ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ-ಅಸತ್ಯಗಳ ಪರಿಶೀಲನೆ

Last Updated 10 ಮಾರ್ಚ್ 2019, 19:42 IST
ಅಕ್ಷರ ಗಾತ್ರ

ಮಹಾರಾಜ ಸೇನಕ ವಾರಾಣಸಿಯಲ್ಲಿ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಶಾಕ್ಯನಾಗಿದ್ದ. ರಾಜ ಸೇನಕನಿಗೆ ಅದು ಹೇಗೋ, ಯಾವ ಕಾಲದಲ್ಲೋ ಒಬ್ಬ ನಾಗರಾಜನೊಡನೆ ಸ್ನೇಹವಾಗಿತ್ತು.

ಒಮ್ಮೆ ಈ ನಾಗರಾಜ ಭೂಲೋಕವನ್ನು ನೋಡುವ ಆಸೆಯಿಂದ ನಾಗಲೋಕವನ್ನು ತೊರೆದು ವಾರಣಾಸಿ ಪ್ರದೇಶಕ್ಕೆ ಬಂದು ಸುತ್ತಾಡುತ್ತಿದ್ದ. ಒಂದು ಕೆರೆಯ ಹತ್ತಿರ ಹೋಗುವಾಗ ಅಲ್ಲಿ ಈಜಲು ಬಂದಿದ್ದ ಹುಡುಗರು ಅವನನ್ನು ನೋಡಿ ಹಾವು, ಹಾವು ಎಂದು ಕಿರುಚಿಕೊಂಡರು. ನಂತರ ಹಾವಿನೆಡೆಗೆ ಕಲ್ಲು ಬೀಸಿ, ಕೋಲುಗಳಿಂದ ಹೊಡೆಯತೊಡಗಿದರು. ಆಗ ಬೇಟೆಗೆ ಹೊರಟಿದ್ದ ರಾಜ ಅಲ್ಲಿಗೆ ಬಂದು ಗಲಾಟೆಯನ್ನು ಕಂಡು, ಹುಡುಗರನ್ನು ಬೆದರಿಸಿ ಓಡಿಸಿ ಹಾವಿಗೆ ಹೋಗಲು ಅಣಿಮಾಡಿ ಕೊಟ್ಟ.

ರಾಜನ ದಯೆಯಿಂದ ಬದುಕಿದ ನಾಗರಾಜ ತನ್ನ ಲೋಕಕ್ಕೆ ಹೋಗಿ ಅತ್ಯಂತ ಬೆಲೆಬಾಳುವ ಮತ್ತು ಅಪರೂಪದ ವಜ್ರ, ಮಾಣಿಕ್ಯಗಳನ್ನು ತೆಗೆದುಕೊಂಡು ಮಾಯದಿಂದ ಅದೃಶ್ಯನಾಗಿ ಮಧ್ಯರಾತ್ರಿಯ ಹೊತ್ತಿಗೆ ರಾಜನ ಮಲಗುವ ಕೋಣೆಗೆ ಬಂದ. ರಾಜನನ್ನು ಎಬ್ಬಿಸಿ ಪಕ್ಕದ ಕೋಣೆಗೆ ಕರೆದೊಯ್ದು ತಾನು ನಾಗಲೋಕದಿಂದ ತಂದಿದ್ದ ಬೆಲೆಬಾಳುವ ವಸ್ತುಗಳನ್ನು ಕೊಟ್ಟು ಹೇಳಿದ, “ಮಹಾರಾಜಾ, ಇಂದು ನಿನ್ನ ಕರುಣೆಯಿಂದ ನನ್ನ ಜೀವ ಉಳಿಯಿತು. ನಾನು ನಿನಗೆ ತುಂಬ ಋಣಿಯಾಗಿದ್ದೇವೆ” ರಾಜ ಸೇನಕ ಹೇಳಿದ, “ಮಿತ್ರಾ, ನೀನೂ ಒಬ್ಬ ರಾಜ. ಇನ್ನು ಮುಂದೆ ನಾವಿಬ್ಬರೂ ಗಾಢ ಸ್ನೇಹಿತರಾಗಿರೋಣ”.

ನಾಗರಾಜ ಆಗಾಗ ಬಂದು ಸೇನಕನನ್ನು ಭೆಟ್ಟಿಯಾಗಿ ಹೋಗುತ್ತಿದ್ದ. ಒಂದು ಸಲ ತನ್ನೊಂದಿಗೆ ಅತ್ಯಂತ ಸುಂದರಳಾದ ನಾಗಯುವತಿಯನ್ನು ಕರೆತಂದ. “ರಾಜಾ ಈಕೆ ನಮ್ಮ ನಾಡಿನ ಅಪರೂಪದ ಸುಂದರಿ. ಆಕೆ ನಿನ್ನೊಡನೆಯೇ ಇರುತ್ತಾಳೆ. ನಿನಗೆ ಮಾತ್ರ ಕಾಣುತ್ತಾಳೆ. ನಿನಗೆ ಸಕಲ ಸಂತೋಷವನ್ನು ನೀಡುವುದರ ಜೊತೆಗೆ ನಿನ್ನನ್ನು ರಕ್ಷಣೆ ಮಾಡುತ್ತಾಳೆ. ಕೆಲವೊಮ್ಮೆ ಆಕೆ ನಿನಗೂ ಕಾಣದಂತೆ ಮಾಯವಾಗಬಹುದು. ಆಗ ನಿನಗೆ ಆಕೆಯನ್ನು ಕಾಣಬೇಕಾದರೆ ನಾನು ನಿನಗೆ ಈಗ ಕೊಡುವ ಉಂಗುರವನ್ನು ಮೂರು ಬಾರಿ ಉಜ್ಜಿ ಬಿಡು. ಆಗ ಆಕೆ ಎಲ್ಲಿದ್ದರೂ, ಹೇಗಿದ್ದರೂ ನಿನಗೆ ಕಾಣುತ್ತಾಳೆ” ಎಂದು ಹೇಳಿ ರತ್ನಖಚಿತವಾದ ಉಂಗುರವನ್ನು ಕೊಟ್ಟ.

ಅಂದಿನಿಂದ ಆ ನಾಗಕನ್ಯೆ ರಾಜ ಸೇನಕನ ಅವಿಭಾಜ್ಯ ಅಂಗವೇ ಆಗಿ ಹೋದಳು. ಅವಳು ಸದಾ ಅವನೊಂದಿಗೇ ಇರುವವಳು, ಆದರೆ ಯಾರಿಗೂ ಕಾಣಿಸುವವಳಲ್ಲ. ರಾಜ ಮಾತ್ರ ವಿಷಯವನ್ನು ಮುಚ್ಚಿಡದೆ ತನ್ನ ಪಟ್ಟದ ರಾಣಿಗೆ ತಿಳಿಸಿದ್ದ. ಹೀಗೊಂದು ದಿನ ರಾಜ ತನ್ನ ಅರಮನೆಯ ಈಜುಗೊಳಕ್ಕೆ ಹೋಗಿ ಈಜಾಡಿ ಸಂತೋಷಪಡುತ್ತಿದ್ದ. ಆಗ ಈ ನಾಗಕನ್ಯೆಗೆ ಕೊಳದ ಪಕ್ಕದಲ್ಲೇ ಇದ್ದ ಪೊದೆಯ ಬುಡದಲ್ಲಿ ಒಂದು ಗಂಡು ಹಾವು ಕಾಣಿಸಿತು. ಈ ನಾಗಕನ್ಯೆ ತನ್ನ ಮನುಷ್ಯ ರೂಪವನ್ನು ತೊರೆದು ನಾಗವಾಗಿ ಹರಿದು ಹೋಗಿ ಗಂಡು ಹಾವಿನ ಜೊತೆಗೆ ರಮಿಸತೊಡಗಿತು. ಆ ಕ್ಷಣದಲ್ಲಿ ಹುಡುಗಿಯನ್ನು ಕಾಣದೆ “ಎಲ್ಲಿ ಹೋದಳು ಈ ಹುಡುಗಿ?” ಎಂದು ಉಂಗುರವನ್ನು ಉಜ್ಜಿದಾಗ ಪಕ್ಕದಲ್ಲಿ ಹಾವಿನೊಡನೆ ರಮಿಸುತ್ತಿದ್ದ ನಾಗಕನ್ಯೆ ಕಂಡಳು.

‘ಛೇ ಎಂಥವಳು ಈಕೆ’ ಎಂದು ಕೋಲಿನಿಂದ ಆಕೆಯ ಬೆನ್ನ ಮೇಲೆ ಹೊಡೆದ. ಆ ನಾಗಕನ್ಯೆ ಕೋಪದಿಂದ ನಾಗಲೋಕಕ್ಕೆ ಹೋಗಿ ಆದದ್ದಕ್ಕೆ ನಾಲ್ಕಾರು ಹೆಚ್ಚಿಗೆ ಸೇರಿಸಿ ನಾಗರಾಜನಿಗೆ ದೂರು ನೀಡಿದಳು. ಆತನೂ ಯೋಚಿಸದೆ ನಾಲ್ಕು ನಾಗಸೈನಿಕರನ್ನು ಕಳುಹಿಸಿ ಅಂದೇ ರಾತ್ರಿ ಸೇನಕನನ್ನು ಭಸ್ಮ ಮಾಡುವಂತೆ ಆಜ್ಞೆ ಮಾಡಿದ. ಅವರು ರಾತ್ರಿ ರಾಜನ ಕೊಠಡಿ ಸೇರಿದಾಗ ರಾಜ ರಾಣಿಗೆ ಹೇಳುತ್ತಿದ್ದ, “ಈ ಹುಚ್ಚು ಹುಡುಗಿ ನಾಗಕನ್ಯೆ ಹೀಗೆ ಬೆಳಿಗ್ಗೆ ಅಸಹ್ಯ ಮಾಡಿದಾಗ ನಾನೊಂದು ಪೆಟ್ಟುಕೊಟ್ಟೆ. ಆಗಿನಿಂದ ಆಕೆ ಕಾಣುತ್ತಿಲ್ಲ”. ಇದನ್ನು ಕೇಳಿ ನಾಗಸೈನಿಕರು ಮರಳಿ ನಾಗರಾಜನಿಗೆ ಸತ್ಯ ಹೇಳಿದಾಗ ಆತ ಬಂದು ಕ್ಷಮೆ ಕೇಳಿ ನಾಗಕನ್ಯೆಗೆ ಎಚ್ಚರಿಕೆ ನೀಡಿದ.

ಎಷ್ಟೋ ಬಾರಿ ಸುಳ್ಳುಗಳು ಸತ್ಯಕ್ಕಿಂತ ಹೆಚ್ಚು ಪ್ರಬಲವಾದಂತೆ ತೋರುತ್ತವೆ. ಆಗ ಅವುಗಳನ್ನು ಒರೆಗೆ ಹಚ್ಚಿ, ತಾಳ್ಮೆಯಿಂದ ಪರಿಶೀಲಿಸಿದಾಗ ಸತ್ಯ ಬದುಕಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT