮೆರಿಕದ ಸರ್ವಶ್ರೇಷ್ಠ ಐವಿ ಲೀಗ್ ವಿಶ್ವವಿದ್ಯಾಲಯಗಳಲ್ಲಿ ಅವರು ಸಲೀಸಾಗಿ ಪ್ರವಚನ ನೀಡುತ್ತಾರೆ. ಸಿನಿಮಾ, ಸಾಹಿತ್ಯ, ಅರ್ಥವ್ಯವಹಾರ, ರಾಜಕೀಯ ಮುಂತಾಗಿ ವಿವಿಧ ಕ್ಷೇತ್ರಗಳ ಅತಿ ಪ್ರತಿಭಾನ್ವಿತರೆಲ್ಲಾ ಅವರ ಜತೆ ಸಂವಾದ ನಡೆಸಲು, ಅವರ ಪ್ರವಚನ ಕೇಳಲು ಸಾಲು ನಿಲ್ಲುತ್ತಾರೆ. ಅವರೇ ಕೊಯಂಬತ್ತೂರಿನಲ್ಲಿ ಈಶ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಮೈಸೂರು ಮೂಲದ ಜಗ್ಗಿ ವಾಸುದೇವ್.

ಇಂತಹ ಗುರು- ಶಿಷ್ಯ ಸಂವಾದದ ಬಗ್ಗೆ ಸಹಜವಾಗಿಯೇ ಕುತೂಹಲ, ನಿರೀಕ್ಷೆಗಳೆರಡೂ ಮೂಡುತ್ತವೆ. ಭಾರತದಲ್ಲಿ ವಿದ್ಯೆಯ ಪ್ರಸರಣದ ಪರಂಪರೆ ರೂಪುಗೊಂಡದ್ದು ಸಂವಾದದ ಮೂಲಕ ಅಲ್ಲವೇ? ಈ ಸಂವಾದವನ್ನು ಈಶ ಪ್ರತಿಷ್ಠಾನದವರು ಯೋಜಿಸಿದ್ದೇ ಈ ಕಾಲದ
ವಿದ್ಯಾರ್ಥಿಗಳಿಗೆ ಬದುಕಿನಲ್ಲಿ, ಯೋಚನೆಯಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಲು ನೆರವಾಗುವ ದೃಷ್ಟಿಯಿಂದ ಅಂತ ಸ್ವತಃ ಜಗ್ಗಿ ವಾಸುದೇವ್‌ ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. ಸರಿ ಸಂವಾದ ನಡೆಯಿತು. ಸರಣಿಗೆ ‘ಯುವಜನ ಮತ್ತು ಸತ್ಯ’ (Youth and Truth) ಅಂತ ಆಕರ್ಷಕ ಹೆಸರನ್ನೂ ನೀಡಲಾಯಿತು. ಸಂವಾದವು ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಸಂಸ್ಥೆಗಳಾದ ಐಐಟಿಗಳಲ್ಲಿ ನಡೆಯಿತು, ಅಷ್ಟೇ ಹೆಸರಾಂತ ವ್ಯವಹಾರ ಅಧ್ಯಯನ ಸಂಸ್ಥೆಗಳಾದ ಐಐಎಂಗಳಲ್ಲಿ ನಡೆಯಿತು, ಕಾನೂನು ವಿದ್ಯಾಸಂಸ್ಥೆಗಳ ಪೈಕಿ ಶ್ರೇಷ್ಠ ಎಂದು ಪರಿಗಣಿಸಲಾದ ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ನಡೆಯಿತು. ಮಾತ್ರವಲ್ಲ, ಬೌದ್ಧಿಕ ಶ್ರೇಷ್ಠತೆ ಮತ್ತು
ಸ್ವಾತಂತ್ರ್ಯಕ್ಕೆ ತನ್ನದೇ ಆದ ವ್ಯಾಖ್ಯಾನಗಳನ್ನಿರಿಸಿಕೊಂಡಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲೂ ನಡೆಯಿತು.

ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು. ಐಹಿಕದ ಬಗ್ಗೆ ಕೇಳಿದರು, ಪಾರಮಾರ್ಥಿಕದ ಬಗ್ಗೆ ಕೇಳಿದರು, ಮಾನಸಿಕದ ಬಗ್ಗೆ ಕೇಳಿದರು, ಕೊನೆಗೆ ದೈಹಿಕದ ಬಗ್ಗೆಯೂ ಕೇಳಿದರು. ಜಗ್ಗಿ ವಾಸುದೇವರು ಎಂದಿನ ಶೈಲಿಯಲ್ಲೇ ಉತ್ತರಿಸಿದರು. ರಂಜನೆ, ಬೋಧನೆ, ಚಿಂತನೆ ಎಲ್ಲವೂ ನಡೆಯಿತು. ಆದರೆ ಈ ಸಂವಾದ ಯಾವಾಗ ಸಮಕಾಲೀನ ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳ ಕಡೆ ತಿರುಗಿತೋ ಅಲ್ಲಿಗೆ ಪ್ರಶ್ನಿಸುವ ಶಿಷ್ಯರ ಮತ್ತು ಉತ್ತರಿಸುವ ಗುರುಗಳ ಇನ್ನೊಂದು ಅಳತೆಯ, ಮತ್ತೊಂದು ಮುಖದ ದರ್ಶನವಾಗತೊಡಗಿತು. ಸಂವಾದದ ಈ ಕೆಳಗಿನ ಕೆಲ ತುಣುಕುಗಳು ಎಲ್ಲವನ್ನೂ ಸ್ವಯಂ ವಿವರಿಸುತ್ತವೆ ನೋಡಿ.

ಮುಂಬೈಯಲ್ಲಿ ಮಹಾರಾಷ್ಟ್ರ ಸರ್ಕಾರ ನಿರ್ಮಿಸುತ್ತಿರುವ ಭಾರಿ ಗಾತ್ರದ ಶಿವಾಜಿ ಪ್ರತಿಮೆಯ ಕುರಿತು ಪ್ರಶ್ನೆ. ವಿದ್ಯಾರ್ಥಿ ಕೇಳುತ್ತಾನೆ, ಈ ಪ್ರತಿಮೆಗಾಗಿ ಸುಮಾರು 3000 ಕೋಟಿಗೂ ಮಿಕ್ಕಿ ಖರ್ಚು ಮಾಡುವ ಅಗತ್ಯವಿದೆಯೇ ಗುರುಗಳೇ? ಮುಂಬೈ ನಗರದಲ್ಲಿ ಮೂಲಭೂತ ವ್ಯವಸ್ಥೆಯೇ ಸರಿ ಇಲ್ಲದಿರುವಾಗ ಇದು ಸರ್ಕಾರದ ಆದ್ಯತೆಯಾಗಬೇಕೇ? ಆಗ ಜಗ್ಗಿ ವಾಸುದೇವ್‌ ಹೇಳುತ್ತಾರೆ: ‘ಇಲ್ಲ ಇಲ್ಲ, ಅದು ಪ್ರತಿಮೆ ಮಾತ್ರವಲ್ಲ, ಅಲ್ಲೊಂದು ದೊಡ್ಡ ಪ್ರವಾಸಿ ಕೇಂದ್ರ ಬರುತ್ತದೆ, ಅಲ್ಲಿ ಭಾರತದ ಪರಂಪರೆಯನ್ನು ಬಿಂಬಿಸುವ ತರಹೇವಾರಿ ಪ್ರದರ್ಶನಗಳಿರುತ್ತವೆ. ಆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತದೆ’.

ವಿದ್ಯಾರ್ಥಿ ಮತ್ತೆ ಕೇಳುತ್ತಾನೆ– ‘ಏನೇ ಆದರೂ ಗುರುಗಳೇ, ಈ ಪ್ರವಾಸಿ ಕೇಂದ್ರ ತಾಜ್‌ಮಹಲ್ ಅನ್ನು ಮೀರಿಸಲಾರದು ತಾನೇ. ತಾಜ್‌ಮಹಲ್‌ನಿಂದ ಬರುವ ಆದಾಯವೇ ವಾರ್ಷಿಕ 20 ಕೋಟಿ ರೂಪಾಯಿ. ಹಾಗಿರುವಾಗ ತಾಜ್‌ಮಹಲ್‌ನಷ್ಟೇ ಗಳಿಸಿದರೂ ಖರ್ಚು ಮಾಡಿದ ಹಣ ಹಿಂದೆ ಬರಲು 150 ವರ್ಷಗಳಾಗುತ್ತವೆ ಅಂತ ಕೆಲವರು ಲೆಕ್ಕ ಹಾಕಿದ್ದಾರೆ... ನಮ್ಮಲ್ಲಿ ಶಾಲೆ ಇಲ್ಲ, ರಸ್ತೆ ಇಲ್ಲ, ಬಡವರಿಗೆ ಮನೆ ಇಲ್ಲ...’

ಇದನ್ನು ಕೇಳಿ ಕೆಲ ಪ್ರೇಕ್ಷಕ ವಿದ್ಯಾರ್ಥಿಗಳು ಕರತಾಡನ ಮಾಡುತ್ತಾರೆ. ಜಗ್ಗಿ ವಾಸುದೇವ್‌ ಅವರಿಗೆ ಆ ಕರತಾಡನ ಇಷ್ಟವಾಗುವುದಿಲ್ಲ. ಅವರು ಹೇಳುತ್ತಾರೆ: ‘ತಲೆ ಬುಡವಿಲ್ಲದ ವಾದಗಳಿಗೆಲ್ಲಾ ಕರತಾಡನ ಮಾಡಬೇಡಿ. ವಿಷಯ ಅಷ್ಟೊಂದು ಸರಳವಲ್ಲ. ತಾಜ್‌ಮಹಲ್‌ನಲ್ಲಿ
ಟಿಕೆಟ್ ಮಾರಿ ಮಾತ್ರ ಆದಾಯ ಬರುವುದು. ಇಲ್ಲಿ ನೂರಾರು ಚಟುವಟಿಕೆಗಳು ನಡೆಯುತ್ತವೆ. ಪ್ರವಾಸಿಗಳು ಬಂದಾಗ ಅವರು ಟ್ಯಾಕ್ಸಿ, ಹೋಟೆಲ್, ಊಟ, ಶಾಪಿಂಗ್ ಅಂತ ಖರ್ಚು ಮಾಡುತ್ತಾರೆ. ಇವೆಲ್ಲವೂ ಆದಾಯ ತಾನೇ?’

ವಿದ್ಯಾರ್ಥಿ ಮುಂದುವರಿದು ಪ್ರಶ್ನಿಸುತ್ತಾನೆ. ಗುರುಗಳು ಆ ಪ್ರಶ್ನೆಯನ್ನು ತುಂಡರಿಸಿ ‘ನೋಡಿ, ಶಿವಾಜಿ ಪ್ರತಿಮೆಯ ಮೇಲೆ ಸರ್ಕಾರ ಏನು ಖರ್ಚು ಮಾಡುತ್ತದೆ, ಅದು ಮುಂಬೈ ನಗರದಲ್ಲಿ ಜನ ಮೂರು ದಿನ ಮದ್ಯಕ್ಕಾಗಿ ಖರ್ಚು ಮಾಡುವ ದುಡ್ಡು. ಮದ್ಯ ಕುಡಿಯದೆ ಯಾರಾದರೂ ಇಂತಹದ್ದೊಂದು ಪ್ರತಿಮೆ ನಿರ್ಮಿಸುತ್ತಾರೇನು?’ ಎಂದು ಕೇಳುತ್ತಾರೆ. ಪ್ರೇಕ್ಷಕ ವಿದ್ಯಾರ್ಥಿಗಳಿಂದ ಭಾರಿ ಕರತಾಡನ! ಈಗ ಕರತಾಡನ ಯಾಕೆ ಅಂತ ಗುರುಗಳು ಪ್ರಶ್ನಿಸುವುದಿಲ್ಲ. ಪ್ರಶ್ನೆಗೂ ಉತ್ತರಕ್ಕೂ ಏನು ಸಂಬಂಧ ಅಂತ ಗುರುಗಳು ಮತ್ತು ಚಪ್ಪಾಳೆ ತಟ್ಟಿದ ವಿದ್ಯಾರ್ಥಿಗಳೇ ಹೇಳಬೇಕು. ಇರಲಿ, ಇಂತಹದ್ದೊಂದು ಯೋಜನೆಯನ್ನು ಪರೋಕ್ಷವಾಗಿ ಒಪ್ಪಿಕೊಳ್ಳುವ ಮೂಲಕ ಜಗ್ಗಿ ವಾಸುದೇವ್‌ ಅವರು ನೀಡುವ ಸಂದೇಶವಾದರೂ ಏನು ಅಂತ ಯೋಚಿಸಬೇಕಲ್ಲ? ಯಾರು ಯೋಚಿಸುವುದು?

ಒಬ್ಬ ವಿದ್ಯಾರ್ಥಿನಿ ಕೇಳುತ್ತಾಳೆ– ‘ನೀವು ನೋಟು ನಿಷೇಧವನ್ನು ಬೆಂಬಲಿಸಿದ್ದೀರಿ, ವಿವಾದಗಳು ಬಂದಾಗ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತೀರಿ. ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲೂ ಬಾಂಬ್ ಸಿಡಿದಿಲ್ಲ ಎನ್ನುತ್ತಿದ್ದೀರಿ. ವಾಸ್ತವ ಅದಲ್ಲ. ನೀವು ಕಾರ್ಯಕ್ರಮ ನಡೆಸುವ ಉದ್ದೇಶ 2019ರ ಚುನಾವಣೆಗೆ ಆಳುವ ಪಕ್ಷದ ಪರ ಜನಾಭಿಪ್ರಾಯ ರೂಪಿಸುವುದು ಎನ್ನುವ ಸಂಶಯ ಬರುತ್ತಿದೆ’. ಜಗ್ಗಿ ವಾಸುದೇವ್‌ ಹೇಳುತ್ತಾರೆ– ‘ನಾನು ಕರೆ ನೀಡಿದರೆ ಪಕ್ಷ ಯಾವುದೇ ಇರಲಿ ಅದಕ್ಕೆ ಲಕ್ಷಾಂತರ ಜನ ವೋಟು ಹಾಕುತ್ತಾರೆ. ಆದರೆ ನಾನು ಅದನ್ನು ಮಾಡುವುದಿಲ್ಲ. ನನ್ನ ವಾದ ಇಷ್ಟೇ. ಒಮ್ಮೆ ಒಂದು ಪಕ್ಷವನ್ನು ಜನ ಚುನಾಯಿಸಿದ್ದೇ ಆದಲ್ಲಿ ಆ ಪಕ್ಷ ನಮಗೆ ಒಪ್ಪಿಗೆಯಾಗಲೀ ಬಿಡಲಿ ನಾವು ಜನರ ತೀರ್ಪನ್ನು ಗೌರವಿಸಬೇಕು. ಅದು ಬಿಟ್ಟು ಜನರ ತೀರ್ಪನ್ನು ಪ್ರಶ್ನಿಸಹೊರಟವರು ತಲೆ ಸರಿ ಇಲ್ಲದವರು’ (ನಟ್ ಕೇಸ್).

ಆ ವಿದ್ಯಾರ್ಥಿನಿ ಪ್ರಶ್ನೆ ಎತ್ತಿದ್ದು ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸುವ ಅಥವಾ ಟೀಕಿಸುವ ಕುರಿತು. ಜಗ್ಗಿ ವಾಸುದೇವರ ಉತ್ತರ ಜನಾಭಿಪ್ರಾಯವನ್ನು ಪ್ರಶ್ನಿಸುವ ಕುರಿತು. ಜನಾಭಿಪ್ರಾಯವನ್ನು ಯಾರೂ ಪ್ರಶ್ನಿಸಿಲ್ಲ, ಜನರ ತೀರ್ಪನ್ನು ಒಪ್ಪದೇ ಸಂಘರ್ಷಕ್ಕಿಳಿಯುವ ರಾಜಕೀಯ ಪರಂಪರೆ ಈ ದೇಶದಲ್ಲಿ ಇದುವರೆಗೆ ಹುಟ್ಟಿಲ್ಲ. ಸರ್ಕಾರದ ನಿರ್ಧಾರಗಳನ್ನು ಯಾರಾದರೂ ಪ್ರಶ್ನಿಸಹೊರಟಾಗ ಜಗ್ಗಿ ವಾಸುದೇವರು ಜನಾಭಿಪ್ರಾಯದ ಮೇಲೆ ದಾಳಿ ನಡೆಯುತ್ತಿದೆ ಎಂದು ಯಾಕೆ ಭಾವಿಸುತ್ತಾರೋ ಗೊತ್ತಾಗುವುದಿಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ಗೆದ್ದ ಸರ್ಕಾರ ಏನೇ ಮಾಡಿದರೂ ಒಪ್ಪಿಕೊಂಡು ಸುಮ್ಮನಿರಬೇಕು ಎನ್ನುವ ಈ ಹೊಸ ತತ್ವವನ್ನು ‘ಜನತಂತ್ರದ ಜಗ್ಗಿ ವಾಸುದೇವ್‌ ವ್ಯಾಖ್ಯಾನ’ ಎನ್ನಬಹುದೇನೋ? ಕಡೇಪಕ್ಷ ಮೂಲ ಪ್ರಶ್ನೆ ಎತ್ತಿದ ವಿದ್ಯಾರ್ಥಿಗಳಾದರೂ ಈ ಕುರಿತು ಮರುಪ್ರಶ್ನೆ ಹಾಕಬೇಕಲ್ಲಾ? ಇಲ್ಲ. ಪ್ರೇಕ್ಷಕ ವಿದ್ಯಾರ್ಥಿಗಳಿಂದ ಕರತಾಡನವೋ ಕರತಾಡನ.

ಇನ್ನೊಂದು ಕಡೆ ಪ್ರಶ್ನೆ ದೇಶದಾದ್ಯಂತ ಇತ್ತೀಚೆಗೆ ಹೆಚ್ಚುತ್ತಿರುವ ಗುಂಪು ಕೊಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಜಗ್ಗಿ ವಾಸುದೇವ್‌ ಹೇಳುತ್ತಾರೆ– ‘ಇದರಲ್ಲಿ ಹೊಸತೇನಿಲ್ಲ. ಇವೆಲ್ಲಾ ಯಾವತ್ತೂ ಆಗುತ್ತಿತ್ತು. ಈಗ ಮಾಧ್ಯಮಗಳು ವರದಿ ಮಾಡುತ್ತಿವೆ’ ಎನ್ನುತ್ತಾರೆ. ‘ದೇಶದ ಹಳ್ಳಿಗಳಲ್ಲಿ ವಿಪರೀತ ದನಗಳ್ಳತನ, ಮಕ್ಕಳ ಕಳ್ಳತನ ಆಗುತ್ತಿದೆ. ಅವರಿಗೆ ಕಾನೂನಿನಿಂದ ನ್ಯಾಯ ದೊರಕುತ್ತಿಲ್ಲ. ಅದಕ್ಕೇ ಜನ ತಲೆತಲಾಂತರಗಳಿಂದಲೂ ಹೀಗೆ ಮಾಡುತ್ತಿದ್ದಾರೆ’ ಎನ್ನುತ್ತಾರೆ. ಅವರದ್ದೇ ಆದ ಅಂಕಿ ಸಂಖ್ಯೆಗಳನ್ನು ಪಟಪಟನೆ ಹೇಳಿಬಿಡುತ್ತಾರೆ. ಎಲ್ಲಿಂದ ಸಿಕ್ಕಿದವೊ ಗುರುಗಳಿಗೆ ಮಕ್ಕಳ ಕಳ್ಳತನ ಮತ್ತು ದನಗಳ್ಳತನದ ಕುರಿತಾದ ಕರಾರುವಾಕ್ಕಾದ ಅಂಕಿ-ಸಂಖ್ಯೆಗಳು! ದನಗಳ್ಳತನ, ಮಕ್ಕಳ ಕಳ್ಳತನಗಳಿಗೆ ಸಂಬಂಧವೇ ಇಲ್ಲದ ಕಡೆಗಳಲ್ಲಿ, ಪೊಲೀಸರ ಸಮ್ಮುಖದಲ್ಲಿ, ಪೊಲೀಸರ ಸಹಕಾರದಿಂದ ನಡೆಯುತ್ತಿರುವ ಗುಂಪು ಕೊಲೆಗಳೆಲ್ಲಾ ಅವಧೂತರ ಗಮನಕ್ಕೆ ಬರುವುದೇ ಇಲ್ಲ.

ಜಗ್ಗಿ ವಾಸುದೇವ್ ತನ್ನನ್ನು ಪ್ರಶ್ನಿಸುವವರನ್ನು ‘ಇವೆಲ್ಲಾ ಜಟಿಲ ವಿಷಯಗಳು, ಇವುಗಳನ್ನು ಅಷ್ಟೊಂದು ಸರಳೀಕರಿಸಬೇಡಿ’ ಎನ್ನುತ್ತಾರೆ. ಆದರೆ ದೇಶದಲ್ಲಿ ಈಗ ನಡೆಯುತ್ತಿರುವ, ಮನುಷ್ಯ ಮಾತ್ರರನ್ನು ಕಂಗೆಡಿಸಬೇಕಾದ ಗುಂಪು ಹಿಂಸೆಗಳ ಬಗ್ಗೆ ಮೇಲಿನ ಅತಿ ಸರಳೀಕೃತ ವಾದ ಮಂಡಿಸುತ್ತಾರೆ. ಇಷ್ಟಾದರೂ ಪರವಾಗಿಲ್ಲ. ಜಗ್ಗಿ ವಾಸುದೇವ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಈ ವಿಷಯದಲ್ಲಿ ಅವರ ವಾದವನ್ನು ಒಂದಿಬ್ಬರು ವಿದ್ಯಾರ್ಥಿಗಳು ಪ್ರಶ್ನಿಸಿದಾಕ್ಷಣ ‘ನಿಮಗೆ ಈ ಸರ್ಕಾರ ಇಷ್ಟವಿಲ್ಲ. ಅದಕ್ಕೇ ನೀವು ಹೀಗೆಲ್ಲಾ ಕೇಳುತ್ತಿದ್ದೀರಿ’ ಎನ್ನುತ್ತಾರೆ. ಇಂತಹ ಹೇಳಿಕೆಗಳನ್ನೂ ಪ್ರೇಕ್ಷಕ ಸಮೂಹದ ಅತಿಪ್ರತಿಭೆಯ ವಿದ್ಯಾರ್ಥಿಗಳೆಲ್ಲಾ ಕರತಾಡನ ಮಾಡಿ ಶಿಳ್ಳೆ ಹೊಡೆದು ಸ್ವಾಗತಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ವಿಷಯದ ಸತ್ಯಾಸತ್ಯತೆ ತಿಳಿದುಕೊಳ್ಳದೆ ಜನಪ್ರಿಯ ಟೀಕೆಗಳನ್ನೇ ಆಧಾರವಾಗಿಟ್ಟುಕೊಂಡು ಪ್ರಶ್ನೆ ಕೇಳುತ್ತಾರೆ.

‘ಯುವಜನ ಮತ್ತು ಸತ್ಯ’ ಸರಣಿಯಲ್ಲಿ ಇಂತಹ ಇನ್ನೂ ಹಲವಾರು ಉದಾಹರಣೆಗಳಿವೆ. ಇವೆಲ್ಲಾ ನಮ್ಮ ಕಾಲದ ಅತಿ ಎತ್ತರದ ಅವಧೂತರು ಮತ್ತು ಅತಿ ಪ್ರತಿಭೆಯ ವಿದ್ಯಾರ್ಥಿಗಳ ನಡುವೆ ನಡೆದ ಬೌದ್ಧಿಕ ವಿಚಾರ ವಿನಿಮಯದ ಮಟ್ಟದ ಬಗ್ಗೆ ನಮಗೆ ತಿಳಿಸುತ್ತವೆ. ಜಗ್ಗಿ ವಾಸುದೇವ್‌ ಇತರ ಆಧುನಿಕ ಗುರುಗಳಂತೆ ಯಾವುದೋ ಬ್ರ್ಯಾಂಡ್‌ನ ಅಧ್ಯಾತ್ಮ ಉದ್ಯಮಿಯಷ್ಟೇ ಆಗಿ ಉಳಿದು ಅವರಿಗಿಷ್ಟವಾದ ಯಾವುದೋ ರಾಜಕೀಯ ಒಲವುಗಳಿಗೆ ಬದ್ಧರಾಗಿದ್ದರೆ ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸುವ ಪ್ರಮೇಯ ಬರುವುದಿಲ್ಲ. ಅದು ಅವರ ಮತ್ತು ಅವರ ಭಕ್ತರ ಸಂಬಂಧದ ವಿಷಯ. ಜಗ್ಗಿ ವಾಸುದೇವ್‌ ಅವರು ಹಾಗಲ್ಲ. ತಾನು ವಿದ್ಯಾರ್ಥಿ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತೇನೆ, ಗೊಂದಲ ನಿವಾರಿಸುತ್ತೇನೆ ಎಂದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಹೊಸ ಗೊಂದಲಗಳನ್ನು ಸೃಷ್ಟಿಸುತ್ತಿರುವ ಹಾಗೆ ಕಾಣಿಸುತ್ತಿದೆ. ಅವರ ಪ್ರವಚನಗಳಲ್ಲಿ ವಿದ್ಯಾರ್ಥಿ ಸಮೂಹದ ಪ್ರತಿಕ್ರಿಯೆ ನೋಡಿದರೆ, ಈಗಾಗಲೇ ರಾಜಕೀಯವಾಗಿ ಒಡೆದುಹೋಗಿರುವ ಕ್ಯಾಂಪಸ್‌ಗಳಲ್ಲಿ ‘ಯುವಜನ ಮತ್ತು ಸತ್ಯ’ ಇನ್ನೂ ಹೆಚ್ಚಿನ ಒಡಕು ಮೂಡಿಸುತ್ತಿರುವ ಹಾಗೆ ಕಾಣಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ‘ಯುವಜನ ಮತ್ತು ಸತ್ಯ’ ತೆರೆದಿಟ್ಟ ಸತ್ಯ ಏನು ಅಂತ ಅಂದರೆ ತಮಗೆ ಇಷ್ಟವಾದ ಸತ್ಯಗಳನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಮತ್ತು ತಮಗೆ ಇಷ್ಟವಿಲ್ಲದ ವಿಷಯಗಳ ಕುರಿತಾದರೂ ಪರಾಂಬರಿಸದ ಸತ್ಯಗಳ ಆಧಾರದ ಮೇಲೆ ಆವೇಶದಿಂದ ಪ್ರಶ್ನೆ ಕೇಳಬಾರದು ಎನ್ನುವ ಪ್ರಾಥಮಿಕ ಗುಣ ಈ ದೇಶದ ಪ್ರತಿಷ್ಠಿತ ಸಂಸ್ಥೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಇನ್ನೂ ಹುಟ್ಟಿಕೊಂಡಿಲ್ಲ ಎನ್ನುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT