ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜ್ಯೋತಿ

Last Updated 14 ಅಕ್ಟೋಬರ್ 2018, 19:44 IST
ಅಕ್ಷರ ಗಾತ್ರ

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ || 43 ||

ಪದ-ಅರ್ಥ: ಸುತ್ತಲೆತ್ತೆತ್ತಲುಂ=ಸುತ್ತಲು+ಎತ್ತೆತ್ತಲೂ, ಚಾಲಿಪುದು=ನಡೆಯಿಸುವುದು

ವಾಚ್ಯಾರ್ಥ: ಇಡೀ ವಿಶ್ವದಲ್ಲಿ ಮೇಲೆ, ಕೆಳಗೆ, ಸುತ್ತಲು, ಎಲ್ಲೆಲ್ಲಿಯೂ, ಪ್ರತಿಯೊಂದು ಮೂಲೆಯಲ್ಲಿ ವಿದ್ಯುತ್ತಿನ ಲಹರಿಯೊಂದು ಧೂಲಿಕಣಗಳನ್ನು ಮಾತ್ರವಲ್ಲ, ರವಿ, ಚಂದ್ರ ತಾರೆಗಳನ್ನು ಬಿಡದಂತೆ ಚಲಿಸುತ್ತ್ತಿದೆ.

ವಿವರಣೆ: ಈ ಪ್ರಪಂಚವನ್ನು ನೋಡುತ್ತ, ನೋಡುತ್ತ ಹೋದಂತೆ ಇದು ಒಂದು ನಿಯತಿಗೆ ಬದ್ಧವಾಗಿರುವುದು ಕಾಣುತ್ತದೆ. ಗ್ರಹಗಳು, ತಾರೆಗಳು ನಿರ್ದಿಷ್ಟವಾದ ಗತಿಯಲ್ಲಿಯೇ, ಸಮಯದಲ್ಲಿಯೇ ಚಲಿಸುತ್ತಿವೆ. ಇಂಥ ದಿನ, ಇಂಥ ಸಮಯಕ್ಕೆ ಗ್ರಹಣವಾಗುತ್ತದೆಂಬುದನ್ನು ನೂರು ವರ್ಷಗಳ ಮೊದಲೇ ಹೇಳಿಬಿಡಬಹುದು.

ಅಷ್ಟು ಕರಾರುವಾಕ್ಕಾಗಿ ಅವುಗಳ ಚಲನೆ ಇದೆ. ಸೂರ್ಯೋದಯ, ಚಂದ್ರೋದಯಗಳೂ ಸಮಯಕ್ಕೆ ಬದ್ಧವಾಗಿವೆ. ಹಾಗಾದರೆ ಈ ವ್ಯವಸ್ಥಿತವಾದ ಜಗತ್ತನ್ನು ಧರಿಸುವ, ನಡೆಸುವ ಒಂದು ಶಕ್ತಿ ಇರಬೇಕಲ್ಲವೆ ಎಂದು ಮನಸ್ಸು ಚಿಂತಿಸುತ್ತದೆ.

ನಮ್ಮ ಇಂದ್ರಿಯಗಳಿಂದ ಭೌತಿಕ ಜಗತ್ತನ್ನು ಕಾಣುತ್ತೇವೆ, ಮನಸ್ಸಿನಿಂದ ಅದರ ಸೃಷ್ಟಿಯನ್ನು ಭಾವಿಸುತ್ತೇವೆ ಹಾಗೂ ಬುದ್ಧಿಯಿಂದ ವೈಚಾರಿಕ ಜಗತ್ತನ್ನು ಚಿಂತಿಸುತ್ತೇವೆ. ಅಂದರೆ ಈ ಇಂದ್ರಿಯ, ಮನಸ್ಸು, ಬುದ್ಧಿಗಳನ್ನು ಪ್ರಚೋದಿಸುವ, ಬೆಳಗಿಸುವ ಶಕ್ತಿಯೊಂದಿರಬೇಕಲ್ಲ? ಅದನ್ನು ಶಕ್ತಿ ಎನ್ನಿ, ಭಗವಂತ ಎನ್ನಿ, ಪರಶಿವ ಎನ್ನಿ ಅಥವಾ ಅಂತಜ್ರ್ಯೋತಿ ಎನ್ನಿ. ಅದನ್ನು ದಾರ್ಶನಿಕರು ಘನ, ಮಹಾಘನ ಎಂದರು, ಶರಣರು ಶೂನ್ಯ, ಬಯಲು ಎಂದರು.

ಅದು ಎಲ್ಲವನ್ನು ಒಳಗೊಂಡ ಆದರೆ ಏನೂ ಇಲ್ಲದ ಶೂನ್ಯ. ಬೃಹತ್ ಆಲದ ಮರದ ಬೀಜ ಸಾಸಿವೆಗಿಂತ ಸಣ್ಣದು, ಏನೂ ಅಲ್ಲ ಅನ್ನುವಂಥದ್ದು. ಆದರೆ ಅದರೊಳಗೆ ಅಂಥ ಪ್ರಚಂಡವಾದ ಆಲದಮರ ಅಮೂರ್ತವಾಗಿ ಕುಳಿತಿದೆ.

ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿ ಅನೂಹ್ಯವಾದ, ಅಪರಿಮಿತವಾದ, ಅಸಾಧಾರಣವಾದ ಅಪೂರ್ವ ಶಕ್ತಿ ಇದೆ. ನೀರಿನಲ್ಲಿ ಅಪ್ಯಾಯನ ಶಕ್ತಿ, ಭೂಮಿಯಲ್ಲಿ ಧಾರಣ ಶಕ್ತಿ, ಗಾಳಿಯಲ್ಲಿ ಸ್ಪಂದನ ಶಕ್ತಿ, ರವಿ, ಚಂದ್ರ, ತಾರೆಗಳಲ್ಲಿ ವಿದ್ಯುತ್ ಶಕ್ತಿ ಹೀಗೆ ಧೂಳಿ, ಕಣಗಳಲ್ಲಿ, ಪರಮಾಣು ಪರಮಾಣುಗಳಲ್ಲಿ ಆ ಶಕ್ತಿ ಇದೆ. ಅವು ಎಲ್ಲ ಆದಿಶಕ್ತಿಯ ಅಂಶಗಳು. ಈ ಆದಿಶಕ್ತಿಯೆಂಬ ಪರಸತ್ವ ಹೇಗಿದೆ ಎಂಬುದನ್ನು ಶರಣರು ಕಂಡರಿಸಿದ ರೀತಿ ಅನನ್ಯ.

ಜಗವನಾಡಿಸುವನು, ಜಗವನೇಡಿಸುವನು
ಜಗದ ನಟ ನಾಟಕನ ಪರಿಯ ನೋಡಯ್ಯ!
ಜಗವ ರಂಜಿಸುವನು, ಜಗವ ಭುಜಿಸುವನು.
ಜಗದೊಳಗಿಪ್ಪನು, ಜಗದ ಹೊರಗಿಪ್ಪನು.
ಜಗಕೆ ತೋರಿಯೂ ತೋರದಂತಿರ್ಪನು.
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪನು.
ಉದಕ-ಪದ್ಮಪತ್ರದಂತಿಪ್ಪನು.
ನಿಜಗುರುವೆ, ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರನೆ,
ನೋಟ ತೀರಲೊಡನೆ ಜಗದಾಟ ತೀರಿತು.

ಈ ಶಕ್ತಿ ಹೇಗಿದೆಯೆಂಬುದನ್ನು ವರ್ಣಿಸಲು ಹೋಗಿ ವೇದಗಳು ಸೋತುಹೋದವು, ಮಾತುಗಳು ಮೌನವಾದವು. ಆ ಅಂತರ್ಜ್ಯೋತಿಗೆ ಭೌತಿಕರೂಪವಿಲ್ಲ, ಭಾವನಾತ್ಮಕ ಸ್ವರೂಪವಿಲ್ಲ, ವೈಚಾರಿಕ ನೆಲೆಯೂ ಸಾಧ್ಯವಿಲ್ಲ. ಆದರೆ ಅದು ಎಲ್ಲದರಲ್ಲಿಯೂ ಇದೆ, ಎಲ್ಲವನ್ನೂ ನಡೆಸುತ್ತಿದೆ! ಅಂಥ ಜ್ಯೋತಿಯನ್ನು ಹೊರಗೆ ಹುಡುಕುವದು ವ್ಯರ್ಥಪ್ರಯತ್ನ, ಅದನ್ನು ಆಂತರ್ಯದಲ್ಲೇ ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT