ಕೃತಘ್ನತೆ ಎಂಬ ಶಾಪ

7

ಕೃತಘ್ನತೆ ಎಂಬ ಶಾಪ

ಗುರುರಾಜ ಕರಜಗಿ
Published:
Updated:

ಮಗಧ ದೇಶದಲ್ಲಿ ರಾಜಗೃಹ ನಗರದಲ್ಲಿ ಬೋಧಿಸತ್ವ ರಾಜನ ಶ್ರೇಷ್ಠಿಯಾಗಿ ಹುಟ್ಟಿದ್ದ. ಅವನ ಬಳಿ 80 ಕೋಟಿಯಷ್ಟು ಹಣವಿತ್ತು. ಅವನ ಹೆಸರು ಸಂಖಶ್ರೇಷ್ಠಿ. ಅವನ ಮಿತ್ರ ಪಿಳಿಯಶ್ರೇಷ್ಠಿ ವಾರಾಣಸಿಯಲ್ಲಿ ಶ್ರೇಷ್ಠಿಯಾಗಿದ್ದ. ಅವನ ಬಳಿಯೂ 80 ಕೋಟಿ ಹಣವಿತ್ತು.

ಯಾವುಯಾವುದೋ ವ್ಯವಹಾರದಲ್ಲಿ ಪಿಳಿಯಶ್ರೇಷ್ಠಿಗೆ ನಷ್ಟವಾಗಿ ಅವನ ಸಂಪತ್ತೆಲ್ಲ ಕರಗಿ ಹೋಯಿತು. ಅವನು ದರಿದ್ರನಾಗಿ ಆಶ್ರಯಹೀನನಾಗಿ ರಾಜಗೃಹಕ್ಕೆ ಬಂದು ಮಿತ್ರ ಸಂಖಶ್ರೇಷ್ಠಿಯನ್ನು ಕಂಡ. ಆತ ಇವನನ್ನು ಪ್ರೀತಿಯಿಂದ ಸ್ವಾಗತಿಸಿ, ಗೌರವ ತೋರಿಸಿ ಸತ್ಕಾರ ಮಾಡಿದ. ಪಿಳಿಯಶ್ರೇಷ್ಠಿ ತನಗೆ ಬಂದ ಆಪತ್ತನ್ನು ಹೇಳಿಕೊಂಡಾಗ ಸಂಖಶ್ರೇಷ್ಠಿ, ‘ಚಿಂತಿಸಬೇಡ, ನಾನಿದ್ದೇನೆ’ ಎಂದು ಹೇಳಿ ತನ್ನ ಖಜಾನೆಯಲ್ಲಿದ್ದ ನಲವತ್ತು ಕೋಟಿ ಹಣವನ್ನು ತೆಗೆಸಿಕೊಟ್ಟ. ಅಷ್ಟೇ ಅಲ್ಲದೆ ತನ್ನ ಬಳಿ ಇದ್ದ ಎಲ್ಲ ಸ್ಥಿರ, ಚರ ಆಸ್ತಿಯ ಅರ್ಧ ಭಾಗವನ್ನು ಅವನಿಗೆ ಕೊಟ್ಟು ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಹೇಳಿ ಕಳುಹಿಸಿದ.

ಕೆಲವರ್ಷಗಳ ನಂತರ ಸಂಖಶ್ರೇಷ್ಠಿಗೂ ಅದೇ ತರಹದ ಆಪತ್ತು ಬಂದು ನಿರ್ಧನನಾದ. ತನ್ನ ಮಿತ್ರ ಪಿಳಿಯಶ್ರೇಷ್ಠಿಯನ್ನು ನೆನೆಸಿಕೊಂಡ. ಅವನಿಗೆ ತನ್ನ ಅರ್ಧ ಆಸ್ತಿಯನ್ನೇ ಕೊಟ್ಟಿದ್ದರಿಂದ ಆತ ಸಹಾಯ ಮಾಡಬಹುದು ಎಂದುಕೊಂಡು ಹೆಂಡತಿಯನ್ನು ಕರೆದುಕೊಂಡು ವಾರಾಣಸಿಗೆ ಬಂದ. ಹೆಂಡತಿಯನ್ನು ಧರ್ಮಶಾಲೆಯಲ್ಲಿ ಕುಳ್ಳಿರಿಸಿ ತಾನೊಬ್ಬನೇ ಪಿಳಿಯಶ್ರೇಷ್ಠಿಯ ಮನೆಗೆ ಹೋದ. ಈಗ ಪಿಳಿಯಶ್ರೇಷ್ಠಿ ಅತ್ಯಂತ ಶ್ರೀಮಂತನಾಗಿದ್ದಾನೆ. ಸಂಖಶ್ರೇಷ್ಠಿ ತಾನು ಮನೆಯ ಬಾಗಿಲಿಗೆ ಬಂದದ್ದನ್ನು ಹೇಳಿ ಕಳುಹಿಸಿದ್ದರೂ ಪಿಳಿಯಶ್ರೇಷ್ಠಿ ಬಂದು ಮಾತನಾಡಿಸಲಿಲ್ಲ. ಹೋಗಿ ಅವನ ಎದುರು ನಿಂತರೂ ಅಪರಿಚಿತರಂತೆ, ‘ಏನು ಬಂದೆ?’ ಎಂದು ಕೇಳಿದ.

ಸಂಖಶ್ರೇಷ್ಟಿ ತನಗೆ ಬಂದ ಆಪತ್ತನ್ನು ಹೇಳಿಕೊಂಡು ಸಹಾಯ ಕೇಳಿದ. ‘ನೀನು ಈಗ ಎಲ್ಲಿ ಇಳಿದುಕೊಂಡಿದ್ದೀಯಾ?’ ಎಂದು ಕೇಳಿದ ಪಿಳಿಯಶ್ರೇಷ್ಠಿ. ‘ನನಗೆ ಇರಲು ಯಾವ ವಸತಿಯೂ ಇಲ್ಲ. ಹೆಂಡತಿಯನ್ನು ಧರ್ಮಶಾಲೆಯಲ್ಲಿ ಇಳಿಸಿ ಬಂದಿದ್ದೇನೆ’ ಎಂದ ಸಂಖಶ್ರೇಷ್ಠಿ. ಆಗ ಪಿಳಿಯಶ್ರೇಷ್ಠಿ ಗಡುಸಾಗಿ ಹೇಳಿದ, ‘ನಿನ್ನಂಥ ದರಿದ್ರರಿಗೆ ನನ್ನ ಮನೆಯಲ್ಲಿ ಸ್ಥಾನವಿಲ್ಲ. ಹೋಗು ಎಲ್ಲಿಯಾದರೂ ಅಡುಗೆ ಮಾಡಿಕೊಂಡು ಊಟಮಾಡಿ ಹೋಗು. ಮನೆಗೆ ಬಂದಿದ್ದೀಯಾ, ಅದಕ್ಕೆ ಬರಿಕೈಯಲ್ಲಿ ಕಳಿಸುವುದು ಸರಿಯಲ್ಲ’ ಎಂದು ಹೇಳಿ ತನ್ನ ಆಳನ್ನು ಕರೆದು, ‘ಈತನಿಗೆ ನಾಲ್ಕು ಸೇರು ಭತ್ತದ ಹೊಟ್ಟನ್ನು ಕೊಟ್ಟು ಕಳಿಸು’ ಎಂದು ಎದ್ದು ಹೋದ.

ಮಿತ್ರ ಕೊಟ್ಟ ದಾನವನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ಅದನ್ನು ತೆಗೆದುಕೊಂಡು ಮರಳಿ ಧರ್ಮಶಾಲೆಗೆ ಬಂದಾಗ ಅದನ್ನು ಕಂಡು ಅವನ ಹೆಂಡತಿ ಜೋರಾಗಿ ಅಳತೊಡಗಿದಳು. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬಂದ. ಅವನು ಸಂಖಶ್ರೇಷ್ಠಿಯ ದಾಸ. ಪಿಳಿಯಶ್ರೇಷ್ಠಿಗೆ ಕೊಡಲ್ಪಟ್ಟವನು. ಇವರ ಕಷ್ಟವನ್ನು ನೋಡಿ ಆತ ಹತ್ತಾರು ಜನರನ್ನು ಕೂಡ್ರಿಸಿ ರಾಜನ ಬಳಿಗೆ ಹೋಗಿ ನ್ಯಾಯ ಕೇಳಿದ. ರಾಜ ಪಿಳಿಯಶ್ರೇಷ್ಠಿಯನ್ನು ಕರೆಸಿ ಎಲ್ಲವನ್ನೂ ವಿಚಾರಣೆ ಮಾಡಿದ. ಅವನಿಗೆ ಪಿಳಿಯಶ್ರೇಷ್ಠಿಯ ಕೃತಘ್ನತೆಯ ಅರಿವಾಯಿತು. ಆತ ತನ್ನ ಮಂತ್ರಿಗಳನ್ನು ಕರೆಸಿ ಪಿಳಿಯಶ್ರೇಷ್ಠಿಯ ಎಲ್ಲ ಹಣ ಮತ್ತು ವಸ್ತುಗಳನ್ನು ಸಂಖಶ್ರೇಷ್ಠಿಗೆ ಕೊಡುವಂತೆ ಆಜ್ಞೆ ಮಾಡಿದ. ಆದರೆ ಸಂಖಶ್ರೇಷ್ಠಿ ತಾನು ಕೊಟ್ಟಿದ್ದ ಹಣ ಮಾತ್ರ ಬಂದರೆ ಸಾಕು ಉಳಿದದ್ದರಲ್ಲಿ ಸ್ನೇಹಿತ ಬದುಕಲಿ ಎಂದು ಹೇಳಿ ಹಣ ಪಡೆದು ಬಂದು ಮತ್ತೆ ಬದುಕು ಕಟ್ಟಿಕೊಂಡ

ಕೃತಘ್ನತೆ ಮನುಷ್ಯತ್ವಕ್ಕೆ ಬಂದ ಬಹುದೊಡ್ಡ ಶಾಪ. ಕೃತಘ್ನರಾಗಿ ಕೆಲಕಾಲ ಮೆರೆಯಬಹುದು. ಆದರೆ ಶಾಶ್ವತವಾದ ದುಃಖ ಕಟ್ಟಿಟ್ಟಿದ್ದೇ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !