ಒಂದು ಎರಡಾಗುವ ಪರಿ

7

ಒಂದು ಎರಡಾಗುವ ಪರಿ

ಗುರುರಾಜ ಕರಜಗಿ
Published:
Updated:

ಚೀಟಿಯಾಟದ ಬಿನದಿ ತಾನೊರ್ವನಿರ್ಪರವೊಲ್ |
ಆಟವಾಡುತಲಿ ತನ್ನೊರ್‍ತನವ ಮರೆವಾ ||
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |
ಪಾಟಿಯಲಿ ಮರೆತಿಹನು – ಮಂಕುತಿಮ್ಮ || 80 ||

ಪದ-ಅರ್ಥ: ಚೀಟಿಯಾಟ=ಇಸ್ಪೀಟು ತರಹದ ಆಟ, ಬಿನದಿ=ವಿನೋದಿ,

ತಾನೋರ್ವನಿರ್ಪರವೊಲ್=ತಾನೋರ್ವ(ತಾನೊಬ್ಬನೆ)+ಇರ್ಪರವೊಲ್(ಇಬ್ಬರಿರುವಂತೆ), ತನ್ನೊರ್‍ತನವ=ತನ್ನ ಒಬ್ಬಂಟಿತನವನ್ನು, ಮಾಟದಲಿ=ರೀತಿಯಲ್ಲಿ, ತನ್ನೇಕತೆಯ=ತನ್ನ+ಏಕತೆಯ, ಪಾಟಿಯಲಿ=ರೀತಿಯಲಿ

ವಾಚ್ಯಾರ್ಥ: ಇಸ್ಪೀಟು ಆಡುವ ವಿನೋದಿ ತಾನೊಬ್ಬನೇ ಇದ್ದರೂ ಇಬ್ಬರಿದ್ದಂತೆ ಆಟವಾಡುತ್ತ ತನ್ನ ಒಬ್ಬಂಟಿತನವನ್ನು ಮರೆವ ರೀತಿಯಲಿ ಬ್ರಹ್ಮ ತಾನೇ ಸೃಷ್ಟಿಸಿದ ಜೀವಜಗತ್ತಿನಲ್ಲಿ ಏಕತಾನತೆಯನ್ನು ಮರೆತಿದ್ದಾನೆ.

ವಿವರಣೆ: ಯಜಮಾನರು ಮನೆಯಲ್ಲಿದ್ದಾರೆ. ಒಬ್ಬರೇ ಇದ್ದಾರೆ. ಹೊತ್ತು ಹೋಗುವುದಕ್ಕೆ ಇಸ್ಪೀಟು ಆಡೋಣ ಎಂದುಕೊಂಡರು. ಆಡುವುದಕ್ಕೆ ಇನ್ನೊಬ್ಬರು ಬೇಕಲ್ಲವೇ? ಯಾರೂ ಇಲ್ಲದಿದ್ದಾಗ ಸ್ವಸಂತೋಷಕ್ಕಾಗಿ ಎದುರಿಗೆ ಇನ್ನೊಬ್ಬರು ಇದ್ದಾರೆಂದು ಭಾವಿಸಿಕೊಂಡು ತಮಗೊಂದು, ಎದುರಿಗಿದ್ದಂತಿರುವವರಿಗೊಂದರಂತೆ ಎಲೆಗಳನ್ನು ಹಾಕಿಕೊಂಡು ಎರಡೂ ಕಡೆಗೆ ತಾವೇ ಆಡಿ ಸಂತೋಷಪಟ್ಟರು. ಈ ತರಹದ ಆಟವನ್ನು patience ಆಟ ಎನ್ನುತ್ತಾರಂತೆ. ಕೆಲವರು Solitaire ಆಟವನ್ನು ಹೀಗೆ ಆಡಬಹುದೆಂದು ಹೇಳುತ್ತಾರೆ. ಒಟ್ಟಿನಲ್ಲಿ ತನ್ನ ಒಂಟಿತನವನ್ನು ಮರೆಯಲು ಹುಡುಕಿಕೊಂಡ ಉಪಾಯವಿದು.

ಹಾಗೆಯೇ ಅನಂತವಾದ, ಅನಾದಿಯಾದ ಬ್ರಹ್ಮಸತ್ವ ಅದೃಶ್ಯವಾದದ್ದು. ಅದಕ್ಕೆ ತನ್ನ ಲೀಲೆಯನ್ನು ಆಡಬೇಕೆನ್ನಿಸಿತು. ಅದಕ್ಕೆ ವ್ಯಕ್ತವಾಗಲು ಚಿಂತಿಸಿ ಜಗದ್ರೂಪದಲ್ಲಿ ಕಾಣಿಸಿಕೊಂಡಿತು. ಬ್ರಹ್ಮವಸ್ತುವಿನ ದೃಶ್ಯಾವಸ್ಥೆಯೇ ಜಗತ್ತು ಅಥವಾ ಪ್ರಕೃತಿ. ಪ್ರಕೃತಿ ಎಂದರೆ ಪ್ರಕರ್ಷವಾದ ಕೃತಿ, ವಿಸ್ತಾರವಾದ, ಶ್ರೇಷ್ಠ ಕೃತಿ. ಇದನ್ನೇಕೆ ಬ್ರಹ್ಮಸತ್ವ ಮಾಡಿತು? ಅದಕ್ಕೆ ಒಂದು ಸುಂದರವಾದ ಉದಾಹರಣೆಯಾಗಿ ಈ ಕಗ್ಗ ತಿಳಿಸುತ್ತದಲ್ಲ, ತನ್ನ ವಿನೋದಕ್ಕಾಗಿ, ತನ್ನೊಡನೆ ಮತ್ತೊಬ್ಬನಿರುವಂತೆ ಭಾವಿಸಿ ಆಟ ಆಡುವ ವಿನೋದಕ್ಕಾಗಿ. ಅದೃಶ್ಯವಾದ ಬ್ರಹ್ಮಸತ್ವ ದೃಶ್ಯವಾದ ಈ ಪ್ರಕೃತಿಯನ್ನು ಸೃಷ್ಟಿಸಿಕೊಂಡು ಲೀಲೆಯನ್ನು ಮೆರೆಯಿತು.

ಅದಕ್ಕೇ ಹಿರಿಯರು ಪರಸತ್ವವನ್ನು ನೆನೆಯುವಾಗ ‘ವ್ಯಕ್ತಾವ್ಯಕ್ತಸ್ವರೂಪಾಯ’ ಎಂದು ಹೇಳುತ್ತಿದ್ದುದು. ಅದು ಬರೀ ಆಟವಲ್ಲ. ಪರಸತ್ವ ಪ್ರತಿಯೊಂದು ಚರ ಹಾಗೂ ಅಚರ ವಸ್ತುಗಳಲ್ಲಿಯೂ ಸೇರಿಕೊಂಡು ಸರ್ವವ್ಯಾಪಿ, ಸರ್ವಾಂತರ್ಯಾಮಿಯಾಯಿತು. ಆದ್ದರಿಂದ ಅದನ್ನು ವಿಷ್ಣು ಎಂದು ಕರೆದರು. ವಿಷ್ಣು ಎಂದರೆ ಸರ್ವವ್ಯಾಪಿಯಾದದ್ದು. ತಾನು ಇನ್ನೊಂದಾಗಿ ಆಡುವ, ಸಂಭ್ರಮಿಸುವ, ತನ್ನ ಒಂಟಿತನವನ್ನು ಮರೆಯುವ ಈ ಲೀಲೆಯನ್ನು ಶೃತಿ ಎಷ್ಟು ಚೆನ್ನಾಗಿ ಕಥೆಯ ರೂಪದಲ್ಲಿ ಹೇಳುತ್ತದೆ

ಇದಗ್‍ಂ ಸರ್ವಮಸೃಜತ | ....
ತತ್ಸøಷ್ಟ್ಪಾ | ತದೇವಾನುಪ್ರಾವಿಶತ್ ||

ಪರವಸ್ತು ಜಗತ್ತನ್ನು ಸೃಷ್ಟಿ ಮಾಡಿ ತಾನೇ ಅದರ ಒಳಹೊರಗನ್ನು ಆವರಿಸಿಕೊಂಡಿತಂತೆ ! ಅದು ಎಷ್ಟರ ಮಟ್ಟಿಗೆ ಈ ಲೀಲೆಯಲ್ಲಿ ತನ್ನನ್ನು ಮಗ್ನವಾಗಿಸಿಕೊಂಡಿತೆಂದರೆ ತಾನು ಒಬ್ಬಂಟಿ ಎನ್ನುವುದು ಮರೆತೇ ಹೋಯಿತಂತೆ.

ಇದು ಕಗ್ಗದ ಶ್ರೇಷ್ಠತೆ. ಯಾವ ಆಧ್ಯಾತ್ಮಿಕ ಸತ್ಯವನ್ನು ತಿಳಿಸಲು ಶೃತಿಗಳು ಹೆಣಗಾಡುತ್ತವೋ ಅದನ್ನು ನಮಗೆ ಅರ್ಥವಾಗುವ ಭಾಷೆಯಲ್ಲಿ, ಅರ್ಥವಾಗುವ ಉದಾಹರಣೆಗಳ ಮೂಲಕ ಕಗ್ಗವು ನಮ್ಮ ಹೃದಯಕ್ಕೆ ತಲುಪಿಸುತ್ತದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !