ಸಮಾಜದ ಅಶಕ್ತತೆಯ ಕಾರಣ

7

ಸಮಾಜದ ಅಶಕ್ತತೆಯ ಕಾರಣ

ಗುರುರಾಜ ಕರಜಗಿ
Published:
Updated:

ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಒಂದು ಪಕ್ಷಿಯಾಗಿ ಹುಟ್ಟಿ ಕಾಡಿನಲ್ಲಿ ಸಾವಿರ ಪಕ್ಷಿಗಳೊಡನೆ ವಾಸವಾಗಿದ್ದ. ಆಗ ಒಂದು ದಿನ ಕಾಡಿಗೆ ಒಬ್ಬ ಬೇಟೆಗಾರ ಬಂದ. ಅವನದೊಂದು ವಿಶೇಷ ಕಲೆ. ಆತ ಪಕ್ಷಿಗಳಂತೆಯೇ ಸದ್ದು ಮಾಡುತ್ತಿದ್ದ. ಅದರಿಂದ ಆಕರ್ಷಿತವಾಗಿ ಪಕ್ಷಿಗಳ ಹಿಂಡೇ ಬಂದು ಕೂಡ್ರುತ್ತಿತ್ತು. ಅವೆಲ್ಲ ಒಂದೆಡೆಗೆ ಕುಳಿತ ತಕ್ಷಣ ಆತ ತನ್ನ ಬಲೆಯನ್ನು ಬೀಸಿ ಅವುಗಳನ್ನು ಒಟ್ಟಾಗಿ ಹಿಡಿದು ಬುಟ್ಟಿಯಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಿದ್ದ.

ಅದನ್ನು ಗಮನಿಸಿದ ಬೋಧಿಸತ್ವ ಪಕ್ಷಿಗಳನ್ನೆಲ್ಲ ಕರೆದು ಹೇಳಿದ, “ಈ ಬೇಟೆಗಾರ ಬಲು ಬುದ್ಧಿವಂತ. ಅವನು ನಮ್ಮ ಕುಲವನ್ನೇ ನಾಶಮಾಡುತ್ತಾನೆ. ಅವನಿಂದ ಪಾರಾಗುವ ವಿಧಾನ ನನಗೆ ತಿಳಿದಿದೆ. ನೀವು ಎಲ್ಲರೂ ಹಾಗೆಯೇ ಮಾಡಿದರೆ ನಮಗೆ ಚಿಂತೆ ಇಲ್ಲ. ಅವನು ಬಲೆಯನ್ನು ನಮ್ಮ ಮೇಲೆ ಎಸೆದಾಗ ಅವನ ಬಲೆಯ ಒಂದೊಂದು ಗಂಟಿನ ಕೆಳಗೆ ನಮ್ಮ ತಲೆಯನ್ನು ತೂರಿ ಎಲ್ಲರೂ ಒಂದೇ ಸಮಯಕ್ಕೆ ಬಲೆ ಸಮೇತ ಹಾರಿಬಿಡಬೇಕು. ಸ್ವಲ್ಪ ದೂರ ಹಾರಿಹೋಗಿ ಮುಳ್ಳಿನ ಪೊದೆಯ ಮೇಲೆ ಬಲೆಯನ್ನು ಹಾಕಿಬಿಟ್ಟು, ನಿಧಾನವಾಗಿ ಕೆಳಗಿನಿಂದ ನಾವು ಹೊರಬಂದು ಹಾರಿ ಹೋಗಿಬಿಡಬೇಕು”. ಎಲ್ಲವೂ ಈ ವಿಧಾನವನ್ನು ಒಪ್ಪಿದವು.

ಮರುದಿನ ಬೇಟೆಗಾರ ಬಲೆ ಹಾಕಿದಾಗ ಯೋಜಿಸಿದಂತೆ ಎಲ್ಲ ಪಕ್ಷಿಗಳೂ ಒಮ್ಮೆಲೇ ಹಾರಿ ಬಲೆಯನ್ನು ಮುಳ್ಳಿನ ಪೊದೆಯ ಮೇಲೆ ಹಾಕಿ ಹಾರಿಹೋದವು. ಬೇಟೆಗಾರನಿಗೆ ತನ್ನ ಬಲೆಯನ್ನು ಹುಡುಕಿ, ಅದನ್ನು ಮುಳ್ಳಿನ ಪೊದೆಯಿಂದ ಬಿಡಿಸುವವರೆಗೆ ಸಂಜೆಯಾಯಿತು, ಅವನು ಮನೆಗೆ ಬರಿಗೈಯಿಂದಲೇ ಹೋದ. ಮುಂದೆ ಒಂದು ವಾರ ಇದೇ ರೀತಿ ನಡೆಯಿತು. ಬೇಟೆಗಾರನ ಹೆಂಡತಿಗೆ ಸಂಶಯ ಬಂತು. “ನೀನು ಮತ್ತೊಮ್ಮೆ ಹೆಂಗಸಿನ ಜೊತೆಗೆ ಮದುವೆಯಾಗಿ ಬೇಟೆಯನ್ನೆಲ್ಲ ಅಲ್ಲಿಗೇ ತೆಗೆದುಕೊಂಡು ಹೋಗುತ್ತೀ ಅಲ್ಲವೇ?” ಎಂದಳು. ಆತ ಗಾಬರಿಯಿಂದ, “ಇಲ್ಲ, ಅಂಥದ್ದೇನೂ ಇಲ್ಲ. ಕಾಡಿನಲ್ಲಿ ಪಕ್ಷಿಗಳು ಒಮ್ಮೆಲೇ ಬಹಳ ಒಗ್ಗಟ್ಟಿನಿಂದ ಬುದ್ಧಿವಂತವಾಗಿವೆ. ಅವುಗಳ ಒಗ್ಗಟ್ಟು ಮುರಿದ ದಿನವೇ ಬುಟ್ಟಿ ತುಂಬ ಪಕ್ಷಿಗಳನ್ನು ತಂದುಕೊಡುತ್ತೇನೆ” ಎಂದ.

ಅವನು ಹೇಳಿದ ಹಾಗೆ ಪಕ್ಷಿಗಳು ಬೋಧಿಸತ್ವನ ಮಾತುಗಳನ್ನು ಮರೆತವು, ಅಹಂಕಾರ ಸುಳಿದಾಡಿತು. “ನೀನು ಪುಟ್ಟ ಪಕ್ಷಿ, ನನ್ನ ತಲೆಯ ಮೇಲೆ ಏಕೆ ಹಾರಿದೆ?” ಎಂದು ದೊಡ್ಡ ಪಕ್ಷಿ ಕೇಳಿದರೆ, “ನೀನು ಯಾವ ಸೀಮೆ ದೊಡ್ಡ ಪಕ್ಷಿ?” ಎಂದು ಮಾರುತ್ತರ ನೀಡಿತು ಸಣ್ಣ ಪಕ್ಷಿ. ಬೇಟೆಗಾರ ಬಂದು ಬಲೆ ಬೀಸಿದಾಗಲೂ ಅವುಗಳ ಜಗಳ ನಿಲ್ಲಲಿಲ್ಲ. “ಬಲೆಯನ್ನು ಎತ್ತಿ ಎತ್ತ್ತಿ ನನ್ನ ತಲೆಯ ಕೂದಲೆಲ್ಲ ಉದುರಿಹೋಗಿವೆ, ಈಗ ನೀವೇ ಎತ್ತಿಕೊಳ್ಳಿ” ಎಂದಿತೊಂದು ಪಕ್ಷಿ. “ನಾನೇಕೆ, ನೀನೇ ಎತ್ತು” “ನೀ ಎತ್ತು”, “ನಾನು ಎತ್ತುವುದಿಲ್ಲ, ಬೇಕಾದರೆ ನೀನೇ ಎತ್ತು” ಎಂದು ಕಾದಾಡತೊಡಗಿದವು. ಆಗಲೇ ಬೇಟೆಗಾರ ಬಲೆಯನ್ನು ಸೆಳೆದು ಎಲ್ಲ ಪಕ್ಷಿಗಳನ್ನು ಒಟ್ಟುಗೂಡಿಸಿ ಬುಟ್ಟಿಯಲ್ಲಿ ತುಂಬಿಕೊಂಡು ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಸಂತೋಷಪಡಿಸಿದ.

ನಾವು ಮನುಷ್ಯರು ಇಂದಿಗೂ ಹಾಗೆಯೇ ಇಲ್ಲವೇ? ಯಾವುದಾದರೂ ದೊಡ್ಡ ಆತಂಕ ದೇಶಕ್ಕೆ ಎದುರಾದಾಗ ಒಂದಾದಂತೆ ಇರುತ್ತೇವೆ. ನಂತರ ಬಹುಬೇಗನೇ ಒಗ್ಗಟ್ಟನ್ನು ಮರೆತೇ ಬಿಡುತ್ತೇವೆ. ಜಾತಿಯೆಂದೋ, ಧರ್ಮವೆಂದೋ, ಭಾಷೆಯೆಂದೋ, ಲಿಂಗವೆಂದೋ ತಾರತಮ್ಯ ಹುಡುಕಿ ಒಗ್ಗಟ್ಟನ್ನು ಕಳೆದುಕೊಂಡು ಆಶಕ್ತರಾಗಿ ಹೋಗುತ್ತೇವೆ. ಹೀಗೆ ಸಮಾಜವನ್ನು ಒಡೆಯುವವರನ್ನು ಕಂಡೇ ಕವಿ ಆಕ್ರೋಶದಿಂದ, “ಹಾಳರ್ಧ ಹೊಲೆಯರೆಂದೂ, ಬೀಳರ್ಧ ಹೆಣ್ಣು ಎಂದೂ, ಮಣ್ಣನ್ನು ಮುಕ್ಕುವಿರಿ, ಮಸಣದಲಿ ಏಳುವಿರಿ, ಹಾರಿರೋ ಜೊಳ್ಳುಗಳಿರಾ” ಎಂದದ್ದು. ಈ ಜೊಳ್ಳುಗಳಿಂದಲೇ ದೇಶ ಆಶಕ್ತವಾಗುವುದು.

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !